ನಮ್ಮ ಮುಂದಿನ ಚಿತ್ರಶಿಬಿರ ಆಗಸ್ಟ್ ನಲ್ಲಿ ನಡೆಯಲಿದೆ.

ಭಾರತೀಯ ಸಿನಿಮಾಕ್ಕೆ 100 ವರ್ಷ ಸಂದಿರುವ ಸಂದರ್ಭವನ್ನು ಇಟ್ಟುಕೊಂಡು ಚಿತ್ರ ಶಿಬಿರವನ್ನು ರೂಪಿಸಲಾಗುತ್ತಿದೆ. ಇದು ಎಂಟನೇ ಚಿತ್ರ ಶಿಬಿರ.

ಸದ್ಯದ ಲೆಕ್ಕಾಚಾರದಂತೆ ಆಗಸ್ಟ್ 18 ಮತ್ತು 19 (ಮೂರನೇ ಶನಿವಾರ ಮತ್ತು ಭಾನುವಾರ)ನಿಗದಿಯಾಗಿದೆ. ಒಂದುವೇಳೆ ಸ್ಥಳದ ಲಭ್ಯತೆ ಮತ್ತು ಸಂಪನ್ಮೂಲಗಳ ಲಭ್ಯತೆ ಆಧರಿಸಿ ಮತ್ತೊಮ್ಮೆ ದಿನಾಂಕವನ್ನು ಖಚಿತಪಡಿಸುತ್ತೇವೆ. ಆಕಸ್ಮಾತ್ ಇಂಥ ಬದಲಾವಣೆಯಾದರೂ ನಾಲ್ಕನೇ ಶನಿವಾರ ಮತ್ತು ಭಾನುವಾರ (25,26)ಕ್ಕೆ ಮುಂದೂಡಬಹುದು. ಆದರೆ ಎಂದಿನಂತೆ ಆಗಸ್ಟ್ ಖುಷಿಯನ್ನು ಮುಂದೂಡುವುದಿಲ್ಲ.

ಹೊಸ ಹೊಸ ಆಲೋಚನೆಗಳನ್ನು ಕೈಗೊಳ್ಳುತ್ತಿದ್ದು, ನಿಮ್ಮ ಸಲಹೆಯಿದ್ದರೂ ಕೊಡಬಹುದು. ಹಿಂದಿನ ಏಳು ಶಿಬಿರಗಳಲ್ಲಿ ಸಾಕಷ್ಟು ಒಳ್ಳೆಯ ಅನುಭವ ನಮಗೆ ಸಿಕ್ಕಿದೆ. ಆ ಹಿನ್ನೆಲೆಯಲ್ಲೇ ಇಡೀ ಚಿತ್ರ ಶಿಬಿರದ (ನಮ್ಮ ಶಿಬಿರದ್ದು) ಕಲ್ಪನೆಯನ್ನು ಪುನರ್ ರೂಪಿಸುವತ್ತ ಗಮನಹರಿಸಿದ್ದೇವೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳೂ ಅವಶ್ಯ.

ಪ್ರಸ್ತುತ ನಮ್ಮ ಶಿಬಿರದಲ್ಲಿ ಏಳೆಂಟು ಒಳ್ಳೆ ಸಿನಿಮಾಗಳ ವೀಕ್ಷಣೆ, ಅದರ ಆಯ್ದ ಚಿತ್ರಗಳ ಬಗೆಗಿನ ಚರ್ಚೆ ಹಾಗೂ ನುರಿತ ಸಿನಿತಜ್ಞರೊಂದಿಗೆ ಸಂವಾದ ನಡೆಯುತ್ತಿದೆ. ಇದನ್ನು ಹೊರತುಪಡಿಸಿ ಅಥವಾ ಇದನ್ನೂ ಉಳಿಸಿಕೊಂಡು ಮತ್ತಷ್ಟು ಹೊಸದನ್ನು ಸೇರಿಸುವ ಉದ್ದೇಶ ನಮ್ಮದು.

ನಮ್ಮ ನಾಲ್ಕನೇ ಸಂಚಿಕೆ ಸಿದ್ಧವಾಗುತ್ತಿದೆ. ನಮಗೆ ಸಮಸ್ಯೆ ಇರುವುದೇ ಲೇಖನಗಳದ್ದು. ಒಳ್ಳೆಯ ನುರಿತ ಲೇಖಕರ ಕೊರತೆ ಸಾಕಷ್ಟಿದೆ. ಈ ಬಾರಿ ನಮ್ಮ ಶಿಬಿರಗಳಿಂದಲೂ ಈ ನಿಟ್ಟಿನಲ್ಲಿ ಬಳಸಿಕೊಳ್ಳುವುದು ಸಾಧ್ಯವೇ ಎಂಬುದರ ಬಗ್ಗೆಯೂ ಗಮನಹರಿಸುವ ಉದ್ದೇಶವಿದೆ.

ಕಳಿಸಿ
ನಿಮ್ಮ ಸಲಹೆಗಳನ್ನು ನಮ್ಮ ಇಮೇಲ್ ಗೆ saangatya@gmail.com ಗೆ ದಯವಿಟ್ಟು ಕಳಿಸಿ.

ಹೆಸರು ನೋಂದಣಿ
ಎಂಟನೇ ಶಿಬಿರಕ್ಕೆ ಹೆಸರು ನೋಂದಣಿ ಆರಂಭವಾಗಿದೆ. ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರನ್ನು ನಮ್ಮ ಇಮೇಲ್ ಗೆ ಕಳಿಸಬಹುದು. ಅದರಲ್ಲಿ ಇರಬೇಕಾದ ಸಂಕ್ಷಿಪ್ತ ವಿವರ ಇಂತಿದೆ.
ಹೆಸರು, ಸಿನಿಮಾಗಳ ಬಗೆಗಿನ ಆಸಕ್ತಿ, ಉದ್ಯೋಗ ಅಥವಾ ವಿದ್ಯಾರ್ಥಿಯಾಗಿದ್ದರೆ ಅದರ ವಿವರ, ವಯಸ್ಸು, ನೀವು ನೋಡಿರಬಹುದಾದ ಅಥವಾ ಇಷ್ಟಪಟ್ಟಿರಬಹುದಾದ ನಾಲ್ಕೈದು ಚಿತ್ರಗಳ ಹೆಸರು (ಭಾಷೆಯ ಸಮಸ್ಯೆಯಿಲ್ಲ, ವಿಶ್ವ ಸಿನಿಮಾಗಳನ್ನೇ ನೋಡಬೇಕೆಂದೇನೂ ಇಲ್ಲ, ಕನ್ನಡದ್ದೂ ಆಗಬಹುದು), ಮೊಬೈಲ್ ನಂ, ಒಂದುವೇಳೆ ನಿಮ್ಮ ಬ್ಲಾಗ್, ವೆಬ್ ಸೈಟ್ ಇದ್ದರೆ ಅದರ ಲಿಂಕ್ ಕಳಿಸಿಕೊಡಿ.