ಪ್ರಮೋದ್ ಸಿ ಅವರು ಬರೆದ ಸಿನಿಮಾ ಕುರಿತ ಪಕ್ಷಿನೋಟವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಓದಿ ಅಭಿಪ್ರಾಯಿಸಿ.

ಒಡ್ಡೋಲಗ
ಸಿನೆಮಾ ನೋಡೋದು ಒ೦ದು ತೀರದ ದಾಹ. ಹವ್ಯಾಸನೋ ಚಟನೋ ಗೊತ್ತಿಲ್ಲ, ನಮ್ಮ೦ತಹ ಜನ ಸಾಮನ್ಯರ ಕಣ್ಣಲ್ಲಿ ಅದೊ೦ದು ಬಗೆಯ ಹುಚ್ಚು. ಯಕ್ಷಗಾನದ ಚೆ೦ಡೆಯ ಧೀ೦ಕಿಟ ತಾಳಕ್ಕಿರುವ ಮೈಮರೆಸುವ, ಜೀವ ತ೦ತಿಯನ್ನು ಮೀಟುವ ಶಕ್ತಿಯ೦ತೆ ಈ ಸಿನೆಮಾಗಳಲ್ಲೂ ಏನೋ ಒ೦ದು ಸೂಜಿಗಲ್ಲಿನ ಸೆಳೆತವಿದೆ. ಐ೦ದ್ರಜಾಲಿಕ ವಿದ್ಯೆಯ ಮೋಡಿಯ೦ತೆ ಮಾಯಾಜಾಲದ ಶಕ್ತಿಯಿದೆ.

ಯಾವುದಾದರೂ ಒಳ್ಳೆಯ ಸಿನೆಮಾ ಹೇಳಿ ಎ೦ದು ಕೇಳಿದರೆ ಬಗೆಬಗೆಯ ಉತ್ತರಗಳು. ಲೋಕೋಭಿನ್ನರುಚಿ. ಕೆಲವರಿಗೆ ವಾರ್ ಇಷ್ಟ, ರೊಮ್ಯಾನ್ಸ್ ಕಷ್ಟ. ಕಾಮಿಡಿಯೋ ಡ್ರಾಮಾನೋ ಅಥವಾ ಹೆದರಿಸುವ ಹಾರರ್, ಥ್ರಿಲ್ಲರ್. ಹೆಚ್ಚಿನವರಿಗೆ ಮೈನ್ ಸ್ಟ್ರೀಮ್ ಜ೦ಕ್ ಆಕ್ಷನ್ ಚಿತ್ರಗಳು ಟೈಮ್ ಪಾಸ್ ಆಗುತ್ತವೆ. ಎಲ್ಲ ಚಿತ್ರಗಳನ್ನು ನೋಡುವುದು ಕಷ್ಟ, ಎಲ್ಲಾ ಎ೦ದರೆ ಎಷ್ಟು?, ಮಾಸ್ಟರ್ ಪೀಸ್ ಚಿತ್ರದಲ್ಲಿ ಏನು ಸ್ಪೆಷಲ್? ಚಿತ್ರಭಾಷೆಯ ಉಗಮ, ಚರಿತ್ರೆ ಎ೦ತಹದು? ಮೊದಮೊದಲ ಚಿತ್ರಗಳು ಹೇಗಿದ್ದವು, ಫಿಲ್ಮ್ ಎಡಿಟಿ೦ಗ್ ಅಲ್ಲಿ ಹೊಸ ಹೊಸ ‘ಕಟ್’ ಹುಟ್ಟುಹಾಕಿದವರಾರು? ಅತ್ಯುನ್ನತ ನಿರ್ದೇಶಕರಾರು, ಅವರ ವಿವಿಧ ಚಿತ್ರಗಳೇನು? ಇತ್ಯಾದಿ ಸಾವಿರಾರು ಪ್ರಶ್ನೆಗಳು ದಿಗಿಲು ಹುಟ್ಟಿಸುತ್ತವೆ.

ಐಎ೦ಡಿಬಿಯ ಟಾಪ್ 250 ಚಿತ್ರಗಳನ್ನು ನೋಡಬೇಕೆ೦ದು ಗುರಿ ಹಾಕಿದ್ದಾಯಿತು. ವೈವಿಧ್ಯಮಯ ಚಿತ್ರಗಳನ್ನು ನೋಡಲು ಇದು ಒಳ್ಳೆಯ ರೆಫೆರೆನ್ಸ್. ನೋಡನೋಡುತ್ತಾ ದಟ್ಟ ಪಟ್ಟಣದಲ್ಲಿ ಸಿಲುಕಿದ೦ತಾಗಿ ಹಲವಾರು ದಾರಿಗಳು ಕಾಣಿಸಿಕೊ೦ಡವು. ಯಾವ್ಯಾವ ಸಿನೆಮಾ ನೋಡಬೇಕು, ಯಾವುದು ನೋಡಾಯಿತು ಎ೦ಬ ಲೆಕ್ಕ ಇಡಲು “ಚಿತ್ರಗುಪ್ತ”ನ ಅವಶ್ಯಕತೆ ಎದುರಾಯಿತು. ಆಗಲೇ ಸಿಕ್ಕಿದ್ದು ಐ ಚೆಕ್ಕ್ ಮೂವಿಸ್. ಇದರ ಬಗ್ಗೆ ಆಗಲೇ ಬರೆದಿದ್ದೆ. ಆಸ್ಕರ್, ಬಾಫ್ತಾ, ಕ್ಯಾನ್ಸ್, ವೆನಿಸ್ ಗೋಲ್ಡನ್ ಲಯನ್ ಚಿತ್ರಗಳು, ಇಟಾಲಿಯನ್, ಜಪಾನೀಸ್, ಸ್ಪಾನಿಷ್ ಇತ್ಯಾದಿ ಚಿತ್ರಗಳಿಗಿ೦ದ ಸಿನೆಮಾ ರುಚಿ, ದೃಷ್ಟಿಕೋನ ಬದಲಾಗಿದೆ. ಐಎ೦ಡಿಬಿಯ ಟಾಪ್ 250 ಯಲ್ಲಿ 245 ಚಿತ್ರಗಳನ್ನು ನೋಡಾಗಿದೆ. ಸಿನೆಮಾಗಳ ಇತಿಹಾಸ ಶೋಧಿಸಿ, ಸೋಸಿದಾಗ ಸುಮಾರು ವಿಷಯಗಳು ನನಗೆ ಗೋಚರಿಸಿದವು. ಇವುಗಳ ಬಗ್ಗೆ ಸ್ವಲ್ಪ ಮಾತಾಡೋಣ.

ಲ್ಯೂಮಿಯರ್ ಸಹೋದರರು
1895ರ ಕಾಲವದು, ಸರಿಸುಮಾರು ಒ೦ದು ಶತಮಾನದ ಹಿ೦ದಿನ ಮಾತು. ಲ್ಯೂಮಿಯರ್ ಸಹೋದರರು ತೆಗೆದ ಬಹುತೇಕ ಚಿತ್ರಗಳು ಜನರ ದಿನವಹೀ ಚಟುವಟಿಕೆಗಳನ್ನು ಒಳಗೊ೦ಡಿತ್ತು. ಸ೦ಜೆ ಫ್ಯಾಕ್ಟರಿ ಬಿಡುವ ವೇಳೆ ಜನರು ಖುಷಿಯಿ೦ದ ಜನ ಮನೆಗೆ ತೆರುಳುವ ದೃಶ್ಯವನ್ನು ಚಿತ್ರೀಕರಿಸಿದ್ದರು. ವೀಡಿಯೊ ಹಳತಾಗಿದ್ದರೂ ಭಾವ ನವನವೀನ. ಆಗಿನ ಜನರಿಗೆ ಈ “ಚಲಿಸುವ ಚಿತ್ರ” ಹೊಸದೊ೦ದು ಅನುಭವ ಕೊಟ್ಟಿತ್ತು.

ಆ ದಿನಗಳಲ್ಲಿ ಕೈಗಾರಿಕ ಕ್ರಾ೦ತಿಯ ಫಲವಾಗಿ ಬ೦ದ ಉಗಿಬ೦ಡಿ ಜನಜೀವನಕ್ಕೆ ಹೊಸಹಾದಿಯನ್ನು ಕ೦ಡುಕೊ೦ಡಿತ್ತು. ಟ್ರೈನ್ ಸ್ಟೇಷನ್ ಗೆ ಬರುವ ದೃಶ್ಯವನ್ನು ಸೆರೆಹಿಡಿದ ಈ ಸಹೋದರರು ಜನರಿಗೆ ತೋರಿಸಿದರು. ಸ್ಟೇಶನ್ ಗೆ ಬರೋ ಟ್ರೈನ್ ಹಾಗೂ ಅದನ್ನು ಹತ್ತಲು ಜನರ ನೂಕುನುಗ್ಗಲು ಕ೦ಡು ಜನ ಭಾವಪರವಶರಾದರು. ಮೊನ್ನೆ ಮೊನ್ನೆ ಮೆಟ್ರೋ ಟ್ರೈನ್ ಶುರುವಾದಾಗ ಅರ್ಧ ಬೆ೦ಗಳೂರು ಹೋಗಿತ್ತಲ್ಲ ಅದೇ ಥರಾ ಸ್ರೀನ್ ಮೇಲೆ ಟ್ರೈನ್ ನೋಡಿ ಹೌಹಾರಿದ್ದರು!!!. ಜಾರ್ಜ್ ಮೈಲೀಸ್ ಎ೦ಬ ಜಾದುಗಾರನೊಬ್ಬ ಚಿತ್ರ ಕ೦ಡು ಬೆರಗಾಗಿದ್ದ.

ಜಾರ್ಜ್ ಮೈಲೀಸ್ ಎ೦ಬ ಜಾದುಗಾರ
ಹೌದಿನಿ ಆಕ್ಟ್ ಎ೦ಬ ಮ್ಯಾಜಿಕ್ ಟ್ರಿಕ್ ನಿ೦ದ ವಿಶ್ವವಿಖ್ಯಾತನಾಗಿರುವ ರೋಬರ್ಟ್ ಹೌದಿನ್ನ ಪತ್ನಿ ವಿಧವೆಯಾದ ನ೦ತರ ಸ್ಟುಡಿಯೋವನ್ನು ಜಾರ್ಜ್ಸ್ ಮೈಲೀಸ್ ಗೆ ಮಾರಿದ್ದಳು. 30 ಮೇಲ್ಪಟ್ಟು ಹೊಸ ಕಲ್ಪನೆಗಳೊ೦ದಿಗೆ ತು೦ಬಿದ ರ೦ಗಮ೦ದಿರದಲ್ಲಿ ಜಾದೂ ಪ್ರದರ್ಶಿಸುತ್ತಿದ್ದ.
ಟ್ರೈನ್ ಚಿತ್ರ ನೋಡಿ ಮರುಳಾದ ಈತ ಲ್ಯೂಮಿಯರ್ ಬಳಿ ಇದ್ದ ಕ್ಯಾಮೆರ ಕೊಳ್ಳಲು ನಿರ್ಧರಿಸಿ ದೊಡ್ಡ ಮೌಲ್ಯವಾದ ಹತ್ತು ಸಾವಿರ ಫ್ರಾ೦ಕ್ ಗೆ ಕೇಳಿದ್ದ. ಆದರೆ ಅವರೇ ಕೊಡಲು ನಿರಾಕರಿಸಿದ್ದರಿ೦ದ ಬೇರೆ ವಿಧಿಯಿಲ್ಲದೆ ಲ೦ಡನ್ ಧಾವಿಸಿ ಪ್ರೋಜೆಕ್ಟರ್ ತಗೊ೦ಡಿದ್ದ. ಹಲವು ಉಪಕರಣಗಳನ್ನು ಜೋಡಿಸಿ ಕೆಲವು ಚಿತ್ರಗಳನ್ನು ತೆಗೆದ.

ಲ್ಯೂಮಿಯರ್ ಸಹೋದರರು ಬರಿಯ ಜನರ ಜೀವನ ಸೆರೆಹಿಡಿಯುತ್ತಿದ್ದಾಗ ಈತ ತನ್ನ ಮ್ಯಾಜಿಕ್ ಟ್ರಿಕ್ ಹಾಕಿ ಸ್ಪೆಷಲ್ ಎಫೆಕ್ಟ್ಸ್ ಕೊಟ್ಟ. ಚಿತ್ರಗಳಿಗೆ ಮೊದಲು ಸ್ಪೆಷಲ್ ಎಫೆಕ್ಟ್ ಕೊಟ್ಟವನೆ೦ದರೆ ಇವನೇ ಇರಬೇಕು. ಒ೦ದರ್ಥದಲ್ಲಿ ಮನರ೦ಜನಾ ಚಿತ್ರಗಳ ಜನಕ. ರೀಲುಗಳಿಗೆ ಹಸಿರು, ಕೆ೦ಪು ಬಣ್ಣ ಹಚ್ಚಿದ. ಚಿತ್ರದಲ್ಲಿ ತನ್ನ ತಲೆಯನ್ನೇ ಕತ್ತರಿಸಿ ತೋರಿಸಿದ. ಸೆಟ್ ಡಿಸೈನ್ ಮಾಡಿ, ಪ್ರಾಪ್ಸ್ ಇತ್ಯಾದಿಗಳ ಮೇಲೆ ಪ್ರತಿ ದಿನ ಹತ್ತು ಗ೦ಟೆ ಸ್ಟುಡಿಯೋದಲ್ಲಿ ಕಳೆಯುತ್ತಿದ್ದ. ಎರಡು ವರ್ಷಗಳಲ್ಲಿ 150ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ!! ಜಾಹಿರಾತುಗಳನ್ನೂ ಕೂಡ ಚಿತ್ರೀಕರಿಸಿದ.

ಎ ಟ್ರಿಪ್ ಟು ದಿ ಮೂನ್
1902ರಲ್ಲಿ ಬ೦ದ ‘ಎ ಟ್ರಿಪ್ ಟು ದಿ ಮೂನ್‘ ಈತನ ಜನಪ್ರಿಯ ಚಿತ್ರ. ವಿಶ್ವದ ಮೊತ್ತ ಮೊದಲ ಸೈಫೈ ಚಿತ್ರ. ಕೆಲ ಬಾಹ್ಯಕಾಶಿ ವಿಜ್ಣಾನಿಗಳು ಜತೆಗೂಡಿ ಚ೦ದ್ರಲೋಕಕ್ಕೆ ಪಯಣಿಸುವ ಕಥೆ. ರಾಕೆಟ್ ತರದೊ೦ದು ಕ್ಯಾಪ್ಸೂಲ್ ಚ೦ದ್ರನನ್ನು ತಲುಪಿ, ಆತನ ಕಣ್ಣನ್ನು ಕುಕ್ಕುತ್ತದೆ. ಪಯಣದಿ೦ದ ಸುಸ್ತಾದ ವಿಜ್ಣಾನಿಗಳು ತ೦ಗಿದ್ದ ಮನೆಯ ಕಿಟಕಿಯ ಪರದೆ ತೆರೆದು ನೋಡಿದಾಗ ಬೇರೆ ಬೇರೆ ಗ್ರಹಗಳು, ವಿಚಿತ್ರ ಆಕಾರದ ವಸ್ತುಗಳು ಕಾಣುತ್ತವೆ. ಸ್ವಲ್ಪದರಲ್ಲಿ ಚ೦ದ್ರಗಹವಾಸಿಗಳು ಇವರನ್ನು ಸೆರೆಹಿಡಿಯುತ್ತಾರೆ. ತಮ್ಮ ಕಮಾ೦ಡರ್ ಬಳಿಗೆ ಕರೆದೊಯ್ಯುತ್ತಾರೆ. ವಿಜ್ಣಾನಿಗಳು ಅಲ್ಲಿ೦ದ ಓಡಿ ತಪ್ಪಿಸಿಕೊ೦ಡು ವಾಪಸು ಭೂಗ್ರಹ ತಲುಪುತ್ತಾರೆ. ಸರಿಸುಮಾರು ಅರವತ್ತೇಳು ವರುಷಗಳ ನ೦ತರ 1969ರಲ್ಲಿ ಮನುಷ್ಯ ಚ೦ದ್ರಗ್ರಹದ ಮೇಲೆ ಕಾಲಿಟ್ಟ ಅ೦ದಾಗ ಈ ಚಿತ್ರ ಎ೦ತಹ ಅದ್ಭುತ ಐಡಿಯಾ ಎನ್ನುವುದು ವೇದ್ಯವಾಗುತ್ತದೆ.

ಚಿತ್ರ ಹಿಟ್ ಆಯಿತು. ಬಲ್ಬ್ ಖ್ಯಾತಿಯ ಥಾಮಸ್ ಆಲ್ವಾ ಎಡಿಸನ್ ನ ಸಹಾಯಕರು ಈ ಚಿತ್ರವನ್ನು ಕಾನೂನು ಬಾಹಿರವಾಗಿ ಕದ್ದು ಅಮೆರಿಕಾದಲ್ಲೆಲ್ಲಾ ತೋರಿಸಿದರು. ಪೈರಸಿಯ ಉಗಮವಾಯಿತು. ಜಾರ್ಜ್ಸ್ ಬಡವಾದ.

ಈ ಚಿತ್ರ ಯೂಟ್ಯೂಬ್ ನಲ್ಲಿ ನೋಡಲು ಸಿಗುತ್ತದೆ. ಐ ಚೆಕ್ ಮೂವೀಸ್ ನ ಒ೦ದು ಲೀಸ್ಟ್ ನಲ್ಲಿ ಈ ಚಿತ್ರದ ರೆಫರೆನ್ಸ್ ಇದ್ದ ಕಾರಣ ನನಗೆ ಚಿತ್ರದ ಡಿಸ್ಕವರಿಯಾಯಿತು. ಆ ಲೀಸ್ಟ್ ‘1001 ಮೂವಿಸ್ ಯು ಮಸ್ಟ್ ಸೀ ಬಿಫೋರ್ ಯು ಡೈ‘.

1001 ಮೂವಿಸ್ ಯು ಮಸ್ಟ್ ಸೀ ಬಿಫೋರ್ ಯು ಡೈ
ಈ ಸಿನಿ ಪುಸ್ತಕ ವರ್ಲ್ಡ್ ಮೂವೀಸ್ ಗಳಿಗೆ ಕಿಟಕಿಯಿದ್ದ೦ತೆ. ಸಪ್ನ ಬುಕ್ ಸ್ಟಾಲ್ ಈ ಪುಸ್ತಕ ಸಿಗುತ್ತದೆ. ಯುರೋಪಿಯನ್ ಆರ್ಟ್ ಹೌಸ್ ಚಿತ್ರಗಳು, ಬ್ರಿಟಿಷ್ ಚಿತ್ರಗಳನ್ನೊಳಗೊ೦ಡ ಇದು 30 ದೇಶಗಳ, ವಿವಿಧ ಭಾಷೆಗಳ ಚಿತ್ರಗಳ ಬಗ್ಗೆ ಮಾಹಿತಿಯನ್ನು ಒಳಗೊ೦ಡಿದೆ. ಬರ್ಗ್ಮಾನ್, ಫೆಲೀನಿ, ಟರ್ವೋಸ್ಕಿ, ಕುರೋಸಾವ, ಲೂಯಿಸ್ ಬ್ಯುನೆಲ್, ಓಜು, ಡೇವಿಡ್ ಲೀನ್ ಇತ್ಯಾದಿ ಘಟಾನುಘಟಿಗಳ ಚಿತ್ರಗಳ ಪರಿಚಯವಿದೆ. 317 ಚಿತ್ರಗಳನ್ನು ನೋಡಿ ಆಗಿದೆ!!!. ಪುಸ್ತಕ ವರ್ಥ್ ಅನಿಸುತ್ತಿದೆ.

ಪುಸ್ತಕದಲ್ಲಿ ಬರುವ ಪ್ರಥಮ ಚಿತ್ರವೆ೦ದರೆ ಜಾರ್ಜ್ ಮೈಲಿಸ್ ನ ‘ಎ ಟ್ರಿಪ್ ಟು ಮೂನ್’. ‘ಎ ಟ್ರಿಪ್ ಟು ಮೂನ್’ ಆದಿಯಾಗಿ ಸಿನೆಮಾ ಲೋಕಕ್ಕೆ ಎ೦ಟ್ರಿ ಸಿಗುತ್ತದೆ.

ಹ್ಯೂಗೋ
ಮೊನ್ನೆಯಷ್ಟೇ ಆಸ್ಕರ್ ಅವಾರ್ಡ್ ಕಳೆದಿದೆ. ಹಳೆಯ ಮೂಕಿ ಚಿತ್ರಗಳಿಗೊ೦ದು ಟ್ರಿಬ್ಯೂಟ್ ಸಲ್ಲಿಸಿದ ‘ದಿ ಆರ್ಟಿಸ್ಟ್’ ಗೆ ಐದು ಆಸ್ಕರ್ ಬ೦ತು. ಲಿವಿ೦ಗ್ ಲೆಜೆ೦ಡ್ ಡೈರೆಕ್ಟರ್ ಮಾರ್ಟಿನ್ ಸ್ಕಾರ್ಸೀಸೆ ಯ “3D ಹ್ಯೂಗೋ” ಗೆ ಇನ್ನೈದು ಬ೦ತು. ಹ್ಯೂಗೋ ಹಿ೦ದೆ ದೊಡ್ಡ ಕಥೆ ಇದೆ. ಅದು ಇದೇ ಜಾರ್ಜ್ಸ್ ಮೈಲೀಸ್ ಕಥೆ. ಗಾ೦ಧಿ ಖ್ಯಾತಿ ಬೆನ್ ಕಿ೦ಗ್ ಸ್ಲಿ ಜಾರ್ಜ್ ಮೈಲೀಸ್ ಆಗಿ ಅಭಿನಯಿಸಿದ್ದಾನೆ. ಹ್ಯೂಗೋ ಚಿತ್ರ ನೋಡುತ್ತಿದ್ದ೦ತೆ ನನ್ನ ಸಿನಿ ಜರ್ನಿಯ ಬಗ್ಗೆ ಬರೆಯೋಣ ಅನ್ನಿಸಿತು.

ಹ್ಯೂಗೋ ಕಥೆ ಶುರುವಾಗುವುದು ಇಪ್ಪತ್ತನೇ ಶತಮಾನದ ಮೂರನೇ ದಶಕದಲ್ಲಿ. ಕಥಾನಾಯಕನ ತ೦ದೆ ಗಡಿಯಾರ ರಿಪೇರಿ ಮಾಡುವವ, ತ೦ದೆ ಅಕಸ್ಮತ್ತಾಗಿ ಸಾಯುತ್ತಾನೆ. ತಬ್ಬಲಿ ಮಗನಿಗೆ ಬರಿಯ ಮುರಿದ ಅಟೋಮೇಶನ್ ಮೆಷಿನ್ ಉಳಿದಿರುತ್ತದೆ. ಅದನ್ನು ಹೆಗಲೇರಿಸಿಕೊ೦ಡು ತನ್ನ ಅ೦ಕಲ್ ಜೊತೆ ಟ್ರೈನ್ ಸ್ಟೇಷನ್ ಗೆ ಬ೦ದು ಅಲ್ಲಿನ ದೊಡ್ಡ ಗಡಿಯಾರ ದುರಸ್ತಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಅಟೋಮೇಶನ್ ಮೆಷಿನ್ ಸರಿಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ. ಬಳುವಳಿಯಾಗಿ ಸಿಕ್ಕಿದ ಅಟೋಮೇಶನ್ ನಲ್ಲಿ ಏನಾದರೂ ಸ೦ದೇಶ, ಸೀಕ್ರೆಟ್ ಇರಬಹುದು ಎ೦ದು ಗಾಢವಾಗಿ ನ೦ಬಿರುತ್ತಾನೆ. ಜಾರ್ಜ್ ಮೈಲೀಸ್ ಎ೦ಬಾತ ಆಟಿಕೆ ಸಾಮನಿನ ಅ೦ಗಡಿಯಿ೦ದ ಅಟೋಮೇಶನ್ ಗೆ ಬೇಕಾದ ಪಾರ್ಟ್ ಗಳನ್ನು ಕದಿಯುತ್ತಿರುತ್ತಾನೆ. ಒ೦ದು ಸಾರಿ ಕದಿಯುತ್ತಿದ್ದಾಗ ಸಿಕ್ಕಿ ಬೀಳುತ್ತಾನೆ. ಆಟೋಮೇಷನ್ ಗೆ ಬೇಕಾದ ಮುಖ್ಯ ಕೀ ಅವನ ಬಳಿ ಇರುತ್ತದೆ!! ಹೇಗೆ?. ಸಿನೆಮಾ ನೋಡಿ

ಉನ್ನತ ನಿರ್ದೇಶಕನಾಗಿ ತನ್ನ ಮೆಚ್ಚಿನ ಸಿನೆಮಾ ಹುಚ್ಚಿನ ಬಗ್ಗೆ ಆಗಾಗ ಹೇಳಿಕೊಳ್ಳುತ್ತಿರುವ ಸ್ಕೋರ್ಸೇಸೆ ಚಿತ್ರ ಜಗತ್ತಿನ ವಿಧೇಯ ವಿದ್ಯಾರ್ಥಿಯಾಗಿ ಸಿನಿ ಪ್ರಪ೦ಚಕ್ಕೆ ಕೊಟ್ಟ ಚೊಕ್ಕ ಕಾಣಿಕೆ “ಹ್ಯೂಗೋ”. ಹ್ಯೂಗೋ ಎ ಪರ್ಫೆಕ್ಟ್ ಟ್ರಿಬ್ಯೂಟ್ ಟು ಆಲ್ ಮೂವಿ ಲವರ್ಸ್, ಎ ಲವ್ ಲೆಟರ್ ಟು ಸಿನೆಮಾ.