ಸಿನಿಮಾ, ಸಿನಿಮಾ, ಸಿನಿಮಾ… ಎರಡು ದಿನ ಒಂದೆ ಸಮನೆ ಸಿನಿಮಾಗಳನ್ನು ನೋಡಿ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಭವ್ಯ ಕಟ್ಟಡದಿಂದ ಹೊರಗೆ ಹೆಜ್ಜೆ ಇಟ್ಟರೆ ಜಗತ್ತೇ ಒಂದು ಸಿನಿಮಾ ತೆರೆಯಂತೆ, ನಾನು ರಂಗದ ಮೇಲಿನ ಪಾತ್ರದಂತೆ ಹೀಗೆ ಏನೇನೋ ಭ್ರಮೆ. ರಸ್ತೆ, ಬಸ್ಸು, ನದಿ, ಕಾರು, ಕಂಡಕ್ಟರ್, ಡ್ರೈವರ್ ಸಹ ಯಾವ್ಯಾವುದೋ ಸಿನಿಮಾಗಳಲ್ಲಿ ಕಂಡ ಪಾತ್ರಗಳಂತೆಯೇ ಕಾಣುತ್ತಿದ್ದರು. ಸಿನಿಮಾ ಜಗತ್ತಿನಲ್ಲಿ ತೇಲಾಡುತ್ತಿದ್ದ ಮನಸ್ಸು ಮತ್ತೆ ವಾಸ್ತವ ಜಗತ್ತಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿತ್ತು.
ಇಂಥದ್ದೊಂದು ಅವಕಾಶ ಕೊಟ್ಟಿದ್ದು ಸಾಂಗತ್ಯ ಚಲನಚಿತ್ರೋತ್ಸವ-ಚಿತ್ರ ಶಿಬಿರ. ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ, ನಮ್ಮ ನಡುವಿನ ಸಿನಿಮಾ ತಜ್ಞ ಪರಮೇಶ್ವರ ಗುರುಸ್ವಾಮಿ ಎರಡು ದಿನ ಜೊತೆಯಲ್ಲಿದ್ದು ಸಿನಿಮಾ ಭಾಷೆಯನ್ನು ಅಕ್ಷರ ಭಾಷೆಗೆ ತರಲು ಅನವರತ ಯತ್ನಿಸಿದರು.
“ನಾವು ಮಾತನಾಡುವ ಭಾಷೆಗೆ ಹೇಗೆ ಅಕ್ಷರ, ಕಾಗುಣಿತ ವ್ಯಾಕರಣವಿದೆಯೋ; ಸಿನಿಮಾ ಭಾಷೆಗೂ ಹಾಗೆಯೇ ತನ್ನದೇ ಆದ ಅಕ್ಷರ, ಕಾಗುಣಿತ, ವ್ಯಾಕರಣವಿದೆ. ಸಾಹಿತ್ಯವನ್ನು ಹೇಗೆ ರೀಡಿಂಗ್ ಬಿಟ್ವೀನ್ ದಿ ಲೈನ್ಸ್ ಮೂಲಕ ಅರ್ಥ ಮಾಡಿಕೊಳ್ಳುವಿರೋ, ಸಿನಿಮಾವನ್ನು ಹಾಗೆಯೇ ರೀಡಿಂಗ್ ಬಿಟ್ವೀನ್ ದಿ ಫ್ರೇಮ್ಸ್ ಮೂಲಕ ಅರ್ಥ ಮಾಡಿಕೊಳ್ಳಬೇಕು” ಎಂದು ಮೊದಲ ಸಿನಿಮಾ “ಡಿಸೆಂಬರ್ 1″ರ ಪ್ರದರ್ಶನಕ್ಕೆ ಮೊದಲು ಪರಮೇಶ್ವರ ಗುರುಸ್ವಾಮಿ ಹೇಳಿದ್ದು ಎರಡು ದಿನ ಎಲ್ಲ 8 ಚಿತ್ರಗಳನ್ನು ನೋಡುವಾಗಲೂ ಮನಸ್ಸಿನಲ್ಲಿ ಜಾಗೃತವಾಗಿತ್ತು.
ಕಲಾವಿದ ಶೀನಾ ನಡೊಳ್ಳಿ ಅವರು ಮಾದೇಶ್ವರ ಕಾವ್ಯದ “ಮಾಯ್ಕಾರ ಮಾದೇವನ” ಹಾಡು ಹೇಳುವ ಮೂಲಕ ಚಲನಚಿತ್ರೋತ್ಸವವನ್ನು ಅರ್ಥಪೂರ್ಣವಾಗಿ ಉದ್ಘಾಟಿಸಿದರು. ವೀಕ್ಷಕನನ್ನು ದೇಶ-ಕಾಲಗಳ ಹಂಗಿನಿಂದ ಮುಕ್ತಿಗೊಳಿಸಿ ಮಾಯದ ಜಗತ್ತಿಗೆ ಕೊಂಡೊಯ್ಯುವ ಮಾಯಾವಿ ತಾನೆ ಸಿನಿಮಾ…!
“ಡಿಸೆಂಬರ್ 1” ಸಿನಿಮಾ ಪ್ರದರ್ಶನದ ನಂತರ ನಡೆದ ಚರ್ಚೆಯಲ್ಲಿ ಎಲ್ಲ 75 ಮಂದಿಯೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಾತನಾಡುವ ಮೊದಲು ಎಚ್ಚರಿಕೆ ಎಂಬಂತೆ, ನಿರ್ದೇಶಕ ಶೇಷಾದ್ರಿ “ಸಿನಿಮಾ ಮಾಡಿ ಆಗಿದೆ. ಅದನ್ನು ಮತ್ತೆ ರಿಶೂಟ್ ಮಾಡುವುದಿಲ್ಲ. ಕಥೆಯ ಬಗ್ಗೆ ಹೆಚ್ಚು ಗಮನ ಕೊಡದೆ ಮೇಕಿಂಗ್ ಬಗ್ಗೆ ಮಾತನಾಡಿ. ಅದರ ಸೂಕ್ಷ್ಮ ಅಂಶಗಳನ್ನು ಗುರುತಿಸಲು ಯತ್ನಿಸಿ” ಎಂದು ಕಿವಿಮಾತು ಹೇಳಿದ್ದರು.
ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಗೋವರ್ಧನ್ “ಸಮಸ್ಯೆಯನ್ನು ಪ್ರಸ್ತಾಪಿಸಿ ಕೈಬಿಡುವುದು ಸಿನಿಮಾದ ಉದ್ದೇಶವೇ ಅಥವಾ ಅದಕ್ಕೊಂದು ಪರಿಹಾರ ಸೂಚಿಸುವುದು ಕಲೆಯ ಧರ್ಮವೇ?’ ಎಂದು ಪ್ರಶ್ನಿಸಿದರು.
“ಕಲೆ ಎಂಬುದು ಪರಿಹಾರದ ಸಾಧನವಲ್ಲ. ಅದು ಸಮಸ್ಯೆಯನ್ನು ಜನರ ಮುಂದೆ ಕಲಾತ್ಮಕವಾಗಿ ಇಡುವ ಪ್ರಯತ್ನ ಮಾಡುತ್ತೆ. ಅದಕ್ಕೆ ಸ್ಪಂದಿಸಿ- ಸಮಸ್ಯೆಯಿಂದ ಬಿಡುಗಡೆ ಪಡೆಯುವುದು ಸಮಾಜದ ಹೊಣೆಗಾರಿಕೆ” ಎಂದರು.
ಇದೇ ಪ್ರಶ್ನೆಯನ್ನು ಎದುರುಗೊಂಡ ಪರಮೇಶ್ವರ ಗುರುಸ್ವಾಮಿ, “ಎಲ್ಲವನ್ನೂ ಸಿನಿಮಾಗಳೇ ಹೇಳಲು ಹೊರಟರೆ ಅದು ನ್ಯೂಸ್ ಚಾನೆಲ್ನ ವಿಶೇಷ ಕಾರ್ಯಕ್ರಮವಾಗುತ್ತದೆ. ಕಲೆಯ ಹಂದರದಲ್ಲಿ ಮಾಹಿತಿಯನ್ನು ಅಡಕಗೊಳಿಸಿ ಪ್ರೇಕ್ಷಕನಿಗೆ ದಾಟಿಸುವುದು ಸವಾಲಿನ ಕೆಲಸ. ಯಾವುದೇ ಕಲೆ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ’ ಎಂದರು.
“ಡಿಸೆಂಬರ್ 1” ಚಿತ್ರ ತನ್ನ ಮನಸಿನಲ್ಲಿ ಜನ್ಮ ತಾಳಿದ ಬಗೆಯನ್ನೂ ಪಿ.ಶೇಷಾದ್ರಿ ವಿವರಿಸಿದರು. “ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ವಾಸ್ತವ್ಯವನ್ನೇ ಕಳೆದುಕೊಂಡ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವರದಿ ಓದಿದ್ದೆ. ತಕ್ಷಣ ಅದರಲ್ಲಿ ಒಂದು ಸಿನಿಮಾ ಇದೆ ಎಂದು ನನಗೆ ಅನ್ನಿಸಿತ್ತು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡಿದ್ದ 25 ಗ್ರಾಮಗಳಿಗೆ ಭೇಟಿ ನೀಡಿದ್ದೆ. ಈ ಸಂದರ್ಭ ಸ್ಥಳೀಯರು ಹೇಳಿದ ಹಲವು ಕಥೆಗಳು ಚಿತ್ರಕ್ಕೆ ನೆರವಾಗಿದೆ” ಎಂದು ವಿವರಿಸಿದರು.
“ಚಲನಚಿತ್ರ ನೋಡಲು ಬರುವ ಪ್ರೇಕ್ಷಕರೂ ಸಿದ್ಧತೆ ಮಾಡಿಕೊಂಡಿರಬೇಕು. ಸ್ವಲ್ಪವಾದರೂ ನಿರ್ದೇಶಕನ ಬಗ್ಗೆ ತಿಳಿದುಕೊಂಡಿರಬೇಕು. ನಿರ್ದೇಶಕ ಏನು ಹೇಳಲು ಹೊರಟಿದ್ದಾನೆ ಮತ್ತು ಹೇಗೆ ಹೇಳಲು ಪ್ರಯತ್ನ ಪಟ್ಟಿದ್ದಾನೆ ಎಂಬುದು ಗ್ರಹಿಸಲು ಯತ್ನಿಸಬೇಕು” ಎಂದು ಹೇಳಿದರು.
ಮುಂಚೆಯೆ ನಿಗದಿತವಾದ ಕಾರ್ಯಕ್ರಮದಿಂದಾಗಿ ಶಿಬಿರದಲ್ಲಿ ಬಾಗಿಆಗದ್ದಕ್ಕೆ ಬೇಸರವಾಗಿದೆ ..ಇನ್ನೊಮ್ಮೆ ನೋಡುವ
-ಮಸೂರಾ
Memorable weekend ……. Thanks for wonderful
Program …in the middle of nature
ಯಥಾಪ್ರಕಾರ ಚೆನ್ನಾಗಿ ನಡೆದಿದೆ. ಹೀಗೆ ನಡೆಯುತ್ತಿರಲಿ ಸಾಂಗತ್ಯ….
A perfect programme at perfect place….! Really we learnt and enjoyed lot…! Memorable too… Once again hearty thanks for Saangatya team… i would like to work with saangathya team as a Volunteer in their next events…!