ಚಿತ್ರ ವಿಮರ್ಶಕರಾದ ವಿ.ಎನ್.ಲಕ್ಷ್ಮೀನಾರಾಯಣ ಅವರು ಅತ್ಯಂತ ಚರ್ಚಿತ ಚಿತ್ರ “ದ ರೆಡ್ ಬಲೂನ್” ಬಗ್ಗೆ ಬರೆದ ಲೇಖನವನ್ನು ಮೈಸೂರು ಫಿಲಂ ಸೊಸೈಟಿ ಪ್ರಕಟಿಸಿದೆ. ಎಲ್ಲರಿಗೂ ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗುತ್ತಿದೆ.

ಫ್ರೆಂಚ್ ಕಲಾಕಾರನಾದ ಅಲ್ಬರ್ಟ್ ಲಿಮೋರಿಸ್ 1956ರಲ್ಲಿ ಮಾಡಿದ ‘ದ ರೆಡ್ ಬಲೂನ್’ ಅನ್ನು ಮತ್ತೊಮ್ಮೆ ನೋಡುವ ಅವಕಾಶವನ್ನು ಮಂಡ್ಯದ ಗೆಳೆಯರು ಇತ್ತೀಚೆಗೆ ಒದಗಿಸಿದ್ದರು. ಮೊದಲ ಸಲ ವೀಕ್ಷಿಸಿದಾಗ ಅದರ ವಸ್ತು ನಾವೀನ್ಯತೆ, ಅನನ್ಯತೆ ಮತ್ತು ಸರಳತೆಗಳು ಆಕರ್ಷಿಸಿದ್ದವು. ಆದರೆ ಆಗ ಕಂಡುಕೊಳ್ಳಲು ಸಾಧ್ಯವಾಗದ ಎಷ್ಟೋ ಅರ್ಥಸಾಧ್ಯತೆಗಳು ಎರಡನೆಯ ಸಲ ಗೋಚರಿಸಿದ್ದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ. ಅದನ್ನು ಚಿತ್ರಸಹೃದಯರೊಂದಿಗೆ ಹಂಚಿಕೊಳ್ಳುವುದು ಈ ಬರೆಹದ ಉದ್ದೇಶ.

ಈ ಚಿತ್ರನೋಡಿದವರಿಗೆ ಎದ್ದುಕಾಣುವ ಅಂಶ, ನಾಲ್ಕೈದು ದಶಕಗಳ ಹಿಂದೆ ಅಸ್ತಿತ್ವದಲ್ಲಿದ್ದ ಕಿರುಗಲ್ಲಿ, ಗಟಾರ ಚರಂಡಿ ಗಳ, ಸುಣ್ಣ-ಬಣ್ಣ ಕಾಣದ ಹಳೆಯ ಕಟ್ಟಡಗಳೇ ತುಂಬಿದ, ಬಡವರ ಬಡಾವಣೆಯಾಗಿದ್ದ, ಪ್ಯಾರಿಸ್ಸಿನ ನೆರೆಭಾಗವನ್ನು ಚಿತ್ರದ ರಂಗಪ್ರದೇಶವನ್ನಾಗಿ ಲಿಮೋರಿಸ್ ಆರಿಸಿಕೊಂಡಿದ್ದಾರೆ ಎನ್ನುವುದು.

ಆಕಾಶದತ್ತ ಮುಖ ಮಾಡಿ ಹೆಜ್ಜೆ ಹಾಕುವ ಮಾತಿಲ್ಲದ ಚೂಟಿ ಹುಡುಗ ಪ್ಯಾಸ್ಕಲ್‌ನಿಗೆ ಮೇಲೆಲ್ಲೋ ಕಂಬಕ್ಕೆ ಸಿಕ್ಕಿಹಾಕಿಕೊಂಡ ಚೆರಿ ಹಣ್ಣಿನ ಬಣ್ಣದ, ಹೊಳೆಯುವ ಕೆಂಪು ಬಲೂನ್ ಕಣ್ಣಿಗೆ ಬೀಳುತ್ತದೆ. ಹುಡುಗ ಕಂಬ ಹತ್ತಿ ಬಲೂನನ್ನು ಬಿಡುಗಡೆ ಗೊಳಿಸಿ ಕೆಳಕ್ಕೆ ತರುತ್ತಾನೆ. ತನ್ನ ವಶದಲ್ಲಿ ಬಲೂನ್ ಇರಲೆಂದು ಬಯಸಿ ಬಲೂನನ್ನು ಹಿಡಿಯಲು ಪ್ರಯತ್ನಿಸುವ ಹುಡುಗನಿಗೆ ಬಲೂನಿನ ಸ್ವಾತಂತ್ರ್ಯ ಪ್ರೇಮ ಬಹು ಬೇಗ ಅರ್ಥವಾಗುತ್ತದೆ. ಅದನ್ನು ಕೈಬಿಟ್ಟು ಕಟ್ಟಿಹಾಕದೆಯೇ ನಡೆಸಿಕೊಂಡಾಗ ಅವರಿಬ್ಬರ ಸ್ನೇಹ ಗಟ್ಟಿಯಾಗುತ್ತದೆ.

ಅಂದಿನಿಂದ ಅವನು ಹೋದಕಡೆಯಲ್ಲೆಲ್ಲಾ ಹಿಂಬಾಲಿಸುವ, ಅಗತ್ಯಬಿದ್ದಾಗ ಕೈಗೆಟುಕುವ, ಉಳಿದಂತೆ ಸ್ವತಂತ್ರವಾಗಿ ತೇಲುವ, ಆದರೆ ತನ್ನಿಂದಾಗಿ ಹುಡುಗನಿಗೆ ತೊಂದರೆಯಾಗುತ್ತಿದೆಯೆನಿಸಿದಾಗಲೆಲ್ಲಾ ಅನತಿ ದೂರದಲ್ಲಿ ಹಿಂಬಾಲಿಸುವ, ಬೇಕೆಂದು ಕೈ ಚಾಚಿದವರ ಕೈಗೆ ಸಿಗದೆ ನುಣಿಚಿಕೊಳ್ಳುವ, ಹೊಟ್ಟೆಯಲ್ಲಿ ಹೀಲಿಯಂ ತುಂಬಿಕೊಂಡು ಹಗುರಾಗಿ ತೇಲುವ, ನೂಲುಹಗ್ಗಕಟ್ಟಿದ ಬಲೂನ್, ಒಂಟಿ ಹುಡುಗನ ಸಂಗಾತಿಯಾಗುತ್ತದೆ.

ಅವನ ಅಜ್ಜಿಗೆ ಅದೇಕೋ ಬಲೂನನ್ನು ಕಂಡರಾಗುವುದಿಲ್ಲ. ಈ ಕೆಂಪು ಬಲೂನಿಗೆ ಬಸ್ಸಿನಲ್ಲಿ, ಸ್ಕೂಲಿನಲ್ಲಿ ಪ್ರವೇಶ ನಿಷಿದ್ಧ. ಸ್ಕೂಲಿನಲ್ಲಿ ಶಿಸ್ತನ್ನು ಮುರಿಯುವ ಹುಡುಗರ ದೊಂಬಿಗೆ ಕಾರಣವಾಗುವ ಕೆಂಪು ಬಲೂನನ್ನು ಹೆಡ್ ಮಾಸ್ಟರ್ ದಂಡಿಸಲಾಗುವುದಿಲ್ಲ. ಆದರೆ ಶಿಕ್ಷಣದ ಸಂಬಂಧದಲ್ಲಿ ಸುಲಭವಾಗಿ ಕೈಗೆ ಸಿಗುವ ಹುಡುಗನಿಗೆ ಶಿಕ್ಷೆಯಾಗುತ್ತದೆ. ಆದರೂ ಹುಡುಗನ ಬಲೂನಿನ ಪ್ರೀತಿಗೆ ಅದು ಅಡ್ಡಿಯಾಗುವುದಿಲ್ಲ.

ದಾರಿಯಲ್ಲಿ ಅಕಸ್ಮಾತ್ ಸಿಗುವ ಪುಟ್ಟ ಹುಡುಗಿಯು ಹಿಡಿದ ನೀಲಿ ಬಲೂನ್ ಕಂಡರೆ ಕೆಂಪು ಬಲೂನ್‌ಗೆ ಎಲ್ಲಿಲ್ಲದ ಆಕರ್ಷಣೆ. ಅದನ್ನು ಬಿಟ್ಟು ಬರಲಾರದ ಪ್ರೀತಿ. ಬಡತನವನ್ನು ವಿವಿಧ ರೀತಿಗಳಲ್ಲಿ ಪ್ರತಿನಿಧಿಸುವಂತೆ ಚಿತ್ರಿಸಿದ ದಾರಿಹೋಕರಿಗೆ ಹುಡುಗನ ಬಲೂನು ಕುತೂಹಲ-ಸಹಕಂಪನವೆಬ್ಬಿಸುವ ವಸ್ತು. ಸ್ಕೂಲಿನ ಒಳಗೆ-ಹೊರಗೆ ಇತರ ಹುಡುಗರಿಗೆ ಸಹಜವಾಗೇ ಕೆಂಪು ಬಲೂನ್ ಇಷ್ಟ. ಆದರೆ ಅದು ಯಾರ ಕೈಗೂ ಸಿಗದು. ಅದನ್ನು ಪಡೆಯಲಾಗದ ಹುಡುಗರ ಈರ್ಷೆ, ಅಸಹಾಯಕತೆ, ನೋಡು ನೋಡುತ್ತಿದ್ದಂತೆ ಬಲಾತ್ಕಾರಕ್ಕೆ, ಅಪಹರಣಕ್ಕೆ ತಿರುಗುತ್ತದೆ.

ಎಲ್ಲ ಪ್ರಯತ್ನಗಳು ನಿಷ್ಫಲವಾದಾಗ ರೋಷ, ದ್ವೇಷ, ಧ್ವಂಸಗಾರಿಕೆ ಮೇಲುಗೈ ಪಡೆಯುತ್ತವೆ. ಎಲ್ಲಾ ದಿಕ್ಕುಗಳಿಂದಲೂ ದುಷ್ಟ ಬಲಾತ್ಕರಿಗಳು ಹುಡುಗನ ಬೆನ್ನು ಹತ್ತುತ್ತಾರೆ. ಕೆಂಪು ಬಲೂನನ್ನು ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಹುಡುಗ ರಸ್ತೆಗಳಿಂದ, ಓಣಿಗಳಿಗೆ, ಓಣಿಗಳಿಂದ ಇಕ್ಕಟ್ಟಾದ ಸಂದುಗೊಂದುಗಳಿಗೆ ಬಲೂನಿನ ಹಿಂದೆ ಓಡುತ್ತಾನೆ. ಅಡ್ಡಗೋಡೆಯ ಎರಡು ಬದಿಗಳಲ್ಲಿ ಬಲೂನಿಗಾಗಿ ಜಗ್ಗಾಟ ಸಾಗುತ್ತದೆ. ‘ಶತ್ರು’ಗಳು ಕ್ಯಾಟರ್‌ಬಿಲ್ಲಿನಿಂದ ಬಲೂನಿನ ಮೇಲೆ ಕಲ್ಲೆಸೆಯುತ್ತಾರೆ. ಕದನದಲ್ಲಿ ಏಕಾಂಗಿಯಾಗಿ ಬಲೂನನ್ನು ರಕ್ಷಿಸಿಕೊಳ್ಳಲು ಹೆಣಗುವ ಹುಡುಗನ ಆಯಾಸ, ಕಲ್ಲೇಟು ತಿಂದು ಉಸಿರು ಕಳೆದುಕೊಳ್ಳುತ್ತಾ ಕೆಳಗಿಳಿಯುವ ಬಲೂನಿನ ಆಯಾಸವಾಗಿ ಬಿಂಬಿತವಾಗುತ್ತದೆ. ನೆಲಕ್ಕೆ ಬಿದ್ದ ಕೆಂಪು ಬಲೂನು ಶತ್ರುವಿನ ಪದಾಘಾತಕ್ಕೆ ಸಿಕ್ಕಿ ಸಾವನ್ನಪ್ಪುತ್ತದೆ.

ಆಗ ಎಲ್ಲೆಲ್ಲೋ ಮಕ್ಕಳ ಕೈಯಲ್ಲಿ ಬಂದಿಯಾಗಿದ್ದ ಹಳದಿ, ಹಸಿರು, ನೀಲಿ, ಕೆಂಪು ಬಣ್ಣದ ನೂರಾರು, ಸಾವಿರಾರು ಬಲೂನುಗಳು ಎಲ್ಲೆಲ್ಲಿಂದಲೋ ಪಟಪಟನೆ ಹಿಡಿದವರ ಕೈಯಿಂದ ಬಿಡಿಸಿಕೊಂಡು ದಾರಗಳ ಸಮೇತ ಹುಡುಗನತ್ತ ಧಾವಿಸುತ್ತವೆ. ಆ ದಾರಗಳನ್ನು ಒಟ್ಟಿಗೆ ಜೋಡಿಸಿ ಹಿಡಿದ ಹುಡುಗ ಹೀಲಿಯಂ ತುಂಬಿದ ಬಲೂನುಗಳ ಹಗುರ ಬಲದಿಂದ ನೆಲ ಬಿಟ್ಟು ಮೇಲೇರುತ್ತಾನೆ. ಕಟ್ಟಡಗಳನ್ನು ಮೀರಿ ಮೇಲೇರಿ ಆಕಾಶದಲ್ಲಿ ಹಾರುತ್ತಿದ್ದಂತೆ ಚಿತ್ರ ಕೊನೆಗೊಳ್ಳುತ್ತದೆ.

ಯಾರೇ ನೋಡಿದರೂ, ಅರ್ಥವಾಗುವ ಮುಂಚೆಯೇ ಮನಮುಟ್ಟುವ, ಮೂಕ ಸಂತೋಷಕೊಡುವ ಕಲಾಕೃತಿ ಈ ಚಿತ್ರ. ಇನ್ನು ಚಿತ್ರಸಹೃದಯರ ಸಂತೋಷಕ್ಕೆ ಎಣೆ ಇದೆಯೆ? ಮಾತಿಲ್ಲದೆ, ಕೇವಲ ಸಂಗೀತ ಸಾಂಗತ್ಯದೊಂದಿಗೆ ದೃಶ್ಯಸಾಧ್ಯತೆಗಳನ್ನು ಸೂರೆಮಾಡಿ ಚಿತ್ರಿತವಾಗಿರುವ ‘ದ ರೆಡ್ ಬಲೂನ್’ ಬಿಂಬಭಾಷೆಯಲ್ಲಿ ಕಲಾಕೃತಿಯನ್ನು ನಿರ್ಮಿಸಬೇಕೆನ್ನುವ ಎಲ್ಲಾ ಕಲಾಕಾರರಿಗೆ ಮಾದರಿ ಚಿತ್ರವಾಗಿದೆ. ಕಲಾವಾಸ್ತವ (ಬಣ್ಣ ಬಣ್ಣದ ಬಲೂನುಗಳು, ಮನುಷ್ಯಜೀವಿಗಳು, ರಸ್ತೆ, ಓಣಿ, ಬಸ್ಸು, ಸ್ಕೂಲು ಇತ್ಯಾದಿ), ಪ್ರತಿಮಾವಿಧಾನ ಅಂದರೆ, ಕಲ್ಪನೆಯ ಮೂಲಕ ವಿಸ್ತರಿಸಿದ ವಸ್ತು-ಸಂಬಂಧ-ಭಾವನೆಗಳು, (ಉದಾಹರಣೆಗೆ, ಬಲೂನಿಗೆ ಆರೋಪಿಸಿರುವ ಮನುಷ್ಯ ಗುಣಗಳು-ಸ್ವಾತಂತ್ರ್ಯಪ್ರಿಯತೆ, ಆಯ್ಕೆ, ಕೃತಜ್ಞತೆ, ಭಯ, ಆಸೆ ಅಥವಾ ಹುಡುಗರ ಪ್ರತಿಕ್ರಿಯೆ-ವ್ಯವಹಾರದಲ್ಲಿ ವ್ಯಕ್ತವಾಗುವ, ಆಕ್ರಮಣಶೀಲತೆ, ದ್ವೇಷ, ಇತ್ಯಾದಿ, ತನಗೆ ಬೇಕಾದ್ದನ್ನು, ಪ್ರಿಯವೆನಿಸಿದ್ದನ್ನು ವಶದಲ್ಲಿಟ್ಟಕೊಂಡು ಅನುಭವಿಸಬೇಕೆಂಬ ರಾಜಕೀಯತೆ), ಸಾಮಾಜಿಕ/ಆರ್ಥಿಕವಾಸ್ತವ (ಚಿತ್ರೀಕರಣಕ್ಕೆ ಪ್ರಜ್ಞಾಪೂರ್ವಕ ವಾಗಿ ಆಯ್ದುಕೊಂಡಿರುವ ಪ್ರದೇಶದ ಕೊಳಕು, ಇಕ್ಕಟ್ಟು, ಜನರ ಬದುಕು, ಉದ್ಯೋಗ, ಬಡತನ ಇತ್ಯಾದಿ), ಮಾಂತ್ರಿಕ ವಾಸ್ತವ, (ಮರದಕುದುರೆಯ ರಾಜಕುವರನಂತೆ ಆಕಾಶದಲ್ಲಿ ಮೇಲೇರಿ ತೇಲುವ ಕ್ರಿಯೆ) ಮತ್ತು ಸೌಂದರ್ಯವಾಸ್ತವ (ಪ್ರಾರಂಭದ ಚಿತ್ರಿಕೆಯ ರಚನೆಯಲ್ಲಿರುವ ಮನಮೋಹಕತೆ, ಕೆಂಪು ಬಲೂನಿನ ಆಕರ್ಷಕ ಬಣ್ಣ, ಹೊಳಪು, ಮಕ್ಕಳ ನಡವಳಿಕೆ) ಎಲ್ಲವೂ ಪಾಕವಾಗಿ ರೂಪುಗೊಂಡ ಚಿತ್ರ ಇದು.

ಇದು ಅಂತಾರಾಷ್ತ್ರೀಯ ಚಲನಚಿತ್ತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಮಕ್ಕಳಚಿತ್ರವೆಂದು ನೋಡಿ ಸಂಭ್ರಮಿಸುವವರಿದ್ದಾರೆ. ಸರಳತೆ, ಮಾಂತ್ರಿಕತೆ, ಕಲ್ಪಕತೆಗಳ ಅಧ್ಭುತ ಚಿತ್ರವೆಂದು ಮೆಚ್ಚಿಕೊಂಡವರಿದ್ದಾರೆ. ಬಂಡವಾಳ ಮತು ಕ್ರೈಸ್ತಧರ್ಮದ ಪ್ರತಿಪಾದನೆಯ ಚಿತ್ರವೆಂದು ಹೀಗೆಳೆಯುವವರಿದ್ದಾರೆ. ಅಂದರೆ, ಯಾವುದೇ ಅಭಿಜಾತ ಕಲಾಕೃತಿಯಂತೆ ಒಂದೇ ಓದಿಗೆ, ವೀಕ್ಷಣೆಗೆ ದಕ್ಕುವ ಚಿತ್ರ ಇದಲ್ಲ. ತಾತ್ವಿಕವಾಗಿ, ಏಕಕಾಲಕ್ಕೆ ತೆರೆದುಕೊಳ್ಳುವ ಬಹುಪದರುಗಳನ್ನು ‘ದ ರೆಡ್ ಬಲೂನ್’ ಒಳಗೊಂಡಿದೆ. ಮೇಲ್ಪದರಗಳಲ್ಲಿ ಕೇವಲ ಮಕ್ಕಳ ಮುಗ್ಧತೆ, ಕಲ್ಪಕತೆ, ವಸ್ತುವಿನ ನವೀನತೆ, ಅನನ್ಯತೆಗಳು ಕಂಡರೆ, ಒಳಪದರಗಳಲ್ಲಿ ಚೆರಿಕೆಂಪಿನ ಆಕರ್ಷಣೆಗೆ ಜೋಡಿಸಿದ ಮನೋವೈಜ್ಞಾನಿಕ ಅರ್ಥಸಾಧ್ಯತೆಗಳು, ನೀಲಿ, ಹಸಿರು, ಬಿಳಿ, ಹಳದಿ ಬಣ್ಣಗಳ ಮನೋಧರ್ಮದ ವೈವಿಧ್ಯದಲ್ಲಿ ಬಿಂಬಿತವಾಗುವ ಬಹುಮುಖಿ ಸಂಬಂಧಗಳು, ಆಕಾಶದಲ್ಲಿ ತೇಲುವ, ಮನಬಂದಂತೆ ಬಾಳಲು ಅವಕಾಶವಿರುವ ಅನಿರ್ಬಂಧತೆ, ಸ್ವಾತಂತ್ರ್ಯಪ್ರಿಯತೆ; ಇದಕ್ಕೆ ವಿರುದ್ಧವಾದ ನಿಯಂತ್ರಣ, ಆಕ್ರಮಣ, ನಿರ್ಬಂಧ, ಶಿಕ್ಷೆ, ಮನುಷ್ಯಕೇಂದ್ರಿತ ನಾಗರಿಕತೆ; ಮುಗ್ಧತೆ, ಸ್ವಾತಂತ್ರ್ಯ, ಮತ್ತು ಸಂತೋಷಕ್ಕೆ ಧಕ್ಕೆಯೊದಗಿದಾಗ ಸಹಜವಾಗಿ ವ್ಯಕ್ತವಾಗುವ ಸಹಮತ, ಸಹಾನುಭೂತಿ ಮತ್ತು ಸಾಮುದಾಯಿಕ ಕ್ರಿಯೆಗಳು, ಸಾಮಾಜಿಕ ಅಸಮಾನತೆಯ ವಿರುದ್ಧದ ಟೀಕೆ, ಹೀಗೆ ಪ್ರಬುದ್ಧ, ಗಂಭೀರ ಉದ್ದೇಶ-ಅರ್ಥಗಳ ಅನುಭವಕ್ಕೂ ಅನುವು ಮಾಡಿಕೊಡುವ ಶಕ್ತಿ ಚಿತ್ರದೊಳಗಿಂದಲೇ ಹೊಮ್ಮುತ್ತವೆ. ಇವನ್ನು ಅರ್ಥೈಸಿಕೊಳ್ಳಲು, ದಕ್ಕಿಸಿಕೊಳ್ಳಲು ಬೇಕಾದ ತಯಾರಿ ಮತ್ತು ಜವಾಬ್ದಾರಿ ಚಿತ್ರಸಹೃದಯರದ್ದೇ.

-ವಿ.ಎನ್.ಲಕ್ಷ್ಮೀನಾರಾಯಣ