ವಿಕಾಸ ನೇಗಿಲೋಣಿಯವರ ಲೇಖನವಿ.ಸಿನಿಮಾ ನಮ್ಮೊಳಗೆ ಮೂಡಿಸುವ ಹೊಸತನ್ನು ಅತ್ಯಂತ ಬೆರಗಿನಿಂದಲೇ ಬರೆದಿದ್ದಾರೆ. ಓದಿ ಅಭಿಪ್ರಾಯಿಸಿ.

ಆ ಪ್ರಪಂಚದ ಅದ್ಭುತ ಮನರಂಜನೆ ಸಿನಿಮಾ ಆಗಿತ್ತು.

ಇನ್ನು ಹುಟ್ಟುವ ಮಕ್ಕಳಿಗೆ ಅದೊಂದು ಮನರಂಜನೆಯೇ ಅಲ್ಲದೇ ಇರಬಹುದು. ಆದರೆ ಇಪ್ಪತ್ತು- ಮೂವತ್ತು ವರ್ಷಗಳ ಹಿಂದೆ ಹುಟ್ಟಿದ ಒಂದು ತಲೆಮಾರಿಗೆ ಅದೊಂದು ಅತ್ಯದ್ಭುತ ಮನರಂಜನೆ. ಯಾರೋ ಎಲ್ಲೋ ಬಿಟ್ಟ ಪ್ರೊಜೆಕ್ಷನ್ ಬೆಳಕಲ್ಲಿ ತೆರೆದುಕೊಳ್ಳುವ ರಂಜಕ ಬದುಕು. ಫೈಟಿನಿಂದ, ಹಾಡಿನಿಂದ, ರೋಷ, ಪ್ರೀತಿ, ಮಮತೆ, ಕರುಣೆಗಳ ಮೈತಾಳುವ ನಾಯಕ. ಗ್ಲಾಮರ್ ನಿಂದ, ಪ್ರೀತಿಯಿಂದ, ಅಕ್ಕರೆಯಿಂದ ಎದುರಾಗುವ ನಾಯಕಿ. ಅವರ ಸುತ್ತ ಪೀಡಿಸುವ ವರ್ಗ, ಕಾಡಿಸುವ ವರ್ಗ, ದಬ್ಬಾಳಿಕೆ ಮಾಡುವ ವರ್ಗ, ದುರಾಡಳಿತ ಮಾಡುವ ವರ್ಗ. ಅಲ್ಲೆಲ್ಲೋ ಕೆಲವೇ ಕೆಲವು ಒಳ್ಳೆಯವರು, ಬರಗಾಲದ ಊರಲ್ಲೊಂದು ಸಿಹಿಪಾನಕದ ಅರವಟಿಗೆ.
ಕೊನೆಗೆ ಅದೆಲ್ಲವನ್ನೂ ದಾಟಿ, ನೋಡುಗರ ಭಾವಭಾವಗಳ ಮೀಟಿ ಅಳುವ ಕಡಲಿಂದ ನಗೆಯ ಹಾಯಿ ದೋಣಿ ಹಿಡಿದು ಬರುವ ನಾಯಕ. ಚಿತ್ರಮಂದಿರದ ಬೆಳಕು ಹರಿಯುತ್ತಲೇ, ಬೆವರು, ನೆಮ್ಮದಿಯ ಜೊತೆ, ಸಿನಿಮಾ ಮಂದಿರದಾಚೆ ಇರುವ ನಿಜವಾದ ಬದುಕಿಗೆ ಮರಳಲೇಬೇಕಾದ ಅನಿವಾರ್ಯ ವನ್ನು ನೆನೆದು ಹೊರಬರುತ್ತಿರುವ ಸಾಲು ಸಾಲು ಪ್ರೇಕ್ಷಕ ವರ್ಗ.

-ನಮಗಾಗದ, ನಮಗೆಟುಕದ ಅದಾವುದೋ ಕೆಲಸವನ್ನು ಸಾಧಿಸಿ ತೋರಿಸುವ ಸಿನಿಮಾ-ಎಲ್ಲೋ ದೂರದೊಂದು ಲೋಕ. ನಮ್ಮಂಥವರ ದೌರ್ಬಲ್ಯ, ಅಸಹಾಯಕತೆ ಎದುರು ನಾಯಕ ಅಸಾಧ್ಯ ಶೂರ. ಅವನು ನಮ್ಮ ಸಮಾಜದಲ್ಲೇ ವಾಸಿಸುವ, ನಮ್ಮಂತೇ ಚಿವುಟಿದರೆ ನೋಯುವ, ಏಟಿನಿಂದ ಸಾಯುವ, ಆಟದಲ್ಲಿ ಸೋಲುವ ಮನುಷ್ಯ ಎಂಬ ಕಲ್ಪನೆ ಇಲ್ಲದೇ ಬೆಳೆಯುತ್ತಿದ್ದೆವು. ಬಾಲ್ಯದಲ್ಲಿ ಬೆರಗಿನಿಂದ, ಹರೆಯದಲ್ಲಿ ಮೆರುಗಿನಿಂದ, ನಾಯಕನ ಅಂಥ ಅನುಭವ ಕಂಡು ಕೊರಗಿನಿಂದ ನಮಗೆ ಸಿನಿಮಾ ಕಾಣುತ್ತಾ ಹೋದವು. ನಾಯಕನ ವಿಲಾಸ, ನಾಯಕಿಯ ವಿಳಾಸ, ವೈರಿಗಳ ಸಾಹಸಗಳೆಲ್ಲಾ ಮನುಷ್ಯಮಾತ್ರದವರ ವಿಶ್ಲೇಷಣೆ, ವಿವೇಚನೆಯನ್ನು ಮೀರಿದ್ದು ಎಂದೇ ನಮಗನಿಸುತ್ತಿತ್ತು.

ಮೊತ್ತ ಮೊದಲು ಸಿನಿಮಾ ನೋಡಿದಾಗ ವಯಸ್ಸು ಹತ್ತು ದಾಟಿತ್ತು. ವಿಷ್ಣುವರ್ಧನ್- ಸುಹಾಸಿನಿ ಅಭಿನಯದ ಬಂಧನ ನೋಡಿದ್ದಾದರೂ ಆಗ ಏನು ನೋಡಿದೆ, ಏನು ಕತೆಯಾಗಿತ್ತು ಎಂಬುದೊಂದೂ ನೆನಪಿಲ್ಲ. ಕತ್ತಲ ಕೋಣೆ ಯೊಳಗೆ, ಅಮ್ಮನ ತೋಳಿಗೆ ತೆಕ್ಕೆಬಿದ್ದು ಬೆರಗಿನಿಂದ ಬೆಳಕಿನ ಪರದೆಯನ್ನು ಕಂಡಿದ್ದೊಂದೇ ಈಗಲೂ ನೆನಪಿರುವುದು. ಅನಂತರ ಅದೆಷ್ಟೇ ಸಲ ಬಂಧನ ನೋಡಿದ್ದರೂ ಮೊತ್ತಮೊದಲ ರೋಮಾಂಚಕ ಅನುಭವ ಹಾಗೆಯೇ ಉಳಿದಿದೆ.

ಬಾಲ್ಯಕ್ಕೆ ಒಂದು ಮನರಂಜನೆಯ ಹಪಾಹಪಿ ಇದ್ದಾಗ ಹೈಸ್ಕೂಲು ಓದಲಿಕ್ಕಾಗಿ ಮಲೆನಾಡು ಬಿಟ್ಟು ಕರಾವಳಿ ತೀರದ ಊರುಗಳಿಗೆ ಹೋಗಬೇಕಾಗಿ ಬಂತು. ಮೊತ್ತಮೊದಲ ಬಾರಿ ಮನರಂಜನೆ ಪಡೆದುಕೊಳ್ಳುವ ಅವಕಾಶ ಮತ್ತು ಸ್ವಾತಂತ್ರ್ಯ ಸಿಕ್ಕ ಗಳಿಗೆ ಅದು. ಯಾಕೆಂದರೆ ಉಡುಪಿಯಂಥ, ಆಗಲೇ ಮುಂದುವರಿದಿದ್ದ ನಗರದಲ್ಲಿ ಸ್ವಲ್ಪ ದುಡ್ಡು ಖರ್ಚು ಮಾಡಿದರೆ ಮನರಂಜನೆ ಸಿಕ್ಕಲೇಬೇಕಿತ್ತು. ಹಾಗಾಗಿ ಆಗ ಸಾಲು ಸಾಲಾಗಿ ಒಂದೇ ವರ್ಷದ ಅವಧಿಯಲ್ಲಿ ಹೆಚ್ಚು ಕಡಿಮೆ ಮೂವತ್ತು ಸಿನಿಮಾಗಳನ್ನಾದರೂ ನೋಡಿರಬಹುದು. ಡಾ. ರಾಜ್, ವಿಷ್ಣುವರ್ಧನ್ ಅವರಿಂದ ಶಶಿಕುಮಾರ್, ಸುನೀಲ್‌ವರೆಗೆ, ಮಾಲಾಶ್ರೀಯಿಂದ ಶ್ರುತಿಯವರೆಗೆ ಎಲ್ಲರ ಸಿನಿಮಾಗಳಲ್ಲೂ ಮನರಂಜನೆ. ಫೈಟ್, ತಂತ್ರ ಪ್ರತಿತಂತ್ರ, ಪ್ರೀತಿ ಪ್ರೇಮ ಪ್ರಣಯ, ಗೋಳು. ಕೊನೆಯಲ್ಲಿ ನಾಯಕತ್ವಕ್ಕೆ ಗೆಲುವು, ಅನ್ಯಾಯಕ್ಕೆ ಸೋಲು. ಕೋಪ, ತಾಪ, ಅಳು, ನಗು, ನೋವು, ನಲುವುಗಳೆಲ್ಲಾ ಕಣ್ಣೀರಾಗಿ, ಮೈ ಬಿಸಿಯಾಗಿ, ಹೊಮ್ಮುವ ಉತ್ಸಾಹವಾಗಿ, ಕಣ್ಣ ಮಿಂಚಾಗಿ, ಹಲ್ಲು ಕಡಿವ ಆಕ್ರೋಶವಾಗಿ ಕೊನೆಗೆ ಶುಭಂ ಬಂದೊಡನೆ ಎಲ್ಲವೂ ತಣ್ಣಗಾಗಿ ನಾವು ಚಿತ್ರಮಂದಿರದಿಂದ ಹೊರ ಬೀಳುತ್ತಿದ್ದವು.

ನಿಜವಾದ ಮನರಂಜನೆ ಯಾವುದು?

ಯಾರದೋ ಮನೆಗೆ ಟೀವಿ ನೋಡಲಿಕ್ಕೆ ಅಂತ ಹೋಗಿ, ಆಗಲೇ ಆ ಸಿನಿಮಾ ಶುರುವಾಗಿತ್ತೆಂದು ಬೇಜಾರು ಮಾಡಿಕೊಂಡು, ಕಡೆಗೂ ಅಲ್ಲಿಂದ ಅರ್ಧದಲ್ಲೇ ಎದ್ದು ಬರಬೇಕಾಗಿ ಬಂದು ಡಾ. ರಾಜ್ ಅಭಿನಯದ ಜೇಡರ ಬಲೆಯನ್ನು ಅರೆ ಅರೆಯಾಗೇ ಅನುಭವಿಸಿದಾಗ ಸಿಕ್ಕ ಮನರಂಜನೆಯೇ ನಿಜಕ್ಕೂ ರೋಮಾಂಚಕ. ಎರಡು ಸಲ ಪ್ರಸಾರವಾದರೂ ಎರಡೂ ಸಲವೂ ದೂರದರ್ಶನದಲ್ಲಿ ಕರೆಂಟು ಹೋಗಿ ಅಡಚಣೆಗಾಗಿ ವಿಷಾದಿಸುತ್ತೇವೆ’ ಫಲಕ ನೋಡಿಕೊಂಡೇ ಕೊನೆಗೂ ಸರಿಯಾಗಿ ನೋಡಲಾಗದ ಹೊಸ ನೀರು’ ಸಿನಿಮಾ. ದೂರದರ್ಶನದಲ್ಲಿ ಕರೆಂಟ್ ಇದ್ದರೂ ಆ ಊರಲ್ಲಿ ಕರೆಂಟ್ ಕೈಕೊಟ್ಟು ಕೊನೆಗೂ ನೋಡಲಿಕ್ಕೇ ಆಗದ ಶೋಲೆ’, ಗಂಧದ ಗುಡಿ’ ಸಿನಿಮಾಗಳು ಈಗಲೂ ನಮ್ಮೊಳಗೊಂದು ಅದ್ಭುತ ಮನರಂಜನೆಯನ್ನೇ ಒದಗಿಸುತ್ತಿವೆ. ಆ ಎಲ್ಲಾ ಚಿತ್ರಗಳ ಕೊನೆ ನೋಡಿದ್ದರೆ, ಪ್ರಾರಂಭದಲ್ಲಿ ಏನಾಯಿತೆಂದು ಗೊತ್ತಾಗಿಬಿಟ್ಟಿದ್ದರೆ, ಸಂಪೂರ್ಣ ಸಿನಿಮಾ ನಮ್ಮ ಕಣ್ಣೆದುರು ನಡೆದೇ ಹೋಗಿದ್ದರೆ ಅಲ್ಲಿಗೆ ಮನರಂಜನೆ ನಿಂತೇ ಹೋಗುತ್ತಿತ್ತು. ಅದನ್ನು ಇಡಿಯಾಗಿನ ನೋಡಿದ ತೃಪ್ತಿಯೊಂದಿಗೆ ನಾವು ಆ ಸಿನಿಮಾವನ್ನು ಮರೆತೇಬಿಡುತ್ತಿದ್ದೆವೇನೋ? ಸಂಪೂರ್ಣ ನೋಡಿದ ಅದೆಷ್ಟೋ ಸಿನಿಮಾಗಳು ನನಗೆ ಈಗಲೂ ನೆನಪಿಲ್ಲ. ಸದ್ಯ ಅಷ್ಟೂ ನೋಡಲಾಗದ ಅದೆಷ್ಟೋ ಸಿನಿಮಾಗಳು ಈಗಲೂ ನನ್ನೊಳಗಿನ ಚಿತ್ರಮಂದಿರದಲ್ಲಿ ಪ್ರಸಾರ, ಮರು ಪ್ರಸಾರ ಆಗುತ್ತಲೇ ಇವೆ. ಆ ಚಿತ್ರಗಳ ನಿಜವಾದ ಪ್ರಾರಂಭಕ್ಕಿಂತ ನಾನು ಕಲ್ಪಿಸಿಕೊಳ್ಳುವ ಬೇರೆ ಬೇರೆ ಥರದ ಪ್ರಾರಂಭವೇ ಹೆಚ್ಚು ಮನರಂಜನಾತ್ಮಕ, ಅಂತ್ಯ ಹೆಚ್ಚು ಸುಂದರ, ಆ ಕತೆಗಳು ಮಧ್ಯೆ ಮಧ್ಯೆ ನನ್ನೊಳಗಷ್ಟೇ ಪಡೆದುಕೊಂಡ ಗತಿ, ತಿರುವುಗಳೇ ಹೆಚ್ಚು ಎಂಟರ್‌ಟೈನಿಂಗ್ ಆಗಿ ಕಾಣುತ್ತಿವೆ.
ಹಾಗಾಗಿ ಆ ಎಲ್ಲಾ ಅಡಚಣೆಗಳಿಗೆ ಯಾರೂ ವಿಷಾದಿಸಬೇಕಾಗಿ ಇಲ್ಲ.

* * *
ವಯಸ್ಸು ಇಪ್ಪತ್ಮೂರು, ಇಪ್ಪತ್ನಾಲ್ಕು ದಾಟುವವರೆಗೂ ಸಿನಿಮಾ ಹೀಗೆ ಮನರಂಜನೆಯಾಗಿಯೇ ಇತ್ತು. ಓದಿನ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ಕಣ್ತಪ್ಪಿಸಿ, ಬೆಂಗಳೂರಿಗೆ ಬಂದ ಮೇಲಂತೂ ಧೈರ್ಯವಾಗಿ ಸಿನಿಮಾವನ್ನು ನೋಡುವ ಪರಿಪಾಠವಿತ್ತು. ನಿಜಕ್ಕೂ ನಮಗೆ ಆ ಒಂದು ಸಿನಿಮಾದಿಂದ ಮನರಂಜನೆ ಹೇಗೆ ದೊರೆಯುತ್ತಿದೆ ಎಂಬ ಅರಿವೇ ಆಗುತ್ತಿರಲಿಲ್ಲ. ನಾಯಕ ಸರ್ವಾಂತರ್ಯಾಮಿ ದೇವರಂತೆ ಇರಬೇಕಾ? ನಾಯಕಿ ಸುರಸುಂದರಿ ದೇವತೆಯಂತೆ ಇರಬೇಕಾ? ಖಳನೆಂದರೆ ಕಾಟ ಕೊಡಬೇಕಾ? ಅತ್ತೆಯೆಂದರೆ ಸೊಸೆಗೆ ತಾಟಕಿಯೂ, ಅಮ್ಮನೆಂದರೆ ಮಗ, ಮಗಳಿಗೆ ದೇವತೆಯೂ ಆಗಿ ಇರಬೇಕಾ? ಹೀಗಿದ್ದರೆ ನಮಗೆ ಗೊತ್ತಿಲ್ಲದೇ ನಮ್ಮೊಳಗೆ ಕುಳಿತು ನೋಡುವ ಪ್ರೇಕ್ಷಕನಿಗೆ ಮನರಂಜನೆ ಸಿಗುತ್ತಿರುತ್ತದಾ? ಏನೋ ಇಲ್ಲ ಎಂಬಂಥ ಭಾವ, ಇದಲ್ಲ, ಮತ್ಯಾವುದೋ ಎಂಬ ಅತೃಪ್ತಿ.

ಆಗ ಸಿನಿಮಾವನ್ನು ಕಲೆಯಾಗಿ ನೋಡುವ ಪ್ರಯತ್ನ ಶುರುವಾಯಿತು. ಇದೇಕೆ ಹೀಗೇ ಇರಬೇಕು ಎಂಬ ತರ್ಕ ಶುರುವಾಯಿತು. ಈ ಚಿಂತನೆಗಳೂ ಶುರುವಾಗಿದ್ದು ಸಾಹಿತ್ಯದ ಓದಿನಿಂದಲೇ ಇರಬಹುದು. ರಾಮಾಯಣದಲ್ಲಿ ಮಂಥರೆ ಕೆಟ್ಟವಳಾಗಿದ್ದವಳು, ರಾಮಾಯಣ ದರ್ಶನಂಗೆ ಬರುವಾಗ ಮಮತೆಯ ಸುಳಿ’ ಆದಳು. ನಾವೆಲ್ಲಾ ವ್ಯಾಸನಲ್ಲಿ ಓದಿದ ಪಾತ್ರಗಳೆಲ್ಲಾ ಕುಮಾರವ್ಯಾಸನ ಹತ್ತಿರ ಬರುವಾಗ ಬೇರೆಯದೇ ಆಗಿ ಕಂಡವು. ಒಳ್ಳೆಯದು ಕೆಟ್ಟದಾಗಿಯೂ, ಕೆಟ್ಟದ್ದು ಒಳ್ಳೆಯದಾಗಿಯೂ ನಮ್ಮ ನಮ್ಮ ವಯಸ್ಸು, ಅನುಭವಕ್ಕೆ ತಕ್ಕಂತೆ ಸ್ಥಿತಿ ಬದಲಿಸಿಕೊಂಡವು.

ನಾವು ಸಿನಿಮಾವನ್ನು ಹೇಗೆ ನೋಡಬೇಕು, ನಮಗೆ ಸಿನಿಮಾ ಹೇಗಿರಬೇಕು ಎಂದು ನಮ್ಮಷ್ಟಕ್ಕೆ ನಾವೇ ಆಲೋಚಿಸುವುದಕ್ಕೆ ತೊಡಗಿದೆವು. ಆಗ ನಮ್ಮಂಥ ದೈನಂದಿನ ಕಷ್ಟ, ನಷ್ಟ, ನೋವು, ಸಾವುಗಳನ್ನು ಎದುರಿಸುವವರೆದುರು ತೊಡೆ ತಟ್ಟುವ ನಾಯಕ ಅಸಹಾಯಕನಾಗಿ ಕಂಡ. ನಾವು ಅವನನ್ನು ಆಗಲೇ ಇಂಟರ್ವ್ಯೂನಲ್ಲಿ ನೋಡಿದ್ದೆವು, ಸಿನಿಮಾದಲ್ಲಿ ಅದ್ಭುತವಾಗಿ ಮಾತು ಒಪ್ಪಿಸುವವ ಎದುರಿಗೆ ಕೂತು ಮಾತಾಡುವಾಗ ಅದೆಷ್ಟು ಬೋರಾಗಿ ಮಾತಾಡುತ್ತಾನೆಂದು ಬೇಜಾರುಪಟ್ಟುಕೊಂಡೆವು. ಸಿನಿಮಾದಲ್ಲಿ ನೋಡಿ, ಸುರಸುಂದರಿಯೆಂದು ರೋಮಾಂಚನಗೊಂಡಿದ್ದವರು ನಿಜವಾಗಿ ನೋಡಿ, ಅಯ್ಯೋ ಎಷ್ಟು ಕಪ್ಪು ಎಂದು ಭ್ರಮನಿರಸನಗೊಂಡೆವು. ತೆರೆಯ ಮೇಲೆ ಹಾಸ್ಯ ಮಾಡುವ ವ್ಯಕ್ತಿ, ಎದುರಿಗೆ ಹಾಸ್ಯಾಸ್ಪದವಾಗಿಯೇ ತೋರಿದ.

ಸಿನಿಮಾ ಮನರಂಜನೆಯೇ ಆಗುತ್ತಿಲ್ಲ ಎಂದು ನಿಧಾನವಾಗಿ ಅನಿಸಿತು. ನಮ್ಮೊಳಗಿನ ಕಲ್ಪನೆಯ ಸಿನಿಮಾಗಳ ಎದುರು ತೆರೆಯ ಸಿನಿಮಾಗಳು ಅರೆಬರೆಯಾಗಿಯೂ ರೋಮಾಂಚನ ಹುಟ್ಟಿಸದೇ ಬಟಾಬಯಲಾದವು.

* * *
ಸಿನಿಮಾ ಮನರಂಜನೆ ಅಲ್ಲ ಎಂಬ ತೀರ್ಮಾನ ಆಗಿದ್ದೂ ಇಂಥ ಹೊತ್ತಲ್ಲೇ. ಮನರಂಜನೆ ಎಂದರೇನು ಎಂಬುದೂ ಇಲ್ಲೇ ಪ್ರಶ್ನೆಯಾಯಿತು. ರಂಜನೆ ಎಂದರೆ ಸಂತೋಷದ ಸ್ಥಿತಿ. ಆ ಸಂತೋಷಕ್ಕೆ ಸ್ವಲ್ಪವಾದರೂ ಸಹಜತೆ, ನೈಜತೆ ಬೇಡವೇ? ರಸ ಸಿದ್ಧಾಂತದಲ್ಲಿ ಬರುವ ಎಲ್ಲಾ ಅಂಶಗಳನ್ನೂ ನಾವು ಸಿನಿಮಾಕ್ಕೂ ಆರೋಪಿಸಿ ಪ್ರಯೋಗಗಳನ್ನು ಮಾಡಬೇಕಾಗಿತ್ತು. ಒಂದು ಕಾವ್ಯವೂ ಮನರಂಜನೆ, ಒಂದು ಕಲಾಕೃತಿಯನ್ನು ನೋಡಿದಾಗಲೂ ಸಿಗುವುದು ಮನರಂಜನೆಯೇ. ಒಂದು ಒಳ್ಳೆಯ ಪುರಾಣ ಪ್ರವಚನ, ಭಾಷಣ, ಯಕ್ಷಗಾನಗಳೂ ಮನರಂಜನೆಯೇ. ಆದರೆ ಅದು ಮನರಂಜನೆ ಕೊಡುತ್ತಾ ಕೊಡುತ್ತಾ ನಮ್ಮ ಒಳಗೆ ಯಾವುದೋ ಸಾಕ್ಷಾತ್ಕಾರವನ್ನು ನೀಡುತ್ತಾ ಹೋಗುತ್ತವೆ. ಇದೇ ಸಿನಿಮಾದಂತೆ ಯಕ್ಷಗಾನದಲ್ಲೂ ರಾಜ, ರಾಣಿ, ಭವ್ಯತೆ, ಶ್ರೀಮಂತಿಕೆ, ಭ್ರಮೆಗಳಿರುತ್ತವೆ. ಆದರೆ ಯಾವ ಸಿನಿಮಾ ಅಥವಾ ಯಕ್ಷಗಾನ ಪ್ರಸಂಗ ಬೆಳಕು ಹರಿಯುತ್ತಲೇ ನಮ್ಮೊಳಗಿನ ತಿಳುವಳಿಕೆಯನ್ನು, ಜ್ಞಾನವನ್ನು, ಅರಿವನ್ನು ವಿಸ್ತರಿಸುವುದಿಲ್ಲವೋ ಅಂಥ ಪ್ರಸಂಗಗಳ ಮನರಂಜನೆ, ಮನರಂಜನೆಯಾಗಿ ದೀರ್ಘ ಕಾಲ ಉಳಿದಾವೇ?

ಸಿನಿಮಾದ ಮನರಂಜನೆ ಪ್ರಶ್ನಾರ್ಹವಾಗಿ ತೋರತೊಡಗಿದ್ದೂ ಹೀಗೇ. ಆದರೆ ಪ್ರಶ್ನೆಯೇನೋ ಹುಟ್ಟಿತು, ಆದರೆ ಅದಕ್ಕೆ ಉತ್ತರವೆಲ್ಲಿದೆ?
ಉತ್ತರ ಅಲ್ಲೇ ಇತ್ತು. ನಾವೊಂದು ಸೋ ಕಾಲ್ಡ್ ಮನರಂಜನಾತ್ಮಕ ಸಿನಿಮಾವನ್ನು ನೋಡಿ ಬಂದ ಮೇಲೆ ನಮ್ಮೊಳಗೇ ಬೆಳೆಯುತ್ತಿದ್ದ ಕತೆ, ಚಿಂತನೆಗೂ ಇನ್ಯಾವುದೋ ಒಳ್ಳೆಯ, ಕ್ಲಾಸಿಕ್ ಎಂಬ ಚಿತ್ರ ನೋಡಿದಾಗ ಹುಟ್ಟುವ ಚಿಂತನೆ, ಕಥಾ ಬೆಳವಣಿಗೆಗೂ ವ್ಯತ್ಯಾಸ ಕಾಣುತ್ತಲೇ ಇತ್ತು. ತಬರನ ಕತೆಯನ್ನು ಒಮ್ಮೆ ನೋಡಿದ್ದಷ್ಟೇ. ಬಾಲ್ಯದಲ್ಲೇ ನೋಡಿದ ಅದನ್ನು ಈವರೆಗೂ ಇನ್ನೊಮ್ಮೆ ನೋಡ ಲಾಗಲಿಲ್ಲ. ಆದರೆ ಆ ಕತೆಯ ದೃಶ್ಯ ದೃಶ್ಯಗಳು ಕುಳಿತುಬಿಟ್ಟಿವೆ. ಡಾ. ರಾಜ್ ಅಭಿನಯದ ಭಕ್ತ ಕುಂಬಾರ, ಪುಟ್ಟಣ್ಣ ಕಣಗಾಲರ ರಂಗನಾಯಕಿ’ ದೂರದರ್ಶನದ ಪ್ರಾದೇಶಿಕ ಭಾಷಾ ಚಲನಚಿತ್ರ ವಿಭಾಗದಲ್ಲಿ ನೋಡಿದ್ದು. ಯಾವುದೆಲ್ಲಾ ಸಾರ್ವಕಾಲಿಕ ಒಳ್ಳೆಯ ಚಿತ್ರವೋ ಅದೆಲ್ಲಾ ಮನಸ್ಸನ್ನು ಆವರಿಸಿದೆ, ನಮ್ಮ ವಯೋಮಾನಕ್ಕನುಗುಣವಾಗಿ ನಮ್ಮೊಳಗೆ ಹುಟ್ಟುವ ಪ್ರಶ್ನೆಗಳಿಗೆ ಅದೆಲ್ಲಾ ಉತ್ತರದಂತೆ ಯಾವತ್ತೋ ಎದುರಾಗಿವೆ. ಸಿನಿಮಾ ರಂಜನೆಯ ಆಹಾರ ವಾಗಿದ್ದು ಸಾಕ್ಷಾತ್ಕಾರ ಆಗಿ ಬದಲಾಗಿದ್ದು ಇಂಥ ಯಾವುದೋ ಒಂದು ಕ್ಷಣದಲ್ಲಿ.

* * *
ಈ ಚಿಂತನೆ ಒಳಗೆ ಹುಟ್ಟಿಕೊಂಡಾಗ ಸ್ನೇಹಿತರ ವರ್ಗದಿಂದ ಆದ ದೊಡ್ಡ ಉಪಕಾರ ವಿಶ್ವ ಸಿನಿಮಾಗಳನ್ನು ಕಾಣುವ ಅವಕಾಶ. ಸಿನಿಮಾ ಪ್ಯಾರಡಿಸೋ’ ಎಂಬ ಇಟಾಲಿಯನ್ ಸಿನಿಮಾ, ಚಲನಚಿತ್ರಗಳ ಕುರಿತಾದ ಮೂಲಭೂತ ಆಲೋಚನೆಗಳನ್ನೇ ಬದಲಿಸಿತು. ನಾನು ಹುಟ್ಟಿ ಎಂಟು ವರ್ಷಗಳ ನಂತರ ಬಿಡುಗಡೆಯಾದ ಗುಸೆಪ್ಪೆ ಟೊರ್ನೆಟೋರೆ ನಿರ್ದೇಶನದ ಈ ಚಿತ್ರವನ್ನು ನೋಡಲು ಅವಕಾಶವಾಗಿದ್ದು ನಾನು ಹುಟ್ಟಿ ಇಪ್ಪತ್ನಾಲ್ಕು ವರ್ಷಗಳ ಬಳಿಕ.
ಅದು ಬರೀ ಇಟಲಿಯ ಕತೆಯಲ್ಲ. ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಮಿಲಿಟರಿಗೆ ಹೋದ ಯೋಧನೊಬ್ಬನ ಮಗನ ಹಳ್ಳಿಯ ಕತೆ ಅದು. ಮುಂಬೈಗೋ, ಬೆಂಗಳೂರಿಗೋ ಹೋದ ಗಂಡನ ಬರುವಿಗಾಗಿ ಕಾಯುತ್ತಾ, ಮಗನನ್ನು ಸಲಹುತ್ತಿರುವ ನಮ್ಮಮ್ಮನ ಕತೆಯೂ ಆಗಿರಬಹುದು ಅದು. ಆ ಪುಟ್ಟ ಹುಡುಗ ಸಿನಿಮಾದ ಉತ್ಕಟ ಪ್ರೇಮಿ. ಮತ್ತೆ ಅದೂ ನಮ್ಮ ನಿಮ್ಮಂತೇ. ಪ್ರೊಜೆಕ್ಷನ್ ಬಿಡುವ ಮುದುಕ ಎಂದರೆ ಅವನಿಗೆ ಪಂಚಪ್ರಾಣ. ಅವನ ಮೂಲಕ ತನ್ನ ಸಣ್ಣ ಕಣ್ಣುಗಳಲ್ಲಿ ಸಿನಿಮಾ ಎಂಬ ದೊಡ್ಡ ಮಾಧ್ಯಮದ ಬಗ್ಗೆ ಫಸ್ಟ್ ಹ್ಯಾಂಡ್ ಇನ್ ಫರ್ಮೇ ಷನ್ ಪಡೆಯುತ್ತಾನೆ. ನಮ್ಮಂತೇ ಸಿನಿಮಾಗಳನ್ನು ರಂಜನೆಯ ಮಾನದಂಡವಾಗಿಯೇ ನೋಡುತ್ತಾನೆ, ನಮ್ಮಂತೆ ಸಿನಿಮಾಗಳು ಹುಟ್ಟಿಸುವ ಲೈಂಗಿಕ ಕುತೂಹಲಗಳನ್ನು ಹರೆಯದ ಬಾಗಿಲಲ್ಲಿ ನಿಂತು ಕಾಣುತ್ತಾನೆ. ಬಹುಶಃ ನಾವೆಲ್ಲಾ ಬಾಲ್ಯದಲ್ಲಿ ಕನಸು ಕಂಡಿರುವಂತೆ ನಾನು ಮುಂದೆ ಸಿನಿಮಾ ಪ್ರೊಜೆಕ್ಟರ್ ಆಗುತ್ತೇನೆ. ಯಾಕೆಂದರೆ ಹಾಗಾದರೆ ಯಾವಾಗಲೂ ಸಿನಿಮಾ ನೋಡುತ್ತಾ ಇರಬಹುದು’ ಎಂದು ಬಯಸುತ್ತಾನೆ. ಆದರೆ ಆ ಮುದುಕ ಈತನನ್ನು ಕಟ್ಟುನಿಟ್ಟಿನಿಂದ ಸಿನಿಮಾ ಹುಚ್ಚನ್ನು ಬಿಡಿಸುತ್ತಾನೆ. ಮಿಲಿಟರಿಗೆ ಸೇರಲೇಬೇಕೆಂದು ಒತ್ತಾಯಿಸುತ್ತಾನೆ. ಮಿಲಿಟರಿ ಒಗ್ಗದೇ ಹೊರಳಿ ಮನೆಗೆ ಬಂದಾಗ ಇನ್ನೊಮ್ಮೆ ಹೀಗೆ ಬಂದರೆ ನಾನು ನಿನಗೆ ಮುಖವನ್ನೂ ತೋರಿಸುವುದಿಲ್ಲ’ ಎಂದು ಬೆದರಿಸುತ್ತಾನೆ. ಕೊನೆಗೆ ಆ ಹುಡುಗ ಸಿನಿಮಾದ ಮನರಂಜನೆಯ ಭ್ರಮೆಗಳನ್ನೆಲ್ಲಾ ಕಳಚಿಕೊಂಡು, ಸಿನಿಮಾ ಒಂದು ಜೀವನಾನುಭವ ಎಂಬ ಸಾಕ್ಷಾತ್ಕಾರದ ಬಾಗಿಲಿಗೆ ಬಂದು ನಿಲ್ಲುತ್ತಾನೆ. ದೊಡ್ಡ ನಿರ್ದೇಶಕನಾಗಿರುತ್ತಾನೆ. ತಾನು ಯೌವನದ ಉತ್ಕರ್ಷದಲ್ಲಿ ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲಿಕ್ಕಾಗದೇ, ತಾನು ಮದುವೆಯಾಗಿರುವ ಹುಡುಗಿಯನ್ನು ಪ್ರೀತಿಸಲಿಕ್ಕಾಗದೇ ಒದ್ದಾಡುತ್ತಾ ಉಳಿಯುತ್ತಾನೆ.

ಅಂಥ ಹುಡುಗ ಮತ್ತೆ ಹಳ್ಳಿಗೆ ಬಂದು ಇಳಿದಾಗ ಆ ಪ್ರೊಜೆಕ್ಷನ್ ಆಪರೇಟರ್ ಮುದುಕ ಸತ್ತಿರುತ್ತಾನೆ, ಅವನು ಸಿನಿಮಾ ನೋಡಿ ಬೆಳೆದ ಸಿನಿಮಾ ಪ್ಯಾರಡಿಸೋ’ ಚಿತ್ರಮಂದಿರ ಒಡೆದುರುಳಿ, ಆ ಜಾಗದಲ್ಲಿ ಕಮರ್ಶಿಯಲ್ ಕಾಂಪ್ಲೆಕ್ಸ್ ಒಂದು ತಲೆ ಎತ್ತುವ ಸಿದ್ಧತೆ ನಡೆದಿರುತ್ತದೆ.ಬದಲಾದ ಜನರ ಮಧ್ಯೆ, ಸಿನಿಮಾ ಬಗೆಗಿನ ಬದಲಾದ ದೃಷ್ಟಿಕೋನದ ಹುಡುಗ ಆತ. ಅಷ್ಟರಲ್ಲಿ ಸಿನಿಮಾ ಮೂಕಿಯಿಂದ ಟಾಕಿ ಆಗಿರುತ್ತದೆ, ಟಾಕಿಯಿಂದ ಇನ್ನೂ ಮುಂದೆ ಮುಂದೆ ಬೆಳೆದು ಬಂದಿರುತ್ತದೆ. ಸಿನಿಮಾ ನೋಡುವ ವರ್ಗವಾಗಿ ದ್ದವ, ಸಿನಿಮಾ ಮಾಡುವ ವರ್ಗವಾಗಿ ಆ ಹುಡುಗ ಬೆಳೆದಿರುತ್ತಾನೆ.

-ಇದನ್ನು ನೋಡಿದ ಆರು ವರ್ಷಗಳ ನಂತರವೂ ಮರೆಯಲಿಕ್ಕಾಗುತ್ತಿಲ್ಲ. ಸಿನಿಮಾ ಒಂದು ಮನರಂ ಜನೆಯ ಮಾಧ್ಯಮವನ್ನಾಗಿ ನೋಡುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಹಾಗಾಗಿ ನಿರಂತರ ಹುಡುಕಾಟವೊಂದು ಈ ಸಿನಿಮಾ ಕಾಂಕ್ಷಿಯೊಳಗೆ ಮೂಡಿದೆ. ಪ್ಯಾರಡೈಸ್ ನೌ’ ಎಂಬ ಪ್ಯಾಲಸ್ತೇನಿಯನ್ ಸಿನಿಮಾದಲ್ಲಿ ಇಬ್ಬರು ಆತ್ಮಹತ್ಯಾ ದಳದ ಹುಡುಗರು ಎದು ರಾದರು. ಭಯೋತ್ಪಾದನೆಯ ಹೆಸರಲ್ಲಿ ಬಲಿ ಆಗುವವರೆಲ್ಲಾ ಆ ಆತ್ಮಹತ್ಯಾದಳದ ಮುಗ್ಧ ಹುಡುಗರಂತೆ ಪ್ರಾಣ ತ್ಯಾಗದ ಬಲಿಪೀಠಕ್ಕೆ ಹೋಗುತ್ತಿರ ಬಹುದೇ ಎಂಬ ಸಾಕ್ಷಾತ್ಕಾರ ಆ ಸಿನಿಮಾದಿಂದ ಆಯಿತು.

ಚೀನಿ ಸಿನಿಮಾ ನಾಟ್ ಒನ್ ಲೆಸ್’ನಲ್ಲಿ ಎಸ್ಸೆಸ್ಸೆಲ್ಸಿ ಓದಿದ ಹುಡುಗಿಯೊಬ್ಬಳು ತಿಂಗಳ ಮಟ್ಟಿಗೆ ಹಳ್ಳಿಯೊಂದರ ಶಾಲೆಗೆ ಪಾಠ ಮಾಡಲು ಬಂದು, ಅದರಲ್ಲೊಬ್ಬ ಹುಡುಗ ಕಾಣೆಯಾದಾಗ ತಾನಾರೆಂಬುದನ್ನೇ ಮರೆತು, ಊರೂರು ಅಲೆದು ಹುಡುಕಿ ಅವನನ್ನು ಕರೆತರುವಾಗ ನಮ್ಮ ಟೀಚರ್‌ಗಳೆಲ್ಲಾ ಅವಳ ಕರ್ತವ್ಯ ನಿಷ್ಠೆಯಲ್ಲಿ ಪ್ರತಿಫಲಿಸುತ್ತಿರುವಂತೆ ಭಾಸವಾಯಿತು. ಪಾರ್ಸಿ ಸಿನಿಮಾ ದಿ ಸರ್ಕಲ್’ ನೋಡಿದಾಗ ಜಗತ್ತಿನ ಸಾಂಪ್ರದಾಯಿಕ ಕುಟುಂಬದ ಹೆಣ್ಮಕ್ಕಳೆಲ್ಲಾ ಸಿಗರೇಟ್ ಸೇವನೆಯಂಥ ವೈಯಕ್ತಿಕ ಬಯಕೆಯನ್ನು ಈಡೇರಿಸಿಕೊಳ್ಳಲಾಗದೇ ಯಾರೂ ಕಾಣದ ಸ್ಥಳವೊಂದಕ್ಕೆ ಹುಡುಕಾಡುತ್ತಲೇ ಇರಬಹುದೆಂದು ದಿಗಿಲಾಯಿತು. ಹಾಲಿವುಡ್ ಸಿನಿಮಾ ನೋ ಮ್ಯಾನ್ಸ್ ಲ್ಯಾಂಡ್’ ನೋಡಿದಾಗ ನಾವೆಲ್ಲಾ ಯುದ್ಧವೆಂಬ ನೋ ಮ್ಯಾನ್ಸ್ ಲ್ಯಾಂಡ್ (ಯಾರಿಗೂ ಸೇರದ ಸ್ಥಳ)ದಲ್ಲಿದ್ದೇವೇನೋ ಅನ್ನಿಸಿತು. ಅಂದರೆ ಯುದ್ಧದಲ್ಲಿ ಬೇಕಿರುವುದು ಜಯ ಮಾತ್ರ. ಆ ಜಯ ಅಥವಾ ಅಪಜಯದ ಮಧ್ಯೆ ಯಾರಿಗೂ ಸೇರದವರಂತೆ ಹತಾಶವಾಗಿ ಇರುವುದು ಒಬ ಕಾಮನ್‌ಮ್ಯಾನ್ ನ ಸಾವು ಅಥವಾ ಬದುಕು. ಇರಾನಿನ ಚಿಲ್ಡ್ರನ್ ಆಫ್ ಹೆವನ್’, ಕಲರ್ ಆಫ್ ಪ್ಯಾರಡೈಸ್’ ಸಿನಿಮಾಗಳೆಲ್ಲಾ ಕೆಲವೊಮ್ಮೆ ನಮ್ಮ ಗೊಡವೆಗಳಂತೆ, ಕೆಲವೊಮ್ಮೆ ಅದೇ ಗೊಡವೆಗಳ ನಡುವಿನ ಸುಂದರ ಆಶಾವಾದದಂತೆ ಕಾಣುತ್ತದೆ.

ನಿನ್ನೆ ಇದ್ದ ವ್ಯಕ್ತಿ ಇವತ್ತು ಇನ್ನೊಂದು ಸಿನಿಮಾ ನೋಡುತ್ತಲೇ ಹೊಸದಾಗಿ ಹುಟ್ಟಿಕೊಳ್ಳಬಹುದು. ರಾತ್ರಿಯ ಸಿನಿಮಾ ವೀಕ್ಷಣೆಯ ಕೊನೆಗೆ ಹುಟ್ಟುವ ನಾಳೆಗಳಲ್ಲಿ ಹೊಸದಾಗಿ, ಹೊಸ ಕಣ್ಣು, ಬುದ್ಧಿಗಳಿಂದ ಬೀದಿಗೆ ಬೀಳಬಹುದು.
ಒಂದು ಸಾಕ್ಷಾತ್ಕಾರದ ನಿಟ್ಟುಸಿರಲ್ಲಿ ಹೊಸ ಬೆಳಕಿನ, ಹೊಸ ಕನಸಿನ ರುಚಿ ಇದೆ. ಹಳೆ ತಂಗಾಳಿಯಲ್ಲೂ ಒಂದು ಹೊಸ ಸುವಾಸನೆ ನಮಗೆ ಮಾತ್ರ ಬರುತ್ತದೆ. ಸಿನಿಮಾ ಪ್ರತಿಯೊಬ್ಬನಿಗೂ ಇದೇ ಸಾಕ್ಷಾತ್ಕಾರವಾದಾಗ ಆ ಪರಿಮಳ, ಆ ರುಚಿ ಎಲ್ಲರದೂ ಆಗಬಹುದು.

ಸಿನಿಮಾ ಸಾಕ್ಷಾತ್ಕಾರ ಸಾಂಕ್ರಾಮಿಕ ರೋಗವಾದರೆ ಎಷ್ಟು ಚೆನ್ನ?