ಕಳೆದ ವರ್ಷದಲ್ಲಿ ಅತ್ಯಂತ ಚರ್ಚೆಗೀಡಾದ ಚಿತ್ರ ಇರಾನಿನ “ಎ ಸಪರೇಶನ್”. ಆಸ್ಕರ್ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದ ಚಿತ್ರ. ಅಸ್ಕರ್ ಫರ್ಹಾದಿಯ ಈ ಚಿತ್ರ ಭಿನ್ನ ನೆಲೆಯದ್ದು. ಇದರ ಕುರಿತಾಗಿ ಮೈಸೂರಿನ ಚರಿತಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಆಸಕ್ತರು ತಮ್ಮ ಅನಿಸಿಕೆಯನ್ನೂ saangatya@gmail.com ಗೆ ಕಳುಹಿಸಬಹುದು. ಚರಿತಾರ ಲೇಖನ ಎಲ್ಲರಿಗೂ ಓದಲು ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗಿದೆ.


ತುಂಬ ದಿನಗಳ ನಂತರ ನನ್ನನ್ನು ಗಾಢವಾಗಿ ಆವರಿಕೊಂಡ ಸಿನಿಮಾ ಇದು. ಇದೇ ನನಗಾಗಿ ಕಾಯುತ್ತಿತ್ತೊ ಅಥವಾ ನಾನೇ ಇಂಥ ಭಾವುಕತೆಗಾಗಿ ಕಾದಿದ್ದೆನೊ ಗೊತ್ತಿಲ್ಲ! ಆ ಪಾತ್ರಗಳ ಜೊತೆಗೆ ನಾನೂ ಒಂದು ಪಾತ್ರವಾಗಿ ಅವರೊಂದಿಗೇ ಪ್ರಯಾಣ ಹೊರಟುಬಿಟ್ಟ ಅನುಭವ! ಇವರೆಲ್ಲರಿಂದ ತಪ್ಪಿಸಿಕೊಳ್ಳಲೋ ಎಂಬಂತೆ ಹೀಗೆ ಬರೆಯುತ್ತಾ ಕೂತಿದ್ದೀನಿ! ಆದರೂ ಇವರೆಲ್ಲ ನನ್ನ ಸುತ್ತಲೇ ಗಿರಕಿ ಹೊಡೆಯುತ್ತ, ಇವರೇ ನನ್ನ ಹಿಂದೆ ಬಿದ್ದಹಾಗೆ ಕಾಣುತ್ತಿದ್ದಾರೆ! ಹೀಗೆ ನನ್ನ ಬಿಟ್ಟೂಬಿಡದೆ ಬೆನ್ನಟ್ಟಿರುವ ಚಿತ್ರ – ‘ಎ ಸೆಪರೇಶನ್’. ಆಸ್ಕರ್ ಒಳಗೊಂಡಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ, ಅಸ್ಗರ್ ಫರ್ಹಾದಿಯ ಇರಾನಿ ಚಿತ್ರ ಇದು. ಇರಾನಿ ಸಿನಿಮಾಗಳ ಬಗ್ಗೆ ನನಗಿದ್ದ ಒಂದು ಬಗೆಯ ಆಪ್ತತೆಯನ್ನು ಇಮ್ಮಡಿಗೊಳಿಸಿದ ಚಿತ್ರ. ಇದರ ಬಗ್ಗೆ ನಾಲ್ಕು ‘ಒಳ್ಳೆಯ’ ಮಾತುಗಳನ್ನು ಕೇಳಿದ್ದೆನಾದ್ದರಿಂದ, ಅದು ಎಷ್ಟು ನಿಜ ನೋಡೇಬಿಡೋಣ ಎನಿಸಿ, ಕುತೂಹಲದಿಂದ ಚಿತ್ರ ‘ತೆರೆದು’ ಕೂತೆ. ಅದ್ಯಾವಾಗ, ಯಾವ ಮಾಯದಲ್ಲಿ ನನ್ನ ನಾ ಮರೆತೆನೋ ಗೊತ್ತಿಲ್ಲ.. ಯಾರು ನನ್ನನ್ನು ಪರದೆಯ ಒಳಗೆಳೆದು ಪಕ್ಕ ನಿಲ್ಲಿಸಿಕೊಂಡರೋ ಆ ಪಾತ್ರಗಳನ್ನೇ ಕೇಳಬೇಕು!

ಆಕೆ, ಉಪೇಕ್ಷಿಸಿಬಿಡಬಹುದಾದಷ್ಟು ಸಣ್ಣ ಸಣ್ಣ ಕಾರಣ ಮುಂದೊಡ್ಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಹೆಂಡತಿ. ಅಲ್ಝೈಮರ್ ಖಾಯಿಲೆಗೆ ತುತ್ತಾಗಿರುವ ತನ್ನ ವಯಸ್ಸಾದ ತಂದೆಯನ್ನು ಬಿಟ್ಟು ಹೆಂಡತಿ-ಮಗಳೊಂದಿಗೆ ವಿದೇಶಕ್ಕೆ ಹೊರಡಲು ಸಿದ್ಧನಿಲ್ಲದ ಗಂಡ. ಆತ ಬಾಯ್ಬಿಟ್ಟು “ನೀನಿಲ್ಲದೆ ಹೇಗಿರಲಿ ನಾನು?” ಅಂತಲೋ, “ನನ್ನ ಬಿಟ್ಟು ಹೋಗಬೇಡ, ಪ್ಲೀಸ್” ಅಂತಲೋ ದೈನ್ಯದಿಂದ ಹೇಳದೆ, ನಿರ್ಲಿಪ್ತನಾಗಿ “ನಿನ್ನಿಷ್ಟದ ಹಾಗೆ ಮಾಡು” ಅಂದದ್ದು ಅವಳ ಗಾಯಕ್ಕೆ ಉಪ್ಪು ಮೆತ್ತಿದ ಹಾಗಾಗಿದೆ. ಇನ್ನು ನಲವತ್ತು ದಿನಗಳು ಮಾತ್ರ ವ್ಯಾಲಿಡಿಟಿ ಇರುವ ವೀಸಾವನ್ನು ‘ಸರಿಯಾಗಿ’ ಬಳಸಿಕೊಂಡುಬಿಡುವುದು ಆಕೆಯ ಮುಂದಿರುವ ಸಧ್ಯದ ಗುರಿ. ‘ಸರಿಯಾದ’ ಕಾರಣ ಇಲ್ಲದ್ದರಿಂದಾಗಿ ಕೋರ್ಟ್ ನಿಂದ ಸಿಗದ ವಿಚ್ಛೇದನ…

ಹಟಮಾರಿತನವನ್ನೇ ಅಚ್ಚು ತೆಗೆದು ಮುಖ ಮಾಡಿಕೊಂಡಂಥ ಆಕೆಯ ಚಹರೆ,..ಇವತ್ತೋ, ನಾಳೆಯೋ ತನ್ನ ಸಭ್ಯತನದ ಮುಖವಾಡ ಕಳಚಿಟ್ಟು ‘ಹುಚ್ಚ’ನಾಗಿಯೇಬಿಡಬಹುದು ಎಂಬಂತಿರುವ ಅವನು,..ದೊಡ್ಡ ಶರೀರದೊಳಗೆ ಪುಟ್ಟ ಮಗುವನ್ನು ಹುದುಗಿಸಿಟ್ಟಂತೆ ಮುದ್ದು ಹುಟ್ಟಿಸುವ ಆತನ ವಯಸ್ಸಾದ ತಂದೆ,..ಎಲ್ಲವನ್ನು ಕಂಡೂ, ಯಾವುದಕ್ಕೂ ಪ್ರತಿಕ್ರಿಯಿಸಲಾಗದ, ಮೌನವನ್ನೇ ಹೊದ್ದುಕೂತಿರುವ ಈ ವೃದ್ಧ, ಪುಟ್ಟ ಮಗುವಿನಂತೆ ಸಂಪೂರ್ಣ ಪರಾವಲಂಬಿ. (..ನಾನಾದರೂ ಹೋಗಿ ಅಜ್ಜನಿಗೆ ಸಹಾಯ ಮಾಡೋಹಾಗಿದ್ದಿದ್ದರೆ..ಅಂತ ಕೈ ಕೈ ಹೊಸಕಿಕೊಳ್ಳುವುದೊಂದೇ ನನಗೆ ಸಾಧ್ಯವಾಗಿದ್ದು!)

ಇನ್ನು, ಇಡೀ ಚಿತ್ರದ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರತಿನಿಧಿ – ‘ತೆರ್ಮೆಹ್’. ಈ ಗಲಾಟೆ ಗಂಡಹೆಂಡಿರ ಒಬ್ಬಳೇ ಮುದ್ದು ಮಗಳು. ಆರನೇ ಇಯತ್ತೆಯಲ್ಲಿ ಕಲಿಯುತ್ತಿರುವ ಸೂಕ್ಷ್ಮ ಮನಸ್ಸಿನ ಪುಟ್ಟ ಹುಡುಗಿ. ಇನ್ನೇನು ಉಕ್ಕಿಯೇಬಿಡುವಂತಿರುವ ದುಗುಡವನ್ನು ತನ್ನ ಗಲ್ಲದಲ್ಲಿ ಹೆಪ್ಪಗಟ್ಟಿಸಿಕೊಂಡಿರುವ ತೆರ್ಮೆಹ್ ತನ್ನ ಅಪ್ಪ-ಅಮ್ಮನ ಅವಿವೇಕತನ, ಹಟಮಾರಿ ಧೋರಣೆ, ಸ್ವಕೇಂದ್ರಿತ ನಿಲುವುಗಳ ಒಟ್ಟು ಸಂಕಟದ ಮೊತ್ತ! ಬಾಲ್ಯಸಹಜವಾದ ತುಂಟಾಟ, ಚಂಚಲತೆಗೆ ತನ್ನ ಬಳಿ ಪ್ರವೇಶ ನಿಷಿದ್ಧ ಅನ್ನುತ್ತಿವೆಯೇನೊ ಅನಿಸುವ, ದುಃಖಕ್ಕಷ್ಟೇ ಬೇಲಿ ಹಾಕಿಕೊಂಡಿರುವ ಹುಬ್ಬುಗಳು,..ಶೂನ್ಯವನ್ನೋ ಅಥವಾ ಕೊನೆಯಿರದ ಯಾವುದನ್ನೋ ಎಡೆಬಿಡದೆ ದಿಟ್ಟಿಸುವಂತಿರುವ ಇವಳ ನೋಟ ಈಗಲೂ ನನ್ನ ಬಿಡದೆ ಇಡಿಯಾಗಿ ನುಂಗಿಬಿಟ್ಟ ಹಾಗಿದೆ!

ತನ್ನನ್ನು ಬಿಟ್ಟು ಅಮ್ಮ ವಿದೇಶಕ್ಕೆ ಹೋಗಲಾರಳು ಎಂಬುದು ಗೊತ್ತಿರುವ ಮಗಳು ಅಪ್ಪ-ಅಜ್ಜನೊಂದಿಗೆ ಉಳಿಯುತ್ತಾಳೆ. ಅಪ್ಪ-ಮಗಳು-ಅಜ್ಜನ ನಡುವಿನ ಸಹಜ ಪ್ರೀತಿ, ಹೊಂದಾಣಿಕೆ ಕಂಡಾಗ ‘ಅಮ್ಮ’ನ ಬಗ್ಗೆ ಪ್ರೇಕ್ಷಕರಿಗೆ ಅಸಹನೆಯುಂಟಾದರೆ ಆಶ್ಚರ್ಯವಿಲ್ಲ. ಮಗಳಿಗೆ ಗುರುವಿನಂತೆ ಪಾಠ ಹೇಳುತ್ತ, ಗೆಳೆಯನಂತೆ ಆಟವಾಡುತ್ತ, ಅಪ್ಪನನ್ನು ತಾಯಿಯಂತೆ ನೋಡಿಕೊಳ್ಳುತ್ತ, ಹೆಂಡತಿಯ ಹಟಮಾರಿತನಕ್ಕೆ ನಿರ್ಲಿಪ್ತತೆಯೇ ಉತ್ತರವೆಂಬಂತಿರುವ ಅವನ ತಣ್ಣಗಿನ ತಲ್ಲಣ ನಿಮ್ಮನ್ನೂ ತಣ್ಣಗೆ ಮಾಡದಿರದು!

ಬೇಡಿಕೆಯಂತಹ ಒಂದು ಮಾತೂ ಗಂಡನಿಂದ ಬರದಿದ್ದಾಗ ಅಮ್ಮನ ಮನೆಗೆ ಹೊರಟುನಿಲ್ಲುವ ಆಕೆ, ಮನೆಗೆಲಸಕ್ಕೆಂದು ಒಬ್ಬ ಹೆಂಗಸನ್ನು ಗೊತ್ತುಮಾಡುತ್ತಾಳೆ. ಇವಳು ಧಾರ್ಮಿಕ ಶ್ರದ್ಧೆಯ ಮುಗ್ಧ ಹೆಂಗಸು. ಕರುಣೆ ಉಕ್ಕಿಸುವಂತಿರುವ ದೈನ್ಯ, ನಿಸ್ಸಹಾಯಕ ಭಾವದ ಇವಳು ಐದಾರು ವರ್ಷದ ತನ್ನ ಪುಟ್ಟ ಮಗಳೊಂದಿಗೆ ಹಲವು ದೂರ ಕ್ರಮಿಸಿ ಇವರ ಮನೆಗೆಲಸಕ್ಕೆ ಬರಬೇಕು – ಬಸುರಿ ಬೇರೆ. ತನ್ನ ನಿರುದ್ಯೋಗಿ ಗಂಡನಿಗೂ ತಿಳಿಸದೆ, ಈ ಕೆಲಸ ಒಪ್ಪಿಕೊಂಡಿದ್ದಾಳೆ. ಮೊದಲ ದಿನವೇ ಉಚ್ಚೆಯಿಂದ ನೆನೆದ ಅಜ್ಜನ ಬಟ್ಟೆ ಬದಲಿಸುವುದು ಆಕೆಗೆ ದೊಡ್ಡ ಸವಾಲಿನಂತೆ ಕಾಣುತ್ತದೆ. ಆಕೆಯ ಮುಂದಿರುವ ಪ್ರಶ್ನೆ- ತಾನೊಬ್ಬ ಹೆಂಗಸಾಗಿ ಪರಪುರುಷನ ಬಟ್ಟೆಬದಲಿಸುವುದು -ಅದೂ ಎಂಬತ್ತರ ಆಜುಬಾಜಿನ, ಅಸಹಾಯಕ ಮುದುಕನಾದರೂ- ಪಾಪದ ಕೆಲಸವಲ್ಲವೇ? ಎಂಬುದು. ಧರ್ಮದ ಹೆಸರಿನ ನಂಬಿಕೆಗಳು ಮಾನವೀಯತೆಯನ್ನೂ ಮರೆಸಿಬಿಡುವಷ್ಟು ಪ್ರಬಲವಾಗಿರಬೇಕೆ? ಮಾನವ ಧರ್ಮವನ್ನೂ ಮೀರಿ ನಿಲ್ಲುವ ಇಂತಹ ದಿಕ್ಕೆಡಿಸುವ ದ್ವಂದ್ವಗಳಿಗೆ ಅರ್ಥವಿದೆಯೇ? ಎಂಬ ಪ್ರಶ್ನೆಗಳ ಆ ಕ್ಷಣ ನಿಮ್ಮ ಮನಸ್ಸಿನ ಪರದೆಯ ಮೇಲೆ ಎದ್ದು ನಿಲ್ಲುತ್ತವೆ.

ಇಲ್ಲಿ ನಿಧಾನವಾಗಿ ಒಂದೊಂದು ‘ಸಣ್ಣ’ ವಿಷಯವೂ ದೊಡ್ಡ ಸಮಸ್ಯೆಯಾಗಿಬಿಡಬಲ್ಲ ಯಾವುದೋ ವಿಕ್ಷಿಪ್ತ ಮನಸ್ಥಿತಿ ಆವರಿಸಿಕೊಳ್ಳುತ್ತಿದೆ..ಗಾಢವಾದ ಸ್ತಬ್ಧತೆಯೊಂದು ಚಿಕ್ಕ ಅಲುಗಾಟಕ್ಕೂ ಸ್ಫೋಟಗೊಳ್ಳಲು ಸನ್ನದ್ಧವಾಗಿರುವಂಥ ಸೂಕ್ಷ್ಮವೇದಿಕೆ ಸಿದ್ಧವಾಗಿದೆ… ಈ ಹೊಸ ವ್ಯವಸ್ಥೆಯೊಂದಿಗೆ ಅನಿವಾರ್ಯವಾಗಿ ಸಖ್ಯ ಬೆಳೆಸಿಕೊಳ್ಳಬೇಕಾದ ಅಜ್ಜ, ಅಜ್ಜನ ಮಗ, ಆತನ ಮಗಳು, ಕೆಲಸದಾಕೆ, ಆಕೆಯ ಪುಟ್ಟ ಮಗು – ಈ ಎಲ್ಲರ ಒಳಗೂ ಈ ದಾರುಣ ಸ್ತಬ್ಧತೆ ಸ್ಫೋಟಗೊಳ್ಳಲು ಕಾದಿರುವಂತೆ… ಸಣ್ಣ ಸಣ್ಣ ಭಯ, ಆತಂಕ, ದುಃಖ, ಹತಾಶೆ ಎಲ್ಲವೂ ನಿಧಾನವಾಗಿ ಸಂಗ್ರಹಗೊಳ್ಳುತ್ತ ಕಡೆಗೊಮ್ಮೆ ಜ್ವಾಲಾಮುಖಿಯಂಥ ಕೋಪದ ರೂಪದಲ್ಲಿ ಸಿಡಿಯುವ ದಿನವೂ ಬಂದೇಬರುತ್ತದೆ! …’ಮನೆಯ ಯಜಮಾನ, ಕೆಲಸದಾಕೆಯ ಮೇಲೆ ಕಳ್ಳತನದ ಆರೋಪ ಹೊರಿಸಿ ಮನೆಯಿಂದ ಬಲವಂತವಾಗಿ ಹೊರದಬ್ಬಿದ್ದರಿಂದ ಜಾರಿಬಿದ್ದ ಆಕೆಗೆ ಗರ್ಭಪಾತವಾಯಿತು, ಇದು ಕೊಲೆಗೆ ಸಮನಾದ ಅಪರಾಧ’… ಎಂಬ ಘಂಟಾಘೋಷದ ಹೇಳಿಕೆ ಆ ಸ್ಫೋಟದ ಕೊನೆಯ ನಿಲ್ದಾಣದಂತೆ ಕೇಳಿಸುತ್ತದೆ. ಇನ್ನು ಎಂಥ ಬರ್ಬರ ಯುದ್ಧಗಳಾಗುವುದಕ್ಕೂ ಸೂಕ್ತ ಮನೋಭೂಮಿಕೆ ಸಿದ್ಧ! ಈ ಎಲ್ಲ ಪಾತ್ರಗಳ ಒಳಗೂ-ಹೊರಗೂ ನಡೆಯುವ ತುಮುಲಗಳ ನಡುವೆ ನಿಮಗೆ ನಿಮ್ಮನ್ನೆ ಕಾಣಿಸುತ್ತ ಸಾಗುತ್ತದೆ ಈ ಚಿತ್ರ.

ಕೋರ್ಟ್ ವಿಚಾರಣೆಯ ಪಡಸಾಲೆಯಲ್ಲಿ ನಿಂತಿರುವ ಈ ಎಲ್ಲ ಪಾತ್ರಗಳಿಗೂ ಮಾತಾಡಲು, ಯೋಚಿಸಲು, ಕೋಪಗೊಳ್ಳಲು, ಸಿಡಿದುಬೀಳಲು ಈಗ ಸ್ಪಷ್ಟವಾದ ಕಾರಣ ಮತ್ತು ಗುರಿಯಿದೆ! ಮತ್ತೆ ತಮ್ಮ ತಮ್ಮ ದೈನಂದಿನ ಸ್ತಬ್ಧತೆಯಲ್ಲಿ ಅನಾಮಿಕರಂತೆ ಕಳೆದುಹೋಗುವುದು ಎಂಥ ನೆಮ್ಮದಿಯ ವಿಷಯ ಎಂಬುದು ಹೀಗೆ ಪರಸ್ಪರ ವಿಷಕಾರುತ್ತ ಅಬ್ಬರಿಸುತ್ತಿರುವ ಈ ಎಲ್ಲರಿಗೂ ಅನಿಸಿರಬಹುದಾದ ಸನ್ನಿವೇಶ ಅದು. ಈ ಸಮಸ್ಯೆಗೆ ಮೂಲವಾದರೂ ಯಾವುದು ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಕಾರಣ ಹುಡುಕಿಕೊಂಡು, ತಮ್ಮ ತಮ್ಮ ಪರವಾಗಿಯೇ ಫಮರ್ಾನು ಹೊರಡಿಸುವ ಶೂರರು! ಪ್ರಙ್ಞಪೂರ್ವಕವಾಗಿ ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ಮತ್ತೊಬ್ಬನೆಡೆಗೆ ಬೆರಳು ತೋರಿಸುತ್ತಿರುವ ಇವರುಗಳಿಗೆ ಮಾತ್ರ ತಾವು ಹೇಳುತ್ತಿರುವ ಸುಳ್ಳುಗಳು, ತಮ್ಮ ತಮ್ಮ ತಪ್ಪುಗಳು ನಿಚ್ಚಳವಾಗಿ ಗೊತ್ತು!

ಕಾನೂನಿನ ದೃಷ್ಟಿಯಲ್ಲಿನ ‘ಸತ್ಯ’ ಮತ್ತು ಸಂಬಂಧಗಳ ದೃಷ್ಟಿಯಲ್ಲಿನ ‘ಸತ್ಯ’ – ಇವೆರಡರಲ್ಲಿ ಯಾವುದು ಹೆಚ್ಚು ‘ತೂಕದ್ದು’?! ‘ಸತ್ಯ’ ಎಂಬುದಕ್ಕೆ ಎಷ್ಟೊಂದು ಮುಖಗಳು, ಮುಖವಾಡಗಳು ಇರುವುದು ಸಾಧ್ಯ! ಎನಿಸಿ ಬೆಚ್ಚಿಬೀಳುವ ಸರದಿ ನಿಮ್ಮದಾಗುತ್ತದೆ! ಇನ್ನು ಈ ಸಮಸ್ಯೆ ಹೇಗೆ ಕೊನೆಗೊಳ್ಳುತ್ತೆ ಅನ್ನೋದನ್ನು ಮಾತ್ರ ನೀವೇ ಕಂಡು ತಿಳಿಯಬೇಕು.

ಕಳ್ಳಿ ಎಂಬ ಆರೋಪ ಹೊತ್ತು, ಗರ್ಭಪಾತಕ್ಕೊಳಗಾಗಿ, ದಣಿವು, ಮುಗುಜರ, ರೇಜಿಗೆ, ದುಃಖ ಎಲ್ಲವೂ ಒಟ್ಟಿಗೆ ಆಗಿರಬಹುದಾದ ಕೆಲಸದಾಕೆ, ಆಕೆಯ ನಿರುದ್ಯೋಗಿ – ಮುಂಗೋಪಿ ಗಂಡ, ತಮ್ಮ ತಮ್ಮ ನಿತ್ಯದ ಜಂಜಡಗಳಲ್ಲೇ ಬಳಲಿ ಬೆಂಡಾಗಿರುವ ಈ ಮನೆಯ ಯಜಮಾನ-ಆತನ ಹೆಂಡತಿ, ಎಲ್ಲವನ್ನೂ ಕಂಡೂ ಮರುಮಾತಾಡಲಾರದ ಅಸಹಾಯಕ ಅಜ್ಜ, ಈ ಎಲ್ಲಾ ‘ದೊಡ್ಡವರ’ ಜಂಜಾಟಗಳ ನಡುವೆ ತಮ್ಮ ಸಹಜ ನಗು ಮರೆತು, ಆತಂಕ-ದುಗುಡಗಳನ್ನೇ ಉಸಿರಾಡುತ್ತಿರುವ ಆ ಪುಟ್ಟ ಮಕ್ಕಳು – ಎಲ್ಲರೂ ಒಂದೊಂದು ಪ್ರತ್ಯೇಕ ಕಾದಂಬರಿಗಳಂತೆ ಕಾಣುತ್ತಾರೆ! ಈ ಕಾದಂಬರಿಗಳಂಥ ಎಲ್ಲಾ ಪಾತ್ರಗಳಿಂದ ಮತ್ತೊಂದು ಕಥೆ ನಿಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಕಥೆಯೊಳಗಿನ ಉಪಕಥೆಗಳು ನಿಮ್ಮ ಗ್ರಹಿಕೆ, ನೋಟಕ್ಕೆ ಅನುಗುಣವಾಗಿ ಹೆಣೆದುಕೊಳ್ಳುತ್ತಾ ಸಾಗುತ್ತವೆ. ಈ ಹೆಣಿಗೆಗೆ ಕೊನೆಯೆಂಬುದೇ ಇಲ್ಲವೇನೋ ಎನಿಸಿ ಗಾಬರಿಯೂ ಆಗುತ್ತೆ! ನೀವು ಈ ಪಾತ್ರಗಳಲ್ಲಿ ಯಾವ ಪಾತ್ರದ ಎಷ್ಟು ಸನಿಹ ನಿಲ್ಲುತ್ತೀರಿ? ಯಾವ ಕೋನಗಳಿಂದ ಹೇಗೆ ಕಾಣುತ್ತೀರಿ? ಯಾವ ಪಾತ್ರದೊಂದಿಗೆ ಎಷ್ಟು ಮಾತನಾಡುತ್ತೀರಿ? ಎಂಬುದೆಲ್ಲ ನಿಮಗೇ ಬಿಟ್ಟದ್ದು, ನಿರ್ದೇಶಕ ಎಂಬ ಸೂತ್ರಧಾರ ನಿಮಗೆ ನೆನಪಾಗುವುದೇ ಸಿನಿಮಾ ಮುಗಿದ ಮೇಲೆ! ಅಷ್ಟು ಸಹಜವಾದ ಸಾತತ್ಯ ಸಾಧ್ಯವಾಗುವುದೇ ಈ ಚಿತ್ರದ ಹೆಗ್ಗಳಿಕೆ.

‘ಸಣ್ಣ’ದೆಂಬುದು ಸಣ್ಣದಲ್ಲದ, ದೊಡ್ಡದೆಂಬುದು ‘ದೊಡ್ಡ’ದಲ್ಲದ, ನಿಜ-ಸುಳ್ಳು, ಸರಿ-ತಪ್ಪು, ನೋವು-ನಗು ಎಲ್ಲವೂ ವಿಚಾರಣೆಯ ಯಾವ ‘ನೋಟೀಸೂ’ ಕೊಡದೆ ಸ್ಥಾನಪಲ್ಲಟಗೊಳ್ಳಬಹುದಾದ ಈ ಅಸಾಧಾರಣ, ದಾರುಣ ಬದುಕು! ಈ ಬದುಕಿನ ತೀವ್ರತೆಯ ತೆಕ್ಕೆಯಲ್ಲಿ ನಾವು-ನೀವು-ಯಾರೂ ‘ಸ್ವಂತ’ ಚಲನೆಯ ಪಥವನ್ನು ಆಯ್ದಕೊಳ್ಳುವ ಹಕ್ಕುದಾರರಲ್ಲ! ಇಲ್ಲಿ ಕೇವಲ ನಮ್ಮ ಉಸಿರಾಟ ಒಂದೇ ನಮ್ಮ ‘ಸ್ವಂತದ್ದು’! ..ಸಮಾಜ, ಸಂಬಂಧಗಳೇ ಹಾಗೇನೊ.. ಪೂರ್ಣವೆಂಬ ಅಪೂರ್ಣತೆ ಮತ್ತು ಅಪೂರ್ಣವೆಂಬ ಪೂರ್ಣತೆಯ ಹಾಗೆ! ಇದಕ್ಕೆ ನಗುವುದು ಅಥವಾ ಅಳುವುದು ಮಾತ್ರ ನಿಮ್ಮದೇ ಸ್ವಂತ ಆಯ್ಕೆ!

…ಕೊನೆಗೂ ಆ ದಂಪತಿಗಳಿಗೆ ಉಳಿಯುವುದು ವಿಚ್ಛೇದನದ ಆಯ್ಕೆಯೇ. ಕೋರ್ಟ್ ವಿಚಾರಣೆಯೊಂದಿಗೆ ಶುರುವಾಗುವ ಚಿತ್ರ ಮುಗಿಯುವುದೂ ಅಂಥದ್ದೇ ಸನ್ನಿವೇಶದೊಂದಿಗೆ. ಪುಟ್ಟ ತೆರ್ಮೆಹ್ ತಾನು ಮುಂದಿನ ಬದುಕನ್ನು ಕಳೆಯುವುದು ಅಪ್ಪನೊಂದಿಗೋ? ಅಮ್ಮನೊಂದಿಗೋ? ಎಂಬ ಅನಿವಾರ್ಯ ಆಯ್ಕೆ ಮಾಡಿಕೊಳ್ಳಬೇಕಿದೆ… ದುಗುಡವಲ್ಲದೆ ಮತ್ತೇನನ್ನೂ ಕಂಡಿರದ ಆ ಗಲ್ಲದ ಮೇಲಿನ ಬೆಚ್ಚನೆಯ ಕಣ್ಣೀರು ಅವಳದೋ?…ನಿಮ್ಮದೋ?…ಎಂಬುದು ಗೊತ್ತಾಗದ ಹಾಗೆ ಕೋರ್ಟ್ ಆವರಣದ ಮಬ್ಬುಗತ್ತಲು ನಿಮ್ಮ ಕಣ್ಣುಗಳಿಗೂ ಆವರಿಸಿಕೊಳ್ಳತ್ತದೆ….