ಪ್ರೊ. ಸತೀಶ್ ಬಹಾದುರ್ ಒಬ್ಬ ಅತ್ಯುತ್ತಮ ಸಿನಿಮಾ ಅಭ್ಯಾಸಿ. ಪುಣೆಯ ಚಲನಚಿತ್ರ ಇನ್ ಸ್ಟಿಟ್ಯೂಟ್ ಗೆ ಭದ್ರ ಬುನಾದಿ ಹಾಕಿಕೊಟ್ಟವರಲ್ಲಿ ಒಬ್ಬರು. ಅವರ ಕುರಿತು ಖ್ಯಾತ ಸಿನೆಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಮೈಸೂರು ಫಿಲಂ ಸೊಸೈಟಿಯವರಿಗೆ ಬರೆದುಕೊಟ್ಟ ಲೇಖನವನ್ನು ಎಲ್ಲರಿಗೂ ಲಭ್ಯವಾಗಲೆಂದು ಇಲ್ಲಿ ಪ್ರಕಟಿಸಲಾಗುತ್ತಿದೆ. ಓದಿ, ಅಭಿಪ್ರಾಯಿಸಿ.

ಪ್ರೊ. ಸತೀಶ್ ಬಹಾದುರ್ ಈ ಹೆಸರು ಕಿವಿಗೆ ಬಿದ್ದೊಡನೆ ಕಣ್ಮುಂದೆ ನಿಲ್ಲುವುದು, ಬಾಂಗ್ಲಾದೇಶದ ಧೀಮಂತನಾಯಕ ಹಾಗೂ ಅದರ ಅಸ್ತಿತ್ವಕ್ಕೆ ಕಾರಣಪುರುಷನಾದ ಷೇಖ್ ಮುಜೀಬುರ್ ರೆಹಮಾನ್ ಅವರ ಚಹರೆಯನ್ನು ನೆನಪಿಗೆ ತರುವ ಚೌಕಾಕಾರದ ಮುಖಾಕೃತಿಯ, ನೆತ್ತಿಯ ಮೇಲೆ ಒತ್ತುಗೂದಲು ಹೊತ್ತ ಸಧೃಡ ನಿಲುವಿನ ಮಧ್ಯವಯಸ್ಕ ವ್ಯಕ್ತಿಯ ನಿರ್ಮಲ ವ್ಯಕ್ತಿತ್ವ; ಅಗಲ ಗಾಜಿನ ಕನ್ನಡಕದ ಹಿಂದಿನ ನಗೆಸೂಸುವ ಕಪ್ಪುಕಂಗಳ ಹೊಳಪು. ಕಂದು ಬಣ್ಣದ ಖಾದಿ ಜುಬ್ಬಾ ಹಾಗೂ ಬಿಳಿ ಪಾಯಿಜಾಮ ಧರಿಸಿ, ಕೈಯಲ್ಲಿ ಯಾವಾಗಲೂ ಸಿಗರೇಟು ಹಿಡಿದಿರುತ್ತಿದ್ದ ಪ್ರೊಫೆಸರ್ ಸತೀಶ್ ಬಹಾದುರ್, ಸಾಂಪ್ರದಾಯಿಕ ಕಾಲೇಜು ಶಿಕ್ಷಣವನ್ನು ಆಗಷ್ಟೇ ಮುಗಿಸಿದ್ದ ನನ್ನಲ್ಲಿ, ‘ಓರ್ವ ಪ್ರೊಫೆಸರ್ ಹೀಗೂ ಇರಬಹುದೇ ?!’ ಎನ್ನುವ ಅಚ್ಚರಿಯನ್ನು ಮೂಡಿಸಿದ ಮೇಷ್ಟ್ರು.

‘HAPPY ANNIVERSARY’, ‘WEDDING’, ‘PATHER PANCHALI’ ಇತ್ಯಾದಿ ಸಿನಿಮಾಗಳ ಪ್ರತಿ ದೃಶ್ಯವನ್ನೂ ಅತ್ಯಂತ ಕೂಲಂಕಷವಾಗಿ ವಿಮರ್ಶಿಸಿ, ಆಜೀವಪರ್ಯಂತವಾದ ನನ್ನ ಸಿನಿಮಾ ಅಧ್ಯಯನಕ್ಕೆ, ಅಭ್ಯಾಸಕ್ಕೆ, ಭದ್ರಬುನಾದಿ ಹಾಕಿಕೊಟ್ಟ ಪ್ರೊ. ಬಹಾದುರ್ ಅವರದು ಒಂದು ರೀತಿಯಲ್ಲಿ ಆದರ್ಶವಾದ ವ್ಯಕ್ತಿತ್ವ.

ಪ್ರೊ. ಬಹಾದುರ್ ಅವರು ಕೇವಲ ಸರ್ವಕಾಲಕ್ಕೂ ಸಲ್ಲುವ ವಿಶ್ವದ ಶ್ರೇಷ್ಠ ಚಲನಚಿತ್ರಗಳನ್ನಷ್ಟೇ ನಮಗೆ ಪರಿಚಯಸಲಿಲ್ಲ. ಬದಲಿಗೆ, ಅವುಗಳ ಮೂಲಕ, ಅಲ್ಲಿಯವರೆಗೂ ನಮಗೆ ಅರಿಯದೇ ಇದ್ದ, ವಿಶ್ವ ಇತಿಹಾಸದ ಪ್ರಮುಖ ಘಟ್ಟಗಳನ್ನೂ, ಅವು ಮಾನವಜನಾಂಗದ ಚರಿತ್ರೆಯ ಮೇಲೆ ಉಳಿಸಿಹೋದ, ಅಳಿಸಲಾಗದ ಗಾಯಗಳನ್ನೂ, ಅಂತೆಯೇ ಕಲೆ-ಸಂಸ್ಕೃತಿಯ ಮೂಲಕ ಮಾನವನು ತನ್ನ ಔನ್ನತ್ಯಕ್ಕಾಗಿ ಕಂಡುಕೊಂಡ ಆತ್ಮೋದ್ಧಾರದ ಮಾರ್ಗವನ್ನೂ ನಮಗೆ ಪರಿಚಯಿಸಿದರು. ಇವು ಕೇವಲ ಪುಸ್ತಕದ ಪುಟಗಳಲ್ಲಿ ಓದಿಕೊಂಡ ವಿಷಯಗಳಾಗಿ ಉಳಿಯದೆ, ದೃಶ್ಯರೂಪದಲ್ಲಿ ಆಯಾದೇಶದ ಮಹಾನ್ ಕಲಾವಿದರ ಮೂಸೆಯಲ್ಲಿ ಮೂಡಿಬಂದ ಕೃತಿಗಳಾಗಿದ್ದುದರಿಂದ, ಹಾಗೂ ಅವನ್ನು ಪರಿಚಯಿಸುವಲ್ಲಿ ಪ್ರೊ. ಬಹಾದುರರು ನಮಗೆ ಅದಕ್ಕೆ ಅಗತ್ಯವಿದ್ದ ಮಾಹಿತಿಯನ್ನು ಸೂಕ್ತ ಟಿಪ್ಪಣಿಯೊಂದಿಗೆ ಒದಗಿಸುತ್ತಿದ್ದುದರಿಂದ, ಮಾನವ ಜನಾಂಗದ ಇತಿಹಾಸವು ಚಲನಚಿತ್ರ ಕಲಾಪ್ರಾಕಾರದ ಮೂಲಕ ನಮ್ಮ ವೈಯುಕ್ತಿಕ ಜೀವನದ ಅವಿಭಾಜ್ಯ ಅಂಗವಾಯಿತು. ಇಂತಾಗಿ, ತನ್ಮೂಲಕ, ನಮಗೂ ಆ ಕ್ಷಣಕ್ಕೆ ಹೊಳೆಯದಂತೆ, ಹಾಗೂ ಅವರಿಗೂ ಅರಿವಿಲ್ಲದಂತೆ, ನಮ್ಮ ಜೀವನಮೌಲ್ಯಗಳನ್ನು ನಮಗೆ ರೂಪಿಸಿಕೊಟ್ಟ ದೇವದೂತರಾಗಿಬಿಟ್ಟಿದ್ದರು ಪ್ರೊ.ಬಹಾದುರ್ ಎನ್ನುವುದು ಈಗ ನನ್ನ ಅರಿವಿಗೆ ನಿಲುಕುತ್ತಿದೆ. ಇದು, ಪ್ರೊ. ಬಹಾದುರ್ ಅವರ ಇಡೀ ಜೀವನದ ಮಹತ್ತರವಾದ ಸಾಧನೆ ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಅವರೊಂದಿಗೆ ಬಹುವಾಗಿ ಶ್ರಮಿಸಿದವರು, ನ್ಯಾಷನಲ್ ಫಿಲಂ ಆರ್ಖೈವ್ಸ್‌ನ ರೂವಾರಿಯಾದ ಶ್ರೀ ಪಿ.ಕೆ. ನಾಯರ್ ಅವರು. ಈ ಈರ್ವರು ಮಹಾಶಯರನ್ನೂ ಈ ಸ್ತುತ್ಯಕಾರ್ಯಕ್ಕಾಗಿ ಎಷ್ಟು ಕೊಂಡಾಡಿದರೂ ಕಡಿಮೆಯೇ.

‘ಕ್ಲಾಸಿಕ್’ ಎನಿಸಿಕೊಂಡ ಫ಼ೀಚರ್‌ಗಳಷ್ಟೇ ಅಲ್ಲದೆ, Robert Flaherty, John Grierson, Bert Haanstraa ರಂತಹ ಸಾಕ್ಷ್ಯಚಿತ್ರ ನಿರ್ಮಾಪಕ-ನಿರ್ದೇಶಕ ಪ್ರಭೃತಿಗಳ ಕೃತಿಗಳನ್ನು ನಮ್ಮ ಕಣ್ಣೆದುರಿಗಿಟ್ಟಿದ್ದು, ಪ್ರೊ.ಬಹಾದುರ್ ಅವರು. Nanook of The North ; Louisiana Story ; Night Mail ; Night & Fog ; Delta Phase One ಹಾಗೂ Glass ಗಳಂತಹ, ಸಾಕ್ಷ್ಯಚಿತ್ರ ಪ್ರಾಕಾರದ ಮಹೋನ್ನತ ಕಲಾಕೃತಿಗಳು ನಮ್ಮ ಅರಿವಿನಾಳಕ್ಕಿಳಿಯುವಂತೆ, ಅವರು ಈ ಚಿತ್ರಗಳನ್ನು ಹಲವಾರು ಘಂಟೆಗಳ ಚರ್ಚೆಗೊಳಪಡಿಸಿದ್ದನ್ನು ಮರೆಯುವಂತೆಯೇ ಇಲ್ಲ. ಕ್ಲಾಸಿನಲ್ಲಿ ಸಿನಿಮಾ ತೋರಿಸಿದ ಮೇಲೆ, ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆಯನ್ನು ಪ್ರೊ.ಬಹಾದುರ್ ಅವರು ಹೊರತೆಗೆಯುತ್ತಿದ್ದ ರೀತಿಯು ಎಲ್ಲ ವಿಷಯಗಳ, ಎಲ್ಲ ಮೇಷ್ಟ್ರುಗಳಿಗೂ ಮಾದರಿಯಾಗಬೇಕು ಎನಿಸುತ್ತದೆ. ಓರ್ವ ವಿದ್ಯಾರ್ಥಿಯ ಪ್ರತಿಕ್ರಿಯೆಯನ್ನು ಒಪ್ಪಿಕೊಂಡು ‘You Are Right’ ಎನ್ನುತ್ತಿದ್ದ ಅವರು, ಇನ್ನೋರ್ವ ವಿದ್ಯಾರ್ಥಿಯು ವ್ಯಕ್ತಪಡಿಸುವ ತದ್ವಿರುದ್ಧವಾದ ಪ್ರತಿಕ್ರಿಯೆಯನ್ನೂ ಸಹ ಪ್ರಾಂಜಲಮನಸ್ಸಿನಿಂದ, ಮುಕ್ತವಾಗಿ ಸ್ವೀಕರಿಸಿ, ‘YES. You Too Have A View-point’ ಎನ್ನುತ್ತಿದ್ದರು. ‘ಇದಮಿತ್ಥಂ’- ‘ಇದು ಹೀಗೇ ಸರಿ’ ಎಂದು ಸಾರುವ ವಿಜ್ಞಾನಶಾಸ್ತ್ರದ ಅಧ್ಯಯನದ ಹಿನ್ನೆಲೆಯಿದ್ದ ನನಗೆ, ಹೀಗೆ, ‘ಎಲ್ಲವನ್ನೂ ಸರಿ’ ಎಂದು ಅವರು ಒಪ್ಪಿಕೊಳ್ಳುವುದು, ಮೊದಮೊದಲಿಗೆ ಕಿರಿಕಿರಿಯಾಗುತ್ತಿತ್ತು, ಮುಜುಗರ ಉಂಟುಮಾಡುತ್ತಿತ್ತು. ಕೆಲಸಾರಿ ನಾವು ಕೆಲವು ವಿದ್ಯಾರ್ಥಿಗಳು ಪ್ರೊಫೆಸರರ ಬೆನ್ನ ಹಿಂದೆ, ಅವರನ್ನು ಇದೇ ಕಾರಣಕ್ಕಾಗಿ ಲೇವಡಿ ಮಾಡುವುದೂ ಸಹ ಇತ್ತು !! ಆದರೆ, ಕಲಾಪ್ರಾಕಾರದಲ್ಲಿ ಕಾಣುವ ಅನೇಕ ಸತ್ಯಗಳು, ಅದನ್ನು ವಿವಿಧ ದೃಷ್ಟಿಕೋನಗಳಿಂದ ನೋಡಿದಾಗ ಮಾತ್ರ ಹೊರಹೊಮ್ಮುತ್ತವೆ ಎನ್ನುವ ಪೂರ್ಣಸತ್ಯವು ನನಗೆ ಅರಿವಾದದ್ದು, ಎಷ್ಟೋ ವರ್ಷಗಳ ಸತತ ಅಭ್ಯಾಸ-ಅಧ್ಯಯನದ ನಂತರದಲ್ಲಿ ಮಾತ್ರ! ಯಾವುದೇ ಕಲಾಕೃತಿಯ ವಿವಿಧ ಆಯಾಮಗಳ ಪೂರ್ಣ ಪರಿಚಯ ದೊರಕಬೇಕಾದರೆ, ಅದರ ಬಗ್ಗೆ ದೊರಕಬಹುದಾದ ಎಲ್ಲ ಅಭಿಪ್ರಾಯಗಳನ್ನೂ, ಸಕಲ ದೃಷ್ಟಿಕೋನಗಳನ್ನೂ ಯಾವುದೇ ಪೂರ್ವಾಗ್ರಹವಿಲ್ಲದೆ ಮುಕ್ತ-ಮನಸ್ಸಿನಿಂದ ಸ್ವೀಕರಿಸಬೇಕು ಎನ್ನುವ ಕಲಾವಿಮರ್ಶೆಯ ಪ್ರಾಥಮಿಕ ಪಾಠವನ್ನು ಮಾತಿನ ಮೂಲಕವಲ್ಲದೆ, ಕೃತಿಯ ಮೂಲಕ ನಮ್ಮ ಅಂತರಂಗಕ್ಕೆ ತಲುಪಿಸಿದ್ದ ಗುರುಗಳು, ಪ್ರೊ. ಸತೀಶ್ ಬಹಾದುರ್.

ನನ್ನಂತೆಯೇ, ಪುಣೆಯ ಫಿಲಂ ಇನ್ಸ್ಟಿಟ್ಯೂಟಿನ ಎಲ್ಲ ವಿದ್ಯಾರ್ಥಿಗಳೂ, ಇದೇ ಕಾರಣಕ್ಕಾಗಿ, ಅವರಿಗೆ ಎಂದೆಂದೂ ಚಿರಋಣಿಯಾಗಿದ್ದಾರೆ. ಅವರ ಅನೇಕ ವಿದ್ಯಾರ್ಥಿಗಳು ವಿಶ್ವದ ದಶದಿಕ್ಕುಗಳಲ್ಲೂ ಹೆಸರು ಮಾಡಿಯೂ, ಪ್ರೊಫೆಸರರ ಹೆಸರು ಇಂದು ಮನೆಮಾತಾಗಿಲ್ಲದಿದ್ದರೆ, ಅದಕ್ಕೆ ಮುಖ್ಯ ಕಾರಣವು, ನಮಗೆ ಅಕ್ಷರಾಭ್ಯಾಸ ಮಾಡಿಸಿದ ಗುರುಗಳನ್ನು ನಮ್ಮ ಕಾಲ ಮೇಲೆ ನಾವು ನಿಂತಕೂಡಲೇ ಮರೆಯುವ ಮಾನವಸಹಜ(?!) ಮೂರ್ಖಸ್ವಭಾವವೇ ಹೊರತು, ಅಹಂಕಾರವಲ್ಲ ಎನ್ನುವುದು ದಿಟವಾದ ಮಾತು. ಪ್ರೊ. ಬಹಾದುರರಿಗೆ ಈ ವಿಷಯದ ಬಗ್ಗೆ ಯಾವುದೇ ಬೇಸರವಿರಲಿಲ್ಲ. ಅವರು ಎಂದೂ, ಎಲ್ಲೂ ಈ ಮಾತನ್ನು ಪ್ರಸ್ತಾಪಿಸಿದ್ದನ್ನು ನಾನು ಕಂಡಿಲ್ಲ, ಕೇಳಿಲ್ಲ. ನಾನು ಮಾಡಬೇಕಾದ ಕೆಲಸವನ್ನು ನಾನು ಮಾಡಬೇಕಾದ ಕೆಲಸವನ್ನು ನಾನು ನಿರ್ವಂಚನೆಯಿಂದ ಮಾಡಿದ್ದೇನೆ ಎನ್ನುವ ತೃಪ್ತಿ ಅವರ ಮುಖದಲ್ಲಿ ಯಾವಾಗಲೂ ಮನೆಮಾಡಿರುತ್ತಿತ್ತು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಜೀವನದುದ್ದಕ್ಕೂ ಕಾರ್ಯನಿರ್ವಹಿಸಿದ ಪ್ರೊ. ಬಹಾದುರ್ ಅವರು ಎಂದೂ ಯಾವುದೇ ಪದವಿ, ಪುರಸ್ಕಾರ, ಮನ್ನಣೆಗಳಿಗಾಗಲೀ, ಸೀನಿಯಾರಿಟಿಗೆ ಸಿಗುವ ಸೌಲಭ್ಯಗಳಿಗಾಗಲೀ ಹಾತೊರೆದವರಲ್ಲ. ಭಗವದ್ಗೀತೆಯ ಆದೇಶದಂತೆ, ಕೇವಲ ತಮ್ಮ ಕಾರ್ಯವನ್ನು ಪೂರ್ಣಪ್ರಾಮಾಣಿಕತೆಯಿಂದ ನಡೆಸಿ, ಅದರ ಫಲವನ್ನು ಕುರಿತು ಎಂದೂ ಚಿಂತಿಸದಿದ್ದ ಪ್ರೊ. ಬಹಾದುರ್ ಅವರನ್ನು ಆದರ್ಶವ್ಯಕ್ತಿಯನ್ನಾಗಿ ಒಪ್ಪಿಕೊಳ್ಳಲು ನನಗೆ ಜೀವನದಲ್ಲಿ ಹಲವಾರು ದಶಕಗಳೇ ಬೇಕಾಯಿತು. ಲೌಕಿಕ ಜೀವನವನ್ನೇ ನಿತ್ಯ-ಸತ್ಯ ಎಂದು ಭಾವಿಸಿರುವವರೆಗೂ ಅದು ಸಾಧ್ಯವಾಗದಿದ್ದ ಮಾತು, ಎನ್ನುವುದು ನನಗೆ ಈಗೀಗ ತಿಳಿಯುತ್ತಿದೆ.

ಯಾವುದೇ ‘ಕ್ಲಾಸಿಕ್’ ಚಿತ್ರವನ್ನು ವಿಮರ್ಶಾತ್ಮಕವಾಗಿ ಕೈಗೆತ್ತಿಕೊಂಡರೂ, ಆಯಾ ದೇಶದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನೊದಗಿಸಿ, ಕಥಾವಸ್ತುವಿನ ಕಾಲಘಟ್ಟದ ವಿಶೇಷ ಪರಿಚಯವನ್ನು ನಮಗೆ ನೀಡುವುದಷ್ಟೇ ಅಲ್ಲದೆ, ಪಾತ್ರಪೋಷಣೆಯ ವಿಷಯದಲ್ಲಿ ಆಯಾ ನಿರ್ದೇಶಕರು ವಹಿಸಿರಬಹುದಾದ ಮುತುವರ್ಜಿಯನ್ನು Humanities ಎಂದು ಸಮಗ್ರವಾಗಿ ಗುರುತಿಸಲ್ಪಡುವ ವಿಷಯಗಳಡಿಯಲ್ಲಿ ವಿಶ್ಲೇಷಿಸಿ, ಕಲಾಕೃತಿಯ ಆಂತರ್ಯವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಮಹತ್ತರವಾದ ಭೂಮಿಕೆಯನ್ನು ಪ್ರೊ.ಬಹಾದುರ್ ನಿರ್ವಹಿಸುತ್ತಿದ್ದರು. ಯಾವುದೇ ಪಠ್ಯಕ್ರಮವಿಲ್ಲದೆ, ಈ ವಿಷಯಗಳಲ್ಲಿ ಸಲೀಸಾಗಿ ಈಜಾಡಿ ಬರುತ್ತಿದ್ದ ಅನುಭವ ಅವರದಾಗಿತ್ತು. ಅವರ ಹಿಂದೆಯೇ, ಅವರ ಮಾರ್ಗದರ್ಶನದಲ್ಲಿ ನಾವೂ ಸಹ, ತೆಂಗಿನಬೊಂಡೆಗಳನ್ನು ಕಟ್ಟಿಕೊಂಡಂತೆ, ಅತ್ಯಂತ ಸುಲಭ-ಸಾಧ್ಯವೆನ್ನುವಂತೆ, ಈ ಆಳವಾದ ಕಲಾಪ್ರಪಂಚದಲ್ಲಿ ವಿಹಾರಗೈಯುತ್ತಿದ್ದೆವು.

ಸತ್ಯಜಿತ ರಾಯ್ ಅವರ ಕಲಾಕೃತಿಗಳ ಮಹಾನ್ ಪ್ರೇಮಿಯಾಗಿದ್ದರು ಪ್ರೊ. ಬಹಾದುರ್. ಅತ್ಯಂತ ಸೂಕ್ಷ್ಮವಾಗಿ ರಾಯ್ ಅವರ ಎಲ್ಲ ಚಿತ್ರಗಳನ್ನೂ ಅವರು ಅಭ್ಯಸಿಸಿದ್ದರು. ರಾಯ್ ಅವರ ಕೃತಿಗಳ ಕುರಿತಾದ ಅವರ ಅತಿಯಾದ ಪ್ರೀತಿಯು ಸೀನಿಯರ್ ವಿದ್ಯಾರ್ಥಿಗಳ ಚಾಪಲ್ಯದ ಲೇವಡಿಗೆ ಗುರಿಯಾಗಿತ್ತೆನ್ನುವುದನ್ನು ಬಲ್ಲವರಾಗಿಯೂ, ಅವರು ಅದರ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡವರಲ್ಲ !! ಫೆಲಿನಿ, ಆಂಟೋನಿಯೋನಿ, ಕುರೋಸಾವ, ಬರ್ಗ್‌ಮನ್, ಚಾಪ್ಲಿನ್ ಇಂತಹ ಮಹೋನ್ನತ ಕಲಾವಿದರೆಲ್ಲರೂ ನಮ್ಮ ಅಂತರಂಗದ ಸ್ನೇಹಿತರಾಗಿದ್ದು, ನಮ್ಮ ಮನದಂಗಳದ ಆತ್ಮೀಯ ಬಂಧುಗಳಾಗಿದ್ದು, ಪ್ರೊ. ಬಹಾದುರ್ ಅವರ ವಿಶೇಷ ಪ್ರಯತ್ನದಿಂದ.

ಇದೇ ಮಾತನ್ನು ಹಿರಿಯ ಛಾಯಾಗ್ರಾಹಕರಾದ ಶ್ರೀರಾಮಚಂದ್ರ ಬಾಬು ಅವರೂ ಸಹ ಹೇಳಿದ್ದಾರೆ. ಪ್ರೊ. ಬಹಾದುರರ ಚಹರೆಯು ‘ಲಾರೆನ್ಸ್ ಆಫ್ ಅರೇಬಿಯಾ’ದ ಒಮರ್ ಶರೀಫ್‌ನ ಮುಖಚರ್ಯೆಯನ್ನು ಹೋಲುತ್ತಿತ್ತು ಎಂದು ನೆನೆಸಿಕೊಳ್ಳುವ ಶ್ರೀ ಬಾಬು ಅವರು ಪ್ರೊ. ಬಹಾದುರ್ ಅವರ ಅಗ್ರಪಂಕ್ತಿಯ ಶಿಷ್ಯರಲ್ಲೊಬ್ಬರು.

60ರ ದಶಕದ ಮೊದಲ ಭಾಗದಲ್ಲಿ ಆಗ್ರಾ ಕಾಲೇಜಿನಲ್ಲಿ ‘ಎಕನಾಮಿಕ್ಸ್’ ವಿಷಯದ ಪ್ರೊಫೆಸರ್ ಆಗಿದ್ದ ಶ್ರೀ ಬಹಾದುರ್ ಅವರು ಅಲ್ಲಿ ಫಿಲಂ ಸೊಸೈಟಿಯನ್ನು ಆರಂಭಿಸಿದ್ದರು. ಆ ಸಮಯದಲ್ಲಿ ಆಗ್ರಾಕ್ಕೆ ಆಗಮಿಸಿದ್ದ ಇಂಗ್ಲೆಂಡಿನ ಚಲನಚಿತ್ರ-ಶಿಕ್ಷಣ-ತಜ್ಞೆಯಾದ ಮೇರಿ ಸೆಟನ್ (ಈಕೆಯು ಸತ್ಯಜಿತ್ ರಾಯ್ ಅವರ ಕಲಾತ್ಮಕತೆಯ ಪೂರ್ಣಪ್ರಮಾಣದ ಪರಿಚಯವನ್ನು ವಿಶ್ವಸಮುದಾಯಕ್ಕೆ ಮಾಡಿಕೊಡುವ ಕಾರ್ಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದವರು.) ಅವರು ಕಾಲೇಜೊಂದರಲ್ಲಿ ಯೂರೋಪಿಯನ್ ಚಿತ್ರ ಕಾಣಸಿಗುತ್ತದೆಂದು ಕೇಳಿ, ಆಗ್ರಾ ಕಾಲೇಜಿನ ಫಿಲಂಸೊಸೈಟಿಯಲ್ಲಿ ನಡೆದ ಚಲನಚಿತ್ರಪ್ರದರ್ಶನಕ್ಕೆ ಬಂದಿದ್ದರು. ಅತ್ಯಂತ ಆಸಕ್ತಿಯಿಂದ ಪ್ರೊ. ಬಹಾದುರ್ ಅವರು ಸೊಸೈಟಿಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ ರೀತಿಯು ಆಕೆಯ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ನಂತರ ದೆಹಲಿಗೆ ಬಂದ ಶ್ರೀಮತಿ ಮೇರಿ ಸೆಟನ್, ಆಗಷ್ಟೇ ಸ್ಥಾಪಿತವಾಗಿದ್ದ ಪುಣೆಯ ಫಿಲಂ ಇನ್ಸ್ಟಿಟ್ಯೂಟಿಗೆ, ‘ಫಿಲಂ ಅಪ್ರಿಸಿಯೇಷನ್’ ಕುರಿತ ಅಧ್ಯಯನ-ಪೀಠ ಅವಶ್ಯಕ ಎನ್ನುವ ಮಾತನ್ನು ಶ್ರೀಮತಿ ಇಂದಿರಾಗಾಂಧಿ (ಆಗ ಅವರು ಕೇಂದ್ರಸರ್ಕಾರದಲ್ಲಿ ಸೂಚನಾ ಮತ್ತು ಪ್ರಸಾರಣ ಖಾತೆಯ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.) ಅವರಲ್ಲಿ ಪ್ರಸ್ತಾಪಿಸಿದರಷ್ಟೇ ಅಲ್ಲದೆ, ಈ ವಿಷಯವನ್ನು ಬೋಧಿಸುವುದಕ್ಕೆ ಅತ್ಯಂತ ಸಮರ್ಥವಾದ ವ್ಯಕ್ತಿ ಎಂದರೆ, ಆಗ್ರಾ ಕಾಲೇಜಿನ ಪ್ರೊ. ಸತೀಶ್ ಬಹಾದುರ್ ಅವರೇ ಆಗಿದ್ದಾರೆ ಎಂದೂ ಸೂಚಿಸಿದರು.

ಪ್ರೊ. ಬಹಾದುರ್ ಅವರು, ಹೀಗೆ, ಕೇಂದ್ರಸರ್ಕಾರದ ಕರೆಗೆ ಓಗೊಟ್ಟು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಇಂತಹ ನಿರ್ಧಾರದ ಪೂರ್ವಾ-ಪರಗಳನ್ನು ಕುರಿತು ಯೋಚಿಸದೇ, ತಮ್ಮ ಕಾಯಕ ಕ್ಷೇತ್ರವು ಇದೇ ಆಗಿದೆ ಎಂಬಷ್ಟು ಸಹಜವಾಗಿ, ಪುಣೆಯ ಫಿಲಂ ಇನ್ಸ್ಟಿಟ್ಯೂಟಿಗೆ ಬಂದು, ‘ಫಿಲಂ ಅಪ್ರಿಸಿಯೇಷನ್’ ಎಂಬ ಹೊಸ ವಿಷಯದ ಅಧ್ಯಾಪಕರಾಗಿ ಕಾರ್ಯನಿರ್ವಹಿಸಲು ಶುರುಮಾಡಿದರು. ಸತೀಶ್ ಬಹಾದುರ್ ಅವರಂತಹ ಆದರ್ಶವ್ಯಕ್ತಿಯನ್ನು ನಮಗೆ ಮಾಸ್ತರರನ್ನಾಗಿ ಕೊಟ್ಟಿದ್ದಕ್ಕೆ ಶ್ರೀಮತಿ ಮೇರಿ ಸೆಟನ್ ಅವರಿಗೂ, ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ನಡೆಸಿಕೊಟ್ಟ ಶ್ರೀಮತಿ ಇಂದಿರಾ ಗಾಂಧಿಯವರಿಗೂ, ನಮ್ಮ ಕೃತಜ್ಞತೆ ಸಲ್ಲುತ್ತದೆ.

‘ರಾಮಾಯ್ನ್’ ಎಂದು ಪ್ರೊ. ಬಹಾದುರ್ ಅವರು ಪ್ರೊಜೆಕ್ಷನಿಸ್ಟ್ ರಾಮಯ್ಯನ್ ಅವರನ್ನು ಸಂಬೋಧಿಸುತ್ತಿದ್ದ ರೀತಿಯು ಇಂದಿಗೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. Class-Room Theaterನ 16mm ಪ್ರೊಜೆಕ್ಟರ್ ಮಾಡುತ್ತಿದ್ದ ಸದ್ದು ಈಗಷ್ಟೆ ಶುರುವಾದಂತಿದೆ. ಪ್ರೊ. ಬಹಾದುರ್ ಅವರು ಚಲನಚಿತ್ರವನ್ನು ನೋಡಲು, ಅನುಭವಿಸಲು, ವಿಮರ್ಶಿಸಲು ಹಾಕಿಕೊಟ್ಟ ಮೇಲ್ಪಂಕ್ತಿ ಹಾಗೂ ‘ಕ್ಲಾಸಿಕ್’ ಎಂದು ಪರಿಗಣಿಸಲ್ಪಡುವ ವಿಶ್ವದ ಪ್ರಮುಖ ಚಲನಚಿತ್ರಗಳ ಅನಾವರಣವನ್ನು ಮಾಡಿ, ನಮ್ಮ ಎಳೆಯ ಮನಸ್ಸಿನ ಮೇಲೆ ಪ್ರಬುದ್ಧ ಪರಿಣಾಮವನ್ನು ಅವು ಉಂಟುಮಾಡುವಂತೆ ಅವರು ನೋಡಿಕೊಂಡ ರೀತಿಯು ಎಂದೆಂದೂ ನನ್ನಲ್ಲಿ ಹಸಿರಾಗಿರುತ್ತದೆ.

ಅನೇಕ ದಶಕಗಳ ನಂತರ ಅವರು NFAI ಜೊತೆಗೂಡಿ ಪ್ರತಿವರ್ಷವೂ ಪುಣೆಯಲ್ಲಿ ನಡೆಸುತ್ತಿದ್ದ Film Appreciation ಕೋರ್ಸಿಗೆ, ಶಿಬಿರಾರ್ಥಿಯಾಗಿ ಹೋಗಲು ಇಷ್ಟಪಟ್ಟು, ನನ್ನಾಸೆಯನ್ನು ಅವರಲ್ಲಿ ತೋಡಿಕೊಂಡಾಗ, ಅವರೆಂದಿದ್ದು ಹೀಗೆ – ‘You are welcome any time. You don’t even need to ask. But now it is time that you should be spreading this culture more than come and be a student again of a subject that you know so well and love so much!’

ಪ್ರೊ. ಬಹಾದುರ್ ಅವರ ಅಂತರಂಗದ ಮಾತಿನ ಪ್ರೇರಣೆಯಿಂದಲೇ ಎಂಬಂತೆ, ಲಕ್ಷ್ಮಿಸೂರ್ಯ ಅಕಾಡೆಮಿಯು LACE films ಮೂಲಕ ಇಂದು ಅತ್ಯಂತ ಸಮರ್ಥವಾಗಿ ತನ್ನ ಕಾರ್ಯಭಾರವನ್ನು ಬೆಂಗಳೂರಿನಲ್ಲಿ ನಿರ್ವಹಿಸುತ್ತಿದ್ದರೆ, ಮೈಸೂರು ಫಿಲ್ಮ್ ಸೊಸೈಟಿಯ ಗೆಳೆಯರು ಅದರಿಂದ ಪ್ರೇರಿತರಾಗಿ, ಮೈಸೂರು ಫಿಲಂ ಸೊಸೈಟಿಯನ್ನು ಇನ್ನೂ ವಿಜೃಂಭಣೆಯಿಂದ ನಡೆಸುತ್ತಿದ್ದಾರೆ. ಈ ಎಲ್ಲಾ ಯಶಸ್ಸಿನ ಕೀರ್ತಿ ಪ್ರೊ.ಬಹಾದುರರಿಗೆ.