ಶ್ರೀಷ ಉಡುಪ ಅವರು ಕಾಂಜೀವರಂ ಚಿತ್ರದ ಕುರಿತು ಒಂದು ವಿಸ್ತೃತ ಚರ್ಚೆಗೆ ಸಾಧ್ಯವಾಗಬಹುದಾದದ್ದನ್ನು ಇಲ್ಲಿ ಬರೆದಿದ್ದಾರೆ. ಒಂದು ಚಿತ್ರದ ಸಾಧ್ಯತೆಯನ್ನು ಅಳೆಯುವ ಪ್ರಯತ್ನವಿದು. ಓದಿ, ಅಭಿಪ್ರಾಯಿಸಿ.

ಕಾಂಜೀವರಂ ದೇಶಭಕ್ತಿಯ ಯಾವುದೇ ಸಂಕಥನವನ್ನು ನಿರ್ಮಿಸುವುದಿಲ್ಲ.

ನೇಯ್ಗೆಯ ಸುತ್ತ ಹೆಣೆದುಕೊಳ್ಳುತ್ತಾ ಹೋಗುವ ಕಥನ ಸ್ವಾತಂತ್ರ್ಯದ ಪಾರಿಭಾಷಿಕ ಅಂಚಿನಲ್ಲಿಯೆ ಸಾಗುತ್ತಾ ನೇಕಾರನೊಬ್ಬನ ಬದುಕನ್ನು ಕಟ್ಟಿಕೊಡುತ್ತದೆ. ಅಂತ್ಯದಲ್ಲಿ ದುರಂತವಿದೆ. ಅದು ಇತಿಹಾಸದ ಪಾಲು; ದಾಖಲುಗೊಳ್ಳುವುದು ಬಹಳ ಕಡಿಮೆ. ಭಾರತದ ಸ್ವಾತಂತ್ರ್ಯ ಹೋರಾಟದ ನಿರೂಪಣೆಯಲ್ಲಿ ಇಂಥ ಹಲವು ಮೌನಗಳಿವೆ. ಜನಪ್ರಿಯ ಮಾಧ್ಯಮವಾದ ಸಿನಿಮಾ ಜನತೆಯ ಬದುಕನ್ನು ಒಳಗೊಳ್ಳುವ ಪ್ರಯತ್ನದಲ್ಲಿ ಇತಿಹಾಸ ನಿರೂಪಣೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಗತದ ನಿರೂಪಣೆಗೆ ಒದಗಿಬರುವುದು ದುರಂತದ ಮಾದರಿ. ಭಾರತೀಯ ಸಿನಿಮಾಗಳ ಸಿದ್ಧಮಾದರಿಯ ಅಂತ್ಯವನ್ನು ಮೀರುವ ಕತೆಯಲ್ಲಿ ನಾಯಕ ಮತ್ತೆ ಜೈಲಿಗೆ ಮರಳುತ್ತಾನೆ. ಆತ್ಯಂತಿಕವಾಗಿ ಇದು ಸಮಕಾಲೀನ ರಾಜಕೀಯ ಕಥನ.

ಕಾಂಜೀವರಂ ಸೀರೆಯನ್ನು ನೇಯುವ ಆ ನೇಕಾರರ‍್ಯಾರೂ ಕಾಂಜೀವರಂ ಬಟ್ಟೆಯನ್ನು ತಾವು ತೊಡುವುದಿಲ್ಲ. ತಾವು ನೇಯ್ದಿದ್ದನ್ನೆಲ್ಲಾ ದಣಿಗಳಿಗೆ ಒಪ್ಪಿಸಿ ದಿನಗೂಲಿ ಪಡೆದು ಹಿಂತಿರುಗುವುದೇ ಬದುಕಿನ ಸಾರ್ಥಕ್ಯವಾಗಿರುವಾಗ ತನ್ನ ಮಗಳ ಹುಟ್ಟಿನ ಸಂದರ್ಭದಲ್ಲಿ ನಾಯಕ ಪ್ರಮಾಣ ಮಾಡುತ್ತಾನೆ: ಮಗಳು ತನ್ನ ಮದುವೆಯ ದಿನ ಕಾಂಜೀವರಂ ರೇಷ್ಮೆ ಸೀರೆ ಉಟ್ಟುಕೊಳ್ಳುತ್ತಾಳೆ. ದುರಂತದ ಉಗಮವಿರುವುದು ಇಲ್ಲಿ.

ಇದಕ್ಕಿಂತ ಸುಮಾರು ಒಂದು ದಶಕದ ಮೊದಲು ಮಣಿರತ್ನಂ ನಿರ್ದೇಶನದಲ್ಲಿ ಬಂದ ತಮಿಳು ಚಿತ್ರ ರೋಜಾ೨. ಭಯೋತ್ಪಾದನೆಯ ಪ್ರಶ್ನೆಯನ್ನು ಸಿನಿಮಾದ ಪಡಸಾಲೆಯೊಳಕ್ಕೆ ತಂದ ಪ್ರಯತ್ನ ಭಾರತೀಯ ಸಿನಿಮಾ ರಂಗದಲ್ಲಿ ಒಂದು ತೆರನಾಗಿ ಟ್ರೆಂಡ್ ಸೆಟ್ಟರ್ ಆಗಿದ್ದೂ ನಿಜ. ದಕ್ಷಿಣದ ತುದಿಯ ತಮಿಳುನಾಡಿನಲ್ಲಿ ನಿಂತು ಕಾಶ್ಮೀರಕ್ಕೆ ಕೈಚಾಚಿ ದೇಶಭಕ್ತಿಯ ಸಂಕಥನವನ್ನು ಕಥಿಸಲು ತೊಡಗುವ ರೋಜಾದಲ್ಲಿರುವ ಉಗ್ರವಾದವನ್ನು ಪ್ರತಿರಾಷ್ಟ್ರೀಯತಾವಾದವನ್ನಾಗಿ ಸಹ ನೋಡಲು ಸಾಧ್ಯ. ಹಿಂದಿ ಅಥವಾ ತೆಲುಗಿಗೆ ಡಬ್ ಆದ ರೋಜಾಕ್ಕೆ ದೊರೆಯದ ತಮಿಳು ರಾಷ್ರೀಯತಾವಾದದ ಆಯಾಮ ಮೂಲ ತಮಿಳಿನ ರೋಜಾಕ್ಕಿದೆ.

ಮಧ್ಯಮವರ್ಗದಿಂದ ಬಂದಿರುವ ನಾಯಕ ಭಾರತ ಸರಕಾರದಡಿ ಬೇಹು ಸಂಕೇತಗಳನ್ನು ಅರ್ಥೈಸುವವನು. ಕರ್ತವ್ಯದ ಮೇಲಿದ್ದಾಗ ಉಗ್ರಗಾಮಿಗಳಿಂದ ಅಪಹೃತನಾಗುತ್ತಾನೆ. ಉಗ್ರರ ಜೊತೆ ಆಗಾಗ ನಡೆಯುವ ಸಂಭಾಷಣೆಗಳಲ್ಲಿ ರಾಷ್ಟ್ರ- ರಾಷ್ಟ್ರೀಯತೆ- ರಾಷ್ಟ್ರೀಯ ಭದ್ರತೆ ಕುರಿತಾಗಿ ಚರ್ಚಿಸುತ್ತಾನೆ. ರಾಷ್ಟ್ರೀಯತಾವಾದ- ಪ್ರತಿರಾಷ್ಟ್ರೀಯತಾವಾದಗಳು ಮುಖಾಮುಖಿ ಗೊಳ್ಳುತ್ತವೆ. ಪ್ರಭುತ್ವದ ಜೊತೆಗಿನ ಸಂಘರ್ಷದಲ್ಲಿ ಉಗ್ರರು ಸೋಲುತ್ತಾರೆ. ನಾಯಕನ್ನು ಬಿಡಿಸಿಕೊಳ್ಳುವಲ್ಲಿ ಪತ್ನಿ ಅಂತಿಮವಾಗಿ ಯಶಸ್ವಿಯಾಗಿತ್ತಾಳೆ. ಪೂರ್ಣತೆಯ, ಸುಖಾಂತ್ಯದ ಮಾದರಿ ಇದು.

ಮಹತ್ವಾಕಾಂಕ್ಷಿ ಚಿತ್ರವೊಂದು ಪ್ರಕಟ ಪಠ್ಯದ ಜೊತೆಗೆ ಸುಪ್ತ ಪಠ್ಯಗಳನ್ನೂ ನಿರ್ಮಿಸುತ್ತಿರುತ್ತದೆ. ಚಿತ್ರದ ಆಂತರಿಕ ಲಯಕ್ಕೆ ಹೊಂದಿಕೊಂಡ ಹಾಗೆ ಇವು ಮಾಂಟಾಜ್ ರೂಪದಲ್ಲಿ ಒಂದು ಫ್ರೇಮ್‌ನೊಳಗಿನ ಇಮೇಜ್‌ಗಳಲ್ಲಿ ಅಥವಾ ಒಂದಷ್ಟು ಫ್ರೇಮ್‌ಗಳು ಕೂಡಿ ನಿರ್ಮಿಸುವ ನಿರ್ದಿಷ್ಟ ದೃಶ್ಯಗಳಲ್ಲಿರಬಹುದು; ಅಥವಾ ಪ್ರಕಟ ಪಠ್ಯಕ್ಕೆ ಸಮಾನಾಂತರವಾಗಿ ಸರಾಗ ಹರಿವನ್ನು ಚಿತ್ರದುದ್ದಕ್ಕೂ ಹೊಂದಿರಬಹುದು. ಪ್ರಕಟ ಪಠ್ಯ ನಿರ್ಮಿಸುವ ಸಾಮಾನ್ಯೀಕೃತ ಮಹಾಕಥನಗಳನ್ನು ಸುಪ್ತ ಪಠ್ಯಗಳು ತುಂಡರಿಸಿ ಕೆಲವೊಮ್ಮೆ ವ್ಯತಿರಿಕ್ತ ಕಥನದಲ್ಲಿ ತೊಡಗಿಕೊಳ್ಳುತ್ತವೆ. ಚಿತ್ರದ ಮಹತ್ವಾಕಾಂಕ್ಷೆ ಮಾಧ್ಯಮದ ಮಿತಿಯನ್ನು ಮೀರುವುದು ಹೀಗೆ.
ರೋಜಾದ ರಾಜಕೀಯ ಸಂಕಥನ ನಿರ್ಮಿತಿಗೊಳ್ಳುವುದು ಮಧ್ಯಮವರ್ಗದ ಒಂದು ಸಣ್ಣ ಕುಟುಂಬದಿಂದ. ನಾಯಕನ ಉನ್ನತ ಶಿಕ್ಷಣ, ಒಳ್ಳೆಯದೊಂದು ಕೆಲಸವನ್ನು ಸೇರಿಕೊಳ್ಳಬೇಕೆಂಬ ಹಂಬಲ, ದೇಶಸೇವೆ ಮಾಡಬೇಕೆಂಬ ಆಸೆ, ಜೀವನ ಸೆಟ್ಲ್ ಆದಮೇಲೆ ಆಗುವ ಮದುವೆ, ರಾಷ್ಟ್ರದ ಕರ್ತವ್ಯಕ್ಕೆ ಓಗೊಟ್ಟು ಹೋಗುವ ಪರಿ, ಹಾಗೆಯೇ ಅಂತಿಮವಾಗಿ ಉಗ್ರರ ದಮನದಿಂದಾಗುವ ರಾಜಕೀಯ ವಿಜಯ ಕೌಟುಂಬಿಕ ವಿಜಯವಾಗಿ ಪರಿವರ್ತಿತವಾಗುವ ರೀತಿ ಇವೆಲ್ಲ ಭಾರತೀಯ ಮಧ್ಯಮವರ್ಗದ ಆದರ್ಶವನ್ನು ಕಥನವಾಗಿ ಪ್ರತಿನಿಧಿಸುತ್ತ ಚಿತ್ರ ನಿರ್ಮಿಸುವ ಸಂಕಥನವನ್ನು ಪ್ರಾತಿನಿಧಿಕವಾಗಿಸುತ್ತವೆ. ಈ ರೀತಿಯಾಗಿ ನಿರ್ಮಿತಿಗೊಂಡ ರಾಜಕೀಯ ಸಂಕಥನದಲ್ಲಿ ರಾಷ್ಟ್ರೀಯತೆ ಪ್ರತಿರಾಷ್ಟ್ರೀಯತೆಗಳ ಸ್ವರೂಪ ತಾರ್ಕಿಕವಾಗಿ ಅಭಿನ್ನವಾಗಿ ಬಿಡುತ್ತದೆ.

ಚೌಕುಳಿಯಾಗಿರುವ ಪ್ರದೇಶ- ನೇಯ್ಗೆಯ ಬಟ್ಟೆಯಂತಿರುತ್ತದೆ. ಇಲ್ಲಿ ರಾಜಕೀಯ ಚದುರಂಗದಾಟ ಚದುರಂಗ ಪಟದ ಚೌಕುಳಿಯ ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಕಾಯಿಗಳ ಕಪ್ಪು-ಬಿಳುಪಿನ ವ್ಯತ್ಯಾಸ ಬಿಟ್ಟರೆ ಆಟದ ನಿಯಮಗಳು ಎರಡು ಬದಿಗಳಲ್ಲೂ ಒಂದೇ. ಕಾಂಜೀವರಂನ ಕೊನೆಯಲ್ಲಿ ನಾಯಕ ತನ್ನ ಮಗಳ ಶವಕ್ಕೆ ಹೊದಿಸುವ ರೇಷ್ಮೆ ಸೀರೆ ಈ ನೇಯ್ಗೆಯ ಬಟ್ಟೆ. ಮಗಳ ಮದುವೆಯಂದು ಆಕೆಗೆ ಉಡಿಸಲು ತಂದೆ ನೇಯುತ್ತಿದ್ದ ಅಪೂರ್ಣ ವಸ್ತ್ರ ಅದು. ಮಗಳು ಹುಟ್ಟಿದ ದಿನ ಮಾಡಿದ ಪ್ರಮಾಣದಂತೆ ಅದು ಅಂದಿನಿಂದಲೂ ಅವನು ನೇಯುತ್ತದ್ದ ಕನಸಿನ ನೇಯ್ಗೆಯೂ ಹೌದು.

ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಸೀರೆಯನ್ನು ಪೂರ್ಣಗೊಳಿಸಲು ರೇಷ್ಮೆ ಸಾಕಷ್ಟಿಲ್ಲದೆ ಹೋದಾಗ ವೃತ್ತಿ ಬದುಕಿನ ಪ್ರಾಮಾಣಿಕತೆಯನ್ನು ಸೀಳಿ ಕೆಲಸ ಮಾಡುತ್ತಿದ್ದಲ್ಲಿಂದ ರೇಷ್ಮೆಯನ್ನು ಕದ್ದುತಂದು, ತರುವಾಗೊಮ್ಮೆ ಸಿಕ್ಕಿಬಿದ್ದು ಜೈಲು ಸೇರಿ, ಜೈಲಿಗೆ ಹೋದಾಗ ಇತ್ತ ಅನಾರೋಗ್ಯ ಪೀಡಿತ ಮಗಳನ್ನು ನೋಡಿಕೊಳ್ಳವವರು ಯಾರೂ ಇಲ್ಲದೆ ಆಕೆ ಸತ್ತು, ಸತ್ತ ಸುದ್ದಿ ತಿಳಿದು, ಪೊಲೀಸ್ ಕಣ್ಗಾವಲಿನಲ್ಲಿ ಬಂದು, ಮಗಳ ಶವದ ಮೇಲೆ ಹೊದಿಸುವಾಗ ಶವವನ್ನು ಪೂರ್ತಿಯಾಗಿ ಮುಚ್ಚಲಾರದ- ಕಾಲು ಮುಚ್ಚಿದರೆ ತಲೆಗಿಲ್ಲದ, ತಲೆಗೆ ಹೊದಿಸಿದರೆ ಕಾಲಿಗಿಲ್ಲದ- ಬದುಕಿನಂತೆಯೇ ಅಪೂರ್ಣವಾದ, ನೇಯ್ದ ರೇಷ್ಮೆ ಅದು. ಪೊಲೀಸ್ ಕಣ್ಗಾವಲಿನಲ್ಲಿ ಆತ ಆ ಅಪೂರ್ಣ ಚೌಕುಳಿಯಿಂದ ಶವವನ್ನು ಪೂರ್ಣವಾಗಿ ಮುಚ್ಚಲು ಪ್ರಯತ್ನಿಸುವ ಹೊತ್ತಿನಲ್ಲಿ ಇಡೀ ಚಿತ್ರದ ನೇಯ್ಗೆಯ ಕಥನ ರಾಜಕೀಯ ಸಂಕಥನವಾಗುತ್ತದೆ.

ಚೌಕುಳಿ ಮುಚ್ಚಿದ್ದಷ್ಟು ರಾಜಕೀಯದ ಪಾಲು: ಅದನ್ನು ರಾಜಕೀಯವಾಗಿ ವಿವರಿಸಲು ಬರುತ್ತದೆ. ರೋಜಾ ವಿವರಿಸುವುದು ಇದನ್ನು. ಚೌಕುಳಿ ಪ್ರದೇಶದ ಆಚೆಗಿನ್ನೂ ಏನೋ ಇದೆ ಎನ್ನುವ ಕಾಣ್ಕೆ ಅದರ ಸಂಕಥನಕ್ಕೆ ಸಿಗಲಾರದು. ಚೌಕುಳಿಯಾಚೆಗಿನ ನುಣುಪು ಪ್ರದೇಶದತ್ತ ಕಾಂಜೀವರಂ ಕೈಚಾಚುತ್ತದೆ. ರೇಷ್ಮೆ ನೇಯ್ಗೆಗೆ ಪ್ರತಿಯಾಗಿ ನೂಲುಗಳನ್ನು ಬೇರ್ಪಡಿಸಿ ಗುರುತಿಸಲಾಗದ ಫೆಲ್ಟ್ ಅದು. ದೇಶಭಕ್ತಿಯ ಕಥನಕ್ಕೆ ಸಿಗದ ನಾಡಿಯ ಮಿಡಿತ ಬದುಕಿನ ಪ್ರೇಮಕ್ಕೆ ದೊರೆಯುತ್ತದೆ. ರೋಜಾದ ಪಠ್ಯಕ್ಕೆ ಪ್ರದರ್ಶಕತೆ ಇದೆ. ದೇಶಪ್ರೇಮವನ್ನು ವ್ಯಾಖ್ಯಾನಿಸುವ ಹಮ್ಮು, ದೇಶಪ್ರೇಮಿ-ದೇಶದ್ರೋಹಿಗಳ್ಯಾರೆಂಬುದನ್ನು ವಿಂಗಡಿಸಿ ಕೊಡುವ ಆತುರ, ರಾಜಕೀಯ ನೆಲೆಯಲ್ಲಿ ಆದರ್ಶೀಕರಿಸುವ ಹಂಬಲ, ಹಿಂಸೆಯ ಉಪಾಖ್ಯಾನವಾಗಿಬಿಡುವ ಆಸ್ಥೆ ಇಲ್ಲಿದೆ. ಹೆಣ್ಣನ್ನು ರಾಷ್ಟ್ರದೊಂದಿಗೆ ಸಮೀಕರಿಸುವ ಹಂತದಿಂದಲೇ ಅದು ತನ್ನ ಪಿತೃಪ್ರಧಾನ ನೆಲೆಯನ್ನು ಪ್ರಕಟಗೊಳಿಸುತ್ತದೆ. ಕಾಶ್ಮೀರದಲ್ಲಿ ಉಗ್ರರ ಬಂಧನದಲ್ಲಿರುವ ನಾಯಕ ರಿಶಿ ಕುಮಾರನ ನೆನಪುಗಳು ಬಿಚ್ಚಿಕೊಳ್ಳುವುದು ಅಲ್ಲಿ ಕೆಂಪು ಗುಲಾಬಿಯನ್ನು ನೋಡಿ; ಹಸಿರು ಹಿನ್ನೆಲೆಯ ಆ ಕೆಂಪು ಗುಲಾಬಿಯ ರೆವ್ಹರಿ ಕಾದಲ್ ರೋಜಾವೇ ಹಾಡಿನಲ್ಲಿ ತೆರೆದುಕೊಳ್ಳುತ್ತಾ ರೋಜಾಳನ್ನು ಕಣ್ಣೆದುರು ತಂದು ನಿಲ್ಲಿಸುತ್ತವೆ: ಚಿತ್ರದ ಕೊನೆಗೆ ಕೆಂಪು ಸೀರೆ-ಹಸಿರು ರವಿಕೆ/ ಹಸಿರು ಸೀರೆ-ಕೆಂಪು ರವಿಕೆ ತೊಟ್ಟುಕೊಂಡ ರೋಜಾಳ ಹಾಗೆಯೇ ಕಾಣತೊಡಗುತ್ತದೆ ಕಾಶ್ಮೀರದ ಹಸಿರಿನ ನಡುವಿನ ಗುಲಾಬಿ ರೋಜಾ. ಇವು ಚಿತ್ರದ ಅಂತ್ಯದ ಫ್ರೇಮಿನತ್ತ ಒಯ್ಯುತ್ತವೆ: ರಮ್ಯಪ್ರೇಮ-ದೇಶಪ್ರೇಮಗಳು ಹೆಣೆದುಕೊಳ್ಳುತ್ತಾ ಸಾಗಿ ಅಂತಿಮ ಫ್ರೇಮಿನಲ್ಲಿ ಸೇತುವೆಯ ಮೇಲೆ ಏಕೀಕರಣದ ಪರಾಕಾಷ್ಠೆಯನ್ನು ಮುಟ್ಟುತ್ತವೆ. ರೋಜಾ ಮಾದರಿಯ ಅನಿವಾರ್ಯ ಉಪಸಂಹಾರ ಅದು.

ಪ್ರಭುತ್ವದ ನೆಲೆಯ ರಾಜಕೀಯ ಸಂಕಥನ ರೂಪುಗೊಳ್ಳುವ ಅವಕಾಶವನ್ನು ಚೌಕುಳಿ ಪ್ರದೇಶ ಎಂದು ಗುರುತಿಸಿದ್ದೇನೆ. ಪರ‍್ಯಾಯ ಸಂಕಥನಗಳು ರೂಪುಗೊಳ್ಳುವುದು ನುಣುಪು ಪ್ರದೇಶದಲ್ಲಿ. ನೇಯಲ್ಪಟ್ಟ ರೇಷ್ಮೆ ಹಾಗೂ ನಯವಾದ ಫೆಲ್ಟ್ ಅನುಕ್ರಮವಾಗಿ ಇವೆರಡರ ರೂಪಕವಾಗುತ್ತದೆ. ವಸ್ತ್ರದ ರೂಪಕ ಬಳಸಿ ರಾಜಕೀಯ ಸಂಕಥನಗಳನ್ನು ವಿವರಿಸುವುದು ಹೊಸದೇನಲ್ಲ. ಸಾಮಾನ್ಯ ಬಳಕೆಯಲ್ಲಿ ರೂಢಿಯಲ್ಲಿರುವಂತೆ ರಾಜಕೀಯ ಪಕ್ಷಗಳು ಹಲವು ತಂತ್ರಗಳನ್ನು ಹೆಣೆಯುತ್ತವೆ. ಅರ್ಥಶಾಸ್ತ್ರ?ದಲ್ಲಿ ಕೌಟಿಲ್ಯ ವಿವರಿಸುವುದು ಮಂಡಲದೊಳಗೆ ರೂಪುಗೊಳ್ಳುವ ರಾಷ್ಟ್ರಪ್ರಭುತ್ವಗಳು ಹೆಣೆಯಬಹುದಾದ ತಂತ್ರ-ಪ್ರತಿತಂತ್ರಗಳನ್ನು. ಪ್ಲೇಟೋ ನೇಯ್ಗೆಯ/ಹೆಣಿಗೆಯ ಮಾದರಿಯನ್ನಿಟ್ಟುಕೊಂಡು ರಾಜ ಶಾಸ್ತ್ರದ ಚೌಕಟ್ಟನ್ನು, ಪ್ರಭುತ್ವದ ಕಾರ್ಯನಿರ್ವಹಣೆಯನ್ನು ವಿವರಿಸುತ್ತಾನೆ. ಚೌಕುಳಿ ಪ್ರದೇಶ ಹಾಗೂ ನುಣುಪು ಪ್ರದೇಶಗಳನ್ನು, ಬೇರೊಂದು ಸಂದರ್ಭದಲ್ಲಿ, ಪರಿಕಲ್ಪನೆಗಳನ್ನಾಗಿ ರೂಪಿಸಿರುವುದು ಗೈಲ್ ಡೆಲ್ಯುಜ್ ಮತ್ತು ಫೆಲಿಕ್ಸ್ ಗಟಾರಿ. ನೇಯ್ದ ರೇಷ್ಮೆಯ ಮೇಲ್ಮೈಯಲ್ಲಿ ಎರಡು ಸಮಾನಾಂತರ ಅಂಶಗಳಿರುತ್ತವೆ: ಸರಳೀಕರಿಸಿ ಹೇಳುವುದಾದರೆ ಉದ್ದಕ್ಕೆ ನೇಯಲ್ಪಟ್ಟ ನೂಲುಗಳು ಹಾಗೂ ಅಡ್ಡನೆ ಇರುವ ನೂಲುಗಳು; ಒಂದರೊಡನೊಂದು ಹೆಣೆಯಲ್ಪಟ್ಟ, ಊರ್ಧ್ವವಾಗಿ ಒಂದನ್ನೊಂದು ಛೇದಿಸುವ ನೂಲುಗಳು. ರೋಜಾದಲ್ಲಿರುವ ಪ್ರಭುತ್ವ ಹಾಗೂ ಉಗ್ರವಾದಗಳು, ಕಾಂಜೀವರಂನ ಉದ್ದಿಮೆಯ ಚಟುವಟಿಕೆ ಮತ್ತು ನೇಕಾರನ ಬದುಕು ಇಂಥ ಸಮಾನಾಂತರ ಎಳೆಗಳು. ಅಥವಾ ಎರಡರಲ್ಲೂ ಸಮಾನವಾಗಿರುವುದು ಸಾರ್ವಜನಿಕ ವಲಯ ಹಾಗೂ ಖಾಸಗಿ ಬದುಕು ಪರಸ್ಪರ ಸಂಕಥನವನ್ನು ನಿರ್ಮಿಸುತ್ತಾ ಸಾಗುವ ರೀತಿ.

ರೋಜಾ ರಾಷ್ಟ್ರಪ್ರಭುತ್ವವನ್ನು ನೇರವಾಗಿ ಸಾರ್ವಜನಿಕ ವಲಯಕ್ಕೆ ತಂದು, ಪ್ರತ್ಯೇಕತಾವಾದದಿಂದ ಉಂಟಾದ ಅಪಾಯ ನಿವಾರಿಸಲು ಕರ್ತವ್ಯದ ನೆಲೆಯಲ್ಲಿ ಪ್ರಕಟ ಕಥನವನ್ನು ರೂಪಿಸಿದರೆ, ಪಾರಸ್ಪರಿಕ ಸಮಾನಾಂತರ ನೆಲೆಯಲ್ಲಿ ಖಾಸಗಿ ವಲಯದಲ್ಲಿರುವ ಕುಟುಂಬವೊಂದು ಪ್ರತ್ಯೇಕತಾವಾದದಿಂದ ರೂಪುಗೊಂಡ ಕರ್ತವ್ಯ-ಕೇಂದ್ರಿತ ಕಥನದಿಂದಾಗಿ ಒದಗಿದ ಅಪಾಯ ನಿವಾರಿಸಲು ಪ್ರತಿ-ಕರ್ತವ್ಯ-ಕೇಂದ್ರಿತ ಪರಿಧೀಯ ಕಥನವೊಂದನ್ನು ನಿರ್ಮಿಸತೊಡಗುತ್ತದೆ: ಹಕ್ಕಿನ ನೆಲೆಯನ್ನು ಧಾರಣೆ ಮಾಡಿಕೊಳ್ಳುವ ರಮ್ಯಪ್ರೇಮದ ಈ ಕಥನ ನಾಯಕಿಯನ್ನು ಕ್ರಿಯಾ ಕೇಂದ್ರದಲ್ಲಿರಿಸಿಕೊಂಡು ರಾಷ್ಟ್ರರಕ್ಷಣೆಯ ಕುರಿತಾದ ದೇಶಪ್ರೇಮದ ಕಥನಕ್ಕೆ ಸಮಾನಾಂತರವಾಗಿ ಪ್ರಜೆಯನ್ನು ರಕ್ಷಿಸಲು ರಾಷ್ಟ್ರಪ್ರಭುತ್ವ ತೋರಬೇಕಾದ ಬದ್ಧತೆಯನ್ನು ಆಖ್ಯಾನದೊಳಕ್ಕೆ ಆವಾಹಿಸುತ್ತದೆ.

ಕಾಂಜೀವರಂನ ಚೌಕಟ್ಟಿನಲ್ಲಿ ಸಾರ್ವಜನಿಕ ವಲಯ ಹಾಗೂ ಖಾಸಗಿ ಬದುಕಿನ ನಡುವಿನ ಛಿದ್ರತೆ ಇಷ್ಟಿಲ್ಲ. ಅನುರೂಪಕಾತ್ಮಕ ಶೋಷಣೆ ತೀವ್ರವಾಗಿರುವುದು ಇದಕ್ಕೆ ಕಾರಣ: ಸಾರ್ವಜನಿಕ ವಲಯದ ಒತ್ತಡ ಖಾಸಗಿ ಬದುಕನ್ನು ಒಳನೂಕುತ್ತಾ ಸಂಕುಚನಗೊಳಿಸಿಬಿಟ್ಟಿದೆ. ಖಾಸಗಿ ಬದುಕನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಸಾರ್ವಜನಿಕ ವಲಯದ ಕಟ್ಟಳೆಯಲ್ಲಿ ಅಪರಾಧವಾಗಿ ವ್ಯಾಖ್ಯಾನಿಸಲ್ಪಟ್ಟು ರಾಷ್ಟ್ರಪ್ರಭುತ್ವ ಖಾಸಗಿ ಬದುಕೊಂದನ್ನು ಅಂತ್ಯಗೊಳಿಸುತ್ತದೆ: ನಾಯಕ ಜೈಲು ಸೇರುತ್ತಾನೆ; ಮಗಳು ಸತ್ತುಹೋಗುತ್ತಾಳೆ. ರೇಷ್ಮೆ ವಸ್ತ್ರದಿಂದ ಮುಚ್ಚಲ್ಪಡದೆ, ಚೌಕುಳಿಯ ಬಂಧನಕ್ಕೊಳಗಾಗದೆ ಉಳಿದಿರುವುದು ಇನ್ನೂ ಸ್ವಲ್ಪ ಇದೆ; ಅದನ್ನು ಗುರುತಿಸಿ ಪೊರೆಯಲಾಗದಷ್ಟು ನಿತ್ರಾಣಗೊಂಡಿದ.

ರೇಷ್ಮೆಯ ಮೇಲ್ಮೈಯ ಇವೆರಡು ಅಂಶಗಳು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ: ಒಂದಂಶ ಸ್ಥಾಯಿಯಾಗಿದ್ದರೆ ಇನ್ನೊಂದು ಸ್ಥಾಯೀ ಮಟ್ಟದ ಮೇಲಕ್ಕೂ ಕೆಳಕ್ಕೂ ಚಲಿಸಿ ಒಟ್ಟಂದದ ನೇಯ್ಗೆಯಲ್ಲಿ ತೊಡಗಿಸಿಕೊಂಡಿರುತ್ತದೆ. ರೋಜಾ ಉಗ್ರವಾದಕ್ಕೆ ಪ್ರತಿರಾಷ್ಟ್ರೀಯತೆಯ ನೆಲೆಯನ್ನು ನಿರಾಕರಿಸಿ ಪ್ರತ್ಯೇಕತಾವಾದವೆಂದು ಗುರುತಿಸುವ ಮೂಲಕ,೩ ಕಾಂಜೀವರಂ ಊಳಿಗಮಾನ್ಯ (ಪರಿವರ್ತನಾತ್ಮಕ ಬಂಡವಾಳಶಾಹಿ) ಶೋಷಣೆಯನ್ನು ನಿರೂಪಿಸುವ ಮೂಲಕ ಈ ಸ್ಥಾಯೀನೆಲೆಯನ್ನು ರೂಪಿಸಿಕೊಳ್ಳುತ್ತದೆ. ರಾಜಕೀಯ ಸಂಕಥನ ತನ್ನನ್ನು ತಾನು ವಿವರಿಸಿಕೊಳ್ಳುವ ಜೊತೆಗೆ ತನ್ನ ಅನ್ಯವನ್ನೂ ವ್ಯಾಖ್ಯಾನಿಸುತ್ತದೆ. ನಯವಾದ ಫೆಲ್ಟ್ ಬಗೆಯ ವಸ್ತ್ರದ ಮೇಲ್ಮೈಯಲ್ಲಿ ನೂಲುಗಳನ್ನು ಈ ರೀತಿ ಪ್ರತ್ಯೇಕಿಸಲು ಬರುವುದಿಲ್ಲ. ಇಲ್ಲಿ ಆತ್ಮಿಕ ವಿವರಣೆ, ಸ್ವ?ದ ನಿರ್ವಚನ ಅನ್ಯದ ವ್ಯಾಖ್ಯಾನವನ್ನು ಒಳಗೊಂಡಿರಬೇಕಾಗಿಲ್ಲ. ಪರಸ್ಪರ ಅಮುಕಲ್ಪಟ್ಟು ಒಗ್ಗೂಡಿದ ಫೆಲ್ಟ್‌ನ ಪಟ್ಟಿಗಳು ಅಂತ್ಯದಲ್ಲಿ ಅನಂತತೆಗೆ ತೆರೆದುಕೊಂಡಿರುತ್ತವೆ. ಆದರೆ ನೇಯ್ಗೆ ಅಂತ್ಯದಲ್ಲಿ ಮುಚ್ಚಲ್ಪಡಬೇಕು; ನೂಲುಗಳನ್ನು ಬಿಚ್ಚಿಕೊಳ್ಳದಂತೆ ಬಿಗಿಯಬೇಕು; ನೇಯ್ಗೆ ಪೂರ್ಣವಾಗಲೇಬೇಕು.

ಚೌಕುಳಿ ಪ್ರಭುತ್ವದ ರೂಪಕವಾದರೆ ಇಲ್ಲಿರುವ ಖಚಿತ ನಿರ್ವಚನ, ವರ್ಗೀಕೃತ ಸಂಹಿತೆಗಳ ಅಭಾವದಲ್ಲಿ ರೂಪುಗೊಳ್ಳುವುದು ನಾಗರಿಕ ಸಮಾಜ. ಈ ನಿಟ್ಟಿನಲ್ಲಿ ರೋಜಾ ಪ್ರಭುತ್ವಕ್ಕೊದಗಿದ ಸವಾಲಿನ ಕಥನವಾದರೆ ಕಾಂಜೀವರಂ ನಾಗರಿಕ ಸಮಾಜದ೪ ಹೊಸ ಸಾಧ್ಯತೆಗಳ ಅನ್ವೇಷಣೆ: ರೋಜಾಪ್ರಕಟಿಸುವ ತರ್ಕ-ಪ್ರತಿತರ್ಕಗಳ, ಹಿಂಸೆ-ಪ್ರತಿಹಿಂಸೆಗಳ, ನೀತಿ-ಅನೀತಿಗಳ, ಸ್ವಾತಂತ್ರ್ಯ-ಅಧಿಕಾರಗಳ ನಿರೂಪಣೆ ಎರಡು ಕಡೆಯಿಂದಲೂ ರೂಪುಗೊಳ್ಳುವುದು ಸಮಾನ ನಿಯಮಗಳ ಆಧಾರದಲ್ಲಿ; ಕಾಂಜೀವರಂನ ಸುಪ್ತಪಠ್ಯ ಕ್ರಿಯಾಶೀಲಗೊಳ್ಳುವುದು ನ್ಯಾಯಿಕ ಪರಿಗಣನೆಯನ್ನು ಮೀರುವ ನೈತಿಕ ಅವಕಾಶದಲ್ಲಿ. This striated space is a work of art mechanically reproduced ಕಲಾಕೃತಿಯ ಅತ್ಯಂತ ಪರಿಪೂರ್ಣ ನಕಲಿನಲ್ಲೂ ಸಹ ಮೂಲದ ಕಾಲದೇಶಗಳು ಕಣ್ಮರೆಯಾಗುತ್ತವೆ. ಆದರೆ ಚೌಕುಳಿ ಪ್ರದೇಶದ ಅಸ್ತಿತ್ವ ನಿರ್ದಿಷ್ಟ ಕಾಲದೇಶಗಳ ಚೌಕಟ್ಟಿನೊಳಗೆ ಸಾಧ್ಯವಾಗುವುದು; ರಾಜಕೀಯ ಸಂಕಥನಗಳಿಗೆ ಕಾಲದೇಶಗಳಿಗೆ ಬದ್ಧವಾಗುವ ಅನಿವಾರ್ಯತೆ ಇದೆ.

ಕಲಾಕೃತಿಯೊಂದರ ಸುತ್ತ ರೂಪುಗೊಳ್ಳುವ ಪ್ರಭೆಯನ್ನು ಅದರಿಂದ ರೂಪುಗೊಳ್ಳವ ರಾಜಕೀಯ ಸಂಕಥನವೂ ಹಂಚಿಕೊಳ್ಳುತ್ತದೆ. ಆಧುನಿಕ ತಂತ್ರಜ್ಞಾನದಿಂದ ಸಾಧ್ಯವಾದ ಕಲಾಕೃತಿಯ ಪ್ರತಿಕೃತಿ ಪ್ರಭೆಯನ್ನು ಕಳಾಹೀನಗೊಳಿಸುವುದರ ಜೊತೆಗೆ ಅನುಷಂಗಿಕವಾಗಿ ಅಧಿಕಾರಯುತ ಸಂಕಥನವನ್ನು ಅಸ್ಥಿರಗೊಳಿಸುತ್ತದೆ. ಹಾಗಾಗಿ ಕೆಲವೊಂದು ಪೂರ್ವನಿರ್ಧಾರಿತ ನಿಯಮಗಳನ್ನು insert ಮಾಡುವ ಮೂಲಕ ಈ ಅಸ್ಥಿರತೆಯನ್ನು ಮೀರುವ ಪ್ರಯತ್ನ ನಡೆಯುತ್ತದೆ. ಪ್ರತಿಕೃತಿ ಲಭ್ಯವಿರದಿರುವ ಹಂತದಲ್ಲಿ ಇರುವ ಕಲಾಕೃತಿಯ ಕೇಂದ್ರೀಕೃತ ಸಂಕಥನ ವಿಘಟಿತಗೊಳ್ಳುವಾಗ ಲೋಕಜ್ಞಾನವನ್ನು ವ್ಯಾಪಿಸಿಕೊಳ್ಳುವ ವಿಕೇಂದ್ರೀಕೃತ ಸಂಕಥನಗಳು ರೂಪುಗೊಳ್ಳತೊಡಗುತ್ತವೆ. ಆದರೆ ಇಲ್ಲಿ ಆತ್ಯಂತಿಕವಾಗಿ ಕೇಂದ್ರಮುಖಿ ಚಲನೆಯ ಸಾಧ್ಯತೆಯೂ ಅಂತಸ್ತವಾಗಿರುತ್ತದೆ. ಪಾಪ್ಯುಲರ್‌ಮೀಡಿಯಾಗಳು ವ್ಯವಸ್ಥೆಯ ಯಾಜಮಾನ್ಯದ ವ್ಯಾಪ್ತಿಗೊಳಪಡುವುದು ಹೀಗೆ. ಕಾಂಜೀವರಂನ ರೇಷ್ಮೆ ಸೀರೆ ಮುಚ್ಚಲಾಗದ ನುಣುಪು ಪ್ರದೇಶ ಈ ವ್ಯಾಪ್ತಿಯ ಹೊರತಾಗಿರುತ್ತದೆ. ಪ್ರತಿರೋಧಕ್ಕೆ ಅವಕಾಶವಿರುವುದು ಇಲ್ಲಿ.ರೋಜಾ ವಿರೋಧದ, ಕಾಂಜೀವರಂ ಪ್ರತಿರೋಧದ ಕಥನ.

ಟಿಪ್ಪಣಿ
೧ ಕಾಂಜೀವರಂ (ತಮಿಳು), ನಿ:, ೨೦೦
೨ ರೋಜಾ (ತಮಿಳು),ನಿರ್ದೇಶನ: ಮಣಿರತ್ನಂ, ೧೯೯೨.
೩ ಇದನ್ನು ವಿಸ್ತೃತವಾಗಿ Discourse of Violence Through Films: The Case of Roja ದಲ್ಲಿ ಚರ್ಚಿಸಿದ್ದೇನೆ.
೪ ನಾಯಕ ಜೈಲಿಗೆ ಹೋದಾಗ ಅವನಿಂದಲೇ ಸಹಾಯ ಪಡೆದ ಕುಟುಂಬಗಳು-ನಾಗರಿಕ ಸಮಾಜ- ಮಗಳನ್ನು ನೋಡಿಕೊಳ್ಳಬಹುದಿತ್ತು. ಆದರೆ ನಿರ್ದಿಷ್ಟ ಸಾಮುದಾಯಿಕ ಆರ್ಥಿಕ ದುರ್ಬಲತೆ ಈ ಅವಕಾಶವನ್ನು ಸೀಮಿತಗೊಳಿಸುತ್ತದೆ.