ಡಿಸೆಂಬರ್ 20 ರಿಂದ 27 ರವರೆಗೆ 5 ನೇ ಬೆಂಗಳೂರು ಚಿತ್ರೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ವಿವಿಧ ವಿಭಾಗಗಳ ಬಗ್ಗೆ, ಅಲ್ಲಿನ ಕೆಲವು ಚಿತ್ರಗಳ ಬಗ್ಗೆ ನಿತ್ಯವೂ ಸಿನಿಮಾಸಕ್ತರಿಗೆ ಅನುಕೂಲವಾಗಲೆಂದು ಮಾಹಿತಿ ಸರಣಿಯನ್ನು ಸಾಂಗತ್ಯ  ಇಂದಿನಿಂದ  ಆರಂಭಿಸಲಿದೆ. ಇದಕ್ಕೆ ಸಿನಿಮಾಸಕ್ತರೂ ಕೊಡುಗೆ ನೀಡಬಹುದು. ಇಂದಿನಿಂದ  ಆ ಸರಣಿ ಆರಂಭ.

ಜಪಾನಿನ ಅಕಿರಾ ಕುರಸೋವಾ ಜಗತ್ತು ಕಂಡ ಮಹತ್ವದ ದಿಗ್ದರ್ಶಕರಲ್ಲಿ ಮೇರು ಪಂಕ್ತಿಯಲ್ಲಿರುವವರು. ತನ್ನ ಪೌರ್ವಾತ್ಯ ಸೌಂದರ್ಯ ಪ್ರಜ್ಞೆಯ ನೆಲೆಯಲ್ಲೇ ಬದುಕಿನ ಸೊಬಗನ್ನು ನೋಡಲು ಪ್ರಯತ್ನಿಸಿದವನು. ಅವನ  ಆ ಶೋಧಪ್ರಜ್ಞೆ ಎಲ್ಲ ಚಿತ್ರಗಳಲ್ಲೂ ನಿಚ್ಚಳವಾಗಿ ಕಂಡು ಬರುತ್ತದೆ. ಇಂಥ ಮಹನೀಯನ ಸಿನಿಮಾಗಳನ್ನು ಮತ್ತೊಮ್ಮೆ ನೋಡುವ ಮೂಲಕ, ಅದರೊಳಗನ್ನು ಅನ್ವೇಷಿಸಲು ಅವಕಾಶ ಮಾಡಿಕೊಟ್ಟಿದೆ ಬೆಂಗಳೂರು ಚಿತ್ರೋತ್ಸವ. “ಮಾಸ್ಟರ್ಸ್ ಆಫ್ ಸಿನಿಮಾ” ವಿಭಾಗದಡಿ ಅಕಿರಾ ಕುರಸೋವಾನ Ikiru, I Live in Fear, The Hidden Fortress, Yojimbo, Sanjuro, Madadayo, The Idiot, Scandal ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಈ ಹೊತ್ತಿನಲ್ಲಿ ಬೈಂದೂರು ಸರಕಾರಿ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರದೀಪ್ ಶೆಟ್ಟಿ ಬರೆದಿರುವ ಲೇಖನವಿದು.

ರಾಮನಿಗೆ ರಾಮ, ರಾವಣನಿಗೆ ರಾವಣ. ಸಮುದ್ರಕ್ಕೆ ಸಮುದ್ರ ಅಂತೆಯೇ ಕುರಸೋವಾನಿಗೆ ಕುರಸೋವಾನೇ ಎಣೆ.

ಸಿನಿಮಾ ರಂಗದ ಎಂಟೆದೆಯ ಭಂಟ ಅಕಿರಾ ಕುರಸೋವಾ ಜಾಗತಿಕವಾಗಿ ಹೀಗೆ ವಿಶಿಷ್ಟವಾಗುವುದು ತನ್ನ ಅಂತರ್ ನಿರ್ಮಿತ ಅನನ್ಯ ಚಿತ್ರ ನಿರ್ಮಾಣ, ಸಾತ್ವಿಕತೆ, ಚಿತ್ರಸಂಹಿತೆಗಳಲ್ಲಿ ಆನೆಯ ಹಾಗೆ ಹೆಜ್ಜೆ ಇಟ್ಟು, ಹೊಸ ಹಾದಿಯನ್ನು ನಿರ್ಮಿಸಿಕೊಂಡವರು.

kurosawa-akira

ನಾನು ನಾನಾಗಿಯೇ ಬೆಳೆಯತ್ತೇನೆ ಎನ್ನುವ ಧೃಢವಿಶ್ವಾಸ ಹೊಂದಿದ್ದ ಕುರಸೋವಾ, ತಾನು ಹಿರಿಯರ ಹೆಗಲ ಮೇಲೆ ನಿಂತೇ ಬೆಳೆದಿದ್ದು ಎನ್ನುವ ಶಿಶು ಸಹಜ ವಿನಯತೆಯೊಂದಿಗೆ ಜಾಗತಿಕ ಸಿನಿಮಾದಲ್ಲಿ ತನ್ನ ಛಾಪು ಮೂಡಿಸಿದರು.

ಜಪಾನಿನ ಟೋಕಿಯೊ ನಗರದಲ್ಲಿ ಹುಟ್ಟಿದ ಕುರಸೋವಾ, ಸೈನ್ಯಾಧಿಕಾರಿಯಾದ. ತನ್ನ ತಂದೆಯಿಂದ ಸಾಕಷ್ಟು ಪ್ರೇರಣೆಗೊಂಡಿದ್ದ. ಸಿನಿಮಾದಲ್ಲಿ ಆತ ಆಸಕ್ತಿಯನ್ನು ಹೊಂದಲು ಕಾರಣವಾಗಿದ್ದು ಆತನ ಅಣ್ಣ. ಜಪಾನಿನ ಆರಂಭದ ಸಿನಿಮಾ ಉದ್ಯಮದಲ್ಲಿ ಆತನ ಅಣ್ಣ ಕಾರ‍್ಯ ನಿರ್ವಹಿಸುತ್ತಿದ್ದ. ಈ ನೆಲೆಯಲ್ಲಿ ಬಾಲ್ಯದಿಂದಲೇ ಒಬ್ಬ ಅತ್ಯುತ್ತಮ ಪೇಂಟರ್ ಆಗಿದ್ದ ಕುರಸೋವಾ, ಸಿನಿಮಾ ವೃತ್ತಿಗೆ ಕಾಲಿರಿಸಿದ. ಈ ಕುಟುಂಬದಲ್ಲೇ ವಿಶಿಷ್ಟ ವ್ಯಕ್ತಿ ಕುರಸೋವಾ.

ದೈಹಿಕವಾಗಿ ಕೂಡಾ ಉಳಿದ ಸೋದರರು ಮತ್ತು ತಂದೆಗಿಂತ ಭಿನ್ನವಾಗಿದ್ದ ಮತ್ತು ಸೃಜನಶೀಲ ನೆಲೆಯಲ್ಲಿ ಯಾರೂ ಹೇರಲಾಗದ ಅತ್ಯಂತ ಮಾದರಿತನವನ್ನೇ ಹಾಕಿಕೊಂಡ. ಕುರಸೋವಾನ ಸಿನಿಮಾತನ, ಗೀಳು ಆರಂಭಗೊಂಡಿದ್ದು ಮರುಕತನದಿಂದ. ಪ್ರಸಿದ್ಧ ಕುರಸೋವಾ, ವಿಮರ್ಶಕ ಡೊನಾಲ್ಡ್ ರಿಚಿ ಹೇಳುವಂತೆ, ಆರಂಭದ ಜಪಾನಿ ಸಿನಿಮಾದಲ್ಲಿ ಮಾಡಿದ ನೀಲಿಚಿತ್ರ ಯಾರೂಜಾ, ಗ್ಯಾಂಗ್‌ಸ್ಟರ್ ಸಿನಿಮಾಗಳನ್ನು ನೋಡಿ ಕುರಸೋವಾ ಇದರಿಂದ ಹೊರತಾದ ಹಾದಿಯನ್ನು ಹಿಡಿದ ಎನ್ನುವ ಮಾತನ್ನು ನಾವು ಪರಿಗಣಿಸಬೇಕಾಗುತ್ತದೆ. ಹೀಗೆ ಹೊಸ ಹಾದಿಗೆ ಬೇಕಾದ ಪೂರಕ ತಯಾರಿ, ಅಧ್ಯಯನಗಳನ್ನು ಮಾಡಿಕೊಂಡ.

ಕನಸು ವಿನ್ಯಾಸಗಳ ಬುಟ್ಟಿ ಹಿಡಿದು ಕುರಸೋವಾ ಜಪಾನಿನ ಪ್ರಸಿದ್ಧ ಸಿನಿಮಾದ ಕಂಪನಿಯಾದ ಪಿಸಿಸಿ ಯನ್ನು ಸೇರಿದ. ಇಲ್ಲಿ ಸಹಾಯಕ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ದುಡಿದ ಕುರಸೋವಾ, ಪ್ರಸಿದ್ಧ ಸಂದರ್ಶನವೊಂದರಲ್ಲಿ ಹೇಳಿದಂತೆ ನಾನು ಸಿನಿಮಾ ವೃತ್ತಿಯನ್ನು ಪಡೆದು ನುಗ್ಗಿದ್ದು ಟೊಹಾ ದಲ್ಲಿ ಎಡಿ ಆಗಿದ್ದ ಕಾಲದಲ್ಲಿ ಬರೆದ ಸ್ಕ್ರೀನ್ ಪ್ಲೇಗಳಿಂದ.

ಕುರಸೋವಾ ಸ್ವತಃ ನಿರ್ದೇಶಕರಾಗಿ ರೂಪಿಸಿದ ಮೊದಲ ಸಿನಿಮಾ ಸಂಶಿರೊ ಸುಗಾತ೧ (1943)ದಿಂದ 1993  ರವರೆಗೆ ಸುಮಾರು 30 ಸಿನಿಮಾಗಳನ್ನು (ಆತನ ಕೊನೆಯ ಚಿತ್ರ ಮದದಾಯೊ)ಮಾಡಿದ. ಆತ ನಿರ್ದೇಶಿಸಿದ ಬೇರೆಯವರ ಚಿತ್ರಗಳಿಗೂ ಆತ ಚಿತ್ರಕಥೆಯನ್ನೂ ಬರೆದಿದ್ದರು. ತಾನು ದುಡಿದ ಕಂಪನಿಯಲ್ಲಿ ಕಲಿತುಕೊಂಡದ್ದು ಕೈರೊ ಯಮಾಮಟೊ ಎಂಬ ಪ್ರಸಿದ್ಧ ನಿರ್ದೇಶಕನಿಂದ. ಆತನೇ ಗುರು. ಆತ ಕುರಸೋವಾನನ್ನು ತಿದ್ದಿ ತೀಡಿ ಸಿನಿಮಾ ಪಾಠಗಳನ್ನು ಕಲಿಸಿದ. ಅತ್ಯಂತ ಎಳವೆಯಲ್ಲೇ ಪ್ರತಿಭಾವಂತರಾಗಿದ್ದ ಕುರಸೋವಾ, ಆತನ ಶಿಕ್ಷಕ ಯಾಕೆ ಆಯ್ಕೆ ಮಾಡಿಕೊಂಡನೆಂದರೆ ಅದನ್ನು ಯಮಾಮಟೋ ವೇ ಹೇಳುವಂತೆ, ಕುರಸೋವಾ ಸಿನಿಮಾ ಅಲ್ಲದೇ ಕಲೆ ಸೇರಿದಂತೆ ಬೇರೆ ವಿಷಯಗಳನ್ನೂ ತಿಳಿದಿದ್ದ. ನಾನು ಕುರಸೋವಾನಲ್ಲಿ ಮೆಚ್ಚಿದ ಅಂಶವೆಂದರೆ, ಕನ್‌ವಿನ್ಸ್ ಮಾಡುವ ಗುಣ. ಇಂತಹ ಕುರಸೋವಾನ ಸಿನಿಮಾದ ಸಾಕ್ಷಿಪ್ರಜ್ಞೆ ರೂಪಿತವಾದದ್ದು ಮುಖ್ಯವಾಗಿ ಎ.ಡಿ. ಯಾಗಿ ಪಿಸಿಸಿಎಲ್ ಇದ್ದ ದಿನಗಳು ಹಾಗೂ ಯಮಾಮಾಟೋ ವನ ಜತೆಗಿದ್ದ ಸಂದರ್ಭಗಳು.

madadayo

ಕುರಸೋವಾ ಕೂಡಾ ಆತನ ಸಿನಿಮಾ ಜೀವನದ ಪ್ರಾಥಸಂಗೋಪನದ ಅವಧಿಯನ್ನು ನೆನೆಸಿಕೊಳ್ಳುವುದು ಹೀಗೆ. ಆ ದಿನಗಳನ್ನು ನೆನೆದರೆ ಅವು ಶುದ್ಧವಾಗಿ ಯಮಾಮಟೋ ರೊಂದಿಗಿನ ಕೃತಿಗಳನ್ನು.

ಕುರಸೋವಾನ ೩೦ ಚಿತ್ರಗಳು ಕೂಡಾ ಪ್ರಮುಖವೇ. ಅವುಗಳಲ್ಲಿ ಪ್ರಮುಖ ಮತ್ತು ಅಪ್ರಮುಖ ಎಂಬ ಪ್ರಶ್ನೆಯೇ ಇಲ್ಲ. ಆದರೆ, ಆತನ ಸಿನಿಮಾ ನಿರ್ಮಾಣ, ತಾಂತ್ರಿಕತೆ, ಕಥನ ಕ್ರಮ, ಮಾಧ್ಯಮ, ಕನ್ ವಿನ್ಸ್ ಮಾಡುವ ಕ್ರಮ, ತಾತ್ವಿಕತೆಗಳನ್ನು ನಾವು ಪ್ರಶ್ನಿಸಿ ಒಪ್ಪಿದಾಗಲೇ ಅದಕ್ಕೊಂದು ನಿಜವಾದ ಮೌಲ್ಯ. ಇದು ಕುರಸೋವಾನ ನಂಬಿಕೆ ಮತ್ತು ದೃಷ್ಟಿಯೂ ಸಹ. ಪ್ರತಿ ಸಿನಿಮಾ ಕೂಡಾ ನಿರ್ಮಾಣ, ಸಾತ್ವಿಕತೆ, ಕಥನ ಕ್ರಮ, ಮಾಧ್ಯಮದ ಕಾರಣ, ಹೂದೋಟದ ವೈವಿಧ್ಯಮಯವಾದ ಹೂವುಗಳ ಹಾಗೆ ನಮ್ಮನ್ನು ಅನನ್ಯವಾಗಿ ಆಕರ್ಷಿಸುತ್ತವೆ.

ಆದರೂ ಕೂಡಾ ಚಿತ್ರಜಗತ್ತಿನ ಪ್ರಮುಖ ಚಿಂತಕರು, ಆತನ ಚಿತ್ರಗಳನ್ನು ವಿಶೇಷವಾಗಿ ರೊಶೋಮನ್, ಇಕಿರು, ಸೆವೆನ್ ಸಮುರಾಯ್, ಥ್ರೋನ್ ಆಫ್ ಬ್ಲಡ್, ಯೋಜಿಂಬೊ, ರೆಡ್ ಬಿಯರ್ಡ್. ದೊಡೆಸು ಕ ಡೆನ್, ದೆರ್ಸು ಉಜಾಲ, ಕಾಗೆಮುಷಾ, ರಾನ್, ಡ್ರೀಮ್ಸ್, ರ‍್ಯಾಪ್ಸ್ಸಡಿ ಇನ್ ಆಗಸ್ಟ್, ಮದಾದಯೊ ಗಳನ್ನು ವಿಶೇಷವಾದ ಔಚಿತ್ಯದಲ್ಲಿಟ್ಟು ಮಾನ್ಯತೀಕರಿಸುತ್ತಾರೆ. ಬರೀ ತಾತ್ವಿಕತೆಯ ಕಥನ ಕ್ರಮವಷ್ಟೇ ಅಲ್ಲದೇ, ಚಿತ್ರ ನಿರ್ಮಾಣ ಮತ್ತು ಸಿನಿಮಾ ಓದಿನ ದೃಷ್ಟಿಯಿಂದ ಮುಖ್ಯವೆನ್ನುವುದು ಅವರ ಅಂಬೋಣ.

ಕುರಸೋವಾ ಯುಗದ ಸಂದರ್ಭದಲ್ಲಿ ಸಿನಿಮಾ ಜಗತ್ತಿಗೆ ಪ್ರವೇಶಿಸಿದ ಈ ತಲೆಮಾರಿನ ಪ್ರಮುಖ ನಿರ್ದೇಶಕರಾದ ಮಾರ್ಟಿನ್ ಸ್ಕೋರ‍್ಸೆ, ಸ್ಟೀವನ್ ಸ್ಪಿಲ್‌ಬರ್ಗ್, ಅಬ್ಬಾಸ್ ಕೀರೋಸ್ತಮಿ ಮುಂತಾದ ಅನೇಕರೂ ಸಹ ಸಿನಿಮಾ ಓದಿನ ಪಠ್ಯಕ್ಕೆ ಕುರಸೋವಾನ ರೊಶೋಮನ್ ಅತ್ಯಂತ ಅವಿಭಾಜ್ಯವೆಂದೇ ಅಭಿಪ್ರಾಯಿಸುತ್ತಾರೆ. ತಾತ್ವಿಕವಾಗಿಯೂ ಫ್ರೆಂಚ್ ನ ಪ್ರಸಿದ್ಧ ತತ್ತ್ವಜ್ಞಾನಿ ಪಿಯರೆ ಬರಂಗ್ವಿನ್, ರೊಶೋಮನ್ ಬಗ್ಗೆ ಹೀಗೆ ಹೇಳುತ್ತಾರೆ,೧೯೫೦ ರ ನಂತರದ ಪೋಸ್ಟ್ ಮಾರ್ಡನಿಸಂ ಮತ್ತು ಅದು ಹೊತ್ತು ತಂದ ಕ್ಯೂಬಿಸಂ ಸತ್ಯಗ್ರಹಿಕೆಯ ಕ್ರಮವನ್ನು ಚಲನಚಿತ್ರ ಮಾಧ್ಯಮದ ಮೂಲಕ ಮನೋಜ್ಞವಾಗಿ ಕಥಿಸಿದ ಕಾಣ್ಕೆಯೇ ಕುರಸೋವಾನನ್ನು ದಾರ್ಶನಿಕನಾಗಿಯೂ, ತತ್ತ್ವಜ್ಞಾನಿಯಾಗಿಯೂ ಮೂಡಿಸಿದೆ. ಈ ಮಾತು ಅಕ್ಷರಶಃ ಸತ್ಯವಾದುದು.

ಯೋಜಿಂಬೊ
ಯೋಜಿಂಬೊ

ಕುರಸೋವಾನ ಸಿನಿಮಾ ಜಗತ್ತು ಒಂದು ಚಿಂತನೆಯ, ಬೌದ್ಧಿಕತೆಯ ವಾಗ್ವಾದ. ಅದು ಬತ್ತದ ತೊರೆ. ಪ್ರತಿದಿನ, ಪ್ರತಿಕ್ಷಣ ಕುರಸೋವಾನ ಸಿನಿಮಾ ನೋಡುವವರಿಗೆ, ಓದುವವರಿಗೆ ಹೊಸ ಯೋಚನೆಯನ್ನು ಹೊಮ್ಮಿಸುತ್ತದೆ. ವಿಶೇಷವಾಗಿ, ಆತನ ಕೊನೆಯ ಚಿತ್ರಗಳಾದ ದೊಡೆಸು ಕ ಡೆನ್, ಡ್ರೀಮ್ಸ್, ರಾಪ್ಸೊಡಿ ಇನ್ ಆಗಸ್ಟ್, ಮದಾದೊಯೊಗಳು ಜಾಗತೀಕೃತೋತ್ತರ ವಿಶ್ವದ ಸಮಸ್ಯೆ ಮತ್ತು ಸವಾಲುಗಳನ್ನೂ ಚರ್ಚೆಗೆ ಹಚ್ಚುತ್ತದೆ. ರಾಪ್ಸೊಡಿ ಇನ್ ಆಗಸ್ಟ್‌ನಲ್ಲಿ ಆತ ಚರ್ಚಿಸುವ ಅಮೆರಿಕದ ನವವಸಾಹತುಷಾಹಿ, ಆಕ್ರಮಣಷಾಹಿಯೂ ಅಮೆರಿಕವನ್ನು ಸಾರಾಸಗಟಾಗಿ ಇಂಪೀರಿಲಿಸಂ ನೆಲೆಯಲ್ಲಿ ವಿರೋಧಿಸುವ ನೋಮ್ ಚೋಮ್ಸ್ಕಿಯ ನೆಲೆಗಿಂತ ಭಿನ್ನವಾದುದೇನೂ ಅಲ್ಲ. ಹೀಗೆ ತನ್ನ ಹಂಬಲದ ಕೂಸಾದ ಡ್ರೀಮ್ಸ್ ಮತ್ತು ದೆರ್ಸು ಉಜಾಲದಲ್ಲಿ ಆತ ಆಧುನಿಕ ನಾಗರಿಕತೆ ಎಂಬ ರಾಕ್ಷಸನನ್ನು ಮಣಿಸಿ, ಹೊಸ ಸಾವಯವ, ಸರಳ ಸಹಜ, ನೈಸರ್ಗಿಕ ಸಾಮರಸ್ಯದ, ಕೊಳ್ಳುಬಾಕತನವಿರದ ಪರ‍್ಯಾಯ ಸಮಾಜ ಮತ್ತು ಜಗತ್ತನ್ನು ನೀಡಿರುವುದು ಗಾಂಧಿಯ ಹಿಂದ್ ಸ್ವರಾಜ್ ನಲ್ಲಿನ ಮಾದರಿಯನ್ನು ಹೋಲುತ್ತದೆ.

ಕುರಸೋವಾ ಎಲ್ಲಿಯೂ ಕೂಡಾ ಸಿದ್ಧಾಂತಕ್ಕಾಗಿ ಸಿನಿಮಾವನ್ನು ಮಾಡಲಿಲ್ಲ. ಹಾಗೆಂದು ಸಂದೇಶವನ್ನು ಕೊಡಲು ಈ ಮಾಧ್ಯಮವನ್ನು ಬಳಸಿಕೊಳ್ಳಲಿಲ್ಲ. ಬದಲಿಗೆ, ನಾಗರಿಕ ಸಮಾಜದ ನಾಗರಿಕರು ಎಂಬ ಆಷಾಢಭೂತಿತನದ ಮುಖವಾಡದಲ್ಲಿ ಬದುಕುತ್ತಿರುವ ನಮ್ಮನ್ನು, ನಮ್ಮ ಬದುಕನ್ನು ಪ್ರಶ್ನೆಗೆ ಹಚ್ಚಿಸುವ ಕೆಲಸವನ್ನೇ ಮಾಡಿದ. ಕುರಸೋವಾನ ಸಿನಿಮಾಗಳು, 1950 ರ ದಶಕದ ಜಾಗತಿಕ ಸಮಾಜ ಮತ್ತು ಸಾಮಾಜಿಕ ಬದುಕಿನ ನಿರಚನ ಕೂಡಾ ಹೌದು. ಇನ್ನೂ ಕೂಡಾ ಕುರಸೋವಾನ ಸಿನಿಮಾಗಳಿಂದ ಅರಿಯಬಹುದು, ಹರಿಯಬಹುದು, ಮುರಿಯಬಹುದು, ಮುರಿದು ಕಟ್ಟಲೂ ಬಹುದು. ಈ ಕಾರಣಗಳಿಗೋಸ್ಕರ ನಿರಂತರ ಬದುಕಿನ ಶೋಧ, ಸಂಬಂಧಗಳ ಕಾಳಜಿಯ ಅನ್ವೇಷಣೆಗಾಗಿ ಕುರಸೋವಾನ ಸಿನಿಮಾಗಳನ್ನು ನೋಡಬೇಕು.