5 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಭಾರತೀಯ ಸಿನಿಮಾ ಕುರಿತು ಅರವಿಂದ ನಾವಡರು ಬರೆದ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ಓದಿ, ಅಭಿಪ್ರಾಯಿಸಿ.

ಭಾರತೀಯ ಸಿನಿಮಾಕ್ಕೆ ಈಗ ನೂರು ವರ್ಷದ ಸಂಭ್ರಮ. ಜಾಗತೀಕರಣ, ಉದಾರೀಕರಣದ ಹೊತ್ತಿನಲ್ಲಿ ಎಲ್ಲ ಬಣ್ಣವನ್ನೂ ಮಸಿ ನುಂಗಿತೆನ್ನುವಂತೆ ಚಿಕ್ಕ ಚಿಕ್ಕ ಭಾಷೆ, ಸಂಸ್ಕೃತಿ, ಸಮುದಾಯವನ್ನು ಆರ್ಥಿಕ ಶಕ್ತಿ ಇರುವ ಭಾಷೆ, ಸಮುದಾಯಗಳು ಆವರಿಸಿಕೊಳ್ಳುತ್ತಿರುವ ಹೊತ್ತಿದು. ಸಣ್ಣ ಸಣ್ಣ ಭಾಷೆ, ಸಮುದಾಯಗಳ ಉದ್ಧಾರದ ನೆಪದಲ್ಲಿ ಅವುಗಳನ್ನು ತಮ್ಮೊಳಗೆ ಸೇರಿಸಿಕೊಳ್ಳುತ್ತಲೇ ಎಲ್ಲವನ್ನೂ ಬದಲಿಸಿ ಏಕರೂಪತೆ ಕೊಡುವ ಹುನ್ನಾರವೂ ಸದ್ದಿಲ್ಲದೇ ನಡೆಯುತ್ತಿದೆ.

ಇದೆಲ್ಲವೂ ಒಂದು ಬಗೆಯ ಮತ ರಾಜಕಾರಣದಂತೆಯೇ, ಪಕ್ಷಗಳು ತಮ್ಮ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಬಗೆಯಂತೆಯೇ. ಇವೆರಡರ ಮಧ್ಯೆ ಬಹಳ ದೊಡ್ಡ ವ್ಯತ್ಯಾಸವೇನೂ ಇಲ್ಲ.
1913 ಮೇ 3 ರಂದು ದಾದಾಸಾಹೇಬ್ ಫಾಲ್ಕೆ ತಮ್ಮ ಮೊದಲ ಚಿತ್ರ ರಾಜಾ ಹರಿಶ್ಚಂದ್ರವನ್ನು ಪ್ರದರ್ಶಿಸಿದರು. ಕ್ರಮೇಣ ಸಿನಿಮಾ ಉದ್ಯಮವಾಗಿ ಬೆಳೆಯತೊಡಗಿತು. ದಕ್ಷಿಣ ಭಾರತದಲ್ಲೂ ಸ್ಟುಡಿಯೊಗಳು ತಲೆ ಎತ್ತಿದವು. ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳಲ್ಲೂ ಸಿನಿಮಾಗಳು ಬರತೊಡಗಿದವು. ಹೀಗೆ ಭಾರತೀಯ ಸಿನಿಮಾದ ದಿಗಂತ ವಿಸ್ತರಣೆಯಾಗತೊಡಗಿತು.

dada

ಆದರಿಂದು ನೂರನೇ ವರ್ಷದ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಎಲ್ಲಿದ್ದೇವೆ ? ಎಂದು ಲೆಕ್ಕ ಹಾಕಿದರೆ ಆತಂಕ ಮತ್ತು ಭಯ ಆವರಿಸುತ್ತದೆ. ಸಿನಿಮಾವನ್ನು ಉದ್ಯಮದ ದೃಷ್ಟಿಯಿಂದಲೇ ನೋಡುತ್ತಾ, ನೋಡುತ್ತಾ ಎಲ್ಲಿಗೆ ಬಂದು ಮುಟ್ಟಿದ್ದೇವೆ ಎಂದರೆ, ಕೆಳಗೆ ಪ್ರಪಾತವಿದೆ. ನಾವು ತುದಿಯಲ್ಲಿದ್ದೇವೆ, ಆಯ ತಪ್ಪಿದರೆ ಆ ಪ್ರಪಾತಕ್ಕೆ ಬಿದ್ದು ಬಿಡುತ್ತೇವೆ.
ಸಿನಿಮಾ ಬರಿದೇ ಉದ್ಯಮವಲ್ಲ, ಅದು ಆಯಾ ದೇಶದ, ಸಮುದಾಯದ ಸಂಸ್ಕೃತಿಯ ವಾಹಕವೂ ಹೌದು. ಒಂದು ಭಾಷೆ, ದೇಶ, ಸಂಸ್ಕೃತಿಯೊಳಗೆ ಒಂದು ಆರೋಗ್ಯಕರ ಸಂವಾದವನ್ನು ಸಾಧ್ಯವಾಗಿಸಲು ಪ್ರಯತ್ನಿಸುವ ದಿಸೆಯಲ್ಲಿ ಸಿನಿಮಾದ ಪಾತ್ರವೂ ಬಹಳಷ್ಟಿದೆ. ದೃಶ್ಯಮಾಧ್ಯಮವಾದದ್ದರಿಂದ ಅದರ ಪ್ರಭಾವವೂ ಹೆಚ್ಚು. ಸಾಹಿತ್ಯದಲ್ಲಿ ಒಂದಿಷ್ಟು ಕಲ್ಪನೆ ಸೇರಬಹುದು, ಸಿನಿಮಾದಲ್ಲಿ ವಾಸ್ತವದ ನೆರಳಿಗೆ ಹತ್ತಿರವಿದ್ದಷ್ಟೂ ಚೆನ್ನಾಗಿರುತ್ತದೆ, ಅಧಿಕೃತತೆ ಹೊಂದಬಲ್ಲದು. ಇಷ್ಟೆಲ್ಲಾ ಸಕಾರಾತ್ಮಕ ಸಂಗತಿಗಳಿರುವಾಗ ಸಣ್ಣ ಭಾಷೆ, ಸಂಸ್ಕೃತಿ, ರಾಷ್ಟ್ರಗಳು ತಮ್ಮದೇ ಆದ ಅಭಿವ್ಯಕ್ತಿ ವೇದಿಕೆಯಾಗಿ ಸಿನಿಮಾವನ್ನು ಇಟ್ಟುಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಚರ್ಚೆಗೊಳಗಾಗಬೇಕಾದ ಪ್ರಶ್ನೆ. ಅತ್ಯಂತ ತುರ್ತಾಗಿ ಆಗಬೇಕಾದದ್ದು.
ಭಾರತೀಯ ಸಿನಿಮಾದ ಪ್ರಶ್ನೆಯನ್ನೇ ತೆಗೆದುಕೊಳ್ಳೋಣ. ಭಾರತೀಯ ಸಿನಿಮಾವೆಂದರೆ ಈಗ ಹಿಂದಿ ಎಂಬಂತಾಗಿದೆ. ಇಫಿ (ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ)ಯಂಥ ಸಂಸ್ಥೆಗಳು ಸಂಘಟಿಸುವ ಉತ್ಸವಗಳೂ ಹೊರತಾಗಿಲ್ಲ. ಸರಕಾರ, ಸರಕಾರಿ ಸಂಸ್ಥೆಗಳು, ಸಿನಿಮಾ ಪ್ರೋತ್ಸಾಹಕ್ಕೆಂದು ಇರುವ ಸಂಸ್ಥೆಗಳೂ ನೋಡುವುದು ಹಿಂದಿಯ ಕನ್ನಡಕದಿಂದಲೇ. ಇದು ಎಂಥ ಸಮಸ್ಯೆಯನ್ನು ಸೃಷ್ಟಿಸುತ್ತಿದೆಯೆಂದರೆ, ಹಾಲಿವುಡ್ ನಂಥ ರಾಕ್ಷಸ ಸುತ್ತಲಿನ ಲ್ಯಾಟಿಕನ್ ಅಮೆರಿಕ ವ್ಯಾಪ್ತಿಯ ಸಣ್ಣ ಸಣ್ಣ ಭಾಷೆ, ಪಂಗಡಕ್ಕೆ ಮಾಡಿದ್ದನ್ನೇ ನಮ್ಮ ಬಾಲಿವುಡ್ ಮಾಡುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಲಿವುಡ್ ಭಾರತೀಯ ಸಿನಿಮಾದ ಪ್ರತಿನಿಧಿ. ಹಾಗಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಹೊತ್ತಿನಲ್ಲಿ ಹಿಂದಿ ಸಿನಿಮಾಗಳಷ್ಟೇ ಕಣ್ಣಿಗೆ ಕಾಣುತ್ತವೆ. ಆದ್ದರಿಂದಲೇ, ಪ್ರಭಾವಿತ ಎಂಬ ಟಿಪ್ಪಣಿಯಡಿಯಲ್ಲಿ ಒಂದಿಷ್ಟು ಸಿನಿಮಾಗಳ ದೃಶ್ಯಗಳ ಸಂಯೋಜನೆಯನ್ನು ಅತ್ಯಂತ ಚಾಣಾಕ್ಷತನದಿಂದ ಮಾಡಿ ಚಿತ್ರ ರೂಪಿಸಿದರೆ, ಅದು ಆ ಉತ್ಸವಗಳಿಗೆ ಆಯ್ಕೆಯಾಗುತ್ತದೆ. ಇತ್ತೀಚಿನ ಬರ್ಫಿ ಅದೇ ಕಥೆಯಲ್ಲವೇ.
ಕನ್ನಡ, ತಮಿಳು, ಮರಾಠಿ, ಅಸ್ಸಾಮಿ, ಬಂಗಾಳಿಯಂಥ ಭಾಷೆಗಳಲ್ಲದೇ, ಸ್ಥಳೀಯ ಸಣ್ಣಪುಟ್ಟ ಭಾಷೆಗಳಲ್ಲೂ ಸಿನಿಮಾಗಳು ಆಗುತ್ತಿವೆ. ಅವುಗಳ್ಯಾವುದೂ ಎಲ್ಲಿಯೂ ಭಾರತೀಯ ಸಿನಿಮಾವನ್ನು ಪ್ರತಿನಿಧಿಸುವುದಿಲ್ಲ. ಭಾರತ ಹಲವು ಸಂಸ್ಕೃತಿಗಳ ದೇಶ, ವಿವಿಧ ಸಮುದಾಯಗಳ ಬೀಡು. ಇಂಥ ದೇಶದಲ್ಲಿ ಹುಟ್ಟುವ ಸಿನಿಮಾ, ಸಾಹಿತ್ಯವೆಲ್ಲವೂ ವಿಭಿನ್ನವೇ. ಪ್ರತಿ ಸಮುದಾಯದ ಅನುಭವ, ಅಭಿವ್ಯಕ್ತಿಯಾಗಿರುತ್ತದೆ. ಇದೆಲ್ಲವನ್ನೂ ಅರ್ಥ ಮಾಡಿಕೊಂಡು ಕ್ರಿಯಾಶೀಲವಾಗುವ ಮನಃಸ್ಥಿತಿ ನಮ್ಮನ್ನು ಪ್ರೋತ್ಸಾಹಿಸುವವರಲ್ಲಿರಬೇಕು. ಅದರ ಕೊರತೆ ಸಾಕಷ್ಟಿದೆ. ಅಮೆರಿಕದ ರೀತಿಯಲ್ಲೇ ಏಕರೂಪತೆಯ ನೆಲೆಯಲ್ಲಿ ಸಾಗುವುದೇ ನಮಗೆ ಇಷ್ಟವೆನಿಸುತ್ತದೆ. ಯಾಕೆಂದರೆ, ಅಲ್ಲಿ ಲಾಭವಿದೆ.
ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾದ ಚಿತ್ರ ಬ್ಯಾರಿಯನ್ನೇ ತೆಗೆದುಕೊಳ್ಳಿ. ಆ ಚಿತ್ರ ಬರುವವರೆಗೆ ಭಾರತೀಯ ಚೌಕಟ್ಟಿನೊಳಗೆ ಇಂಥದೊಂದು ಸಮುದಾಯ, ಇದಕ್ಕೊಂದು ಭಾಷೆ, ಸಂಸ್ಕೃತಿ ಇದೆಯೆಂದೇ ನಮ್ಮ ಹಿಂದಿ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಏಕೆ ? ಕರ್ನಾಟಕದೊಳಗೇ ಕೊಂಕಣಿ, ತುಳು, ಕೊಡವ,ಬ್ಯಾರಿಯಂಥ ಭಾಷೆಗಳಿವೆ. ಅಸ್ಸಾಮಿನಲ್ಲೇ ಇರುವ ವಿವಿಧ ಬುಡಕಟ್ಟುಗಳಿಗೆ ಅವರದ್ದೇ ಭಾಷೆ, ಸಂಪ್ರದಾಯಗಳಿವೆ. ಸಪ್ತ ಸೋದರಿಯರ ನಾಡಿನ ಎಲ್ಲ ರಾಜ್ಯಗಳಲ್ಲೂ ಹೆಚ್ಚು ಕಡಿಮೆ ಭೌಗೋಳಿಕವಾಗಿ, ಭೌತಿಕವಾಗಿ ಹೊಂದಿಕೆ ಇದೆ ಎಂದು ನಮಗೆ ನಕ್ಷೆಯಿಂದ ಅನಿಸಿದರೂ, ಅಲ್ಲಿಯೂ ವೈವಿಧ್ಯ. ಅಸ್ಸಾಮಿ ಚಿತ್ರಗಳು ಮಣಿಪುರದಲ್ಲಿ ಪ್ರದರ್ಶನಗೊಳ್ಳುವುದು ಕಷ್ಟ. ಯಾಕೆಂದರೆ, ಭಾಷೆ ಭಿನ್ನ. ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಅಸ್ಸಾಮಿ ಚಿತ್ರ ನಿರ್ದೇಶಕ ಜಹ್ನು ಬರುವಾ ಹೇಳುತ್ತಿದ್ದ ಮಾತು, ನಮ್ಮಲ್ಲಿಗೂ ಬಾಲಿವುಡ್ ಬರಲು ಪ್ರಯತ್ನಿಸುತ್ತಿದೆ. ಸುತ್ತಮುತ್ತಲಿನಲೆಲ್ಲಾ ಅದರದ್ದೇ ಹಾವಳಿಯಾಗುವ ಭಯವಿದೆ. ಹಾಗೆಂದು ನಾವು ನಮ್ಮ ಪ್ರಯತ್ನವನ್ನು ನಿಲ್ಲಿಸಿಲ್ಲ.
ಹಾಲಿವುಡ್ ನಂಥ ದೈತ್ಯನ ಮುಂದೆ ಇನ್ನೂ ಭಾರತೀಯ ಸಿನಿಮಾ ಬೆನ್ನು ಬಗ್ಗಿಸಿ ನಿಂತಿಲ್ಲವೆಂಬ ಸಮಾಧಾನದ ಮಧ್ಯೆಯೂ, ಇಲ್ಲಿ ನಮ್ಮೊಳಗೇ ಮತ್ತೊಬ್ಬ ಹಾಲಿವುಡ್ ನಂಥ ದೈತ್ಯನನ್ನು ಸೃಷ್ಟಿಯಾಗುತ್ತಿರುವ ಅಪಾಯದಿಂದ ಪಾರಾಗುವ ಬಗೆಯೂ ಮುಖ್ಯವೇ. ಪ್ರತಿ ಬಾರಿಯೂ ವ್ಯವಸ್ಥೆ ಮತ್ತು ಅದರೊಳಗಿನ ಪಟ್ಟಭದ್ರಹಿತಾಸಕ್ತಿಗಳು ಇಂಥ ರಾಕ್ಷಸನನ್ನು ಸೃಷ್ಟಿಸುತ್ತಲೇ ಇರುತ್ತವೆ. ಅವನನ್ನು ನಿಗ್ರಹಿಸುವ ಶಕ್ತಿ ನಾವೇ ತಂದುಕೊಳ್ಳಬೇಕು.
ಕನ್ನಡದ ಸಂದರ್ಭದೊಂದಿಗೆ ಮುಗಿಸಬಹುದಾದರೆ, ಕನ್ನಡದಲ್ಲಿ ಒಳ್ಳೆ ಚಿತ್ರಗಳು ಬರುತ್ತಿವೆ, ಬರುತ್ತಿಲ್ಲ ಎಂದೇ ಹೇಳಬೇಕು. ತಾಂತ್ರಿಕವಾಗಿ ಎನ್ನುವುದರ ಮೊದಲು ಕಥಾ ಆಯ್ಕೆ, ಚಿತ್ರಕಥಾ ಸಂರಚನೆಯಂಥ ವಿಷಯಗಳಲ್ಲೇ ಸಾಕಷ್ಟು ಅಧ್ಯಯನ ನಡೆಸಬೇಕಾಗಿದೆ. ಹೊಸ ಅಲೆಯ ಚಿತ್ರಗಳ ದಿಕ್ಕೂ ಬದಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಉತ್ಸವಗಳಿಗೆ ಹೊಂದಿಕೆಯಾಗುವಂಥ ರೀತಿಯಲ್ಲಿ ನಮ್ಮ ಚಿತ್ರಗಳನ್ನು ಹೊಂದಿಸಿಕೊಳ್ಳಲು ಶುರು ಮಾಡಿದ್ದೇವೆಯೋ ಎಂದೆನಿಸುತ್ತಿದೆ. ಆ ಪ್ರವೃತ್ತಿ ನಿಜವಾದರೆ, ದೇಶದ ಬಡತನವನ್ನು ಪ್ರದರ್ಶನಕ್ಕಿಟ್ಟು, ದುಡ್ಡು ಮಾಡುವ ಬಗೆಗಿಂತ ಭಿನ್ನವೆನಿಸದು.
ಸಿನಿಮಾ ಉದ್ಯಮದ ಜತೆಗೇ ಒಂದು ಸಮುದಾಯದ ಪ್ರತಿನಿಧಿ, ಆಯಾ ನಿರ್ದಿಷ್ಟ ಸಂಸ್ಕೃತಿಯ ವಾಹಕವೆಂಬ ಸತ್ಯವನ್ನು ಆಳುವವರು, ಸಿನಿಮಾ ಮಾಡುವವರು ಅರಿಯಬೇಕು. ಆಗ ಲಾಭ ಎರಡೂ ಕಡೆಯು ಸಾಧ್ಯ. ಇಲ್ಲದಿದ್ದರೆ ಬೌದ್ಧಿಕ ಖಜಾನೆ ಬಡವಾಗುತ್ತಲೇ ಇರುತ್ತದೆ, ಭೌತಿಕ ಖಜಾನೆ ಬೆಳೆಯುತ್ತಲೇ ಇರುತ್ತದೆ. ಆ ಹೊತ್ತಿಗೆ ನಾವು ನಾವಾಗಿರುವುದಿಲ್ಲ, ಹತ್ತರಲ್ಲಿ ಹನ್ನೊಂದಾಗಿರುತ್ತೇವೆ.