ಗೋವಾದಲ್ಲಿ ನವೆಂಬರ್ 20 ರಿಂದ 30 ರವರೆಗೆ ನಡೆಯಲಿರುವ 43 ನೇ ಆಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಗಿರೀಶ್ ಕಾಸರವಳ್ಳಿ ನಿರ್ದೇಶನದ “ಕೂರ್ಮಾವತಾರ’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

“ಭಾರತೀಯ ಪನೋರಮಾ’ ವಿಭಾಗದಲ್ಲಿ ಒಟ್ಟು ೨೦ ಚಲನಚಿತ್ರಗಳು ಪ್ರದರ್ಶಿತಗೊಳ್ಳಲಿವೆ. ಕನ್ನಡದ ಪೈಕಿ ಇದೊಂದೇ ಚಲನಚಿತ್ರ ಆಯ್ಕೆಯಾಗಿದೆ. ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿರುವ ಈ ಚಿತ್ರ ರಾಜ್ಯದಲ್ಲಿ ಇನ್ನೂ ತೆರೆ ಕಾಣಬೇಕಿದೆ.

ಉಳಿದಂತೆ “ಬಂದೋನ್’ (ಅಸ್ಸಾಮಿ-ಜಾನುಬರುವಾ), ಶಬ್ದೊ (ಬಂಗಾಳಿ-ಕೌಶಿಕ್ ಗಂಗೂಲಿ), ಚಿತ್ರಾಂಗದಾ(ಬಂಗಾಳಿ-ಋತುಪರ್ಣ ಘೋಷ್), ಏಳಾರ್ ಚಾರ್ ಅಧ್ಯಾಯ (ಬಂಗಾಳಿ-ಬಪ್ಪದಿತ್ಯ ಬಂಡೋಪಾಧ್ಯಾಯ), ದೇಶ್ವಾ(ಭೋಜ್‌ಪುರಿ-ನಿತಿನ್ ಚಂದ್ರ), ಬ್ಯಾರಿ(ಬ್ಯಾರಿ-ಸುವೀರನ್), ಲೆಸನ್ಸ್ ಇನ್ ಫಾರ್ಗೆಟಿಂಗ್ (ಇಂಗ್ಲಿಷ್-ಉನ್ನಿ ವಿಜಯನ್), ಗಂಗೂಬಾಯಿ ಹಿಂದಿ ಪಾರ್ಟಲಿ (ಮರಾಠಿ-ಪ್ರಿಯಾ ಕೃಷ್ಣಸ್ವಾಮಿ), ಐ.ಡಿ ಹಿಂದಿ (ಇಂಗ್ಲಿಷ್-ಕಮಲ್ ಕೆ.ಎಂ), ದಿಗಂತ್(ಕೊಂಕಣಿ-ಧ್ಯಾನೇಶ್ ಮೋಘೆ), ಆಕಾಂಕ್ಷಿತೆ ನಿರಂ(ಮಲಯಾಳಂ-ಡಾ. ಬಿಜು), ಭೂಮಿಯುದೆ ಅವಕಾಸಿಕಲ್ (ಮಲಯಾಳಂ-ಟಿ.ವಿ.ಚಂದ್ರನ್), ಓಝಿಮುರಿ(ಮಲಯಾಳಂ-ಮಧುಪಾಲ್), ಇಥ್ರಮಾತ್ರಂ(ಮಲಯಾಳಂ-ಕೆ.ಗೋಪಿನಾಥನ್), ಮಂಜಾದಿಕುರು(ಮಲಯಾಳಂ-ಅಂಜಲಿ ಮೆನನ್), ಸಂಹಿತಾ (ಮರಾಠಿ-ಸುಮಿತ್ರಾ ಭಾವೆ ಮತ್ತು ಸುನಿಲ್ ಸುಖ್ತಂಕರ್), ಡಿಯೋಲ್(ಮರಾಠಿ-ಉಮೇಶ್ ವಿನಾಯಕ್ ಕುಲಕರ್ಣಿ), ಅನ್ಹೆ ಘೋರೆ ದಾ ದಾನ್(ಪಂಚಾಬಿ-ಗುರ‍್ವಿಂದರ್ ಸಿಂಗ್), ವಗಾಯೀ ಸೋಡಾ(ತಮಿಳು-ಎ.ಸರ‍್ಕುಣಮ್) ಇವು ಪ್ರದರ್ಶನಗೊಳ್ಳಲಿರುವ ಉಳಿದ ಚಲನಚಿತ್ರಗಳು. ಇದಲ್ಲದೇ, ಚಲನಚಿತ್ರೇತರ ವಿಭಾಗದಲ್ಲಿ ಸುಮಾರು೧೯ ವಿವಿಧ ಭಾರತೀಯ ಭಾಷೆಯ ದೃಶ್ಯಕೃತಿಗಳು ಪ್ರದರ್ಶನಗೊಳ್ಳಲಿವೆ.

ಉತ್ಸವವನ್ನು ನ. ೨೦ ರಂದು ಖ್ಯಾತನಟ ಅಕ್ಷಯ್ ಕುಮಾರ್ ಉದ್ಘಾಟಿಸುವರು. ಗೋವಾದ ರಾಜಧಾನಿ ಪಣಜಿಯಲ್ಲಿರುವ ಕಲಾ ಅಕಾಡೆಮಿಯ ದರಾಯ ಕಲಾಸಂಗಮ್ ಮತ್ತು ದೀನನಾಥ್ ಮಂಗೇಶ್ಕರ್ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ.
ಒಟ್ಟು ಹನ್ನೊಂದು ದಿನಗಳ ಉತ್ಸವದಲ್ಲಿ ೨೦೦ ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ವಿಭಾಗದಲ್ಲಿನ ಸ್ಪರ್ಧೆಯಲ್ಲದೇ, ಜಾಗತಿಕ ಸಿನಿಮಾ, ವಿದೇಶಿ ನಿರ್ದೇಶಕರ ಹಲವು ಅತ್ಯುತ್ತಮ ಸಿನಿಮಾಗಳು (ವಾಚಿಕೆ ಮಾದರಿ), ನೆನಪು, ನಿರ್ದಿಷ್ಟ ದೇಶಗಳ ಮೇಲೆ ಬೆಳಕು ಚೆಲ್ಲುವಂಥ ಸಿನಿಮಾಗಳು, ಭಾರತೀಯ ಪನೋರಮಾ, ಭಾರತೀಯ ನಿರ್ದೇಶಕರ ವಾಚಿಕೆ ಮತ್ತು ಸ್ಮರಣೆ, ತಾಂತ್ರಿಕ ಕಾರ‍್ಯಾಗಾರಗಳು ನಡೆಯಲಿವೆ.
ಭಾರತೀಯ ಸಿನಿಮಾ ನೂರು ವರ್ಷದ ನೆನಪಿಗೆ “ಶತಮಾನೋತ್ಸವ ಪ್ರಶಸ್ತಿ’ ಪ್ರಶಸ್ತಿ (ಬೆಳ್ಳಿ ಪಾರಿತೋಷಕ, ಹತ್ತು ಲಕ್ಷ ರೂ. ನಗದು)ಯನ್ನು ನೀಡಲಾಗುತ್ತಿದೆ.


ಈ ಬಾರಿಯ ಉತ್ಸವದ ಉದ್ಘಾಟನಾ ಚಲನಚಿತ್ರವಾಗಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಂಗ್ ಲೀ ನಿರ್ದೇಶಿಸಿದ “ಲೈಫ್ ಆಫ್ ಪಿ’ ಪ್ರದರ್ಶನಗೊಳ್ಳಲಿದೆ. ಇದು ವಿಶ್ವಾದ್ಯಂತ ನವೆಂಬರ್ ೨೩ ರಂದು ತೆರೆ ಕಾಣಲಿದೆ.