ಭಾನುವಾರಕ್ಕೇ ಜನ ಜಾತ್ರೆ ಮುಗಿಯತೇ?

5 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಮೂರು ದಿನ ಸಿಕ್ಕಾಪಟ್ಟೆ ಜನಸಂದಣಿ. ಆ ಸ್ಥಿತಿ ಯಾವ ಹಂತಕ್ಕೆ ತಲುಪಿತ್ತೆಂದರೆ, ಎಲ್ಲ ಚಿತ್ರಮಂದಿರಗಳ  ಎದುರೂ ಸಿನಿಮಾಸಕ್ತರು ಮುಷ್ಕರ ನಡೆಸಿದ್ದರು.

a-1

ಶುಕ್ರವಾರದಿಂದಲೇ ಈ ಸಮಸ್ಯೆ ಶುರುವಾಗಿತ್ತಾದರೂ, ಶನಿವಾರ ಮತ್ತು ಭಾನುವಾರ ಮಿತಿ ಮೀರಿತ್ತು. ಶುಕ್ರವಾರವಂತೂ ಐನಾಕ್ಸ್ 4 ನಲ್ಲಿ ಹಿರಿಯ ಚಿತ್ರ ನಿರ್ದೇಶಕರಾದಿಯಾಗಿ ಹಲವರು ಸೀಟಿಲ್ಲ ಎಂದು ಸಂಘಟಕರಿಂದ ಕೇಳಿಸಿಕೊಂಡು ವಾಪಸಾದರು.

ಐನಾಕ್ಸ್ 2 ರಲ್ಲಿ (ದಿ ಎಡ್ಜ್ ಆಫ್ ಹೆವನ್ ಚಿತ್ರ) ನೆಲದ ಮೇಲೆಲ್ಲಾ ಕುಳಿತ ಸಿನಿಮಾಸಕ್ತರನ್ನು ಹೊರಗೆ ಕಳುಹಿಸಲು ಸಂಘಟಕರು ಶತಪ್ರಯತ್ನ ಮಾಡಿದರಾದರೂ, ಸಿನಿಮಾಸಕ್ತರು ಕದಲಲಿಲ್ಲ. ಅಲ್ಲಿ ನೆಲದ ಮೇಲೆ ಕುಳಿತು ನೋಡಲು ಅವಕಾಶ ನೀಡಿರುವಾಗ ನಮಗೇಕೆ ಇಲ್ಲ ಎಂದು ಉಳಿದ ಚಿತ್ರಮಂದಿರಗಳೆದುರು ಸಂಘಟಕರನ್ನು ಮುತ್ತಿಕ್ಕಿದ್ದರು ಸಿನಿಮಾಸಕ್ತರು. ಈ ಹಿನ್ನೆಲೆಯಲ್ಲಿ ಡೈಲಿ ಪಾಸುಗಳ ವಿತರಣೆಯನ್ನೂ ಸ್ಥಗಿತಗೊಳಿಸಲಾಗಿತ್ತು.

rush

ಅದೆಲ್ಲಾ ಮುಗಿದಿದೆ. ಸೋಮವಾರ ಲಿಡೋ, ಐನಾಕ್ಸ್ ನಲ್ಲಿ ಸಿನಿಮಾಗಳಿಗೆ ಜನರೇ ಇರಲಿಲ್ಲ. ಅದರಲ್ಲೂ ಬೆಳಗ್ಗೆಯ ಚಿತ್ರಗಳಿಗೆ ಅರ್ಧದಷ್ಟು ಆಸನಗಳಷ್ಟೇ ಭರ್ತಿಯಾಗಿದ್ದವು. ಮಧ್ಯಾಹ್ನದ ಮೇಲೆ ಸ್ವಲ್ಪ ಪರವಾಗಿಲ್ಲ  ಎನ್ನುವಂತಾಗಿದ್ದರೂ ರಾತ್ರಿಯ ಷೋಗಳಿಗೆ ಮತ್ತೆ ಅದೇ ಸ್ಥಿತಿ.

ಸೋಮವಾರ ಬೆರಳೆಣಿಕೆಯಷ್ಟು ಡೈಲಿ ಪಾಸ್ ಗಳನ್ನು ವಿತರಿಸಿದರೂ, ನಂತರ ಸ್ಥಗಿತಗೊಳಿಸಲಾಯಿತು. ಮಂಗಳವಾರ ಕ್ರಿಸ್ ಮಸ್ ರಜೆ ಇರುವುದರಿಂದ ಮತ್ತೆ ಸಿನಿಮಾಸಕ್ತರು ಚಿತ್ರಮಂದಿರಗಳತ್ತ ದಾಳಿ ಇಡಬಹುದು ಎಂದು ಸಂಘಟಕರ ಲೆಕ್ಕಾಚಾರ. 

ಆಮೋರ್ ಗೂ ಜನರಿರಲಿಲ್ಲ !

ಈ ಚಿತ್ರೋತ್ಸವವಷ್ಟೇ ಅಲ್ಲ, ಗೋವಾದಲ್ಲಿ ನಡೆದ (ನವೆಂಬರ್) 43 ನೇ ಚಲನಚಿತ್ರೋತ್ಸವದಲ್ಲೂ ಆಮೋರ್ ಸಿನಿಮಾಕ್ಕೆ ಬಹಳ ಬೇಡಿಕೆಯಿತ್ತು. ಹಲವು ನೆಲೆಗಳಲ್ಲಿ ಇದನ್ನು ಅತ್ಯುತ್ತಮ ಚಿತ್ರ  ಎಂದು ಬಿಂಬಿಸಿರುವುದರಿಂದ ಸಾಮಾನ್ಯವಾಗಿ ಸಿನಿಮಾಸಕ್ತರು ಚಿತ್ರವನ್ನು ತಪ್ಪಿಸಿಕೊಳ್ಳಬಾರದೆಂದು ನಿರ್ಧರಿಸಿದ್ದರು. ಹಾಗಾಗಿ ಎರಡೂ ಷೋಗಳಲ್ಲಿ ಜನ ತುಂಬಿಕೊಂಡಿತ್ತು. ವಿಚಿತ್ರವೆಂದರೆ, ಭಾನುವಾರ ಲಿಡೋದಲ್ಲಿ ಪ್ರದರ್ಶಿತವಾಗಿದ್ದ  ಆಮೋರ್ ಚಿತ್ರಕ್ಕೆ ಬಹಳ ಕಡಿಮೆ ಜನರಿದ್ದರು.

ವಾಸ್ತವವಾಗಿ ಆ ಚಿತ್ರಕ್ಕೆ ಸಾಕಷ್ಟು ಜನ ಸೇರಬಹುದು, ನಿಯಂತ್ರಣ ಕಷ್ಟವಾಗಬಹುದೆಂದು ಸಂಘಟಕರೆಲ್ಲಾ ಅತ್ತಲೇ ಗಮನವಿಟ್ಟಿದ್ದರು. ಆದರೆ, ಮುಕ್ಕಾಲಿನಷ್ಟೂ ಥಿಯೇಟರ್ ತುಂಬಿರಲಿಲ್ಲ. ಇಂದು (ಮಂಗಳವಾರ ಸಂಜೆ) ಮತ್ತೆ ಆ ಚಿತ್ರ  ಐನಾಕ್ಸ್ ನಲ್ಲಿ ಪ್ರದರ್ಶಿಸಲಾಗುತ್ತಿದೆ.

ಕ್ಲಿಪ್ ಚಿತ್ರ ಪ್ರದರ್ಶನ ?

ಗೋವಾ ಚಿತ್ರೋತ್ಸವದಲ್ಲಿ ಕೆಟ್ಟ ಚಿತ್ರವೆಂದೇ ಬಿಂಬಿತವಾಗಿದ್ದ “ಕ್ಲಿಪ್” ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವುದೇ ಎಂಬ ಪ್ರಶ್ನೆ ಕಾಡತೊಡಗಿದೆ.

ಮೊದಲ ಷೆಡ್ಯೂಲ್ ನಲ್ಲಿ ಆ ಚಿತ್ರ ಸೇರ್ಪಡೆಯಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ತಾಂತ್ರಿಕ ಕಾರಣಗಳನ್ನು ಒಡ್ಡಿ ಅದನ್ನು ಕೈಬಿಡಲಾಗಿತ್ತು. ಈಗ ಮತ್ತೆ ಪ್ರದರ್ಶನಗೊಳ್ಳುವುದೇ ಎಂಬ ಅನುಮಾನವಿದೆ.

ಗೋವಾ ಚಲನಚಿತ್ರೋತ್ಸದಲ್ಲಿ ಪ್ರದರ್ಶಿತವಾಗಿದ್ದಾಗ, ಚಿತ್ರಮಂದಿರದಲ್ಲೇ ಒಂದಿಷ್ಟು ಸಿನಿಮಾಸಕ್ತರು ಗದ್ದಲವೆಬ್ಬಿಸಿದರು. ಅಷ್ಟೇ ಅಲ್ಲದೇ, “ಈ ಚಿತ್ರವನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿದ  ಆಯ್ಕೆ ಸಮಿತಿ ಸದಸ್ಯರನ್ನು ಎದುರಿಗೆ ತಂದು ನಿಲ್ಲಿಸಿ, ತಕ್ಕ ಶಾಸ್ತಿ ಮಾಡುತ್ತೇವೆ’ ಎಂದು ಹಾಳೆಗಳಲ್ಲಿ ಮುದ್ರಿಸಿ ಚಿತ್ರ ಪ್ರದರ್ಶನದ  ಎದುರಿನ ನೊಟೀಸ್ ಬೋರ್ಡ್ ನಿಂದ ಹಿಡಿದು, ಮೀಡಿಯಾ ಸೆಂಟರ್, ಎದುರಿನ ಗೋಡೆಗಳೆಲ್ಲಾ ಅಂಟಿಸಲಾಗಿತ್ತು. ಜತೆಗೆ ಸಮಿತಿಗೂ ಈ ಸಂಬಂಧ ದೂರಲಾಗಿತ್ತು. ಅಂಥ ಚಿತ್ರ  ಈ ಚಿತ್ರೋತ್ಸವದಲ್ಲಿ ಸ್ಥಾನ ಪಡೆದದ್ದೇ ಅಚ್ಚರಿಯಾಗಿದೆ. ಬಹಳ ತಮಾಷೆಯ ಸಂಗತಿಯೆಂದರೆ, ಚಲನಚಿತ್ರೋತ್ಸವ ನಿರ್ದೇಶಕಿ ಮತ್ತು ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅವರು, ಒಮ್ಮೆ ಸಂದರ್ಶನದಲ್ಲಿ “ಕೌಟುಂಬಿಕವಾಗಿ ನೋಡುವ ಚಿತ್ರಗಳನ್ನು ಆಯ್ಕೆ ಮಾಡಿದ್ದೇವೆ” ಎಂದು ಹೇಳಿದ್ದರು. ಇಂಥ ಚಿತ್ರಗಳು ಕುಟುಂಬಗಳು ನೋಡುವಂಥದ್ದೇ ಎಂಬುದು ದೊಡ್ಡ ಪ್ರಶ್ನೆ.