ರೋಹಿತ್ ಎಸ್ ಎಚ್ ಅವರು ರವಿ ಎಂ ನಿರ್ದೇಶಿಸಿರುವ ‘ಕಳವು’ ಚಿತ್ರದ ಕುರಿತು ಅನಿಸಿಕೆ ಬರೆದಿದ್ದಾರೆ. ಓದಿ ಅಭಿಪ್ರಾಯಿಸಿ.
ಇವೊತ್ತ್ ರಾತ್ರಿ ಪಂಚಾಯ್ತಿ ಕಟ್ಟೆ ತಾವ ನ್ಯಾಯಾ ತೀರ್ಮಾನ ಐತೆ, ಎಲ್ಲಾ ಮನೆಯಿಂದಾನೂ ಒಬ್ಬೊಬ್ಬರು ಬರಬೇಕ್ರಪ್ಪೋ…” ಅಂತ ಸುದ್ದಿ ಕೊಟ್ಟ ಹಾಗೆ, ರಾತ್ರಿ ಆಗುತ್ತಿದ್ದಂತೆ ಇಡೀ ಹಳ್ಳಿಯೇ ಪಂಚಾಯಿತಿ ಕಟ್ಟೆ ಬಳಿ ಸೇರಿದೆ. ನಿನ್ನೆ ರಾತ್ರಿ ರಂಗಮ್ಮನ ಎಮ್ಮೆ ಕಳುವಾಗಿದೆ ಊರಕಳ್ಳ ಎನಿಸಿಕೊಂಡಿರುವ ಪಟ್ಲನನ್ನು ಹುಡುಕಿ ತಂದು ಪಂಚಾಯ್ತಿ ಕಟ್ಟೆ ಬಳಿಯ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.kalavu1

ರಂಗಮ್ಮಳದು ಬಿರುಕುಬಿಟ್ಟಂತ ಸಂಸಾರ.  ಅವಳ ಕಣ್ಣಿನಲ್ಲಿ ಎಂದೋ ನಾಲಾಯಕ್ ಎನಿಸಿಕೊಂಡ ಗಂಡ ಪುಟ್ಟಲಾಯ್ರಿ ಊರೂರು ಅಲೆಯುತ್ತಾ, ನಾಟಕಗಳಲ್ಲಿ ಅಭಿನಯಿಸುತ್ತಾ ಕಾಲ ಕಳೆಯುತ್ತಿದ್ದಾನೆ. ಇವನಿಗೆ ಮನೆ, ಮಡದಿ, ಮಗನ ಯೋಚನೆಯಿಲ್ಲ.  ಗಂಡನಿಂದ ದೂರಾಗಿ, ತಾಯಿ, ತಂಗಿ, ಮಗನೊಡನೆ ಜೀವನ ನಡೆಸುತ್ತಿರುವ ರಂಗಮ್ಮಳೇ ಗಂಡು ದಿಕ್ಕಿಲ್ಲದ ಆ ಮನೆಗೆ ಆಸರೆ.   ಅವಳಿಗೆ ಆಸರೆಯಾಗಿದ್ದ, ತಾಯಿಸಮಾನವಾದ ಅವಳ ಮನೆಯ ಎಮ್ಮೆ ಒಂದು ರಾತ್ರಿ ದಿಢೀರನೆ ಕಳುವಾಗುತ್ತದೆ.  ಹೀಗೆ ಕಳುವಾಗಿರುವ ಎಮ್ಮೆಯ ಹುಡುಕಾಟದೊಂದಿಗೆ ಆರಂಭವಾಗುವ ಕಥೆ ಪಂಚಾಯಿತಿ ಕಟ್ಟೆಯ ಬಳಿಗೆ ಬರುವ ವೇಳೆಗೆ ಪ್ರೇಕ್ಷಕರಲ್ಲಿ ಸಾಕಷ್ಟು ಪ್ರಶ್ನೆಗಳೆದ್ದಿರುತ್ತವೆ, ಕಳುವಾಗಿರುವುದು ಎಮ್ಮೆ ಮಾತ್ರಾನ? ಕಳಕೊಂಡಿರುವುದು ರಂಗಮ್ಮ ಮತ್ತು ಅವಳ ಮನೆಯವರು ಮಾತ್ರಾನ?  ಅಸಲಿಗೆ, ಕಳೆದುಕೊಳ್ಳುವುದು ಎಂದರೆ ಏನು? ಯಾವುದನ್ನ? ಹೊರಗಿನದಾ ಅಥವಾ ಒಳಗಿನದಾ? ಕಳೆದುಕೊಂಡದ್ದು ಸಿಗುವುದೇ?  ಕದ್ದವನಿಗೆ ಶಿಕ್ಷೆಯಾಗುವುದೇ? ನಿಜವಾದ ಕಳ್ಳ ಪಟ್ಲ ಒಬ್ಬನೇನಾ?   

ಹೀಗೆ, ‘ಪುಟಗೋಸಿ’ ಎಮ್ಮೆಯೊಂದರ ಕಳವು ಊರಿನ ಇತರರ ಮನೆ, ಮನ, ದೇಹದಲ್ಲಾದ ಕಳವುಗಳ ಬಗ್ಗೆ ತಿಳಿಸುತ್ತಾ, ಕಳೆದುಕೊಂಡವರ ನೋವನ್ನು ದಾಟಿಸುತ್ತಾ, ಕಳವಿನ ಬಗ್ಗೆ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತೆ, ಯೋಚಿಸುವಂತೆ ಮಾಡುತ್ತದೆ. 

ಈ ನಡುವೆ, ಗೌಡನ ಮನೆಯ ಬಂಗಾರದೊಡವೆ ಯಾವುದೇ ಆಯಾಸವಿಲ್ಲದೆ ಕಳ್ಳನ ಕೈ ಸೇರುವ ಸನ್ನಿವೇಶ; ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗಲು ಪ್ರಯತ್ನಿಸುವ ಗೌಡನ ಮಗಳ ಪ್ರಕರಣ; ಪುಟ್ಟಲಾಯ್ರಿಯ ಯೌವ್ವನದ ಕರಾಳ ಇತಿಹಾಸ; ಮದುವೆ ವಿಷಯದಲ್ಲಿ ರಂಗಮ್ಮಳಿಗಾದ ಮೋಸ, ದೌರ್ಜನ್ಯ; ತಿಪ್ಪೆಯ ಬಳಿ ಸಿಕ್ಕ ಚಿನ್ನದ ಜಡೆಬಿಲ್ಲೆಯನ್ನು, ತಾನು ಕಷ್ಟದಲ್ಲಿದ್ದರೂ ಕಳೆದುಕೊಂಡವರಿಗೇ ಹಿಂದಿರುಗಿಸುವ ರತ್ನಮ್ಮಳ ಆಸೆ ಸತ್ತ ಬದುಕು; ಜಮೀನಿನ ವಿಚಾರವಾಗಿ ಹೊಂಚು ಹಾಕುತ್ತ ಕೂರುವ ಗೌಡನ ಸಂಕಟ; ಎಮ್ಮೆ ಕಳೆದುಕೊಂಡ ರಂಗಮ್ಮನ ತಾಯಿಯ ನೋವು, ಆ ನೋವಿಗೆ ಸ್ಪಂದಿಸುವ ಊರ ಜನ, ಹೀಗೆ ಇವುಗಳಿಗೆಲ್ಲಾ ಪ್ರೇಕ್ಷಕ ಸಾಕ್ಷಿಯಾಗುತ್ತಾನೆ.  

ಇಲ್ಲಿ ‘ಕಳವು’ ಎಂಬುದಕ್ಕೆ ಜಾತಿ ಭೇದವಿಲ್ಲ.  ಎಲ್ಲರೂ ಒಂದಲ್ಲೊಂದು ವಿಷಯದಲ್ಲಿ ಕಳವಾಗಲ್ಪಟ್ಟವರೇ.  ಆದ್ದರಿಂದ ಇಲ್ಲಿ ಎಲ್ಲರೂ ಒಂದೇ ಕುಲದವರು.  ’ಕಳವು’ ವಿಷಯವನ್ನು ಮಾನವೀಯ ನೆಲೆಯಲ್ಲಿ – ಅಂದರ ವೈಯಕ್ತಿಕ ಹಾಗೂ ಸಂಬಂಧಗಳ ಮಟ್ಟದಲ್ಲಿ – ಚರ್ಚಿಸಿರುವುದರಿಂದ ಇಲ್ಲಿನ ಹಳ್ಳಿಯಲ್ಲಿ ಜಾತಿ ರಾಜಕಾರಣವಾಗಲಿ, ಗಲಾಟೆಯಾಗಲಿ ಇಲ್ಲ.  

ಹಾಗೆಯೇ, ಗಂಡು-ಹೆಣ್ಣು, ಹಿರಿಯ-ಕಿರಿಯ ಎಂಬ ಭೇದವಿಲ್ಲದೆ ಎಲ್ಲರೂ ಕಳವಾಗಲ್ಪಟ್ಟವರೇ.  ಒಬ್ಬೊಬ್ಬರ ಕಳವು ಒಂದೊಂದು ರೀತಿ.  ರಂಗಮ್ಮನ ಮನೆಯ ಎಮ್ಮೆಯ ಕಳವು ನಿಗೂಢವಾದರೆ, ಗೌಡನ ಮನೆಯ ಕಳವು ಗುಟ್ಟು; ಪುಟ್ಟಲಾಯ್ರಿಯ ಗುಟ್ಟು ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪದಂತೆ.  ಅಂಜನ ಹಾಕಿ, ಎಮ್ಮೆ ಕದ್ದ ಕಳ್ಳನನ್ನು ತೋರಿಸಲು ರಂಗಮ್ಮನ ಮನೆಗೆ ಬರುವ ಆಚಾರಿಯದು ಹಗಲು ದರೋಡೆ!!  ಆದರೂ, ಅವನಿಗೆ ಶಿಕ್ಷೆಯಿಲ್ಲ, ಆ ಕಳುವಿನ ಬಗ್ಗೆ ಯಾರಿಗೂ ಅರಿವಿಲ್ಲ, ನೋವಿಲ್ಲ.   ಅಲ್ಲದೇ, ಬೇರೆಯವರ ವಸ್ತು ಕಳೆದು ಹೋದಾಗ, ಅಂಜನ ಹಾಕಿ ಕಳ್ಳನ ಮಾಹಿತಿ ಕೊಡುವ ನಾಟಕವಾಡುವ ಆಚಾರಿಗೆ ತನ್ನ ಮನೆಯಲ್ಲಾದ ಕಳ್ಳತನಕ್ಕೂ ಪಟ್ಲನೇ ಕಾರಣವಿರಬಹುದೋ ಏನೋ ಎಂದು ಅನುಮಾನಿಸುವುದು ಪರಿಸ್ಥಿತಿಯ ವ್ಯಂಗ್ಯ.

ಮನೆಯ ಬಂಗಾರದ ಒಡವೆಯಂತಿದ್ದ ಎಮ್ಮೆ ಕಳುವಾಗಿರುವುದು ರಂಗಮ್ಮನಿಗೆ ನೋವು ತಂದರೆ, ಬಂಗಾರದ ಒಡವೆ ಕಳುವಾದರೂ, ಮಗಳ ವಿಷಯದಲ್ಲಿ ಮಾನ ಉಳಿಯಿತಲ್ಲ ಎಂಬ ಸಮಾಧಾನ ಗೌಡನಿಗೆ;  ಕನಸುಗಳೇ ಕಳುವಾದ ಜೀವನ ರತ್ನಮ್ಮಳಿಗೆ ಕಷ್ಟವಾದರೆ; ಯಾವುದೇ ತಪ್ಪಿಲ್ಲದೆಯೂ ತನ್ನ ಸಂತಾನ ಭಾಗ್ಯ ಕಳೆದುಕೊಂಡ ಪುಟ್ಟ ಲಾಯ್ರಿಗೆ ಅವಮಾನದ/ಹಿಂಜರಿಕೆಯ ಭಯ.   ಹೀಗೆ, ಅವರವರ ಪರಿಸ್ಥಿತಿ, ಅಂತಸ್ತಿಗೆ ತಕ್ಕಂತೆ ಕಳುವಿನಿಂದಾಗುವ ಪರಿಣಾಮವೂ, ಅದನ್ನೆದುರಿಸುವ ಬಗೆಯೂ ಇಲ್ಲಿ ಭಿನ್ನ.  ಎಲ್ಲ ಪಾತ್ರಗಳಿಂದಲೂ ಸಮಾಂತರ ದೂರ ಕಾಯ್ದುಕೊಂಡಂತಿರುವ ’ಐಡಿಯಾ’ ಪಾತ್ರವೊಂದೇ ಇಲ್ಲಿ ತಟಸ್ಥ!!

ನ್ಯಾಯ ಹೇಳುವ ಸ್ಥಾನದಲ್ಲಿರುವ ಗೌಡನಿಗೆ ಕಳೆದುಕೊಂಡವರ ನೋವು ತಿಳಿಯುವುದಾ?  ಕಳ್ಳತನದ ಆರೋಪ ಹೊತ್ತಿರುವ ಪಟ್ಲನ ಗತಿ ಏನು?  ಕಳೆದುಕೊಂಡಿರುವವರ ಪ್ರತಿನಿಧಿಯಂತಿರುವ ರಂಗಮ್ಮನ ನೋವು ನೀಗುವುದೇ? ನ್ಯಾಯಕ್ಕಾಗಿ ಅವಳು ಹಠ ಹಿಡಿಯುವಳೇ? ಅಥವಾ ರಗಳೆ ಬೇಡವೆಂದು ನೋವ ನುಂಗುವಳೇ?  ಗೊತ್ತಿಲ್ಲ.  ಈ ’ಕಳವು’ ವಿಷಯವನ್ನು ’ಇದು ಹೀಗೆ’ ಎಂದು ಖಡಾಖಂಡಿತವಾಗಿ ನಿರ್ಧರಿಸಿ ಹೇಳಲಾಗದೆಯೋ ಅಥವಾ ಪ್ರೇಕ್ಷಕರ ವಿವೇಕಕ್ಕೋ ಬಿಟ್ಟು ಕೊಡುತ್ತಾ ಚಿತ್ರ ಕೊನೆಯಾಗುವುದು ನಿಜಕ್ಕೂ ಸಮರ್ಥನೀಯವಾಗಿದೆ ಎನಿಸುತ್ತದೆ.

ಥಿಯೇಟರಿನಿಂದ ಹೊರ ಬರುವಾಗ, ನನಗೇ ಗೊತ್ತಿಲ್ಲದೆ ‘ಮಠ’ ಚಿತ್ರದ ಹಾಡಿನ ಸಾಲೊಂದು ಮನದಲ್ಲಿ ಗುನುಗುನಿಸುತ್ತಿತ್ತು!!

ಈ ರೀತಿಯ ಸಂಪೂರ್ಣ ನಮ್ಮ ಮಣ್ಣಿನ ಸೊಗಡಿನ, ದೇಸಿತನದ ಕಥೆಯನ್ನು ಚಿತ್ರಮಾಡಲು ಮುಂದಾದ ಇಡೀ ಚಿತ್ರತಂಡಕ್ಕೆ ಮೆಚ್ಚುಗೆಯನ್ನು ತಿಳಿಸಲೇಬೇಕು.   ಕಥೆಯಲ್ಲಿರುವ ಸೂಕ್ಷ್ಮತೆಯನ್ನು, ಸಂಕೀರ್ಣತೆಗಳನ್ನು ತೆರೆಯ ಮೇಲೆ ನಿರೂಪಿಸುವಲ್ಲಿ ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.  ಚಿತ್ರಕ್ಕಾಗಿ ಆಯ್ದುಕೊಂಡ ಜಾಗ, ಹಳ್ಳಿ, ಪ್ರತಿ ದೃಶ್ಯದ ಫ್ರೇಮ್, ಇವೆಲ್ಲವೂ ಫ್ರೆಶ್ ಎನಿಸುವಂತಿದೆ.  ಕೆಲವು ಕಡೆ ಚಿತ್ರವನ್ನು ಮತ್ತಷ್ಟು ಸುಂದರಗೊಳಿಸಬಹುದಿತ್ತು ಎಂದೆನಿಸದರೂ, ಅದನ್ನು ಮಾಡಲಾಗದೇ ಇದ್ದುದ್ದಕ್ಕೆ ಹಲವು ಕಾರಣಗಳಿರಬಹುದು.  ರಂಗಮ್ಮನ ಮನೆಯ ಎಮ್ಮೆಯ ಪುರಾಣವನ್ನು ಹರಿಕಥೆಯ ರೂಪದಲ್ಲಿ ನಿರೂಪಿಸುವಾಗ ಅಲ್ಲಿ ರಂಗಮ್ಮನ ಮನೆಯವರೇ ಪಾತ್ರಧಾರಿಗಳಾದದ್ದು ಯಾಕೋ ಸರಿ ಕಾಣಲಿಲ್ಲವೆನಿಸುತ್ತದೆ. ಪಾತ್ರಗಳ ಎಮೋಷನ್, ಸನ್ನಿವೇಶದ ಮೂಡ್ ಅನ್ನು ಅರೆ ಕ್ಷಣ ಘಾಸಿಗೊಳಿಸಿತೆ? ಎನಿಸುತ್ತದೆ.  ‘ಐಡಿಯಾ’ ಪಾತ್ರದಿಂದ ಅದು ಹಾಸ್ಯವೆನಿಸಿ ಚಿತ್ರ ನೋಡಿಸಿಕೊಂಡು ಹೋಗುತ್ತದೆ.  

ಕೆಲವು ದಿನಗಳ ಹಿಂದೆ ‘ಜಟ್ಟ’ ಒಂದು ಸೆನ್ಸೇಶನ್ ಸೃಷ್ಟಿಸಿತ್ತು.  ಇತ್ತೀಚೆಗಷ್ಟೇ ‘ತಲ್ಲಣ’ ಎಂಬ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿತ್ತು.  ಈಗ ‘ಕಳವು’ ಅದೇ ದಾರಿಯಲ್ಲಿದೆ.  ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ‘ನಮ್ಮ’ ಸಿನಿಮಾಗಳ, ವರ್ತಮಾನ ಜೀವನದೊಡನೆ ಅನುಸಂಧಾನ ನಡೆಸುವ ಚಿತ್ರಗಳು ತಯಾರಾಗುವ ಕಾಲ ಬರುತ್ತಿರುವುದರ ಸೂಚನೆ ಇದೇ ಆದರೆ ಬಹಳಾನೇ ಸಂತೋಷ. Good Work ‘Kannada Circle’ Team!!