ಸಾಂಗತ್ಯ ಪ್ರತಿನಿಧಿ

ಪಣಜಿ : ಗೋವಾದ ರಾಜಧಾನಿ ಪಣಜಿಯಲ್ಲಿ ಈಗ ಹಬ್ಬದ ಕಳೆ. 44 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಕೆಲವೇ ಗಂಟೆಗಳು ಉಳಿದಿದ್ದು, ಕ್ಷಣಗಣನೆ ಆರಂಭವಾಗಿದೆ. ಸಂಜೆ 4 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಚಿತ್ರೋತ್ಸವ ನಿರ್ದೇಶಕ ಶಂಕರ್ ಮೋಹನ್ ಚಿತ್ರೋತ್ಸವ ಕುರಿತು ಮಾಹಿತಿ ನೀಡಿದರು.
ಚಿತ್ರೋತ್ಸವ ನಿರ್ದೇಶಕ ಶಂಕರ್ ಮೋಹನ್ ಚಿತ್ರೋತ್ಸವ ಕುರಿತು ಮಾಹಿತಿ ನೀಡಿದರು.

ದೇಶದ ವಿವಿಧ ಭಾಗಗಳಿಂದ ಈಗಾಗಲೇ ಪ್ರತಿನಿಧಿಗಳು ಆಗಮಿಸಿದ್ದಾರೆ. ಒಟ್ಟೂ ಹನ್ನೊಂದು ದಿನಗಳ ಉತ್ಸವ ಹಲವು ವಿಶೇಷಗಳಿಗೆ ವೇದಿಕೆಯಾಗಲಿದೆ.

ನಟಿ ರೇಖಾ, ಗಾಯಕಿ ಆಶಾ ಬೋಂಸ್ಲೆ, ನಟ ಕಮಲ್ ಹಾಸನ್, ಮನೋಜ್ ಕುಮಾರ್ ಮುಂತಾದ ಭಾರತದ ಕಲಾವಿದರೊಂದಿಗೆ ಇರಾನಿನ ಖ್ಯಾತ ಚಿತ್ರ ನಿರ್ದೇಶಕ ಮಜಿದ್ ಮಜಿದಿ, ಪೋಲಿಶ್ ಚಿತ್ರ ನಿರ್ದೇಶಕಿ ಅಗ್ನೀಜ್ಕಾ ಹೊಲೆಂಡ್ ಮುಂತಾದವರು ಭಾಗವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶತಮಾನೋತ್ಸವ ಪ್ರಶಸ್ತಿ ಮತ್ತು ಜೀವಿತಾವಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.  ಕೇಂದ್ರ ಪ್ರವಾಸೋದ್ಯಮ ಸಚಿವರಾದ ಸೆಲ್ಜಾ ಚಿತ್ರೋತ್ಸವಕ್ಕೆ ಚಾಲನೆ ನೀಡುವರು. ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಮನೀಷ್ ತಿವಾರಿ, ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಖ್ಖರ್ ಮತ್ತಿತರರು ಭಾಗವಹಿಸುವರು.

ಈ ಬಾರಿಯ ಮತ್ತೊಂದು ವಿಶೇಷವೆಂದರೆ, ಭಾರತೀಯ ಸಿನಿಮಾಕ್ಕೆ ನೂರು ವರ್ಷ ತುಂಬಿದ ನೆನಪಿಗೆ ‘ಶತಮಾನೋತ್ಸವ ಪ್ರಶಸ್ತಿ’ ಸ್ಥಾಪಿಸಿದ್ದು, ಈ ವರ್ಷದಿಂದ ಪ್ರದಾನ ಮಾಡಲಾಗುತ್ತಿದೆ. ಮೊದಲನೇ ವರ್ಷದ ಪ್ರಶಸ್ತಿಯನ್ನು ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಚಿತ್ರೋತ್ಸವದ ನಿರ್ದೇಶಕ ಶಂಕರ್ ಮೋಹನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಒಟ್ಟು 76 ದೇಶಗಳ 326 ಚಲನ ಚಿತ್ರಗಳು ಈ ಹನ್ನೊಂದು ದಿನದ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಭಾರತೀಯ ಪನೋರಮಾ ವಿಭಾಗದಲ್ಲಿ 26 ಕಥಾಚಿತ್ರ (ಚಲನಚಿತ್ರ) ಮತ್ತು 16 ಕಥೇತರ ಚಿತ್ರಗಳು ಪ್ರದರ್ಶಿತವಾಗಲಿವೆ.

“ಈ ಬಾರಿ ಡಿಜಿಟಲ್ ಫಾರ್ಮೆಟ್ ನಲ್ಲಿ ಭಾಗವಹಿಸಿರುವ ಚಿತ್ರಗಳ ಸಂಖ್ಯೆ ಶೇ. 80 ಕ್ಕೆ ಏರಿದೆ. ಅದು ಕಳೆದ ವರ್ಷ ಶೇ. 50 ರಷ್ಟಿತ್ತು. ಅಸ್ಸಾಂನ ಕಲಾವಿದ ಪುಲಕ್ ಗೊಗೊಯ್ ಈ ಬಾರಿಯ ಚಿತ್ರೋತ್ಸವದ ಕಲಾ ವಿನ್ಯಾಸ ವನ್ನು ಕೈಗೊಂಡಿದ್ದಾರೆ’ ಎಂದು ಶಂಕರ್ ಮೋಹನ್ ತಿಳಿಸಿದರು.