ಐದನೇ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ ಚಿತ್ರಗಳ ಬಗ್ಗೆ ರವೀಂದ್ರ  ಒಳಗೆರೆ ಬರೆದಿದ್ದಾರೆ. ಓದಿ ಅಭಿಪ್ರಾಯಿಸಿ.
ರೋಜ್: ಚಿತ್ರದ ಕಥೆ 1945ರ ಕಾಲಘಟ್ಟದ್ದು. ಜರ್ಮನ್ ಸೈನಿಕನೊಬ್ಬನ ಪತ್ನಿ ಚಿತ್ರದ ನಾಯಕಿ ರೋಜ. ಸೈನಿಕ, ರಶಿಯನ್ ರ ದಾಳಿಯಿಂದ ಸತ್ತ ನಂತರ ರೋಜಾ ಒಂಟಿಯಾಗಿ ತನ್ನ ಜಮೀನಿನಲ್ಲೆ ಉಳಿದುಕೊಳ್ಳುತ್ತಾಳೆ. ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ರಶಿಯನ್ ಸೈನಿಕರೂ ಎಸಗುತ್ತಿದ್ದರೂ ಆಕೆಯ ರಕ್ಷಣೆಗೆ ಯಾರೂ ಇರುವುದಿಲ್ಲ . ಚಿತ್ರದ ನಾಯಕ ಪೋಲೆಂಡ್ ದೇಶದ ಸೈನಿಕ. ವಾರ್ಸಾದ ಉಗಮದ ಸಮಯದಲ್ಲಿ ಕಣ್ಣಮುಂದೆಯೇ ತನ್ನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿ ಸಾಯಿಸಿರುತ್ತಾರೆ. ತನ್ನ ಗುರುತನ್ನು ಮುಚ್ಚಿಟ್ಟುಕೊಳ್ಳಲು ಬರುವ ನಾಯಕ ರೋಜಾಳ ರಕ್ಷಣೆಗೆ ನಿಲ್ಲುತ್ತಾನೆ.ಮುಂದೆ ಆಕೆಯ ಹೊಲವನ್ನು ಹಸನುಮಾಡಿ, ಅವಳನ್ನು ರಶಿಯನ್ ಸೈನಿಕರಿಂದ ರಕ್ಷಿಸಲು ನಾನಾ ಪ್ರಯತ್ನ ಪಡುತ್ತಾನಾದರೂ ಆಕೆ ದುರ್ಮರಣಕ್ಕೀಡಾಗುತ್ತಾಳೆ . ಆಕೆಯ ಮಗಳನ್ನು ರಕ್ಷಿಸಲು ಪನತೊಡುವ ನಾಯಕ ಆನಂತರ ರಶಿಯನ್ ಸೈನಿಕರ ಕೈಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಾನೆ. ಅಷ್ಟೆಲ್ಲಾ ಹಿಂಸೆಯ ನಂತರವೂ ಬದುಕುಳಿಯುವ ನಾಯಕ ಕೊನೆಯಲ್ಲಿ ರೋಜಾಳ ಮಗಳನ್ನು ಹುಡುಕಿಕೊಂಡು ಹೋಗಿ, ಆಕೆಯನ್ನು ಸೇರುತ್ತಾನೆ.

ಚಿತ್ರದ ಕಥೆ, ನಿರೂಪಣೆ ನಮಗೆ 1945ರ ಕರಾಳ ದಿನಗಳನ್ನು ಹಾಗೆಯೇ ತೆರೆದಿಡುತ್ತದೆ. ಜಯ ಯಾರ ಕಡೆಗೆ ಆಗಲಿ, ಯುದ್ಧದ ಭೀಕರತೆ ಮಾತ್ರ ಎರಡೂ ಕಡೆ ತನ್ನ ಕರಾಳ ಪ್ರಭಾವವನ್ನು ಬೀರದೆ ಇರುವುದಿಲ್ಲ. ಅಲ್ಲಿ ಹೆಂಗಸು, ಮಕ್ಕಳು ಗಂಡಸೆಂಬ ಭೇದ ಭಾವವಿಲ್ಲ.. ಆವತ್ತಿನ ದಿನದಲ್ಲಿ ಬದುಕೆಂಬುದು ಅದೆಷ್ಟು ಕಷ್ಟ ಕರವಾಗಿತ್ತೆ೦ಬುದು ಪ್ರಾರಂಭದ ದೃಶ್ಯದಲ್ಲಿಯೇ ನಿರ್ದೇಶಕ ನಮಗೆ ಮನವರಿಕೆ ಮಾಡಿಕೊಟ್ಟುಬಿಡುತ್ತಾನೆ. ಚಿತ್ರದಲ್ಲಿ ಇನ್ನೊಂದು ಗಮನ ಸೆಳೆಯುವ ಅಂಶವೆಂದರೆ ಕಲಾ ನಿರ್ದೇಶನ. ಯುದ್ಧದ ನಂತರದ ದೃಶ್ಯಗಳನ್ನು ಯಥಾವತ್ತಾಗಿ ಕಟ್ಟಿಕೊಡುವುದರಲ್ಲಿ ನಿರ್ದೇಶಕನಿಗೆ ಸರಿಸಮನಾಗಿ ಛಾಯಾಗ್ರಾಹಕ ಮತ್ತು ಕಲಾನಿರ್ದೇಶಕರೂ ಕೈ ಜೋಡಿಸಿದ್ದಾರೆ. ಹಾಗಾಗಿ ಚಿತ್ರದಲ್ಲಿ ನೈಜಕತೆ ಮೆರೆದಿದೆ.

ಯುದ್ಧದ ಬಗ್ಗೆ ಹಾಲಿವುಡಿನಿಂದ ಹಿಡಿದು ಪ್ರಪಂಚದ ಎಲ್ಲಾ ಚಿತ್ರರಂಗಗಳಲ್ಲೂ ಸುಮಾರಷ್ಟು ಚಿತ್ರಗಳು ತೆರೆಕಂಡಿವೆ. ದೇಶ ದೇಶ ಬೇರೆಯಾದರೂ, ಕಥೆಗಳು ಬೇರೆಯಾದರೂ ಒಟ್ಟಾರೆ ಪ್ರಭಾವ ಮಾತ್ರ ಒಂದೇ ಇರುತ್ತದೆ:ಯುದ್ಧ ಎನ್ನುವುದು ಅಮಾನವೀಯ ಎಂಬುದು.
ಬರೀ ಮೂರೊತ್ತು ತಿಂದು ಬದುಕುವುದಕ್ಕೆ, ತಮ್ಮ ನೆಲದಲ್ಲಿ ಬೆಳೆದು ತಮ್ಮ ಪಾಡಿಗೆ ತಾವಿರುತ್ತೆವೆಂಬುದಕ್ಕೆ ಬಿಡದ ಯುದ್ಧ ಯಾವತ್ತೂ ಯಾರಿಗೂ ಬೇಡ ಎಂಬ ಸಂದೇಶವನ್ನು ಚಿತ್ರ ಯಶಸ್ವಿಯಾಗಿ ಸಾರುತ್ತದಷ್ಟೇ ಅಲ್ಲ ತುಂಬಾ ದಿನದ ವರೆಗೆ ರೋಸ್ ಮತ್ತು ನಾಯಕ ತಾದೆಯುಜ್ ಪಾತ್ರಗಳು ಕಾಡುತ್ತವೆ. ಅವಶ್ಯವಾಗಿ ಒಮ್ಮೆ ನೋಡಬೇಕಾದ ಚಿತ್ರ ರೋಜ್.
ಇತರ ಮಾತರಂ:

ಮಲಯಾಳಂ ನ ಕಾದಂಬರಿಕಾರ ಕಲ್ಪಟ್ಟ ನಾರಾಯಣನ್  ಅವರ ಕಾದಂಬರಿ ಆಧರಿಸಿದ ಚಿತ್ರ ಇತ್ರ ಮಾತರಂ 2012ರಲ್ಲಿ ತೆರೆಕಂಡ೦ತಹ ಚಿತ್ರ. ಒಂದೂವರೆ ಘಂಟೆಯಷ್ಟು ಅವಧಿಯ ಈ ಚಿತ್ರದ ನಿರ್ದೇಶಕ ಕೆ. ಗೋಪಿನಾಥನ್. ಚಿತ್ರದ ಪ್ರಮುಖ ಪಾತ್ರಧಾರಿ/ನಾಯಕಿಯ ಸಾವಿನೊಂದಿಗೆ ಸಿನೆಮಾ ಆರಂಭವಾಗುತ್ತದೆ. ಮೂವತ್ತೆಂಟು ವರ್ಷದ ಒಂದು ಮಗುವಿನ ತಾಯಿಯಾಗಿದ್ದ ಗೃಹಿಣಿಯ ಸಾವಿನ ನಂತರ ಆಕೆಯ ಅಂತಿಮ ದರ್ಶನಕ್ಕೆ ಬರುವ ಸಂಬಂಧಿಕರ ಮೂಲಕ ಆಕೆಯ ಹಿನ್ನೆಲೆ, ಜೀವನದ ಆಗುಹೋಗುಗಳು ತಿಳಿಯುತ್ತಾ ಹೋಗುತ್ತವೆ. ನನ್ನ ಒಡವೆಗಳನ್ನು ಜೋಪಾನವಾಗಿಡು  ಎಂದು ಪಕ್ಕದ ಮನೆಯ ಮುದುಕಿ ತನ್ನ ಆಭರಣಗಳನ್ನು ಕೊಟ್ಟಿರುತ್ತಾಳೆ. ಈಗ ಏಕಾಏಕಿ ಆಕೆ ಸತ್ತದ್ದರಿಂದ ಮುದುಕಿಗೆ ಆಭರಣದ ಚಿಂತೆಯಾಗುತ್ತದೆ. ಬಾಲ್ಯದ ಗೆಳತಿಗೆ ತನ್ನ ಕಷ್ಟಸುಖ ಹಂಚಿಕೊಳ್ಳಲು ಇದ್ದ ಏಕೈಕ ವ್ಯಕ್ತಿ ಇನ್ನಿಲ್ಲವಲ್ಲ ಎಂಬ ಚಿಂತೆ. ಪಕ್ಕದ ಮನೆಯ ಹುಡುಗ, ಕೆಲಸದಾಳು.. ಹೀಗೆ ಎಲ್ಲರ ಜೀವನದಲ್ಲೂ ಆಕೆಗಿದ್ದ ಪಾತ್ರವು ಚೀಚಿಯ ಜೀವನದ ವಿವಿಧ ಮಗ್ಗಲನ್ನು ವಿಶದಪಡಿಸುತ್ತವೆ.
ಚಿತ್ರದ ಕಥೆ-ಚಿತ್ರಕಥೆ ಭಿನ್ನವೆನಿಸಿದರೂ ಮಂದಗತಿಯ ನಿರೂಪಣೆ ಪ್ರೇಕ್ಷಕರನ್ನು ಆಕಳಿಸುವಂತೆ ಮಾಡುತ್ತದೆ. ಒಬ್ಬೊಬ್ಬರು ಹೆಣ ನೋಡಲು ಬಂದಾಗ ಅವರ ಮೂಲಕ ಅವರು ಮತ್ತು ನಾಯಕಿಗೆ ಸಂಬಂಧಪಟ್ಟ ಘಟನೆಗಳು ತೆರೆದುಕೊಳ್ಳುತ್ತವೆ. ಕೆಲವು ಘಟನೆಗಳು ಆತ್ಮೀಯವೆನಿಸುತ್ತವೆ. ಕೆಲವು ಆಸಕ್ತಿಕರವೆನಿಸುತ್ತವೆ. ಆದರೂ ಇನ್ನೂ ಏನಾದರೂ ಬೇಕಿತ್ತೇನೋ ಎನಿಸುವುದರಿಂದ ಚಿತ್ರ ಮಾಸ್ಟರ್ ಪೀಸ್ ಎನಿಸುವುದಿಲ್ಲ.

ದಿ ಮೂನ್’ಸ್ ಪಾಮ್:

ಖಾಲಿದ್ ಯೂಸೆಫ್ ನಿರ್ದೇಶನ 2011ರಲ್ಲಿ ಬಿಡುಗಡೆಯಾದ ಈಜಿಪ್ಟ್ ಭಾಷೆಯ ಚಿತ್ರದ ಅವಧಿ ಎರಡು ಘಂಟೆಗಳು.ದಿ ಮೂನ್’ಸ್ ಪಾಮ್ ಚಿತ್ರದ ಕಥೆ ಇಷ್ಟೇ. ಒಬ್ಬಾಕೆಗೆ ಐದು ಜನ ಮಕ್ಕಳು. ಗಂಡನ ಕನಸು ಒಂದು ಸ್ವಂತ ಮನೆ ನಿರ್ಮಿಸುವುದಾಗಿರುತ್ತದೆ, ಆದರೆ ಅದು ಈಡೇರದೆ ಆಟ ಅಕಾಲ ಮರಣಕ್ಕೀಡಾದಾಗ ತಾಯಿ ಆ ಕನಸನ್ನು ಮಕ್ಕಳಿಗೆ ವರ್ಗಾಯಿಸುತ್ತಾಳೆ. ಮನೆ ಕಟ್ಟಲು ಹಣ ಸಂಪಾದಿಸಲು ಐವರೂ ನಗರಕ್ಕೆ ಹೊರಟುಬಿಡುತ್ತಾರೆ,.ಅಲ್ಲಿ ಐವರ ಬದುಕು ಕಾರಣಾ೦ತರದಿಂದಾಗಿ ಬೇರೆ ಬೇರೆ ಯಾಗುತ್ತದೆ. ಮುಂದೆ ಆಕೆಯ ಸಾಯುವ ಕೊನೆ ಕ್ಷಣದಲ್ಲಿ ಹಿರಿಯ ಮಗ ಜಿಕ್ರಿ ತನ್ನ ಉಳಿದ ನಾಲ್ವರು ತಮ್ಮಂದಿರನ್ನು ಹುಡುಕಿ ಜೊತೆಯಲ್ಲಿ ಕರೆದುಕೊಂಡು ಬರಲು ನಿರ್ಧರಿಸುತ್ತಾನೆ. ಅವರೆಲ್ಲರಿಗೂ ಅಣ್ಣನ ಮೇಲೆ ಅಸಮಾಧಾನವಿರುತ್ತಾದ್ದರಿಂದ ಯಾರೂ ಒಪ್ಪುವುದಿಲ್ಲ. ಕೊನೆಯಲ್ಲಿ ತಾಯಿಯ ಸಾವಿನೊಂದಿಗೆ ಐವರೂ ಒಂದಾಗುತ್ತಾರಲ್ಲದೆ ಅಮ್ಮನ ಕನಸಾದ ಮನೆ ಕಟ್ಟುವುದನ್ನು ನನಸಾಗಿಸುತ್ತಾರೆ.

ಚಿತ್ರವೂ ಮಾಮೂಲಿ ಮಸಾಲೆ ಚಿತ್ರದಂತಿದೆ. ಯಾವುದೇ ಕಲಾತ್ಮಕ ಅಂಶಗಳಾಗಲಿ, ಹೊಸತನವಾಗಲಿ ಚಿತ್ರದಲ್ಲಿಲ್ಲ. ಚಿತ್ರದ ಪಾತ್ರ ಪೋಷಣೆ ಅಷ್ಟಾಗಿ ಪರಿಣಾಮಕಾರಿಯೆನಿಸುವುದಿಲ್ಲ. ಐದು ನಾಯಕರ ಪಾತ್ರಗಳೂ ಅಷ್ಟೇ. ಯಾವುದು ನಮ್ಮನ್ನು ಅಷ್ಟಾಗಿ ಕಾಯುಡುವುದಿಲ್ಲವಾದರೂ ತಾಯಿಯ ಪಾತ್ರ ಕೆಲವು ಕಡೆ ಮೆಚ್ಚುಗೆಗೆ ಪಾತ್ರವಾಗುತ್ತದೆ.
ನಮ್ಮದೇ ತೊಂಬತರ ದಶಕದ ಹಿಂದಿ ಸಿನೆಮಾ ನೋಡಿದಂತೆ ಭಾಸವಾದರೆ ಅದಕ್ಕೆ ಖಾಲಿದ್ ಯೂಸಫ್ ಕಾರಣರಲ್ಲ. ಅದಕ್ಕೆ ನಾವೇ ಕಾರಣವಾಗುವುದೇಕೆಂದರೆ ಇಂತಹ ಚಿತ್ರಗಳನ್ನ ಈಗಾಗಲೇ ಸಾಕಷ್ಟು ನೋಡಿಬಿಟ್ಟಿದ್ದೇವೆ.
ಓಆಸ್: 

ಅಭಿನವ್  ಶಿವ್ ತಿವಾರಿ ಎಂಬ ನವನಿರ್ದೆಶಕನ ಚಿತ್ರ ಓಆಸ್.ನೇಪಾಳದ ಚಿಕ್ಕ ಹಳ್ಳಿಯೊಂದರ ಬಾಳೆ ಕಿಕು. ಆಕೆಗೆ ತುಂಬಾ ಓದಬೇಕೆಂಬಾಸೆಯಿದ್ದರೂ ಆಕೆಯ ಮನೆಯ ಬಡತನ ಅದಕ್ಕೆ ಇಂಬು ನೀಡುವುದಿಲ್ಲ.ಆಕೆಯನ್ನು ಆಕೆಯ ಊರಿನವಳೇ ಆದ, ಸಂಬಂಧಿಯೊಬ್ಬಳು ಸೋಗಿನ ಮಾತಾಡಿ ಅಪ್ಪ ಅಮ್ಮನ ಮನವೊಲಿಸಿ ಸುಂದರ ಬದುಕನ್ನು ರೂಪಿಸುವ ಭರವಸೆ ನೀಡಿ ಅಲ್ಲಿಂದ ಕರೆದುಕೊಂಡು ಬಂದು ವೇಶ್ಯಾವಾಟಿಕೆಗೆ ತಳ್ಳುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ಕಿಕುವಿನ ವೇಶ್ಯಾಗೃಹ ಯಾತ್ರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೊಂದು ಅದಕ್ಕಿಂತ ಹೆಚ್ಚಿನ ನರಕಸ್ವರೂಪಿ  ವೇಶ್ಯಾಗೃಹಕ್ಕೆ  ಬೀಳುತ್ತಾಳೆ. ನರಕಯಾತನೆ ಅನುಭವಿಸುತ್ತಾಳೆ. ಆದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಕನಸನ್ನು ಮಾತ್ರ ಜೀವಂತವಾಗಿಟ್ಟುಕೊಂಡಿರುತ್ತಾಳೆ. ಕೊನೆಯಲ್ಲಿ ಸರ್ಕಾರೇತರ ಸಂಸ್ಥೆಯೊಂದರ ನೆರವಿನಿಂದ ಆಕೆ ಬಿಡುಗಡೆಯಾದರೂ ತಾನು ಅಲ್ಲೇ ಉಳಿದು ಆ ಸಂಸ್ಥೆಯಲ್ಲಿ ಕೆಲಸ ಮಾಡುವ ನಿರ್ಧಾರ ಕೈಗೊಳ್ಳುತ್ತಾಳೆ.

ಚಿತ್ರದ ಕಥೆ ಅದರ ಹಿಂದಿನ ಸತ್ಯ /ವಾಸ್ತವ ನಮಗೆಲ್ಲಾ ಗೊತ್ತಿರುವಂತಹದ್ದೆ. ವೇಶ್ಯಾವಾಟಿಕೆ, ಮಕ್ಕಳ ಕಳ್ಳ ಸಾಗಾಣಿಕೆಯ ಬಗ್ಗೆ ದೇಶದ ವಿವಿಧೆಡೆ ಎಲ್ಲಾ ರೀತಿಯಲ್ಲೂ ಚಿತ್ರಗಳು ಬಂದುಹೋಗಿವೆ. ಅದೇ ನಿಟ್ಟಿನಲ್ಲಿ ಇದು ಒಂದು ಚಿತ್ರ ಎನಿಸುತ್ತದೆಯೇ ಹೊರತು ಹೊಸದಾದ ಅನುಭಾವವನ್ನು ಕಟ್ಟಿಕೊಡುವುದಿಲ್ಲ. ಚಿತ್ರ ಮುಂದುವರೆದಂತೆ ಎಲ್ಲಾ ನಿರೀಕ್ಷಿತ ಎನಿಸುತ್ತದೆ. ಆದರೆ ಕೆಲವು ಕಡೆ ಚಿತ್ರ ಚಿತ್ರೀಕರಣವನ್ನು ಅಗತ್ಯಕ್ಕೆ ತಕ್ಕಂತೆ ಮೊನಚಾಗಿಸಿರುವುದರಿಂದ ಇದು ಭಾರತೀಯ ಚಿತ್ರವೇ ಎನ್ನುವ ಅನುಮಾನ ಉಂಟುಮಾಡುತ್ತದೆ. ಚಿತ್ರದ ಪ್ರಾರಂಭದಲ್ಲಿ ತೀವ್ರಗತಿಯಲ್ಲಿ ಮುಂದುವರೆಯುವ ಚಿತ್ರ ತದನಂತರ ಕೆಲವು ಸನ್ನಿವೇಶಗಳ ಪುನರಾವರ್ತನೆಯಿಂದಾಗಿ ನಿಧಾನವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬಹುತೇಕರಿಗೆ ಗೊತ್ತಿರುವ ಸತ್ಯವನ್ನು ಒಂದು ಸೀದಾಸಾದಾ ಕಥೆಯ ಮೂಲಕ ನಿರ್ದೇಶಕರು ನಮ್ಮ ಮುಂದಿಡುವ ಪ್ರಯತ್ನ ಮಾಡಿದ್ದಾರೆ .
ಕಿಕುವಿನ ಪಾತ್ರ ನಿರ್ವಹಿಸಿರುವ ದಿವ್ಯಾ ಚೆತ್ರಿ ನಿಜಕ್ಕೂ ಅಭಿನಂದನಾರ್ಹರು. ಜೊತೆಗೆ ವೇಶ್ಯಾವಾಟಿಕೆಯೊಂದರ ಮುಖ್ಯಸ್ಥೆಯ ಪಾತ್ರ ನಿರ್ವಹಿಸಿರುವ ಪ್ರಿಯಾಂಕ ಬೋಸ್ ಕೂಡ ಅತ್ಯುತ್ತಮ ಅಭಿನಯ ನೀಡಿದ್ದಾರೆ.