ಎಷ್ಟೋ ಬಾರಿ ಹೀಗನ್ನಿಸುವುದಿದೆ. ಹಳೆಯದ್ದೆಲ್ಲಾ ಚೆನ್ನಾಗೇ ಇತ್ತು. ಈ ಮಾತು ಚಿತ್ರ ಸಂಗೀತಕ್ಕೂ ಅನ್ವಯ. ಹಳೆಯದ್ದೆಲ್ಲಾ ಮಧುರ ಗೀತೆಗಳೇ, ಈಗಿನದ್ದೇನೋ ಇಷ್ಟವಾಗದು ಎಂಬ ಮಾತು ಸದಾ ಕೇಳಿಬರುತ್ತಲೇ ಇರುತ್ತದೆ. ಅದು ಹಾಗಲ್ಲ, ಹಾಗೆಲ್ಲಾ ಅಂದುಕೊಳ್ಳಬೇಡಿ ಎಂದಿದ್ದಾರೆ ಗೀತ ರಚನಕಾರ ಕವಿರಾಜ್. ಓದಿ ಅಭಿಪ್ರಾಯಿಸಿ.

ಪರಿವರ್ತನೆ ಜಗದ ನಿಯಮ’. ಅನಾಗರೀಕಕಾಡುಪ್ರಾಣಿಯಾಗಿ, ನಗ್ನನಾಗಿ, ಕಾಡುಮೇಡು ಅಲೆಯುತ್ತ, ಗೆಡ್ಡೆಗೆಣಸುತಿನ್ನುತ್ತಾ, ಬೇಟೆಯಾಡಿದಪ್ರಾಣಿಗಳಹಸಿಮಾಂಸ ತಿನ್ನುತ್ತಾ, ಚಿಂಪಾಂಜಿ ರೂಪದಲ್ಲಿಬದುಕು ಆರಂಭಿಸಿದಮಾನವ ಇಂದಿನಹೈ-ಫೈಯುಗದಸೊಫಿಸ್ಟಿಕೇಟೆಡ್ ನಾಗರೀಕನಾಗಲು ಕಾರಣ, ಕಾಲಚಕ್ರದೊಡನೆ ಮಿಳಿತಗೊಂಡಿರುವ ಪರಿವರ್ತನೆಯ ನಿಯಮ. ನಿಜ ಹೇಳಬೇಕೆಂದರೆ ಯುಗಯುಗಾಂತರಗಳಿಂದಲೂ ಮಾನವ ಪ್ರತಿಯೊಂದು ಕ್ಷಣಕ್ಷಣವೂ ಹೊಸತನದೆಡೆಗೆ, ಅಭಿವೃದ್ಧಿಯೆಡೆಗೆ ನಡೆದು ಬಂದಿದ್ದಾನೆ. ಪೀಳಿಗೆಯಿಂದ ಪೀಳಿಗೆಗೆ ಮಹತ್ತರವಾದ ಬದಲಾವಣೆಗಳು ಘಟಿಸಿವೆ.

ಒಂದು ಪೀಳಿಗೆಯಲ್ಲಿ ಮಾನ್ಯವಲ್ಲದ ಎಷ್ಟೋ ವಿಷಯಗಳನ್ನು ಮುಂದಿನ ಪೀಳೆತೆ ಮಾನ್ಯವಾಗಿಸಿ, ಅರಗಿಸಿಕೊಂಡಿದೆ. ಎಲ್ಲೆಗಳು ವಿಸ್ತಾರವಾಗಿವೆ. ಬೇಲಿಗಳನ್ನು ಕಿತ್ತೊಗೆದು ಮುನ್ನುಗ್ಗಲಾಗಿದೆ. ಒಂದು ನಿರ್ಧಿಷ್ಟ ಪೀಳೆಗೆಯು ತನ್ನ ಜೀವಿತಾವಧಿಯನ್ನು ಒಂದು ಮೆಟ್ಟಿಲಿನಿಂದ ಆರಂಭಿಸಿ ಸಂಸ್ಕೃತಿ, ಜೀವನ ಶೈಲಿ, ಸಾಮಾಜಿಕ ವ್ಯವಸ್ಥೆ, ಅಭಿವೃದ್ಧಿ ಹೀಗೆ ಜೀವನದ ಎಲ್ಲಾ ವಿಭಾಗಗಳು ಮುಂದುವರೆಯುತ್ತಾ ಒಂದು ಹಂತದಲ್ಲಿ ಹತ್ತನೇ ಮೆಟ್ಟಿಲಿಗೆ ಬಂದು ನಿಂತಿದೆ ಎಂದುಕೊಂಡರೆ.. ಆ ಹಂತದಲ್ಲಿ ಉಗಮವಾಗುವ ಅದರ ಮುಂದಿನ ಪೀಳೆಗೆಯ ಆರಂಭವೇ ಹತ್ತನೆ ಮೆಟ್ಟಿಲಾಗಿರುತ್ತದೆ.

ಸಹಜವಾಗಿ ಹೊಸ ಪೀಳಿಗೆ ತನ್ನ ಜೀವಿತಾವಧಿಯಲ್ಲಿ ಹತ್ತರಿಂದ ಆರಂಭಿಸಿ ಇಪ್ಪತ್ತನೇ ಮೆಟ್ಟಿಲ ತನಕ ಅಥವಾ ಅದನ್ನು ಮೀರಿ ಹೋಗುತ್ತದೆ. ಇದಕ್ಕೆ ಒಂದು ಸರಳ ಉದಾಹರಣೆ ಕೊಡುವುದಾದರೆ ಅನಾದಿಕಾಲದಲ್ಲಿ ದೂರದಲ್ಲಿರುವ ಯಾರನ್ನಾದರೂ ಸಂಪರ್ಕಿಸಬೇಕಾದರೆ ದಿನಗಟ್ಟಲೆ ಕಾಲ್ನಡಿಗೆಯ ಮೂಲಕ ನಡೆದೆ ಹೋಗಬೇಕಿತ್ತು. ನಂತರದ ಕೆಲ ಪೀಳಿಗೆಗಳಲ್ಲಿ ವಾಹನಗಳು ಬಂದವು, ಅದರ ನಂತರ ಸ್ಥಿರ ದೂರವಾಣಿಯಂತ ಅದ್ಭುತಗಳು ಮೈ ತಳೆಯಿತು. ಇದೀಗ ಮೊಬೈಲ್ ಯುಗ.

ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ಕೆಲವು ಅನಾರೋಗ್ಯಕರ ಸಂಗತಿಗಳು ಸೇರಿಕೊಂಡಿರುವುದು ನಿಜವಾದರೂ ಇದರಿಂದ ಆಗಿರುವ ಧನಾತ್ಮಕ ಪರಿಣಾಮುಗಳ ಮುಂದೆ ಅವೆಲ್ಲ ತೀರ ತೀರ ನಗಣ್ಯ. ಈ ಬದಲಾವಣೆಯ ಪ್ರಕ್ರಿಯೆಯೇ ಸತಿಪದ್ದತಿ, ಅಸ್ಪೃಶ್ಯತೆ, ಹೆಣ್ಣಿನ ಶೋಷಣೆ, ಬಾಲ್ಯ ವಿವಾಹದಂತ ಅನಿಷ್ಟಗಳನ್ನು ಹಂತ ಹಂತವಾಗಿ ತೊಡೆದು ಹಾಕುತ್ತಿರುವುದು. ಆದರೆ ಪ್ರಶ್ನೆಯಿರುವುದು ಮುಂದಿನ ಪೀಳಿಗೆ ಕಂಡುಕೊಂಡ ಬದಲಾವಣೆಯನ್ನು, ಅಭಿವೃದ್ಧಿಯನ್ನು ಹಿಂದಿನ ಪೀಳೆಗೆಯು ನೋಡುವ ಅಸಹಿಷ್ಣು ದೃಷ್ಟಿಕೋನದಲ್ಲಿ. ಕುಂತಲ್ಲಿ, ನಿಂತಲ್ಲಿ, ಎದ್ದಲ್ಲಿ, ಬಿದ್ದಲ್ಲಿ ತಮ್ಮ ಕಾಲವೇ ಚೆನ್ನಾಗಿತ್ತು, ಈಗ ಎಲ್ಲ ಕೆಟ್ಟು ಹೋಗಿದೆ ಎಂದು ಕೊರಗುತ್ತ ಕೂರುವವರ ಬಗ್ಗೆ. ಸದಾ ಭೂತಕಾಲದ ಮೆಲುಕಿನಲ್ಲಿ ವರ್ತಮಾನವನ್ನು ಹೀಯಾಳಿಸೋ ಜನರ ಬಗ್ಗೆ.

ಬಹುಶಃ ಆಂಗ್ಲಭಾಷೆಯಿಂದ ನಾವು ಎರವಲುಪಡೆದು ಹಿಗ್ಗಾಮುಗ್ಗಾ ಬಳಸುವ ನುಡಿಗಟ್ಟುಗಳಲ್ಲಿನಿಸ್ಸಂಶಯವಾಗಿ ಮೊದಲನೆಯ ಸ್ಥಾನದಲ್ಲಿನಿಲ್ಲುವುದೆಂದರೆ “ಓಲ್ಡ್ ಈಸ್ ಗೋಲ್ಡ್’ ಎಂಬ ಉಕ್ತಿ. ಕೆಲವೊಂದು ಸಂದರ್ಭದಲ್ಲಿ ಇದು ನಿಜವಾಗುವುದಾದರೂ, ಇನ್ನು ಹೆಚ್ಚಿನಸಂದರ್ಭಗಳಲ್ಲಿ ಇದೊಂದು ದೊಡ್ಡ ಮಿತ್ ಆಗಿಬಿಟ್ಟಿದೆ. ಈ ಮಿತ್‌ಗಳ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ ಇಂದಿನ ಕಾಲದ ಗೀತರಚನೆಕಾರರಾಗಿ ಈ ಮಿತ್ ಎಷ್ಟು ಸಲ ನಮ್ಮನ್ನು ಹೀಯಾಳಿಸಿದೆ, ಮುಜುಗರಕ್ಕೀಡು ಮಾಡಿದೆ, ಡೀ-ಮಾರಲೈಸ್ ಮಾಡಿದೆ. ಹಿಂದಿನ ಹಾಡುಗಳನ್ನು ಹೊಗಳಿ ಇಂದಿನ ಹಾಡುಗಳನ್ನು ಜರಿದು ಉದ್ದಾಮ ಪಂಡಿತರಂತೆ ಮೂಲಭೂತವಾದ, ಮಡಿವಂತಿಕೆಯ ವಕ್ತಾರರಂತೆ ಪೋಸ್ ಕೊಡುವ ಕೆಲವರ ಖಯಾಲಿ, ಆಗಾಗ ನಮ್ಮನ್ನು ಕಾಡಿದೆ. ಹಿಂದಿನ ಹಾಡುಗಳು ಮಧುರ ಎಂಬುದನ್ನು ಖಂಡಿತ ಅಲ್ಲಗಳೆಯಲಾಗದು. ಆದರೆ, ನನ್ನ ವಿರೋಧವಿರುವುದು, ಸಾರಾಸಗಟಾಗಿ ಹಿಂದಿನ ಎಲ್ಲಾ ಹಾಡುಗಳು ಮಧುರ, ಇಂದಿನ ಎಲ್ಲಾ ಹಾಡುಗಳು ಸದರ ಎನ್ನುವಂತೆ ಬಾಯಿಚಪಲ ತೀರಿಸಿಕೊಳ್ಳುವವರ ಬಗ್ಗೆ.

ಮೊದಲು ಗಮನಿಸಬೇಕಾದ ವಿಷಯವೆಂದರೆಹಿಂದಿನಹಾಡುಗಳು ಮಧುರ ಅಥವಾ ಅಮರ ಎನ್ನಿಸಿಕೊಳ್ಳುವ ಪ್ರಮುಖ ಕಾರಣ ಆ ಹಾಡುಗಳಿಗೆಸಿಕ್ಕಿರುವ ಲೈಫ್ ಸ್ಪ್ಯಾನ್.. ಕಳೆದ 30-40 ವರ್ಷಗಳಿಂದ ನಾವು ಅವುಗಳನ್ನು ಕೇಳುತ್ತಾ ಬಂದಿದ್ದೇವೆ. ಚಿಕ್ಕಮಕ್ಕಳಿದ್ದಾಗ ಅರ್ಥವಾಗದೆ ಆಲಿಸಿದ್ದೇವೆ. ಯೌವನದಲ್ಲಿ ಆ ಸಾಲುಗಳನ್ನು ನಮ್ಮವೇ ಎಂಬಂತೆ ನಾವು ಪುಳಕಿತರಾಗಿದ್ದೇವೆ. ತುಡಿತ, ಮಿಡಿತಗಳಿಗೆ ಅನ್ವಯಿಸಿ ಹಾಡಿಕೊಂಡಿದ್ದೇವೆ. ಜೀವನದ ಇಳಿಸಂಜೆಗಳಲ್ಲಿರುವವರು ನಿತ್ಯದ ಇಳಿಸಂಜೆಯ ವೇಳೆಯಲ್ಲಿ ಕುಳಿತು ಕಣ್ಮುಚ್ಚಿ ಕೇಳಿಸಿಕೊಂಡು ಕಳೆದ ನೆನಪುಗಳನ್ನೊಮ್ಮೆ ಕೆದಕಿ ಬರುತ್ತೇವೆ.

ಈ ಹಾದಿಯಲ್ಲಿ ಆ ಹಾಡುಗಳ ಪ್ರತಿ ಸಾಲು ಅಥವಾ ಅದರಲ್ಲಿ ಬಳಸಿರುವ ಒಂದೊಂದು ವಾಕ್ಯದ ನಾದವೂ ನಮ್ಮ ಮನದಾಳದಲ್ಲಿ ಹಾಸುಹೊಕ್ಕಾಗಿ ಅಚ್ಚೊತ್ತಿವೆ. ಒಂದು ರೀತಿಯಲ್ಲಿ ಹೇಳುವುದಾದರೆ ನಾವು ಆ ಹಾಡುಗಳನ್ನು ಎದೆಯಲ್ಲಿ ತುಂಬಿಕೊಂಡು, ಆ ಹಾಡುಗಳ ಹೆಗಲ ಮೇಲೆ ಕೈ ಹಾಕಿಕೊಂಡು ಬೆಳೆದು ಬಂದಿದ್ದೇವೆ. ಆ ಮಟ್ಟಿಗೆ ಆ ಹಾಡುಗಳು ನಮ್ಮದೆ ಬಾಲ್ಯದ ಚಡ್ಡಿ ದೋಸ್ತ್‌ಗಳಷ್ಟೇ ಆಪ್ತ. ಆ ಇಂದಿನ ಹಾಡುಗಳ ವಿಷಯಕ್ಕೆ ಬಂದಾಗ ಇವಿನ್ನು ಅಂಬೇಗಾಲಿಡುತ್ತಿರುವ ಶಿಶುಗಳಂತೆ. ಹುಟ್ಟಿದ್ದೇ ನಿನ್ನೆ ಮೊನ್ನೆ.. ಆದರೆ ಇಲ್ಲಿ ಗಮಲಿಸಬೇಕಾದ ವಿಷಯಗಳೆಂದರೆ ಈ ಹಾಡುಗಳ ಜೊತೆಜೊತೆಗೆ ಇಂದಿನ ನವ ಪೀಳಿಗೆ ಬೆಳೆಯುತ್ತದೆ. ಅವರೊಂದಿಗೆ ಈ ಹಾಡುಗಳಿಗು ಅಂತಹದೊಂದು ದೀರ್ಘ ಲೈಫ್ ಸ್ಪ್ಯಾನ್ ಸಿಗುತ್ತದೆ. ಈ ಪೀಳಿಗೆ ಮುಂದೆ ಖಂಡಿತಾ “ಒಲವೆ ಜೀವನ ಸಾಕ್ಷಾತ್ಕಾರ’ ಅಥವಾ ’ಪಂಚಮ ವೇದ ಪ್ರೇಮದ ನಾದ’ ಹಾಡುವುದಿಲ್ಲ. ಅವು ಖಂಡಿತವಾಗಿ ಹಾಡುವುದು ’ಅನಿಸುತಿದೆ ಯಾಕೊ ಇಂದು’ ಅಥವಾ ’ ಪತ್ರ ಬರೆಯಲಾ ಇಲ್ಲಾ ಚಿತ್ರ ಬಿಡಿಸಲಾ’ ಹಾಡುಗಳನ್ನೆ. ಇದಕ್ಕಿಂತಲೂ ಇಂದಿನ ಪೀಳೆಗೆ ಯಾವ ಥರದ ಹಾಡುಗಳನ್ನು ಕೇಳಬೇಕು, ಅವರ ಟೇಸ್ಟ್ ಏನಿರಬೇಕು ಎಂದು ನಿರ್ಧರಿಸಿಕೊಳ್ಳಬೇಕಾದವರು ಕೇವಲ ಇಂದಿನ ಪೀಳಿಗೆಯವರೆ.

ಇಂದು ಒಂದು ಅಭಿರುಚಿಯಹಾಡುಗಳು ಹೆಚ್ಚಿಗೆ ಬರುತ್ತಿವೆ ಎಂದರೆ ಅಂತಹ ಹಾಡುಗಳನ್ನೇ ಇಂದಿನ ಕೇಳುಗರು ಬಯಸುತಾರೆ ಎಂದರ್ಥ. ಯಾವತ್ತಿಗು ಸಂಗೀತ ನಿರ್ದೇಶಕರು, ಚಿತ್ರ ನಿರ್ದೇಶಕರು, ಸಾಹಿತಿಗಳು ಒಂದು ಹಾಡನ್ನು ಸೃಷ್ಟಿಸುವುದು ತಮ್ಮ ಕೋಣೆಯಲ್ಲಿ ಕುಳಿತು ಒಂದು ಕಿಟಕಿಯಿಂದ ಹೊರಗಿನ ಸಮಾಜವನ್ನು ಇಣುಕಿ ನೋಡಿ ಅಲ್ಲಿನ ಸಂಚಲನಗಳಿಂದ ಸ್ಫೂರ್ತಿ ಪಡೆದೆ. ಅಂದಿನವರು ಆ ಥರದ ಹಾಡುಗಳನ್ನು ನೀಡಿದ್ದರೆ, ಅಂತಹದನ್ನೆ ಸಮಾಜ ಬಯಸಿತ್ತು ಎಂದರ್ಥ. ಇಂದು ನಾವುಗಳು ಸಹಾ ಮಾಡುತ್ತಿರುವುದು ಅದನ್ನೆ. ನಮ್ಮ ಪ್ರತಿ ಹಾಡಿನ ಸ್ಫೂರ್ತಿ, ಪ್ರೇರಣೆ, ವ್ಯಾಪ್ತಿ, ಗುರಿ ಎಲ್ಲವು ಇಂದಿನ ಸಮಾಜವೆ. ಇಂದಿನ ಜೀವನವೇ. ಮೊದಲೇ ಹೇಳಿರುವಂತೆ ಬದುಕು ಪ್ರತಿ ನಿಮಿಷಕ್ಕೆ ವೇಗೋತ್ಕರ್ಷ ಪಡೆದುಕ್ಕೊಳ್ಳುತ್ತಿದೆ. ಜೀವನವೆ ಒಂದು ಹಾಡು ಎಂದುಕೊಂಡರೆ ಅದರ ಟೆಂಪೊ (ವೇಗ) ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಿದೆ. ಅದಕ್ಕನುಗುಣವಾಗಿ ಹಾಡುಗಳ ಟೆಂಪೋನು ಬದಲಾಗುತ್ತದೆ.

ಇಷ್ಟಕ್ಕೂಹಿಂದಿನ ಕಾಲದಎಲ್ಲಾಹಾಡುಗಳುಮಧುರವಲ್ಲ.. ಸೊ ಕಾಲ್ಡ್ ಸಾಹಿತ್ಯ ಒಳಗೊಂಡವಲ್ಲ. ಎಂಥಹ ಉದ್ಧಾಮಪಂಡಿತರಲ್ಲೂ ಹಳೆಯ ಅಮರಗೀತೆಗಳ ಪಟ್ಟಿಹೇಳಿ ಎಂದರೆ ಸುಮಾರು 500 ಹಾಡುಗಳನ್ನು ಹೆಸರಿಸಬಹುದು. ಹೋಗಲಿ, ಒಂದು ಸಾವಿರ ಹಾಡುಗಳು ಅಂತ ಇಟ್ಟುಕೊಳ್ಳೋಣ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈವರೆಗೆ ಬಂದಿರುವ ಹಾಡುಗಳ ಸಂಖ್ಯೆ ಸುಮಾರು 28, 800. ಅವುಗಳಲ್ಲಿ 20000 ಹಾಡುಗಳನ್ನು ಹಳೆಯ ಹಾಡು ಎಂದುಕೊಂಡರೆ ಇನ್ನುಳಿದ 19000 ಹಾಡುಗಳು ಎಲ್ಲಿ ಹೋದವು? ಇದರ ಅರ್ಥ ಇಷ್ಟೇ.. ’ಹಿಂದಿನ ಕಾಲದ ಹಾಡುಗಳೆಲ್ಲ ಅಮರವಲ್ಲ’. ಅಲ್ಲೂ ಗಟ್ಟಿ ಹಾಗು ಜೊಳ್ಳು ಎರಡೂ ಇತ್ತು. ಇಂದೂ ಕೂಡ ಹಾಗೆ.

ಈಗಿನ ಕೆಲವು ಹಾಡುಗಳು ಟೈಮ್ ಟೆಸ್ಟೆಡ್ ಆಗಿ ನಿಸ್ಸಂಶಯವಾಗಿ ಮುಂದೆ ಅಮರ ಗೀತೆಗಳ ಸಾಲಿಗೆ ಸೇರಿಕೊಳ್ಳುತ್ತವೆ. ವಿಪರ್ಯಾಸವೆಂದರೆ ಈ ಗೊಣಗಾಟದ ಪ್ರವೃತ್ತಿ ಹೀಗೆ ಮುಂದುವರೆದು ಆಗಲೂ ಇಂದಿನ ಹಾಡುಗಳನ್ನು ಉದಾಹರಿಸಿ ನಾವು ಅಂದಿನ ಪೀಳಿಗೆಯವರನ್ನು ಜರಿಯುತ್ತಿರುತ್ತೀವಿ. ಇನ್ನು ಸಾಹಿತ್ಯದ ಗುಣಮಟ್ಟದ ವಿಷಯಕ್ಕೆ ಬಂದರೂ ಅಷ್ಟೇ, ದ್ವಂದ್ವಾರ್ಥದ ಹಾಡುಗಳು ಅಂದೂ ಇದ್ದವು. ’ಬೇಕಾ ಸಾಮಾನು’.. ’ಏರಿ ಮೇಲೆ ಏರಿ..’ ತರದ ಹಾಡುಗಳಿಂದ ಹಿಡಿದು ನಡುನಡುವೆ ಇಂಗ್ಲೀಷ್ ಪದಗಳನ್ನು ಬಳಸಲು ಶುರುವಾಗಿದ್ದು ಹಿಂದಿನ ಕಾಲದಲ್ಲೆ. ಅಂದಿನವರು ನೆಟ್ಟ ಸಸಿ ಇಂದು ಮರವಾಗಿ ಬೆಳದಿರಬಹುದು ಅಷ್ಟೇ.. ಒಂದು ಗಮನಾರ್ಹ ವಿಷಯವೆಂದರೆ, ಇತ್ತೀಚಿನ ಐದಾರು ವರ್ಷಗಳಲ್ಲಿ ದ್ವಂದ್ವಾರ್ಥದ ಹಾಡುಗಳು ಹೆಚ್ಚು ಕಡಿಮೆ ಬಂದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಸುಧಾರಿಸಿದೆ. ಇದಕ್ಕೆ ಸೆನ್ಸಾರ್ ಮಂಡಳಿಯ ಬಿಗು ನೀತಿ ಒಂದು ಕಾರಣವಾದರೆ ಇನ್ನೊಂದು ಮುಖ್ಯ ಕಾರಣ ಈಗಿನ ಯಾವ ನಿರ್ದೇಶಕರು, ಸಂಗೀತ ನಿರ್ದೇಶಕರು, ಸಾಹಿತಿಗಳು ಆ ತರಹದ ಚೀಪ್ ಗಿಮಿಕ್ ಇಷ್ಟಪಡದಿರುವುದು. ಇದು ಇವರೆಲ್ಲರ ಜೊತೆ ಕೆಲಸ ಮಾಡಿರುವ ನನ್ನ ಸ್ವಾನುಭವ.

ಇಷ್ಟೇ ಅಲ್ಲದೆಮೊದಲೆ ಹೇಳಿರುವಂತೆಚಿತ್ರರಂಗ ಮೊದಲಿನಂತೆ ಕೇವಲ ಕಲಾ ಮಾದ್ಯಮವಾಗಿ ಉಳಿದುಕೊಂಡಿಲ್ಲ. ಕೋಟ್ಯಾಂತರ ರೂಪಾಯಿ ಬಂಡವಾಳ ತೊಡಗಿಸಿ ಕೋಟ್ಯಾಂತರ ರೂಪಾಯಿಗಳ ಲಾಭವನ್ನು ಬಾಚಿಕೊಳ್ಳಬೇಕೆಂಬ ಮಹದಾಸೆಯಿಂದ ಬರುವ ವ್ಯವಹಾರವೂ ಕೂಡ ಆಗಿದೆ. ಎಲ್ಲಾ ಸಿನಿಮಾ ಮೇಕರ್‌ಗಳ ಮೊದಲ ಗುರಿ ಹಾಕಿರುವ ಬಂಡವಾಳವನ್ನು ವಾಪಾಸು ಪಡೆಯುವುದು ಎಂಬುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ನಿಷ್ಠುರ ಸತ್ಯ. ಅದು ಸಹಜವೂ ಕೂಡ. ಹಾಗಿದ್ದಾಗ ಖಂಡಿತಾ ಚಿತ್ರದ ಜೊತೆ ಹಾಡಿನಲ್ಲೂ ಒಂದಷ್ಟು ಸೆಳೆಯುವ ಅಂಶಗಳನ್ನು ಸೇರಿಸಬೇಕಾದ ಅನಿವಾರ್ಯತೆ ಇರುತ್ತದೆ. ಜೊತೆಗೆ ಹಿಂದಿನಂತೆ ವರ್ಷಕ್ಕೆ ಮೂರೋ ನಾಲ್ಕೋ ಚಿತ್ರಗಳು, ಹದಿನೈದೋ ಇಪ್ಪತ್ತೋ ಹಾಡುಗಳು ಹೊರಬರುವ ಕಾಲವಲ್ಲ ಇದು. ಆಗಿನ ವರುಷದ ಲೆಕ್ಕ ಈಗ ವಾರದಲ್ಲೇ ಚುಕ್ತ ಆಗುತ್ತಿದೆ. ಆಗಾದರೋ ಅನಿವಾರ್ಯವಾಗಿ ಆ ಮೂರು ನಾಲ್ಕು ಸಿನಿಮಾಗಳನ್ನು, ಹತ್ತು ಹದಿನೈದು ಹಾಡುಗಳನ್ನು ಜನ ಒಪ್ಪಿಕೊಳ್ಳಲೇ ಬೇಕಿತ್ತು. ಕೇಳಿಸಿಕೊಳ್ಳಲೇ ಬೇಕಿತ್ತು. ಈಗ ಹಾಗಲ್ಲ. ಇದು ’ಮಾಲ್’ ಯುಗ. ಒಂದೊಂದಕ್ಕೂ ನೂರಾರು ಆಲ್ಟರ್ನೇಟೀವ್‌ಗಳು. ಕನ್ನಡ ಹಾಡುಗಳು ಕನ್ನಡ ಚಿತ್ರಗಳಂತೆ ಹಿಂದಿ, ತಮಿಳು, ತೆಲುಗು, ಇಂಗ್ಲೀಷ್ ಹೀಗೆ ಮುಂದುವರೆದ ಅನೇಕ ಭಾಷೆಯ ಹಾಡುಗಳೊಂದಿಗೆ ಸ್ಪರ್ದೆಗಿಳಿಯಬೇಕಿದೆ. ಇಷ್ಟೆಲ್ಲಾ ಸವಾಲುಗಳನ್ನು ಸದ್ಯ ನಾವು ನಿಭಾಯಿಸುತ್ತಿರುವುದು ಸಾಮಾನ್ಯ ವಿಷಯವೇನಲ್ಲ.

ನಾದಬ್ರಹ್ಮಹಂಸಲೇಖರವರ ಉತ್ಕರ್ಷದ ಅವಧಿ ನಂತರ ಕೆಲ ಕಾಲ ಕನ್ನಡ ಚಿತ್ರ ಸಂಗೀತ ಕ್ಷೇತ್ರದಲ್ಲಿ ನಿರ್ವಾತವೊಂದು ಏರ್ಪಟ್ಟಿದ್ದು ಸುಳ್ಳಲ್ಲ. ಆ ದಿನಗಳಲ್ಲಿನಾನಿನ್ನು ಊರಿಂದ ಬೆಂಗಳೂರಿಗೆಬಂದಿದ್ದೆ. ಇಲ್ಲಿನ ಯಾವುದೇ ಸರ್ಕಲ್‌ನಲ್ಲಿ ನಿಂತರೂ ಅತ್ತಿಂದ ಹಿಂದಿ, ಇತ್ತಿಂದ ತಮಿಳು.. ಇನ್ನೊಂದೆಡೆ ತೆಲುಗು ಹಾಡುಗಳೇ ಹೆಚ್ಚಾಗಿ ಕೇಳಿಬರುತ್ತಿದ್ದಿದ್ದು ಮನಸ್ಸಿಗೆ ಖೇದ ಉಂಟುಮಾಡುತ್ತಿತ್ತು. ಎಫ್ ಎಂ ರೇಡಿಯೋಗಳ ಆರಂಭದ ವರ್ಷಗಳಲ್ಲಿ ಕನ್ನಡ ಹಾಡುಗಳನ್ನೂ ಪ್ರಸಾರ ಮಾಡಿ ಎಂದು ಬೊಬ್ಬೆ ಹೊಡೆಯಬೇಕಿತ್ತು, ಸ್ಟ್ರೈಕ್ ಮಾಡಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಬೆಂಗಳೂರಲ್ಲಿ ಎಲ್ಲೇ ಹೋದರೂ ಕೇಳುವುದು ಕನ್ನಡ ಹಾಡೇ ಎಂಬುದು ಹೆಮ್ಮೆಯ ಸಂಗತಿ. ಈಗ ಎಫ್ ಎಂ ರೇಡಿಯೋಗಳು ತಾವೇ ತಾವಾಗಿ, ಅನಿವಾರ್ಯವಾಗಿ ಫುಲ್ ಕನ್ನಡ ಎಂದು ಬದಲಾಗಿರುವುದು ಇಂದಿನ ಕನ್ನಡ ಹಾಡುಗಳ ತಾಕತ್ತು. ಇನ್ನೂ ಸಂತೋಷದ ಸಂಗತಿ ಎಂದರೆ, ಇಲ್ಲಿರುವ ಪರಭಾಷಿಗರೂ ಕೂಡ ಕನ್ನಡ ಹಾಡುಗಳ ಮೋಡಿಗೆ ಮಾರುಹೋಗಿ ರೆಗ್ಯುಲರ್ ಆಗಿ ನಮ್ಮ ಹಾಡುಗಳನ್ನು ಕೇಳುತ್ತಿರುವುದು, ತಮ್ಮ ಮೊಬೈಲ್‌ಗಳಲ್ಲಿ ಅಪ್‌ಲೋಡ್ ಮಾಡಿಕೊಂಡು ರಿಂಗ್ ಟೋನ್ , ಹಲೋ ಟ್ಯೂನ್‌ಗಳಾಗಿ ಬಳಸಿಕೊಳ್ಳುತ್ತಿರುವುದು ನಮ್ಮ ಹಾಡುಗಳ ’ಧಮ್’ ತೋರಿಸುತ್ತದೆ. ದೇಶ ಕಂಡ ಅದ್ಭುತ ಗಾಯಕರುಗಳಾದ ಸೋನು ನಿಗಮ್, ಶ್ರೇಯಾ ಘೋಷಾಲ್, ಕುನಾಲ್ ಗಾಂಜಾವಾಲ.. ಎಷ್ಟೇ ಹಿಂದಿ ಹಾಡುಗಳನ್ನು ಹಾಡಿದ್ದರೂ, ತಮಗೆ ಆತ್ಮತೃಪ್ತಿ ಕೊಡುತ್ತಿರುವುದು ಕನ್ನಡ ಮೆಲೋಡಿ ಹಾಡುಗಳು ಎಂದು ನಮ್ಮ ಮುಂದೆ ಹೇಳಿಕೊಳ್ಳುವಾಗ ಅಪಾರ ಸಂತೋಷವಾಗುತ್ತದೆ. ಇದೇ ಮಾತುಗಳನ್ನು ಅವರು ಮಾದ್ಯಮಗಳ ಮುಂದೂ ಹೇಳಿದ್ದಾರೆ. ಖಂಡಿತವಾಗಿ ಕನ್ನಡ ಹಾಡುಗಳ ಮಟ್ಟಿಗೆ ನನ್ನ ಪ್ರಕಾರ ಇದೂ ಒಂದು ಸುವರ್ಣ ಯುಗ. ಇದಕ್ಕೆ ಕಾರಣಕರ್ತರಾದ ಇಂದಿನ ಸಂಗೀತ ನಿರ್ದೇಶಕರುಗಳು, ಗೀತ ರಚನೆಕಾರರು ಹಾಗು ಚಿತ್ರ ನಿರ್ದೇಶಕರುಗಳ ಬೆನ್ನುಗಳನ್ನು ಅಭಿಮಾನಿ ಕನ್ನಡಿಗರು ತಟ್ಟಲೇಬೇಕು.

ಕೊನೆಯದಾಗಿನಾನು ಹೇಳಬಯಸುವುದು, ನನ್ನಎಲ್ಲಾಮಾತುಗಳ ಸಾರಾಂಶ ಇಷ್ಟೇ.. ಸದಾಹಳೆಯಹಾಡುಗಳನ್ನು ಹೊಗಳುತ್ತಾ ಇಂದಿನಹಾಡುಗಳನ್ನುತೆಗಳಬೇಡಿ. ಎಲ್ಲಾವಿಷಯದಲ್ಲೂ, ಎಲ್ಲಾಕಾಲದಲ್ಲೂ ಗಟ್ಟಿ ಹಾಗೂ ಜೊಳ್ಳು ಇರುವಂತದ್ದೇ. ಇಂದೂ ಒಳ್ಳೇ ಹಾಡುಗಳು ಬಂದಾಗ ಗುರುತಿಸಿ ಒಂದೆರಡು ಮೆಚ್ಚುಗೆಯ ಮಾತಾಡಿ ನಮ್ಮ ಬೆನ್ತಟ್ಟಿ, ಆಗ ಇನ್ನಷ್ಟು ಒಳ್ಳೆಯ ಹಾಡುಗಳನ್ನು ಸೃಜಿಸಲು ನಮಗೂ ಸ್ಫೂರ್ತಿ ಬರುತ್ತದೆ. ಇದೇ ಇಂದಿನ ಎಲ್ಲಾ ಸಂಗೀತ ನಿರ್ದೇಶಕರು ಹಾಗೂ ಗೀತರಚನೆಕಾರರ ಪರವಾಗಿ ನನ್ನ ವಿನಮ್ರ ವಿನಂತಿ.
ಪ್ರೀತಿಯಿರಲಿ,
ಕವಿರಾಜ್