ಅರವಿಂದ ನಾವಡ

ಪಣಜಿ : ಭಾಷಣ ಹೆಚ್ಚಾಯಿತು, ಸಿನಿಮಾ ಕಡಿಮೆಯಾಯಿತು !
ಜತೆಗೆ ಭಾರತೀಯ ಸಿನಿಮಾವೆಂದರೆ ಬರಿದೇ ಹಿಂದಿ ಎಂಬುದೂ ಮತ್ತೆ ಸಾಬೀತಾಯಿತು.
ಇದು 43 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಮೊದಲ ದಿನದ ರೌಂಡಪ್.

ನ. 20 ರಂದು ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕರೂ, ಚಿತ್ರೋತ್ಸಾಹಿಗಳಲ್ಲಿ ಉತ್ಸಾಹ ಕಂಡುಬಂದದ್ದು ನ. 21 (ಬುಧವಾರ) ದಿಂದಲೇ. ಹಿಂದಿನ ದಿನದಿಂದಲೇ ಎಲ್ಲರೂ ಪಟ್ಟಿ ಮಾಡಿಕೊಂಡು, ಸಿನಿಮಾಗಳ ಟಿಕೆಟ್ ಹಿಡಿದು ಆಯಾ ಚಿತ್ರಮಂದಿರಗಳ ಎದುರು ನಿಂತರೆ, ಸಂಘಟಕರಿಂದ ಬರುತ್ತಿದ್ದ ಉತ್ತರ ಒಂದೇ, “ಒಂದು ಗಂಟೆ ಕಾಯಬೇಕು” !

ಅದರಲ್ಲೂ ಭಾರತೀಯ ಪನೋರಮಾ ಇತ್ಯಾದಿಗಳನ್ನು ನೋಡಲು ಇಷ್ಟಪಟ್ಟವರಿಗಂತೂ ನಿರಾಶೆ.
ಆ ಲೆಕ್ಕದಲ್ಲಿ ಬುಧವಾರ ಹಲವು ಉದ್ಘಾಟನೆಗಳ ಸುರಿಮಳೆ. ಎನ್ಎಫ್ ಡಿಸಿ ಯ ಫಿಲ್ಮ್ ಬಜಾರ್, ದಾದಾಸಾಹೇಬ್ ಫಾಲ್ಕೆ ನೆನಪಿನ ನಾಟಕ ಪ್ರದರ್ಶನ, ಭಾರತೀಯ ಪನೋರಮಾ ಉದ್ಘಾಟನೆ..ಹೀಗೆ ಹಲವು. ಹಾಗಾಗಿ ಸಿನಿಮಾ ನೋಡಲು ಹೋದವರೆಲ್ಲಾ ಭಾಷಣವನ್ನು ಸಹಿಸಿಕೊಳ್ಳಲೇಬೇಕಾಯಿತು.

ಭಾರತೀಯ ಪನೋರಮಾ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಸಮಾರಂಭ ಶುರುವಾಯಿತು. ನಂತರ ಭಾಷಣಗಳೆಲ್ಲಾ ಮುಗಿದು ನಿಜವಾದ ಶೋ ಆರಂಭವಾಗುವಾಗ ಒಂದೂ ಕಾಲುಗಂಟೆ ತಡ. ಹಾಗಾಗಿ ಪನೋರಮಾದ ಉದ್ಘಾಟನೆಯ ಚಿತ್ರ “ಸೆಲ್ಯೂಲಾಯಿಡ್ ಮ್ಯಾನ್” (ನಾನ್ ಫೀಚರ್) ನ್ನು ಪೂರ್ತಿ ನೋಡಿದವರು ಬಹಳ ಮಂದಿ ಇರಲಿಲ್ಲ. ನಂತರ ಹಲವು ಪ್ರದರ್ಶನಗಳ ಸಮಸ್ಯೆ ಇದೇ. ಸಂಜೆ ಕಲಾಮಂದಿರ ದಲ್ಲಿದ್ದ ಎಂ.ಎಸ್. ಸತ್ಯು ವಿನ್ಯಾಸ ಮಾಡಿದ ಫಾಲ್ಕೆಯವರ ಕುರಿತ ನಾಟಕ ನೋಡಿ ಮತ್ತೆ ಪನೋರಮಾಕ್ಕೆ ಬಂದರೆ ಅದೇ ಉತ್ತರ. ಒಂದೂವರೆ ಗಂಟೆ ಕಾಯಬೇಕು ! ಆ ಸಿನಿಮಾಗಳು ಶುರುವಾಗುವಾಗಲೇ 9. 30 ಯನ್ನು ಮೀರುವ ಸಾಧ್ಯತೆ ಇತ್ತು. ಹಾಗಾಗಿ ಅಲ್ಲಿಯವರೆಗೆ ಕಾದದ್ದು ಕಡಿಮೆ.

ಮರೆತುಬಿಟ್ಟರು
ಭಾರತೀಯ ಪನೋರಮಾದಡಿ ಉದ್ಘಾಟನೆಗೆಂದು ನಮೂದಿಸಿದ ಚಿತ್ರ ಎರಡು. ಫೀಚರ್ ವಿಭಾಗದಡಿ (ಕಥಾ) ಅಸ್ಸಾಮಿ ಚಿತ್ರ “ಬಂಧೋನ್” (ಜಾನು ಬರುವಾ) ಹಾಗೂ ನಾನ್ ಫೀಚರ್ ನಡಿ (ಕಥೇತರ) ‘ಸೆಲ್ಯೂಲಾಯಿಡ್ ಮ್ಯಾನ್ “. ಸೆಲ್ಯೂಲಾಯಿಡ್ ಮ್ಯಾನ್ ಚಿತ್ರ ಮುಗಿದ ಮೇಲೆ ಬಂಧೋನ್ ಮುಂದುವರಿಯಬೇಕಿತ್ತು. ಹಾಗೂ ಎರಡೂ ಚಿತ್ರಗಳ ನಿರ್ದೇಶಕರನ್ನು ವೇದಿಕೆಗೆ ಕರೆಸಲಾಗಿತ್ತು. ಆದರೆ, ಆದರಿಸಿದ್ದು ಮಾತ್ರ ನಾನ್ ಫೀಚರ್ ವಿಭಾಗದ ಬಗ್ಗೆ ಮಾತ್ರ. ನಿರ್ದೇಶಕ ಜಾನು ಬರುವಾ ಅವರನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದರು. ಜತೆಗೆ ಅವರ ಚಲನಚಿತ್ರ ಪ್ರದರ್ಶನದ ಬಗ್ಗೆಯೂ ಯಾವ ಮಾಹಿತಿಯೂ ಇರಲಿಲ್ಲ.

ಬದಲಾಯಿತು
ನಂತರ ಇದ್ದಕ್ಕಿದ್ದಂತೆ ಸೆಲ್ಯುಲಾಯಿಡ್ ಮ್ಯಾನ್ ಶುರುವಾಗುವಾಗ ನಿರೂಪಕರು “ಬಂಧೋನ್”ಚಿತ್ರದ ಸಮಯ ಮತ್ತು ಸ್ಥಳ ಬದಲಾಗಿದೆ ಎಂದು ಪ್ರಕಟಿಸಿದರು. ಈ ಮಾಹಿತಿ ಬಹಳಷ್ಟು ಮಂದಿಗೆ ಸಿಕ್ಕಿರಲೇ ಇಲ್ಲ. ಕೊನೆಗೆ 3. 30 ಗೆ ಬೇರೆ ಚಿತ್ರ ಮಂದಿರದಲ್ಲಿ ಸ್ವತಃ ಜಾನು ಬರುವಾ ಅವರು ತಮ್ಮ ತಂಡವನ್ನು ಪರಿಚಯ ಮಾಡಿಕೊಡುವ ಸಂದರ್ಭ ಉದ್ಭವಿಸಿತು. ಉತ್ಸವ ನಿರ್ದೇಶಕ ಶಂಕರ್ ಮೋಹನ್ ಬಿಟ್ಟರೆ ಬೇರಾರೂ ಇರಲಿಲ್ಲ. ಅವರೇ ಎಲ್ಲರಿಗೂ ಪುಷ್ಪಗುಚ್ಛ ಕೊಟ್ಟು ಗೌರವಿಸಿದರು. ಅದಷ್ಟೇ ಕಲಾವಿದರಿಗೆ ಸಿಕ್ಕಿದ್ದು. ಹಿಂದಿಯನ್ನು ಹೊರತುಪಡಿಸಿ ಉಳಿದವರ ಬಗ್ಗೆ ಯಾಕೆ ಈ ಅವಗಣನೆ ಎಂಬ ಪ್ರಶ್ನೆಯೂ ಕೇಳಿಬಂದಿತು.

ಫಾಲ್ಕೆ ನಾಟಕ
ಭಾರತೀಯ ಸಿನಿಮಾ ಶತಮಾನೋತ್ಸವದ ನೆನಪಿನಲ್ಲಿ ಕಲಾ ಮಂದಿರದಲ್ಲಿ ಫಾಲ್ಕೆ ಕುರಿತ ನಾಟಕದ ಕಿರುಭಾಗ ಪ್ರದರ್ಶನಗೊಂಡಿತು. ಅವರ ಮೊಮ್ಮಗಳಾದ ಸರಯೂ ಅವರು ಬರೆದ ಕೃತಿಯ ಆಯ್ದ ಭಾಗವನ್ನು ರಂಗಭೂಮಿಯ ಮಹಮ್ಮದ್ ಅಲಿ ಬೇಗ್ ಮತ್ತು ಲಿಲೆಟ್ ದುಬೆ ಈ ಭಾಗವನ್ನು ಪ್ರಸ್ತುತಪಡಿಸಿದರು. ರಂಗಸಜ್ಜಿಕೆಯ ವಿನ್ಯಾಸವನ್ನು ಎಂ.ಎಸ್. ಸತ್ಯು ವಹಿಸಿದ್ದರು. ಇದೂ ಸಹ ಭಾರವಾಗಿದ್ದು ಅಧಿಕಾರಿಗಳ ಭಾಷಣದಿಂದಲೇ. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಿರ್ದೇಶಕ ಅನುರಾಗ್ ಬಸು, “ಭಾರತೀಯ ಸಿನಿಮಾದ ನಾವು ಕೀಳರಿಮೆಯಿಂದ ಕುಗ್ಗಬೇಕಿಲ್ಲ. ಭಾರತೀಯ ಸಿನಿಮಾ ಬಹಳ ಪುಟಿದೇಳುತ್ತಿದೆ. ಹಾಲಿವುಡ್ ನವರೂ ನಮ್ಮ ಸಿನಿಮಾಗಳ ಬಿಡುಗಡೆಯ ದಿನಾಂಕ ಗಮನಿಸಿ ತಮ್ಮ ಸಿನಿಮಾಗಳ ಬಿಡುಗಡೆಯ ದಿನವನ್ನು ನಿರ್ಧರಿಸುವ ಸಮಯ ಶೀಘ್ವವೇ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರೀ ಬಾಲಿವುಡ್ ಮಂದಿ !
ಈ ಅಸಮಾಧಾನ ಒಬ್ಬರದಲ್ಲ ; ಹಲವರದ್ದು. ಭಾರತೀಯ ಪನೋರಮಾವನ್ನು ಉದ್ಘಾಟಿಸಿದ ಹಿರಿಯ ನಟ ಓಂಪುರಿ, “ಭಾರತೀಯ ಸಿನಿಮಾವೆಂದರೆ ಬರಿದೇ ಹಿಂದಿಯದ್ದಲ್ಲ. ವಿವಿಧ ಭಾಷೆ, ಸಂಸ್ಕೃತಿಗಳಿರುವ ನಮ್ಮ ದೇಶದ ಹಲವು ಭಾಷೆಗಳ ಸಿನಿಮಾಗಳ ಒಟ್ಟೂ ಗುಚ್ಛ ಭಾರತೀಯ ಸಿನಿಮಾ” ಎಂದಿದ್ದರು. ಆ ಮಾತು ಅಕ್ಷರಶಃ ನಿಜವಾಗಿತ್ತು. ಆದರೆ, ಇದರ ಬೆನ್ನಿಗೇ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ, “ಆದಾಯ ತರುವ ಮಾದರಿಯನ್ನು ಅನುಸರಿಸದೇ ಯಾವುದೇ ಸಿನಿಮಾ ಉದ್ಯಮ ಯಶಸ್ವಿಯಾಗದು” ಎಂದು ಫಿಲ್ಮ್ ಬಜಾರ್ ಉದ್ಘಾಟನೆಯಲ್ಲಿ ಹೇಳಿದ್ದರು. ಬಹುಶಃ ಎಲ್ಲ ಕಾರ್ಯಕ್ರಮಗಳ ಉದ್ಘಾಟನೆಗೆ ವ್ಯಕ್ತಿಗಳನ್ನು ಗೊತ್ತು ಮಾಡುವ ಸಂದರ್ಭದಲ್ಲಿ ಬಾಲಿವುಡ್ ಮಾತ್ರ ಲಾಭದಾಯಕವಾಗಿದೆಯೆಂಬ ಅಭಿಪ್ರಾಯ ಸಂಘಟಕರಲ್ಲಿದ್ದಂತೆ ತೋರಿಬರುತ್ತಿತ್ತು.

ಭಾರತೀಯ ಸಿನಿಮಾ ನೂರನೇ ವರ್ಷದ ಸಂದರ್ಭದಲ್ಲಿ ನಡೆಯುವ ಉತ್ಸವಕ್ಕೆ ಭಾರತೀಯ ಸಿನಿಮಾವನ್ನು ಕಟ್ಟಿದ ಹಲವು ಮಂದಿ ಹಿರಿಯರಿದ್ದರು. ಅದನ್ನೆಲ್ಲಾ ಬಿಟ್ಟು ಅಕ್ಷಯ್ ಕುಮಾರ್ ರನ್ನು ಕರೆದದ್ದರ ಬಗ್ಗೆಯೂ ಬಹಳ ಅಸಮಾಧಾನ ವ್ಯಕ್ತವಾಗಿತ್ತು. ಇಡೀ ಭಾರತೀಯ ಚಿತ್ರರಂಗದಲ್ಲಿ ಒಬ್ಬರೂ ಸಿಗಲಿಲ್ಲವೇ ಎಂಬುದು ಹಲವರ ಪ್ರಶ್ನೆ. ಇದಲ್ಲದೆ, ಉಳಿದ ಸಮಾರಂಭಕ್ಕೂ ಅತಿಥಿಗಳನ್ನಾಗಿ ಕರೆದದ್ದು ಬಾಲಿವುಡ್ ಮಂದಿಗಳನ್ನೇ. ಇದು ಬಹಳ ಮಂದಿಗೆ ಬೇಸರ ತರಿಸಿತು. ದಕ್ಷಿಣ ಭಾರತದ ಮಂದಿಗಂತೂ ಅವಕಾಶವಿಲ್ಲವೇ ಇಲ್ಲ. ಇಡೀ ಭಾರತೀಯ ಸಿನಿಮಾವನ್ನು ಬಾಲಿವುಡ್ ಆಕ್ರಮಿಸಿದಂತಿತ್ತು.

Advertisements