ಮಹೇಶ್ ಮಲ್ನಾಡ್ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಕುರಿತು ಬರೆದಿರುವ ಈ ಲೇಖನ ಓದಿ ಅಭಿಪ್ರಾಯಿಸಿ.

ಮಾತಿನ ಮಳೆಯಲ್ಲಿ ಪ್ರೇಕ್ಷಕರನ್ನು ತೊಯ್ಯಿಸುತ್ತಾ ಮಿಂಚಿನಂತೆ ಸಂಚಲನ ಮೂಡಿಸಿರುವ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಬಗ್ಗೆ ಇದು ನನ್ನ ಅನಿಸಿಕೆ.

ಹೊಸಬರ ಚಿತ್ರ, ಟ್ರೈಲರ್ ಮೂಡಿಸಿದ್ದ ಕುತೂಹಲ ಥೇಟರ್ ಗೆ ಕರೆದೊಯ್ದಿತ್ತು. ಉಪೇಂದ್ರ ಸಿನಿಮಾ ರಿಲೀಸ್ ಆಗೋ ದಿನ ಇರೋ ಗೌಜು ಗದ್ದಲ, ಕ್ರೇಜ್ ಈ ಚಿತ್ರಕ್ಕೂ ಕಂಡು ಬಂದಿದ್ದು ನೋಡಿ ಥೇಟರ್ ನವರೇ ದಂಗಾಗಿ ಹೋಗಿದ್ದರು.

simple-aagi-ondu-love-story

ಆನ್ ಲೈನ್ ಬುಕ್ಕಿಂಗ್ ಮಾಡಿಸಿದ್ದರೂ ಸಮಯಕ್ಕೆ ಸರಿಯಾಗಿ ಟಿಕೆಟ್ ವಿಲೇವಾರಿ ಮಾಡಲು ಸಾಧ್ಯವಾಗದೆ ಥೇಟರ್ ನವರು ಒದ್ದಾಡಿದ್ದು ಖುಷಿ ಕೊಟ್ಟಿತು. ಚಿತ್ರದ ಓಪನಿಂಗ್ ಸೀನ್ ಐ ಮೀನ್ ಟೈಟಲ್  ಕಾರ್ಡ್ ತೋರಿಸಿದ ರೀತಿಗೆ ಫುಲ್ ಮಾರ್ಕ್ ಕೊಡಲು ಮನಸು ಒಪ್ಪುವುದಿಲ್ಲ. ತೀರಾ ಸಿಂಪಲ್ ಎನಿಸಿಬಿಟ್ಟಿತು.

ನಿರೂಪಣಾ ಶೈಲಿ: ಹೆಚ್ಚಿನ ಹೈಪ್ ಇಲ್ಲದೆ ನಾಯಕ, ನಾಯಕಿ ತೋರಿಸಿದ ರೀತಿ.. ರೇಡಿಯೋ ಸಿಟಿ ಆರ್ ಜೆ ಬಳಸಿಕೊಂಡಿರುವ ರೀತಿ ಕೂಡಾ ಓಕೆ. ಮೊದಲ ಕೆಲ ದೃಶ್ಯಗಳನ್ನು ನೋಡುತ್ತಿದ್ದಂತೆ ಸಂಭಾಷಣೆಯೇ ಚಿತ್ರದ ಜೀವಾಳ ಎನಿಸಿಬಿಡುತ್ತದೆ.

ಆದರೆ, ನಿರ್ದೇಶಕ ಸುನಿ ಅವರನ್ನು ಇನ್ನೊಬ್ಬ ಯೋಗರಾಜ್ ಭಟ್ ರಂತೆ ಮಠ ಗುರುಪ್ರಸಾದ್ ರಂತೆ ಹೋಲಿಸುವ ಅಪಾಯವೂ ಇದೆ. ಕಾರಣ. ಮಾತಿನ ಮಂಟಪದಲ್ಲಿ ಕೆಲವೇ ಪಾತ್ರಧಾರಿಗಳನ್ನು ಇಟ್ಟುಕೊಂಡು ಚಿತ್ರವನ್ನು ಪ್ರೇಕ್ಷಕರಿಗೆ ಒಪ್ಪಿಸುವ ರೀತಿ ಸುಲಭವೇನಲ್ಲ.

ದೃಶ್ಯದಿಂದ ದೃಶ್ಯಕ್ಕೆ ಸಂಭಾಷನೆ ಮಜಾ ನೀಡುತ್ತಿದ್ದಂತೆ ಪ್ರೇಕ್ಷಕರಿಗೆ ಏಕತಾನತೆ ಕಾಡದಿರಲಿ ಎಂದು ಫ್ಲಾಶ್ ಬ್ಯಾಕ್ ನಂತೆ ಕಥೆ ಹೇಳುವ ತಂತ್ರ ಸುನಿ ಸಮರ್ಥವಾಗಿ ಬಳಸಿದ್ದಾರೆ. ಹಾಗೆ ನೋಡಿದರೆ ಉಪೇಂದ್ರ ನಂತರ ಫ್ಲಾಶ್ ಬ್ಯಾಕ್ ಟೆಕ್ನಿಕ್ ಬಳಸಿ ಚಿತ್ರಕಥೆಯ ಓಟ ಹೆಚ್ಚಿಸಿ, ಹುಚ್ಚು ಹಿಡಿಸುವಲ್ಲಿ ಸುನಿ ಗೆದ್ದಿದ್ದಾರೆ.

ಎರಡೇ ಪಾತ್ರಗಳಲ್ಲಿ ಆಟವಾಡುತ್ತಾ ಫ್ಲಾಶ್ ಬ್ಯಾಕ್ ನಲ್ಲೂ ಅದೇ ಪಾತ್ರಧಾರಿಗಳನ್ನು ಬಳಸಿದ್ದು ಮಾತಿನ ಮಳೆಯಲ್ಲಿ ಮೀಯುತ್ತಿದ್ದ ಪ್ರೇಕ್ಷಕರು ಕೆಲವರಿಗೆ ಕನ್ ಫ್ಯೂಸ್ ಮಾಡಿದ್ದಂತೂ ನಿಜ. ಆದರೆ, ಈ ಕನ್ ಫ್ಯೂಸ್ ಸುನಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ.

ಮಠದಲ್ಲಿ ಏಕತಾನತೆ ಒಡೆಯಲು ಉಪಕಥೆಗಳನ್ನು ಬಳಸಿದಂತೆ ಇಲ್ಲಿ ನಾಯಕ, ನಾಯಕಿ ತಮ್ಮ ಪ್ರೇಮಕಥೆಗಳನ್ನು ಹೇಳುತ್ತಾರೆ. ಆದರೆ, ಮಠದಲ್ಲಿ ನಾಯಕ ಮಾತ್ರ ಫ್ಯಾಶ್ ಬ್ಯಾಕ್ ನಲ್ಲಿ ಕಾಣಿಸಿಕೊಂಡರೆ, ಇಲ್ಲಿ ನಾಯಕ ನಾಯಕಿ ಇಬ್ಬರೂ ಕಾಣಿಸಿಕೊಳ್ಳುತ್ತಾರೆ.

ಮಧ್ಯಂತರ ತನಕ ಸರಾಗವಾಗಿ ಚಿತ್ರ ಮುಂದುವರೆಯುತ್ತದೆ. ಸಂಭಾಷಣೆಯಲ್ಲಿ ಡಬ್ಬಲ್ ಮೀನಿಂಗ್ ಎನಿಸಿದರೆ ಅದು ಉದ್ದೇಶಪೂರ್ವಕವಾಗಿಲ್ಲ, ಸಾಂದರ್ಭಿಕವಾಗಿದೆ ಅಷ್ಟೇ. ಪನ್ ಪಂಚ್ ಇಲ್ಲದ ನೀರಸ ಡೈಲಾಗ್ ಗಿಂತ ಎಷ್ಟೋ ವಾಸಿ.

ಕೆಮೆರಾ ವರ್ಕ್: ಮನೋಹರ್ ಜೋಶಿ ಹಾಗೂ ಸಚಿನ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಹಾಡುಗಳು ಕನ್ನಡ ಚಿತ್ರರಂಗಕ್ಕೆ ಹೊಸತನ ಮೂಡಿಸಿದೆ. ಹಾಡುಗಳನ್ನೇ ಪ್ರತ್ಯೇಕಿಸಿ ವಿಸಿಡಿ ಬಿಟ್ಟರೂ ಅಡ್ಡಿಯಿಲ್ಲ. ಸ್ಮೈಲ್ ಏರುವಂತೆ ಸರಾಸರಿ…ಬಾನಲಿ ಬದಲಾಗೋ…ಹಾಗೂ ನನ್ನ ಪ್ರೀತಿ ಕುಸುರಿ ಹಾಡಿನ ಚಿತ್ರೀಕರಣಕ್ಕೆ ಫುಲ್ ಮಾರ್ಕ್ಸ್. ಆದರೆ, ಕರಗಿದ ಬಾನಿನಲ್ಲಿ ಎಷ್ಟು ಎಫೆಕ್ಟಿವ್ ಆಗಿ ಮೂಡಿ ಬಂದಿಲ್ಲ.

ಡ್ರೆಸ್ ಕಾಂಬಿನೇಷನ್ ಪಾತ್ರಕ್ಕೆ, ಆ ಪ್ರಸಂಗಕ್ಕೆ ತಕ್ಕಂತೆ ಹೊಂದಿಕೆಯಾಗಿದೆ. ಇದೇ ವಿಷಯ ಮಳೆಗೆ ಹೇಳಲು ಬರುವುದಿಲ್ಲ. ವಿರಾಜಪೇಟೆಯಲ್ಲಿ ಮಳೆ ಸುರಿವ ಸಮಯದಲ್ಲಿ ಬೆಂಗಳೂರಿನಲ್ಲೂ ಮಳೆ ಸುರಿಯಲೇ ಬೇಕು ಎಂಬ ನಿಯಮವಿದೆಯೇ? ಗೊತ್ತಿಲ್ಲ. ಬೆಂಗಳೂರಲ್ಲಿ ಬೀಳುವುದು ತಿಕ್ಕಲು ಮಳೆ ಯಾವಾಗ ಬೇಕಾದರೂ ನಿರೀಕ್ಷಿಸಬಹುದು ಎನ್ನಬಹುದಾದರೂ ಯಾಕೋ ಸ್ಯೂಟ್ ಆಗಿಲ್ಲ.

ಆರ್ ಜೆ ರಚನಾ ಮೈಕ್ ಜೊತೆ ಗಿದ್ದಾಗ ನಟನೆಗಿಂತ ಸಹಜವಾಗಿ ಕಂಡಿದ್ದಾರೆ. ಪ್ರದೀಪ್ ಬಂದು ಮಾತನಾಡಿಸುವ ದೃಶ್ಯ ಅಗತ್ಯವಿತ್ತೆ? ನೇತ್ರಾ ರಜೆ ಪ್ರೇಕ್ಷಕರಿಗೆ ಅನಗತ್ಯ.

ಎಲ್ಲಕ್ಕೂ ಸ್ಪಷ್ಟನೆ ಬೇಕಿತ್ತಾ?: ದೃಶ್ಯಗಳಲ್ಲಿ ಹೇಳಿ ಮುಗಿಸಬಹುದಾದ ವಿಷಯಗಳನ್ನು ಮಾತಿನ ಮೂಲಕ ಹೇಳುವ ಪ್ರಯತ್ನವನ್ನು ಸುನಿ ಮಾಡಿ ಗೆದ್ದಿದ್ದಾರೆ.

ಕದ್ದಿರೋ ಟ್ಯೂನ್ ಗೆ ರಚನೆಯ ಬರಿಯಿರಿ…ಯೂಟ್ಯೂಬ್ ನಲ್ಲಿರೋ ವಿಡಿಯೋ ಕದಿಯುವುದು inspiration ಎಂದು ಸಮಜಾಯಿಸಿ ನೀಡಿರುವುದು ಉದ್ದೇಶ ಪೂರ್ವಕವೇ?

ಮಂಗಳೂರು ಕಡೆ ಕೈಸ್ತ ಧರ್ಮೀಯ ಚರ್ಚ್ ನೊಳಗೆ ಸಂಸ್ಕೃತದ ಉಕ್ತಿ ವಾಚಿಸುವುದು ಯಾಕೋ?  ಕಾಲೇಜು ದಿನಗಳ ಕತೆಯಲ್ಲಿ ಮೂಡಿ ಬರುವ ದೇಗುಲದ ಬಳಿ ದೃಶ್ಯ ಯಾವುದೇ ಭಾವನೆ ಉಕ್ಕಿಸುವುದಿಲ್ಲ. ಎರಡು ಫ್ಲಾಶ್ ಬ್ಯಾಕ್ ನಲ್ಲೂ ನಾಯಕಿ ಒಂದೇ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಯಾಕೋ ಗೊತ್ತಿಲ್ಲ.

ನಾಯಕ, ನಾಯಕಿ ಸೇರಿದಂತೆ ಎಲ್ಲರೂ ಒಂದೇ ದಾಟಿಯಲ್ಲಿ ಮಾತನಾಡುವುದು ಉದ್ದೇಶ ಪೂರ್ವಕ ಇರಬಹುದು. ಚಿತ್ರದ ಜೀವಾಳವಾಗಿರುವ ನಾಯಕ ನಾಯಕಿ ನಟನೆ, ಸಂಭಾಷಣೆ, ಛಾಯಾಗ್ರಹಣ, ಸಾಹಿತ್ಯ,ಸಂಗೀತ ಜೊತೆಗೆ ಸಂಕಲನಕಾರರ ಶ್ರಮ ಉಲ್ಲೇಖನಾರ್ಹ. ಸರಿಯಾದ ಎಡಿಟರ್ ಇಲ್ಲದಿದ್ದರೆ ಈ ಚಿತ್ರ ಏನಾಗುತ್ತಿತ್ತು ಎಂದು ವಿವರಿಸ ಬೇಕಾಗಿಲ್ಲ.

ಕೊನೆಯಲ್ಲಿನ ಟ್ವಿಸ್ಟ್.. ಒಮ್ಮೆ ಗುರುತಿಸದಿದ್ದ ಮಾತ್ರಕ್ಕೆ ಆಕೆ ಬೇಡ ಎಂದು ನಾಯಕ ಹೊರಟೇ ಬಿಡುವುದು ಯಾಕೋ ಜಾಸ್ತಿ ಎನಿಸಿದರೂ ತಪ್ಪು ಎನಿಸುವುದಿಲ್ಲ. ಯಾಕೆಂದರೆ ರಕ್ಷಿತ್ ಅವರ ಗಡ್ಡಧಾರಿ ಪಾತ್ರ ಪ್ರೇಕ್ಷಕರನ್ನು ಆಗಲೇ ಆವರಿಸಿಬಿಟ್ಟಿರುತ್ತದೆ.

ಒಟ್ಟಾರೆ, ಚಿತ್ರ ನೋಡಿದ ಮೇಲೆ ಏನಾದರೂ ಭಾವನೆ ಹೊರ ಹೊಮ್ಮಿಸಬೇಕು. ಸಕತ್ ಆಗಿದೆ. ತೀರಾ ಸಪ್ಪೆಯಾಗಿದೆ ಎಂದಾದರೂ ಎನಿಸಬೇಕು. ಡಬ್ಬಾ ಮುವಿ ಮಗಾ ಎಂದು ಫ್ರೆಂಡ್ಸ್ ಗೆ ಹೇಳುವಂತಾದರೂ ಇರಬೇಕು ಆಗ ಚಿತ್ರ ತಂಡದ ಶ್ರಮಕ್ಕೆ ಬೆಲೆ ಸಿಗುತ್ತದೆ. ಸಿಂಪಲ್ ಚಿತ್ರ ನೋಡಿದ ಮೇಲೆ ತಕ್ಷಣಕ್ಕೆ ಸಂಭಾಷಣೆಗಳು ಹೊಳೆಯುವುದಿಲ್ಲ.

ತಮ್ಮ ಬಳಿ ಇರುವ ಎಲ್ಲಾ ಡೈಲಾಗ್ಸ್ ಗಳನ್ನು ತುರುಕಿರುವ ಸುನಿಗೆ ಸಕ್ಸಸ್ ಆಗುವುದೇ ಇಲ್ಲವೆ ಎಂಬ ಭಯ ಕಾಡಿತ್ತೆ? ಎಲ್ಲವನ್ನು ಒಂದೇ ಚಿತ್ರದಲ್ಲಿ ನೀಡಿ ಮುಂದೆ ಸರಕು ಖಾಲಿ ಮಾಡಿಕೊಂಡು ಭಟ್ಟರ ರೀತಿ ಆಕಾಶವಾಣಿ ಆಗುವ ಆಪಾಯ ಎದುರಾಗದಿರಲಿ.

ಚಿತ್ರ ತಂಡದ ಪ್ರಯತ್ನಕ್ಕೆ ಪೂರ್ಣ ಅಂಕ. ನಿರೂಪಣೆಗೆ, ಹೊಸತನಕ್ಕೆ, ಹೊಸ ಮುಖಗಳಿಗೆ ಮುಕ್ತ ಸ್ವಾಗತ. ನೂರಕ್ಕೆ 80 ಅಂಕಗಳು ಮಾತ್ರ ಕಳೆದು ಹೋದ 20 ಅಂಕ ತುಂಬಿಸಿ ಪರಿಪೂರ್ಣತೆಯತ್ತ ತಂಡ ಸಾಗಲಿ ಎಂಬ ಆಶಯದೊಂದಿಗೆ  ಮುಂದಿನ ಚಿತ್ರಕ್ಕೆ ಕಾಯುತ್ತಿರುವೆ.ಕೊನೆಯದಾಗಿ..

ಚಿತ್ರ ರಿಮೇಕೋ, ಸ್ವಮೇಕೋ ಅದ್ಭುತವೇನಲ್ಲ ಸಿಂಪಲ್ ಆಗಿರೋ ‘ಸ್ಟೋರಿ’.. ಈಗ ಬರುತ್ತಿರುವ ರಿಮೇಕ್ ಚಿತ್ರಗಳಿಗಿಂತ ಎಷ್ಟೋ ಪಾಲು ಮೇಲು. ಹಾಲಿವುಡ್ ಚಿತ್ರದ ಸ್ಪೂರ್ತಿಯಾದರೂ ಓಕೆ.. ಈ ಚಿತ್ರ ನೀಡುವ ಪಂಚ್ ಆ ಚಿತ್ರ ಡಬ್ ಮಾಡಿದರೆ ನೀಡಲಾರದು. ಹೀಗಾಗಿ ಚಿತ್ರದ ಮೂಲಕಥೆಯ ಬಗ್ಗೆ ಮೂಡಿರುವ ಸಂಶಯಗಳು ಚಿತ್ರದ ಓಟಕ್ಕೆ ಬ್ರೇಕ್ ಹಾಕುವುದಂತೂ ಸಾಧ್ಯವಿಲ್ಲ.

Advertisements