ಬೆಂಗಳೂರು ಚಿತ್ರೋತ್ಸವದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆ. ವಿಶ್ವನಾಥ್ ಹಂಚಿಕೊಂಡ ಅಭಿಪ್ರಾಯ.

ನನ್ನೊಳಗಿನ ಅಂತರ್ ದೃಷ್ಟಿ ನನ್ನ ಸಿನಿಮಾಗಳನ್ನು ರೂಪಿಸಿದೆ ಎಂದವರು ತೆಲುಗಿನ ಹಿರಿಯ ನಿರ್ದೇಶಕ ಕೆ. ವಿಶ್ವನಾಥ್.

“ನಾನು ಚಿತ್ರಗಳನ್ನು ಮಾಡುವುದು ನನ್ನೊಳಗೆ ಮೂಡುವ ಅಂತರ್ ದೃಷ್ಟಿ(Intution)ನಿಂದಲೇ ಹೊರತು ಮತ್ತ್ಯಾವುದರಿಂದಲೂ ಅಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್ ಹೇಳಿದರು.

ಸಿರಿಸಿರಿಮುವ್ವ, ಶಂಕರಾಭರಣಂ, ಸಾಗರ ಸಂಗಮಂನಂಥ ಚಿತ್ರಗಳನ್ನು ಇವರು ನಿರ್ದೇಶಿಸಿದ್ದು, ಉತ್ಸವದಲ್ಲಿ ‘ಸಾಗರ ಸಂಗಮಂ’ ಚಿತ್ರವನ್ನು ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗಿತ್ತು.

ವಿಶ್ಲೇಷಿಸುವಷ್ಟು ಸಾಮರ್ಥ್ಯವಿಲ್ಲ
“ನಾನು ಸಿನಿಮಾಗಳನ್ನು ವಿಶ್ಲೇಷಿಸಲಾರೆ. ಅದು ನನ್ನಿಂದ ಸಾಧ್ಯವೂ ಇಲ್ಲ. ನಾನು ಸಿನಿಮಾ ಶಾಲೆಯಿಂದ ಬಂದವನಲ್ನಾಲ. ನನ್ನ ಮನಸ್ಸಿನಲ್ಲಿ ಹೊಳೆದಂತೆ ಕಥೆ ಬರೆವೆ. ಇದುವರೆಗೆ ನಡೆಸಿದ್ದೆಲ್ಲವೂ ಬಾಲಿಶ ಪ್ರಯತ್ನಗಳೇ” ಎಂದರು.

‘ನನ್ನ ಸಿನಿಮಾಗಳನ್ನು ಸಂಗೀತ ಚಿತ್ರಗಳ ಗುಂಪಿಗೆ (Music)ಸೇರಿಸಬಹುದೇನೋ ತಿಳಿದಿಲ್ಲ. ಸಿರಿಸಿರಿಮುವ್ವದ ನಂತರ ನಾನು ಹಾದಿ ಬದಲಿಸಿದೆ. ಕೌಟುಂಬಿಕ ಚಿತ್ರಗಳನ್ನು ಮಾಡುತ್ತಿದ್ದ ನನಗೆ ಈ ದಾರಿ ಹೊಳೆದದ್ದೇ ಹೊರತು ಉದ್ದೇಶಪೂರ್ವಕ ಬದಲಿಸಿದ್ದಲ್ಲ. ಜತೆಗೆ ನನಗೆ ಸಂಗೀತ ಇಷ್ಟ. ಆದರೆ, ನಾನು ಸಂಗೀತಗಾರನಲ್ಲ’ ಎಂದು ಸ್ಪಷ್ಟಪಡಿಸಲು ಮರೆಯಲಿಲ್ಲ.

ಪ್ರಶಸ್ತಿಗಲ್ಲ ಸಿನಿಮಾ

ಆಸ್ಕರ್ ಪ್ರಶಸ್ತಿಗೆ ಸ್ವಾತಿಮುತ್ಯಂ ಆಯ್ಕೆಯಾದ ಬಗ್ಗೆ ಹೇಳುತ್ತಾ, “ನಾನು ಅದೇನನ್ನೂ ಬಯಸಿರಲಿಲ್ಲ. ನಾಮನಿರ್ದೇಶನಗೊಂಡಾಗಲೂ ಉಬ್ಬಿರಲಿಲ್ಲ, ನಂತರ ಸ್ಪರ್ಧೆಯಲ್ಲಿ ಸೋತಾಗಲೂ ಕುಗ್ಗಲಿಲ್ಲ. ಈ ಪ್ರಶಸ್ತಿಗಳ ಹಿಂದೆಲ್ಲಾ ಅವುಗಳದ್ದೇ ವಿವಿಧ ಮಾನದಂಡಗಳಿರುತ್ತವೆ. ನಾನು ಪ್ರಶಸ್ತಿಗೆಂದು ಸಿನಿಮಾ ಮಾಡುವನಲ್ಲ. ನಿರ್ಮಾಪಕನಿಗೆ ಕಥೆ ಹೇಳುವೆ. ನಂತರ ಅವನು ಒಪ್ಪಿಗೆ ನೀಡಿದರೆ ಚಿತ್ರ ಪ್ರಾರಂಭಿಸುವೆ. ದುಡ್ಡು ಹಾಕಿದ ನಿರ್ಮಾಪಕನ ಹಿತವನ್ನೂ ಕಾಣಬೇಕಾಗುತ್ತದೆ. ಹಾಗೆಂದು ಸಿನಿಮಾಕ್ಕೆ ನಮ್ಮದಲ್ಲದ ಅಂಶಗಳನ್ನು ಸೇರಿಸುವುದೂ ನನಗೆ ಇಷ್ಟವಿಲ್ಲದ್ದು’ ಎಂದರು ಅವರು.

ಚಿತ್ರವು ದುಡ್ಡೂ ಮಾಡಬೇಕು, ಜನರಿಗೆ ತಲುಪಲೂ ಬೇಕು. ವೆಚ್ಚ ಮಾಡಿದ ಹಣವನ್ನೂ ವಾಪಸು ತಾರದ “ಕ್ಲಾಸಿಕ್” ಚಿತ್ರವನ್ನು ಮಾಡುವುದು ನನಗೆ ಗೊತ್ತಿಲ್ಲ’ ಎಂಬುದು ಅವರ ಸ್ಪಷ್ಟನೆ.

ಸಿನಿಮಾಗಳ ರಿಮೇಕ್ ಸರಿಯಲ್ಲ ಎಂದು ಖಚಿತ ಧ್ವನಿಯಿಂದ ಹೇಳಿದ ಅವರು, ಪ್ರತಿ ಪ್ರದೇಶಕ್ಕೂ ಅದರದ್ದೇ ಆದ ಸಂಸ್ಕೃತಿ, ಸೊಗಡಿರುತ್ತದೆ. ಅದು ರಿಮೇಕ್ ನಲ್ಲಿ ಮೂಡಿಸಲಾಗದು. ಉದಾಹರಣೆಗೆ ಮಾಯಾಬಜಾರ್ ನಲ್ಲಿ ಅಮಿತಾಬ್ ಬಚ್ಚನ್ ನನ್ನು ಘಟೋತ್ಕಚ ಮಾಡಿ ತೋರಿಸಲು ಸಾಧ್ಯವೇ? ಒಂದುವೇಳೆ ಅಂಥ ಪ್ರಯತ್ನ ನಡೆದರೂ ಅದು ಮೂಲಕ್ಕೆ ತೀರಾ ಹತ್ತಿರವಾಗಿದ್ದರೆ ಮಾತ್ರ ಚೆಂದ. ಹಾಗಿರಲು ಕಷ್ಟ” ಎಂಬುದು ಅವರ ಅಭಿಪ್ರಾಯ.

ಕನ್ನಡದಲ್ಲಿ ನನ್ನ ಚಿತ್ರ ಸ್ವಾತಿಮುತ್ಯಂ ರಿಮೇಕ್ ಅಗಿದೆ. ಆದರೆ, ಅದನ್ನು ನೋಡಲು ಸಾಧ್ಯವಾಗಲಿಲ್ಲ. ಚಿತ್ರ ನಿರ್ಮಿಸಿದವರು ಅದನ್ನು ತೋರಿಸುವ ಸೌಜನ್ಯವನ್ನೂ ತೋರಲಿಲ್ಲ. ಅದರಲ್ಲಿ ನಟಿಸಿದ ನಟಿ ಒಮ್ಮೆ ಚಿತ್ರ ನೋಡಲು ಆಹ್ವಾನಿಸಿದರು. ಬರಲು ಸಾಧ್ಯವಾಗಲಿಲ್ಲ  ಎಂದು ವಿಷಾದ ವ್ಯಕ್ತಪಡಿಸಿದರು.

ಮಾಯಾಬಜಾರ್, ಯೋಗಿ ವೇಮನ ಮತ್ತಿತರ ಚಿತ್ರಗಳನ್ನು ಎಷ್ಟು ಬಾರಿ ನೋಡಿದರೂ ಖುಷಿ ನೀಡುತ್ತದೆ, ಹೊಸದೆನಿಸುತ್ತದೆ. ಆ ಶ್ರೇಷ್ಟತೆಯೇ ಕ್ಲಾಸಿಕ್ ಫಿಲ್ಮ್ ಗಳ ಗುಣ. ಬೆಂಗಳೂರು ನನಗೆ ಖುಷಿ ಕೊಡುವ ಊರು. ಹಾಗಾಗಿ ಚಿತ್ರೋತ್ಸವಕ್ಕೂ ಬಂದಂತಾಯಿತು, ಬೆಂಗಳೂರಿಗೂ ಬಂದಂತಾಯಿತು ಎಂದು ಬಂದೆ. ಇಲ್ಲಿ ನನ್ನ ಸಿನಿಮಾ ತೋರಿಸಿ, ಪ್ರೇಕ್ಷಕ ಸಮುದಾಯದೊಂದಿಗೆ ಮುಖಾಮುಖಿ ಮಾಡಿಸಿದ್ದಕ್ಕೆ ಧನ್ಯವಾದ ಎಂದು ಕೃತಜ್ಞತೆ ಅರ್ಪಿಸಿದರು.