ಪಣಜಿ : “ಬದುಕುವುದಕ್ಕಿಂತ ಬದುಕಿನ ಶೋಧನೆ”ಯ ಪ್ರಾಮುಖ್ಯತೆಯನ್ನು ಈ ಚಿತ್ರ ಮನದಟ್ಟು ಮಾಡಿಕೊಟ್ಟಿದೆ ಎಂದು ತಮ್ಮ ಅನುಭವವನ್ನು ವಿವರಿಸಿದವರು ಅಂಗ್ ಲೀ ನಿರ್ದೇಶನದ “ಲೈಫ್ ಆಫ್ ಫೈ” ಚಿತ್ರದ ಇರ್ಫಾನ್ ಖಾನ್.

43 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಚಿತ್ರವನ್ನಾಗಿ ಪ್ರದರ್ಶಿಸಿದ ನಂತರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ” ಈ ಚಿತ್ರದಲ್ಲಿನ ಫೈ ಸಹ ಬದುಕನ್ನು ಶೋಧಿಸಲು ಹೋಗಿ ಬದುಕಿಕೊಂಡ. ಬದುಕನ್ನು ಬಂದ ಹಾಗೆಯೇ ಸ್ವೀಕರಿಸಿದವರು ಉಳಿಯಲಿಲ್ಲ’ ಎಂದರು.

“ಈ ಚಿತ್ರ ವಿಚಿತ್ರವಾದ ಅನುಭವವನ್ನು ನೀಡಿದೆ. ಸ್ಕ್ರಿಪ್ಟ್ ಬರಿದೇ ಓದುವುದಲ್ಲ, ವಿಶುಯಲ್ ಡಿಸ್ಕ್ರಿಪ್ಷನ್ ಎನಿಸಿತು. ನಾವು ಎಲ್ಲರನ್ನೂ ತಲುಪುವ ಉದ್ದೇಶ ಮತ್ತು ಹಂಬಲದಿಂದ ಈ ಚಿತ್ರವನ್ನು ಮಾಡಿದ್ದೇವೆ. ಎಲ್ಲರ ಮೆಚ್ಚುಗೆ ಗಳಿಸೀತು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ನಟಿ ತಬು, “ಇದೊಂದು ಒಳ್ಳೆಯ ಅನುಭವ. ಅಂಗ್ ಲೀ ಅಂಥ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕೆನಿಸಿತ್ತು. ಅದಕ್ಕೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವೆ’ ಎಂದರು.

ಚಿತ್ರದಲ್ಲಿ ಸಿಕ್ಕ ಪಾತ್ರ ಚಿಕ್ಕದಲ್ಲವೇ ಎಂಬ ಪ್ರಶ್ನೆಗೆ, “ಹಾಗೇನೂ ಇಲ್ಲ. ಪಾತ್ರ ಪೋಷಕದ್ದೋ, ನಾಯಕಿಯದ್ದೋ ಎನ್ನುವುದಕ್ಕಿಂತಲೂ ಈ ಕಥೆ ಮತ್ತು ಫೈ(ನಾಯಕ) ಪಾತ್ರಕ್ಕೆ ಬಹಳ ಮಹತ್ವದ ಪೂರಕ ಪಾತ್ರ ನನ್ನದಾಗಿತ್ತು. ಅಮ್ಮನಾಗಿ ಅವನನ್ನು ರೂಪಿಸುವ ಮಹತ್ವದ ಹೊಣೆ ಇತ್ತು. ಹಾಗಾಗಿ ನನಗೆ ಪಾತ್ರದ ಗಾತ್ರಕ್ಕಿಂತಲೂ ಅದರ ಮಹತ್ವ ದೊಡ್ಡದು ಎನಿಸಿದೆ’ ಎಂದರು.

ಹಾಗಾದರೆ ಇನ್ನು ಮುಂದೆಯೂ ಇಂಥ ಪಾತ್ರಗಳನ್ನೇ ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ, “ಭವಿಷ್ಯದ ಸಾಧ್ಯತೆಗಳನ್ನು ಇಲ್ಲಿ ಕುಳಿತು ಹೇಳಲಿಕ್ಕಾಗದು. ನಾನೆಂದೂ ಬದುಕನ್ನು ಹಾಗೆ ಕಂಡವಳಲ್ಲ. ಆ ಹೊತ್ತಿಗೆ ಏನೋ ಅದನ್ನು ನಿರ್ಧರಿಸುವೆ’ ಎಂದು ಉತ್ತರಿಸಿದರು.

ಸಿನಿಮಾದ ನಿರ್ಮಾಪಕ ಡೇವಿಡ್ ವೊಮಾರ್ಕ್, ಕಥೆಯನ್ನು ಇಷ್ಟ ಪಟ್ಟ ಕಾರಣ ಮತ್ತು ಅದಕ್ಕಿದ್ದ ಸಾಧ್ಯತೆಗಳ ಬಗ್ಗೆ ವಿವರಿಸಿದರು. ಕ್ಯಾಸ್ಟಿಂಗ್ ಡೈರೆಕ್ಟರ್ ಎವಿ ಕೌಫ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

Advertisements