ಸಾಂಗತ್ಯ ಪ್ರತಿನಿಧಿ

ಪಣಜಿ : ಸುಮಧುರ ನೆನಪನ್ನು ದಾಖಲಿಸುವ, ಚಿತ್ರರಂಗದ ಹೊಸ ಸಾಧ್ಯತೆಗಳನ್ನು ತೆರೆದಿಡುವ 44 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ರಂಗಿನ ಚಾಲನೆ ಸಿಕ್ಕಿತು.

1

ಸಾಂಸ್ಕೃತಿಕ ನಗರಿಯಾದ ಪಣಜಿಯಲ್ಲಿ ಪ್ರಸಿದ್ಧ ಕಲಾವಿದ ಬಿರ್ಜು ಮಹಾರಾಜ್ ಅವರ ಕಥಕ್ ನೃತ್ಯದ ಸೊಬಗಿನೊಂದಿಗೇ ಚಿತ್ರೋತ್ಸವಕ್ಕೆ ಭಾರತದ ಹಿರಿಯ ನಟಿ ವಹೀದಾ ರೆಹಮಾನ್ ವಿಧ್ಯುಕ್ತ ಚಾಲನೆ ನೀಡಿದರು.

ಸಂಜೆ 4ರ ಸುಮಾರಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಹೀದಾ ರೆಹಮಾನ್ ದೀಪವನ್ನು ಬೆಳಗುವುದರ ಮೂಲಕ ಹನ್ನೊಂದು ದಿನಗಳ ಉತ್ಸವವನ್ನು ಉದ್ಘಾಟಿಸಿದರು. ಬಳಿಕ ಮೊದಲ ಶತಮಾನೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು, ‘ಇದೊಂದು ಸುವರ್ಣ ಅವಕಾಶ. ನನ್ನ ಜೀವನದ ಮಧುರ ಘಳಿಗೆ’ ಎಂದು ಹರ್ಷ ವ್ಯಕ್ತಪಡಿಸಿದರು.

8

ಜೀವಿತಾವಧಿ ಪ್ರಶಸ್ತಿಯನ್ನು ಪಡೆದ ಜೆಕ್ ಸಿನಿಮಾಕರ್ತ ಜಿರಿ ಮೆಂಜೆಲ್ (jiri menzel) ಮಾತನಾಡಿ, ‘ಭಾರತದಲ್ಲಿ ನನ್ನ ಸಿನಿಮಾಗಳನ್ನು ಪ್ರೇಕ್ಷಕ ವರ್ಗ ಅತ್ಯಂತ ಖುಷಿಯಿಂದ ಸ್ವೀಕರಿಸಿದೆ. ಅಂಥ ದೇಶದಲ್ಲಿ ಈ ಪ್ರಶಸ್ತಿಯನ್ನು ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಉದ್ಘಾಟನಾ ಸಮಾರಂಭದಲ್ಲಿದ್ದ ಕೇಂದ್ರ ವಾರ್ತಾ ಮತ್ತು ಪ್ರಚಾರ ಸಚಿವ ಮನೀಷ್ ತಿವಾರಿ, ‘ಬಹುತ್ವ, ಪ್ರಜಾಪ್ರಭುತ್ವ, ವೈವಿಧ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮ್ಮ ಸರಕಾರ ಪ್ರೋತ್ಸಾಹಿಸುತ್ತದೆ. ಅದರ ಪ್ರಯತ್ನವೇ ಈ ಚಿತ್ರೋತ್ಸವ. ಸರಕಾರ ಇಂಥ ಮೌಲ್ಯಗಳನ್ನು ರಕ್ಷಿಸಲಿದೆ’ ಎಂದರು.

13

ಚಿತ್ರನಟಿ ರೇಖಾ, ನಟ ಕಮಲ್ ಹಾಸನ್, ಹಿರಿಯ ಗಾಯಕಿ ಆಶಾ ಬೋಂಸ್ಲೆ, ಇರಾನಿನ ಚಿತ್ರ ನಿರ್ದೇಶಕ ಮಜಿದ್ ಮಜಿದಿ, ಗೋವಾದ ರಾಜ್ಯಪಾಲ ಭರತ್ ವಿರ್ ವಿಂಚೊ, ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಖ್ಖರ್, ಹಾಲಿವುಡ್ ನಟಿ ಸೂಸನ್ ಸರಂಡನ್ ಮತ್ತಿತರರು ಭಾಗವಹಿಸಿದ್ದರು. ಗ್ಯಾಲರಿಯಲ್ಲಿ ಹಿರಿಯ ಚಿತ್ರ ನಟರಾದ ಪ್ರೇಮ್ ಚೋಪ್ರಾ, ನಾನಾ ಪಾಟೇಕರ್, ರಾಣಿ ಮುಖರ್ಜಿ, ಜಾಕಿಶ್ರಾಫ್, ಮನೋಜ್ ಬಾಜಪೇಯಿ, ಹುಮಾ ಖುರೇಶಿ ಮತ್ತಿತರರು ಕಂಗೊಳಿಸುತ್ತಿದ್ದರು.

ಕಳೆಗಟ್ಟಿದ ಸಾಂಸ್ಕೃತಿಕ ವೈಭವ

ಹನ್ನೊಂದು ದಿನಗಳ ಉತ್ಸವದ ಮೊದಲ ದಿನ ಕಳೆಗಟ್ಟಿದ್ದು ಸಾಂಸ್ಕೃತಿಕ ವೈಭವವೇ. ಪಂಡಿತ್ ಬಿರ್ಜು ಮಹಾರಾಜ್ ಮತ್ತು ಉಸ್ತಾದ್ ನಿಶಾತ್ ಖಾನ್ ಅವರ ಜುಗಲ್ ಬಂದಿಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಯಿತು.