ಗೋವಾದಲ್ಲಿ ನಡೆಯುತ್ತಿರುವ 43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರ ಒಟ್ಟು ನಾಲ್ಕು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಈಗಾಗಲೇ ಶನಿವಾರ “ಕೂರ್ಮಾವತಾರ” ಚಿತ್ರ ಪ್ರದರ್ಶನಗೊಂಡಿತು. ಸೋಮವಾರ ಮರು ಪ್ರದರ್ಶನವಿದೆ. ಇದಲ್ಲದೇ, “ಸ್ಪೆಷಲ್ ಟ್ರಿಬ್ಯೂಟ್” ನಡಿ “ಮನೆ”, “ತಾಯಿ ಸಾಹೇಬ” ಮತ್ತು “ದ್ವೀಪ” ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಕೂರ್ಮಾವತಾರ ಪ್ರದರ್ಶನಕ್ಕೆ ಮುನ್ನ ಗಿರೀಶ್ ಕಾಸರವಳ್ಳಿ, ಚಿತ್ರದ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್, ಜ್ಯೋತಿ ಪಾಟೀಲ್, ಅಪೂರ್ವ ಕಾಸರವಳ್ಳಿಯವರನ್ನು ಹೂಗುಚ್ಛ ನೀಡಿ ಉತ್ಸವ ನಿರ್ದೇಶಕ ಶಂಕರ್ ಮೋಹನ್ ಸ್ವಾಗತಿಸಿದರು.

ಈ ಚಿತ್ರೋತ್ಸವದಲ್ಲಿ ಇಬ್ಬರು ಹಿರಿಯ ನಿರ್ದೇಶಕರ ಚಿತ್ರಗಳನ್ನು ಈ ವಿಭಾಗದಡಿ ತೋರಿಸಲಾಗುತ್ತಿದ್ದು, ಈ ಪೈಕಿ ಮುಜಫರ್ ಅಲಿ ಮತ್ತೊಬ್ಬರು. ಆವರ “ಉಮ್ರಾ ಜಾನ್”, “ಆಗ್ಮಾನ್” ಮತ್ತು “ಅಂಜುಮಾನ್” ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳು.

ಹಾಗೆಯೇ ಹೊರಗಿನ ದೇಶದ ನಿರ್ದೇಶಕರ ಪೈಕಿ ಅಶೋಕ್ ಅಮೃತರಾಜ್ ಅವರ ಮೂರು ಚಿತ್ರಗಳನ್ನು ಈ ವಿಭಾಗದಡಿ ಪ್ರದರ್ಶಿಸಲಾಗುತ್ತಿದೆ.

ಮುಂದಿನ ಬಾರಿ ಪುನರವಲೋಕನ (ರೆಟ್ರಾಸ್ಪೆಕ್ಟಿವ್)

ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳು “ರೆಟ್ರಾಸ್ಪೆಕ್ಟಿವ್” ವಿಭಾಗದಡಿ ಈ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಬೇಕಿತ್ತು. ಆದರೆ, ಕೆಲವು ಗೊಂದಲಗಳಿಂದ ಈ ಬಾರಿ ಪ್ರದರ್ಶಿತವಾಗಿಲ್ಲ. ಕೋಲ್ಕತ್ತಾ ಚಿತ್ರೋತ್ಸವದಲ್ಲಿ ಈ ವಿಭಾಗದಡಿ ಪ್ರದರ್ಶಿಸುವ ಸಾಧ್ಯತೆ ಇತ್ತು. ಈ ಆಯ್ಕೆಯ ಗೊಂದಲದಿಂದ ಈ ಬಾರಿಯೇ ಸಾಧ್ಯವಾಗಲಿಲ್ಲ ಎನ್ನುವುದು ಇಫಿಯ ವಾರ್ತೆ. 

ಇದನ್ನು ಪುಷ್ಟೀಕರಿಸುವಂತೆ ಉತ್ಸವ ಆರಂಭದ ಹಿಂದಿನ ದಿನ ಪತ್ರಿಕಾಗೋಷ್ಠಿಯಲ್ಲಿ ಉತ್ಸವ ನಿರ್ದೇಶಕ ಶಂಕರ್ ಮೋಹನ್, “ಈ ಬಾರಿ ಗಿರೀಶ್ ಕಾಸರವಳ್ಳಿಯವರ ಚಿತ್ರಗಳು ರೆಟ್ರಾಸ್ಟೆಕ್ಟಿವ್ ವಿಭಾಗದಡಿ ಪ್ರದರ್ಶಿಸಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಮುಂದಿನ ಚಿತ್ರೋತ್ಸವ (2013) ದಲ್ಲಿ ಖಂಡಿತವಾಗಿ ಕಾಸರವಳ್ಳಿಯವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದಿದ್ದರು.

ಈ ಡ್ಯಾಮೇಜ್ ಕಂಟ್ರೋಲ್ ಕ್ರಮವಾಗಿಯೂ ಈ ಬಾರಿ ಸ್ಪೆಷಲ್ ಟ್ರಿಬ್ಯೂಟ್ ವಿಭಾಗದಡಿ ಕಾಸರವಳ್ಳಿಯವರ ಮೂರು ಚಿತ್ರಗಳು ಪ್ರದರ್ಶಿತವಾಗುತ್ತಿವೆ ಎನ್ನಬಹುದು.

ರೆಟ್ರಾಸ್ಟೆಕ್ಟಿವ್ ನಿಂದ ಏನು ಲಾಭ ?

ಇದು ಒಬ್ಬ ನಿರ್ದೇಶಕನಿಗೆ ಸಲ್ಲಿಸುವ ವಿಶೇಷ ಗೌರವ. ಚಿತ್ರೋತ್ಸಾಹಿಗಳಿಗೆ ಸಿಗುವ ವಿಶೇಷ ಮನ್ನಣೆಯೂ ಹೌದು. ಇದರೊಂದಿಗೆ ಚಿತ್ರಾಸಕ್ತರಿಗೆ, ಒಂದೇ ವೇದಿಕೆಯಲ್ಲಿ ನಿರ್ದಿಷ್ಟ ನಿರ್ದೇಶಕರ ಏಳಕ್ಕೂ ಹೆಚ್ಚು ಚಿತ್ರಗಳು ವೀಕ್ಷಿಸಲು ಲಭ್ಯವಾಗಲಿವೆ.

ಈ ಬಾರಿ ಇದೇ ವಿಭಾಗದಡಿ ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿಯವರು ಅಭಿನಯಿಸಿದ ‘ಅಪೂರ್ ಸಂಸಾರ್’, ‘ಸೋನಾರ್ ಖೇಲಾ’, ‘ಘರೆ ಬಾಹಿರೆ’, ‘ಗಣಶತ್ರು’, ‘ಸಾಕ್ಷ ಪರೋಕ್ಷ’, ‘ಮಹಾಪ್ರಿತಿಬಿ’, ‘ಅಸುಖ್’ ಪ್ರದರ್ಶನಗೊಳ್ಳುತ್ತಿವೆ. ಇದೇ ಮೇನಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಚಟರ್ಜಿಯವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.