ಪಣಜಿ : ಸೋಮವಾರ ಓಪನ್ ಫೋರಂನಲ್ಲಿ ಚರ್ಚೆಯಾದದ್ದು “ಭಾರತೀಯ ಸಿನಿಮಾಕ್ಕೆ ನೂರು, ಸಿನಿಮಾ ಶಿಕ್ಷಣಕ್ಕೆ 50 ಮತ್ತು ಭವಿಷ್ಯದ ದಾರಿ” ಕುರಿತಾದದ್ದು. ಕೊನೆಗೂ ಮೂಡಿಬಂದ ಅಭಿಪ್ರಾಯ ಸಿನಿಮಾ ಶಾಲೆಗಳು ಬೇಕು.

ನಾನು ಕಲಿತದ್ದು

“ನಾನು ಕಲಿತದ್ದು ಹಿರಿಯ ಸಿನಿಮಾ ನಿರ್ದೇಶಕರಲ್ಲಿ ಸಹಾಯಕನಾಗಿ ದುಡಿಯುತ್ತಾ. ಆಗ ಸಿನಿಮಾ ಶಾಲೆಗಳು ಬೆಂಗಳೂರಿನಲ್ಲಿರಲಿಲ್ಲ. ಆದರೆ, ನಮ್ಮಲ್ಲಿ ಕಲಿಯಬೇಕೆಂಬ ಹಂಬಲವಿತ್ತು. ಹಾಗಾಗಿ ಬೇರೆ ಮಾರ್ಗವನ್ನು ಹುಡುಕಿಕೊಂಡೆವು. ಸಿನಿಮಾ ಶಾಲೆಗಳು ಅಗತ್ಯ. ವಿಷಾದವೆಂದರೆ, ಇತ್ತೀಚೆಗೆ ಹೊಸಬರು ಇಂಟರ್ ನೆಟ್ ಬಳಸಿ ಸಿನಿಮಾ ಶಿಕ್ಷಣ ಪಡೆಯಲು ಹಾತೊರೆಯುವುದು ಹಾಗೂ ಆನ್ ಲೈನ್ ಕೋರ್ಸ್ ಗಳ ಮೂಲಕ ತಮ್ಮ ಕಲಿಕೆಯನ್ನು ಪೂರ್ಣಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಒಂದು ವಿಷಯದ ಬಗೆಗಿನ ಮೂಲಭೂತ ಜ್ಞಾನವಿಲ್ಲದೇ ಹೊಸದನ್ನು ಅನ್ವೇಷಿಸಲು ಅಸಾಧ್ಯ’ ಎಂದವರು ಕನ್ನಡದ ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು.

“ಸಿನಿಮಾದ ಇತಿಹಾಸವನ್ನು ತಿಳಿಯದೇ ಯಾವುದೇ ತಾಂತ್ರಿಕ ಜ್ಞಾನ ಪಡೆದರೂ ಉಪಯೋಗವಾಗದು’ ಎಂಬ ಅಭಿಪ್ರಾಯ ರಾಷ್ಟ್ರೀಯ ಸಿನಿಮಾ ಪ್ರಾಚ್ಯಾಗಾರ (ಎನ್ ಎಫ್ ಎ ಐ)ದ ಸಂಸ್ಥಾಪಕ ಪಿ. ಕೆ. ನಾಯರ್, ಇತಿಹಾಸವನ್ನು ತಿಳಿದುಕೊಂಡು ಸಿನಿಮಾ ಶಿಕ್ಷಣವನ್ನು ಪಡೆದರೆ ಒಳ್ಳೆಯುವುದು. ಶಿಕ್ಷಣ ಒಂದಿಷ್ಟು ಶಿಸ್ತನ್ನು ರೂಢಿಸಬಲ್ಲದು ಎಂದರು.
“ಬಹಳಷ್ಟು ಮಂದಿ ನನ್ನ ಬಳಿ ಧ್ವನಿ-ಶಬ್ದ ವಿನ್ಯಾಸದ ಬಗ್ಗೆ ಕಲಿಸಿ ಎಂದು ಬರುತ್ತಾರೆ. ಆಗ, ಇಡೀ ಸಿನಿಮಾ ಮಾಧ್ಯಮದ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳುತ್ತೇನೆ’ ಎಂದ ಸೌಂಡ್ ಎಂಜಿನಿಯರ್ ರಸೂಲ್ ಪೂಕುಟ್ಟಿ, ಸಿನಿಮಾ ಶಾಲೆಗಳು ವ್ಯವಸ್ಥಿತವಾಗಿ ಕಲಿಸುತ್ತವೆ. ಆದರೆ, ಮುಂಬಯಿಯ ಉದ್ಯಮ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.