ಬಿ.ಆರ್. ಪಂತಲು ಕನ್ನಡ ಚಿತ್ರರಂಗದ ಚಿರಂತನ ಸ್ಕೂಲ್ ಮಾಸ್ಟರ್. ಆ ಮಾತಿನ ಬಗ್ಗೆ ಯಾವುದೇ ಸಂಶಯ ಅಗತ್ಯವಿಲ್ಲ. ಈ ಕುರಿತು ಬರೆದಿದ್ದಾರೆ `ಸಿರಿ’ ನುಲೇನೂರು ಅವರು. ಇವರು ಪ್ರಸಿದ್ಧ ಸಿನಿಮಾ ಬರಹಗಾರರು.

ಕನ್ನಡ ಚಿತ್ರರಂಗ ಮರೆಯಬಾರದ ಹಿರಿಯರಲ್ಲಿ ಪ್ರಮುಖರಾದವರು ಬಿ.ಆರ್. ಪಂತಲು. ನಿರ್ಮಾಪಕರಾಗಿ, ನಿರ್ದೇಶಕರಾಗಿ, ಕಲಾವಿದರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದದ್ದು. ಇವತ್ತು ಕನ್ನಡ ಚಿತ್ರರಂಗ ತನ್ನ ವೈಭವದ ಯುಗವನ್ನು ಕಾಣುತ್ತಿದ್ದರೆ ಅದಕ್ಕೆ ಕಾರಣಕರ್ತರಾದ ಮಹನೀಯರಲ್ಲಿ ಪಂತಲು ಅವರ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಅಂತಹ ಮಹನೀಯರ ಜನ್ಮ ಶತಮಾನೋತ್ಸವದ ವರ್ಷವಿದು. ಅವರ ಸಾಧನೆಗಳತ್ತ ,ಬದುಕಿನ ಹೆಜ್ಜೆಗಳತ್ತ ಕಿರುನೋಟ ಹಾಯಿಸುವ ಪ್ರಯತ್ನ ಇಲ್ಲಿದೆ.

ಬಡಗೂರು ರಾಮಕೃಷ್ಣ ಪಂತಲು ಜನಿಸಿದ್ದು 1911ರ ಜುಲೈ 28 ರಂದು ಬಂಗಾರಪೇಟೆಯ ಬಳಿ ಇರುವ ಕುಪ್ಪಂನಿಂದ ಹನ್ನೊಂದು ಕಿ.ಮೀ. ದೂರದಲ್ಲಿರುವ ಕುಗ್ರಾಮ ಬಡಗೂರುವಿನಲ್ಲಿ. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು, ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು. ಬಾಲ್ಯದಿಂದಲೇ ಪಂತಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಇದು ಕಾರಣವಾಯಿತು. ಪಂತಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಐವರು ಮಕ್ಕಳು, ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಅವರುಗಳ ಪೈಕಿ ಪಂತಲು ಅವರೇ ಕಿರಿಯರು. ಪಂತಲು ಅವರ ತಂದೆ ಸಂಗೀತ, ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು. ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತ್ತಿದ್ದರು. ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದ. ಚಂದ್ರಹಾಸನ ಪಾತ್ರ ನೀಡುವ ಮೂಲಕ ತಂದೆಯೇ ಆತನ ರಂಗ ಪ್ರವೇಶಕ್ಕೆ ಕಾರಣಕರ್ತರಾದರು. ಬಾಲಕ ರಾಮಕೃಷ್ಣನ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲೇ ನಡೆಯಿತು. ಮುಂದಿನ ಶಿಕ್ಷಣಕ್ಕೆ ಅಲ್ಲಿ ಅವಕಾಶವಿರಲಿಲ್ಲವಾದ್ದರಿಂದ ತಾತನ ಮನೆಯಾದ ಕೋಲಾರದಲ್ಲಿದ್ದು, ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದರು. ಶಾಲಾ ಜೀವನದಲ್ಲೂ ಅವರು ನಾಟಕಗಳಲ್ಲಿನ ಅಭಿನಯದಿಂದ ಪ್ರಸಿದ್ಧಿ ಪಡೆದಿದ್ದರು.

ಪಂತಲು ಮುಂದೆ ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡರು. ಹುಟ್ಟು ಕಲಾವಿದರಾದ ಅವರು ಶಾಲೆಯಲ್ಲಿ ಪಾಠ ಮಾಡಿದ್ದಕ್ಕಿಂತ ಮಕ್ಕಳಿಗೆ ನಾಟಕ ಕಲಿಸಿದ್ದೇ ಹೆಚ್ಚು. ಹೀಗೆ ಒಂದುದಿನ ಅವರು ನಾಟಕವನ್ನು ಹುಡುಗರಿಗೆ ಕಲಿಸುತ್ತಿರುವ ಸಂದರ್ಭದಲ್ಲಿ ಶಾಲೆಗೆ ವಿದ್ಯಾ ಇಲಾಖೆಯ ಇನ್ಸ್‌ಪೆಕ್ಟರ್ ಬಂದರು. ಪಾಠ ಮಾಡುವ ಬದಲು ಮಕ್ಕಳಿಗಾಗಿ ನಾಟಕ ಕಲಿಸುತ್ತಿದ್ದ ಪಂತಲು ಅವರನ್ನು ಕಂಡು ಕೆಂಡಾಮಂಡಲವಾದರು. ಇದು ಸರಿಯಲ್ಲವೆಂದೂ ಇನ್ನೊಮ್ಮೆ ಹೀಗಾದರೆ ವಜಾ ಮಾಡಬೇಕಾಗುತ್ತದೆ ಎಂದೂ ನೋಟೀಸ್ ಜಾರಿ ಮಾಡಿದರು. ಇದರಿಂದ ನೊಂದ ಪಂತಲು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಕಲೆಯಲ್ಲೇ ಬದುಕನ್ನು ಅರಸಲು ಬೆಂಗಳೂರಿಗೆ ಬಂದರು. ಬೆಂಗಳೂರಿನಲ್ಲಿ ಆಗ ಅವರ ಹಿರಿಯರಾದ ಪಾಪಯ್ಯನವರು ಮಹಮ್ಮದ್ ಪೀರ್ ಅವರ ಚಂದ್ರಕಲಾ ನಾಟಕ ಮಂಡಳಿಯಲ್ಲಿ ಇದ್ದರು. ಪಂತಲು ಅವರಿಗೂ ಅಲ್ಲೇ ಅವಕಾಶ ಸಿಕ್ಕಿತು. ಆರಂಭದಲ್ಲಿ ಸಿಕ್ಕಿದ್ದೆಲ್ಲಾ ಚಿಕ್ಕ ಪುಟ್ಟ ಪಾತ್ರಗಳೇ. ಒಮ್ಮೆ ಶ್ರೀಕೃಷ್ಣ ಗಾರುಡಿಯಲ್ಲಿ ಧರ್ಮರಾಯನ ಪಾತ್ರ ವಹಿಸುತ್ತಿದ್ದ ಕಲಾವಿದರು ಅಸ್ವಸ್ಥರಾದಾಗ ಆ ಪಾತ್ರವನ್ನು ಪಂತಲು ಅವರು ನಿರ್ವಹಿಸಿದರು. ಯಶಸ್ವಿಯಾಗಿದ್ದರಿಂದ ಅವರಿಗೆ ಮುಖ್ಯ ಪಾತ್ರಗಳು ದೊರೆಯಲು ಆರಂಭವಾದವು. ಅದರಲ್ಲಿ ಅವರಿಗೆ ಖ್ಯಾತಿ ತಂದುಕೊಟ್ಟ ಪಾತ್ರ ಸಂಸಾರ ನೌಕ ನಾಟಕದ ಸುಂದರನದು.

ಒಮ್ಮೆ ಮದ್ರಾಸಿನ ಸೌಂದರ್ಯ ಮಹಲ್‌ನಲ್ಲಿ ಸಂಸಾರ ನೌಕ ನಾಟಕದ ಪ್ರದರ್ಶನ ಏರ್ಪಟ್ಟಿತ್ತು. ಈ ಪ್ರದರ್ಶನಕ್ಕೆ ಪ್ರಸಿದ್ಧರಾದ ನಾರದರ್ ಪತ್ರಿಕೆಯ ಸಂಪಾದಕ ಶ್ರೀನಿವಾಸರಾವ್ ಮತ್ತು ಹೆಸರಾಂತ ವಾಣಿಜ್ಯೋದ್ಯಮಿ ನಂಜಪ್ಪ ಚಟ್ಟಿಯಾರ್ ಅವರು ಬಂದಿದ್ದರು. ಅದನ್ನು ವೀಕ್ಷಿಸುವಾಗ ಅವರಿಗೊಂದು ಆಲೋಚನೆ ಬಂದಿತು. ಅದೇನೆಂದರೆ ಇಷ್ಟೊಂದು ಸೊಗಸಾದ ನಾಟಕವನ್ನು ಏಕೆ ಚಲನಚಿತ್ರವಾಗಿಸಬಾರದು ಎಂಬುದು. ಅದು ಕಾರ್ಯರೂಪಕ್ಕೂ ಬಂದಿತು. ಱಸಂಸಾರ ನೌಕ ಹೆಚ್.ಎಲ್.ಎನ್. ಸಿಂಹ ಅವರ ನಿರ್ದೇಶನದಲ್ಲಿ ಚಲನಚಿತ್ರವಾದಾಗ ಪಂತಲು ಅವರೇ ಸುಂದರನ ಪಾತ್ರ ನಿರ್ವಹಿಸಿದರು. ಹೀಗೆ ಬೆಳ್ಳಿತೆರೆ ಪ್ರವೇಶಿಸಿದ ಪಂತಲು, ಱರಾಜಭಕ್ತಿ ತಮಿಳು ಚಿತ್ರದ ದುರ್ಜಯನ ಪಾತ್ರದಲ್ಲಿ ಹೆಸರು ಮಾಡಿದರು. ಲವಂಗಿ, ವಿಜಯಲಕ್ಷ್ಮಿ, ವೀಟು ಹೀಗೆ ಅವರ ಅಭಿನಯದ ತಮಿಳು ಚಿತ್ರಗಳು ಸಾಲುಸಾಲಾಗಿ ಯಶಸ್ಸು ಕಂಡವು.

ಇದರಿಂದ ಪ್ರೇರಿತರಾಗಿ ಱಸುಕುಮಾರ ಪ್ರೊಡಕ್ಷನ್ಸ್ ಎಂಬ ಲಾಂಛನ ಸ್ಥಾಪಿಸಿ ಱಮಚ್ಚೈರೇಖಾ ಎಂಬ ತಮಿಳು ಚಿತ್ರ ನಿರ್ಮಿಸಿದರು. ಈ ಸಾಧನೆ ಯಶಸ್ವಿಯಾಗಲಿಲ್ಲ. ಇದೇ ಹೊತ್ತಿಗೆ ಅವರಿಗೆ ಒಂದು ಅನಿರೀಕ್ಷಿತ ಆಹ್ವಾನ ಬಂದಿತು. ಸಂಸಾರನೌಕ ಚಿತ್ರದಲ್ಲಿ ಅವರ ಜೊತೆ ಅಭಿನಯಿಸಿದ್ದ ಎಂ.ವಿ. ರಾಜಮ್ಮ ಱರಾಧಾರಮಣ ಎಂಬ ಕನ್ನಡ ಚಿತ್ರ ನಿರ್ಮಿಸುತ್ತಿದ್ದರು. ಇದರಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಅವರು ಪಂತಲು ಅವರನನು ಆಹ್ವಾನಿಸಿದ್ದರು. ರಾಧಾರಮಣ ದೊಡ್ಡ ಪ್ರಮಾಣದ ಯಶಸ್ಸು ಕಾಣದಿದ್ದರೂ ದೊಡ್ಡ ತಿರುವಿಗೆ ಕಾರಣವಾಯಿತು. ಪಂತಲು-ರಾಜಮ್ಮ ನಿಜ ಜೀವನದಲ್ಲೂ ಜೋಡಿಗಳಾದರು. ಅದು ಭಾರತೀಯ ಚಿತ್ರರಂಗ ಕಂಡ ಅಪೂರ್ವ ಜೋಡಿಗಳಲ್ಲೊಂದಾಯಿತು.

ಪಂತಲು ಬದುಕಿನಲ್ಲಿ ರಾಜಮ್ಮನವರು ಪ್ರವೇಶಿಸಿದ ಮೇಲೆ ಱಪದ್ಮಿನಿ ಪಿಕ್ಚರ್‍ಸ್ ಸಂಸ್ಥೆ ಹುಟ್ಟಿಕೊಂಡಿತು. ಪಿ.ನೀಲಕಂಠನ್ ಅವರ ನೆರವು ಕೂಡ ದೊರೆಯಿತು. ಸಂಸ್ಥೆ ನಿರ್ಮಿಸಿದ ಮೊದಲ ಚಿತ್ರ ಕಲ್ಯಾಣಂ ಪಣ್ಣಿಯಂ ಬ್ರಹ್ಮಚಾರಿ, ಮೊದಲ ಕನ್ನಡ ಚಿತ್ರ ಱಮೊದಲ ತೇದಿ ಇದು ಮಧ್ಯಮ ವರ್ಗದ ಕಷ್ಟಗಳನ್ನು ಬಿಂಬಿಸಿತ್ತು. ಚಿ.ಸದಾಶಿವಯ್ಯ ಈ ಚಿತ್ರದ ಸಾಹಿತ್ಯಿಕ ಜವಾಬ್ದಾರಿ ನಿರ್ವಹಿಸಿದ್ದರು. ಪದ್ಮಿನಿ ಪಿಕ್ಚರ್‍ಸ್ ನಿರ್ಮಿಸಿದ ಎಲ್ಲಾ ಚಿತ್ರಗಳಿಗೂ ಸಂಗೀತ ನೀಡಿದ ವಿಶಿಷ್ಟ ಹೆಗ್ಗಳಿಕೆಯ ಟಿ.ಜಿ. ಲಿಂಗಪ್ಪನವರ ಸಂಗೀತ ನಿರ್ದೇಶನದಲ್ಲಿ ಱಒಂದರಿಂದ ಇಪ್ಪತ್ತರವರೆಗೂ ಸೇರಿದಂತೆ ಗೀತೆಗಳು ಮಧುರವಾಗಿ ಮೂಡಿ ಬಂದಿದ್ದವು. ಮುಂದಿನ ಚಿತ್ರ ಱಶಿವಶರಣೆ ನಂಬಕ್ಕೆ ವಿವಾದಕ್ಕೆ ಸಿಲುಕಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಪಂತಲು ತಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲಾ ಧಾರೆ ಎರೆದು ಚಿತ್ರ ನಿರ್ಮಾಣ ಮಾಡಲು ಸಂಕಲ್ಪಿಸಿದರು.

ಪಂತಲು ಅವರು ಇದಕ್ಕಾಗಿ ಆರಿಸಿಕೊಂಡಿದ್ದು ಜಾನಪದ ಕತೆಯನ್ನು, ಇದನ್ನು ಪರಿಷ್ಕರಿಸಿ ಚಿತ್ರ ಯೋಗ್ಯವಾಗಿಸಿದವರು ಚೆನ್ನಮುಟ್ಟ ಲಕ್ಷ್ಮಣ್, ಚಿತ್ರಾ ಕೃಷ್ಣಮೂರ್ತಿ ಚಿತ್ರಕತೆ ರಚಿಸಿದರು. ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳು ಸಂಭಾಷಣೆ ರಚಿಸಿದರು. ಮಂಗಳಪುರಿ ರಾಜಕುಮಾರಿ ನಂದಿನಿ ಮತ್ತು ಅವಳ ಪರಿಚಾರಿಕೆ ಮಂಗಳೆಯರ ಸಂಬಂಧದಿಂದ ಆರಂಭವಾಗಿ ಅವರ ಮಗ ವಿಕ್ರಮನ ಕತೆಯವರೆಗೂ ಬೆಳೆಯುವ ಚಮತ್ಕಾರ ಪೂರ್ಣವಾದ ಹಾಗೆ ಅರ್ಥಗರ್ಭಿತವಾದ ಚಿತ್ರಕ್ಕೆ ರತ್ನಗಿರಿ ರಹಸ್ಯ ಎಂದು ಹೆಸರಿಡಲಾಯಿತು. ಆ ಕಾಲಕ್ಕೆ ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ ಹನ್ನೊಂದೂವರೆ ಲಕ್ಷ ರೂ.ಗಳನ್ನು ಗಳಿಸಿ ಕೊಟ್ಟಿತು. ಉದಯಕುಮಾರ್, ಜಮುನಾ, ಸಾಹುಕಾರ್ ಜಾನಕಿ, ಸ್ವತಃ ಪಂತಲು ಮತ್ತು ರಾಜಮ್ಮ ಅಮೋಘ ಅಭಿನಯ ನೀಡಿದ್ದರು.

1958 ರಲ್ಲಿ ಕನ್ನಡ ಚಿತ್ರರಂಗದ ಬೆಳ್ಳಿಹಬ್ಬದ ಆಚರಣೆಗಳು ಆರಂಭವಾದವು. ಮೇ 12ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಡಿ.ವಿ.ಜಿಯವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಈ ಆಚರಣೆ ಶಾಶ್ವತವಾಗಿ ಉಳಿಯಬೇಕಾದರೆ ಒಂದು ಸ್ಮರಣೀಯವಾದ ಚಿತ್ರ ರೂಪುಗೊಳ್ಳಬೇಕು ಎಂದರು. ಇದನ್ನು ಅಪ್ಪಣೆ ಎಂದು ಭಾವಿಸಿದ ಪಂತಲು ಅಂತಹ ಚಿತ್ರಕ್ಕಾಗಿ ಸಿದ್ಧತೆ ಆರಂಭಿಸಿದರು. ಶಿಕ್ಷಕರಾಗಿ ಪಡೆದ ಅನುಭವವನ್ನೇ ಇದಕ್ಕೆ ದ್ರವ್ಯವಾಗಿಸಿದರು. ಮರಾಠಿಯ ಱವೈಷ್ಣವಿ ಚಿತ್ರದ ಪ್ರೇರಣೆಯನ್ನೂ ಸೇರಿಸಿ ರೂಪಿಸಿದಂತಹ ಚಿತ್ರ ‘ಸ್ಕೂಲ್ ಮಾಸ್ಟರ್’ ಇಪ್ಪತ್ತೈದು ವಾರಗಳ ದಾಖಲೆ ಪ್ರದರ್ಶನ ಕಂಡಿತಲ್ಲದೆ ರಾಷ್ಟ್ರಪತಿಗಳ ರಜತ ಪದಕವನ್ನು ತನ್ನದಾಗಿಸಿಕೊಂಡಿತು. ಈ ಸಾಧನೆ ಮಾಡಿದ ಮೊದಲ ಚಿತ್ರ ಱಸ್ಕೂಲ್ ಮಾಸ್ಟರ್. ಈ ಚಿತ್ರದ ನಂತರ ಪಂತಲು ತಮಿಳಿನಲ್ಲಿ ವೀರಪಾಂಡೆ ಕಟ್ಟಬೊಮ್ಮನ್ ಚಿತ್ರ ನಿರ್ಮಿಸಿದರು. ಇದು ದಾಖಲೆಯ ಪ್ರದರ್ಶನ ಕಂಡಿದ್ದಲ್ಲದೆ ಅಪ್ರೋಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಎಂಬ ಪುರಸ್ಕಾರ ಪಡೆಯಿತು. ಈ ಗೌರವ ಪಡೆದ ಮೊದಲ ದಕ್ಷಿಣ ಭಾರತದ ಚಿತ್ರ ಎಂಬ ಹೆಗ್ಗಳಿಕೆ ಆ ಚಿತ್ರದ್ದು.

ಈ ಚಿತ್ರದ ಯಶಸ್ಸಿನಿಂದ ಪ್ರೇರಿತರಾದ ಪಂತಲು ಕನ್ನಡದಲ್ಲೂ ಸ್ವಾತಂತ್ರ್ಯ ಹೋರಾಟದ ಕುರಿತ ಚಿತ್ರ ಮಾಡಲು ಉದ್ದೇಶಿಸಿದರು. ಹೀಗೆ ಮೂಡಿ ಬಂದ ಚಿತ್ರ ಱಕಿತ್ತೂರು ಚೆನ್ನಮ್ಮ. ಈ ಚಿತ್ರವೂ ಅಪಾರ ಯಶಸ್ಸು ಗಳಿಸಿದ್ದು ಈಗ ಇತಿಹಾಸ. ಈ ಚಿತ್ರದ ನಂತರ ಪಂತಲು ಸಾಲುಸಾಲಾಗಿ ಸರಳ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದರು. ಗಾಳಿಗೋಪುರ, ಸಾಕುಮಗಳು, ಎಮ್ಮೆತಮ್ಮಣ್ಣ, ಗಂಗೇಗೌರಿ, ಅಮ್ಮ, ಗಂಡೊಂದು ಹೆಣ್ಣಾರು ಹೀಗೆ ಮೂಡಿಬಂದ ಪರಂಪರೆ ಕನ್ನಡಕ್ಕೆ ನಿರಂತರತೆಯನ್ನೇನೋ ತಂದಿತು. ಆದರೆ ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅದ್ಧೂರಿ ಚಿತ್ರಗಳನ್ನು ತಯಾರಿಸುತ್ತಿದ್ದರ ಬಗ್ಗೆ ಅಪಸ್ವರ ಮೂಡಿ ಬಂತು. ಇದಕ್ಕೆ ಉತ್ತರ ಎಂಬಂತೆ ಪಂತಲು ಕನ್ನಡದಲ್ಲಿ ಒಂದು ಅದ್ಧೂರಿಯಾದ ಅಷ್ಟೇ ಅರ್ಥಪೂರ್ಣವಾದ ಚಿತ್ರವನ್ನು ನಿರ್ಮಿಸಿದರು. ಅದೇ ಶ್ರೀಕೃಷ್ಣ ದೇವರಾಯ. ರಾಜ್‌ಕುಮಾರ್, ಭಾರತಿ, ಜಯಂತಿ ಪ್ರಮುಖ ತಾರಾಗಣದಲ್ಲಿದ್ದ ಚಿತ್ರದಲ್ಲಿ ಪಂತಲು ಸ್ವತಃ ತಿಮ್ಮರಸನ ಪಾತ್ರ ನಿರ್ವಹಿಸಿದರು. ಶ್ರೀಕೃಷ್ಣದೇವರಾಯ ವಾಣಿಜ್ಯಿಕವಾಗಿ ಬಹು ಯಶಸ್ವಿಯಾದ ಚಿತ್ರ. ಈ ಚಿತ್ರಕ್ಕಾಗಿ ತಮಗೆ ಬಂದ ಶ್ರೇಷ್ಠನಟ ಗೌರವವನ್ನು ಅದು ರಾಜ್‌ಕುಮಾರ್ ಅವರಿಗೆ ಬರಬೇಕಾಗಿತ್ತು ಎಂದು ಪಂತಲು ನಿರಾಕರಿಸಿದ್ದರು. ಅದು ಅವರ ವ್ಯಕ್ತಿತ್ವ, ಹಿರಿಮೆಗೆ ನಿದರ್ಶನವಾಗಿದೆ.

ಶ್ರೀಕೃಷ್ಣ ದೇವರಾಯದ ನಂತರ ಪಂತಲು ಅವರ ಚಿತ್ರಯಾತ್ರೆ ಸುಗಮವಾಗಿರಲಿಲ್ಲ. ಱಅಳಿಯ ಗೆಳೆಯ, ಮಾಲತಿ ಮಾಧವ, ಒಂದು ಹೆಣ್ಣಿನ ಕತೆ ಅವರು ನಂತರ ನಿರ್ಮಿಸಿದ ಕನ್ನಡ ಚಿತ್ರಗಳು. ಇವುಗಳು ಸೋಲು ಕಂಡವು. ಅದಕ್ಕಿಂತ ಹೆಚ್ಚಾಗಿ ಅವರು ನಿರ್ಮಿಸಿದ ಅದ್ಧೂರಿ ವೆಚ್ಚದ ತಮಿಳು ಚಿತ್ರಗಳ ಸೋಲು ಅವರನ್ನು ಕಂಗೆಡಿಸಿತ್ತು. ಹೀಗಿದ್ದರೂ ಅವರು ಬೆಳ್ಳಿತೆರೆ ದಾರಿ ಬಿಡಲಿಲ್ಲ. ಮಧುರೈ ಮಟ್ಟಿಯ ಸುಂದರ್ ಪಾಂಡ್ಯನ್ ಚಿತ್ರ ನಿರ್ಮಾಣಕ್ಕೆ ತೊಡಗಿದರು. ಇದರ ನಂತರ ಕಾಲೇಜು ರಂಗ ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಇದನ್ನು ತಮ್ಮ ಪ್ರಿಯ ಶಿಷ್ಯನಾದ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಲಿ ಎಂಬುದು ಅವರ ಆಶಯವಾಗಿತ್ತು. ಈ ಕುರಿತ ಚರ್ಚೆಗಾಗಿ ಬೆಂಗಳೂರಿಗೆ ಬಂದು ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ತಂಗಿದ್ದರು ಪ್ರತಿ ತಿಂಗಳ ೭ನೆ ತಾರೀಖಿನಂದು ಸಂಬಳ ನೀಡುವುದು ಪದ್ಮಿನಿ ಚಿತ್ರಸಂಸ್ಥೆಯ ಪದ್ದತಿ. ಎಂತಹ ಸಂದsದಲ್ಲೂ ಅದು ತಪ್ಪಿರಲಿಲ್ಲ ಆದರೆ ೧೯೭೪ರ ಅಕ್ಟೋಬರ್‌ನಲ್ಲಿ ಅದನನು ನೀಡಲಾಗಿಲ್ಲವೆಂದು ೮ರಂದು ತಿಳಿದ ಪಂತಲು ಅವರನ್ನು ತೀವ್ರವಾದ ಹೃದಯಾಘಾತ ಅಪ್ಪಳಿಸಿತು. ದಕ್ಷಿಣ ಭಾರತ ಚಿತ್ರರಂಗಕ್ಕೆ ಇನ್ನೂ ಸಾಕಷ್ಟು ಕೊಡುಗೆಗಳನ್ನು ನೀಡಬೇಕಾಗಿದ್ದ ಪಂತಲು ಅವರ ಜೀವನ ಅಧ್ಯಾಯ ಹೀಗೆ ಅನಿರೀಕ್ಷಿತವಾಗಿ ಮುಕ್ತಾಯವಾಯಿತು.

ಪಂತಲು ಅವರ ಮಗ ರವಿಶಂಕರ್ ಕೆಲಕಾಲ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ಮಗಳು ಬಿ.ಆರ್. ವಿಜಯಲಕ್ಷ್ಮಿ ಛಾಯಾಗ್ರಾಹಕಿಯಾಗಿ ಒಳ್ಳೆಯ ಹೆಸರು ಮಾಡಿದರು. ಪಂತಲು ಅವರ ಶಿಷ್ಯರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ದೊಡ್ಡ ಹೆಸರು ಮಾಡಿದರು. ಇಂತಹ ಶ್ರೀಮಂತ ಪರಂಪರೆ ನೀಡಿದ ಮಹನೀಯರನ್ನು ವಿಶೇಷವಾಗಿ ಸ್ಮರಿಸಿಕೊಳ್ಳಬೇಕಾದ ಅಗತ್ಯವಿದೆ.