ಅರವಿಂದ ನಾವಡ

ಪಣಜಿ : “ಪ್ರತಿಯೊಬ್ಬ ನಿರ್ದೇಶಕನ ಹಂಬಲ ಮತ್ತು ಕಾಳಜಿ ಅತ್ಯುತ್ತಮ ಸಿನಿಮಾ ಮಾಡುವುದೇ ಹೊರತು ಮತ್ತೇನೂ ಅಲ್ಲ”.
ಇದು ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಅಭಿಪ್ರಾಯ.

ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಕಾಸರವಳ್ಳಿ ಮತ್ತು ಪಿಐಬಿ ಅಧಿಕಾರಿ ಪಲ್ಲವಿ ಚಿಣ್ಯ.

ಗೋವಾದಲ್ಲಿ ನಡೆಯುತ್ತಿರುವ 43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಪತ್ರಕರ್ತರು ಕೇಳಿದ ವಿವಿಧ ನೆಲೆಯ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸಿನಿಮಾದ ವರ್ಗೀಕರಣದ ಕೆಲಸ ಸಿನಿಮಾ ಮಂದಿಯದ್ದಲ್ಲ’ ಎಂದರು.

ಕಮರ್ಷಿಯಲ್ ಸಿನಿಮಾ, ಆರ್ಟ್ ಸಿನಿಮಾ ಎಂಬ ವರ್ಗೀಕರಣವೇ ನಮಗೆ ಸಂಬಂಧಿಸಿದ್ದಲ್ಲ. ಆ ಅನುಕೂಲಕರ ಕ್ರಮವನ್ನು ಮಾಧ್ಯಮದವರು ಹುಡುಕಿಕೊಂಡದ್ದು. ಪ್ರತಿ ನಿರ್ದೇಶಕನೂ ಅತ್ಯುತ್ತಮ ಸಿನಿಮಾ ಮಾಡಬೇಕೆಂದು ಪ್ರಯತ್ನಿಸುತ್ತಾನೆ. ಈ ಅತ್ಯುತ್ತಮ ಅಥವಾ ಒಳ್ಳೆಯದೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂದು ಹೇಳಲು ಮರೆಯಲಿಲ್ಲ.

ವಿವರ
“ಸಿನಿಮಾ ತಯಾರಿಕೆಯ ರೀತಿ ಮತ್ತು ನೆಲೆ ಕಳೆದ ಹಲವು ವರ್ಷಗಳಲ್ಲಿ ಬದಲಾಗಿದ್ದನ್ನು ಗಮನಿಸಬೇಕು. ಸ್ಟುಡಿಯೋ ಹೌಸ್ ಗಳು ಸಿನಿಮಾ ನಿರ್ಮಿಸುತ್ತಿದ್ದಾಗ ಇಂತಹ ಸಮಸ್ಯೆಗಳಿರಲಿಲ್ಲ. ವಿವಿಧ ರೀತಿಯ ಸಿನಿಮಾಗಳು ಸ್ಟುಡಿಯೋ ಹೌಸ್ ಗಳು ಅಸ್ತಿತ್ವದಲ್ಲಿದ್ದಾಗಲೇ ಬಂದವು. ಆಗ ಈ ಕಲಾತ್ಮಕ ಅಥವಾ ವಾಣಿಜ್ಯಾತ್ಮಕ ಎಂಬ ಗೊಂದಲಗಳಿರಲಿಲ್ಲ. ಆದರೆ, ಸ್ವತಂತ್ರ ನಿರ್ಮಾಪಕರು ಮತ್ತು ಸಂಸ್ಥೆಗಳು (ಪ್ರೊಡಕ್ಷನ್ ಹೌಸ್) ಸಿನಿಮಾ ಮಾಡಲು ಹೊರಟಾಗ ಆದದ್ದೇ ಬೇರೆ. ಎಲ್ಲವೂ ಬದಲಾಯಿತು”.

ಭಾರತೀಯ ಸಿನಿಮಾಗಳು
ಭಾರತೀಯ ಸಿನಿಮಾ ಎಂಬ ಕುರಿತ ಪ್ರಶ್ನೆಗೆ-ಈ ಕಲ್ಪನೆಯೇ ಬದಲಾಗಬೇಕು. ನಮ್ಮಲ್ಲಿ ವಿವಿಧ ಭಾಷೆ, ಪ್ರಾಂತ್ಯ, ಸಂಸ್ಕೃತಿಗಳಿವೆ. ಆಯಾ ಭಾಷೆ, ಸಂಸ್ಕೃತಿಯ ನೆಲೆಗಳಲ್ಲೇ ಚಲನಚಿತ್ರಗಳು ರೂಪುಗೊಳ್ಳುತ್ತಿವೆ. ಹೀಗಿರುವಾಗ, ಭಾರತೀಯ ಸಿನಿಮಾ ಎಂದು ಯಾವುದೋ ಒಂದು ಭಾಷೆಗೆ ನಿರ್ದಿಷ್ಟಗೊಳ್ಳುವುದು ಸರಿಯಲ್ಲ. ಇದರ ಬದಲು “ಭಾರತೀಯ ಸಿನಿಮಾಗಳು” ಎಂದು ಬದಲಾಯಿಸಬೇಕು. ಮಣಿಪುರಿ ಸಿನಿಮಾ ಮಲಯಾಳಂ ಸಿನಿಮಾಕ್ಕಿಂತ ಭಿನ್ನವಾಗಿರಬಹುದು, ಇದೇ ಮಾತು ಕನ್ನಡ, ಪಂಚಾಬಿಗೂ ಅನ್ವಯವಾದೀತು. ಇಷ್ಟೆಲ್ಲಾ ಆದಮೇಲೂ ಒಂದಕ್ಕೆ ಸೀಮಿತಗೊಳ್ಳೋದು ನಮ್ಮ ವೈವಿಧ್ಯತೆಗೇ ಎಸಗುವ ಅನ್ಯಾಯ.

“ಕನ್ನಡದ ಸ್ಥಿತಿ ಇನ್ನೂ ಭಿನ್ನ. ತೆಲುಗು, ತಮಿಳು, ಹಿಂದಿ ಇತ್ಯಾದಿ ಭಾಷೆಗಳ ಚಿತ್ರಗಳಲ್ಲದೇ, ನಮ್ಮದೇ ಭಾಷೆಯು ಜನಪ್ರಿಯ ಚಿತ್ರಗಳ (ಪಾಪ್ಯುಲರ್) ಜತೆ ಸೆಣಸಬೇಕು. ಈ ಹಿಂದೆ ದೂರದರ್ಶನದಲ್ಲಿ ಈ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಈಗ ಆ ಅವಕಾಶವೂ ಇಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಆ ಸಂಪ್ರದಾಯ ಶುರುವಾಗುವ ಸನ್ನೆಗಳಿವೆ. ಅದಾದರೆ ಒಂದಿಷ್ಟು ಅನುಕೂಲವಾದೀತು.”

ಹಿಂದಿ ಸಿನಿಮಾದಲ್ಲಿ ಹೊಸ ರೀತಿಯ ಆರ್ಟ್ ಹೌಸ್ ಸಿನಿಮಾಗಳು ರೂಪಿಸುತ್ತಿರುವ ಪ್ರತಿಭೆಗಳ ಬಗ್ಗೆ-ಹಿಂದಿಯಷ್ಟೇ ಏಕೆ ? ಎಲ್ಲ ಭಾರತೀಯ ಸಿನಿಮಾಗಳಲ್ಲೂ ಹೊಸಬರು ಬರುತ್ತಿದ್ದಾರೆ. ಕಾನ್ಸ್ ಚಿತ್ರೋತ್ಸವದಲ್ಲಿ ಒಂದೆರಡು ವರ್ಷದ ಹಿಂದೆ ಕೇರಳದ ಷಾಜಿ ಎಸ್. ಕರುಣ್ ಅವರ ಚಿತ್ರಗಳು ಕಾನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. 1999 ರಲ್ಲಿ ಮುರಳಿ ಅಯ್ಯರ್ ಅವರ “ಮರಣ ಸಿಂಹಾಸನಂ” ಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಆಗ ಯಾವ ಮಾಧ್ಯಮಗಳೂ ಬರೆಯಲಿಲ್ಲ. ಹಿಂದಿ ಮಾತ್ರ ಭಾರತೀಯ ಸಿನಿಮಾ ಎಂಬ ಪರಿಕಲ್ಪನೆ ಬದಲಾಗದಿದ್ದರೆ ಭಾರತದ ಸಣ್ಣ ಭಾಷೆಗಳ ಚಿತ್ರಗಳು ಕಡೆಗಣಿಸಲ್ಪಡುತ್ತವೆ”.

ಡಬ್ಬಿಂಗ್ ಬಗ್ಗೆ
“ಡಬ್ಬಿಂಗ್ ಬೇಡ ಎಂದು ಸರಕಾರವಾಗಲೀ, ಚಿತ್ರೋದ್ಯಮವಾಗಲೀ ನಿರ್ಧರಿಸಿಲ್ಲ. ಆದರೆ ಸ್ಥಳೀಯ ಬುದ್ಧಿಜೀವಿಗಳು, ಸಾಹಿತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಸಮರ್ಥ ಕಾರಣವನ್ನೂ ನೀಡುತ್ತಿದ್ದಾರೆ. ಡಬ್ಬಿಂಗ್ ಚಿತ್ರಗಳು ಬಂದರೆ ಕನ್ನಡ ಭಾಷೆಗೆ, ಸಂಸ್ಕೃತಿಗೆ ಧಕ್ಕೆಯಾದೀತೆಂಬ ಆತಂಕ ಅವರದ್ದು. ಅದೂ ನಿಜ. ಪ್ರಸ್ತುತ ತೆಲುಗು, ತಮಿಳಿಗೆ ಹೋಲಿಸಿದರೆ ಕನ್ನಡದ ಮಾರುಕಟ್ಟೆ ಮತ್ತು ಉದ್ಯಮ ಆರ್ಥಿಕವಾಗಿ ಸಶಕ್ತರಲ್ಲ. ಜತೆಗೆ ಮಾರುಕಟ್ಟೆ, ಉದ್ಯಮವೂ ಬೇರೆಯವರ ಕೈಯಲ್ಲಿದೆ. ಲ್ಯಾಟಿಕನ್ ಅಮೆರಿಕನ್ ರಾಷ್ಟ್ರಗಳಲ್ಲಿ, ಆಫ್ರಿಕನ್ ರಾಷ್ಟ್ರಗಳಲ್ಲಿ ಏನಾಗಿದೆ ಎಂಬುದನ್ನು ಗಮನಿಸಬೇಕು. ಲ್ಯಾಟಿಕನ್ ಅಮೆರಿಕನ್ ಸಂಪೂರ್ಣ ಹಾಲಿವುಡ್ ನಿಂದ ತುಂಬಿದ್ದರೆ, ಆಫ್ರಿಕನ್ ರಾಷ್ಟ್ರಗಳಲ್ಲಿ ಫ್ರೆಂಚ್ ಭಾಷೆಯ ಚಿತ್ರಗಳೇ ಮೆರೆಯುತ್ತಿವೆ. ಇಂದಿಗೂ ಬಾಂಗ್ಲಾದೇಶದಲ್ಲಿ ಭಾರತೀಯ ಸಿನಿಮಾ ಪ್ರದರ್ಶಿಸುವುದು ಕಷ್ಟ. ಇವೆಲ್ಲವೂ ಸ್ಥಳೀಯವಾಗಿ ಮಾಡಿಕೊಂಡ ಕೆಲವು ಕ್ರಮಗಳು.

ಟಿವಿ ಮಾಧ್ಯಮ
ನನಗೆ ಟಿವಿ ಗೆ ಧಾರಾವಾಹಿಯನ್ನು ರೂಪಿಸಬಾರದೆಂದೇನೂ ಇಲ್ಲ. ಈ ಹಿಂದೆ ಒಂದು ಧಾರಾವಾಹಿಯನ್ನೂ ಮಾಡಿದ್ದೆ. ಆದರೆ, ಟಿವಿ ಯಲ್ಲಿ ಮಾರುಕಟ್ಟೆ, ಟಿಆರ್ ಪಿ ಇತ್ಯಾದಿಗಳ ಒತ್ತಡವೇ ಜಾಸ್ತಿ. ಚಿತ್ರ ನಿರ್ಮಿಸುವಾಗ ಬಹಳ ಚೆನ್ನಾಗಿ ಸಿನಿಮಾ ಮಾಡಬೇಕೆಂಬ ಒತ್ತಡ (ಆರ್ಟಿಸ್ಟಿಕ್ ಪ್ರೆಶರ್)ವಷ್ಟೇ ಇರುತ್ತದೆ. ಆದ ಕಾರಣ, ನಿತ್ಯದ ವಿವಿಧ ಒತ್ತಡಗಳನ್ನು ಎದುರಿಸುವುದು ಆಗದು.