ಮೈಸೂರಿನ ವಿ.ಎನ್.ಲಕ್ಷ್ಮೀನಾರಾಯಣ ಅವರು ಡಿ. 20 ರಂದು ಮೈಸೂರಿನಲ್ಲಿ ಪ್ರದರ್ಶಿತವಾದ ಸುದರ್ಶನರ ‘ತಲ್ಲಣ’ ಚಿತ್ರದ ಕುರಿತು ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಓದಿ ಅಭಿಪ್ರಾಯಿಸಿ.

Jaya_Sada_8x6

ತಲ್ಲಣ ಚಲನಚಿತ್ರ ಸೂಕ್ಷ್ಮ ಸಂವೇದಿಯಾದ ನಿರ್ದೇಶಕರು ಸಿನಿಮಾ ಭಾಷೆಯಲ್ಲಿ ಮಾಡಿದ ಕುತೂಹಲ ಹುಟ್ಟಿಸುವ ಪ್ರಯತ್ನ. ತಂದೆಗೆ ಯಾರೋ ಹೊಡೆದಿದ್ದಾರೆಂಬ ಸುದ್ದಿಯನ್ನು ಯಾರದೋ ಮನೆಯ ಮನೆಗೆಲಸದಲ್ಲಿ ನಿರತವಾಗಿರುವ ತಾಯಿಗೆ ಮುಟ್ಟಿಸಲು ಹೂವಿನ ಮಾರುಕಟ್ಟೆಯನ್ನು ಹಾದು ಓಡೋಡಿ ಬರುವ ಸ್ಕೂಲು ಹುಡುಗಿಯ ತಲ್ಲಣದೊಂದಿಗೆಚಿತ್ರ ಪ್ರಾರಂಭವಾಗುತ್ತದೆ. ಮಧ್ಯಮವರ್ಗದ ಗೃಹಿಣಿಗೆ ಕೆಳವರ್ಗದ ಮನೆಗೆಲಸದ ಹೆಂಗಸಿನ ಬಗ್ಗೆ ಇರಬಹುದಾದ ಅನಾದರ, ಅನುಮಾನ, ಮದುವೆ ಮಾಡಿಕೊಟ್ಟಿರುವ ಮಗಳ ತಂದೆಯಾಗಿ ಮನೆಗೆಲಸದಾಕೆಯ ಮಗಳು-ಶಾಲಾಬಾಲಕಿಯ ಬಗ್ಗೆ ಇರುವ ಸಹಾನುಭೂತಿ ಚಿತ್ರಕ್ಕೆ ಸರಳ ಚೌಕಟ್ಟನ್ನು ಒದಗಿಸುತ್ತದೆ. 

ಮಾಮೂಲಿನಂತೆ ಮನೆಗೆಲಸದಾಕೆಯ ಗಂಡ ಕುಡುಕ, ಪುಕ್ಕಲ ಮತ್ತು ಸಂಸಾರಕ್ಕೆ ಸಹಾಯಕವಾಗದ ಮನಸ್ಥಿತಿಯ ಹಿಂಜರಿಕೆಯಿಂದ ನರಳುವವ. ಶಾಲಾವಿದ್ಯಾರ್ಥಿನಿ- ಹದಿಹರೆಯದ ಪ್ರಾರಂಭದ ವಯಸ್ಸಿನ, ಮಗಳಿಗೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವ ಬಯಕೆ. ಅಂಥ ಹುಡುಗಿ ಮನೆ ತಲುಪದೆ ಮಾಯವಾಗುವುದರೊಂದಿಗೆ ಚಿತ್ರದ ಸರಳ ಚೌಕಟ್ಟಿನೊಳಗೇ ಬದುಕಿನ ವಿವಿಧ ಎಳೆಗಳು ಕೂಡಿಕೊಳ್ಳುತ್ತಾ ಹೋಗುತ್ತವೆ. ಕಳೆದುಹೋದ ಮಗಳ ಹುಡುಕಾಟ, ಪ್ರಸ್ತುತ ಸಮಾಜದ ಭ್ರಷ್ಟತೆ, ವರ್ಗಹಿತಾಸಕ್ತಿಗಳು, ಸ್ವಾರ್ಥಪ್ರಿಯತೆ, ಮೌಢ್ಯ, ಪೋಲೀಸ್ ಮತ್ತು ವೈದ್ಯವೃತ್ತಿಗಳ ಜೀವಪರವಲ್ಲದ ಧೋರಣೆಗಳನ್ನು ಹಾಸ್ಯ, ವಿಡಂಬನೆ, ವಿಮರ್ಶೆ ಮತ್ತು ಅಸಮ್ಮತಿಗಳ ಮೂಲಕ ಒಮ್ಮೆ ವಾಚ್ಯವಾಗಿ, ಕೆಲವೊಮ್ಮೆ ಉತ್ಪ್ರೇಕ್ಷೆಯಿಲ್ಲದ ತಪಾಸಣೆಯಾಗಿ ಬಿಂಬಿತವಾಗಿವೆ.

ಮಾನವೀಯತೆಯೊಂದಿಗೆ ಬೆಸೆದುಕೊಂಡ ಭಕ್ತಿ-ಸಜ್ಜನಿಕೆಗಳು ಸ್ವೀಕಾರಯೋಗ್ಯವಾಗುವಂತೆ, ಕಪಟತೆ ಮತ್ತು ವ್ಯಾವಹಾರಿಕ ಜಾಣ್ಮೆಯೊಂದಿಗೆ ಆಚರಿಸುವ ಧಾರ್ಮಿಕತೆ, ಧೂರ್ತತನದ ವೃತ್ತಿಪರತೆ ಮತ್ತು ತಾಂತ್ರಿಕ ಕುಶಲತೆಗಳು ವಿಡಂಬನೆಯ ಮೂಲಕ ತಿರಸ್ಕಾರಯೋಗ್ಯವೆನಿಸುವಂತೆ ಚಿತ್ರಿತವಾಗುತ್ತವೆ. ಸಾಕಷ್ಟು ಎಚ್ಚರವಹಿಸಿ ವಿನ್ಯಾಸಗೊಳಿಸಿರುವ ವೇಷ-ಭೂಷಣ-ಪ್ರಸಾಧನಗಳು ಚಿತ್ರದ ಗುಣಾತ್ಮಕತೆಯನ್ನು ಕಾಯ್ದುಕೊಂಡಿವೆ. ಮನಸ್ಸಿಗೆ ತಟ್ಟುವಂತೆ, ಭಾವನಾ ವಿನ್ಯಾಸಕ್ಕೆ ಇಂಬಾಗಿ, ಬೆಳಕು, ನೆರಳು, ಬಣ್ಣಗಳು ಉಚಿತ ಕೋನಗಳಲ್ಲಿ ಸಂಯೋಜಿಸಿದ ಛಾಯಾಚಿತ್ರಗಳಾಗಿ ಮೂಡಿವೆ. ನೀಲಿ, ಬಿಳಿ, ಹಳದಿ ಮತ್ತು ಕೆಂಪು ಬಣ್ಣಗಳು ಸಂಕೇತ ಮತ್ತು ಪ್ರತಿಮೆಗಳನ್ನು ನಿರ್ಮಿಸಲು ಬಳಕೆಯಾಗಿವೆ. ಚಿತ್ರ ಮುಗಿದಮೇಲೆ ಉಳಿಯುವ ಮನಸ್ಥಿತಿಯಲ್ಲಿ ಸೌಜನ್ಯಳ ದಾರುಣ ಹತ್ಯೆ ನೆನಪಾಗುತ್ತದೆ.snap-00014

ಗಂಡಿನ ದಮನಕಾರಕತೆಯನ್ನು, ಅವನನೆರಳಾಗಿ ಅನುಸರಿಸುವ ಹೆಣ್ಣಿನ ಕ್ರೌರ್‍ಯವನ್ನು ಮಾತು, ಕೃತಿ, ನಂಬಿಕೆ, ಸಂಕೇತಗಳಲ್ಲಿ ಹಿಡಿದಿಡಲಾಗಿದೆ. ಎಷ್ಟೇ ಒತ್ತಡ ತಂದರೂ ಹೊಟ್ಟೆಯಲ್ಲಿನ ಹೆಣ್ಣು ಭ್ರೂಣವನ್ನು ಕಾಪಾಡಲು ತಂದೆಯ ಒತ್ತಾಸೆಯ ಬಲ ಪಡೆದು ಗಂಡನನ್ನೇ ತಿರಸ್ಕರಿಸುವ ಮಹಿಳಾವಾದಿಯ ನಿಲುವೂ ಚಿತ್ರದ ಪ್ರಮುಖ ಧೋರಣೆಗಳಲ್ಲಿ ಒಂದಾಗಿದೆ. ಲಿಪ್‌ಸ್ಟಿಕ್ಕನ್ನು ಬಯಸುವ ಮುಗ್ಧ ಹುಡುಗಿ, ಅದನ್ನು ಕಂಡರೆ ಬೆಚ್ಚಿಬೀಳುವ ಲಿಂಗಶೋಷಿತ ಹುಡುಗಿ ಮಹಿಳಾವಾದದ ಎರಡು ಮುಖಗಳಂತೆ ಇವೆ. ದಾರಿದ್ರ್ಯದ ಕೊಳಕು ವೇಷದ ಕುಡುಕ ಗಂಡ ಚಿತ್ರದ ಕೊನೆಯಲ್ಲಿ , ಬಹುಶಃ ಕಿಸೆಕತ್ತರಿಸಲೆಂದು ರೇಜರು ಮಸೆದು, ನೀಟಾಗಿ ತಲೆಬಾಚಿಕೊಂಡು ಮನೆಯಿಂದ ಹೊರಬೀಳುವುದು, ದೇವರಪಟದ ಅಂಗಡಿಯಲ್ಲಿ ನೂರಾರು ದೇವರ ಪಟಗಳ ಮಧ್ಯೆಯಿಂದ ಅಂಬಾಭವಾನಿ ಪಟವನ್ನು ಪೂಜೆಗಾಗಿ ಆರಿಸಿಕೊಂಡು ಬರುವುದು, ಭ್ರೂಣಹತ್ಯೆ ಮಾಡುವ ಕುರೂಪಿ ವೈದ್ಯೆ ಅಂಬಾಭವಾನಿಯ ಭಜನೆ ಹಾಡುವುದು ಆಧುನಿಕ ಜೀವನದ ವ್ಯಂಗ್ಯ ಚಿತ್ರಣವಾಗಿದೆ.snap-00030

ಹಾಗೆಯೇ ಅಂಬಾ ಭವಾನಿಗೆ ಅರ್ಪಿಸಲು ಸಹೃದಯೀ ವ್ಯಕ್ತಿ ಎಚ್ಚರಿಕೆಯಿಂದ ಆರಿಸಿಕೊಳ್ಳುವ ಹಣ್ಣು, ಹುಡುಗಿ ಮಾಯವಾಗುವ ಮೊದಲು ತಿನ್ನುವ ಹಣ್ಣು, ಹುಡುಗಿಯ ಕೈಯಲ್ಲಿ ಚಾಲೂಕಿನ ಮಾರಾಟದ ಸರಕಾಗುವ ಹೂ, ತನ್ನಷ್ಟಕ್ಕೇ ಬದುಕಿನ ಸಂಕೀರ್ಣ ಅಭೀಪ್ಸೆಯ ಪ್ರತಿಮೆಯಾಗಿ ಚಿತ್ರದಲ್ಲಿ ಬಳಕೆಯಾಗಿವೆ. ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ವ್ಯಕ್ತಿಗಳು ಸರಳುಗಳೊಳಗಿಂದ, ಜಾಲರಿಗಳೊಳಗಿಂದ ಚಿತ್ರಿತವಾಗಿರುವುದು ಕ್ಲೀಷೆಯಾದರೂ ನಿರ್ದೇಶಕರ ಸೂಕ್ಷ್ಮಜ್ಞತೆಯನ್ನು ಸಾದರಪಡಿಸುತ್ತವೆ. ಎಷ್ಟೇ ವೃತ್ತಿತತ್ಪರತೆಯಿಂದ ಅಭಿನಯಿಸಿದರೂ ಪಾತ್ರವಾಗಲಾರದ ಒಂದಿಬ್ಬರನ್ನು ಬಿಟ್ಟರೆ ಉಳಿದೆಲ್ಲ ನಟ ನಟಿಯರೂ ಚಿತ್ರದ ಪಾತ್ರಗಳಿಗೆ ಜೀವ ತುಂಬಿದ್ದಾರೆ.Insp_Jaya_Kumar_8x6

ಚಿತ್ರದ ತೀವ್ರ ಕೊರತೆಗಳೆಂದರೆ, ವಾಚ್ಯತೆ, ಕಿವುಡರ ನಡುವಿನ ಸಂವಾದದಂತಿರುವ, ಪಿಸುಮಾತಿನ ಗಂಧವೇ ತಿಳಿಯದ ಶಾಬ್ದಿಕ ಅಬ್ಬರ. ಜೊತೆಗೆ, ಚಿತ್ರದ ಮೈಯೊಳಗೆ ಸೇರಲಾಗದಂತೆ ಸಂಯೋಜಿಸಿರುವ ಸೂಕ್ಷ್ಮಸಂವೇದಿಯಲ್ಲದ ಸಂಗೀತ. ಇದರಿಂದಾಗಿ ಚಿತ್ರದ ಧಾರೆ ಧಕ್ಕೆಗೊಂಡಿರುವುದು ನಿಜ. ಹೆಣ್ಣುಮಕ್ಕಳ ಹಿತಾಸಕ್ತಿಗೆ ವಿರುದ್ಧವಾದ ಸಾಮಾಜಿಕ ಮತ್ತು ನೈತಿಕ ಧೋರಣೆಗಳು ಚಿತ್ರದ ಚೌಕಟ್ಟಿನೊಳಗೆ ಬಿಂಬಾತ್ಮಕವಾಗಿ ವಿಮರ್ಶೆಗೊಳಗಾದರೂ ಅವುಗಳ ಮೂಲವಾದ ಜಾಗತೀಕರಣದ ವರ್ಗನೆಲೆ ಮತ್ತು ವಣಿಕ ಸೌಂದರ್ಯಮೀಮಾಂಸೆ ನಿರ್ದೇಶಕರ ಅರಿವಿನ ಪರಿಧಿಯಾಚೆಗೇ ಉಳಿದುಬಿಡುತ್ತವೆ. ಇದು ತಲ್ಲಣ ಚಿತ್ರದ ಮಿತಿ. ಇಷ್ಟಾದರೂ ಸಿನಿಮಾ ಉದ್ಯಮದ ಮನರಂಜನಾ ಸರಕಿನ,ಜಾಗತಿಕ ದೈತ್ಯ ವ್ಯಾಪಾರಿಗಳು ಕಲ್ಪಿಸುವ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ದೊರೆಯದ,ಆದರೆ, ಬಿಂ?ಭಾಷೆಯಲ್ಲಿ ನಿರ್ಮಿತವಾದ ಇಂಥ ಸದಾಶಯದ ಚಿತ್ರಗಳು ಪರ್ಯಾಯ ಪ್ರದರ್ಶನ ಮಾರ್ಗಗಳಾದ 16 ಎಂ ಎಂ ನೇರಪ್ರದರ್ಶನಗಳಲ್ಲಿ ಪ್ರೇಕ್ಷಕರಿಂದ ಧನಸಹಾಯರೂಪದ ನೇರ ಪಾವತಿಯನ್ನು ನಿರೀಕ್ಷಿಸುವುದು ಪ್ರಜಾತಾಂತ್ರಿಕವಾಗಿ ಉಚಿತವೂ ಸಮಂಜಸವೂ ಆಗಿದೆ. ’ತಲ್ಲಣ’ ಚಿತ್ರದ ತಯಾರಕರು, ನಿರ್ದೆಶಕರು, ನಟಮಟಿಯರು ಮತ್ತು ತಾಂತ್ರಿಕ ತಂಡಕ್ಕೆ ಸಹೃದಯರ ಬೆಂಬಲ ಅತ್ಯಗತ್ಯ.