ಎನ್. ಎಸ್. ಶ್ರೀಧರಮೂರ್ತಿಯವರು ನಮ್ಮ ನಡುವೆ ಇರುವ ಸಿನಿಮಾ ಕುರಿತ ಒಬ್ಬ ಸಂವೇದನಾಶೀಲ ಬರಹಗಾರ ಮತ್ತು ಪತ್ರಕರ್ತ. ಅವರು ಕನ್ನಡದ ನಟಿ ಕಲ್ಪನಾ ಕುರಿತು ಬರೆದಿರುವ ಲೇಖನವಿದು. ನೋಡಿ ಅಭಿಪ್ರಾಯಿಸಿ.

1979ನೇ ಇಸವಿ ಮೇ ೧೩ನೇ ತಾರೀಖಿನ ಮುಂಜಾವು.

ಗೋಟೂರಿನ ಪ್ರವಾಸಿ ಮಂದಿರದಲ್ಲಿ ಕನ್ನಡ ಚಿತ್ರರಂಗದ ‘ಮಿನುಗು ತಾರೆ’ ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೇವತೆ ಕಲ್ಪನಾ ಮೌನವಾಗಿ ಮಲಗಿದ್ದರು. ರಾಜ್ಯಾದ್ಯಂತ ಅವರ ಸಾವಿನ ಮಾಹಿತಿ ನಿಧಾನವಾಗಿ ಪಸರಿಸುತ್ತಿತ್ತು. ಅದು ‘ಬ್ರೇಕಿಂಗ್ ನ್ಯೂಸ್’ನ ಕಾಲವಾಗಿರಲಿಲ್ಲ. ಟಿ.ವಿ. ಚಾನಲ್‌ಗಳಿರಲಿಲ್ಲ. ಪತ್ರಿಕಗಳೂ ಈಗಿನಷ್ಟು ತಾಂತ್ರಿಕವಾಗಿ ಬೆಳೆದಿರಲಿಲ್ಲ. ಸುದ್ದಿ ಆಕಾಶವಾಣಿಯ ಮೂಲಕವೇ ಪ್ರಸಾರವಾಗ ಬೇಕಿತ್ತು.

ಗೋಟೂರು ಬೆಳಗಾವಿ-ಸಂಕೇಶ್ವರದ ನಡುವೆ ಇರುವ ಚಿಕ್ಕ ಊರು. ಅಲ್ಲಿನ ಪ್ರವಾಸಿ ಧಾಮವೂ ಚಿಕ್ಕದು.ಪತ್ರಕರ್ತರು ಧಾವಿಸಿ ಹೋದಾಗ ಅಲ್ಲಿನ ಜನರಿಗೇ ಇನ್ನು ಕಲ್ಪನಾ ಸಾವಿನ ಸುದ್ದಿ ತಿಳಿದಿರಲಿಲ್ಲ. ಇನ್ನೂ ಶವವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿರಲಿಲ್ಲ. ಪ್ರವಾಸಿ ಧಾಮದ ಮಂಚದ ಮೇಲೆ ಶಾಂತವಾಗಿ ಮಲಗಿದ್ದ ಕಲ್ಪನಾರನ್ನು ನೋಡಿದರೆ ಫಕ್ಕನೆ ಸತ್ತಿದ್ದಾಳೆ ಎನ್ನುವಂತಿರಲಿಲ್ಲ. ಅಂದು ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದ ಬಿದ್ದ ನಕ್ಕರು. ಇದರಿಂದ ಅವಮಾನಿತನಾದ ಬಸವರಾಜ ‘ ಹೌದು ನಾನು ಹಸು, ಹಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದ. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದ. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದ. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಬಿಟ್ಟರು. ‘ಆಕಿ ಏನಾರ್ ಮಾಡಕೂತಾಳ ಅಂತ ನನಗೆ ಖಾತ್ರಿ ಇತ್ತು. ಅದಕ ಆಕಿ ಬಾಜೂಕ್ಕೆ ಕುಳಿತಿದ್ದೆ, ೫ ಗಂಟೆ ಸುಮಾರಿಗೆ ಆಕಿ ರೂಮಿಗೆ ಹೋಗಿ ನೋಡಿದ್ರೆ ಬಾಯಿಂದ ಬುರುಬುರು ಅಂತ ಬುರುಗ ಬರ‍್ತಿತ್ತು, ನಾನು ಹೋಯ್‌ಕಳಕ್ಕಾ ಶುರು ಮಾಡಿದೆ: ಎಲ್ಲಾ ಜನ ಕೂಡಿದರು. ನೋಡಿದ್ರೆ, ಆಕಿ ಸತ್ತು ಹೋಗಿದ್ದಳು’ ಎಂದು ಸಹಾಯಕಿ ರತ್ನಾಬಾಯಿ ಹೃದಯವಿದ್ರಾವಕವಾಗಿ ಅಳುತ್ತಾ ಹೇಳುತ್ತಿದ್ದಳು.

ಕಲ್ಪನಾರ ಶವವನ್ನು ಮೊದಲು ಸಂಕೇಶ್ವರಕ್ಕೆ ಶವ ಪರೀಕ್ಷೆಗಾಗಿ ತೆಗೆದು ಕೊಂಡು ಹೋಗಲಾಯಿತು. ಅಲ್ಲಿನ ವೈದ್ಯ ಈ ರಗಳೆ ಬೇಡ ಎಂದು ಪರಾರಿಯಾಗಿದ್ದ ಅವನಿಗೆ ಒಂದು ತಾಸು ಕಾದು ಹುಕ್ಕೇರಿ ದವಖಾನೆಗೆ ಪ್ರಯಾಣ ಬೆಳಸಲಾಯಿತು. ಅಲ್ಲೂ ಅದೇ ಕಥೆ, ಅಮ್ಮಣಗಿಯಲ್ಲೂ ವೈದ್ಯರು ಪರಾರಿಯಾದಾಗ, ಪೋಲೀಸರು ಅಲ್ಲಿಂದಲೇ ಬೆಳಗಾವಿ ಜಿಲ್ಲಾ ಎಸ್.ಪಿಯಾಗಿದ್ದ ಟಿ. ಮಡಿಯಾಳರನ್ನು ಸಂಪರ್ಕಿಸಿದರು. ಅವರು ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂಗೆ ವ್ಯವಸ್ಥೆ ಮಾಡಿದರು. ಪೋಸ್ಟ ಮಾರ್ಟಂ ಮುಗಿದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಶವವನ್ನು ಯಾರಿಗೆ ಒಪ್ಪಿಸ ಬೇಕು ತಿಳಿಯದೆ ಪೋಲೀಸರು ಕುಳಿತಿದ್ದರು. ಗುಡಗೇರಿ ಬಸವರಾಜ ಪರಾರಿಯಾಗಿದ್ದ. ಬೆಂಗಳೂರಿನಲ್ಲಿದ್ದ ಕಲ್ಪನಾಳ ಬಂಧುಗಳ್ಯಾರೂ ಶವ ಪಡೆಯಲು ಸಿದ್ದರಾಗಲಿಲ್ಲ. ರೇಡಿಯೋದಲ್ಲಿ ಪುಂಖಾನುಪುಂಖವಾಗಿ ಶೃದ್ದಾಂಜಲಿ ಸಂದೇಶಗಳು ಪ್ರಸಾರವಾಗುತ್ತಿದ್ದವು. ಆದರೆ ಶವದ ವಾರಸುದಾರರಾಗಲು ಯಾರೂ ಸಿದ್ದರಿರಲಿಲ್ಲ. ಸಂಜೆ ಏಳು ಗಂಟೆಯಾದರೂ ಕಲ್ಪನಾಳ ಶವ ಬೆಳಗಾವಿಯ ಶವಾಗಾರದಲ್ಲಿ ದಿಕ್ಕಿಲ್ಲದೆ ಬಿದ್ದಿತ್ತು. ಕೊನೆಗೆ ಮಡಿಯಾಳರು ಚಿತ್ರನಟ ಶ್ರೀನಾಥರನ್ನು ಸಂಪರ್ಕಿಸಿದರು. ಅವರು ವಿಷಯ ತಿಳಿದು ಪೇಚಾಡುತ್ತಾ ‘ಕೂಡಲೇ ಬೆಂಗಳೂರಿಗೆ ಕಳುಹಿಸಿ ಇಲ್ಲಿ ಏನಾದರೂ ವ್ಯವಸ್ಥೆ ಮಾಡೋಣ’ ಎಂದರು.

ಹೀಗೆ ಸಕಲ ಬಂಧನಗಳನ್ನೂ ಕಳಚಿ ಮಲಗಿದ್ದ ಕಲ್ಪನಾರ ದೇಹ ರಾತ್ರಿ ಎಂಟು ಗಂಟೆ ಸುಮಾರಿಗೆ ಬೆಂಗಳೂರಿಗೆ ಹೊರಟಿತು. ಬೆಂಗಳೂರಿನಲ್ಲೂ ಬೆರಳೆಣಿಕೆಯ ಜನ ಇದ್ದರು. ಕಲ್ಪನಾರ ದೀರ್ಘಕಾಲೀನ ಒಡನಾಡಿ ವಿಶ್ವನಾಥ್ ತಮ್ಮ ತೋಟದಲ್ಲಿ ಅಂತಿಮ ಸಂಸ್ಕಾರದ ವ್ಯವಸ್ಥೆ ಮಾಡಿದರು. ಅಲ್ಲಿಗೆ ಬೆಳ್ಳಿತೆರೆಯ ದುರಂತ ಅಧ್ಯಾಯ ಮುಕ್ತಾಯವಾಯಿತು.

ಪತ್ರಿಕೆಗಳಲ್ಲಿ ಕಲ್ಪನಾರದ್ದು ಆತ್ಮಹತ್ಯೆಯೋ ಕೊಲೆಯೂ ಎಂಬ ಬಗ್ಗೆ ವರ್ಣರಂಜಿತ ವರದಿಗಳು ಬರಲಾರಂಭಿಸಿದವು. ಒಂದು ಪತ್ರಿಕೆಯಂತೂ ‘ಕಲ್ಪನಾ ತನ್ನ ಉಂಗುರದಲ್ಲಿದ್ದ ವಜ್ರವನ್ನು ಅರೆದು ಪುಡಿ ಮಾಡಿ ಹಾಲಿ ಜೊತೆ ಕುಡಿದಿದ್ದಳು’ ಎಂದು ಬರೆದಿತ್ತು. ಇನ್ನೊಂದು ಗುಡಗೇರಿ ಬಸವರಾಜರೇ ಕಲ್ಪನಾಳ ಕುತ್ತಿಗೆ ಹಿಸುಕಿ ಸಾಯಿಸಿದರು ಎಂದು ಬರೆದಿತ್ತು. ಇನ್ನೂ ಕೆಲವು ಪತ್ರಿಕಗಳು ಹಣಕಾಸು ಸಮಸ್ಯೆ ಎಂದು ಬರೆದವು. ಸಾಯುವಾಗ ಕಲ್ಪನಾಳ ಬಳಿ ಕೇವಲ ಮುನ್ನೂರು ರೂಪಾಯಿಗಳು ಇದ್ದವು ಎಂದು ಒಂದು ಪತ್ರಿಕೆ ತಾನೇ ನೋಡಿದಂತೆ ಬರೆಯಿತು. ಆದರೆ ಪೋಸ್ಟ್ ಮಾರ್ಟಂ ವರದಿ ಬಿಚ್ಚಿಟ್ಟ ಸತ್ಯ ಬೇರೆಯಾಗಿತ್ತು. ಕಲ್ಪನಾ ೫೬ ನಿದ್ದೆ ಮಾತ್ರೆಗಳನ್ನು ನುಂಗಿದ್ದರು. ಮಾನಸಿಕವಾಗಿ ವಿಚಲಿತರಾದಾಗಲೆಲ್ಲ ನಿದ್ದೆ ಮಾತ್ರೆ ನುಂಗುವ ಹವ್ಯಾಸ ಅವರಿಗಿತ್ತು. ಹಿಂದೆ ಎರಡು ಮೂರು ಬಾರಿ ಹೀಗೆ ಸಾವಿನ ಅಂಚನ್ನು ಮುಟ್ಟಿ ಬಂದಿದ್ದರು ಈ ಸಲ ನಿದ್ರಾ ಮಾತ್ರೆಗಳ ಪ್ರಮಾಣ ಅವರನ್ನು ಸೀದಾ ಯುಮಪುರಿಗೇ ಕರೆದುಕೊಂಡು ಹೋಗಿತ್ತು.

ಕಲ್ಪನಾ ಸಾವಿನ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಓಡಿಯನ್ನು ನೇಮಿಸಿತು. ದಿನಕರ್ ಇದರ ಅಧಿಕಾರಿಯಾಗಿದ್ದರು. ತನಿಖೆ ಸರಿಯಾದ ದಾರಿಯಲ್ಲಿ ನಡೆಯಲಿಲ್ಲ. ರಾಜಕೀಯ ಒತ್ತಡಗಳು ಕಾಡಿದವು. ಜಾತಿ ರಾಜಕೀಯವೂ ಬೆರತು ಹೋಯಿತು. ಕೊನೆಗೊಂದು ಕಾಟಾಚರದ ವರದಿ ನೀಡಿ ಸಿಓಡಿ ಕೈತೊಳೆದುಕೊಂಡಿತು. ಜನರೂ ಕಲ್ಪನಾರನ್ನು ಮರೆತು ಬಿಟ್ಟರು.

ಅಮೂರ್ತವಾಗಿ ಬದುಕಿದ ಕಲ್ಪನಾ ಸಾವಿನಲ್ಲೂ ರಹಸ್ಯವಾಗಿ ಹೋದರು.
* * * *
ದಕ್ಷಿಣ ಕನ್ನಡ ಜಿಲ್ಲೆಯ ಕಡು ಬಡತನದ ಕುಟುಂಬದಲ್ಲಿ ೧೮-೦೭-೧೯೪೩ರಂದು ಜನಿಸಿದ ಕಲ್ಪನಾ ಬಾಲ್ಯದಲ್ಲೇ ಕಲಾವಿದೆಯಾಗುವ ಕನಸು ಕಂಡವರು. ಅವರ ಕುಟುಂಬದಲ್ಲಿ ಯಾರೂ ಕಲಾವಿದರಿರಲಿಲ್ಲ. ಅಂತಹ ಕನಸಿಗೆ ಇಂಬು ನೀಡವವರೂ ಇರಲಿಲ್ಲ. ಅದೊಂದು ಅದಮ್ಯ ಬಯಕೆ. ಕಲ್ಪನಾ ಛಲವಾದಿ, ತನ್ನ ಕನಸನ್ನು ಹೇಗಾದರೂ ನನಸಾಗಿಸಿ ಕೊಳ್ಳ ಬೇಕು ಎಂಬ ಕನಸು ಕಂಡರು. ನರಸಿಂಹ ರಾಜು ಅವರ ಆಕಸ್ಮಿಕ ಭೇಟಿ ಅದಕ್ಕೆ ಚಾಲನೆ ನೀಡಿತು. ಸಾಕು ಮಗಳು (೧೯೬೩) ಎಂಬ ಪಂತುಲು ಅವರ ಚಿತ್ರದಲ್ಲಿ ಚಿಕ್ಕ ಅವಕಾಶ ದೊರಕಿತು. ಆದರೆ ಅವರ ಧ್ವನಿ ಚೆನ್ನಾಗಿಲ್ಲ ಎಂದು ಬೇರೆಯವರಿಂದ ಡಬ್ ಮಾಡಿಸಲಾಯಿತು. ಕಲ್ಪನಾ ಇದರಿಂದ ತುಂಬಾ ನೊಂದು ಕೊಂಡರು. ದಾವಣಗೆರೆಗೆ ತೆರಳಿ ನಾಟಕಗಳಲ್ಲಿ ಅಭಿನಯಸಿ ಧ್ವನಿಯನ್ನು ಉತ್ತಮ ಪಡಿಸಿಕೊಂಡು ಬಂದರು. ಕಲ್ಪನಾ ಪ್ರತಿಭೆಯನ್ನು ಮೊದಲು ಗುರುತಿಸಿದವರು ಎನ್. ಲಕ್ಷ್ಮೀ ನಾರಾಯಣ್ ಅವರ ‘ನಾಂದಿ’ ಚಿತ್ರದ ಪಾತ್ರ ಸಂಕೀರ್ಣ ನೆಲೆಯಲ್ಲಿತ್ತು. ಚಿಕ್ಕ ಪಾತ್ರವಾಗಿದ್ದರೂ ಕಲ್ಪನಾ ಗಮನಾರ್ಹವಾಗಿ ಅಭಿನಯಿಸಿದ್ದರು. ಕಲ್ಪನಾ ಬದುಕಿಗೆ ತಿರುವು ನೀಡಿದ ಚಿತ್ರ ‘ಬೆಳ್ಳಿ ಮೋಡ’. ಇದಕ್ಕೆ ಕಾರಣ ಕರ್ತರಾದವರು ಪುಟ್ಟಣ್ಣ ಕಣಗಾಲ್. ಕಲ್ಪನಾ ಪುಟ್ಟಣ್ಣ ಅವರನ್ನು ಮೊದಲು ಸೆಳೆದಿದ್ದು ‘ಚಿನ್ನದ ಗೊಂಬೆ’ ಚಿತ್ರದಲ್ಲಿ. ಅದಕ್ಕೆ ಪುಟ್ಟಣ್ಣ ಸಹಾಯಕರಾಗಿದ್ದರು. ಅಭಿನಯದಲ್ಲಿ ತಲ್ಲೀನಳಾಗುವ ಆಕೆಯ ಶೈಲಿ ಅವರಿಗೆ ಇಷ್ಟವಾಗಿತ್ತು. ತಮ್ಮ ಮಲೆಯಾಳಂ ಚಿತ್ರಗಳಾದ ‘ಸ್ಕೂಲ್ ಮಾಸ್ಟರ್’ ‘ಮೇಯರ್ ನಾಯರ್’ಗಳಲ್ಲಿ ಅವಕಾಶ ನೀಡಿದ್ದರು. ‘ಬೆಳ್ಳಿ ಮೋಡ’ ನಾಯಕಿ ಪ್ರಧಾನ ಚಿತ್ರ ಅಭಿನಯಕ್ಕೆ ಇಲ್ಲಿ ತುಂಬು ಅವಕಾಶಗಳಿದ್ದವು. ಮೂಡಣ ಮನೆಯ ಮುತ್ತಿನ ನೀರಿನ ಎರಕ ಹೊಯ್ದದಂತಹ ಅಭಿನಯ ನೀಡಿದ ಕಲ್ಪನಾ ಆ ಸವಾಲಿನಲ್ಲಿ ಗೆದ್ದರು. ೧೯೬೭-೬೮ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಪಡಯುವುದರೊಂದಿಗೆ ಯಶಸ್ಸಿನ ಮೊದಲ ಮೆಟ್ಟಿಲನ್ನೇರಿದರು. ಮಣ್ಣಿನ ಮಗ ನಾಯಕ ಪ್ರಧಾನ ಚಿತ್ರ. ಅಲ್ಲಿ ನಾಯಕಿಗೆ ಮಹತ್ವ ಇರಲಿಲ್ಲ. ಆದರೆ ಸೀಮಿತ ಅವಕಾಶದಲ್ಲೇ ಕಲ್ಪನಾ ತಮ್ಮ ಛಾಪನ್ನು ಮೂಡಿಸಿದರು. ‘ಇದೇನು ಸಭ್ಯತೆ’ ಗೀತೆಯಂತೂ ಮೌಲ್ಯಗಳ ಪ್ರತಿನಿಧಿಯಾಗಿ ಅವರನ್ನು ನೋಡುವಷ್ಟರ ಮಟ್ಟಿಗೆ ಪ್ರಭಾವಿಯಾಗಿ ಮೂಡಿ ಬಂದಿತ್ತು. ಕಲ್ಪನಾ ಅಭಿನಯದ ವ್ಯಾಪ್ತಿ ಇದರಿಂದ ಸಾಬೀತಾಯಿತು. ‘ನಮ್ಮ ಮಕ್ಕಳು’ ಮತ್ತು ‘ಕಪ್ಪು-ಬಿಳುಪು’ ಮುಂದೆ ಕಲ್ಪನಾ ಅಭಿನಯಸಿದ ವಿಭಿನ್ನ ಚಿತ್ರಗಳು. ಎರಡೂ ಚಿತ್ರಗಳಲ್ಲಿ ಅವರದು ಸವಾಲಿನ ಪಾತ್ರಗಳು. ಅದರಲ್ಲೂ ‘ಕಪ್ಪು-ಬಿಳುಪು’ ಚಿತ್ರದಲ್ಲಿ ಅದರದು ದ್ವಿಪಾತ್ರ. ಅದರಲ್ಲಿ ಒಂದು ಖಳ ಪಾತ್ರ. ಜನಪ್ರಿಯತೆಯ ಮೆಟ್ಟಿಲುಗಳನ್ನು ಏರುತ್ತಿದ್ದ ಕಲಾವಿದೆ ಇಂತಹ ನೇತ್ಯಾತ್ಮಕ ಪಾತ್ರವನ್ನು ನಿರ್ವಹಿಸುವುದೇ ಸವಾಲಾಗಿತ್ತು. ಅದನ್ನು ಕಲ್ಪನಾ ಚೆನ್ನಾಗಿ ಎದುರಿಸಿದರು. ಕಾಠಿಣ್ಯದಲ್ಲಿ ಮೃದುತ್ವ ಮತ್ತು ಮೃದುತ್ವತೆಯಲ್ಲಿ ಮುಗ್ದತೆ ಇದನ್ನು ಅವರು ನಿರ್ದೇಶಕರ ನಿರೀಕ್ಷೆಯನ್ನು ಮೀರಿ ಸಾಧಿಸಿದರು.

ಎನ್. ಲಕ್ಷ್ಮೀನಾರಾಯಣ್ ಅವರ ‘ಉಯ್ಯಾಲೆ’ ಕಲ್ಪನಾ ಅವರ ಅಭಿನಯ ಸೂಕ್ಷಗಳನ್ನು ಹಿಡಿದಿಟ್ಟ ಇನ್ನೊಂದು ಚಿತ್ರ. ವಿವಾಹಿತೆಯೊಬ್ಬಳ ಮನಸ್ಸು ವಿವಾಹ ಬಾಹಿರ ಸಂಬಂಧಗಳತ್ತ ತುಡಿಯುವ ವಸ್ತು ಬಹುಬೇಗ ಸಾಂಪ್ರದಾಯಿಕ ಗ್ರಹಿಕೆಗೆ ತಪ್ಪು ಎನ್ನಿಸ ಬಲ್ಲದಾಗಿತ್ತು. ಇದನ್ನು ಭಾವಗಳ ನೆಲೆ ದಾಟದಂತೆ ದೈಹಿಕ ಅಭಿವ್ಯಕ್ತಿ ಸಾಧಿಸುವ ಮೂಲಕ ಕಲ್ಪನಾ ಅಭಿನಯಿಸಿದ ಕ್ರಮ ವಿಶಿಷ್ಢ ಎನ್ನಿತ್ತು. ಇದೇ ಮಾದರಿಯ ಪಾತ್ರವನ್ನು ಜಯಂತಿ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಅಭಿನಯಿಸಿದ ಕ್ರಮಕ್ಕೆ ಹೋಲಿಸಿದರೆ ಕಲ್ಪನಾ ಅವರ ವಿಶಿಷ್ಠತೆ ಅರಿವಾಗ ಬಹುದು.

‘ಗೆಜ್ಜೆ ಪೂಜೆ’ ಕಲ್ಪನಾ ಅವರನ್ನು ತಪ್ಪು ಮಾದರಿಗೆ ಸಿಲುಕಿಸಿದ ಮೊದಲ ಚಿತ್ರ. ಆಕೆಯ ಅತಿಯಾದ ಇನ್‌ವಾಲ್ವಮೆಂಟನ್ನು ಅಭಿನಯದ ಅತಿರೇಕವಾಗಿಸಿದ ರೀತಿಗೆ ಇದು ಆರಂಭಿಕ ಬಿಂದುವಾಯಿತು. ಭಾವುಕತೆಯನ್ನು ಬಂಡವಾಳವಾಗಿಸಿ ಕೊಳ್ಳಲು ಹೊರಟವರು, ಇದಕ್ಕೆ ಒತ್ತು ನೀಡಿದರು. ದುರಂತವೆಂದರೆ ಇಲ್ಲಿಂದ ಮುಂದೆ ಕಲ್ಪನಾ ಅವರನ್ನು ಈ ಮಾದರಿಯೇ ಸಾಕಷ್ಟು ಜನಪ್ರಿಯವಾಗಿಸಿತು. ಹಾಗೆ ನೋಡಿದರೆ ಅದೇ ವರ್ಷ ಬಿಡುಗಡೆಯಾದ ‘ಅರಿಶಿನ ಕುಂಕುಮ’ ವಿಭಿನ್ನ ಮಾದರಿಯ ಚಿತ್ರವಾಗಿತ್ತು. ‘ಇಳಿದು ಬಾ ತಾಯಿ’ ಗೀತೆಗೆ ಕಲ್ಪನಾ ನೀಡಿದ ಅಭಿನಯ ಸ್ಮರಣೀಯವೆನ್ನಿಸ ಬಲ್ಲದಾಗಿತ್ತು. ಮುಂದೆ ಬಂದ ‘ಕರುಳಿನ ಕರೆ’ ಚಿತ್ರದಲ್ಲಿ ಕಡ್ಲೆಕಾಯಿ ಮಾರುವ ಕೆಳಸ್ತರದ ಹುಡುಗಿ ಪಾತ್ರದಲ್ಲಿ ಸಹಜತೆ ಬರಬೇಕಿತ್ತು. ಆದರೆ ಪುಟ್ಟಣ್ಣ ಆಗಾಗಲೇ ಮೂಡಿದ್ದ ಅತಿರೇಕವನ್ನು ಬಯಸಿದರು. ಕಲ್ಪನಾ ಅವರ ಗೊಂದಲ ‘ತಾಜಾ ತಾಜಾ ಕಡ್ಲೆ ಕಾಯಿ’ ಗೀತೆಯಲ್ಲಿ ಎದ್ದು ಕಾಣುವಂತಿತ್ತು. ‘ಸೀತಾ’ ದಲ್ಲಿಯೂ ಕಲ್ಪನಾ ಅವರ ದ್ವಂದ್ವವನ್ನು ಗುರುತಿಸ ಬಹುದು ಅಭಿನಯದಲ್ಲಿ ಸಹಜತೆ ಎಷ್ಟಿರ ಬೇಕು ಎಂದು ನಿರ್ಧರಿಸುವುದು ಅವರಿಗೆ ಸಮಸ್ಯೆಯಾದಂತೆ ಕಾಣುತ್ತದೆ. ಮಧ್ಯಂತರದ ನಂತರವಂತೂ ಕಲ್ಪನಾ ಜನರು ಅತಿರೇಕವನ್ನು ಇಷ್ಟ ಪಡುತ್ತಾರೆ ಎನ್ನುವಂತೆ ನಟಿಸಿದ್ದರು. ‘ಶರಪಂಜರ’ ತಪ್ಪನ್ನು ಪೂರ್ಣವಾಗಿಸಿತು. ಇಷ್ಟು ಹೊತ್ತಿಗಾಗಲೇ ಪುಟ್ಟಣ್ಣ ಮೆಲೋಡ್ರಾಮವನ್ನು ಸಂಪೂರ್ಣವಾಗಿ ನಂಬಿದ್ದರು. ಚಿತ್ರದಲ್ಲಿ ಮನೋರೋಗಿಯೊಬ್ಬಳ ಸಮಸ್ಯೆಯನ್ನು ವಾಚ್ಯವಾಗಿಸಿದಷ್ಟೂ ಪರಿಣಾಮಕಾರಿಯಾಗುತ್ತದೆ ಎಂದು ನಂಬಿದ್ದರು. ಕಲ್ಪನಾ ಅವರ ಅಭಿನಯದ ವಿಧಾನ ಇಲ್ಲಿ ಸರಕಾಯಿತು. ಇಂತಹದೊಂದು ‘ಕಚ್ಚಾ ಸರಕು’ ಯಾವ ಅರ್ಥದಲ್ಲೂ ಕಲಾತ್ಮತೆಕತೆ ಪಡೆದಿರಲಿಲ್ಲ. ಚಿತ್ರ ಜನಪ್ರಿಯವಾದಾಗ ಜನ ಅದನ್ನು ಒಪ್ಪಿದ್ದಾರೆ ಎಂದು ಕಲ್ಪನಾ ಭಾವಿಸಿದ್ದರು. ಕಲ್ಪನಾ ಇನ್ನಷ್ಟು ಪುಟ್ಟಣ್ಣನವರ ಚಿತ್ರ್ರಗಳಲ್ಲಿ ಅಭಿನಯಿಸಿದ್ದರೆ ಏನಾಗುತ್ತಿತ್ತು ಎಂಬುದು ಕುತೂಹಲಕರ ವಿಷಯ. ಎಡಕಲ್ಲು ಗುಡ್ಡದ ಮೇಲೆ, ಉಪಾಸನೆ, ರಂಗ ನಾಯಕಿ, ಧರ್ಮಸೆರೆಯಂತಹ ನಾಯಕಿ ಪ್ರಧಾನ ಚಿತ್ರಗಳಿಗೆ ಕಲ್ಪನಾ ಹೊಸ ಸಾಧ್ಯತೆಗಳನ್ನು ನೀಡಬಲ್ಲವರಾಗಿದ್ದರು. ಅಥವಾ ಇನ್ನಷ್ಟು ದೂರದ ಮೆಲೋಡ್ರಾಮಾದ ಹಾದಿ ಅವರ ಅಭಿನಯದ ಸೂಕ್ಷ್ಮಗಳನ್ನು ಹಾಳು ಮಾಡ ಬಹುದಾಗಿತ್ತು. ಇವೆಲ್ಲವೂ ‘ರೆ..’ ಮಾತುಗಳು. ಆದರೆ ಶರಪಂಜರದ ಗೆಲವಿನ ಪಾಲು ಯಾರದು ಎಂಬ ಪ್ರಶ್ನೆ ಮಾಧ್ಯಮದ ಮೊಗಸಾಲೆಯಲ್ಲಿ ಎದ್ದಿತು. ಗೆಲುವನ್ನು ಎಂದಿಗೂ ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಆರೋಗ್ಯಕರ ಮನೋಸ್ಥಿತಿಯನ್ನು ಹೊಂದಿರದ ಪುಟ್ಟಣ್ಣ ವಿಚಲಿತರಾದರು. ಆಗಲೇ ಆರತಿ ಅವರ ಜೀವನವನ್ನು ಪ್ರವೇಶಿಸಿದ್ದರು. ಹೊರಳು ದಾರಿಗೆ ಇನ್ನೇನು ಕಾರಣ ಬೇಕು? ಆದರೆ ಈ ಬಿರುಕಿಗೆ ಬರುವಷ್ಟು ಹೊತ್ತಿಗಾಗಲೇ ಕಲ್ಪನಾ ಅವರ ಅಭಿನಯದ ಸಾಧ್ಯತೆಯನ್ನು ಪುಟ್ಟಣ್ಣ ಕುಗ್ಗಿಸಿ ಬಿಟ್ಟಿದ್ದರು. ನಿಜವಾದ ದುರಂತವೆಂದರೆ ಇದು.

ಕಲ್ಪನಾ ಮುಂದೆ ಎರಡು ಚಿತ್ರಗಳಲ್ಲಿ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದರು. ಅವೆಂದರೆ ಲಕ್ಷ್ಮೀನಾರಾಯಣ್ ನಿರ್ದೇಶನದ ‘ಮುಕ್ತಿ’ ಮತ್ತು ಆರ್. ಎನ್.ಜಯಗೋಪಾಲ್ ನಿರ್ದೇಶನದ ‘ಕೆಸರಿನ ಕಮಲ’ ಇವರಡೂ ‘ಶರ ಪಂಜರ’ಕ್ಕಿಂತ ಭಿನ್ನವಾದ ಪಾತ್ರ ನಿರ್ವಹಣೆಯನ್ನು ಹೊಂದಿದ್ದವು. ಇವೆರಡರಲ್ಲೂ ಕಲ್ಪನಾ ಸಹಜವಾಗಿ ಅಭಿನಯಿಸಿದ್ದರು. ನಿಜವಾಗಿ ಈ ಚಿತ್ರಗಳು ಅವರೊಳಗಿನ ಕಲಾವಿದೆಯನ್ನು ಪುಟಕ್ಕಿಟ್ಟಿದ್ದವು. ಆದರೆ ಈ ಚಿತ್ರಗಳು ಜನರನ್ನು ತಲುಪಲಿಲ್ಲ. ಅವುಗಳ ನಿಜವಾದ ವಿಮರ್ಶೆ ಕೂಡ ಪತ್ರಿಕಗಳಲ್ಲಿ ನಡೆಯಲಿಲ್ಲ. ಇನ್ನೊಂದು ಕಡೆ ವ್ಯಾಪಾರಿ ಚಿತ್ರರಂಗ ಭಾವುಕ ಮಾದರಿಯ ಪಾತ್ರಗಳನ್ನೇ ನೀಡುತ್ತಿತ್ತು. ಜನಪ್ರಿಯತೆಯ ಸೆಳೆತ ಸವಾಲನ್ನು ಹಿಂದೆ ಹಾಕಿತು. ಹಾಗೆ ನೋಡಿದರೆ ‘ನಾರಿ ಮುನಿದರೆ ಮಾರಿ’ ಚಿತ್ರದಲ್ಲಿನ ಹಿರೋಯಿಸಂ ಎಳೆಯನ್ನು ಕಲ್ಪನಾ ಸಮರ್ಥವಾಗೇ ನಿರ್ವಹಿಸಿದ್ದರು. ಆದರೆ ಈ ಅಂಶಕ್ಕೆ ಮಹತ್ವ ಸಿಕ್ಕಲಿಲ್ಲ. ಈ ಚಿತ್ರದ ‘ಗೋಪಿಲೋಲ ಹೇ ಗೋಪಾಲ’ ಗೀತೆಯಲ್ಲಿ ಮೀರಾಳ ಸಾಧ್ಯತೆ ಚಿಮ್ಮಿಸಿದ್ದ ಅವರು ಪ್ಯಾಂಟ್ ಧರಿಸಿ ಖಳರನ್ನು ಸದೆ ಬಡಿಯುವ ಪಾತ್ರವನ್ನೂ ಸಮರ್ಥವಾಗೇ ಮಾಡಿದ್ದರು. ಈ ಪಾತ್ರದ ರೇಂಜ್ ಬಹಳ ದೊಡ್ಡದಾಗಿತ್ತು.

ಕಲ್ಪನಾ ಅವರ ಅಭಿನಯದ ಕುರಿತು ಬರೆಯುವಾಗ ‘ಶರ ಪಂಜರ’ವನ್ನು ಅತಿಯಾಗಿಸಿ ಉಲ್ಲೇಖಿಸುವವರು ಅದೇ ಕಾಲದಲ್ಲಿ ಬಂದ ಎರಡು ಮುಖ್ಯವಾದ ಚಿತ್ರಗಳನ್ನು ಮರೆತು ಬಿಡುತ್ತಾರೆ. ಅವೆಂದರೆ ‘ಯಾವ ಜನ್ಮದ ಮೈತ್ರಿ’ ಮತ್ತು ‘ಸೋತು ಗೆದ್ದವಳು’. ‘ಯಾವ ಜನ್ಮದ ಮೈತ್ರಿ’ ಚಿತ್ರದ ಕಥೆ ವಿಭಿನ್ನವಾದದ್ದು. ಮದುವೆಯಾದ ದಿನವೇ ಸಾವನ್ನಪ್ಪಿದ ಗಂಡನ ಅಗಲುವಿಕೆಯನ್ನು ಒಪ್ಪಿ ಕೊಳ್ಳಲು ಹಿಂಜೆರೆಯುವವಳಿಗೆ ಗಂಡನ ರೂಪದವನೇ ಆದ ಇನ್ನೊಬ್ಬನು ಸಿಕ್ಕಾಗ ಆಗುವ ಭ್ರಮೆ, ಆ ಭ್ರಮೆಯನ್ನು ಮಾನವೀಯವಾಗಿ ಪರಿಗಣಿಸಿ ಅದನ್ನು ಸಾಂತ್ವನ ಹೇಳಲು ಬಯಸುವ ಇತರರು. ಹೀಗೆ ಚಿತ್ರಕ್ಕೆ ಹಲವು ನೆಲೆಗಳಿದ್ದವು. ಕಲ್ಪನಾ ಈ ಪ್ರಧಾನ ಭೂಮಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಅದರಲ್ಲೂ ಸಂಜೆಯ ವೇಳೆಗೆ ಗಂಡನನ್ನು ಹೋಲುವವನನ್ನು ಕಂಡು ಅವರು ನೀಡಿದ ಸಂತಸ, ಉದ್ವೇಗ, ಆತಂಕ, ಕಾತುರ ಎಲ್ಲವೂ ಬೆರೆತ ಅಭಿನಯ ಅವಿಸ್ಮರಣೀಯವಾಗಿತ್ತು ಈ ಸರಿಸುಮಾರು ೪೦೦ ಅಡಿ ಗಾತ್ರದ ದೃಶ್ಯವನ್ನು ಅವರು ಒಂದೇ ಟೇಕ್‌ನಲ್ಲಿ ಅಭಿನಯಿಸಿದ್ದರು ಎನ್ನುವುದು ಬಹಳ ಮುಖ್ಯವಾದ ಸಂಗತಿ. ‘ಸೋತು ಗೆದ್ದವಳು’ ಸಕಲ ಸಿರಿವಂತಿಕೆ ಇದ್ದರೂ ಲೈಂಗಿಕ ಸಾಮರ್ಥ್ಯವನ್ನು ಕಳೆದಕೊಂಡ ಗಂಡನ ಜೊತೆ ಬದುಕಿ ಕಾಮನೆಯನ್ನು ಗೆದ್ದು ಬದುಕಿನಲ್ಲಿ ಅರ್ಥ ಕಂಡುಕೊಂಡ ದಿಟ್ಟ ಮಹಿಳೆಯ ಕಥೆ. ಇದನ್ನೂ ಕಲ್ಪನಾ ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು.

ಕಲ್ಪನಾ ಅವರ ವೃತ್ತಿ ಜೀವನದ ಯಶಸ್ವಿ ಹಂತದಲ್ಲಿ ಕೇವಲ ಭಾವುಕ ಚಿತ್ರಗಳೇ ದೊರಕಿದವು ಎಂದೇನೂ ಇಲ್ಲ. ‘ಭಲೇ ಅದೃಷ್ಟವೋ ಅದೃಷ್ಟ’ ‘ನಾ ಮೆಚ್ಚಿದ ಹುಡುಗ’ ದಂತಹ ಕಾಮಿಡಿ ಚಿತ್ರಗಳಲ್ಲೂ ಅವರು ಅಭಿನಯಿಸಿದರು. ಅದರಲ್ಲೂ ‘ನಾ ಮೆಚ್ಚಿದ ಹುಡುಗ’ದ ಸಾಧ್ಯತೆಗಳು ಹೆಚ್ಚಾಗಿದ್ದವು. ‘ಬೆಳದಿಂಗಳಿನಾ ನೊರೆ ಹಾಲು’ ಗೀತೆಯಲ್ಲಿ ಅವರು ನೀಡಿದ ಅಂಗಿಕ ಚಿನ್ಹೆಗಳು ಸಹಜ ಅಭಿನಯ ಕ್ರಮದ ಸಾಧ್ಯೆತೆಗೆ ಸಾಕ್ಷಿಯಾಗಿತ್ತು. ‘ಬೆಳವಲದ ಮಡಿಲಲ್ಲಿ’ ಚಿತ್ರದ ಚಿಕ್ಕ ಪಾತ್ರವನ್ನು ಕೂಡ ಅವರು ಗಮನಾರ್ಹವಾಗಿ ನಿರ್ವಹಿಸಿದ್ದರು. ಹಾಗೆ ನೋಡಿದರೆ ‘ಗಂಧದ ಗುಡಿ’ ಚಿತ್ರದ ಚಿಕ್ಕ ಪಾತ್ರ ಅವರನ್ನು ಸಾಕಷ್ಟು ವ್ಯಾಪಾರಿ ನೆಲೆಯಲ್ಲಿ ನೋಡಿತ್ತು. ‘ಅರರೆ ಗಿಳಿರಾಮ’ ಗೀತೆಯಲ್ಲಿ ಉದ್ರೇಕಕಾರಿ ಅಂಶಗಳು ಇದ್ದವು. ಕಲ್ಪನಾ ಇಂತಹ ಒತ್ತಡವನ್ನು ನಿರ್ವಹಿಸ ಬೇಕಾಗಿ ಬಂದಿತ್ತು. ‘ಎರಡು ಕನಸು’ ಚಿತ್ರದ್ದು ಸಾಕಷ್ಟು ಸವಾಲಿನ ಪಾತ್ರ. ತನ್ನನ್ನು ಒಪ್ಪಿಕೊಳ್ಳದ ಗಂಡನ ಕುರಿತ ನವ ವಿವಾಹಿತೆಯ ತಳಮಳಗಳನ್ನು ಹಿಡಿದಿದಡುವ ಪಾತ್ರವನ್ನು ಕಲ್ಪನಾ ಪರಿಣಾಮಕಾರಿಯಾಗಿಯೇ ಹಿಡಿದಿಟ್ಟಿದ್ದರು. ಚಿತ್ರದ ನಿರ್ವಹಣೆಯಲ್ಲಿ ಅವರ ಪಾತ್ರವನ್ನು ಅಮುಖ್ಯವಾಗಿಸುವ ಪ್ರಯತ್ನವಿತ್ತು. ಈ ಮಿತಿಯ ನಡುವೆಯೇ ಕಲ್ಪನಾ ಗೆದ್ದಿದ್ದರು ಎಂಬುದು ಈಗ ಮಹತ್ವದ ಅಂಶವಾಗಿ ಕಾಣಿಸುತ್ತದೆ. ‘ಬಯಲು ದಾರಿ’ ಅವರಿಗೆ ಸಿಕ್ಕ ಕೊನೆಯ ಉತ್ತಮ ಅವಕಾಶ. ಹವ್ಯಾಸಿ ರಂಗಭೂಮಿಯಿಂದ ಬಂದು ಕಲಾತ್ಮಕ ಚಿತ್ರಗಲಲ್ಲಿ ತಮ್ಮ ಛಾಪನ್ನು ಮೂಡಿಸಿದ್ದ ಅನಂತ್ ನಾಗ್ ಎದುರು ಕಲ್ಪನಾ ನಾಯಕಿಯಾಗಿ ಅಭಿನಯಸಿದ್ದರು. ಇಬ್ಬರ ಅಭಿನಯ ಸಾಧ್ಯತೆಗಳು ಭಿನ್ನ ವಾಗಿದ್ದವು. ಹಾಗಿದ್ದರೂ ಚಿತ್ರದ ಸಮತೋಲಕ್ಕೆ ಧಕ್ಕೆಯಾಗಲಿಲ್ಲ. ಇದು ಕಲ್ಪನಾ ಅವರ ಅಭಿನಯದ ಮಹತ್ವವನ್ನು ಹೇಳ ಬಲ್ಲದಾಗಿದೆ.

ಕ್ರಮೇಣ ಕಲ್ಪನಾ ಅವರಿಗೆ ಅವಕಾಶಗಳು ಕಡಿಮೆಯಾದವು. ಆಗಲೇ ಪೋಷಕ ಪಾತ್ರಗಳು ಮಧ್ಯ ವಯಸ್ಕ ಪಾತ್ರಗಳ ಕರೆ ಬರಲಾರಂಭಿಸಿದ್ದು ಅವರನ್ನು ವಿಚಲಿತರನ್ನಾಗಿ ಮಾಡಿತು. ಅವರು ಬಹು ನಿರೀಕ್ಷೆ ಇಟ್ಟು ಕೊಂಡಿದ್ದ ಶಿವರಾಮ ಕಾರಂತರು ನಿರ್ದೇಶಿಸಿದ್ದ ‘ಮಲೆಯ ಮಕ್ಕಳು’ ಚಿತ್ರದ ಅನುಭವ ಹಿತಕರವಾಗಿರಲಿಲ್ಲ. ಜನಪ್ರಿಯ ಕಲಾವಿದಯೊಬ್ಬರು ಡಬ್ಬಿಂಗ್ ಮಾಡಲು ನಿರಾಕರಿಸಿದ ಕಾರಣದಿಂದ ದೊರೆತ ‘ಸಂದರ್ಭ’ ಚಿತ್ರದ ಪಾತ್ರ ಅಭಿನಯಕ್ಕೆ ಒತ್ತು ನೀಡುವಂತಿರಲಿಲ್ಲ. ನಿರೀಕ್ಷೆಯ ‘ಪೋಲಿಸ್’ ಚಿತ್ರ ಚರ್ಚೆಯ ಹಂತದಲ್ಲೇ ಇತ್ತು. ಅಷ್ಟರಲ್ಲೇ ಕಲ್ಪನಾ ಭವಬಂಧನವನ್ನು ಬಿಡಿಸಿಕೊಂಡು ಹೊರಟು ಬಿಟ್ಟರು.
* * * *
ಕಲ್ಪನಾ ನಮ್ಮನ್ನು ಅಗಲಿ ಈಗ ಮೂರು ದಶಕಗಳೇ ಕಳೆದಿವೆ. ಈಗ ಅವರನ್ನು ಹೇಗೆ ನೆನಪಿಸಿ ಕೊಳ್ಳ ಬೇಕು ಎನ್ನುವುದು ಒಂದು ಗಂಭೀರವಾದ ಪ್ರಶ್ನೆ. ಅವರ ಖಾಸಗಿ ಬದುಕಿನ ಕುರಿತು ಚರ್ಚಿಸುವುದು ಈಗ ಅನಗತ್ಯ. ಅದಕ್ಕೆ ಬೇಕಾದ ಅಕರಗಳೂ ಇಲ್ಲ. ಅದರಿಂದ ದೊರಕ ಬಹುದಾದ ಪ್ರಯೋಜನಗಳೂ ಇಲ್ಲ. ‘ಆಕೆ ಅತ್ಯಂತ ಇನ್‌ವಾಲ್ವಮೆಂಟ್ ಇದ್ದ ಕಲಾವಿದೆ’ ಎಂಬ ಮಾತನ್ನು ನಾನು ಭೇಟಿ ಮಾಡಿದವರಲ್ಲೇ ಹೇಳಿದರು. ಪಾತ್ರಕ್ಕೂ ವಾಸ್ತವ ಬದುಕಿಗೂ ಎಷ್ಟೋ ಸಲ ವ್ಯತ್ಯಾಸವೇ ಇಲ್ಲದಂತೆ ಇರುತ್ತಿದ್ದರು ಎಂದೂ ಹೇಳಿದರು. ಇದನ್ನು ಚಿತ್ರರಂಗ ತಪ್ಪು ಕಾರಣಗಳಿಗೆ ಬಳಸಿತು ಎನ್ನುವುದು ವಾಸ್ತವ. ಅದರಿಂದ ಅವರಿಂದ ದೊರಕ ಬಹುದಾದ ಅಭಿನಯದ ಸಾಧ್ಯತೆಗಳು ಲಭಿಸಲಿಲ್ಲ ಎನ್ನುವುದು ಒಂದು ಕಹಿ ಸತ್ಯ. ಆದರೆ ಆಕೆ ಪಾತ್ರಕ್ಕೆ ಬೇಕಾದ ಸಿದ್ದತೆಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಕಾಸ್ಟ್ಯೂಮ್ಸ ವಿಚಾರದಲ್ಲೂ ಎಚ್ಚರಿಕೆ ವಹಿಸುತ್ತಿದ್ದರು. ಚಿತ್ರದ ಕಥೆ ಅರಿತು ಅಭಿನಯಿಸುತ್ತಿದ್ದರು ಎಂಬ ಮುಖ್ಯವಾದ ಅಂಶಗಳು ದಾಖಲಾಗಲಿಲ್ಲ. ಕಲ್ಪನಾ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಒಲವನ್ನು ಇಟ್ಟು ಕೊಂಡಿದ್ದರು. ಪುಸ್ತಕ ಪ್ರೇಮಿಯಾಗಿದ್ದರು. ಒಳ್ಳೆಯ ಕವಿತೆಗಳನ್ನು ಬರೆದಿದ್ದರು. ಅಂಕಣಗಳನ್ನು ಬರೆದಿದ್ದರು. ‘ಯಾವ ಜನ್ಮದ ಮೈತ್ರಿ’ ಚಿತ್ರದ ಪಾತ್ರ ವಿವಾದಕ್ಕೆ ಸಿಲುಕಿದಾಗ ದಾಖಲೆಗಳೊಂದಿಗೆ ತಾವೇ ಸಮರ್ಥಿಸಿಕೊಂಡಿದ್ದರು ಮೊದಲಾದ ಹಲವು ಅಂಶಗಳು ಚರಿತ್ರೆಯಲ್ಲಿ ದಾಖಲಾಗಲಿಲ್ಲ.

ಕಲ್ಪನಾ ಎಂಬ ಪದದಲ್ಲಿ ಅಮೂರ್ತತೆಯ ಚಿತ್ರಣವಿದೆ ವಾಸ್ತವದಿಂದ ದೂರವಾಗುವ ಪ್ರಯತ್ನವಿದೆ. ಆ ಹೆಸರನ್ನು ಆರಿಸಿಕೊಂಡ ಕಲಾವಿದೆಯ ಬದುಕು ಕೂಡ ಹಾಗೇ ಅಗಿದ್ದು ಮಾತ್ರ ದುರಂತವೇ ಸರಿ.

Advertisements