ಚಲನಚಿತ್ರಗಳನ್ನು ನೋಡುವುದೇಕೆ ಹಾಗೂ ನೋಡುವುದಿಲ್ಲ ಎಂಬೆರಡು ಪ್ರಶ್ನೆಗಳನ್ನು ಇಟ್ಟುಕೊಂಡು ಮೈಸೂರಿನ ಕೆ. ಮುದ್ದುಕೃಷ್ಣ ಒಂದಷ್ಟು ಆಲೋಚನೆಗಳನ್ನು ಹರಿಬಿಟ್ಟಿದ್ದಾರೆ. ಮೈಸೂರು ಫಿಲಂಸೊಸೈಟಿ ಪ್ರಕಟಿಸಿದ ಲೇಖನವಿದು, ಎಲ್ಲರಿಗೂ ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗುತ್ತಿದೆ. 

ಬಾಲ್ಯದಿಂದಲೇ ಚಲನಚಿತ್ರಗಳಿಗೆ ಪರಿಚಿತರಾಗುವ ಜನರು ಸಾಮಾನ್ಯವಾಗಿ ಸಿನಿಮಾ / ಫಿಲಂ / ಮೂವಿ ಎಂದರೆ ಸಂಪೂರ್ಣವಾಗಿ ಕಾಲ್ಪನಿಕವಾದದ್ದು, ಫ್ಯಾಂಟಸಿಯಂತಹದು, ಅದು ಇರುವುದೇ ನಮ್ಮ ಮನರಂಜನೆಗಾಗಿ ಮಾತ್ರ ಎಂದು ತಿಳಿದಿರುವುದೆ ಹೆಚ್ಚು. ನಿತ್ಯ ಜಂಜಡಗಳ ಗೋಳಿನಿಂದ / ಸಾಮಾಜಿಕ ವಾಸ್ತವಗಳಿಂದ ೨ ರಿಂದ ೩ ಘಂಟೆಗಳ ಕಾಲ ಬೇರೊಂದು ಲೋಕಕ್ಕೆ ನಮ್ಮನ್ನು ಕರೆದ್ಯೊಯುವುದೇ ಸಿನಿಮಾ ಎಂಬ ನಂಬಿಕೆ ಬಹಳ ಮಂದಿಯದು. ನಮ್ಮಲ್ಲಿ ಹಾಡು, ನೃತ್ಯ, ಹೊಡೆದಾಟ, ಜನಪ್ರಿಯ ತಾರೆಯರು (ಹಾಗು ಅವರ ಅಭಿಮಾನಿಗಳು!) ರೋಚಕವಾದ ಮಾತುಕಥೆ ಸಂಭಾಷಣೆ, ಹಾಸ್ಯ, ಕ್ಯಾಬರೆ ಇತ್ಯಾದಿಗಳ ಸೂತ್ರವಿದ್ದಂತೆ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಫಾರ್ಮುಲಾಗಳಿವೆ. ಇವುಗಳಿಗೆ ತಕ್ಕಹಾಗೆ ನಡೆದುಕೊಳ್ಳುವ ಚಲನಚಿತ್ರ ಜಗತ್ತು ವಾಣಿಜ್ಯ ಚಿತ್ರಗಳನ್ನು ನಿರ್ಮಿಸುತ್ತಾ ಬರುತ್ತಿವೆ.

ಎರಡನೆಯ ಹಂತದಲ್ಲಿ ಕ್ಲೀಷೆಯಾಗಿ ‘ಸದಭಿರುಚಿಯ ಚಿತ್ರಗಳು’, ‘ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರಗಳು’ ಎಂಬ ಸಿನಿಮಾಗಳನ್ನು ನೋಡಬಹುದು. ಇವುಗಳ ಮೂಲಪ್ರೇರಣೆಯಾಗಿ ಬಹುಪಾಲು ಜನಪ್ರಿಯ ಹಾಗೂ ಸಾಹಿತ್ಯಕ ಕಥೆ, ಕಾದಂಬರಿ, ನಾಟಕಗಳಿರುತ್ತವೆ.ಕಾದಂಬರಿಗಳನ್ನು ಮೇಲ್‌ಮಧ್ಯಮವರ್ಗದವರಿಗೆ, ಸಾಹಿತ್ಯಕ ಕಾದಂಬರಿಗಳನ್ನು ಸಾಹಿತ್ಯಾಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಚಿಸಿರುವುದರಿಂದ, ಮುದ್ರಿತ ಕಥಾವಸ್ತುವನ್ನು ಸಿನಿಮಾ ಮಾಧ್ಯಮಕ್ಕೆ ಅಳವಡಿಸಿರುವುದರಿಂದ ಪ್ರೇಕ್ಷಕರು ಸಹ ತುಲನಾತ್ಮಕ ಅಭಿವ್ಯಕ್ತಿಗಾಗಿ ಇವುಗಳನ್ನು ಪ್ರೋತ್ಸಾಹಿಸುತ್ತಾರೆ. ಜನಕಾದಂಬರಿಗಳು ಒಂದುಬಾರಿ ಸಿನಿಮಾವಾಗಿ ನಿಂತುಹೋದರೆ, ಸಾಹಿತ್ಯಕ ಕಾದಂಬರಿಗಳು ಕಾಲಕಾಲಕ್ಕೆ, ಬೇರೆ ಬೇರೆ ಆವೃತ್ತಿಗಳನ್ನು ಕಾಣುತ್ತಿರುತ್ತವೆ. ಉದಾ: ಬಿಮಲ್ ರಾಯ್‌ರ ‘ದೇವದಾಸ್’, ಬನ್ಸಾಲಿಯ ‘ದೇವದಾಸ್’, ಅನುರಾಗ್ ಕಷ್ಯಪ್‌ರ ‘ದೇವದಾಸ್ (ದೇವ್ ಡಿ)’. ಡಾ|| ಜೀವಾಗೊ, ಸಿಂಗಿಂಗ್ ಇನ್ ದ ರೈನ್, ಲಾರೆನ್ಸ್ ಆಫ್ ಅರೇಬಿಯ ಮುಂತಾದವು ಹಳೆಯ ಉದಾಹರಣೆಗಳಾದರೆ, ತೀರಾ ಇತ್ತೀಚಿನದು ‘ಕ್ಯೂ ಅಂಡ್ ಎ’ ಕಾದಂಬರಿ ಆಧಾರಿತ ‘ಸ್ಲಂ ಡಾಗ್ ಮಿಲಿನಿಯನೇರ್’ ಯಶಸ್ಸು ಎನ್ನಬಹುದು.

ಈ ಮೇಲಿನ ಎರಡೂ ರೀತಿಯ ಚಿತ್ರಗಳು ಸಿನಿಮಾ ಮಂದಿರಗಳಲ್ಲಿ ತೆರೆಕಂಡು, ಸಕಲರಿಗೂ ಲಭ್ಯವಿರುವುದರಿಂದ ಪ್ರೇಕ್ಷಕನಿಗೆ ಆಯ್ಕೆಗಳಿವೆ. ನೋಡಲಾಗದೆ ಕಸದ ಬುಟ್ಟಿಗೆ ಎಸೆಯುವ ಅಧಿಕಾರವನ್ನೂ ಸಹ ಹೊಂದಿರುತ್ತಾರೆ. ಜೊತೆಗೆ ‘ಸಮೂಹ ಸನ್ನಿ’ಗೆ ಒಳಗಾಗಿ ತಮ್ಮ ವಿವೇಚನೆಯನ್ನೇ ಕಳೆದುಕೊಂಡು ಅತ್ಯಂತ ಕಳಪೆ ಚಿತ್ರವನ್ನು ರಜತ / ಸ್ವರ್ಣ / ಪ್ಲಾಟಿನಂ ದಿನಗಳ ಕಾಲ ಓಡಿಸುವುದೂ ಇದೆ (ಉದಾ: ಮುಂಗಾರು ಮಳೆ!). ಹೀಗಾಗಿ ಕಲಾತ್ಮಕ / ಪ್ರಯೋಗಾತ್ಮಕ / ವಾಸ್ತವವಾದಿ ಚಿತ್ರಗಳನ್ನು ನೋಡಬೇಕೆಂದರೆ ಮನೆಯಲ್ಲಿಯೇ ಡಿವಿಡಿಗಳ ಮೂಲಕ ಅಥವಾ ಸಾಮೂಹಿಕವಾಗಿ ಚಲನಚಿತ್ರ ಸಮಾಜಗಳ ಮೂಲಕ ಮಾತ್ರ ಸಾಧ್ಯವಾಗುತ್ತದೆ. ಈ ಸಿನಿಮಾಗಳು ಚಲನಚಿತ್ರ ಜಗತ್ತಿನ ಎಲ್ಲಾ ಮಗ್ಗುಲುಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವುದರೊಂದಿಗೆ, ಚರ್ಚೆಗಳ ಮೂಲಕ ಸಿನಿಮಾ ಒಂದರ ಮೌಲ್ಯಮಾಪನವನ್ನು ಸಹ ಮಾಡುತ್ತಿರುತ್ತದೆ. ಇದಕ್ಕಿಂತ ಹೆಚ್ಚಾಗಿ ಅವುಗಳು ನಮ್ಮ ಸಮಯ ಹಾಗೂ ಶ್ರಮಕ್ಕೆ ಪ್ರತಿಫಲವಾಗಿನೀಡುವ ಸಂತೋಷ, ವೈಚಾರಿಕತೆ, ಹೊಳಹುಗಳು ಬಹಳ ದಿನಗಳ ಕಾಲ ನಮ್ಮನ್ನು ಆವರಿಸಿಕೊಂಡು ಕಾಡುತ್ತವೆ. ಸಂತೋಷವನ್ನು ನಮ್ಮ ಜೀವನದ ಉದ್ದಕ್ಕೂ ವಿಸ್ತರಿಸುತ್ತವೆ.

ಸಾವಿರಾರು ಸಿನಿಮಾಗಳನ್ನು ಹೆಸರಿಸಬಹುದಾದರೂ, ಚೀನಾದೇಶದ ವಾಂಗ್ ಕರ್‌ವಾಯ್ ಎಂಬ ನಿರ್ದೇಶಕನ “ಇನ್ ಮೂಡ್ ಫಾರ್ ಲವ್” ನೋಡಿ! ಇಲ್ಲಿ ತಣ್ಣನೆಯ ಪ್ರೀತಿ ಇದೆ – ಅದರ ವೈಭವೀಕರಣವಿಲ್ಲ. ಕಲ್ಪನಾ, ಮೀನಾಕುಮಾರಿಗಿಂತ ಭಾವಾತಿರೇಕದಿಂದ ಗೋಳುಗರಿಯುವ ಸಾಧ್ಯತೆ ಇದ್ದರೂ ಬದಲಿಗೆ ನಿಶಬ್ದ ಕಣ್ಣೀರಿದೆ. ಜಡಿಯುವ ಮುಂಗಾಳು ಮಳೆ ಇದೆ (ಅಸಹ್ಯವಾಗಿ ನೆನಯುವ ದೃಶ್ಯಗಳ ಬದಲಿಗೆ) ಮುಖ್ಯ ಗಂಡು-ಹೆಣ್ಣು ಪಾತ್ರಗಳು ಮಳೆಯಿಂದ ರಕ್ಷಣೆಗಾಗಿ ಗೋಡೆಬದಿ ನಿಲ್ಲುವ ವಾಸ್ತವಿಕವಾದ ಸುಂದರ ದೃಶ್ಯಸಂಯೋಜನೆ ಇದೆ. ಪ್ರತಿಬಾರಿ ಈ ಚಿತ್ರ ನೋಡಿದಾಗಲೂ ಆಗುವ ಅನುಭವವಿದೆಯೆಲ್ಲ ಅದು ಮಾತ್ರ ಅನನ್ಯವಾದುದು!

ವಾಣಿಜ್ಯ ಚಿತ್ರಗಳ ತಾರಾ ಮೌಲ್ಯ, ಮಾರುಕಟ್ಟೆಯ ತಂತ್ರಗಳಿಂದ ಜನ ಒಮ್ಮೆಗೇ ವಿಮುಕ್ತರಾಗಿ, ಚಿತ್ರ ಸಮಾಜಗಳತ್ತ ನಡೆದುಬಿಡುತ್ತಾರೆ ಎಂಬ ಭ್ರಮೆ ಖಂಡಿತಾ ಇಲ್ಲ! ಬದಲಿಗೆ ಅಗಿಯುತ್ತಿರುವ ಹುಲ್ಲನ್ನೇ ಕಬ್ಬು ಎಂದು ತಿಳಿದಿರುವ ಜನರಿಗೆ ಒಮ್ಮೆಯಾದರೂ ನಿಜವಾದ ಕಬ್ಬಿನರಸದ ಸಿಹಿ ತಿಳಿಯಲಿ, ತಿಳಿದು ನಿಧಾನವಾಗಿಯಾದರೂ ತಿಳಿಯಾದ ಪಾರದರ್ಶಕವಾದ ಹರಿಯುವ ನೀರಾದ ನೈಜಸಿನಿಮಾಗಳತ್ತ ಹೊರಳಲಿ ಎಂಬುದು ಈ ಲೇಖನದ ಆಶಯ.