45th IFFI Goa Catelogue-page-001

ಸಾಂಗತ್ಯ ನೇರ ವರದಿ

ಪಣಜಿ : ಮತ್ತೆ ನವೆಂಬರ್, ಮತ್ತೆ ರಾಜ್ಯೋತ್ಸವ, ಅಲ್ಲ ಗೋವಾದಲ್ಲಿ. ಇಲ್ಲಿ ಮತ್ತೆ ಚಿತ್ರೋತ್ಸವ !

ಪಣಜಿಯಲ್ಲಿ ಸದ್ಯಕ್ಕೆ ಇದೇ ಜಪ. ಪ್ರತಿ ವರ್ಷ ನವೆಂಬರ್ 20 ರಿಂದ 30 ರವರೆಗೆ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (IFFI) ಚಿತ್ರ ನಗರಿ ಸಿದ್ಧವಾಗಿದೆ. ಈ ಬಾರಿಯದು 45 ನೇ ಚಿತ್ರೋತ್ಸವ.

ಈ ಬಾರಿಯ ವಿಶೇಷಗಳೆಂದರೆ ದಿಗ್ಗಜರಿಬ್ಬರು ಒಟ್ಟಾಗುತ್ತಿರುವುದು. ಮೇರು ನಟ ಅಮಿತಾಬ್ ಬಚ್ಚನ್ ಚಿತ್ರೋತ್ಸವವನ್ನು ಉದ್ಘಾಟಿಸಿದರೆ, ಅದೇ ಸಂದರ್ಭದಲ್ಲಿ “ಶತಮಾನೋತ್ಸವ ಪ್ರಶಸ್ತಿ” ಯನ್ನು ಸ್ವೀಕರಿಸಲು ಮತ್ತೊಬ್ಬ ಮೇರು ನಟ ರಜನೀಕಾಂತ್ ಆಗಮಿಸುತ್ತಿರುವುದು. ಇವರೊಂದಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ, ರಾಜ್ಯ ಸಚಿವ ರಾಜ್ಯವರ್ಧನ್ ರಾಥೋರ್ ಆಗಮಿಸುತ್ತಿದ್ದಾರೆ.

ನಾಳೆ ಸಂಜೆ ಉದ್ಘಾಟನೆ ನೆರವೇರಲಿದ್ದು, ಉದ್ಘಾಟನಾ ಚಿತ್ರವಾಗಿ ಇರಾನಿನ ಖ್ಯಾತ ಚಿತ್ರ ನಿರ್ದೇಶಕ ಮೊಹ್ಸೀನ್  ಮಕ್ಮಲ್ಭಫ್ ನ ” ದಿ ಪ್ರಸಿಡೆಂಟ್” ಪ್ರದರ್ಶನವಾಗಲಿದೆ. ಅಲ್ಲದೇ “ಪುನಾರಾವಲೋಕನ” (Retrospective) ನಲ್ಲಿ ಅವರ ಹಲವು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸಮಾರೋಪ ಚಿತ್ರವಾಗಿ “ದಿ ಗ್ರ್ಯಾಂಡ್ ಮಾಸ್ಟರ್” ಪ್ರದರ್ಶನಗೊಳ್ಳಲಿದೆ. ಚೀನಾದ ವಾಂಗ್ ಕರ್- ವಾಯ್ ಇದರ ನಿರ್ದೇಶಕ. ಈ ಬಾರಿಯ “ಜೀವಮಾನ ಸಾಧನೆ ಪ್ರಶಸ್ತಿ” (Lifetime Achievement Award) ಗೆ ವಾಂಗ್ ಕರ-ವಾಯ್ ಭಾಜನರಾಗಿದ್ದಾರೆ.

ಒಟ್ಟು 179 ಚಿತ್ರಗಳು

ಈ ಚಿತ್ರೋತ್ಸವದಲ್ಲಿ ಒಟ್ಟು 75 ದೇಶಗಳ 179 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚೀನಾ ಈ ಬಾರಿಯ “ಕಂಟ್ರಿ ಫೋಕಸ್”. ಗುಲ್ಜಾರ್ ಮತ್ತು ಮೊಹ್ಸಿನ್ ಮಕ್ಮಲ್ಭಫ್ ನವರ ಸಿನಿಮಾಗಳು “ಪುನರಾವಲೋಕನ” ವಿಭಾಗದಡಿ ಪ್ರದರ್ಶನಗೊಳ್ಳುತ್ರಿವೆ. “ಹೋಮೇಜ್” ವಿಭಾಗದಡಿ ರಿಚರ್ಡ್ ಅಟೆನ್ ಬರೋ, ಯು. ಆರ್ ಅನಂತಮೂರ್ತಿ, ಜೊಹ್ರಾ ಸೆಹಗಲ್ ಮತ್ತಿತರರ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಎಂದಿನಂತೆ ಮಾಸ್ಟರ್ ಕ್ಲಾಸ್, ಓಪನ್ ಸೆಷನ್, ಕಾರ್ಯಾಗಾರಗಳು ಉತ್ಸವದ ಕಳೆ ಹೆಚ್ಚಿಸಲಿವೆ.

Advertisements