ಯಲ್ಲಾಪುರದ ಅಂಜನಾ ಅವರು ಚರ್ಚೆಯನ್ನು ಮುಂದುವರಿಸಿದ್ದಾರೆ. “ರಾಜ್ಯ ಚಲನಚಿತ್ರ ಪ್ರಶಸ್ತಿ” ಕುರಿತ ಬಗ್ಗೆಯೇ ಪ್ರಸ್ತಾಪಿಸುತ್ತಾ, ಅವುಗಳ ಗುಣಮಟ್ಟದ ಕುರಿತು ಸಾರ್ವಜನಿಕ ಮಟ್ಟದ ಚರ್ಚೆ ತೀರಾ ಅಗತ್ಯ ಎಂಬುದನ್ನೂ ಉಲ್ಲೇಖಿಸಿದ್ದಾರೆ. ಒಟ್ಟೂ ಉತ್ತಮ ಚಿತ್ರಗಳು ನೋಡುವಂತಾದರೆ, ಅಂಥ ಅವಕಾಶ ಲಭ್ಯವಾದರೆ ಹಾಗೂ ಲಭ್ಯಗೊಳಿಸುವುದೇ ಒಂದು ಸಾರ್ವಜನಿಕ ಚರ್ಚೆಗೆ ಆಗು ಮಾಡುವಂಥದ್ದು ಎಂಬುದು ಅವರ ಅಭಿಪ್ರಾಯ. ನಿಮ್ಮ ಅನಿಸಿಕೆಗಳನ್ನೂ saangatya@gmail.com ಗೆ ಕಳುಹಿಸಿ.

ಇದೊಂದು ಅರ್ಥಪೂರ್ಣ ಚರ್ಚೆ. ಮಂಜುನಾಥರು ಎತ್ತಿರುವ ಹಲವು ಪ್ರಶ್ನೆಗಳನ್ನು ಓದಿದೆ. ಅದೇ ನೆಲೆಯನ್ನು ಮುಂದುವರಿಸುವ ಪ್ರಯತ್ನ ನನ್ನದು.

ಮೂಲತಃ ನಾನು ಸಿಕ್ಕಾಪಟ್ಟೆ ಸಿನಿಮಾ ಅಭಿಮಾನಿಯೇನೂ ಅಲ್ಲ. ಆದರೆ, ನಿರ್ದಿಷ್ಟವಾಗಿ ಒಂದಿಷ್ಟು ಚಲನಚಿತ್ರಗಳನ್ನು ವೀಕ್ಷಿಸುವ ಸಂಪ್ರದಾಯವನ್ನು ಪಾಲಿಸಿದವನು. ಈ ಮಾತಿಗೆ ಯಾವ ಭಾಷೆಯೂ ಅಪವಾದವೇನಿಲ್ಲ. ಕನ್ನಡದಿಂದ ಹಿಡಿದು ವಿಶ್ವ ಬೇರೆ ಬೇರೆ ಭಾಷೆಗಳ ಸಿನಿಮಾವರೆಗೂ, ಬೇಲಿ ಹಾಕಿಕೊಂಡವನೂ ಅಲ್ಲ. ಹಾಗಾಗಿ ನಮ್ಮ ಕನ್ನಡದ ಒಳ್ಳೆ ಚಿತ್ರಗಳೆಂದು ಅಂದುಕೊಂಡದ್ದನ್ನು, ಒಳ್ಳೆಯದೆಂಬಂತೆ ಸಿಕ್ಕಾಪಟ್ಟೆ ಪ್ರಚಾರ ನೀಡುವ ಚಿತ್ರಗಳನ್ನು, ಏನೂ ಪ್ರಚಾರವಿಲ್ಲದೇ, ನನಗೇ ಇದು ಒಳ್ಳೆಯದಿರಬಹುದೆಂದು ಅನಿಸಿದ್ದನ್ನು ನೋಡಿದ್ದೇನೆ, ನೋಡುತ್ತಿದ್ದೇನೆ.

ಉಳಿದಂತೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪ್ರತಿ ಬಾರಿಯೂ ವಿವಾದವಾಗುವುದು ಹೊಸತೇನೂ ಅಲ್ಲ. ಜತೆಗೆ ಇಂಥ ಚರ್ಚೆಗಳಿಂದ ಅದು ನಿಲ್ಲಬಹುದೆಂಬ ನಂಬಿಕೆಯೂ ನನ್ನದಲ್ಲ. ನನ್ನ ಮಾತುಗಳೇನಿದ್ದರೂ ಹೀಗೆ ಆಯ್ಕೆಯಾಗುವ ಚಿತ್ರಗಳ ಗುಣಮಟ್ಟದ ಖಾತ್ರಿಯ ಬಗ್ಗೆ.

ಒಂದು ಚಿತ್ರದ ಗುಣಮಟ್ಟವೇನು ಎಂಬುದನ್ನು ಒಂದೇ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲವಾದರೂ, ಒಟ್ಟೂ ಸಾಧನೆ ಏನು ಎಂಬುದನ್ನು ಕೆಲವು ಮಾತುಗಳಲ್ಲಾದರೂ ಹೇಳಬಹುದು. ಆದರೆ, ಒಂದು ಸಿನಿಮಾದ ಶ್ರೇಷ್ಠತೆಯನ್ನು ಗುರುತಿಸುವುದಾದರೂ ಹೇಗೆ ಎಂಬುದು. ಅದರ ಬಾಕ್ಸ್ ಆಫೀಸ್ ಗಳಿಕೆಯ ಯಶಸ್ಸಷ್ಟೇ ಮಾನದಂಡವಲ್ಲ. ಆದರೆ, ಅದೂ ಒಂದು ಅಂಶವಾದರೆ ತಪ್ಪೇ ?

ಈ ಮಾತನ್ನು ಉಲ್ಲೇಖಿಸುವುದಕ್ಕೆ ನನಗೆ ತೋರುವ ಅಂಶಗಳಿವು. ಈ ಬಾರಿ “ಶಬ್ದಮಣಿ’, “ಭಗವತಿ ಕಾಡು’ ಎಂಬ ಚಿತ್ರಗಳನ್ನೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳ ಆಯ್ಕೆ ಬಗ್ಗೆ ನನ್ನ ಯಾವುದೇ ತಕರಾರಿಲ್ಲ. ನನ್ನ ಪ್ರಶ್ನೆ ಏನೆಂದರೆ, “ಇವುಗಳ ಶ್ರೇಷ್ಠತೆ’ ಯನ್ನು ತಿಳಿದಿರುವುದಾದರೂ ಹೇಗೆ ? ಆಯ್ಕೆ ಸಮಿತಿಯವರು ಅದರ ಒಳ್ಳೆಯದನ್ನು ಕಂಡಿರಬಹುದು. ಉಳಿದವರಿಗೆ, ಅಂದರೆ ನನ್ನಂಥ ಸಾಮಾನ್ಯ ಪ್ರೇಕ್ಷಕರಿಗೆ ಗೊತ್ತಾಗುವುದಾದರೂ ಹೇಗೆ ? ಎಷ್ಟೋ ಬಾರಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾವೆ ಎಂಬ ಚಿತ್ರಗಳು ಚೆನ್ನಾಗಿರುತ್ತವೆಂದುಕೊಂಡು ಹೋಗಿ ಬೇಸ್ತು ಬಿದ್ದದ್ದೂ ಇದೆ.

ಇಂಥ ಚಿತ್ರಗಳು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುವುದೂ ಇಲ್ಲ. ಬಹಳ ಕಷ್ಟಪಟ್ಟು ಒಂದಿಷ್ಟು ವರ್ಷಗಳಾದ ಮೇಲೆ ಡಿವಿಡಿಯಾಗಿಯೋ, ವಿಸಿಡಿಯಾಗಿಯೋ ಬಂದದ್ದನ್ನು ಖರೀದಿಸಿ ತಂದು ನೋಡಬೇಕು. ಅಷ್ಟರಲ್ಲಾಗಲೇ ಸಿನಿಮಾದ ಹೆಸರೇ ಮರೆತು ಹೋಗಿರುವ ಅಪಾಯವೂ ಇದೆ. ಸಿನಿಮಾವನ್ನು ಮಾಡಿ, ತಮ್ಮ ಮನೆಯಲ್ಲೇ ಇಟ್ಟುಕೊಳ್ಳುವುದು, ಒಂದು ಸೃಜನಶೀಲ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲ ಎಂಬುದು ನನ್ನ ಅನಿಸಿಕೆ. ಒಂದು ಮಾವಿನ ಮರ ಚಿಗುರಿ, ಹೂವು ಬಿಟ್ಟು, ಹಣ್ಣು ಬಿಟ್ಟ ಮೇಲೆ ಅದರ ಪೂರ್ಣತ್ವ ಬರುವುದು ರಸಿಕನೊಬ್ಬನ ಜಿಹ್ವೆಗೆ ಸ್ವಾದವಾಗಿ ಪರಿಣಮಿಸಿದಾಗಲೇ. ಇದೇ ಪ್ರಕ್ರಿಯೆ ಒಂದು ಸಿನಿಮಾ, ಕಲೆಯಂಥ ಸೃಜನಶೀಲ ಕ್ರಿಯೆಯಲ್ಲಿ ನಡೆಯುತ್ತದೆ, ನಡೆಯಬೇಕು. ಎಷ್ಟೋ ಬಾರಿ ಈ ಪ್ರಕ್ರಿಯೆ ಅರ್ಧಕ್ಕೇ ನಿಲ್ಲುತ್ತದಲ್ಲಾ, ಏನು ಮಾಡುವುದು ? ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಪ್ರಶಸ್ತಿ ಪಡೆದ ಚಿತ್ರಗಳ ಗುಣಮಟ್ಟದ ಬಗ್ಗೆ ನಿಗೂಢತೆಯೇ ಉಳಿದುಬಿಡುತ್ತದೆ.

ಅದಕ್ಕೆ ಸರಕಾರ ತನ್ನ ನಿಯಮಗಳನ್ನು ಒಂದಿಷ್ಟು ಮಾರ್ಪಡಿಸಿಕೊಳ್ಳುವುದು ಸೂಕ್ತವೆಂಬಂತೆ ತೋರುತ್ತದೆ. ಹೀಗೇ ಆಯ್ಕೆ ಮಾಡಿ (ಶಾರ್ಟ್ ಲಿಸ್ಟ್)ಕೊಂಡ ಚಿತ್ರಗಳ ಸಾರ್ವಜನಿಕ ಪ್ರದರ್ಶನಕ್ಕೆ ಏರ್ಪಾಡು ಮಾಡಬೇಕು. ಅದರಲ್ಲಿ ಬೇಕಾದರೆ ಅಭಿಪ್ರಾಯಗಳ ಸಂಗ್ರಹವೂ ನಡೆಯಲಿ. ಒಂದು ಚಿತ್ರದ ಶ್ರೇಷ್ಠತೆ ಬಗ್ಗೆ ಸಂವಾದಗಳು ನಡೆದರೂ ಪರವಾಗಿಲ್ಲ. ಇದಕ್ಕೆ ತಗಲುವ ಅವಧಿ ಈಗಿನದಕ್ಕಿಂತ ಕೊಂಚ ಹೆಚ್ಚಿನದಿರಬಹುದು. ಆದರೆ ಹೆಚ್ಚು ಪಾರದರ್ಶಕವಾಗಿರುವಂಥದ್ದು. ಇಲ್ಲದಿದ್ದರೆ, ಪ್ರಶಸ್ತಿ ಪ್ರಕಟಿಸುವ ಚಿತ್ರಗಳ ಪ್ರದರ್ಶನ ಮತ್ತು ಸಂವಾದಕ್ಕಾದರೂ ಏರ್ಪಾಟು ನಡೆಯಬೇಕು. ಆಗ ಮುಂದಿನ ವರ್ಷದ ಆಯ್ಕೆ ಹೊತ್ತಿನಲ್ಲಿ ಕೈಗೊಳ್ಳಬೇಕಾದ ಎಚ್ಚರದ ಕುರಿತು ಒಂದಿಷ್ಟು ಅಭಿಪ್ರಾಯ ಮೂಡಬೇಕು. ಇವೆಲ್ಲಾ ಯಾವುದೂ ಸಾಧ್ಯವಾಗದೇ, ಒಂದಿಷ್ಟು ಮಂದಿ ಕುಳಿತು ಒಂದಿಷ್ಟು ದಿನ ಕಳೆದು ಪಟ್ಟಿ ಮಾಡಿ ಕೊಟ್ಟು “ಪ್ರಶಸ್ತಿ’ ಘೋಷಿಸುವುದರಲ್ಲಿ ಯಾವ ಉದ್ದೇಶವೂ ಈಡೇರುವುದಿಲ್ಲ.