‘ಕನಸು, ಅದರಲ್ಲಿ ಮೂಡಿಬರುವ ಆಲೋಚನೆ ಮತ್ತು ಸುದ್ದಿಗಳೇ ಚಿತ್ರ ಮಾಡಲು ನನಗೆ ಪ್ರೇರಣೆ’.
ಇದು ಖ್ಯಾತ ಕೊರಿಯಾ ನಿರ್ದೇಶಕ ಕಿಮ್ ಕಿ ದುಕ್ ಅವರ ಅನಿಸಿಕೆ.

ಅವರ “ಪೀಟಾ” ಸಿನಿಮಾ ಪ್ರದರ್ಶನ ಹಿನ್ನೆಲೆಯಲ್ಲಿ ಮಾತನಾಡುತ್ತಾ, “ಕನಸು ನನಗೆ ಮಹತ್ವದ ಪ್ರೇರಣೆ. ಜತೆಗೆ ವಿಶ್ವಾದ್ಯಂತ ನಡೆಯುವ ಸುದ್ದಿ-ಸಂಗತಿಗಳೂ ನನ್ನ ಚಿತ್ರದ ಕಥಾವಸ್ತುಗಳಾಗಿವೆ’ ಎಂದರಲ್ಲದೇ, ನಿರ್ದಿಷ್ಟ ಪ್ರೇಕ್ಷಕರ ಗುಂಪನ್ನು ಗಮನದಲ್ಲಿಟ್ಟುಕೊಂಡು ನಾನು ಚಿತ್ರವನ್ನು ರೂಪಿಸುವುದಿಲ್ಲ. ಅದರ ಬದಲಿಗೆ ಎಲ್ಲರನ್ನೂ ಮುಟ್ಟುವ ಮಹದಾಸೆಯಿಂದಲೇ ಚಿತ್ರವನ್ನು ಕೈಗೆತ್ತಿಕೊಳ್ಳುವೆ’ ಎಂದು ಹೇಳಲು ಮರೆಯಲಿಲ್ಲ.

“ಕೊರಿಯಾದಲ್ಲೂ ಹಾಲಿವುಡ್ ಪ್ರೇಮಿಗರು ಹೆಚ್ಚಾಗಿದ್ದಾರೆ. ಹಾಗೆಂದು ನಾವೇನೂ ಸುಮ್ಮನಾಗಿಲ್ಲ. ನಮ್ಮಷ್ಟಕ್ಕೆ ಉತ್ತಮ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿದ್ದೇವೆ. ಕೆಲವೊಮ್ಮೆ ನಮ್ಮಂಥವರು ರೂಪಿಸುವ ಸಿನಿಮಾಗಳಿಗೆ ಹಣ ಹೂಡುವವರ ಕೊರತೆ ಎದ್ದು ಕಾಣುತ್ತದೆ’ ಎಂದು ವಿಷಾದಿಸಿದರು.

ಕನಸು ಸಾಕಾರ
“ಚಿತ್ರ ಜಗತ್ತಿಗೆ ಬರುವುದೆಂದರೆ ಸಾಮಾನ್ಯದ್ದಲ್ಲ. ಕೊರಿಯಾದಲ್ಲಿ ಔಪಚಾರಿಕ ಶಿಕ್ಷಣ ಪಡೆಯದ ನಾನು ಹದಿನೈದನೇ ವಯಸ್ಸಿನಿಂದಲೇ ಕಾರ್ಖಾನೆಯ ಕಾರ್ಮಿಕನಾಗಿ ದುಡಿಯುತ್ತಿದ್ದೆ. ಅದು ನನ್ನೊಳಗೆ ಕೀಳರಿಮೆ ಬೆಳೆಸಿತ್ತು. ಆದರೆ, ನನ್ನ 30 ರ ವಯಸ್ಸಿನಲ್ಲಿ ಪ್ಯಾರಿಸ್ಸಿಗೆ ಹೋಗಿ ಕಲಾ ಶಾಲೆಗೆ ಸೇರಿಕೊಂಡೆ. ಅಲ್ಲಿ ಎಂಥವರೂ ತಮ್ಮ ಕನಸನ್ನು ನನಸುಗೊಳಿಸಿಕೊಳ್ಲಲು ಸಾಧ್ಯವೆಂಬುದು ಮನದಟ್ಟಾಯಿತು’ ಎಂದು ನಮ್ಮ ಸಿನಿಮಾ ಪ್ರಯಾಣವನ್ನು ವಿವರಿಸಿದರು.

ಕಿಮ್ ಕಿ ದುಕ್ ಕೊರಿಯಾದ ಅತ್ಯಂತ ಪ್ರಸಿದ್ಧ ನಿರ್ದೇಶಕ. ಕೊರಿಯಾದಲ್ಲಿ ಸ್ವಲ್ಪ ಅವಗಣನೆಗೆ ಗುರಿಯಾಗಿದ್ದರೂ, ಉಳಿದಂತೆ ಜಾಗತಿಕ ಸಿನಿಮಾ ಜಗತ್ತಿನಲ್ಲಿ ಸಾಕಷ್ಟು ಪ್ರಖ್ಯಾತರು. 1990-92 ರಲ್ಲಿ ಪ್ಯಾರಿಸ್ಡಿನಲ್ಲಿ ಕಲಾಶಾಲೆಯನ್ನು ಕಲಿತ ಅವರು, ಆ ಸಂದರ್ಭದಲ್ಲೇ ಸ್ಕ್ರೀನ್ ಪ್ಲೇ ಸ್ಕೂಲಿನಿಂದ ಅತ್ಯುತ್ತಮ ಚಿತ್ರಕಥಾಕಾರ ಎಂಬ ಪ್ರಶಸ್ತಿ ಪಡೆದವರು. ಬಳಿಕ 1996 ರಲ್ಲಿ “ಎಗೋ” ಸಿನಿಮಾ ಮೂಲಕ ರಂಗವನ್ನು ಪ್ರವೇಶಿಸಿ ಇದುವರೆಗೆ 18 ಸಿನಿಮಾಗಳನ್ನು ರೂಪಿಸಿದ್ದಾರೆ.

ಕಿಮ್ ಕಿ ದುಕ್ ರ ಸಿನಿಮಾದಲ್ಲಿ ಹಿಂಸೆ ಮತ್ತು ನೋವು ಹೆಚ್ಚಿರುತ್ತದೆ. ಅದನ್ನು ನೋಡಲು ಅಸಹನೀಯವೆನಿಸುತ್ತದೆ ಎಂಬ ಅಭಿಪ್ರಾಯವಿದೆ. ಆದರೆ, ಅದಕ್ಕೆ ಕಿಮ್ ಕಿ ದುಕ್, ಇದು ಇರುವ ನೈಜತೆ ಎನ್ನುತ್ತಾರೆ.

Advertisements