Image

ಪಣಜಿ : ಅಂತಾರಾಷ್ಟ್ರೀಯ ಚಿತ್ರೋತ್ಸವ 2013 (IFFI 2013) ನವೆಂಬರ್ 20 ರಿಂದ 30 ರವರೆಗೆ ಗೋವಾದ ರಾಜಧಾನಿ ಪಣಜಿಯಲ್ಲಿ ನಡೆಯಲಿದೆ.
ಈಗಾಗಲೇ ಇದರಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುವವರಿಗೆ ನೋಂದಣಿ ಕಾರ್‍ಯ ಆರಂಭವಾಗಿದೆ. ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಬಹುದು.

ಒಟ್ಟು ಹತ್ತು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ ಸುಮಾರು 400 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಗೋವಾದ ಕಲಾಮಂಡಲವೂ ಸೇರಿದಂತೆ ಐನಾಕ್ಸ್‌ನ ನಾಲ್ಕು ಚಿತ್ರಮಂದಿರಗಳಲ್ಲದೇ, ಸಾಂಸ್ಕೃತಿಕ ಭವನದ ಆವರಣದಲ್ಲಿರುವ ಇನ್ನೆರಡು ಸಭಾಂಗಣಗಳಲ್ಲೂ ಚಿತ್ರ ಪ್ರದರ್ಶನವಿರಲಿದೆ.ವಿಶೇಷ

ಭಾರತೀಯ ಪನೋರಮಾ ಎಂಬುದಲ್ಲದೇ, ಒಂದು ದೇಶದ ನಿರ್ದಿಷ್ಟ ಸಿನಿಮಾಗಳು ವೀಕ್ಷಣೆಗೆ ಸಿಗಲಿವೆ. ಆ ಮೂಲಕ ಆ ಸಂಬಂಧಪಟ್ಟ ದೇಶದ ಪ್ರಸ್ತುತ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಅರಿಯಲು ಸಾಧ್ಯ. ಕಳೆದ ಚಿತ್ರೋತ್ಸವ (ಇಫಿ 2012) ದಲ್ಲಿ ಟರ್ಕಿ ದೇಶದ ಸಿನಿಮಾಗಳು ಚಿತ್ರೋತ್ಸವದ ವಿಶೇಷ ಆಕರ್ಷಣೆಯಾಗಿತ್ತು
ಕೇವಲ ಸಿನಿಮಾ ನೋಡುವುದಲ್ಲದೇ, ಸಿನಿಮಾ ಬಗೆಗಿನ ಚರ್ಚೆ ಮತ್ತು ಸಂವಾದಕ್ಕೂ ವೇದಿಕೆಯಾಗುವುದು ಈ ಗೋವಾ ಚಿತ್ರೋತ್ಸವದ ವಿಶೇಷ. ’ಓಪನ್ ಫೋರಂ’ ನಲ್ಲಿ ನಡೆಯುವ ನಿರ್ದೇಶಕರು, ಸಿನಿಮಾ ತಂತ್ರಜ್ಞರೊಂದಿಗಿನ ಸಂವಾದಗಳು, ಚಿತ್ರೋತ್ಸವದ ಅಂಗವಾಗಿಯೇ ವಿಶೇಷವಾಗಿ ಆಯೋಜಿಸಲ್ಪಡುವ ಹಿರಿಯ ಅನುಭವಿ ಸಿನಿಮಾಕರ್ತರೊಂದಿಗಿನ ಸಂವಾದಗಳು ಹೆಚ್ಚು ಚೇತೋಹಾರಿಯಾಗಿರುತ್ತವೆ.

ಮಾಸ್ಟರ್ ಕ್ಲಾಸಸ್
ಈ ಉತ್ಸವದ ಮತ್ತೊಂದು ವಿಶೇಷವೆಂದರೆ ಮಾಸ್ಟರ್ ಕ್ಲಾಸಸ್. ಆದರೆ, ಅದು ಪ್ರೇಕ್ಷಕರೊಂದಿಗಿನ ಸಂವಾದವೆಂಬುವುದಕ್ಕಿಂತ ಹಿರಿಯ ನಿರ್ದೇಶಕರೊಂದಿಗೆ ಮತ್ತೊಬ್ಬ ಹಿರಿಯ ಸಿನಿಮಾ ವಿಮರ್ಶಕರು ನಡೆಸುವ ಸಂದರ್ಶನ ಎನ್ನಬಹುದು. ಆದರೆ, ಆಯಾ ಹಿರಿಯ ಸಿನಿಮಾಕರ್ತರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದನ್ನು ಕೇಳಲು ಒಂದು ಅವಕಾಶ.
ಉಳಿದಂತೆ ಭಾರತೀಯ ಪನೋರಮಾ, ಅಂತಾರಾಷ್ಟ್ರೀಯ ಚಿತ್ರಗಳು ಇತ್ಯಾದಿಗಳು ಇದರೊಂದಿಗೆ ಇರಲಿವೆ. ಪ್ರತಿ ಚಿತ್ರೋತ್ಸವದಲ್ಲಿ ಈ ವರ್ಷದ ಭಾರತೀಯ ಚಿತ್ರರಂಗದ ಫಸಲು ನೋಡಲು ಸಿಗುವ ಅವಕಾಶವೂ ಹೌದು.

Advertisements