ಸಿಬಂತಿ ಪದ್ಮನಾಭ ಬರೆದ ಈ ಲೇಖನ ಸತ್ಯ ಮೇವ ಜಯತೇ ಕಾರ್ಯಕ್ರಮವನ್ನೂ ಸೇರಿದಂತೆ ರಿಯಾಲಿಟಿ ಶೋಗಳ ಕುರಿತಾದ ಒಂದು ನೋಟ. ಇದಕ್ಕೆ ನಿಮ್ಮ ನೋಟವನ್ನೂ ಸೇರಿಸಬಹುದು.

ಸಮಾಜದ ಕಠೋರ ವಾಸ್ತವಗಳನ್ನೇ ಕೈಗೆತ್ತಿಕೊಂಡು ಆರಂಭಿಸಲಾಗಿರುವ ‘ಸತ್ಯಮೇವ ಜಯತೇ’ ರಿಯಾಲಿಟಿ ಶೋಗಳ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ತಮಗೆ ಹಿಡಿದಿರುವ ‘ಝಣಝಣ ಕಾಂಚಾಣ’ದ ಹುಚ್ಚನ್ನು ಜನಸಾಮಾನ್ಯರಿಗೂ ದಾಟಿಸಿ ಮಜಾ ತೆಗೆದುಕೊಳ್ಳುತ್ತಿರುವ ನಮ್ಮ ಚಾನೆಲ್‌ಗಳಿಗೆ ‘ಸತ್ಯಮೇವ ಜಯತೇ’ ನಿಜಕ್ಕೂ ಒಂದು ಒಳ್ಳೆಯ ಪಾಠವನ್ನೇ ಹೇಳಿಕೊಟ್ಟಿದೆ. ಬರೀ ಎರಡು ಕಂತುಗಳ ಪ್ರಸಾರದ ಬಳಿಕ ಸತ್ಯಮೇವ ಜಯತೇಯ ವೆಬ್‌ಸೈಟ್ ಪಡೆದ ಪ್ರತಿಕ್ರಿಯೆಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚು.

ಪ್ಯಾಟೆ ಮಂದಿಯನ್ನು ಕಾಡಿಗೆ ಕಳಿಸಿ ತಮಾಷೆ ನೋಡುವ, ಕಾಡಿನ ಮಂದಿಯನ್ನು ಪ್ಯಾಟೆಗೆ ಕರೆಸಿ ಗೇಲಿಮಾಡುವ, ನಿಂತಲ್ಲೇ ಸ್ವಯಂವರ ಏರ್ಪಡಿಸುವ, ಗಂಡಹೆಂಡಿರ ಜಗಳಗಳನ್ನು ಊರಿಗೆಲ್ಲ ಬಿತ್ತರಿಸುವ, ಸೀರೆಯ ಬೆಲೆ ನಿರ್ಧರಿಸಿಯೋ, ಅತಿಹೆಚ್ಚು ಈರುಳ್ಳಿ ಹೆಚ್ಚಿಯೋ ದುಡ್ಡು ಕೊಳ್ಳೆಹೊಡೆಯುವ ನಾಟಕಗಳೇ ರಿಯಾಲಿಟಿ ಶೋಗಳೆಂದು ನಂಬಿರುವ ಅಥವಾ ನಂಬಿಸಿರುವ ಚಾನೆಲ್‌ಗಳು ಅಮೀರ್ ಖಾನ್ ಎತ್ತಿಕೊಂಡಿರುವ ವಿಷಯಗಳನ್ನಾದರೂ ನೋಡಿ ತಮ್ಮೆದುರಿನ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು.

‘ಸತ್ಯಮೇವ ಜಯತೇ’ಯನ್ನು ಕನ್ನಡಕ್ಕೆ ಡಬ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎಲ್ಲ ಮಾಧ್ಯಮಗಳಲ್ಲೂ ವಿಸ್ತೃತ ಚರ್ಚೆ-ವಾದ-ವಿವಾದಗಳು ನಡೆಯುತ್ತಲೇ ಇವೆ. ಅದು ಗಂಭೀರ ಚಿಂತನೆಗೊಳಪಡಬೇಕಾದ ಮಹತ್ವದ ವಿಚಾರವೇ ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಅದೇ ಹೊತ್ತಿನಲ್ಲಿ ‘ಸತ್ಯಮೇವ ಜಯತೇ’ಯಂತಹ ಮಾದರಿಗಳನ್ನು ಪ್ರಾದೇಶಿಕವಾಗಿಯೂ ಅಳವಡಿಸಿಕೊಳ್ಳುವ ಬಗ್ಗೆ ನಮ್ಮ ಮಾಧ್ಯಮಗಳೇನಾದರೂ ಯೋಚಿಸಿದ್ದಾವೆಯೇ?

ತಮ್ಮ ಕಾರ್ಯಕ್ರಮದ ಮೊದಲನೇ ಕಂತಿನಲ್ಲೇ ಹೆಣ್ಣು ಭ್ರೂಣ ಹತ್ಯೆಯ ಕರುಣಾಜನಕ ಕಥೆಗಳನ್ನು ಅನಾವರಣಗೊಳಿಸುವ ಮೂಲಕ ಅಮೀರ್ ಖಾನ್ ಅದಾಗಲೇ ಕಾರ್ಯಕ್ರಮದ ಬಗ್ಗೆ ಮೂಡಿದ್ದ ಅಪಾರ ನಿರೀಕ್ಷೆಗೆ ಸಮರ್ಥವಾಗಿಯೇ ಜೀವ ತುಂಬಿದರು. ಕಳೆದ ಭಾನುವಾರದಂದು ಪ್ರಸಾರವಾದ ಸರಣಿಯ ಎರಡನೇ ಕಂತಿನಲ್ಲಿ ಮಕ್ಕಳ ಲೈಂಗಿಕ ಶೋಷಣೆಯೆಂಬ ಇನ್ನೊಂದು ಕತ್ತಲ ಪ್ರಪಂಚದ ಮೇಲೆ ಕಾಳಜಿಯ ಬೆಳಕು ಚೆಲ್ಲಿದರು.

ಅಮೀರ್ ಖಾನ್ ಬರೀ ಕಥೆಗಳಿಗಷ್ಟೇ ಜೋತುಬಿದ್ದಿದ್ದರೆ ‘ಸತ್ಯಮೇವ ಜಯತೇ’ ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ಬಗೆಯ ಕಣ್ಣೀರು ಮಾರುವ ದಂಧೆಗಳಿಗೆ ಇನ್ನೊಂದು ಸೇರ್ಪಡೆಯಾಗುತ್ತಿತ್ತು ಅಷ್ಟೇ. ಆದರೆ ಅವರು ಅಷ್ಟಕ್ಕೇ ಕಾರ್ಯಕ್ರಮವನ್ನು ಸೀಮಿತಗೊಳಿಸದೆ ಸಮಸ್ಯೆಯ ಆಳಕ್ಕಿಳಿಯುವ ಪ್ರಯತ್ನ ಮಾಡಿದರು. ತಮ್ಮ ಹೇಳಿಕೆಗಳಿಗೆ ಸಮೀಕ್ಷೆ-ಸಂಶೋಧನೆಗಳ ಆಧಾರ ಕೊಟ್ಟರು, ಅದನ್ನು ಸರಳಾತಿಸರಳವಾಗಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದರು. ಡಾಕ್ಟರು, ಮನೋವೈದ್ಯರು, ಕಾನೂನುತಜ್ಞರು, ಚಳುವಳಿಗಾರರ ನೇರ ಸಂದರ್ಶನ ಮಾಡಿ ಸಮಸ್ಯೆಯ ಎಳೆಎಳೆಯನ್ನೂ ಬಿಚ್ಚಿಟ್ಟರು. ಜನರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ, ಹೊಸ ಕಾನೂನುಗಳ ರಚನೆ ಹಾಗೂ ಅನುಷ್ಠಾನದ ಬಗ್ಗೆ ದೃಢವಾಗಿ ಮಾತಾಡಿದರು.

ಲೈಂಗಿಕ ಶೋಷಣೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಕ್ಕಳು ಹೊಂದಿರಬೇಕಾದ ಪ್ರಾಥಮಿಕ ಜ್ಞಾನ ಏನೆಂಬುದರ ಬಗ್ಗೆ ಅಮೀರ್ ಖಾನ್ ಮಾಡಿದ ‘ಮೂರು ನಿಮಿಷದ ವರ್ಕ್‌ಶಾಪ್’ ಇಡೀ ದಿನ ಮಾಡುವ ‘ರಾಷ್ಟ್ರೀಯ ವಿಚಾರಸಂಕಿರಣ’ಗಳಿಂತ ಎಷ್ಟೋ ಮೇಲ್ಮಟ್ಟದ್ದಾಗಿತ್ತು. ಅಲ್ಲೆಲ್ಲೂ ಅತಿರಂಜಕತೆ, ಕೃತಕತೆ, ನಟನೆ ಇರಲಿಲ್ಲ.

ರಿಯಾಲಿಟಿ ಶೋ, ಗೇಮ್ ಶೋಗಳನ್ನು ನಡೆಸುವಲ್ಲಿ ಸ್ಪರ್ಧೆಗೆ ಬಿದ್ದಿರುವ ನಮ್ಮ ವಾಹಿನಿಗಳು ಮಾಡುತ್ತಿರುವುದಾದರೂ ಏನನ್ನು? ಯಾವ ರೀತಿಯಲ್ಲಿ ನೋಡಿದರೂ ಇವೆಲ್ಲ ಬಗೆಬಗೆಯ ‘ಬಂಗಾರದ ಬೇಟೆ’ಗಳೇ ಆಗಿವೆ. ರಿಯಾಲಿಟಿ ಶೋಗಳು ಜನರ ಭಾವನೆಗಳಿಗೆ ತಿದಿಯೊತ್ತುವ ಮೂಲಕ ಟಿಆರ್‌ಪಿ ಕೊಯ್ಲು ಮಾಡುತ್ತಲೇ ತಮ್ಮ ತಿಜೋರಿ ತುಂಬಿಸಿಕೊಂಡರೆ, ಗೇಮ್ ಶೋಗಳು ಹಣದ ಕಂತೆಗಳನ್ನೇ ಪರದೆಯೆದುರು ಚೆಲ್ಲುತ್ತಾ ಸುಲಭದಲ್ಲಿ ದುಡ್ಡು ಸಂಪಾದಿಸುವ ಬಗ್ಗೆ ಜನರಲ್ಲಿ ಹುಚ್ಚುಕಲ್ಪನೆಗಳನ್ನು ಬಿತ್ತುತ್ತವೆ.

ನೂರೋ ಇನ್ನೂರೋ ರೂಪಾಯಿ ಪಣ ಇಟ್ಟು ಆಟ ಆಡುವ ಅಡ್ಡೆಗಳಿಗೆ ನಮ್ಮ ಪೊಲೀಸರು ದಾಳಿ ಮಾಡಿ ಅದರಲ್ಲಿ ಪಾಲ್ಗೊಂಡವರನ್ನು ಬಂಧಿಸುವುದಿದೆ. ಏಕೆಂದರೆ ಕಾನೂನಿನ ಪ್ರಕಾರ ಜೂಜು ಅಪರಾಧ. ಸರಿ; ಹಾಗಾದರೆ ಸಾವಿರ-ಲಕ್ಷ-ಕೋಟಿ ಲೆಕ್ಕದಲ್ಲಿ ಗರಿಗರಿ ನೋಟುಗಳ ಕಂತೆಗಳನ್ನೇ ಕ್ಯಾಮರಾ ಎದುರು ಪೇರಿಸಿಟ್ಟುಕೊಂಡು ಜನಸಾಮಾನ್ಯರು ಭ್ರಮಾಲೋಕದಲ್ಲಿ ಬೀಳುವಂತೆ ಮಾಡುವ ನಮ್ಮ ವಾಹಿನಿಗಳ ‘ಸಕತ್ ಕಿಕ್ ಕೊಡೋ ಗೇಮ್ ಶೋ’ಗಳು, ‘ಬೊಂಬಾಟ್ ಬದುಕಿನ ಬಿಂದಾಸ್ ಆಟ’ಗಳು, ‘ಡೀಲ್ ಆರ್ ನೋ ಡೀಲ್’ ಹುಚ್ಚಾಟಗಳು ಯಾವ ಜೂಜಿಗಿಂತ ಕಡಿಮೆ? ಅದರ ಹಿಂದಿನ ‘ಬಿಗ್‌ಬಾಸ್‌’ಗಳನ್ನು ಬಂಧಿಸುವ ಪೊಲೀಸರು ಎಲ್ಲಿದ್ದಾರೆ? ಅಂಥವರನ್ನು ಶಿಕ್ಷಿಸಿ ಜೈಲಿಗೆ ನೂಕಿ ‘ಇದು ಕಥೆಯಲ್ಲ ಜೀವನ’ ಎಂದು ಅರ್ಥಮಾಡಿಸುವ ಕಾನೂನುಗಳು ಎಲ್ಲಿವೆ?

‘ನಮ್ಮ ಟಿವಿ ಚಾನೆಲ್‌ಗಳು ಸಾದರಪಡಿಸುತ್ತಿರುವ ಬಹುತೇಕ ಗೇಮ್‌ಶೋಗಳು ನಿಸ್ಸಂಶಯವಾಗಿ ಜೂಜಿನ ಅಡ್ಡೆಗಳೇ ಆಗಿವೆ. ಹಣವೆಂದರೆ ಇವರಿಗೆ ಕಾಲಕಸ’ ಎಂದು ಜನರಾಡಿಕೊಳ್ಳುವ ಮಟ್ಟಿಗೆ ಈ ಗೇಮ್‌ಶೋಗಳು ಕೊಳೆತ ಹಣದ ಕೊಚ್ಚೆಗಳಾಗಿ ಮಾರ್ಪಟ್ಟಿವೆ. ಅಲ್ಲಿ ಕಾಣುವುದು ಅವರು ಹೇಳುವ ‘ಎಂಟರ್‌ಟೈನ್‌ಮೆಂಟ್’ ಆಗಲೀ, ‘ಕ್ರಿಯೇಟಿವಿಟಿ’ಯಾಗಲೀ ಅಲ್ಲ; ಬದಲಾಗಿ ದುಡ್ಡಿನ ಠೇಂಕಾರ, ಸಿರಿವಂತಿಕೆಯ ಅಹಂಕಾರ.

ಈ ಗೇಮ್ ಶೋಗಳಲ್ಲಿ ಭಾಗವಹಿಸುವ ಮಂದಿ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ಸಣ್ಣಪುಟ್ಟ ಆಟಗಳನ್ನು ಆಡುವ ಮೂಲಕ, ಹೆಚ್ಚೆಂದರೆ ಕುಣಿದು ಕುಪ್ಪಳಿಸುವ ಮೂಲಕ ಅರ್ಧಗಂಟೆಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು; ಕಳೆದುಕೊಳ್ಳುವ ನಾಟಕಗಳನ್ನೂ ಆಡಬಹುದು. ಜೂಜೆಂದಮೇಲೆ ಅಷ್ಟಾದರೂ ಇರದಿದ್ದರೆ ಹೇಗೆ?

ಅಂದಹಾಗೆ ಈ ಗೇಮ್ ಶೋಗಳಿಂದ ಯಾರೋ ಒಂದಷ್ಟು ಬಡಪಾಯಿಗಳಿಗಾದರೂ ಅನುಕೂಲವಾಗುತ್ತದೆಯೇ ಎಂದು ನೋಡಿದರೆ, ಇಂಥವುಗಳಿಗೆ ಜನಸಾಮಾನ್ಯರಿಗೆ ಪ್ರವೇಶವಿಲ್ಲ. ಈ ಕಾರ್ಯಕ್ರಮಗಳನ್ನು ನಡೆಸಿಕೊಡುವುದಕ್ಕೆ, ಅವುಗಳಲ್ಲಿ ಸ್ಪರ್ಧಾರ್ಥಿಗಳಾಗಿ ಭಾಗವಹಿಸುವುದಕ್ಕೆ ಟಿವಿಯವರಿಗೆ ಸಿನಿಮಾ-ಕಿರುತೆರೆ ತಾರೆಗಳಂತಹ ಸೆಲೆಬ್ರಿಟಿಗಳೇ ಬೇಕು. ಎಳಸೆಳಸು ಪ್ರಶ್ನೆಗಳಿಗೆ ಉತ್ತರಿಸುತ್ತಾ ಚೆಲ್ಲುಚೆಲ್ಲಾಗಿ ವರ್ತಿಸುತ್ತಾ ಸಾವಿರ ಲಕ್ಷ ಎಣಿಸುವವರೂ ಇದೇ ಸೆಲೆಬ್ರಿಟಿಗಳೇ. ಸೆಲೆಬ್ರಿಟಿಗಳನ್ನಲ್ಲದೆ ಈ ಬಡಪಾಯಿಗಳನ್ನು ಅಲ್ಲಿ ಕೋತಿಗಳಂತೆ ಕುಣಿಸುವುದಕ್ಕಾಗುತ್ತದೆಯೇ? ಅರ್ಧ ಗಂಟೆ ಗೇಮ್ ಶೋ ಮುಗಿವ ಹೊತ್ತಿಗೆ ಇವರೆಲ್ಲ ಹಣದ ಕಂತೆಗಳನ್ನು ತರಕಾರಿ ಚೀಲದಂತೆ ಹೊತ್ತುಕೊಂಡು ಹೊರನಡೆಯುತ್ತಾರೆ. ಟಿವಿ ಎದುರು ಕೂತ ಬಡ-ಮಧ್ಯಮವರ್ಗಗಳ ಸಾವಿರಾರು ಮಂದಿ ಪರದೆಯೊಳಗಿನ ಗಂಟಿನ ಬಗ್ಗೆ ಹಗಲುಗನಸು ಕಾಣುತ್ತಾ ಇನ್ನೊಂದು ಗೇಮ್‌ಶೋಗೆ ತಯಾರಾಗುತ್ತಾರೆ. ಯಾರದೋ ದುಡ್ಡು, ಟಿವಿಯವರ ಟಿಆರ್‌ಪಿ!

ಹಾಗೆ ನೋಡಿದರೆ ಈಚೆಗೆ ಕೌನ್ ಬನೇಗಾ ಕರೋಡ್‌ಪತಿ ಮಾದರಿಯಲ್ಲಿ ಕನ್ನಡದ ಎರಡು ವಾಹಿನಿಗಳಲ್ಲಿ ಬರುತ್ತಿರುವ ಗೇಮ್‌ಶೋಗಳೇ ಹೆಚ್ಚು ವಾಸಿ. ಅದೃಷ್ಟವಶಾತ್ ಅವರಿನ್ನೂ ತಮ್ಮ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಎಂದು ಘೋಷಣೆ ಹೊರಡಿಸಿಲ್ಲ. ಬದುಕಿನಲ್ಲಿ ಸೋಲುಗಳನ್ನುಂಡವರು, ಹಣದ ತೀರಾ ಅವಶ್ಯಕತೆ ಇರುವವರು, ಪ್ರತಿಭಾವಂತರು ಹಾಟ್‌ಸೀಟ್‌ನಲ್ಲಿ ಕುಳಿತು ಸಂತೃಪ್ತಿಯ ಗೆಲುವಿನ ನಗೆ ಬೀರುತ್ತಿದ್ದಾರೆ ಎಂಬುದೇ ಕೊಂಚ ಸಮಾಧಾನದ ವಿಷಯ. ಹಾಗಂತ, ಇವರೂ ಜನಪ್ರಿಯ ಸೂತ್ರಗಳ ಮಾದರಿಯಿಂದ ಈಚೆಗೆ ಬಂದಿಲ್ಲ. ಬಿಬಿಸಿಯ ಮಾಸ್ಟರ್‌ಮೈಂಡ್, ದೂರದರ್ಶನ-ಆಕಾಶವಾಣಿಗಳಲ್ಲಿ ಪ್ರಸಾರವಾಗುತ್ತಿದ್ದ ಶ್ರೇಷ್ಠಮಟ್ಟದ ಕ್ವಿಜ಼್ ಕಾರ್ಯಕ್ರಮಗಳ ಹಂತಕ್ಕೆ ಇವು ಬೆಳೆದಿಲ್ಲ, ಅಥವಾ ಆ ರೀತಿ ಬೆಳೆಸುವ ಇರಾದೆಯೂ ಚಾನೆಲ್‌ಗಳಿಗಿಲ್ಲ. ಅವರಿಗೂ ಬೇಕಾಗಿರುವುದು ಹೆಚ್ಚುಜನರ (ಜನಸಾಮಾನ್ಯರ) ವೀಕ್ಷಣೆ; ಸರಿಯಾಗಿ ಹೇಳುವುದಾದರೆ ಮತ್ತದೇ – ಟಿಆರ್‌ಪಿ.

ಹಾಗಾದರೆ ‘ಸತ್ಯಮೇವ ಜಯತೇ’ ಟಿಆರ್‌ಪಿ ಬಗ್ಗೆ ಯೋಚಿಸಿಲ್ಲವೇ? ಇಲ್ಲ ಎಂದಾದರೆ ಸ್ಟಾರ್‌ಪ್ಲಸ್ ಚಾನೆಲ್ ಬರೀ ಅದರ ಪ್ರಚಾರಕ್ಕೇ ರೂ. ೬.೨೫ ಕೋಟಿಯಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸಿದ್ದೇಕೆ? ಮೂರು ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಸಂಭಾವನೆ ನೀಡುತ್ತೇವೆಂದು ಅಮೀರ್ ಖಾನನ್ನೇ ಕರೆತಂದದ್ದೇಕೆ? ಈ ಪ್ರಶ್ನೆಗಳು ಸಹಜ. ಆದರೆ, ವ್ಯವಹಾರಕ್ಕೂ ಒಂದು ಗೊತ್ತುಗುರಿ ನೀತಿನಿಯಮ ಇದೆ. ವಾಣಿಜ್ಯ ಉದ್ದೇಶದ ಯಾವ ಖಾಸಗಿ ವಾಹಿನಿಯೂ ಟಿಆರ್‌ಪಿಯನ್ನು ಮರೆತು ಕಾರ್ಯಕ್ರಮ ಮಾಡಲಾರದು. ಆದರೆ ವ್ಯಾವಹಾರಿಕ ಉದ್ದೇಶಗಳ ನಡುವೆಯೂ ಸಮೂಹ ಮಾಧ್ಯಮಗಳಾಗಿ ತಮಗೊಂದು ಸಾಮಾಜಿಕ ಬಾಧ್ಯತೆಯಿದೆಯೆಂಬುದನ್ನು ಚಾನೆಲ್‌ಗಳು ಮರೆಯಬಾರದು. ವ್ಯಾವಹಾರಿಕ ಉದ್ದೇಶಗಳೇನೇ ಇದ್ದರೂ ‘ಸತ್ಯಮೇವ ಜಯತೇ’ ತನ್ನ ಜನಪರ ಕಾಳಜಿಯಿಂದ, ಹೊಸ ಸಾಧ್ಯತೆಗಳ ಅನ್ವೇಷಣೆಯಿಂದ, ಪರಿವರ್ತನಾಶೀಲತೆಯ ಬಯಕೆಯಿಂದ ವಿಶಿಷ್ಟವಾಗಿ ಎದ್ದುನಿಲ್ಲುತ್ತದೆ. ಅದಕ್ಕೇ ಅದು ನಮ್ಮೆಲ್ಲ ‘ರಿಯಾಲಿಟಿ’ಗಳನ್ನು ಮೀರಿದ ಒಂದು ‘ವಾಸ್ತವ’.