ಐದನೇ ಬೆಂಗಳೂರು ಚಿತ್ರೋತ್ಸವ ನಿಜವಾಗಲೂ ಖುಷಿ ನೀಡಿದೆ, ಹಲವು ಕಾರಣಗಳಿಗಾಗಿ ಎಂದವರು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ.

girish

ಈ ಚಿತ್ರೋತ್ಸವದಲ್ಲಿ ಪುನರಾವಲೋಕನ(Retrospective) ವಿಭಾಗದಲ್ಲಿ ಅವರ ಚಿತ್ರಗಳು ಪ್ರದರ್ಶಿತವಾಗುತ್ತಿರುವುದಕ್ಕೆ ಅತೀವ ಸಂತಸವನ್ನು ವ್ಯಕ್ತಪಡಿಸಿದ ಗಿರೀಶ್, ಇದು ಒಬ್ಬ ಚಿತ್ರ ನಿರ್ದೇಶಕನಿಗೆ ಸಲ್ಲುವ ಗೌರವ. ಕೋಲ್ಕತ್ತಾ, ಗೋವಾ ಚಿತ್ರೋತ್ಸವಗಳಲ್ಲಿ ಈ ವಿಭಾಗದಡಿ ನನ್ನ ಚಿತ್ರ ಪ್ರದರ್ಶಿತವಾಗಬೇಕಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ. ಇಲ್ಲಿ ಆ ಗೌರವ ಸಿಕ್ಕಿದ್ದು ಖುಷಿಯಾಯಿತು ಎಂದರು.

ಈ ಉತ್ಸವದಲ್ಲಿ ಸಾಕಷ್ಟು ಬದಲಾವಣೆಯನ್ನು ಗಮನಿಸುತ್ತಿದ್ದೇನೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಚಿತ್ರ ಶುರುವಾದ ೫ ನಿಮಿಷಕ್ಕೇ ಕೆಲವರು ಎದ್ದು ಹೋಗ ತೊಡಗುತ್ತಾರೆ. ಸಾಮಾನ್ಯ ಸಿದ್ಧತೆಯನ್ನೂ ನಡೆಸಿಕೊಳ್ಳದೇ ಬಂದರೆ ಹೇಗೆ ಎಂಬ ಪ್ರಶ್ನೆ ನನ್ನದಾಗಿತ್ತು. ಆದರಿಲ್ಲಿ, ಅಂಥ ಪ್ರವೃತ್ತಿ ಇಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ಸಂವಾದ ಬೇಕು
ಪ್ರತಿ ಸಿನಿಮಾಗಳ ನಂತರ ನಿರ್ದೇಶಕರೊಂದಿಗೆ ಸಂವಾದ ಸಾಧ್ಯವಾಗಬೇಕು. ಇದನ್ನೊಂದು ಚಿತ್ರೋತ್ಸವಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಸೂಕ್ತ. ಚಿತ್ರೋತ್ಸವಗಳಲ್ಲಿ ಭಾಗವಹಿಸುವ ನಿರ್ದೇಶಕರ ಸಿನಿಮಾಗಳನ್ನು ಬೇರೆ ಪಟ್ಟಿ ಮಾಡಬೇಕು. ಅದರಂತೆ, ಪ್ರೇಕ್ಷಕರೊಂದಿಗೆ ಪ್ರದರ್ಶನ ಮುಗಿದ ನಂತರ ಕ್ಲುಪ್ತ ಸಂವಾದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದವರು ಗಿರೀಶ್.

ಚಿತ್ರೋತ್ಸವದಿಂದ ಚಿತ್ರೋದ್ಯಮಕ್ಕೇನು ಲಾಭ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚಿತ್ರೋತ್ಸವವನ್ನು ಬರೀ ಸಿನಿಮಾ ನೋಡುವುದಕ್ಕೆ ಎಂದುಕೊಳ್ಳಬಾರದು. ಒಂದು ಚಿತ್ರೋತ್ಸವ ಹತ್ತು ಹಲವು ದೇಶದ ಜನರನ್ನು ಒಂದೆಡೆ ಸೇರಿಸುತ್ತದೆ. ಇಲ್ಲಿಗೆ ಬಂದವರು ಬರೀ ಸಿನಿಮಾ ನೋಡಿಕೊಂಡು ಹೋಗುವುದಿಲ್ಲ. ಬದಲಿಗೆ ಇಲ್ಲಿನ ಪ್ರವಾಸಿ ತಾಣಗಳನ್ನು ನೋಡುತ್ತಾರೆ. ಇಲ್ಲಿ ಪ್ರವಾಸೋದ್ಯಮವೂ ಬೆಳೆಯುತ್ತದೆ. ಕೇರಳದಲ್ಲಿ ಆಗುತ್ತಿರುವುದು ಇದೇ. ಆದರೆ, ಇಂಥದೊಂದು ಪ್ರಕ್ರಿಯೆ ಆಗಲು ಕೆಲವು ವರ್ಷಗಳು ಬೇಕು. ಬೆಂಗಳೂರಿನ ಚಿತ್ರೋತ್ಸವ ಇನ್ನಷ್ಟು ಪ್ರಸಿದ್ಧಿಯಾಗಬೇಕು. ಅದು ಕೆಲವು ವರ್ಷಗಳ ನಿರಂತರತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವಿಕೆಯಿಂದ ವರ್ಚಸ್ಸು ಬೆಳೆಯುತ್ತದೆ. ಅದು ಉಳಿದ ಎಲ್ಲ ಕೆಲಸವನ್ನೂ ಮಾಡಬಲ್ಲದು ಎಂದವರು ಅವರು.

ಯುವಜನರು ಪರವಾಗಿಲ್ಲ
ಇಂಟರ್ ನೆಟ್ ದೆಸೆಯಿಂದ ಸಿನಿಮಾ ಸಂಸ್ಕೃತಿಹ ಸಂವಹನಕ್ಕೆ ಸಾಕಷ್ಟು ಅನುಕೂಲವಾಗಿದೆ. ಸಾಕಷ್ಟು ಮಂದಿ ಯುವ ಸಿನಿಮಾಸಕ್ತರು, ಸಿನಿಮಾಕ್ಕೆ ಬರುವ ಮೊದಲು ಪೂರ್ವ ಸಿದ್ಧತೆ ನಡೆಸಿಕೊಂಡೇ ಬರುತ್ತಾರೆ. ಒಂದು ಸಿನಿಮಾಕ್ಕಿಂತ ಆ ನಿರ್ದೇಶಕನ ಬಗ್ಗೆ, ಅವನ ಸಿನಿಮಾಗಳ ಕುರಿತೂ ತಿಳಿದು ಬಂದಿರುತ್ತಾರೆ. ಅಂಥದೊಂದು ಪೂರ್ವ ಸಿದ್ಧತೆ ಸಿನಿಮಾಸಕ್ತನಿಗೆ ಅವಶ್ಯ ಎಂದರು.