
ಸಾಂಗತ್ಯ ಪ್ರತಿನಿಧಿ
ಪಣಜಿ : “ಭಾರತೀಯ ಪನೋರಮಾದಡಿ ಆಯ್ಕೆಯಾದ ಚಿತ್ರಗಳನ್ನು ಎನ್ ಎಫ್ ಡಿ ಸಿ ಯ ಫಿಲ್ಮ್ ಬಜಾರ್ ನಲ್ಲೂ ಪ್ರದರ್ಶಿಸಬೇಕು” ಎಂದು ಪ್ರಾದೇಶಿಕ ಸಿನಿಮಾ ನಿರ್ದೇಶಕರು ಆಗ್ರಹಿಸಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ 44 ನೇ ಚಲನಚಿತ್ರೋತ್ಸವ ಸಂದರ್ಭದ ಪತ್ರಿಕಾಗೋಷ್ಠಿಯಲ್ಲಿ ಕನ್ನಡದ ಚಿತ್ರ ನಿರ್ದೇಶಕ ಪಿ ಶೇಷಾದ್ರಿ, ಮರಾಠಿಯ ಸುಮಿತ್ರಾ ಭಾವೆ, ಸುನಿಲ್ ಸೂಕ್ತಂಕರ್, ನಟ ಡಾ. ಮೋಹನ್ ಆಗಾಸೆ, ಬಂಗಾಳಿಯ ನಟಿ ಪೌಲಿ ದಾಮ್ ಅವರು ಮಾತನಾಡಿದರು.
ವಿಷಯವನ್ನು ಪ್ರಸ್ತಾಪಿಸಿದ ಪಿ ಶೇಷಾದ್ರಿ, “ಪನೋರಮಾದಲ್ಲಿ ವರ್ಷಕ್ಕೆ ವಿವಿಧ ಭಾರತೀಯ ಭಾಷೆಯ ಹಲವು ಚಿತ್ರಗಳು ಆಯ್ಕೆಯಾಗುತ್ತವೆ. ಆದರೆ ಅವುಗಳು ಎನ್ ಎಫ್ ಡಿ ಸಿ ಯ ಫಿಲ್ಮ್ ಬಜಾರಿನಲ್ಲಿ ಪ್ರದರ್ಶಿತವಾಗುವುದಿಲ್ಲ. ಅವುಗಳ ಕುರಿತು ಅಲ್ಲಿ ಪಾಲ್ಗೊಳ್ಳುವ ಮಂದಿಗೆ ಮಾಹಿತಿಯೂ ಲಭ್ಯವಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರನ್ನು ಕೇಳಿದರೆ, “ಹತ್ತು ಸಾವಿರ ಕೊಟ್ಟು ನೋಂದಾಯಿಸಿಕೊಳ್ಳಬೇಕು. ನಂತರ ಪ್ರದರ್ಶನ ಶುಲ್ಕವನ್ನು ಪಾವತಿಸಬೇಕು. ಫಿಲ್ಮ್ ಬಜಾರಿನಲ್ಲಿ ಏನು ನಡೆಯುತ್ತಿದೆ ಎಂದು ವೀಕ್ಷಿಸಲು 10 ಸಾವಿರ ರೂ. ಪಾವತಿಸಬೇಕು. ಇದು ಸರಿಯಲ್ಲ. ಈ ನೀತಿಯಿಂದ ಸ್ವತಂತ್ರ ಚಿತ್ರ ನಿರ್ಮಾಪಕರು, ತಯಾರಕರು ಮತ್ತು ನಿರ್ದೇಶಕರು ಸಮಸ್ಯೆ ಎದುರಿಸುವಂತಾಗಿದೆ” ಎಂದು ಅಭಿಪ್ರಾಯಪಟ್ಟರು.
” ಕೇಂದ್ರ ಸರಕಾರದ ಎರಡು ಇಲಾಖೆಗಳ ಮಧ್ಯೆ (ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿಸಿ) ಮತ್ತು ಚಲನಚಿತ್ರೋತ್ಸವ ಇಲಾಖೆ (ಡಿಎಫ್ ಎಫ್)ಯೇ ಸಮನ್ವಯ ಇಲ್ಲವೆಂಬುದು ಈ ನಡವಳಿಕೆಯಿಂದ ಸಾಬೀತಾಗುತ್ತದೆ. ಇದನ್ನು ತಕ್ಷಣವೇ ಸರಿಪಡಿಸಬೇಕು” ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆಯನ್ನು ಆಗ್ರಹಿಸಿದ ಅವರು, ” ಈ ಹಿಂದೆ ದೂರದರ್ಶನದಲ್ಲಿ ಪ್ರಾದೇಶಿಕ ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶವಿತ್ತು. ಈಗ ಅದೂ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಈ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಸುಮಿತ್ರಾ ಭಾವೆ, “ಇದರೊಂದಿಗೆ ನಮ್ಮ ಚಿತ್ರಗಳನ್ನು ಡಿಎಫ್ ಎಫ್ ಸಾಗರೋತ್ತರ ರಾಷ್ಟ್ರಗಳ ಚಿತ್ರೋತ್ಸವಗಳಿಗೆ ಕಳುಹಿಸುತ್ತದೆ. ಅದು ಸಂತೋಷದ ವಿಷಯ. ಆದರೆ, ಈ ಕುರಿತು ಕನಿಷ್ಠ ಮಾಹಿತಿಯನ್ನೂ ನೀಡುವುದಿಲ್ಲ. ಇನ್ನಾದರು ನಾವು ಇಲಾಖೆಯಿಂದ ಮಾಹಿತಿಯನ್ನು ನಿರೀಕ್ಷಿಸುತ್ತೇವೆ” ಎಂದು ಹೇಳಿದರು.
“ನಾವೇನೂ ಇಲಾಖೆಯಿಂದ ಆಮಂತ್ರಣವನ್ನು ಬಯಸುತ್ತಿಲ್ಲ. ಆದರೆ ಮಾಹಿತಿಯನ್ನು ಕೋರುತ್ತಿದ್ದೇವೆ’ ಎಂದು ಶೇಷಾದ್ರಿ ದನಿಗೂಡಿಸಿದರು. ಬಂಗಾಳಿಯ ನಟಿ ಪೌಲಿ ದಾಮ್ ಮಾತನಾಡಿದರು.