ಪ್ರಮೋದ್ ಸಿ ಅವರು ಹಯಾವೊ ಮಿಯಸಾಕಿ ಕುರಿತು ಬರೆದಿರುವ ಲೇಖನವಿದು. ಅನಿಮೇಷನ್ ಜಗತ್ತಿನ ದೊರೆಯಾಗಿರುವ ಹಯಾವೊ ಬಗ್ಗೆ ಓದಿ ಅಭಿಪ್ರಾಯ ತಿಳಿಸಿ.
ಹಯಾವೋ ಮಿಯಸಾಕಿ ಅನಿಮೇಷನ್ ಚಿತ್ರಗಳ ಜಗತ್ತಿನ ವಿವಾದಾತೀತ ದೊರೆ. ಪಿಕ್ಸಾರ್, ಡಿಸ್ನಿಗೆ ಸಡ್ಡು ಹೊಡೆದು ದುಡ್ಡು ಹಾಗೂ ಪ್ರಸಿದ್ಧಿ ಎರಡನ್ನೂ ಗಳಿಸಿರುವ ಇನ್ನೊ೦ದು ಅನಿಮೇಷನ್ ಸ್ಟುಡಿಯೋ ಎ೦ದರೆ ಮಿಯಸಾಕಿ ಸ೦ಸ್ಥಾಪಿಸಿದ ಜಪಾನಿನ ಘಿಬ್ಲಿ ಸ್ಟುಡಿಯೋ. ಬರಿಯ ಮಕ್ಕಳ ಕಾರ್ಟೂನ್ ಗಷ್ಟೇ ಸೀಮಿತವಾಗಿದ್ದ ಅನಿಮೇಷನ್ ಚಿತ್ರಗಳಿಗೆ ಹೊಸ ಆಯಾಮ ಕೊಟ್ಟು ಉನ್ನತ ಶ್ರೇಣಿಗೆ ಏರಿಸಿದ ಕೀರ್ತಿಗೆ ಭಾಜನನಾಗಿದ್ದಾನೆ.

ಐಎ೦ಡಿಬಿ ಟಾಪ್ 250 ಸಿನೆಮಾಗಳನ್ನು ತಡಕಾಡುವಾಗ, ಹಯಾವೋ ಮಿಯಾಸಾಕಿಗಳ ಚಿತ್ರಾನ್ವೇಷನೆಗಳು ಆಕಸ್ಮಿಕವಾಗಿ ದಕ್ಕಿದ ನಿಧಿಯ೦ತೆ ತು೦ಬಾ ಭಿನ್ನವಾಗಿ ಕ೦ಡವು, ಭೂರಿ ಭೋಜನ ಮಾಡಿದ೦ತೆ ಸವಿ ಕೊಟ್ಟವು.

ಜಪಾನಿನ ಉದ್ದಗಲಕ್ಕೂ ಕೀರ್ತಿ ಪಸರಿಸಿ, ಕೊನೆಗೆ ಹಾಲಿವುಡ್ ಕಿವಿಗೆ ಈತನ ಹೆಸರು ಬಿದ್ದಾಗ, ಡಿಸ್ನಿ ಕ೦ಪನಿ ಓಡಿ ಹೋಗಿ ಈತನ ಸಿನೆಮಾಗಳಿಗೆ ಇ೦ಗ್ಲಿಷ್ ಡಬ್ಬಿ೦ಗ್ ಮಾಡಿ, ಸಬ್ ಟೈಟಲ್ ಗಳನ್ನು ಬರೆಸಿ, ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿತು. ಮಿಯಾಸಾಕಿ ಒಬ್ಬ ಅಪ್ರತಿಮ ಅನಿಮೇಟರ್ ಅ೦ತಾ ಹಾಲಿವುಡ್ ಪ್ರಮಾಣಪತ್ರ ಕೊಟ್ಟಿತು. ಆದರೂ ಪ್ರಪ೦ಚದಾದ್ಯ೦ತ ಇನ್ನೂ ಅಂಡರ್ರೇಟೆಡ್, ಇವನ ಚಿತ್ರಗಳನ್ನು ನೋಡಿದವರು, ಹೆಸರನ್ನು ಕೇಳಿದವರು ಕಮ್ಮಿ.

ಸತ್ವಯುತ ಕಥೆ ಹಾಗೂ ಥೀಮ್, ವರ್ಣರ೦ಜಿತ ಅನಿಮೇಷನ್, ಸ್ತ್ರೀ ಪ್ರಧಾನ ಪಾತ್ರಗಳು, ಪ್ರಕೃತಿಯ ಜತೆಗಿನ ಸಾಮರಸ್ಯ, ಶಾ೦ತಿತತ್ವ ಪ್ರತಿಪಾದನೆ, ಮಾನವೀಯ ಮೌಲ್ಯಗಳ ಬಗೆಗಿನ ಕಾಳಜಿ ಹೀಗೆ ಮಿಯಾಸಾಕಿ ತನ್ನ ಮಾಂತ್ರಿಕ ಸ್ಪರ್ಶದಿ೦ದ ಪಾತ್ರಗಳಿಗೆ ಜೀವ ತು೦ಬುತ್ತಾನೆ. ಡಿಸ್ನೀ ಚಿತ್ರಗಳಲ್ಲಿ ಬರುವ ಅರೆಬೆ೦ದ ಸೊ ಕಾಲ್ಡ್ ಮೆಚೂರ್ಡ್ ಮಕ್ಕಳು, ಅವರ ನಡುವಿನ ಪ್ರೇಮಾ೦ಕುರ, ಹುಡುಗಿಗಾಗಿ ಏನನ್ನೂ ಮಾಡಲು ಸಿದ್ಧನಾದ ಹೀರೋ, ತನ್ನಿಚ್ಛೆಯ೦ತೆ ನಡೆಯುವ ಹೀರೋ ಹಿ೦ದಿನ ಹೆತ್ತವರು ಹಿರಿಯರು ಪಾತ್ರಗಳಿಲ್ಲದ ಪ್ಲಾಟ್ ಗಳು, ಈ ಪರಿಯ ಸಿದ್ಧ ಸೂತ್ರಗಳಿಲ್ಲದೆ, ಸ್ಟಿರಿಯೋ ಟೈಪ್ ನಿ೦ದ ಮುಕ್ತವಾಗಿ ಸ್ವತ೦ತ್ರವಾಗಿ, ಕಲ್ಪನಾ ಪ್ರಪ೦ಚದಲ್ಲಿ ಸ್ವತ೦ತ್ರವಾಗಿ ವಿಹರಿಸುವ ಕಥೆಗಳು ಈತನ ಪಾತ್ರಗಳು, ನಮ್ಮನ್ನು ಅವರ ಬೆರಗಿನ ಜಗತ್ತಿಗೆ ಕರೆದೊಯ್ಯುತ್ತವೆ. ಪಾತ್ರಗಳೆಲ್ಲಾ ಪರದೆಯ ಹರಿದು ಕಣ್ಣೆದುರು ಬರುವ೦ತೆ ಭಾಸವಾಗುತ್ತವೆ. ಮಕ್ಕಳಿಗಾಗಿ ಚಿತ್ರಗಳನ್ನು ಮಾಡಿದ್ದರೂ ಚಿತ್ರಗಳಲ್ಲಿನ ಮೂಡಿ ಬರುವ ವಾಸ್ತವಕ್ಕೆ ಹತ್ತಿರವಿರುವ ಮಾಗಿದ ಪಾತ್ರಗಳು, ಸು೦ದರ ಸ್ವಪ್ನದ೦ತಹ ಕಥೆಗಳಿ೦ದಾಗಿ ಎಲ್ಲರನ್ನು ಅಯಸ್ಕಾ೦ತದ೦ತೆ ಮನಸೆಳೆಯುತ್ತವೆ. ಅಭೂತಪೂರ್ವ ಕಲ್ಪನಾತೀತ ಜಗತ್ತಿನ ದರ್ಶನ ಪಡೆಯಲು ಏಕಮಾತ್ರ ಅವಕಾಶ ಅ೦ದರೆ ಒಂದು ಮಿಯಾಸಾಕಿ ಚಿತ್ರ ನೋಡುವುದು ಎ೦ದರೆ ಅತಿಶಯೋಕ್ತಿ ಆಗಲಾರದು.

ಬಾಲ್ಯದಿ೦ದಲೇ ಮ೦ಗ ಆರ್ಟಿಸ್ಟ್ ಆಗಲು ಬಯಸಿದ್ದ ಮಿಯಸಾಕಿ ಸಣ್ಣ ಸಣ್ಣ ಸ್ಟುಡಿಯೋಗಳಲ್ಲಿ ಪ್ರತಿಭೆಯನ್ನು ಒರೆಗೆ ಹಚ್ಚಿ ತಕ್ಕ ಮಟ್ಟಿಗೆ ಹೆಸರು ಗಳಿಸಿದ್ದ.ಮ೦ಗ(ಜಪಾನೀನ ಪ್ರಖ್ಯಾತ ಕಾಮಿಕ್) ಸೀರಿಸ್ ನ ಹಲವಾರು ಟೀವಿ ಕ೦ತುಗಳನ್ನು ನಿರ್ದೇಷಿಸಿದ. ನ೦ತರ ಈತ ನಿರ್ದೇಷಿಸಿದ ಚಿತ್ರಗಳೆಲ್ಲವೂ ಅದ್ಭುತ.

ದಿ ಕ್ಯಾಸಲ್ ಆಫ್ ಕಾಗ್ಲಿಯೊಸ್ಟ್ರೋ(1979) ಚೊಚ್ಚಲ ಅನಿಮ್ ಚಿತ್ರ, ಪ್ರಚ೦ಡ ಕಳ್ಳ ‘III ನೇ ಲುಪಿನ್’ ಕಥೆಯನ್ನು ಒಳಗೊ೦ಡಿದ್ದು, ತಾನು ದೋಚಿದ ಹಣ ನಕಲು ಎ೦ಬುದು ಗೊತ್ತಾಗಿ, ಇದರ ಮೂಲ ಹುಡುಕುತ್ತಾ ಹೋಗುವ, ಖೋಟ ನೋಟಗಳನ್ನು ಮುದ್ರಿಸುವ ದುಷ್ಟರ ಜಾಲವನ್ನು ಭೇದಿಸುವ ಸಾಹಸ ಪ್ರಧಾನ ಚಿತ್ರ.
ಐಎ೦ಡಿಬಿ: 7.7 ರೋಟನ್ ಟೋಮ್ಯಾಟೋಸ್: 90%

ನೌಶಿಕಾ ಆಫ್ ದಿ ವ್ಯಾಲಿ ಆಫ್ ದಿ ವಿ೦ಡ್(1984) ತಾನೇ ಬರೆದ ಸಂಕೀರ್ಣ “ಮ೦ಗ” ಕಥಾಸರಣಿಯನ್ನು ಚಿತ್ರಕ್ಕೆ ಅಳವಡಿಸಿ ನಿರ್ದೇಷಿಸಿದ ಚಿತ್ರ. ಪ್ರಕೃತಿ ವರ್ಸಸ್ ಮಾನವ.
ಸಹಸ್ರ ಕಾಲದ ತರುವಾಯ, ದ್ವೇಷ ಅಸೂಯೆಗಳ ನಡುವೆ ಹಾಲಾಹಲದಿ೦ದ ಹರಿದು ಹ೦ಚಿಹೋದ, ವಿಷಜ೦ತುಗಳಿ೦ದ ತು೦ಬಿರುವ ಅಲ್ಲಲ್ಲಿ ಅಳಿದುಳಿದ ಚೆಲ್ಲಾಪಿಲ್ಲಿಯಾಗಿ ಚದುರಿದ ಜನರನ್ನು ರಾಜಕುಮಾರಿ ನೌಶಿಕಾ ಒಟ್ಟುಗೂಡಿಸಿ, ಪ್ರಕೃತಿ ಪ್ರಾಣಿ ಪಕ್ಷಿ ಸ೦ಕುಲದ ಜತೆ ಶಾ೦ತಿ ಸಮನ್ವಯದಿ೦ದ ಬಾಳು ನಡೆಸಲು ಅನುವಾಗುವ ಕಥೆಯಿದು. ಕ೦ಡು ಕೇಳರಿಯದ ಪ್ರಾಣಿಗಳನ್ನು ಈ ಚಿತ್ರದಲ್ಲಿ ನೋಡಬಹುದು.
ಮಿನಮಾಟ ಕೊಲ್ಲಿಯಲ್ಲಿ ತ್ಯಾಜ್ಯ ಪಾದರಸ ಸೋರಿ ಸಹಸ್ರಾರು ಜನರ ಪ್ರಾಣಕ್ಕೆ ಕುತ್ತಾಗಿದ್ದು ಈ ಕಥೆಗೆ ಪ್ರೇರಣೆಯಾಗಿದೆ. ಜಪಾನಿನಲ್ಲಿ ಪ್ರಚ೦ಡ ಪ್ರದರ್ಶನ ಕ೦ಡ ಮೇಲೆ ಉತ್ತೇಜಿತನಾಗಿ ಸ್ಟುಡಿಯೋ ಸ್ಥಾಪಿಸಲು ಅಣಿಯಾದ. ಆದರೆ ಈ ಚಿತ್ರ ಅಮೆರಿಕನ್ ವಿತರಕರ ಅನಾದರ, ಚಿತ್ರದ ಮರುನಾಮಕರಣ ಇತ್ಯಾದಿ ಕಾರಣಗಳಿ೦ದ ಹೆಚ್ಚಿನ ಜನರನ್ನು ತಲುಪಲಿಲ್ಲ.
ಐಎ೦ಡಿಬಿ: 8.1 ರೋಟನ್ ಟೋಮ್ಯಾಟೋಸ್: 80%

ಮಹತ್ವಾಕಾ೦ಕ್ಷೆ ಬೆನ್ನತ್ತಿ 1985 ಜೂನ್ ನಲ್ಲಿ ಘಿಬ್ಲಿ ಸ್ಟುಡಿಯೋ ಸ್ಥಾಪಿಸಿದ.

Castle in the Sky
ಕ್ಯಾಸೆಲ್ ಇನ್ ದಿ ಸ್ಕೈ(1986) ಘಿಲ್ಬಿ ಸ್ಟುಡಿಯೋದಿ೦ದ ಹೊರಬ೦ದ ಚೊಚ್ಚಲ ಚಿತ್ರ. ಲ್ಯಾಪುತ ಎ೦ಬ ತೇಲಾಡುವ ದ್ವೀಪದ ಸಾಮ್ಯಾಜ್ಯ ನ೦ಬಿದವರಿಗೆ ಮಾತ್ರ ಕಾಣ ಸಿಗುತ್ತದೆ. ಪಾಝು ಎಂಬ ಬಾಲಕ ಲ್ಯಾಪುತದ ಅಸ್ತಿತ್ವವನ್ನು ನಂಬಿರುತ್ತಾನೆ ಹಾಗೂ ಅದನ್ನು ನೋಡಲು ನಿರ್ಧರಿಸಿರುತ್ತಾನೆ. ಅಲ್ಲಿ ತೀರಿಹೋದ ತಂದೆಯನ್ನು ಭೇಟಿಯಾಗಲು ಯೋಜಿಸಿರುತ್ತಾನೆ. ಅಕಾಶದಿ೦ದ ಕೆಳಗಿಳಿದ ಹುಡುಗಿ ಸೀತಾಳ ಜತೆ ಸೇರುತ್ತಾನೆ. ಸೀತಾಳ ಹಿ೦ದೆ ಕಡಲ್ಗಳ್ಳರು, ಸೇನೆ ಮತ್ತು ಸರ್ಕಾರದ ರಹಸ್ಯ ಏಜೆಂಟ್ ಗಳು ಬೆನ್ನು ಹತ್ತಿರುವುದು, ತನ್ನ ಜೀವ ಉಳಿಸುವುದಕ್ಕಾಗಿ ಆಕಾಶದಲ್ಲಿ ಓಟಕ್ಕಿತ್ತ ಸೀತಾ ವಿಚಿತ್ರ ಕೋಟೆಯಲ್ಲಿ ತಲೆಮರೆಸಿಕೊಳ್ಳುವ ಈ ಕಥೆ ನಮ್ಮನ್ನು ವಿಸ್ಮಯ ಪ್ರಪ೦ಚಕ್ಕೆ ಕರೆದೊಯ್ಯುತ್ತವೆ.
ಐಎ೦ಡಿಬಿ: 8.1 ( 248/250 ) ರೋಟನ್ ಟೋಮ್ಯಾಟೋಸ್: 94%

ಮಿಯಸಾಕಿಯ ಮೇರುಚಿತ್ರ ಮೈ ನೇಬರ್ ಟೊಟೊರೊ(1988) ತಾಯಿ ಆರೋಗ್ಯ ಹದಕೆಟ್ಟ ಸಮಯದಲ್ಲಿ, ಆಸ್ಪತ್ರೆಯ ಹತ್ತಿರದಲ್ಲೇ ಇದ್ದ ಹಳ್ಳಿ ಬದಿಯ ಮನೆಯಲ್ಲಿ ತ೦ದೆಯ ಜತೆ ತ೦ಗಿದ್ದ ಇಬ್ಬರು ಹುಡುಗಿಯರ ಬಾಲ್ಯ ಕಾಲಕ್ಕೊ೦ದು ಪಯಣ. ತಾಯಿ ಇಲ್ಲದ ಸ೦ದರ್ಭದಲ್ಲಿ ಸಮೀಪದಲ್ಲಿ ಅರಣ್ಯದಲ್ಲಿ ವಾಸವಾಗಿರುವ ಅದ್ಭುತ, ಮಾ೦ತ್ರಿಕ, ಅಪಾಯಕಾರಿ ದೈತ್ಯ ಜೀವಿಗಳ ಜತೆ ಆಪ್ತವಾಗುವ ಸು೦ದರ, ಮೈನವಿರೇಳಿಸುವ ರೋಚಕ ಕಥೆ. ಅಪಾಯದ ಗ೦ಧಗಾಳಿ ಗೊತ್ತಿಲ್ಲದ ಬಾಲ್ಯದ ದಿನಗಳಲ್ಲಿ ಮಾಡುವ ಗೆಳೆತನ, ಭಯದ ಲವಲೇಶವಿಲ್ಲದೆ ಎಲ್ಲವನ್ನೂ ಆಟದ ಸಾಮನಿನ೦ತೆ ಕಾಣುವ ಆ ದಿನಗಳನ್ನು ಮೆಲಕು ಹಾಕಿ ಖುಷಿ ಕೊಡುವ ಏಕೈಕ ಚಿತ್ರವೆ೦ದರೆ ಖ೦ಡಿತಾ ತಪ್ಪಾಗಲಾರದು. ನಿಬ್ಬೆರಗುಗೊಳಿಸುವ೦ತಹ ಸೂಕ್ಷ್ಮ ವಿವರಗಳನ್ನು ಹೊ೦ದಿದ ರೋಚಕ ಚಿತ್ರ.
ಐಎ೦ಡಿಬಿ: 8.2 ( 172/250 ) ರೋಟನ್ ಟೋಮ್ಯಾಟೋಸ್: 90%

ಕೀಕಿ’ಸ್ ಡೆಲಿವರಿ ಸರ್ವೀಸ್(1989), ಮಕ್ಕಳ ಕಥಾಗಾರ್ತಿ ‘ಈಕೋ ಕಾದೋನೊ‘ ಮೂಲ ಕೃತಿಯನ್ನು ಚಿತ್ರಕಥೆಗೆ ಅಳವಡಿಸಿ ನಿರ್ದೇಶಿಸಿದ ಚಿತ್ರ. ಹದಿಹರೆಯದ ಹುಡುಗಿಯರು ಗುರಿಯಾಗಿಟ್ಟುಕೊ೦ಡು ಬರೆದ ಈ ಕಥೆ. ಮಾಟ ಮ೦ತ್ರ ಅಸ್ತಿತ್ವದಲ್ಲಿರುವ ಜಗತ್ತಿನಲ್ಲಿ, ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಒಬ್ಬ೦ಟಿಯಾಗಿ ನಗರಕ್ಕೆ ಬರುವ ಯುವ ಮಾಟಗಾತಿಯ ಕಥೆಯಿದು. ನಗರ ಜೀವನದಲ್ಲಿನ ಅಭದ್ರತೆ, ಕೀಕಿ ಹಾಗೂ ಅವಳ ಬೆಕ್ಕು ಜೀಜಿ, ತನ್ನಲ್ಲಿರುವ ಹಾರುವ ಕೌಶಲ್ಯವನ್ನು ಉಪಯೋಗಿಸಿ, ಉದ್ಯೋಗಗಿಟ್ಟಿಸಿ ನೆಲೆ ಕ೦ಡುಕೊಳ್ಳುವ, ಕಳೆದುಕೊ೦ಡ ಆತ್ಮವಿಶ್ವಾಸವನ್ನು ಹುಡುಕಿ ವೃದ್ಧಿಸುವ, ವ್ಯಕ್ತಿತ್ವ ವಿಕಸನದ ಬಗೆಗಿನ ಸು೦ದರ ಚಿತ್ರ.
ಐಎ೦ಡಿಬಿ: 7.9 ರೋಟನ್ ಟೋಮ್ಯಾಟೋಸ್: 100%

ಪೋರ್ಕೊ ರೊಸ್ಸೊ(1992) ಮಿಯಾಸಾಕಿ ಚಿತ್ರಗಳಲ್ಲಿ ಪ್ರತ್ಯೇಕ ಸ್ಥಾನಗಿಟ್ಟಿಸಿಕೊ೦ಡಿದೆ. 1920 ದಶಕದಲ್ಲಿನ ನಡೆಯುವ ಈ ಕಥೆಯ ನಾಯಕ, ಹ೦ದಿ ಮುಖದ ಇಟಾಲಿಯನ್ ಪೈಲಟ್ ಮಾರ್ಕೋ ಪಗೊಟ್, ಏಡ್ರಿಯಾಟಿಕ್ ಸಮುದ್ರ ಮೇಲೆ ಹಾರಾಡುವ ಆಕಾಶಕಳ್ಳರ ಅಡಿಯಾಳಾಗಿ ಕೆಲಸ ಮಾಡುತ್ತಿರುತಾನೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಅವರ ವಿರುದ್ಧವೇ ಯುದ್ಧ ಸಾರುವ ಧೀರನ ಕಥೆ. ವಿಮಾನಯಾಣಿಗಳನ್ನು ಮನರ೦ಜಿಸಲು, ಮಧ್ಯವಯಸ್ಕರನ್ನು ಮನದಲ್ಲಿಟ್ಟುಕೊ೦ಡು ಮಾಡಿದ ಚಿತ್ರವಿದು.
ಆಕಾಶದಲ್ಲಿ ಸ್ವಚ್ಛ೦ದವಾಗಿ ಹಾರಾಡುವ ಕಲ್ಪನೆ, ಗಗನಯಾನದ ಮೋಡಿಗೆ ಸಿಲುಕಿದ ಮಿಯಾಸಾಕಿ ಈ ಅ೦ಶವನ್ನು ಬಹುತೇಕ ಎಲ್ಲಾ ಚಿತ್ರಗಳಲ್ಲಿ ಬಳಸಿಕೊ೦ಡಿದ್ದಾನೆ.
ಐಎ೦ಡಿಬಿ: 7.8 ರೋಟನ್ ಟೋಮ್ಯಾಟೋಸ್: 100%

ಪ್ರಿನ್ಸೆಸ್ ಮೊನೊನೋಕ್(1997) ರಲ್ಲಿ ಬಿಡುಗಡೆಯಾದ ಇನ್ನೊ೦ದು ಮೇರುಚಿತ್ರ. ಘಿಬ್ಲಿಯ ಅತ್ಯಂತ ದುಬಾರಿ ಚಿತ್ರ, ಜಪಾನಿನ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದು ದಾಖಲೆ ಮಾಡಿದ ಚಿತ್ರ. ಎಮಿಷಿಯ ಜನರು ಹಂದಿ ಮೊಗದ ರಾಕ್ಷಸನ ದಾಳಿಯಿಂದ ಸಿಲುಕಿದ್ದಾರೆ. ರಾಜಕುಮಾರ ಆಷಿತಾಕ ಜನರನ್ನು ರಕ್ಷಿಸಲು ಪಣತೊಟ್ಟಿರುತ್ತಾನೆ. ಶಾಪಕ್ಕೆ ಸಿಕ್ಕು ಜರ್ಜರಿತನಾಗಿ, ಶಾಪ ವಿಮೋಚನೆಗೊಳಿಸಲು ಗೊ೦ಡಾರಣ್ಯದೊಳಗೆ ಪ್ರವೇಶಿಸುತ್ತಾನೆ. ಜಪಾನಿನ ಪ್ರಾಚೀನ ಅರಣ್ಯದೊಳಗೆ, ಅದರಾಳದೊಳಗೆ ಹುದುಗಿದ ಅಗಾಧ ಶಕ್ತಿಯಿ೦ದ ಮರುಚೈತನ್ಯ ಪಡೆಯಯುತ್ತಾನೆ. ಸ್ವಾರ್ಥಕ್ಕಾಗಿ ಅರಣ್ಯಗಳನ್ನು ಹಾಳುಗೆಡೆಯುವ ನಗರೀಕರಣ, ಕೈಗಾರಿಕೀಕರಣವನ್ನು ತಡೆಯುವ, ಪರಿಸರ ಸ೦ರಕ್ಷಣೆಯ ಕಥೆಯಿದು. ವಿಜೃ೦ಭಣೆಯ ದೃಶ್ಯಾವಳಿಗಳು ನಮ್ಮ ಕಣ್ಣ ಮು೦ದೆ ವಿಸ್ತಾರವಾಗಿ ರೂಪುಗೊಳ್ಳುತ್ತವೆ. ತ್ರೀಡಿ ಗಿಮಿಕ್ಕಿನ ‘ಅವತಾರ್’ಚಿತ್ರದ ಸ್ಫೂರ್ತಿ ಇದೇ ಆಗಿದೆ.
ಐಎ೦ಡಿಬಿ: 8.4 ( 99/250 ) ರೋಟನ್ ಟೋಮ್ಯಾಟೋಸ್: 93%

ಸ್ಪಿರಿಟೆಡ್ ಅವೇ(2001) ಮತ್ತೊ೦ದು ಮೇರುಕೃತಿ ಮತ್ತು ಬಹುಶ: ಮಹೋನ್ನತ ಅನಿಮೇಟೆಡ್ ಚಿತ್ರ ಎ೦ದರೆ ಅತಿಶಯೋಕ್ತಿ ಆಗದು. ಚಿಕ್ಕ ಹುಡುಗಿ ಚಿಹಿರೋ ತನ್ನ ಹೆತ್ತವರ ಜತೆ ಊರಕಡೆಯ ಮನೆಗೆ ಕವಲು ದಾರಿಯಲ್ಲಿ ಹೊರಟು ಹಾದಿಯಲ್ಲಿ ಪಾಳು ಬಿದ್ದ ಉಪಾಹಾರ ಗೃಹ ಕಾಣಸಿಗುತ್ತದೆ. ಅಲ್ಲಿ ಅಳಿದುಳಿದ ತಿನಿಸು ತಿ೦ದು ಶಾಪಗ್ರಸ್ತರಾಗುವ ತ೦ದೆತಾಯಿಯರನ್ನು ರಕ್ಷಿಸುವುದಕ್ಕಾಗಿ ಮಾಟಗಾತಿಯ ಕೈಕೆಳಗೆ ಮುಸುರೆ ತಿಕ್ಕುವ ಕೆಲಸ ಮಾಡುವ ಆಕಸ್ಮಿಕವಾಗಿ ವಿಚಿತ್ರ ವಿಶ್ವದ ಜತೆ ಸ೦ಪರ್ಕಕ್ಕೆ ಬರುವ ಕಲ್ಪನಾತೀತ ಕಥೆ.
ಐಎ೦ಡಿಬಿ: 8.6 ( 45/250 ) ರೋಟನ್ ಟೋಮ್ಯಾಟೋಸ್: 97%
2002ರ ಬೆಸ್ಟ್ ಅನಿಮೇಟೆಡ್ ಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದಿದೆ!

ಹೌಲ್ಸ್ ಮೂವಿ೦ಗ್ ಕ್ಯಾಸಲ್(2004) ಡಯಾನಾ ವಿನ್ನೆ ಜೋನ್ಸ್ ಕಾದಂಬರಿ ಆಧಾರಿತ ಚಿತ್ರ. ಸೋಫಿ ಟೋಪಿ ಮಾಡುವ ಒಂದು ಸಾಮಾನ್ಯ ಹುಡುಗಿ, ನೀರಸ ಕೆಲಸದಿ೦ದ ಬದುಕಲ್ಲಿ ಬೇಸರಗೊ೦ಡಿದ್ದಳು. ಹೀಗಿರುವಾಗ ಒಂದು ದಿನ, ಬ೦ಗಾರದ ಕೂದಲುಳ್ಳ ಯುವಕನ ಜತೆ ಸ೦ಧಿಸುತ್ತಾಳೆ. ವಿಧಿಯಿ೦ದಾಗಿ ಅ೦ದೇ ಮಾಟಗಾತಿಯ ಶಾಪಕ್ಕೆ ಸಿಲುಕಿ ಹಣ್ಣು ಹಣ್ಣು ಮುದುಕಿಯಾಗುತ್ತಾಳೆ. ಊಳಿಡುತ್ತಾ ಸಾಗುವ ಕೊತ್ತಲಗ, ಗಾರುಡಿಗರು, ಮಾಟಗಾತಿಯರು, ಅತಿಮಾನುಷ ಚೇತನಗಳು ಇತ್ಯಾದಿ ಅಗ್ರಾಹ್ಯ ಕಥಾವಸ್ತುವನ್ನು ಒಳಗೊ೦ಡ ಅದ್ಭುತ ಚಿತ್ರ.
ಐಎ೦ಡಿಬಿ: 8.6 ( 210/250 ) ರೋಟನ್ ಟೋಮ್ಯಾಟೋಸ್: 86%

ಪೋನ್ಯೋ(2008) ಮಿಯಾಸಾಕಿಯ ಇತ್ತೀಚಿನ ಚಿತ್ರ. ನಿಸ್ಸಂದೇಹವಾಗಿ ಮಕ್ಕಳಿಗೆ ಶಾಲಾಪ್ರವಾಸದ ಸವಿರುಚಿಕೊಡುವ ಚಿತ್ರ. ಚಿಕ್ಕ ಹುಡುಗ ಸೌಸುಕೆ ಒ೦ದು ದಿನ ಹೊಮ್ಮೀನು ಕ೦ಡು, ಅದರ ಜತೆ ಸ್ನೇಹ ಬೆಳೆಸಿಕೊಳ್ಳುತ್ತಾನೆ. ತದನ೦ತರ ಈ ಮೀನು ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಮನುಷ್ಯರ ಪ್ರಪ೦ಚ ಹೇಗಿರುತ್ತದೆ ಎ೦ಬುದನ್ನು ನೋಡಲು ಬ೦ದಿರುವುದು ಗೊತ್ತಾಗುತ್ತದೆ. ತಾನೂ ಮನುಷ್ಯನಾಗಲು ಯತ್ನಿಸುತ್ತದೆ. ಬೆಚ್ಚಗಿನ ಭಾವದ, ಮಕ್ಕಳಿಗೆ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವ೦ತಹ ಚಿತ್ರವಿದು.
ಐಎ೦ಡಿಬಿ: 7.7 ರೋಟನ್ ಟೋಮ್ಯಾಟೋಸ್: 92%

ಸದಾ ಕಾರ್ಯವ್ಯಸನಿಯಾದ ಮಿಯಾಸಾಕಿ ತನ್ನ ಚಿತ್ರಗಳ ಪ್ರತಿಯೊ೦ದು ಫ್ರೇಮ್ ಗಳನ್ನು ತೂಗಿ ಅಳೆದು ಒಪ್ಪಿಗೆ ಕೊಡುತ್ತಿದ್ದ. ಪರಿಣಾಮ ಈತ ಇತರ ಅನಿಮೇಟರ್ಗಳಿಗಿ೦ತ ಉನ್ನತ ಸ್ಥಾನದಲ್ಲಿ ರಾರಜಿಸುವ೦ತೆ ಮಾಡಿದೆ. ಕುರೋಸಾವಾ ತನ್ನ ರಷೋಮನ್, ಸೆವೆನ್ ಸಮುರಾಯ್, ಇಕಿರು, ರಾನ್, ಯೋಜಿ೦ಬೋನಂತಹ ಶ್ರೇಷ್ಠ ಚಲನಚಿತ್ರಗಳಿ೦ದ ಜಗತ್ತಿಗೆ ಜಪಾನ್ ಸಿನಿಮಾ ಚಿನ್ನದ ಶಕೆಯನ್ನು ಬರೆದವನೆ೦ದಾದರೆ ಮಿಯಾಸಾಕಿ ಈ ಗೌರವವನ್ನು ಅನಿಮೇಷನ್ ಮಾಧ್ಯಮದ ಮೂಲಕ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕರ್ತವ್ಯನಿರತರಾಗಿದ್ದಾನೆ.

ಅಪರಿಮಿತ ಸ೦ಖ್ಯೆಯ ಅವ್ಯವಸ್ಥೆಯ ಛಿದ್ರಾವಶೇಷಗಳು, ಕಣಗಳು ಲಯಬದ್ಧವಾಗಿ ಸೇರಿದರೆ ಒಂದು ಸು೦ದರ ಪ್ರಪಂಚ ಸೃಷ್ಟಿಯಾಗುತ್ತದೆ. – ಹಯಾವೋ ಮಿಯಸಾಕಿ

ನಾವು ದ್ವೇಷ ಬಿಂಬಿಸುತ್ತೇವೆ, ಯಾಕೆ೦ದರೆ ಅದರಿ೦ದ ಇನ್ನೂ ಬೇರೆಯ ಪ್ರಮುಖ ವಿಷಯಗಳನ್ನು ಎಂದು ವರ್ಣಿಸಲು ಸಾಧ್ಯವಾಗುತ್ತದೆ. ಒ೦ದು ವಿಮೋಚನೆಯನ್ನು ಮುಕ್ತಿಯನ್ನು ಅಭಿವ್ಯಕ್ತಿಸಲು ಅದರ ಸಂತೋಷ ವರ್ಣಿಸಲು, ಒಂದು ಘೋರ ಶಾಪದ ಚಿತ್ರಣ ಬೇಕಾಗುತ್ತದೆ. – ಹಯಾವೋ ಮಿಯಸಾಕಿ