ಬಹಳ ನಿರೀಕ್ಷಿತ ಅಣ್ಣಾಬಾಂಡ್ ಚಿತ್ರ ಬಿಡುಗಡೆಯಾಗಿದೆ. ಮೇ ಒಂದರಂದು ಬಿಡುಗಡೆಗೆ ಯಾವ ಕಾರಣಗಳನ್ನು ಇಟ್ಟುಕೊಂಡಿತ್ತೋ (ಕಾರ್ಮಿಕ ದಿನಾಚರಣೆಯ ದಿನ ಒಂದಷ್ಟು ಶ್ರಮಿಕ ವರ್ಗಕ್ಕೆ ರಜೆಯಿರುತ್ತದೆ. ಅವರೆಲ್ಲಾ ಥಿಯೇಟರ್ ಗೆ ಬರಲಿ, ಕಲೆಕ್ಷನ್ ಚೆನ್ನಾಗಿ ಆಗಲೆಂಬ ವಾಣಿಜ್ಯಾತ್ಮಕ ಕಾರಣವೂ ಇದರ ಹಿಂದಿತ್ತೆಂಬುದು ಸುಳ್ಳಲ್ಲ), ಕೊನೆಗೂ ಬಿಡುಗಡೆ ಮಾಡಿ ಗೆದ್ದಿದೆ ಸೂರಿ ಮತ್ತು ಪುನೀತ್ ತಂಡ. “ನಾವಂದುಕೊಂಡಷ್ಟು ಚೆನ್ನಾಗಿಲ್ಲ’ ಎನ್ನುತ್ತಾರೆ ಬೆಂಗಳೂರಿನ ಚೇತನಾ .ಎನ್. ಅವರ ಗ್ರಹಿಕೆಯನ್ನು ಇಲ್ಲಿ ಪ್ರಕಟಿಸಲಾಗಿದೆ.

“ಅಣ್ಣಾಬಾಂಡ್” ಇನ್ನೊಂದು ಚಿತ್ರವಷ್ಟೇ. ಕಥೆಯ ಎಳೆಯೇನೋ ಬಹಳ ದೊಡ್ಡದಲ್ಲ, ಬಹಳ ಸರಳ. ಒಬ್ಬ ಅನಾಥ ಹುಡುಗ, ತನ್ನ ಶಕ್ತಿ ಸಾಮರ್ಥ್ಯದಿಂದ ಬಾಂಡ್ ಆಗಿ ಪ್ರೊಜೆಕ್ಟ್ ಮಾಡಿಕೊಳ್ಳೋದು. ಅದರ ಮಧ್ಯೆ ಅವನಿಗೊಂದು ಕೆಲಸವೆಂದು ಒಬ್ಬ ನಾಟಿ ವೈದ್ಯನ ಸಹಾಯಕನಾಗಿ, ಬಾಂಡ್ ಹೆಸರು ಆರೋಪಿಸಲಿಕ್ಕಾಗಿ ಗರಡಿಗೆ ಕಳುಹಿಸಲಾಗುತ್ತದೆ. ಮೈಕಟ್ಟು ಬೆಳೆಸಿಕೊಂಡ ಆತ ಆ ಏರಿಯಾದಲ್ಲಿ ಮೊದಲು ಕೂಲಿಂಗ್ ಗ್ಲಾಸ್ ಹಾಕಿಕೊಂಡನಂತೆ, ಕೆಟ್ಟವರನ್ನು ಬಾಂಡ್ ರೀತಿಯಲ್ಲಿ ಚಚ್ಚುತ್ತಿದ್ದನಂತೆ.

ಅದಕ್ಕೇ ಬಾಂಡ್ ರವಿ ಎಂದು ಹೆಸರಿತ್ತು. ಅವನು ಕೊನೆಗೆ ಅಣ್ಣಾಬಾಂಡ್ ಆಗುತ್ತಾನೆ. ಕಥೆಗೆ ಪೂರಕವಾಗಿ ವಿಲನ್ ಪಾತ್ರದಲ್ಲಿ ಜಾಕಿಶ್ರಾಫ್ ನಟಿಸಿದ್ದರೆ, ನಾಯಕಿಯರಾಗಿ ಪ್ರಿಯಾಮಣಿ, ನಿಧಿ ಸುಬ್ಬಯ್ಯ ಇದ್ದಾರೆ. ನಿಧಿಯರದ್ದು ದುರಂತದ ಪಾತ್ರ. ವಿಲನ್ ಒಬ್ಬ ಸಮಾಜ ಘಾತುಕ ಶಕ್ತಿ. ಅವನ ನಿರ್ಮೂಲನೆಗೆ ಹೇಗೇಗೋ ಸಂಬಂಧ ಹುಡುಕಿಕೊಂಡು, ಕಲ್ಪಿಸಿಕೊಂಡು ಬರುವವನು ಅಣ್ಣಾಬಾಂಡ್. ಇಷ್ಟೇ ಕಥೆಯ ಎಳೆ. ಕೊನೆಯಲ್ಲಿ ಎಂದಿನಂತೆ ನಾಯಕ ರಾರಾಜಿಸುತ್ತಾನೆ, ವಿಲನ್ ವಿರಾಜಿಸುತ್ತಾನೆ. ಮಧ್ಯೆ ನಾಯಕಿಯರು, ಹಾಡು-ಕುಣಿತ, ಲವ್ ಎಲ್ಲವೂ ಇದ್ದದ್ದೇ. ಇದು ಕಥೆಯ ಸ್ಥೂಲ ಎಳೆ.

ಪುನೀತ್ ಚಿತ್ರವೆಂದು ಬರುವವರೇ ಇದಕ್ಕೆ ಹೆಚ್ಚೇ ಹೊರತು ದುನಿಯಾ ಸೂರಿಯವರ ಚಿತ್ರವೆಂದಲ್ಲ. ಹಾಗೆ “ಸೂರಿ” ಚಿತ್ರ ನೋಡಬೇಕೆಂದು ಬರುವವರಿಗೆ ನಿರಾಶೆಯಾಗುತ್ತದೆ. ಯಾಕೋ, ಸೂರಿ ವಿಶುಯಲ್ ನೆಲೆಯಲ್ಲಿ ಹೆಚ್ಚು ಯೋಚಿಸುತ್ತಿಲ್ಲವೇನೋ, ಲಾಜಿಕ್ ನಿಂದ ಹೊರಬಂದು ನಿಂತು ಬರೀ ಬಡಬಡಿಸಿ ಹೋಗಿಬಿಡಲು ಪ್ರಯತ್ನಿಸುತ್ತಿದ್ದಾರೇನೋ ಅನಿಸುತ್ತದೆ. ದುನಿಯಾ ಚಿತ್ರ ಸಮಾಜದಲ್ಲಿ ರೂಪಿಸಬಹುದಾದ “ನೆಗೆಟಿವ್ ಇಮೇಜ್” ಎಂಬುದನ್ನು ಹೊರತುಪಡಿಸಿದರೆ ವಿಶುಯಲಿ ಒಪ್ಪುವಂತಿತ್ತು (ಕನ್‌ವಿನ್ಸಿಂಗ್). ಈ ಸಾಧ್ಯತೆ ಜಾಕಿಯಲ್ಲಿ ಬರಲಿಲ್ಲವೆನ್ನುವುದು ಹಳೆಯ ಮಾತು. ಅಣ್ಣಾಬಾಂಡ್ ಗೂ ಇದೇ ಮಾತು ಅನ್ವಯವಾಗುತ್ತದೆ.

ಒಟ್ಟೂ ಹೊಡೆದಾಟದ ಚಿತ್ರವಿರಲಿ ಎಂದವರಿಗೆ ಚೆನ್ನಾಗಿದೆ ಎನ್ನಿಸಬಹುದು, ಬೈಕು-ಫೈಟು, ಚಾಕು-ಚೂರಿ ಎಲ್ಲವೂ ನವೀನ ಎನಿಸಬಹುದು. ಇಡೀ ಚಿತ್ರದಲ್ಲಿ ಫಾರಿನ್ ಫಿಲ್ಮ್ ಗಳ ಚಹರೆ ಎದ್ದು ಕಾಣುತ್ತದೆ. ಬ್ರೆಜಿಲಿಯನ್ ಸಿನಿಮಾ “ಸಿಟಿ ಆಫ್ ಗಾಡ್” ಆರಂಭವೇ ಬರ್ಬರತೆಯನ್ನು ಹೇಳುವಂಥದ್ದು. ಎರಡು ಲಾಂಗ್ ಗಳನ್ನು ಪರಸ್ಪರ ಹರಿತಗೊಳಿಸಲು ಉಜ್ಜುತ್ತಿರುತ್ತಾರೆ. ಅಂಥದ್ದಕ್ಕೇ ತದ್ರೂಪು ಎನಿಸುವ ದೃಶ್ಯದಿಂದಲೇ ಅಣ್ಣಾಬಾಂಡ್ ತೆರೆದುಕೊಳ್ಳುತ್ತದೆ. ಚಿತ್ರಕಥೆಯನ್ನು ನಿರೂಪಿಸಿರುವ ಮಾದರಿ ಸಿಟಿ ಆಫ್ ಗಾಡ್‌ನ ಹತ್ತಿರ ಹತ್ತಿರಕ್ಕಿದೆ. ಅಲ್ಲಿನ ಹಿಂಸೆ, ಬರ್ಬರತೆ ಎಲ್ಲವೂ ಇಲ್ಲೂ ಇದೆ. ಕೊನೆಯಲ್ಲಿ ಪಕ್ಕಾ ಬ್ಲಡ್ ಡೈಮಂಡ್ (ಇಂಗ್ಲಿಷ್)ನ ಕ್ಲೈಮ್ಯಾಕ್ಸ್ ಮಾದರಿ ಕಾಣುತ್ತದೆ.

ಸೂರಿಯವರು ಸಿಕ್ಕಾಪಟ್ಟೆ ಬೇರೆ ಭಾಷೆಗಳ ಸಿನಿಮಾ ನೋಡುತ್ತಾರೆ, ಅದರಿಂದ ಪ್ರಭಾವಿತರೂ ಆಗುತ್ತಾರೆ, ಆಗಿದ್ದಾರೆ (ಈ ಮಾತಿಗೆ ಅವರ ಹಿಂದಿನ ಕೆಲ ಸಿನಿಮಾಗಳ ನೆರೇಷನ್, ವಿಶುಯಲ್ಸ್ ನಲ್ಲೂ ಅದರ ಪರಿಣಾಮವಿದೆ). ಈ ಚಿತ್ರದ ಮೊದಲ ಭಾಗಕ್ಕೂ, ಎರಡನೇ ಭಾಗಕ್ಕೂ ಕಥೆಯ ನೆಲೆಯಲ್ಲಿ ಸಂಬಂಧವಿದ್ದರೂ ಲಾಜಿಕ್ ನೆಲೆಯಲ್ಲಿ ಹಾಸ್ಯಾಸ್ಪದವೆನಿಸುತ್ತದೆ. ಸಣ್ಣ ಉಲ್ಲೇಖವೆಂದರೆ, ಮೊದಲ ಭಾಗದಲ್ಲಿ “ವಿಲನ್ ಎಲ್ಲಿದ್ದಾನೆ ? ಎಲ್ಲಿದ್ದಾನೆ?” ಎಂದು ಪುಡಿ ರೌಡಿಗಳನ್ನು ಹಿಡಿದು, ನರ ಕತ್ತರಿಸಿ, ಹಿಂಸೆ ನೀಡಿ ಇಂಟಾರಗೇಶನ್ ನಡೆಸಿದರೆ, ನಂತರದ ಭಾಗದಲ್ಲಿ ಸೀದಾ ವಿಲನ್ ಎದುರು ಹೊಡೆದಾಟಕ್ಕೆ ನಿಲ್ಲುತ್ತಾನೆ. ಬಾಂಡ್ ನಿಗೆ ವಿಲನ್ ನ ತಾಣ ಹೇಗೆ ತಿಳಿಯತೆಂಬುದೇ ಎಲ್ಲೂ ಗೊತ್ತಾಗದು. ಬಿಡಿ, ನಾಯಕನಿಗೆ ಎಲ್ಲವೂ ತಿಳಿದಿರುತ್ತದೆ ಎಂಬ ಸಿನಿಮೀಯ ತರ್ಕವನ್ನು ಒಪ್ಪಿ ಸುಮ್ಮನಾಗಿರಬೇಕಾಗುತ್ತದೆ.

ಇನ್ನು ಇಂಗ್ಲಿಷಿನ ಬಾಂಡ್ ಗೂ, ಕನ್ನಡದ ಬಾಂಡ್ ಗೂ ಇರುವ ಸಣ್ಣ ವ್ಯತ್ಯಾಸ ಒಂದೇ. ಅಲ್ಲಿ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡುವ, ನಾಶ ಮಾಡುವ ಹೊಣೆಯನ್ನು ಅಸೈನ್ ಮೆಂಟ್ ರೂಪದಲ್ಲಿ ವಹಿಸಲಾಗುತ್ತದೆ. ಕನ್ನಡದಲ್ಲಿ ಹಾಗೇನೂ ಇಲ್ಲ. ನಾಯಕ ನಟರು ಸ್ವಯಂಭೂ ಆಗಿರುವುದರಿಂದ “ದುಷ್ಟಶಿಕ್ಷಕ, ಶಿಷ್ಟ ರಕ್ಷಕ’ ನ ಹಣೆಪಟ್ಟಿ ಲಗತ್ತಿಸಲಾಗಿರುತ್ತದೆ. ಹಾಗಾಗಿ ಅಸೈನ್ ಮೆಂಟ್, ಬಾಸ್ ಯಾವುದೂ ಇರದು.

ಚಿತ್ರದಲ್ಲಿ ಹಾಡುಗಳು ಹೆಚ್ಚಿವೆ ಎಂದೆನಿಸುತ್ತದೆ. ಸಿನಿಮಾ ಮಾಮೂಲಿ ಹೊಡೆದಾಟದ ಚಿತ್ರದಂತೆ ನೋಡಿ ಬರಬಹುದು. ಸೀಟಿ ಹಾಕೋದು ಕಷ್ಟ. ಹೊಡೆದಾಟ, ಹಿಂಸೆ ಮತ್ತು ಛಾಯಾಗ್ರಹಣ ಫಾರಿನ್ ಸಿನಿಮಾಗಳ ಛಾಯೆಯನ್ನೇ ಅನುಕರಿಸುತ್ತದೆ. ರಾಜ್‌ಕುಮಾರ್ ಅಭಿಮಾನಿಗಳನ್ನು ಆಕರ್ಷಿಸುವ ಸಲುವಾಗಿಯೇ ಸಿನಿಮಾದ ಹೆಸರಿಗೆ “ಅಣ್ಣಾ” ಸೇರಿಸಲಾಗಿದೆ. ಜತೆಗೆ ಕಾಣದಂತೆ ಮಾಯವಾದನು ಎಂಬ ಹಾಡಿನ ರೀಮಿಕ್ಸ್ ಸಹ. ಎಷ್ಟೋ ಬಾರಿ ಹೀಗನ್ನಿಸುವುದುಂಟು, ಒಬ್ಬ ಸೃಜನಶೀಲ ನಿರ್ದೇಶಕ ತನ್ನ ಸಾಮರ್ಥ್ಯದ ಬಗ್ಗೆ ಅಂಜಿಕೆ ಇರುವಾಗ, ಕುಸಿಯಿತ್ತಿದೆ ಎಂಬ ಆತಂಕ-ಗೊಂದಲ, ಅಸ್ಪಷ್ಟತೆ ಇರುವಾಗ ಗೆಲುವಿಗಾಗಿ ಅಥವಾ ಸೋಲಬಾರದೆಂಬ ಎಚ್ಚರಕ್ಕಾಗಿ ಜನಪ್ರಿಯ ನೆಲೆಯ ಬೇರೆ ಬೇರೆ ಛಾಯೆಗಳನ್ನು ಸಂಯೋಜಿಸುತ್ತಾನೆ. ಅಂಥ ಪ್ರಯತ್ನ ಸೂರಿಯವರಿಂದ ಆರಂಭವಾಗಿದೆಯೇ ಎಂಬ ಆತಂಕವೂ ಈ ಚಿತ್ರದಲ್ಲಿ ವ್ಯಕ್ತವಾಗುತ್ತದೆ. ಹಾಗಾಗದರಿಲೆಂಬುದು ನನ್ನ ಹಾರೈಕೆಯೂ ಸಹ.

ತಾರಾಗಣ : ಪುನೀತ್ ರಾಜಕುಮಾರ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಅವಿನಾಶ್, ಜಾಕಿಶ್ರಾಫ್, ವಿ. ಮನೋಹರ್, ರಂಗಾಯಣ ರಘು, ಛಾಯಾಗ್ರಹಣ : ಸತ್ಯ ಹೆಗಡೆ, ಸಂಗೀತ : ವಿ. ಹರಿಕೃಷ್ಣ, ನಿರ್ಮಾಪಕಿ : ಪಾರ್ವತಮ್ಮ ರಾಜಕುಮಾರ್. ನಿರ್ದೇಶನ : ದುನಿಯಾ ಸೂರಿ.