ಕನ್ನಡದ ರೆಬಲ್‌ಸ್ಟಾರ್ ಅಂಬರೀಷ್ ಚಿತ್ರರಂಗಕ್ಕೆ ಬಂದು ೪೦ ವರ್ಷದ ಹೊತ್ತಿನಲ್ಲಿ ತನ್ನ ನಟನಾಗಿ ಸಾಗಿ ಬಂದ ಪಥದ ಹೆಜ್ಜೆಗುರುತುಗಳನ್ನು ಅವರೊಂದಿಗೆ ಹರಟುತ್ತಲೇ ಮುರಳೀಧರ ಖಜಾನೆಯವರು ಸಂಗ್ರಹಿಸಿ, ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿತವಾದ ಲೇಖನದ ಅನುವಾದವಿದು. 

ನಾಯಕತ್ವದ ನೆಲೆಯಲ್ಲಿ ಹೇಳುವುದಾದರೆ ಈ ಮಾತು ಸ್ಪಷ್ಟ. ಹಿರಿಯ ನಟರಾದ ಡಾ. ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ಅಗಲಿಕೆಯಿಂದ ಕನ್ನಡ ಸಿನಿಮಾರಂಗದಲ್ಲಿ ಉಂಟಾಗಿದ್ದ ನಿರ್ವಾತವನ್ನು ಅಂಬರೀಷ್ ತುಂಬಿದ್ದರು. ಕನ್ನಡ ಚಿತ್ರರಂಗವೂ ಈ ಸಂದರ್ಭವನ್ನು ಸ್ಮರಣೀಯಗೊಳಿಸುವ ನೆಲೆಯಲ್ಲಿ ಪ್ರಯತ್ನಿಸುತ್ತಿದೆ. ನಿರ್ದೇಶಕ ಎಸ್.ನಾರಾಯಣ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಈ ಹೊಣೆಯನ್ನೂ ವಹಿಸಿಕೊಂಡಿದ್ದಾರೆ.

ambarish1

ಎಂ.ಎಚ್. ಅಮರನಾಥ್ ಅಂದರೆ ಅಂಬರೀಷ್ ಹುಟ್ಟಿದ್ದು 1952 ರ ಮೇ 29 ರಂದು ಮಂಡ್ಯ ಜಿಲ್ಲೆಯಲ್ಲಿ. ಸಂಗೀತ ಹಿನ್ನೆಲೆಯ ಕುಟುಂಬ. ಹೆಸರಾಂತ ಪಿಟೀಲು ವಾದಕ ಟಿ. ಚೌಡಯ್ಯನವರ ಮೊಮ್ಮಗ ಅಂಬರೀಷ. ಕ್ಲಾಸುಗಳಿಗೆ ಚಕ್ಕರ್ ಹೊಡೆಯುತ್ತಿದ್ದುದ್ದನ್ನು ಅವರೇ ಒಪ್ಪಿಕೊಂಡಿದ್ದಾರೆ, ‘ನಿಜ. ನಾನು ಓದುವುದರಲ್ಲಿ ಮುಂದಿರಲಿಲ್ಲ. ಕಡಿಮೆ ಅಂಕಗಳನ್ನು ಗಳಿಸುತ್ತಿದ್ದೆ. ಪಿಯುಸಿಯಲ್ಲೇ ಒಂದೇ ಸಬ್ಜೆಕ್ಟ್‌ನಲ್ಲಿ ಪಾಸಾದದ್ದು, ಇಲ್ಲದಿದ್ದರೆ ನಾನು ಡಾಕ್ಟರ್ ಆಗಬೇಕಿತ್ತು‘.

1970  ಕನ್ನಡ ಚಿತ್ರರಂಗದ ಸುವರ್ಣ ದಿನಗಳು. ಪುಟ್ಟಣ್ಣ ಕಣಗಾಲ್ ತಮ್ಮ ತರಾಸು ಅವರ ಕಾದಂಬರಿ ಆಧರಿತ ‘ನಾಗರಹಾವು’ ಚಿತ್ರಕ್ಕೆ ಸೂಕ್ತ ನಟರನ್ನು ಹುಡುಕುತ್ತಿದ್ದರು. ವಿಷ್ಣುವರ್ಧನ್ ಆಗಾಗಲೇ ಚಿತ್ರದ ನಾಯಕ ‘ರಾಮಾಚಾರಿ’ ಪಾತ್ರಕ್ಕೆ ಆಯ್ಕೆಯಾಗಿದ್ದರು. ನಟಿ ಆರತಿ ನಾಯಕಿಯಾಗಿಯೂ ನೇಮಕವಾಗಿತ್ತು. ಸ್ವಲ್ಪ ಒರಟು ಒರಟಾಗಿರುವ ಒಬ್ಬನ ಅಗತ್ಯವಿತ್ತು. ಅದಕ್ಕಾಗಿ ಪುಟ್ಟಣ್ಣ ತಲಾಶ್‌ನಲ್ಲಿದ್ದರು. ಅವರ ಗೆಳೆಯ ಸಂಗ್ರಾಮ್‌ಸಿಂಗ್ ಅಂಬರೀಷ್‌ರನ್ನು ಶಿಫಾರಸು ಮಾಡಿದ್ದರು.

‘ನನಗೆ ನಟನೆಯಲ್ಲಿ ಆಸಕ್ತಿಯಿರಲಿಲ್ಲ. ಆದಷ್ಟು ಸ್ಕ್ರೀನ್ ಟೆಸ್ಟ್‌ಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನ್ನ ಸ್ನೇಹಿತ ಸಂಗ್ರಾಮ್ ಸಿನಿಮಾಕ್ಕೆ ನನ್ನನ್ನು ತಂದೇ ತೀರಬೇಕೆಂದು ನಿರ್ಧರಿಸಿದ್ದ. ಆದರೆ, ನನ್ನ ನಿರಾಸಕ್ತಿ ಅವನಿಗೆ ಪುಟ್ಟಣ್ಣರಿಂದ ತಲೆ ಮರೆಸಿಕೊಳ್ಳಬೇಕಾದ ಸ್ಥಿತಿ ತಂದಿತು. ಆಗ ಸಂಗ್ರಾಮ್, ನನ್ನನ್ನು ಹುಡುಕತೊಡಗಿದ. ಕೊನೆಗೂ ನನ್ನನ್ನು ಎಳೆದುತಂದು ಮೈಸೂರಿನ ಪ್ರೀಮಿಯರ್ ಸ್ಟುಡಿಯೋದ ಎದುರು ನಿಲ್ಲಿಸಿದ’ ಎಂದು ಅಂಬರೀಷ್ ಹಲವು ವರ್ಷಗಳ ಹಿಂದಿನ ಪಯಣ ಆರಂಭವಾದ ಹೊತ್ತಿಗೆ ತೆರಳುತ್ತಾರೆ.

‘ನನ್ನನ್ನು ಒಮ್ಮೆ ಖಚಿತ್ತಾಗಿ ನೋಡಿದ ಪುಟ್ಟಣ್ಣನವರು, ಮೇಕಪ್ ಮ್ಯಾನ್‌ಗೆ ಏನನ್ನೋ ಸೂಚಿಸಿದರು. ನನ್ನನ್ನು ತಿರಸ್ಕರಿಸಬಹುದೆಂದುಕೊಂಡಿದ್ದೆ. ಆದರೆ, ಕೆಲವೇ ಕ್ಷಣಗಳಲ್ಲಿ ಅದು ಸುಳ್ಳಾಯಿತು. ಕಾಲೇಜಿನಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸುವ ಹುಡುಗನ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದರು. ಚಿತ್ರೀಕರಣದ ದಿನ ಪುಟ್ಟಣ್ಣನವರು, ‘ನೀನು ದೊಡ್ಡ ಸ್ಟಾರ್ ಆಗ್ತೀಯಾ’ ಎಂದು ಹೇಳಿದ್ದರು. ಆಗ ನಾನು ಪೆದ್ದಾಗಿ ಕೇಳಿದ್ದೆ-‘ಕೇಡಿ ನಟ ಹೇಗೆ ಹೀರೋ ಆಗ್ತಾನೆ ಅಂತ?’.

ಪುಟ್ಟಣ್ಣನವರ ಮಾತು ಪವಾಡದಂತೆಯೇ ನಿಜವಾಯಿತು. ಅಂಬರೀಷ್, ಅ ಚಿತ್ರದಲ್ಲಿ ಜಲೀಲ್ ಪಾತ್ರವನ್ನು ನಿರ್ವಹಿಸಿದರು. ಆ ಚಿತ್ರದಲ್ಲಿ ‘ಬುಲ್ ಬುಲ್ ಮಾತಾಡಾಕಿಲ್ವಾ?’ ಎಂಬ ಅವರ ಸಂಭಾಷಣೆಯ ಸಾಲು ಚಿತ್ರರಸಿಕರನ್ನು ಸೆರೆ ಹಿಡಿಯಿತು. ಅ ಮೂಲಕ ಹೊಸ ಕೇಡಿ ನಟ ಹುಟ್ಟಿಕೊಂಡ. ಅವರು ಅದೆ ಪಾತ್ರವನ್ನು ನಾಗರಹಾವು ಚಿತ್ರದ ಹಿಂದಿ ಅವತರಣಿಕೆ ‘ಝಹ್ರೀಲಾ ಇನ್ಸಾನ್’ ನಲ್ಲೂ ನಿರ್ವಹಿಸಿದ್ದಾರೆ. ಅಂಬರೀಷ್ ನಾಯಕ ನಟನಾಗಿ ‘ಅಮರನಾಥ್‘ ಎಂಬ ಚಿತ್ರದಲ್ಲಿ ನಟಿಸಿದ್ದರೂ, ಯಶಸ್ಸು ಕಂಡಿದ್ದು ‘ಅಂತ‘ದಲ್ಲಿ. ಅಂಬರೀಷರ ಆಪ್ತ ಗೆಳೆಯ ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿದ್ದು. ಆ ಚಿತ್ರ ಸೃಷ್ಟಿಸಿದ ಹೊಸ ದಾಖಲೆ ಕನ್ನಡ ಚಿತ್ರರಂಗದಲ್ಲೇ ಅದ್ಭುತವಾದುದು. ಹಿಂದಿ, ತಮಿಳು, ತೆಲುಗಿನಲ್ಲೂ ಇದೇ ಸಿನಿಮಾವನ್ನು ಮಾಡಲಾಯಿತು. ಕನ್ವರ್‌ಲಾಲ್‌ನಾಗಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಅಂಬರೀಷರ ಡೈಲಾಗ್ ‘ಕುತ್ತೇ ಕನ್ವರ್ ನಹೀ, ಕನ್ವರ್ ಲಾಲ್ ಬೋಲೊ‘ ಸೂಪರ್ ಹಿಟ್ ಆಯಿತು. ಎಲ್ಲರ ಬಾಯಲ್ಲೂ ನಲಿದಾಡತೊಡಗಿತು.

ambarish

ಅಂಬರೀಷ್ 208 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಪಡುವಾರಹಳ್ಳಿ ಪಾಂಡವರು‘, ‘ಚಕ್ರವ್ಯೂಹ‘, ‘ರಂಗನಾಯಕಿ‘, ‘ಶುಭ ಮಂಗಳ’, ‘ರಾಣಿ ಮಹಾರಾಣಿ‘, ‘ಗರುಡ ಧ್ವಜ‘, ‘ಜೈ ಕರ್ನಾಟಕ‘, ‘ರಣಭೇರಿ‘, ‘ಗುರು ಜಗದ್ಗುರು‘, ‘ವಿಜಯ ಕಂಕಣ’, ‘ರೌಡಿ ಎಂಎಲ್‌ಎ‘, ‘ಹೃದಯ ಹಾಡಿತು‘ ಹಾಗೂ ‘ಒಲವಿನ ಉಡುಗೊರೆ‘ ಕೆಲವು ಯಶಸ್ವಿ ಚಿತ್ರಗಳು. ‘ಅಂತ‘ ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದರೆ, ಆಂಧ್ರ ಪ್ರದೇಶದ ಎನ್‌ಟಿಆರ್ ಪ್ರಶಸ್ತಿ, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ‘ಮಸಣದ ಹೂವು‘ ಚಿತ್ರದಲ್ಲಿನ ಪೋಷಕ ನಟನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಹೀಗೆ ಹಲವು ಗೌರವಗಳು ಸಂದಿವೆ. ಪುಟ್ಟಣ್ಣನವರು ನಿರ್ದೇಶಿಸಿದ ‘ರಂಗನಾಯಕಿ‘ ಅವರೇ ಹೇಳುವಂತೆ ಅವರ ಅತ್ಯುತ್ತಮ ಚಿತ್ರ. ಅವರ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ ಅಂಬರೀಷ್.

ಅಂಬರೀಷ್‌ರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಚಿತ್ರರಂಗದಿಂದ ರಾಜಕೀಯ ರಂಗಕ್ಕೂ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಕಾವೇರಿ ನೀರಿನ ಚಳವಳಿ ಸಂದರ್ಭದಲ್ಲಿ ಹೋರಾಟವನ್ನು ಬೆಂಬಲಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ‘ಕಾವೇರಿ ನೀರು ಹಂಚಿಕೆ’ ಕುರಿತ ತೀರ್ಪನ್ನು ವಿರೋಧಿಸಿ ನನ್ನನ್ನು ಆಯ್ಕೆ ಮಾಡಿದ ಜನರೆಲ್ಲಾ ಬೀದಿಗಿಳಿದು ಹೋರಾಟ ನಡೆಸುತ್ತಿರುವಾಗ ನಾನ್ಹೇಗೆ ಸಂಸತ್ತಿನಲ್ಲಿ ಕುಳಿತುಕೊಳ್ಳಲಿ. ಯಾಕೋ ಸರಿಯಲ್ಲ ಅನಿಸಿತು. ರಾಜೀನಾಮೆ ಕೊಟ್ಟು ಬಂದೆ’ ಎಂದು ಹೇಳುತ್ತಾರೆ ಅವರು. ಅದರೊಂದಿಗೆ ಆ ವ್ಯವಸ್ಥೆ ಬಗ್ಗೆ ಹತಾಶೆಯಾಗಿದ್ದನ್ನೂ ಒಪ್ಪಿಕೊಳ್ಳುತ್ತಾರೆ. ನಿಜವಾಗಲೂ ಇಂದಿನ ರಾಜಕೀಯವನ್ನು ಕಂಡರೆ ನಾಚಿಕೆಯಾಗುತ್ತಂತೆ ಅವರಿಗೆ.

ಅನಂತರ ಅಂಬರೀಷ್ ಕನ್ನಡ ಚಿತ್ರರಂಗದಲ್ಲಿ ಉದ್ಭವಿಸುವ ವಿವಾದಗಳನ್ನು ಇತ್ಯರ್ಥಪಡಿಸುವ ಚಿತ್ರರಂಗ ಕುಟುಂಬದ ಹಿರಿಯನ ಪಾತ್ರ ನಿರ್ವಹಿಸತೊಡಗಿದರು. ಸಂಕಷ್ಟಕಾಲದಲ್ಲಿ ಸಹಕಾರ ನೀಡಿದ ಮಹಾಭಾರತದ ಕರ್ಣನ ಪಾತ್ರಕ್ಕೆ ಚಿತ್ರರಂಗದ ಮಂದಿ ಅವರನ್ನು ಹೋಲಿಸತೊಡಗಿದರು. ಹಾಗೆ ಹೇಳುವುದಾದರೆ ಅವರು ಆಜಾತಶತ್ರು. ರಾಜಕುಮಾರ್‌ರೊಂದಿಗೆ ಹೋಲಿಸುವುದನ್ನೂ ತಪ್ಪು ಎನ್ನುವ ಅಂಬರೀಷ್, ಸಂಕೋಚದಿಂದ ಮುದುಡುತ್ತಾರೆ. ‘ಅಣ್ಣಾವ್ರ ಜೊತೆಗೆ ನನ್ನನ್ನು ಹೋಲಿಸಬೇಡಿ. ಚಿತ್ರರಗದ ನಾಯಕತ್ವ ವಹಿಸಿಕೊಳ್ಳಲು ಸಹಕರಿಸುವಂಥ ವಯಸ್ಸು ನನ್ನದಲ್ಲ. ಸಮಸ್ಯೆಯೊಂದಿಗೆ ಯಾರಾದರೂ ನನ್ನ ಬಳಿ ಬಂದರೆ ನನ್ನ ಕೈಲಾದ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುವೆ, ಅಷ್ಟೇ’ ಎಂದರು ಸಂಕೋಚದಿಂದ.