ಅರವಿಂದ ನಾವಡ
ಪಣಜಿ : ಚಿತ್ರೋತ್ಸವ ಮುಗಿಯಲು ಮೂರು ದಿನ ಇರುವಾಗಲೇ ಆಸಕ್ತರ ಸಂಖ್ಯೆ ಕ್ಷೀಣಿಸತೊಡಗಿದೆ.

ಬುಧವಾರ ಬೆಳಗಿನ ಪ್ರದರ್ಶನಗಳಿಗೆ ಜನ ಕಡಿಮೆಯಾಗಿದ್ದು, ಬಹಳಷ್ಟು ಮಂದಿ ಗೋವಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೊರಡುತ್ತಿದ್ದಾರೆ. ಕೆಲವು ಚಿತ್ರಗಳು ಹೌಸ್ ಫುಲ್ ಆದರೆ, ಮತ್ತಷ್ಟಕ್ಕೆ ಜನರೇ ಇಲ್ಲ.

ಏಳು ದಿನಗಳಿಂದ ವಿವಿಧ ವಿಭಾಗಗಳಲ್ಲಿ ಒಟ್ಟು ಏಳಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನವಾಗುತ್ತಿವೆ. ಮಂಗಳವಾರದವರೆಗೂ ಜನ ಸಾಕಷ್ಟು ಸಂಖ್ಯೆಯಲ್ಲಿದ್ದರು. ಶನಿವಾರ ಮತ್ತು ಭಾನುವಾರ ರಜಾ ದಿನವಾದದ್ದರಿಂದ ಸ್ಥಳೀಯ ಸಿನಿಮಾ ಸೊಸೈಟಿಗಳ (ಸಿನಿಫಿಲೆ) ಸದಸ್ಯರೂ ಹೆಚ್ಚಾಗಿದ್ದರು. ಹಾಗಾಗಿ ಬಹುತೇಕ ಪ್ರದರ್ಶನಗಳು ಹೌಸ್ ಫುಲ್ ಆಗಿದ್ದವು.

ಜನರೇ ಇಲ್ಲ
ಬುಧವಾರ ಬೆಳಗ್ಗೆ ಕೊಲಂಬಿಯಾ ದೇಶದ ಚಿತ್ರ “ಚೋಕೊ” ಗೆ ಹೇಳುವಷ್ಟು ಸಂಖ್ಯೆಯಲ್ಲಿ ಜನರಿರಲಿಲ್ಲ. ಒಬ್ಬ ತಾಯಿ ತನ್ನ ಮಗಳ ಹುಟ್ಟುಹಬ್ಬಕ್ಕೆ ಕೇಕ್ ತರಲು ಹರಸಾಹಸ ಪಡುವ ಕಥೆ. ಕುಡುಕ ಗಂಡ ಮತ್ತು ಬೇಜವಾಬ್ದಾರಿ ಗಂಡನಿಂದ ಬಿಡಿಸಿಕೊಳ್ಳುವ ಕಥೆಯೂ ಹೌದು. ಇಷ್ಟೊಂದು ಚಿತ್ರಗಳ ಮಧ್ಯೆ ಒಳ್ಳೆಯ ಚಿತ್ರಗಳನ್ನು ಹುಡುಕುವುದು ಒಂದು ಬಗೆಯಲ್ಲಿ ಜೂಜಿನ ರೀತಿಯೇ.

ಮಂಗಳವಾರವೂ ಪತ್ರಿಕಾಗೋಷ್ಠಿ, ಚರ್ಚೆಗೆ ಕೊರತೆಯಿರಲಿಲ್ಲ. ಚಾಯ್ ಅಂಡ್ ಚಾಟ್ ನಲ್ಲಿ ಇಂಟರ್ ನ್ಯಾಷನಲ್ ಕಾಂಪಿಟೇಷನ್ (ಐಸಿ) ವಿಭಾಗದ ಆಯ್ಕೆ ಕುರಿತು ಜ್ಯೂರಿಗಳಾದ ಗೌತಮ್ ಘೋಷ್, ಯು ಕೆ ಯ ಡೆರೆಲ್ ಮಾಲ್ಕಂ, ರೊಮೇನಿಯಾದ ಅನಾಮಾರಿಯಾ ಮರಿಂಕಾ, ಪೋಲ್ಯಾಂಡ್ ನ ಲೆಚ್ ಮಜೆಸ್ಕಿ ಹಾಗೂ ಶ್ರೀಲಂಕಾದ ಮಲನಿ ಪೊನ್ಸೇಕಾ ಮಾತನಾಡಿದರು. ಇದರ ಒಟ್ಟು ಅಭಿಪ್ರಾಯವೆಂದರೆ, ಎಲ್ಲರಿಗೂ ಸಾಧಾರಣವಾಗಿ ಇಷ್ಟವಾಗುವಂತಹ ಸಿನಿಮಾಗಳನ್ನು ಅಯ್ಕೆ ಮಾಡಿದ್ದೇವೆ. ನಿರ್ದಿಷ್ಟ ಮಾನದಂಡವೆಂಬ ನೆಲೆಯನ್ನು ವಿವರಿಸುವುದು ಕಷ್ಟ.

ಹಾಗೆಯೇ, ಡಾಕ್ಯುಮೆಂಟರಿಗಳ ಪ್ರದರ್ಶನಕ್ಕೆಂದೇ ಬೇರೆ ವ್ಯವಸ್ಥೆ ಆಗಲಿದೆ ಎಂದು ಹೇಳಿದವರು ಇಂಡಿಯನ್ ಡಾಕ್ಯುಮೆಂಟರಿ ಪ್ರೊಡ್ಯೂಷರ್ಸ್ ಅಸೋಸಿಯೇಷನ್ ಅಧ್ಯಕ್ಷ ಮೈಕ್ ಪಾಂಡೆ. “ಜನವರಿಯಿಂದ ದೂರದರ್ಶನದಲ್ಲಿ ಅರ್ಧ ಗಂಟೆ ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ನಿಗದಿಯಾಗಲಿದೆ” ಎಂದರು. ಶಿಕ್ಷಣದ ಮಾದರಿಯಾಗಿ ಈ ಡಾಕ್ಯುಮೆಂಟರಿಗಳ ಪ್ರದರ್ಶನ ಅವಶ್ಯ ಎಂಬುದು ಅಸೋಸಿಯೇಷನ್ ನ ಅಭಿಪ್ರಾಯ.

ಓಪನ್ ಫೋರಂನಲ್ಲಿ ಮೂಡಿಬಂದ ಅಭಿಪ್ರಾಯವೆಂದರೆ, “ಸಿನಿಮಾ ತಯಾರಿಕೆಗೆ ಡಿಜಿಟಲ್ ತಂತ್ರಜ್ಞಾನ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದರೂ, ಸಿನಿಮಾ ರೂಪಿಸುವವನ ಪಾತ್ರ ಅಪ್ರಮುಖವಾಗಿಲ್ಲ”.

“ಸಿನಿಮಾವನ್ನು ರೂಪಿಸುವಾಗ ತಂತ್ರಜ್ಞಾನ ನೆರವಿಗೆ ಬಂದರೂ, ರೂಪಿಸುವವ (ಮನುಷ್ಯ)ನ ಅಗತ್ಯ ಇದ್ದೇ ಇದೆ ಎಂದು ಪ್ರತಿಪಾದಿಸಿದವರು ವಿವಿಧ ಸಿನಿಮಾ ಶಾಲೆಯ ವಿದ್ಯಾರ್ಥಿಗಳು.ಪುಣೆಯ ಎಫ್ ಟಿ ಐಐ, ಚೆನ್ನೈನ ಎಂಜಿಆರ್ ಫಿಲ್ಮ್ ಸ್ಕೂಲ್, ಸತ್ಯಜಿತ್ ರೇ ಫಿಲ್ಮ್ ಇನ್ ಸ್ಟಿಟ್ಯೂಟ್, ಎಜೆಕೆ ಮಾಸ್ ಕಮ್ಯೂನಿಕೇಷನ್ ರೀಸರ್ಚ್ ಸೆಂಟರ್ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

“ಮಿಸ್ಟಿಕ್ ಇರಾನ್ : ದಿ ಅನ್ ಸೀನ್ ವರ್ಲ್ಡ್” ಚಿತ್ರದ ಮೂಲಕ ನಿರ್ದೇಶಕಿ ಅರ್ಯನಾ ಫರ್ಷಾದ್ ಪ್ರತಿಪಾದಿಸಿದ್ದು, “ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಸೂಫಿಸಂ ಪ್ರಭಾವಿಸತೊಡಗಿದೆ. ನನ್ನ ಈ ಚಿತ್ರ 40 ದೇಶಗಳ ಚಾನೆಲ್ ಗಳಲ್ಲಿ ಪ್ರಸಾರವಾಗಿದೆ. ಒಂದು ದಿನ ಇರಾನ್ ನಲ್ಲೂ ಪ್ರದರ್ಶಿಸುವೆ’ ಎಂಬುದು ಅವರ ಆತ್ಮವಿಶ್ವಾಸ. ೀ ಚಿತ್ರ ಸೋಲ್ ಆಫ್ ಏಷ್ಯಾದಡಿ ಪ್ರದರ್ಶಿಸಲಾಗಿತ್ತು. ಇರಾನ್ ದೇಶದ ಚರಿತ್ರೆ ಮತ್ತು ಅಲ್ಲಿನ ಆಧ್ಯಾತ್ಮಿಕ ಅನುಭೂತಿ ಕುರಿತು ರೂಪಿಸಿದ ಸಾಕ್ಷ್ಯಚಿತ್ರ.

ಕಲಾವಿದ ಪ್ರಾಮಾಣಿಕನಾಗಿರಬೇಕು
ಕಲಾವಿದ ಪ್ರಾಮಾಣಿಕನಾಗಿರಬೇಕು ಮತ್ತು ಸಿನಿಮಾಗಳು ಜನರನ್ನು ಪರಸ್ಪರ ಬೆಸೆಯಬೇಕು ಎಂಬುದು ಶ್ರೀಲಂಕಾದ ಫಿಲ್ಮ್ ಮೇಕರ್ ಪ್ರಸನ್ನ ವಿತಂಗೆಯವರ ಅನಿಸಿಕೆ. ಇದನ್ನು ಅನುಮೋದಿಸಿದ್ದು ಪೋರ್ಚುಗಲ್ ನಿರ್ದೇಶಕ ವಿಸೆಂಟ್ ಅಲ್ಸ್ ಡೂ. “ಫ್ಲೋರ್ ಬೆಲ್ಲಾ ಚಿತ್ರದ ಮೂಲಕ ದಂತಕಥೆಯಾದವಳೊಬ್ಬಳ ಬದುಕಿನ ಸತ್ಯವನ್ನು ಹುಡುಕುವ ಕೆಲಸ ಮಾಡಿದೆ’ ಎಂದುವರು ವಿಸೆಂಟ್. “ಬಾಯ್ ಈಟಿಂಗ್ ದಿ ಬರ್ಡ್ಸ್ ಫುಡ್’ ಸಿನಿಮಾದ ಮೂಲಕ ಗ್ರೀಕ್ ನ ಲ್ಲಿನ ಆರ್ಥಿಕ ಕುಸಿತದ ದುಷ್ಪರಿಣಾಮಗಳನ್ನು ಹೇಳಲು ಪ್ರಯತ್ನಿಸಿದ್ದೇನೆ ಎಂದವರಿಉ ನಿರ್ದೇಶಕ ಡೆಮೆತ್ರಿ ಕಸಿಮತಿಸ್.

ಬುಧವಾರ ಟರ್ಕಿಶ್ ಕರೆಂಟ್ ನ ವಿಭಾಗದಡಿಯ ಪ್ರದರ್ಶನವಾಗುವ “ದಿ ಸ್ಟ್ರೇಂಜರ್” ಸಿನಿಮಾದ ಎಲ್ ಟಿಕೆಟ್ ಗಳು ಖಾಲಿಯಾಗಿವೆ. ಉಳಿದಂತೆ, ಸಿನಿಮಾ ಆಫ್ ವಲ್ಡ್ಡ್ ನಲ್ಲಿ “ನಾರರ್ಕಿಸಸ್”, “ಫಾರ್ ಎಲೆನ್”, “ಪರ್ಕ್ಡ್ ಆಫ್ ಬೀಯಿಂಗ್ ಎ ವಾಲ್ ಫ್ಲವರ್” ಚಿತ್ರ ಪ್ರದರ್ಶನಗೊಳ್ಳಲಿವೆ.

ತಾಯಿ ಸಾಹೇಬಕ್ಕೆ ಜನ
ಸ್ಪೆಷಲ್ ಟ್ರಿಬ್ಯೂಟ್ ಟು ಗಿರೀಶ್ ಕಾಸರವಳ್ಳಿಯಡಿ ಸೋಮವಾರ ಆರಂಭವಾದ ಪ್ರದರ್ಶನಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದದ್ದು ವಿಶೇಷ. “ಮನೆ” ಚಿತ್ರ ಮೊದಲ ದಿನ ಪ್ರದರ್ಶಿತವಾದರೆ, ಮಂಗಳವಾರ “ತಾಯಿ ಸಾಹೇಬ” ಪ್ರದರ್ಶಿತವಾಯಿತು. ಇದಕ್ಕೂ ಜನರ ಕೊರತೆಯಿರಲಿಲ್ಲ. ಈ ವಿಭಾಗದಡಿ ಇಂದು “ದ್ವೀಪ” ಪ್ರದರ್ಶನಗೊಳ್ಳಲಿದೆ.