>ಬಿ. ಸುರೇಶರು ಪ್ರಜಾವಾಣಿ ಸಾಪ್ತಾಹಿಕಕ್ಕೆ ಬರೆದ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ.

ಕನ್ನಡ ಚಿತ್ರರಂಗದೊಳಗೆ ಆಗುತ್ತಿರುವ ಪ್ರಯೋಗಗಳಿಗಿಂತ ಭಿನ್ನ ಪ್ರಯೋಗಗಳು ಮಲೆಯಾಳ ಮತ್ತು ಬಂಗಾಳಿ ಸಿನಿಮಾಗಳಲ್ಲಿ ಆಗುತ್ತಿರುವುದಕ್ಕೆ ಹೊಸ ತಲೆಮಾರಿನವರ ಆಗಮನ ಮತ್ತು ಅವರ ಹಿನ್ನೆಲೆ ಕಾರಣ. ಈಗ ನಿಮ್ಮೆದುರಿಗೆ ನಾನು ಚರ್ಚಿಸಲು ಹೊರಟಿರುವ ‘ಅಂಗ್‌ಷುಮನರ್ ಚೋಬಿ’ ಸಹ ಅಂತಹುದೇ ಕಾರಣಕ್ಕಾಗಿ ವಿಶಿಷ್ಟ ಸಿನಿಮಾ ಆಗಿದೆ. ಈ ಸಿನಿಮಾದ ನಿರ್ದೇಶಕ ‘ಅತನು ಘೋಷ್’. ಇದು ಆತನ ಮೊದಲ ಪೂರ್ಣಪ್ರಮಾಣದ ಕಥಾಚಿತ್ರ. ಇದಕ್ಕೆ ಮುನ್ನ ಆತ ಜಾಹೀರಾತು ಚಿತ್ರಗಳಿಗೆ ಮತ್ತು ಸಾಕ್ಷ್ಯ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದ. ಇಂತಹ ಹಿನ್ನೆಲೆಯಿಂದಾಗಿಯೇ ಸಿನಿಮಾ ಕಟ್ಟುವ ಭಾಷೆ ಮತ್ತು ಸಿನಿಮಾದ ಬಣ್ಣಗಳ ಬಳಕೆಯಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ. ಆ ಬದಲಾವಣೆಯ ಪರಿಣಾಮವನ್ನು ಈ ಸಿನಿಮಾದಲ್ಲಿ ನೀವೂ ನೋಡಬಹುದು.

ಈ ಸಿನಿಮಾದ ಹೆಸರನ್ನು ಕನ್ನಡಕ್ಕೆ ಅನುವಾದಿಸಿದರೆ ‘ಅನ್ಷುಮನ್ ಎಂಬಾತನ ಚಿತ್ರ’ ಎಂದಾಗುತ್ತದೆ. ಇದು ಸಿನಿಮಾದೊಳಗೆ ಮತ್ತೊಂದು ಸಿನಿಮಾ ಇರುವಂತಹ ಕತೆ. ಈ ಸಿನಿಮಾದ ಕಥನ ಮತ್ತು ವಿನ್ಯಾಸವನ್ನು ಕುರಿತು ಮಾತಾಡುವ ಮುನ್ನ ಸ್ಥೂಲವಾಗಿ ಕಥಾಸಾರಾಂಶವನ್ನು ತಿಳಿಸಿಬಿಡುತ್ತೇನೆ.

ಅನ್ಷುಮನ್ ಒಬ್ಬ ನಿರ್ದೇಶಕ. ಆತ ಈವರೆಗೆ ಇಟಲಿ ದೇಶದಲ್ಲಿ ಸಾಕ್ಷ್ಯಚಿತ್ರ ಮಾಡುತ್ತಾ ಇದ್ದವನು. ಅವನೀಗ ಮರಳಿ ತನ್ನ ಹುಟ್ಟೂರಿಗೆ ಬಂದಿದ್ದಾನೆ. ಅವನಿಗೆ ‘ಆನಂದಿ ಕಥಾ’ ಎಂಬ ಸಿನಿಮಾ ಮಾಡುವ ಇರಾದೆಯಿದೆ. ಅದಕ್ಕಾಗಿ ಚಿತ್ರಕತೆಯೊಡನೆ ಬರುವವನಿಗೆ ಅವನ ಬಾಲ್ಯಗೆಳೆಯರು ಸಣ್ಣಪುಟ್ಟ ನೆರವಿಗೆ ಸಿಗುತ್ತಾರೆ. ಅನ್ಷುಮನ್ ತನ್ನ ಚಿತ್ರದ ಪ್ರಧಾನ ಪಾತ್ರಕ್ಕೆ ಹಿರಿಯ ನಟ ಪ್ರದ್ಯುಪ್ತ್ ಬ್ಯಾನರ್ಜಿಯನ್ನು, ನಾಯಕಿಯ ಪಾತ್ರಕ್ಕೆ ಮಧುರಾ ಸೇನ್ ಎಂಬ ನಟಿ ಬೇಕು ಎನ್ನುತ್ತಾನೆ. ಪ್ರದ್ಯುಪ್ತ ಬ್ಯಾನರ್ಜಿ ಒಂದು ಕಾಲಕ್ಕೆ ಪ್ರಖ್ಯಾತ ನಟ ಆಗಿದ್ದವನು. ಈಗ ನಟನೆಯಿಂದ ಹಿಂದೆ ಸರಿದು ತನ್ನ ಮನೆಯಲ್ಲಿಯೇ ಇರುತ್ತಾನೆ. ಮಧುರಾ ಸೇನ್ ತನ್ನ ಮೊದಲ ಸಿನಿಮಾದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದವಳು. ಆದರೆ ಈಗವಳು ಸಿನಿಮಾದಲ್ಲಿ ಅವಕಾಶ ಇಲ್ಲದೆ ಜಾತ್ರಾಗಳಲ್ಲಿ ನೃತ್ಯ ಮಾಡುತ್ತಿದ್ದಾಳೆ. ಇಂತಹ ಇಬ್ಬರನ್ನು ಒಂದೆಡೆಗೆ ಅನ್ಷುಮನ್ ಸೇರಿಸಲು ಪ್ರಯತ್ನಿಸುತ್ತಾನೆ. ಬ್ಯಾನರ್ಜಿಯನ್ನು ಮತ್ತೆ ಸಿನಿಮಾ ಮಾಡಲು ಒಪ್ಪಿಸುವುದೇ ದೊಡ್ಡ ಸಾಹಸ. ಅದರಲ್ಲಿ ಆತ ತಾಳ್ಮೆಯಿಂದ ಗೆಲ್ಲುತ್ತಾನೆ. ಮಧುರಾ ಸೇನ್ ಜೀವನದ ಬಗ್ಗೆ ಹತಾಶೆಯನ್ನು ಬೆಳೆಸಿಕೊಂಡವಳು. ಆಕೆಯ ಮದುವೆಯಲ್ಲೂ ಅವಳಿಗೆ ಯಶಸ್ಸು ಸಿಕ್ಕಿಲ್ಲ. ಅನ್ಷುಮನ್ ಆಕೆಯನ್ನು ಸಂಪರ್ಕಿಸುವ ಸಂದರ್ಭದಲ್ಲಿಯೇ ಆಕೆಯ ಮಾಜಿ ಗಂಡನ ಕೊಲೆಯಾಗಿದೆ. ಪೋಲೀಸರು ತನಿಖೆ ನಡೆಸುತ್ತಾ ಇದ್ದಾರೆ. ಮಧುರಾ ಸೇನ್ ತನಗೆ ಪ್ರೀತಿ ಕೊಡಬಲ್ಲ ಒಬ್ಬ ಗಿಗಾಲೋ (ಗಂಡುವೇಶ್ಯೆ) ಸಹವಾಸದಲ್ಲಿದ್ದಾಳೆ. ಈಕೆಯನ್ನೂ ತನ್ನ ಸಿನಿಮಾದಲ್ಲಿ ನಟಿಸುವಂತೆ ಮಾಡುವಲ್ಲಿ ಅನ್ಷುಮನ್ ಯಶಸ್ವಿಯಾಗುತ್ತಾನೆ. ಇಂತಹ ಎರಡು ವಿಕ್ಷಿಪ್ತ ಮನಸ್ಸುಗಳನ್ನು ಇಟ್ಟುಕೊಂಡು ಸಿನಿಮಾವೊಂದನ್ನು ಚಿತ್ರೀಕರಿಸುವಾಗಲೇ ಮಧುರಾಸೇನ್‌ಳ ಮಾಜಿ ಗಂಡನನ್ನು ಕೊಂದವನು ಅವಳ ಸ್ನೇಹಿತ ಎನ್ನುವುದು ತಿಳಿಯುತ್ತದೆ. ಸಿನಿಮಾ ಚಿತ್ರೀಕರಣವೇ ನಿಂತುಹೋಗುತ್ತದೆ ಎಂಬ ಹಂತದಲ್ಲಿ ಮಧುರಾಸೇನ್ ಮತ್ತು ಬ್ಯಾನರ್ಜಿಯನ್ನು ಅನ್ಷುಮನ್ ಎಂನ ಹೊಸ ನಿರ್ದೇಶಕ ಹೇಗೆ ನಿಭಾಯಿಸುತ್ತಾನೆ ಮತ್ತು ತನ್ನ ಕನಸನ್ನು ಸಾಕಾರಗೊಳಿಸುತ್ತಲೇ ಉಳಿದವರಿಗೆ ಜೀವನ ಪ್ರೀತಿ ಹುಟ್ಟಲು ಹೇಗೆ ಕಾರಣವಾಗುತ್ತಾನೆ ಎಂಬುದು ಈ ಸಿನಿಮಾದ ಕಥಾಸಾರಾಂಶ.

ಇಂತಹದೊಂದು ಕತೆಯನ್ನು ಪ್ರಥಮ ಬಾರಿಗೆ ತಾವೇ ಚಿತ್ರಕತೆಯನ್ನು ಬರೆದು ನಿರ್ದೇಶಿಸಿರುವ ಅತನು ಘೋಷ್ ಸಮಾನಂತರವಾಗಿ ಎಲ್ಲಾ ಪಾತ್ರಗಳ ಸುತ್ತ ಕಥೆ ಹೆಣೆಯುತ್ತಾ ಸಾಗುತ್ತಾರೆ. ಒಂದು ಧಾರೆಯಲ್ಲಿ ನಿರ್ದೇಶಕನ ಕನಸು, ಮತ್ತೊಂದು ಧಾರೆಯಲ್ಲಿ ಮಧುರಾ ಸೇನ್‌ಳ ಬದುಕು, ಮತ್ತೊಂದು ಧಾರೆಯಲ್ಲಿ ಕೊಲೆಯ ತನಿಖೆ… ಹೀಗೆ ವಿಭಿನ್ನ ಪಾತಾಳಿಗಳನ್ನು ಏಕಸೂತ್ರದಲ್ಲಿ ಬಂಧಿಸುವುದು ಸುಲಭ ಕೆಲಸವಲ್ಲ. ಆ ಕೆಲಸದಲ್ಲಿ ಅತನು ಘೋಷ್ ಯಶಸ್ವಿಯಾಗಿದ್ದಾರೆ. ಈ ಸಿನಿಮಾಗೆ ‘ಲಂಕೇಶ್ ಪ್ರಶಸ್ತಿ’ ಮಾತ್ರವಲ್ಲದೆ ಇನ್ನೂ ಅನೇಕ ಗೌರವಗಳು ಸಿಕ್ಕಿವೆ.

ಜಾಹೀರಾತು ಮತ್ತು ಸಾಕ್ಷ್ಯಚಿತ್ರ ತಯಾರಿಕೆಯ ಹಿನ್ನೆಲೆಯಿಂದ ಕಥಾಚಿತ್ರ ತಯಾರಿಕೆಗೆ ಬಂದವರಿಗೆ ಭಾವಗಳನ್ನು ಬಿಡಿಸಿಡುವುದಕ್ಕಿಂತ, ಬಣ್ಣಗಳನ್ನು ತೆರೆದಿಡುವ ಹಾಗೂ ದೃಶ್ಯ ಸಂಯೋಜನೆಗೆ ಪ್ರಾಧಾನ್ಯ ಕೊಡುವ ಗುಣ ಬಂದಿರುತ್ತದೆ. ಇದರಿಂದಾಗಿ ಕಥನ ಎಂಬುದು ಹಿಂದೆ ಸರಿದು ಬಿಡುವ ಅಪಾಯವೂ ಇರುತ್ತದೆ. ಜಾಹೀರಾತು ಮತ್ತು ಸಾಕ್ಷ್ಯಚಿತ್ರ ತಯಾರಿಕೆಯಲ್ಲಿನ ಆದ್ಯತೆಗಳು ಕಥಾ ಚಿತ್ರದ ಅಗತ್ಯಗಳಿಗಿಂತ ಭಿನ್ನ ಎಂಬುದು ಪ್ರಧಾನ ಕಾರಣ. ಜಾಹೀರಾತುಗಳಲ್ಲಂತೂ ಮಾರಾಟವಾಗಬೇಕಾದ ಸಾಮಗ್ರಿಯನ್ನು ಮತ್ತು ಅದನ್ನು ಮಾರಲು ಬಳಸಲಾದ ರೂಪದರ್ಶಿಗಳನ್ನು ಸುಂದರವಾಗಿ, ಕಣ್ಣಿಗೆ ಆಪ್ತವಾಗುವಂತೆ ತೋರಿಸುವುದು ಅತಿಮುಖ್ಯವಾಗಿರುತ್ತದೆ. ಆ ಅಭ್ಯಾಸದಿಂದ ಕಥಾಚಿತ್ರವೊಂದಕ್ಕೆ ಬಂದವರು ತಮಗರಿವಿಲ್ಲದೆಯೇ ಹಿಂದಣ ವೃತ್ತಿಯ ನೆನಪು-ಅಭ್ಯಾಸಗಳನ್ನು ಇಲ್ಲಿಗೂ ತಂದಿರುತ್ತಾರೆ. ಹೀಗಾಗಿ ಇಂತಹವರು ತಯಾರಿಸುವ ಕಥಾಚಿತ್ರಗಳು ಇತರರಿಗಿಂತ ಭಿನ್ನವಾಗಿಯೇ ನಿಲ್ಲುತ್ತವೆ. ಅತನು ಘೋಷ್ ಅವರ ಚಿತ್ರದಲ್ಲಿಯೂ ಸಂಯೋಜನೆ ಮತ್ತು ಬಣ್ಣಗಳಿಗೆ ಪ್ರಾಧಾನ್ಯ ಸಿಕ್ಕಿದೆ. ಪ್ರತಿದೃಶ್ಯದ ಪ್ರತೀ ಚಿತ್ರಿಕೆಯು (ಫ್ರೇಮ್) ಸಹ ಕಲಾಕೃತಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇದೆ. ಅದರೊಡನೆ ದೃಶ್ಯದ ಭಾವ ತೀವ್ರತೆ ಹೆಚ್ಚಾಗಿ ಅದರಲ್ಲಿ ನೋಡುಗ ಮುಳುಗುವ ಮುನ್ನವೇ ಮತ್ತೊಂದು ವಿವರದತ್ತ ಜಾರಿಕೊಳ್ಳುವ ಜಾಹೀರಾತು ಸಂಕಲನದ ಗುಣವೂ ಇದೆ. ಇವು ಈ ಸಿನಿಮಾದಲ್ಲಿರುವ ಸಣ್ಣ ಮಿತಿಗಳು. ಆದರೂ ಇಡಿಯಾಗಿ ಈ ಚಿತ್ರದ ಕತೆ ನಮ್ಮನ್ನು ಆವರಿಸಿಕೊಳ್ಳುತ್ತದೆ ಮತ್ತು ನೋಡುಗನಿಗೆ ಸದಾ ನೆನಪಲ್ಲಿ ಉಳಿಯುವ ಅನುಭವವಾಗುತ್ತದೆ.

ಈ ಸಿನಿಮಾ ಆರಂಭವಾಗುವುದು ಹಿರಿಯ ನಟ ಬ್ಯಾನರ್ಜಿಗೆ ಬೀಳುವ ಕನಸಿನಿಂದ. ಮೇಕಪ್ ಮಾಡಿಸಿಕೊಳ್ಳಲು ಕೂತ ಹಿರಿಯ ನಟನನ್ನು ಮೇಕಪ್ ಕಲಾವಿದ ಬೇಗ ಸಿದ್ಧವಾಗು ಎಂದು ಬೈಯ್ಯುತ್ತಾ, ನಿಮ್ಮಂತಹ ಮುದುಕರಿಂದ ಯಾವ ಕೆಲಸವೂ ಆಗದು, ನಿಮ್ಮ ಆಟ ಮುಗಿಯಿತು ಎಂಬರ್ಥದ ಮಾತಾಡುತ್ತಾನೆ. ಇದರಿಂದ ನೊಂದ ನಟ ತಾನು ಕುಳಿತಿದ್ದೆಡೆಯೇ ಪ್ರಾಣ ಕಳೆದುಕೊಂಡಂತೆ ಕುಸಿಯುತ್ತಾನೆ. ನೋಡುಗನಿಗೆ ಈ ಸಾವು ಅಚ್ಚರಿಯನ್ನು ಮೂಡಿಸುವಾಗಲೇ ಇದು ಪ್ರಧಾನ ಪಾತ್ರಧಾರಿಯ ಕನಸು ಎಂಬುದು ತಿಳಿಯುತ್ತದೆ. ಇಂತಹ ಕನಸುಗಳ ಕಾರಣವಾಗಿ ಹಿರಿಯ ನಟ ಬ್ಯಾನರ್ಜಿ ಚಿತ್ರ ನಟನೆಯಿಂದ ಹಿಂದಕ್ಕೆ ಸರಿದಿದ್ದಾನೆ ಎಂಬುದನ್ನು ನಿರ್ದೇಶಕ ಸರಳವಾಗಿ ತಿಳಿಸಿಬಿಡುತ್ತಾನೆ. ಈ ಪ್ರಸಂಗದ ನಂತರ ಅನ್ಷುಮನ್ ಪಾತ್ರದ ಪರಿಚಯ ಆಗುತ್ತದೆ. ಆತ ಟ್ಯಾಕ್ಸಿಯಲ್ಲಿ ಬರುವಾಗ ಜೊತೆಯಲ್ಲಿರುವ ಗೆಳೆಯನ ಜೊತೆಗೆ ಮಾತಾಡುವಾಗ ಆ ನಿರ್ದೇಶಕನ ಹಿನ್ನೆಲೆ ಮತ್ತು ಆತನ ಚಿತ್ರ ತಯಾರಿಕೆಯ ಕನಸನ್ನು ಮಾತಿನ ಮೂಲಕವೇ ತಿಳಿಸುತ್ತದೆ. ಅನ್ಷುಮನ್ ತಾನು ತಯಾರಿಸುವ ಚಿತ್ರಕ್ಕೆ ಇಂತಹ ನಟಿ ನಾಯಕಿ ಎನ್ನುವಾಗಲೇ ಆಕೆಯು ಕಾರೊಂದರಲ್ಲಿ ಬಂದು ರಸ್ತೆಯಲ್ಲಿ ನಿಂತಿರುವ ಗಿಗೋಲೋನನ್ನು ತನ್ನೊಂದಿಗೆ ಕರೆದೊಯ್ಯುವ ವಿವರ ಬರುತ್ತದೆ. ಹೀಗೆ ಒಂದು ಪಾತ್ರದಿಂದ ಮತ್ತೊಂದು ಪಾತ್ರಕ್ಕೆ ಬೀಡುಬೀಸಾಗಿ ಜಾರುತ್ತಾ ಚಿತ್ರದ ಕತೆಯನ್ನು ನಿರ್ದೇಶಕರು ಬಿಚ್ಚಿಡುತ್ತಾರೆ. ಇಂತಹ ಪ್ರಯೋಗ ಹೊಸದಲ್ಲ. ಆದರೆ ಆ ಪ್ರಯೋಗ ಮಾಡುವಾಗ ದೃಶ್ಯದಿಂದ ದೃಶ್ಯಕ್ಕೆ ಜಾರುವುದು ಸಾಮಾನ್ಯವಾಗಿ ಭಾರತೀಯ ಸಿನಿಮಾದಲ್ಲಿ ರೂಕ್ಷವಾಗಿ ಬಿಡುತ್ತದೆ. ಆದರೆ ಅತನು ಘೋಷ್ (ಅದಾಗಲೇ ಚರ್ಚಿಸಿದ ಜಾಹೀರಾತು ಚಿತ್ರ ತಯಾರಿಕೆಯ ಅನುಭವದ ಕಾರಣವಾಗಿ) ದೃಶ್ಯಬಂಧಗಳನ್ನು ಅಚ್ಚುಕಟ್ಟಾಗಿ ಸಾಧಿಸುತ್ತಾರೆ. ಹೀಗೆ ಕೇವಲ ಕ್ಯಾಮೆರಾದ ಗುಣಗಳನ್ನು ಮಾತ್ರ ಆಶ್ರಯಿಸದೆ ಸಂಕಲನದ ಸರಿಯಾದ ಬಳಕೆಯ ಕಾರಣವಾಗಿ ಕತೆಯ ಓಟ ನೋಡುಗನ ಅರಿವಿಗೆ ಸಲೀಸಾಗಿ ಇಳಿಯುತ್ತದೆ.

ಅನ್ಷು ತನ್ನ ಕಲಾವಿದರನ್ನು ಹುಡುಕುವ ಹಂತದಲ್ಲಿಯೇ ಸಮಾನಂತರವಾಗಿ ಉಳಿದ ಎಲ್ಲಾ ಪಾತ್ರಗಳನ್ನು ಪರಿಚಯಿಸುವುದು ಸಿನಿಮಾದ ಮೊದಲ ಘಟ್ಟ. ಅಲ್ಲಿಂದ ಎರಡನೆಯ ಘಟ್ಟಕ್ಕೆ ಕತೆ ಜಾರುವಷ್ಟರಲ್ಲಿ ಕತೆಯಲ್ಲಿ ತೊಡಗಿದ ಎಲ್ಲಾ ಪಾತ್ರಗಳ ಸೂಕ್ಷ್ಮಗಳೂ ನೋಡುಗನಿಗೆ ಮುಟ್ಟಿರುತ್ತವೆ. ಅದರಿಂದಾಗಿ ಕತೆಯು ಪಡೆದುಕೊಳ್ಳುವ ಹೊಸ ತಿರುವುಗಳಿಗೆ ಪ್ರೇಕ್ಷಕ ಸಿದ್ಧನಾಗಿ ಇರುವುದು ಸಾಧ್ಯವಾಗುತ್ತದೆ. ಹೀಗೆ ಕತೆಯ ಪ್ರಧಾನ ಪಾತ್ರಗಳಿರುವ ದೃಶ್ಯಗಳನ್ನು ಜಾಣ್ಮೆಯಿಂದ ಕಲಾತ್ಮಕಗೊಳಿಸುವ ನಿರ್ದೇಶಕರು ಕೊಲೆಯೊಂದರ ತನಿಖೆಯನ್ನು ಬಿಚ್ಚಿಡುವಾಗ ಮಾತ್ರ ಸರಳ ಸೂತ್ರಗಳಿಗೆ ಸಾಗುತ್ತಾರೆ. ಪ್ರಾಯಶಃ ಅಂತಹ ಸರಳ ಸೂತ್ರಗಳಿಂದ ತನಿಖೆಯ ಒಳಗನ್ನು ಅರ್ಥ ಮಾಡಿಕೊಳ್ಳುವುದು ಪ್ರೇಕ್ಷಕನಿಗೆ ಸುಲಭ ಎಂಬ ಜನಪ್ರಿಯ ಪ್ರತೀತಿ ಇಂತಹ ಸೂತ್ರಗಳ ಬಳಕೆಗೆ ಕಾರಣವಾಗಿರಬಹುದು. ಇದರಿಂದಾಗಿ ಪೋಲೀಸ್ ತನಿಖೆಯ ದೃಶ್ಯಗಳು ಮಾತ್ರ ಕ್ಲೀಷೆ ಎನಿಸುತ್ತದೆ. ಉಳಿದಂತೆ ಇಡೀ ಸಿನಿಮಾ ಮತ್ತು ಅದರೊಳಗಿನ ಸಿನಿಮಾಗಳು ತಳುಕು ಹಾಕಿಕೊಂಡು ಸಾಗುತ್ತವೆ.

ಈ ಜಾಹೀರಾತು ಚಿತ್ರದ ಅನುಭವದೊಂದಿಗೆ ಕಥಾಚಿತ್ರ ತಯಾರಿಕೆಗೆ ಬರುವ ಅನೇಕರಿಗೆ ಸಂಗೀತವನ್ನು ಕತೆಯ ಭಾಗವಾಗಿಸುವುದಕ್ಕಿಂತ ಕಥನಕ್ಕೆ ಕೊಂಡಿಯಾಗಿ ಬಳಸುವ ಅಭ್ಯಾಸ ಇರುತ್ತದೆ. ಆ ಗುಣ ಈ ಚಿತ್ರದಲ್ಲಿಯೂ ಇದೆ. ಆದರಿಂದಾಗಿ ಕತೆಯಲ್ಲಿ ಬರುವ ಪಯಣಗಳಿಗೆಲ್ಲಾ ಹಿನ್ನೆಲೆಯಲ್ಲಿ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಆ ಹಾಡು ಅನೇಕ ಕಡೆ ಅನಗತ್ಯವೆನಿಸಿದರೂ ಸಂಗೀತ ಸಂಯೋಜನೆಯಲ್ಲಿರುವ ಜಾನಪದದ ಬಳಕೆ ಹಾಡನ್ನೂ ಸಹ್ಯವಾಗಿಸುತ್ತದೆ.

ಹೀಗೆ ತಮ್ಮ ಪ್ರಥಮ ಸಿನಿಮಾದಲ್ಲಿಯೇ ಅತನು ಘೋಷ್ ನೋಡುಗರನ್ನು ಆವರಿಸುತ್ತಾರೆ. ಈ ಚಿತ್ರವು ಗಲ್ಲಾಪಟ್ಟಿಗೆಯಲ್ಲಿ ಯಶಸ್ಸು ಪಡೆಯಿತೋ ಇಲ್ಲವೋ ತಿಳಿಯದು. ಆದರೆ ಸಿನಿಮಾ ವಿದ್ಯಾರ್ಥಿಯಾದ ನನ್ನಂಥವರಿಗೆ ಆನಂದ ಕೊಟ್ಟಿತು ಎಂಬುದು ಸತ್ಯ.