ಅರವಿಂದ ನಾವಡ

ಪಣಜಿ : ಭಾಷಣಗಳು ಮುಗಿದು ಸಿನಿಮಾಗಳ ಪರ್ವ ಗುರುವಾರ ಆರಂಭವಾದ ಬೆನ್ನಲ್ಲೇ, ಹೆಚ್ಚು ಆಗ್ರಹ ಕೇಳಿಬಂದಿದ್ದು ಭಾರತೀಯ ಸಿನಿಮಾಗಳನ್ನು ಕೈ ಹಿಡಿದು ಮೇಲಕ್ಕೆತ್ತುವವರು ಯಾರು ? ಎಂಬ ಪ್ರಶ್ನೆ.

ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಪ್ರತಿ ವರ್ಷವೂ ನೂರಕ್ಕೂ ಹೆಚ್ಚು ಚಿತ್ರಗಳು ನಿರ್ಮಿತವಾಗುತ್ತಿವೆ. ಆದರೆ, ಅವುಗಳೆಲ್ಲಾ ಎಲ್ಲ ಆಸಕ್ತರಿಗೂ ಲಭ್ಯವಾಗುತ್ತಿಲ್ಲ. ಹೊರದೇಶಗಳಲ್ಲಿ ನಡೆಯುವ ಚಿತ್ರೋತ್ಸವಗಳಲ್ಲೂ ಸರಿಯಾಗಿ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಅಳಲು ಈ ಚಿತ್ರೋತ್ಸವದಲ್ಲೂ ವ್ಯಕ್ತವಾಯಿತು. ಇದರ ಬೆನ್ನಿಗೇ ಭಾರತೀಯ ಸಿನಿಮಾದ ಬಗೆಗಿನ ಬದಲಾಗುತ್ತಿರುವ ಚಿಂತನೆ ಕುರಿತೂ ಅಭಿಪ್ರಾಯ ಕೇಳಿಬಂದಿತು.

ಬುಧವಾರ ಭಾರತೀಯ ಪನೋರಮಾವನ್ನು ಉದ್ಘಾಟಿಸಿದ ಖ್ಯಾತ ನಟ ಓಂಪುರಿ, “ಹಿಂದಿ ಸಿನಿಮಾಗಳಷ್ಟೇ ಭಾರತೀಯ ಸಿನಿಮಾಗಳಲ್ಲ. ವಿವಿಧ ಸಂಸ್ಕೃತಿ, ವಿವಿಧ ಭಾಷೆಗಳ ನೆಲೆಗಟ್ಟಿನಲ್ಲಿ ರೂಪುಗೊಳ್ಳುತ್ತಿರುವ ಚಿತ್ರಗಳಿಗೆ ಸಮಾನವಾದ ಪ್ರದರ್ಶನ ಅವಕಾಶ ಲಭ್ಯವಾಗಬೇಕು. ಸರಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು’ ಎಂದು ಆಗ್ರಹಿಸಿದ್ದರು. ಇದಕ್ಕೆ ಮತ್ತಷ್ಟು ಬೆಂಬಲ ಸಿಕ್ಕಿದ್ದು ಗುರುವಾರ.

ಪನೋರಮಾ ಆಯ್ಕೆ ಸಮಿತಿಯ ಬುದ್ಧದೇವ್ ದಾಸ್ ಗುಪ್ತ ಮಾತನಾಡುತ್ತಿರುವುದು. ಕಟ್ಟೆ ರಾಮಚಂದ್ರ, ಪವನ್ ಕುಮಾರ್ ಮಾನ್ವಿ ಮತ್ತು ಅಜಯ್ ಶರ್ಮ.

ಭಾರತೀಯ ಪನೋರಮಾದ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಬುದ್ಧದೇವ್ ದಾಸ್ ಗುಪ್ತ, “ಈ ವಿಭಾಗದಲ್ಲಿ ಆಯ್ಕೆಯಾಗುವ ಚಿತ್ರಗಳೆಲ್ಲಾ ಕಡೆಗಣಿಸಲ್ಪಡುತ್ತಿವೆ. ಎಲ್ಲೂ ಸರಿಯಾಗಿ ಪ್ರದರ್ಶನಗೊಳ್ಳುತ್ತಿಲ್ಲ. ಜತೆಗೆ ಹೊರದೇಶಗಳಲ್ಲಿ ನಡೆಯುವ ಸಿನಿಮಾ ಉತ್ಸವಗಳಲ್ಲಿ ಇವುಗಳನ್ನು ಕೊಂಡೊಯ್ಯುವತ್ತಲೂ ಕೇಂದ್ರ ಸರಕಾರ ಗಮನಿಸುತ್ತಿಲ್ಲ. ಇದು ಅತ್ಯಂತ ವಿಷಾದನೀಯ’ ಎಂದರು.

ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆ ಮಾಡುವುದೇ ಉತ್ತಮ ಭಾರತೀಯ ಚಿತ್ರಗಳಿಗೆ ಪ್ರೋತ್ಸಾಹ ಸಿಗಬೇಕೆಂಬ ಉದ್ದೇಶದಿಂದ. ಆದರೆ, ಆ ಉದ್ದೇಶ ಈಡೇರುತ್ತಿಲ್ಲ. ಜತೆಗೆ ಈ ವಿಭಾಗದಡಿ ಆಯ್ಕೆಯಾಗುವ ಚಿತ್ರಗಳನ್ನು ಸರಕಾರವೂ ಮೂಸಿ ನೋಡುವುದಿಲ್ಲ. ಹಾಗಾದರೆ, ಐಎಫ್ ಎಫ್ಐ ನಲ್ಲಿ ಆಯ್ಕೆಯಾಗುವ ಈ ಚಿತ್ರಗಳ ಗತಿ ಎಂಥದ್ದು ಎಂಬುದು ಅವರ ಕಳಕಳಿ.

ಇದನ್ನು ಪುಷ್ಟೀಕರಿಸುವ ಅಭಿಪ್ರಾಯ ಅಸ್ಸಾಂ ಚಿತ್ರ ನಿರ್ದೆಶಕ ಜಾನು ಬರುವಾ ಅವರದ್ದು. “ಸರಕಾರ ಒಳ್ಳೆಯ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಕೈಗೊಳ್ಳುವ ನೈಜ ಕ್ರಮದ ಹೊರತು ಬೇರೇನೂ ಉಪಯೋಗವಾಗದು’.

ಅಸ್ಸಾಮಿ ಚಿತ್ರ ನಿರ್ದೇಶಕ ಜಾನು ಬರುವಾ ಪತ್ರಿಕಾಗೋಷ್ಠಿಯಲ್ಲಿ

ಉಳಿದಂತೆ, 148 ರ ಪೈಕಿ ಆಯ್ಕೆಗೊಂಡಿರುವ 20 ಚಿತ್ರಗಳ ಬಗ್ಗೆ ಸದಭಿಪ್ರಾಯ ಇದೆಯೇ ಹೊರತು ತೃಪ್ತಿಯಿಲ್ಲ. ಅವರ ದನಿಯ ಇಂಗಿತವನ್ನು ಗಮನಿಸಿದರೆ, ಭಾರತೀಯ ಸಿನಿಮಾಗಳ ಗುಣಮಟ್ಟ ಕುಸಿಯುತ್ತಿದೆ. ತೆಲುಗಿನ ಪೈಕಿ 8 ಸಿನಿಮಾ ಬಂದರೂ ಒಂದೂ ಆಯ್ಕೆಯಾಗುವ ಮಟ್ಟದಲ್ಲಿರಲಿಲ್ಲ. 48 ಮಲಯಾಳಿಗಳ ಪೈಕಿ ಐದಷ್ಟೇ ಆಯ್ಕೆಯಾಯಿತು. ಉಳಿದ ಭಾಷೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಬಂಗಾಳಿ ಮತ್ತು ಮಲಯಾಳಿ ಭಾಷೆಗಳ ಸಿನಿಮಾಗಳೇ ಪನೋರಮಾವನ್ನು ಆಳುತ್ತಿವೆ. ಇದು ಅವರ ಅಭಿಪ್ರಾಯ. ಚಿತ್ರದ ಗುಣಮಟ್ಟ ಹೊರತಾಗಿ ಇನ್ನೇನೂ ಆಯ್ಕೆಗೆ ಮುಖ್ಯವಾಗದು. ಯಾವುದೇ ರೀತಿಯ ಕೋಟಾ (ಮೀಸಲು) ಕ್ರಮ ಆಯ್ಕೆಗೆ ಸಮ್ಮತವಾದುದಲ್ಲ ಎಂಬ ಅನಿಸಿಕೆ ಆಯ್ಕೆ ಸಮಿತಿಯದ್ದಾಗಿತ್ತು. ಇವರೊಂದಿಗೆ ಸಮಿತಿ ಸದಸ್ಯರಾಗಿದ್ದ ಅಜಯ್ ಶರ್ಮ, ಪವನ್ ಕುಮಾರ್ ಮಾನ್ವಿ, ಕಟ್ಟೆ ರಾಮಚಂದ್ರರೂ ದನಿಗೂಡಿಸಿದರು.

ಜಾನು ಬರುವಾ ತಮ್ಮ ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತಾ, ಸರಕಾರ ಸಿನಿಮಾವನ್ನೂ ಲಾಭ ತರುವ ಉದ್ಯಮವೆಂದು ಪರಿಗಣಿಸಬಾರದು. ಒಂದು ಸಿನಿಮಾ ತಂದುಕೊಡುವ ಲಾಭವನ್ನು ರೂಪಾಯಿಗಳಲ್ಲಿ ಅಳೆಯಲಾಗದು ಎಂದದ್ದು ಹೆಚ್ಚು ಅರ್ಥಪೂರ್ಣ. “ಒಂದೆಡೆ ಸಿನಿಮಾವನ್ನು ಪ್ರೋತ್ಸಾಹಿಸುತ್ತೇನೆ ಎನ್ನುವುದೂ, ಮತ್ತೊಂದೆಡೆ ಲಾಭ ತರಬೇಕೆನ್ನುವುದು ಎರಡೂ ದ್ವಂದ್ವ. ಈ ದ್ವಂದ್ವದಿಂದ ಸಿನಿಮಾ ಮಾಧ್ಯಮಕ್ಕೇನೂ ಲಾಭವಾಗದು’ ಎಂಬುದು ಅವರ ಖಡಾಖಂಡಿತ ಅಭಿಪ್ರಾಯ.

ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವುದು ಮತ್ತು ಅವುಗಳನ್ನು ಮಾರುವುದೂ ದುಸ್ತರವಾದ ಕೆಲಸ. ಅದಕ್ಕೆ ದೇಶದಲ್ಲಿ ಸೂಕ್ತ ಮಾರ್ಗೋಪಾಯಗಳು ರೂಪುಗೊಂಡಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದು ನಾನ್ ಫೀಚರ್ ವಿಭಾಗದ ಅಧ್ಯಕ್ಷರಾಗಿದ್ದ ಎಂ. ಆರ್. ರಾಜನ್. ಭಾರತೀಯ ಸಿನಿಮಾಗಳ ನೆಲೆಗಳೇ ಬದಲಾಗುತ್ತಿವೆ ಎಂದದ್ದು ರಸೂಲ್ ಪೂಕುಟ್ಟಿ.

ಒಟ್ಟಿನಲ್ಲಿ ಸಿನಿಮಾ ಒಂದು ಸಾಮಾಜಿಕ ಹೊಣೆಗಾರಿಕೆಯಳ್ಳ ಮಾಧ್ಯಮ ಎಂಬುದರಿಂದ ಹಿಡಿದು, ಸಿನಿಮಾವನ್ನು ಲಾಭೋದ್ದೇಶದ ಏಕ ದೃಷ್ಟಿಯಿಂದಲೇ ರೂಪಿಸಲಾಗದು ಎಂಬಷ್ಟರ ಮಟ್ಟಿಗೆ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಬುಧವಾರ, ಆದಾಯ ನೆಲೆಯನ್ನು ಕಂಡುಕೊಳ್ಳದೇ ಸಿನಿಮಾ ಮಾಧ್ಯಮವೂ ಉಳಿಯಲಾರದು. ಅದೂ ಸಹ ಆದಾಯ ಗಳಿಸುವತ್ತ ಮುಖ ಮಾಡಬೇಕೆಂದು ಫಿಲ್ಮ್ ಬಜಾರ್ ಉದ್ಘಾಟನೆಯಲ್ಲಿ ಕೇಂದ್ರ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ ಹೇಳಿದ್ದರು. ಈ ಕುರಿತೂ ವಿರೋಧ ಹಲವರ ಹೇಳಿಕೆಗಳಲ್ಲಿ ಕೇಳಿಬಂದಿತು.