ಡಬ್ಬಿಂಗ್ ಬಗೆಗಿನ ವಾದ, ವಿವಾದ ಕೊಂಚ ತಣ್ಣಗಾಗಿದೆ. ಈ ಸಂದರ್ಭದಲ್ಲಿ ಸಾಂಗತ್ಯಕ್ಕಾಗಿ ಕಲಾವಿದ ಸೃಜನ್ ಬರೆದುಕೊಟ್ಟ ಒಂದು ಡಬ್ಬಿಂಗ್ ಕುರಿತಾದ ವಿವರಣೆಯ ಲೇಖನವನ್ನು ಪ್ರಕಟಿಸಲಾಗುತ್ತಿದೆ. ಸುಮ್ಮನೆ ಚರ್ಚೆಗೆ ಮತ್ತೊಂದು ದಿಕ್ಕು ಬರಲೆಂದು..ಓದಿ ಅಭಿಪ್ರಾಯಿಸಿ.

ಜೇಮ್ಸ್‌ಬಾಂಡ್ ನಾನ್‌ಸ್ಟಾಪಾಗಿ ತೆಲುಗಿನಲ್ಲಿ ಡಯಲಾಗ್ ಹೇಳ್ತಿದ್ರೆ ಹೇಗನ್ನಿಸುತ್ತದೆ ? ವಿಲ್‌ಸ್ಮಿತ್ ವೀರಾವೇಶದಿಂದ ವಿಲನ್‌ಗೆ ತೆಲುಗಿನಲ್ಲಿ ವಾರ್ನಿಂಗ್ ಕೊಟ್ಟರೆ …”ಟೈಟಾನಿಕ್’ ಚಿತ್ರದ ನಾಯಕ ನಾಯಕಿಯರು ತೆಲುಗಿನಲ್ಲಿ ಲವ್‌ಚಾಟ್ ಮಾಡ್ತಿದ್ದರೆ…”ಅವತಾರ್’ ಸಿನಿಮಾದಲ್ಲಿ ನಾಯಕಿಯ ಜನಾಂಗದವರು ಶ್ರೀಕಾಕುಳಂ, ರಾಯಲಸೀಮಾದ ಪ್ರಾದೇಶಿಕ ಭಾಷೆಯಲ್ಲಿ ತೆಲುಗು ಮಾತನಾಡಿದರೆ…

ಆಹಾ…ಎಂಥವರೂ ತೆಲುಗಿನಲ್ಲಿ ಮಾತಾಡಲೇಬೇಕೆಂದು ತೆಲುಗು ಪ್ರೇಕ್ಷಕ “ಕಾಲರ್ ಎಗರಿಸುತ್ತಾನೋ’…ಅಥವಾ ಇಂಗ್ಲಿಷ್ ಸಿನಿಮಾಗೆ ಬಂದ್ರೂ ಮತ್ತೆ ತೆಲುಗು ಪಲುಕುಗಳನ್ನು ಕೇಳಬೇಕಲ್ಲ ಎಂದು ಬೇಸರ ಪಡ್ತಾನೋ…

ಫೀಲಿಂಗ್ಸ್ ಯಾವ ಭಾಷೆಯದಾದರೇನು? ಹಾಲಿವುಡ್ ಇನ್ ತೆಲುಗು ಇಂದಿನ ರಿಯಾಲಿಟಿ. ಅದ್ಭುತವಾದ ಓಪನಿಂಗ್ಸ್ ಕೊಡುವ ಸಾಕಷ್ಟು ಹಾಲಿವುಡ್ ಸಿನಿಮಾಗಳು ಮುಖ್ಯವಾಗಿ ಆಕ್ಷನ್ ಸಿನಿಮಾಗಳು ಅದೇ ದಿನ ನೇರವಾಗಿ ತೆಲುಗಿನಲ್ಲಿ ಬಿಡುಗಡೆಯಾಗುತ್ತಿವೆ.
ಕೆಲವು ಸಿನಿಮಾಗಳಂತೂ ಡೈರೆಕ್ಟ್ ತೆಲುಗು ಸಿನಿಮಾಗಳಿಗಿಂತ ಜೋರಾಗಿ ಕಲೆಕ್ಷನ್ಸ್ ಮಾಡುತ್ತಿವೆ.
*
ಅನಂತಪುರಂಗೆ ಅಕ್ಕನ ಮನೆಗೆ ಹೋದಾಗ ಭಾವ ನನ್ನನ್ನು ಇಂಗ್ಲಿಷ್ ಸಿನಿಮಾಗಳ ಸುದ್ದಿ ಬಂದಾಗ ಕೇಳ್ತಿದ್ದುದು ಇದೇ ಪ್ರಶ್ನೆ. “ಇಂಗ್ಲಿಷನಲ್ಲಿ ಚೂತಾವಾ? ತೆಲುಗಿನಲ್ಲಿ ಚೂತಾವಾ? (ಇಂಗ್ಲಿಷಿನಲ್ಲಿ ನೋಡಿದೆಯಾ? ತೆಲುಗಿನಲ್ಲಿ ನೋಡಿದೆಯಾ?) ಮತ್ತೆ ಆತ ಉತ್ತರಿಸುತ್ತಿದ್ದ. “ಹಾಲಿವುಡ್ ಸಿನಿಮಾಗಳು ನಮಗಂತೂ ತಲೆಬುಡ ಅರ್ಥ ಆಗಲ್ಲ. ಆದ್ದರಿಂದ ನಾವು ತೆಲುಗಿನಲ್ಲೇ ನೋಡೋದು !’ ಎಂದು. ಏಕೆಂದರೆ ಸಾಮಾನ್ಯ ತೆಲುಗು ಪ್ರೇಕ್ಷಕನಿಗೆ ಅಬ್ಬಬ್ಬಾ ಎಂದರೆ ಇಡೀ ಸಿನಿಮಾ ಶೇಕಡಾ 25 ರಷ್ಟು ಅರ್ಥವಾಗಬಹುದು ಅಷ್ಟೇ. ಕಳೆದ ಹದಿನೈದು ವರ್ಷಗಳಿಂದ ಹಾಲಿವುಡ್‌ನ ಸೂಪರ್ ಡೂಪರ್ ಹಿಟ್ ಚಿತ್ರಗಳು ತೆಲುಗಿಗೆ ಡಬ್ ಆಗಲು ಪ್ರಾರಂಭಿಸಿದವು. ಅದೂ ಮೆಟ್ರೋಗಳಲ್ಲಿ ಯಶಸ್ವಿ ಪ್ರದರ್ಶನಗಳ ನಂತರ ಈಗ ಕಾಲ ಬದಲಾಗಿದೆ. ತೆಲುಗೂ ಸೇರಿಕೊಂಡು ಹಿಂದಿ, ತಮಿಳು ಭಾಷೆಗಳಲ್ಲಿ ಹಾಲಿವುಡ್ ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ.

“ಅಡಲ್ಟ್ಸ್ ಓನ್ಲಿ’

ಒಂದು ಕಾಲದಲ್ಲಿ ಇಂಗ್ಲಿಷ್ ಸಿನಿಮಾಗಳನ್ನು ನೊಡುವ ಉದ್ದೇಶವೇ ಬೇರೆ ಇತ್ತು. ತೆಲುಗು ಸಿನಿಮಾಗಳಿಗೆ ಹೋಲಿಸಿದರೆ ವಿಪರೀತ ಎಕ್ಸ್ ಪೋಸಿಂಗ್ ಇರುತ್ತಿದ್ದರಿಂದ ಅಂಥ ದೃಶ್ಯಗಳನ್ನು ನೋಡಲೆಂದೇ ಜನ ಥಿಯೇಟರ್‌ಗಳಿಗೆ ಹೋಗುತ್ತಿದ್ದರು. ಪಟ್ಟಣಗಳು ಸೇರಿದಂತೆ ಸಿಟಿಗಳಲ್ಲೂ ಇಂಗ್ಲಿಷ್ ಸಿನಿಮಾ ಪ್ರದರ್ಶನಕ್ಕೆಂದೇ ಬೇರೆ ಥಿಯೇಟರ್‌ಗಳು ಇದ್ದವು. ಆ ಕಾಲದಲ್ಲಿ ಇಂಥ ಥಿಯೇಟರ್ ಗಳ ಕಡೆ ಹೆಜ್ಜೆ ಹಾಕುವುದೇ ಒಂಥರ ಗಿಲ್ಟ್ ಕಾಡುತ್ತಿತ್ತು. ಮನೆಯಲ್ಲಿ ಗೊತ್ತಾಗದಂತೆ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದ ಕಾಲವದು.

ಸಹಜವಾಗಿ ಪ್ರೇಕ್ಷಕರೆಲ್ಲರೂ “ಪುಣ್ಯ ಪುರುಷರೇ’ ಆಗಿರುತ್ತಿದ್ದರು. ಈ “ಅಶ್ಲೀಲತೆ’ ಯ ಕಾರಣದಿಂದಲೇ ಇಂಗ್ಲಿಷ್ ಸಿನಿಮಾಗಳು ನೋಡೋದು ಒಂದು “ದುಶ್ಚಟ’ವೆಂದು ನಂಬಿದ್ದರು. ಕ್ರಮೇಣ ಟ್ರೆಂಡ್ ಬದಲಾಗುತ್ತಾ ಬಂದಿತು.
ಟವರಿಂಗ್ ಇನ್‌ಫರ್ನೋ, ಜುರಾಸಿಕ್ ಪಾರ್ಕ್, ಗಾಡ್ಜಿಲ್ಲಾ, ಅನಕೊಂಡ, ಸ್ಪೈಡರ್ ಮ್ಯಾನ್ ನಂಥ ಸಿನಿಮಾಗಳು ಹಾಲಿವುಡ್ ಸಿನಿಮಾಗಳ ಮೂಲ ತಂತ್ರವನ್ನೇ ಬದಲಿಸಿದವು. ಈ ಸಿನಿಮಾಗಳ ಗ್ರಾಫಿಕ್ಸ್ ಮತ್ತು ಸ್ಪೆಷಲ್ ಎಫೆಕ್ಟ್ಸ್ ಗಳು ಎಲ್ಲ ವರ್ಗದ ಪ್ರೇಕ್ಷಕರಿಗೆ ಬೆಚ್ಚಿ ಬೀಳುವ ಅನುಭವ ನೀಡಿದವು. ಅಬಾಲವೃದ್ಧರಾದಿಯಾಗಿ ಹೊಸ ಪ್ರೇಕ್ಷಕ ಸಮೂಹವನ್ನೇ ಸೃಷ್ಟಿ ಮಾಡಿದವು. ಸಿನಿಮಾ ಜನ ಇವುಗಳ ಭರ್ಜರಿ ಯಶಸ್ಸು ನೋಡಿ ಇಂಥ ಸಿನಿಮಾಗಳನ್ನು ತೆಲುಗಿಗೆ ಡಬ್ ಮಾಡಿ ಬಾಕ್ಸಾಫೀಸ್ ಬ್ಲಾಸ್ಟ್ ಮಾಡಲು ಯೋಚಿಸತೊಡಗಿದರು. ಈ ಹೊತ್ತಿಗಾಗಲೇ ಮಲಯಾಳಂನ ಮೋಹನ್‌ಲಾಲ್, ಮುಮ್ಮುಟ್ಟಿ, ಸುರೇಶ್ ಗೋಪಿಯರಿಂದ ಹಿಡಿದು ತಮಿಳಿನ ರಜನಿ, ವಿಜಯಕಾಂತ್, ಶರತ್ ಕುಮಾರ್, ರಾಮ್‌ಕಿ, ಕನ್ನಡದ ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್, ಪ್ರಭಾಕರ್ ಚಿತ್ರಗಳು ತೆಲುಗಿಗೆ ಡಬ್ ಆಗಿ ಯಶಸ್ಸು ಪಡೆದಿದ್ದವು.
 ಕೇವಲ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವ ಸಂಭಾಷಣೆಗಳನ್ನೂ ನೀಡಿದರೆ ಹೇಗೆಂದು ಯೋಚಿಸಿ ಹಾಲಿವುಡ್ ಸಿನಿಮಾಗಳ “ಡಬ್ಬಿಂಗ್ ಮಿಷನ್’ ಆರಂಭವಾಗಿತ್ತು. ಏಕೆಂದರೆ ಸಾಮಾನ್ಯ ತೆಲುಗು-ತಮಿಳು ಪ್ರೇಕ್ಷಕನ ಸಿನಿಮಾ ದಾಹ ಅಂಥದು!. ಬೆನ್ನಲ್ಲೇ ಸಿನಿಮಾ ಮಾರುಕಟ್ಟೆ ಕೂಡಾ ವಿಪರೀತವಾಗಿ ವಿಸ್ತರಿಸತೊಡಗಿತ್ತು. ಉದಾಹರಣೆಗೆ ಮೊನ್ನೆಯ “ಅವತಾರ್’ ಹಾಗೂ ನಿನ್ನೆಯ ‘2012 ಯುಗಾಂತ’ ಚಿತ್ರಗಳು ಮೂಲ ಇಂಗ್ಲಿಷ್ ಚಿತ್ರಗಳಿಗಿಂತ ತೆಲುಗು ಅವತರಣಿಕೆಗಳು ದುಪ್ಪಟ್ಟು ಕಲೆಕ್ಷನ್ ಮಾಡಿವೆ.

ಡಬ್ಬಿಂಗ್ ಎಂದರೆ ನಿಮಗೆಲ್ಲಾ ಗ ಗೊತ್ತಿರೋ ಹಾಗೆ ಮೂಲ ಸಿನಿಮಾವನ್ನು ನಮ್ಮ ನಮ್ಮ ಭಾಷೆಯಲ್ಲಿ ನೋಡೋದು. ಅಂದರೆ ಮೂಲ ಸಿನಿಮಾದ ಮಾತುಗಳನ್ನು ತೆಗೆದುಹಾಕಿ ಆಯಾ ಭಾಷೆಯ ಮಾತುಗಳನ್ನು ಸೇರಿಸುವುದು. ಅಲ್ಲದೇ ಒರಿಜಿನಲ್ ಸಿನಮಾಗಳಲ್ಲೂ “ಡಬ್ಬಿಂಗ್’ ಪದ ಬಳಕೆಯಲ್ಲಿದೆ. ಏಕೆಂದರೆ ಭಾರತದಲ್ಲಿ ಸಿನಿಮಾ ಚಿತ್ರೀಕರಣವಾಗುವಾಗ ಮಾತುಗಳನ್ನು/ಸಂಭಾಷಣೆಗಳನ್ನು ಸ್ಪಾಟ್ ರೆಕಾರ್ಡಿಂಗ್ ಮಾಡುತ್ತಿದ್ದರೂ ಆಮೇಲೆ ಅವನ್ನೆಲ್ಲಾ ತೆಗೆದುಹಾಕಿ ಮತ್ತೊಮ್ಮೆ ಸ್ಟುಡಿಯೋಗಳಲ್ಲಿ ಆಯಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ಮಾತುಗಳ ಡಬ್ಬಿಂಗ್ ಮಾಡುತ್ತಾರೆ. ನಾವು ಸಿನಿಮಾ ನೋಡುವಾಗ ಕೇಳಿಸಿಕೊಳ್ಳುವುದು “ಡಬ್ಬಿಂಗ್’ ಮಾತುಗಳನ್ನೇ.

ಹಾಲಿವುಡ್ ಚಿತ್ರಗಳನ್ನು ಎರಡು ರೀತಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಾರೆ. ಮೊದಲನೆಯದು ಮೂಲ ಚಿರವನ್ನು ನಿರ್ಮಿಸಿದ ಸಂಸ್ಥೆಯೇ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ವಿತರಕರಿಗೆ ಕೊಡೋದು. ಎರಡನೆಯದು ವಿತರಕರೇ ಮೂಲ ಸಂಸ್ಥೆಯಿಂದ ಡಬ್ಬಿಂಗ್ ಹಕ್ಕುಗಳನ್ನು ಪಡೆದು ತಾವೇ ಡಬ್ ಮಾಡಿ ಅಥವಾ ಅನುವಾದ ಮಾಡಿ ಸಿನಿಮಾ ಬಿಡುಗಡೆ ಮಾಡೋದು.

ಹಾಲಿವುಡ್ ಸಿನಿಮಾ “ಅವತಾರ್’ ಮೂಲ ನಿರ್ಮಾಣ ಸಂಸ್ಥೆ ಟ್ವೆಂಟಿಯತ್ ಸೆಂಚುರಿ ಫಾಕ್ಸ್ ಇಂಡಿಯಾ ತೆಲುಗಿಗೆ ಅನುವಾದ ಮಾಡಿ ಬಿಡುಗಡೆ ಮಾಡಿದೆ. “2012 ಯುಗಾಂತಂ’ ಚಿತ್ರವನ್ನು ತೆಲುಗಿನ ಮತ್ತೊಂದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲಕ್ಷ್ಮಿ ಗಣಪತಿ ಫಿಲಂಸ್ ಬಿಡುಗಡೆ ಮಾಡಿತ್ತು.

ಡಬ್ಬಿಂಗ್ ಕಥೆ !
ಸಾಧಾರಣವಾಗಿ ಒಂದು ಹಾಲಿವುಡ್ ಚಿತ್ರವನ್ನು ಡಬ್ಬಿಂಗ್ ಮಾಡಲು ಬೇಕಾಗುವ ಸಮಯ ಒಂದು ವಾರ. ಸಿನಿಮಾವೊಂದಕ್ಕೆ 20 ರಿಂದ 25 ಜನ ಡಬ್ಬಿಂಗ್ ಕಲಾವಿದರು ಬೇಕಾಗುತ್ತಾರೆ. “ಅವತಾರ್’ ಚಿತ್ರವನ್ನು 32 ಜನ ಡಬ್ಬಿಂಗ್ ಕಲಾವಿದರ 12 ದಿನಗಳಲ್ಲಿ ಮುಗಿಸಿದರು. ಇಲ್ಲಿ ನಾಯಕನಿಗೆ ಕೃಷ್ಣಕುಮಾರ್, ನಾಯಕಿಗೆ ಉದಯಶ್ರೀ ಡಬ್ಬಿಂಗ್ ಹೇಳಿದ್ದಾರೆ. ಸಾಧಾರಣವಾಗಿ ಡಬ್ಬಿಂಗ್ ಚಿತ್ರಗಳಿಗೆ “ಧ್ವನಿ’ ಕೂಡಾ ಕಲಾವಿದರ ಆಯ್ಕೆಯ ವಿಷಯದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. (ಸಿಂಹದ ಮರಿ ಸೈನ್ಯ ಕನ್ನಡ ಚಿತ್ರದಲ್ಲಿ ಅಮರೀಷ್ ಪುರಿಗೆ ಅಷ್ಟೇ ಪವರ್ ಫುಲ್ ವಾಯಿಸ್ ಸುಂದರಕೃಷ್ಣ ಅರಸ್, ಶಿವಾಜಿ ಗಣೇಶನ್‌ಗೆ ತೆಲುಗಲ್ಲಿ ಜಗ್ಗಯ್ಯ, ಮುಮ್ಮುಟ್ಟಿಗೆ ಸಾಯಿಕುಮಾರ್ ಥರ…ಆದರೆ ಕನ್ನಡದ “ಜಿದ್ದು’ ತೆಲುಗು ಡಬ್ಬಿಂಗ್ ಸಿನಿಮಾದಲ್ಲಿ ತುಂಬಾ “ಪೇಲವ’ ಧ್ವನಿಯಿಂದ ಇಡೀ ಪಾತ್ರವೇ ತೋಪೆದ್ದು ಹೋಯಿತು). ಕಳೆದ ಎರಡು ವರ್ಷಗಳಿಂದ ಟಾಪ್ ಡಬ್ಬಿಂಗ್ ಚಿತ್ರಗಳಿಗೆ ಸಾಹಿತ್ಯ, ಡಬ್ಬಿಂಗ್ ಮಾಡುತ್ತಿರುವವರು ಹೈದರಾಬಾದ್ ಮೂಲದ ಮೈಥಿಲಿ ಕಿರಣ್.

ಮೂಲ ಇಂಗ್ಲಿಷ್ ಚಿತ್ರಗಳ ಡಯಾಲಾಗ್ಸ್ ನ್ನು ತೆಲುಗಿಗೆ ಅನುವಾದ ಮಾಡುವುದು ಮೊದಲ ಹೆಜ್ಜೆಯಾದರೆ ಮೂಲ ಸಂಭಾಷಣೆಯ ಕಾಲಾವಧಿಗೆ ತಕ್ಕಂತೆ ಕ್ಲುಪ್ತ ಡಯಲಾಗ್ ಬರೆಯೋದು ಮತ್ತೊಂದು ಚಾಲೆಂಜಿಂಗ್! “ಭಾರತೀಯ ಸಿನಿಮಾಗಳಿಗೆ ಹೋಲಿಸಿದರೆ ಹಾಲಿವುಡ್ ಚಿತ್ರಗಳ ಕಾಲಾವಧಿ ಕಡಿಮೆ. ಅದರಲ್ಲೂ ಸಿನಿಮಾಗಳಲ್ಲಿ ಮಾತುಗಳ ಸಮಯವಂತೂ ಇನ್ನೂ ಕಡಿಮೆ. ಅಲ್ಲಿ ಆಕ್ಷನ್ ಮುಖ್ಯ. ಅದೂ ಅಲ್ಲದೇ ಅಲ್ಲಿನ ಸಿನಿಮಾಗಳಲ್ಲಿ ಕಥೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ, ಸಂಭಾಷಣೆಗಳಿಗಲ್ಲ. ನಮ್ಮ ಸಿನಿಮಾಗಳಂತೆ ಉದ್ದುದ್ದನೆಯ ಸಂಭಾಷಣೆಗಳು, ಪಂಚ್ ಲೈನ್ಸ್, ಪವರ್ ಫುಲ್ ಡಯಲಾಗ್ಸ್ ಅವಶ್ಯಕತೆ ಇರುವುದಿಲ್ಲ’ ಎನ್ನುತ್ತಾರೆ ಮತ್ತೊಬ್ಬ ಡಬ್ಬಿಂಗ್ ಸಿನಿಮಾಗಳ ಲೇಖಕ ಭಾರತೀಬಾಬು.

“ಇಂಗ್ಲಿಷಿನಿಂದ ತೆಲುಗಿಗೆ ಸಂಭಾಷಣೆಗಳನ್ನು ಅನುವಾದ ಮಾಡುವಾಗ ಬರೀ ಅನುವಾದ ಮಾಡದೇ ಆಯಾ ದೃಶ್ಯಗಳ ಭಾವತೀವ್ರತೆಗೆ ಒತ್ತು ಕೊಡಬೇಕಾಗುತ್ತದೆ. ಮೂಲ ಚಿತ್ರದ ಪಾತ್ರಗಳ ತುಟಿಚಲನೆಗೆ ತಕ್ಕಂತೆ ಪದಗಳನ್ನು ಜೋಡಿಸೋದು …ಹಾಗಂತ ಎಲ್ಲೂ ಅರ್ಥ ವ್ಯತ್ಯಾಸ ಆಗುವಂತಿಲ್ಲ..ಆದ್ದರಿಂದ ಡಬ್ಬಿಂಗ್ ನಡೆಯುವಾಗ ಸ್ಟುಡಿಯೋದಲ್ಲಿ ಲೇಖಕ ಇರಲೇಬೇಕಾಗುತ್ತದೆ’ ಎನ್ನುತ್ತಾರೆ ಸ್ಲಂ ಡಾಗ್ ಮಿಲಿಯನೇರ್, ಫ್ಲರ್ ಬಿಡೆನ್ ಕಿಂಗ್ಡಮ್, ಎಕ್ಸ್ ಮೇನ್, ಏಂಜೆಲ್ಸ್ ಅಂಡ್ ಡೆಮನ್ಸ್ ನಂಥ ಯಶಸ್ವಿ ಚಿತ್ರಗಳ ಅನುವಾದ ಲೇಖಕಿ ಮತ್ತು ಡಬ್ಬಿಂಗ್ ಕಲಾವಿದೆ ಮೈಥಿಲಿ.

ಕೆಲವು ಸಲ ಪಾತ್ರಗಳ ತುಟಿಯ ಚಲನೆಗೆ ಹೊಂದುವ ಪದಗಳು ಡಬ್ಬಿಂಗ್ ಸ್ಟುಡಿಯೋದಲ್ಲಿ ಸ್ವಲ್ಪ ಏರುಪೇರಾದರೂ ದೃಶ್ಯವನ್ನು ಹಾಗೆಯೇ ಫಾರ್ವರ್ಡ್ ಮಾಡಿ ಇಡೀ ಚಿತ್ರದ ಡಬ್ಬಿಂಗ್ ಮುಗಿದ ನಂತರ ಮತ್ತೆ ರಿವೈಂಡ್ ಮಾಡಿ ಡಬ್ಬಿಂಗ್ ಮುಗಿಸುತ್ತಾರೆ. ಒಮ್ಮೊಮ್ಮೆ “ಮಾಮ್ ಡ್ಯಾಡ್’ ಗಳಂಥ ಚಿಕ್ಕ ಚಿಕ್ಕ ಪದಗಳು ಸಖತ್ ಕಿರಿಕಿರಿ ಮಾಡುತ್ತವೆ. ಸಿನಿಮಾದಲ್ಲಿ ವಿದ್ಯಾವಂತರಾದ ಪಾತ್ರಗಳಾದರೆ ಸರಿ ಡಬ್ಬಿಂಗ್ ನಲ್ಲಿ ನೇರ ಇಂಗ್ಲಿಷ್ ಪದಗಳನ್ನು ಬಳಸಬಹುದು. ಆದರೆ ಗ್ರಾಮೀಣ ಹಿನ್ನೆಲೆಯ ಪಾತ್ರಗಳಾದರೆ ತುಟಿಗಳ ಚಲನೆಗೆ ಸಂಬಂಧವಿಲ್ಲದಂತೆ “ಅಪ್ಪ-ಅಮ್ಮ’ ಗಳಂಥ ಪದಗಳನ್ನು ಬಳಸಬೇಕಾಗುತ್ತದೆ.

ತಮಿಳು, ಹಿಂದಿ, ತೆಲುಗುಗಳಂಥ ಭಾರತೀಯ ಭಾಷೆಗಳಲ್ಲಿ ಪ, ಫ, ಬ, ಭ, ಮ ಗಳಂತಹ ಅಕ್ಷರಗಳನ್ನು ಉಚ್ಚರಿಸುವಾಗ ಮೇಲ್ತುಟಿ ಹಾಗೂ ಕೆಳತುಟಿಗಳೆರಡೂ ಸೇರುತ್ತವೆ. ಯಾವುದೇ ಸಂಭಾಷಣೆಯಲ್ಲಾಗಲೀ ಈ ಅಕ್ಷರಗಳನ್ನು ಬಳಸಲೇಬೇಕಾಗುತ್ತವೆ. ಇಂಗ್ಲಿಷಿನಲ್ಲಿ “ಇಯಾಮ್ ಹಿಯರ್’ ಎನ್ನುವ ವಾಕ್ಯಕ್ಕೆ “ನಾನು ಇಲ್ಲಿದ್ದೇನೆ’ ಎಂದರೆ ತಪ್ಪು. “ಇಯಾಮ್’..ಎನ್ನುವಾಗ ತುಟಿಗಳೆರಡೂ ಸೇರುತ್ತವೆ. “ನಾನಿಲ್ಲಿದ್ದೇನೆ’ ಎನ್ನುವಾಗ ತುಟಿಗಳ ಚಲನೆ ಬೇರೆಯಾಗಿರುತ್ತದೆ. ಆದ್ದರಿಂದ ಅಲ್ಲಿನ ಸಂದರ್ಭಕ್ಕೆ ತಕ್ಕಂತೆ ತೆಲುಗು ಪದಗಳನ್ನು ಬಳಸಬೇಕಾಗುತ್ತದೆ. ಮೂಲಚಿತ್ರದ ಪಾತ್ರ ಕ್ಯಾಮೆರಾ ಕಡೆ ನೋಡದೇ ಇದ್ದಲ್ಲಿ “ಇಲ್ಲಿ’ ಎಂಬ ಪದ ಮಾತ್ರ ಬಳಸಬಹುದು. ಕ್ಯಾಮೆರಾ ಕಡೆ ನೋಡುವ ಪಾತ್ರವಾದಲ್ಲಿ ಬೇರೆ ಪದಕ್ಕೆ ಹುಡಕಬೇಕಾಗುತ್ತದೆ.

ಇನ್ನೊಂದು ಸಮಸ್ಯೆಯೆಂದರೆ ಇಂಗ್ಲಿಷ್ ಸಿನಿಮಾಗಳಲ್ಲಿ ಮಾತು ತುಂಬಾ ವೇಗವಾಗಿರುತ್ತದೆ. ಇದು ಭಾರತೀಯ ಚಿತ್ರಗಳಿಗೆ ಹೊಂದುವುದಿಲ್ಲ. ಅದೂ ಅಲ್ಲದೇ ದೇಸಿ ಪಾತ್ರಗಳ ಭಾವೋದ್ವೇಗಗಳಿಗೆ ತಕ್ಕಂತೆ ಡಬ್ಬಿಂಗ್ ಸಂಭಾಷಣೆ ಹೇಳಬೇಕಾಗುತ್ತದೆ. ಆದರೆ ಇಂಗ್ಲಿಷ್ ಚಿತ್ರಗಳಲ್ಲಿ ಅವರ ಎಮೋಶನ್ಸ್ ಗಳಿಗೆ ತಕ್ಕಂತೆ ಧ್ವನಿಯ ಮಾಡ್ಯುಲೇಶನ್ ಮಾಡಬೇಕಾಗುತ್ತದೆ. ಮೂಲ ಚಿತ್ರದ ಪಾತ್ರಗಳು ಮಾತು-ಮಾತುಗಳ ನಡುವೆ ತೆಗೆದುಕೊಳ್ಳುವ ಸಮಯ ಕೂಡಾ ಬೇರೆಯದೇ ರೀತಿಯಲ್ಲಿರುತ್ತದೆ. ಇವನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡು ಸಂಭಾಷಣೆ ಹೇಳಬೇಕಾಗುತ್ತದೆ.

ಮತ್ತೊಬ್ಬ ಡಬ್ಬಿಂಗ್ ಕಲಾವಿದೆ ಹರಿತ, “ಅವತಾರ್’ ಚಿತ್ರದ ನಾಯಕಿಯ ತಾಯಿಗೆ ಡಬ್ಬಿಂಗ್ ಕೊಡುವಾಗ ನನಗೆ “ರಾಯಲಸೀಮೆ’ ತೆಲುಗು ಸೊಗಡಲ್ಲಿ (ಕಡಪ-ಕರ್ನೂಲ್-ಬಳ್ಳಾರಿ ತೆಲುಗು) ಡಬ್ಬಿಂಗ್ ಹೇಳಲು ಕೇಳಿದರು. ಒಮ್ಮೊಮ್ಮೆ ಈ ಭಾಷೆಯ ಸೊಗಡು ಡಬ್ಬಿಂಗ್ ಸಿನಿಮಾಗಳ “ಲೈಫ್” ಕೂಡಾ ಆಗಬಲ್ಲದು. ನಂತರ ಆ ಗಿರಿಜನ ಜನಾಂಗದ ಬೇರೆ ಬೇರೆ ಹೆಣ್ಣುಮಕ್ಕಳಿಗೆ ಇತರ ಪಾತ್ರಗಳಿಗೆ ಬರೀ ರಾಯಲಸೀಮಾ ತೆಲುಗಲ್ಲದೇ, ಶ್ರೀಕಾಕುಳಂ (ಒರಿಸ್ಸಾ ಗಡಿಜಿಲ್ಲೆ) ತೆಲುಗು ಮತ್ತು ಸಾಧಾರಣ ಶೈಲಿಯ ವಿಜಯವಾಡ ತೆಲುಗು ಡಬ್ಬಿಂಗ್ ಕೊಡಲಾಯಿತು. ಸಿನಿಮಾದಲ್ಲಿ ಒಂದೇ ಜನಾಂಗದ ಜನ ಬೇರೆ ಬೇರೆ “ಆಕ್ಸೆಂಟ್’ ನಲ್ಲಿ ತೆಲುಗು ಮಾತನಾಡುವುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಗೊತ್ತಾಗುತ್ತದೆ’ ಎನ್ನುತ್ತಾರೆ.

ಇದನ್ನೇ ಮೈಥಿಲಿ ಹೀಗೆ ವಿವರಿಸುತ್ತಾರೆ-“ಮೊದ ಮೊದಲು ನಮಗೆ ಕೊಂಚ ಆಭಾಸವೆನಿಸಿದರೂ ಸಿನಿಮಾದಲ್ಲಿ ಸಿಟಿಭಾಷೆಗೂ, ಹಳ್ಳಿ ಭಾಷೆಗೂ ಬೇರೆ ಬೇರೆ ಪ್ರಾಂತ್ಯಗಳ ಭಾಷಾ ಸೊಗಡನ್ನು ಬಳಸಿರುವುದರಿಂದ ಆದಿವಾಸಿಗಳ ಭಾಷೆಯ ತಮಾಷೆಯನ್ನು ಆಯಾ ಪ್ರಾಂತ್ಯಗಳವರು ಅದ್ಭುತವಾಗಿ “ಕನೆಕ್ಟ್’ ಮಾಡಿಕೊಂಡು ವಿಶಲ್, ಕರತಾಡನಗಳಿಂದ ಸಖತ್ ಎಂಜಾಯ್ ಮಾಡುತ್ತಾರೆ’.

ಮರೆತದ್ದು
ಮಿನಿಡಬ್ಬಿಂಗ್ -ಜೆಮಿನಿ ಹಾಗೂ ಸಿತಾರಾ ಟಿವಿ ಚಾನೆಲ್ಸ್ ಪ್ರತಿ ಭಾನುವಾರ ವಿದೇಶಿ ಸಿನಿಮಾಗಳನ್ನು ಮುಖ್ಯವಾಗಿ ಹಳೇ ಕ್ಲಾಸಿಕ್ಸ್ /ಚೈನಿಸ್ ಮಾರ್ಶಲ್ ಆರ್ಟ್ಸ್ ಸಿನಿಮಾಗಳನ್ನು ತಮ್ಮ ಸ್ಟುಡಿಯೋಗಳಲ್ಲೇ ಡಬ್ ಮಾಡಿಸಿ ಪ್ರಸಾರ ಮಾಡುತ್ತಿವೆ. (ಈ ಸುದ್ದಿಯನ್ನು “ಮೆಕನ್ನಾಸ್ ಗೋಲ್ಡ್’ ತೆಲುಗು ಡಿವಿಡಿ ಖರೀದಿಸಲು ಹೋದಾಗ ಅಂಗಡಿಯವ ಹೇಳಿದ್ದು!)

ಡಬ್ಬಿಂಗ್ ಡಬ್ಬಿಂಗ್ !
ಟಿವಿ ಚಾನೆಲ್ಸ್ ಇಂಗ್ಲಿಷ್ ಸಿನಿಮಾಗಳನ್ನು ಡಬ್ಬಿಂಗ್ ಮಾಡುವ ಪ್ರಕ್ರಿಯೆ ಈಚೆಗೆ ಆರಂಭಗೊಂಡಿದ್ದರೂ ತುಂಬಾ ವರ್ಷಗಳ ಹಿಂದಿನಿಂದಲೂ ಮಿಕ್ಕಿಮೌಸ್, ಟಾಮ್ ಮತ್ತು ಜೆರ್ರಿ, ಕಾರ್ಟೂನ್ ನೆಟ್ ವರ್ಕ್‌ಗಳಂಥ ಸೀರಿಯಲ್ಸ್ ಹಿಂದಿ ಮತ್ತು ತೆಲುಗಲ್ಲಿ ಆರಂಭಗೊಂಡಿದ್ದವು. ಮೊದ ಮೊದಲು ಡಬ್ಬಿಂಗ್ ಬದಲಾಗಿ ಸಬ್ ಟೈಟಲ್ಸ್ ಮತ್ತು ಬ್ಯಾಕ್ ಗ್ರೌಂಡ್ ಆಡಿಯೋ (ಮುಖ್ಯವಾಗಿ ನ್ಯೂಸ್ ರೀಲ್/ವೈಜ್ಞಾನಿಕ ಡಾಕ್ಯುಮೆಂಟರಿಗಳಲ್ಲಿ) ಇತ್ತು. ಆದರೆ ಮಕ್ಕಳ ಕಾರ್ಟೂನ್ ನೆಟ್ ವರ್ಕ್‌ಗೆ/ ಸೀರಿಯಲ್ಸ್ ಗೆ ಹಾಕುತ್ತಿದ್ದ ಸಬ್ ಟೈಟಲ್ಸ್ ಓದಲು ಮತ್ತು ಫಾಲೋ ಮಾಡಲು ಕಷ್ಟವೆನಿಸುತ್ತಿದ್ದಂತೆಯೇ “ಡಬ್ಬಿಂಗ್’ ಕ್ರಿಯೆ ಆರಂಭವಾಯಿತು. ಮಕ್ಕಳ “ಡಬ್ಬಿಂಗ್’ ಕಾರ್ಯಕ್ರಮಗಳು ಜನಪ್ರಿಯವಾಗುತ್ತಿದ್ದಂತೆಯೇ “ಸಿನಿಮಾ ಡಬ್ಬಿಂಗ್’ ಎನ್ನುವ ಕ್ರಾಂತಿ ಆರಂಭವಾಯಿತು !.