ಪರಮೇಶ್ ಗುರುಸ್ವಾಮಿಯವರ ಸಿನಿಮಾ ಸಂಸ್ಕಾರ ಲೇಖನದ ಎರಡನೇ ಭಾಗ. ಕೊನೆ ಕಂತು ನಾಳೆ ಪ್ರಕಟವಾಗಲಿದೆ. ಓದಿ ಅಭಿಪ್ರಾಯಿಸಿ.

ಹೀಗೆ ಜಗತ್ತಿನಾದ್ಯಂತ ಪ್ರಭಾವ ಬೀರಿದ ಇಟಲಿಯ ನಿರ್ದೇಶಕರಲ್ಲಿ ಒಬ್ಬನಾದ ವಿಟ್ಟೋರಿಯ ಡಿ ಸಿಕಾನ ಬೈಸಿಕಲ್ ಥೀವ್ಸ್ ಚಿತ್ರದಿಂದ ಪ್ರಭಾವಿತರಾಗಿ ಸತ್ಯಜಿತ್ ರೇ, ಬೆಂಗಾಲಿಯಲ್ಲಿ ಪಥೇರ್ ಪಾಂಚಾಲಿ ಚಿತ್ರವನ್ನು ಮಾಡಿದರು. ಎರಡೂ ಚಿತ್ರಗಳನ್ನು ಗಮನಿಸಿದರೆ ಪಥೇರ್ ಪಾಂಚಾಲಿಯ ಮೇಲಾಗಿರುವ ಬೈಸಿಕಲ್ ಥೀವ್ಸ್ನ ಪ್ರಭಾವ ನಿಚ್ಚಳವಾಗಿ ಕಾಣುತ್ತದೆ. ಹೆಚ್ಚು ಕಡಿಮೆ ಅದೇ ಅಚ್ಚಿನಲ್ಲಿದೆ. ಆದರೆ ಡಿ ಸಿಕಾನ ಚಿತ್ರ ನಿರೂಪಣೆಯಲ್ಲಿರುವ ಲವಲವಿಕೆ ರೇ ಅವರಲ್ಲಿ ಕಂಡು ಬರುವುದಿಲ್ಲ. ವ್ಯವಸ್ಥೆಯೊಳಗೆ ಮನುಷ್ಯರು ಅನುಭವಿಸುವ ಅಸಹಾಯಕತೆಯಾಗಲಿ, ಬಡತನವಾಗಲಿ, ಆ ಅಸಹಾಯಕತೆ ಮತ್ತು ಬಡತನದ ನಡುವೆಯೇ ಪ್ರಕಟವಾಗುವ ಮನುಷ್ಯನ ಅದಮ್ಯ ಚೇತನವಾಗಲಿ ಬೈಸಿಕಲ್ ಥೀವ್ಸ್ನಲ್ಲಿ ಕಂಡು ಬರುವಂತೆ ಪಥೇರ್ ಪಾಂಚಾಲಿಯಲ್ಲಿ ಕಂಡು ಬರದು. ಆ ಚಿತ್ರ ಮನಸ್ಸನ್ನು ತಟ್ಟುವಂತೆ ಈ ಚಿತ್ರ ತಟ್ಟದು. ಡಿ.ಸಿಕಾನ ಪ್ರಭಾವ ಮತ್ತು ಪ್ರೇರಣೆಯಿಂದಾಗಿ ಪಾಶ್ಚಾತ್ಯ ರಸಾಸ್ವಾದ ಎರಕದಲ್ಲೆ ಇದೆ. ಸತ್ಯಜಿತ್ ರೇ ಅವರು, ಮೂಲಭೂತವಾಗಿ ಆತ ಬೆಂಗಾಲಿ ಚಿತ್ರ ನಿರ್ದೇಶಕ, ಬೆಂಗಾಲಿ ಕಲಾವಿದ- ನನಗಿಂತ ಹೆಚ್ಚಿನ ಬೆಂಗಾಲಿ ಎಂದು ಹೇಳಿರುವ ಅವರ ಸಮಕಾಲೀನ ಚಿತ್ರ ನಿರ್ದೇಶಕರಾದ ಋತ್ವಿಕ್ ಘಟಕ್, ಪೌರಾತ್ಯ ರಸಾಸ್ವಾದ ಎರಕದಲ್ಲಿ ಚಿತ್ರ ಮಾಡುತ್ತಿದ್ದರು. ದುರಂತವೆಂದರೆ ಅಂದು ಸಿನಿಮಾ ಬಗ್ಗೆ ಸೈದ್ಧಾಂತಿಕವಾಗಿ ಮಾತನಾಡುತ್ತಿದ್ದವರೆಲ್ಲ ಬೌದ್ಧಿಕವಾಗಿ ಮೆಕಾಲೆಯ ಮಕ್ಕಳೇ ಆಗಿದ್ದರು. ಪಾಶ್ಚಾತ್ಯರಿಂದ ಬಂದ ಸಿನಿಮಾ, ಪಾಶ್ಚಾತ್ಯ ರಸಾಸ್ವಾದ ಎರಕದಲ್ಲೇ ಇರುತ್ತದೆ, ಎಲ್ಲ ಕಲೆಗಳ ಹಾಗೆ ಇದೂ ಸಹ ತಾನು ನಿರ್ಮಾಣವಾಗುವ ದೇಶ ಕಾಲಗಳ ಸಂವೇದನೆಗಳಿಂದ ರೂಪುಗೊಳ್ಳುತ್ತದೆ ಎಂಬ ಅಂಶ ಅವರಿಗೆ ಅರ್ಥವಾಗಿರಲಿಲ್ಲ. ಆದ್ದರಿಂದ, ಘಟಕ್‌ಗೆ ಸಿನಿಮಾ ವ್ಯಾಕರಣವೇ ಗೊತ್ತಿಲ್ಲ. ಎಂದು ಟೀಕಿಸಿದರು.

ಇಂದಿಗೂ ಘಟಕ್‌ರವರ ಚಿತ್ರಗಳಮುಂದೆರೇ ಯವರಪ್ರಾರಂಭಿಕ ಚಿತ್ರಗಳುಪೇಲವ ಅನಿಸುತ್ತವೆ. ಭಾರತೀಯ ಮುಖ್ಯವಾಹಿನಿಯ ಚಿತ್ರಗಳಮೇಲೆ (ಬಹುಶಃ ಎಲ್ಲಭಾಷೆಗಳಲ್ಲೂ) ಘಟಕ್‌ರವರಪ್ರಭಾವಇದೆ. ಶತರಂಜ್ ಕೆ ಕಿಲಾರಿ(ಡಿ), ಘರೆ ಭಾಯ್‌ರೆ ಚಿತ್ರಗಳ ವೇಳೆಗೆ ರೇಯವರು ಪಾಶ್ಚಾತ್ಯ ರಸಾಸ್ವಾದ ಎರಕದಿಂದ ಪೌರಾತ್ಯ ಎರಕದತ್ತ ಪಯಣಿಸಿದ್ದರು. ರೇ ಯವರಲ್ಲಿನ ಈ ಬೆಳವಣಿಗೆಯನ್ನು ಗುರುತಿಸುವ ಪ್ರಯತ್ನಗಳು ಆಗಿಲ್ಲ.

ಪಥೇರ್ ಪಾಂಚಾಲಿ ಚಿತ್ರಕ್ಕೆ ಬಂದಿರುವಷ್ಟು ವಿವರಣೆ ವಿಶ್ಲೇಷಣೆಗಳು ಮತ್ಯಾವ ಭಾರತೀಯ ಚಿತ್ರಕ್ಕೂ ಬಂದಿಲ್ಲವೆನ್ನಬಹುದು. ಆರ್ಟ್ ಚಿತ್ರಗಳ ಈ ರೀತಿಯ ಮೆಕಾಲೆಯ ಮಕ್ಕಳಾಗೇ ಉಳಿದುಕೊಂಡಿರುವ ನನ್ನ ಹಲವು ಪರಿವ್ರಾಜಕ ಮಿತ್ರರನ್ನು ಬಹಳಷ್ಟು ಬಾರಿ ಕೇಳಿದ್ದೇನೆ, ನೀವು ಪಥೇರ್ ಪಾಂಚಾಲಿಗೆ ಕೊಡುವ ಪ್ರಾಶಸ್ತ್ಯವನ್ನು, ವಿವರಣೆ ವಿಶ್ಲೇಷಣೆಗಳನ್ನು ನಮ್ಮ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣ ಎನಿಸಬಹುದಾದ ಅದೇ ರೇಯವರ ಶತರಂಜ್ ಕೆ ಕಿಲಾಡಿ ಅಥವಾ ಘರೆ ಭಾಯ್‌ರೆಯಂಥ ಚಿತ್ರಗಳಿಗೆ ಯಾಕೆ ಕೊಡುವುದಿಲ್ಲ? ಎಂದು. ಇದುವರೆಗೂ ನನಗೆ ಆ ಪರಿವ್ರಾಜಕರಿಂದ ಸರಿಯಾದ, ಒಪ್ಪಬಹುದಾದ ಉತ್ತರ ಸಿಕ್ಕಿಲ್ಲ. ಆದರೆ ನನಗನಿಸುತ್ತದೆ, ಅವರಿಗೆ ಪಥೇರ್ ಪಾಂಚಾಲಿಯನ್ನು ವಿವರಿಸಲು ವಿಶ್ಲೇಷಿಸಲು ಮೊದಲೇ ಸಿದ್ಧವಿದ್ದ ಪಾಶ್ಚಾತ್ಯ ರಸಾಸ್ವಾದನಾ ಮೀಮಾಂಸೆಯಾಧಾರಿತ ಸಲಕರಣೆಗಳು ಮಾನದಂಡಗಳು ಅನಾಮತ್ತಾಗಿ ದೊರಕಿದ್ದುವು. ನಿಯೊರಿಯಲಿಸಂ ಚಿತ್ರಗಳಿಗೆ ಅನ್ವಯಿಸುವ ಮಾನದಂಡಗಳು ಸುಲಭವಾಗಿ ಪಥೇರ್ ಪಾಂಚಾಲಿಗೆ ಅನ್ವಯಿಸುವ ಹಾಗೆ ಶತರಂಜ್ ಕೆ ಕಿಲಾಡಿಗಾಗಲಿ ಘರೇಭಾಯ್‌ರೆಗಾಗಲಿ ಘಟಕ್‌ರವರ ಚಿತ್ರಗಳಿಗಾಗಲಿ ಅನ್ವಯಿಸಲಾಗದು, ಪೌರಾತ್ಯ ರಸಾಸ್ವಾದನಾ ಮೀಮಾಂಸೆಯಾಧಾರಿತ ಸಲಕರಣೆಗಳು ಮಾನದಂಡಗಳು ಆಗ ಸಿನಿಮಾಕ್ಕೆ ರೆಡಿಮೇಡ್ ಆಗಿ ಇರಲಿಲ್ಲ. ತಯಾರು ಮಾಡಿಕೊಳ್ಳಬೇಕಾದ ಅಗತ್ಯವೂ ಅವರಿಗೆ ಕಂಡು ಬರಲಿಲ್ಲ. ಈಗಲೂ ಮಾಡಿಕೊಂಡಿಲ್ಲ. ಆದ್ದರಿಂದಲೇ ಮುಖ್ಯವಾಹಿನಿಯ ಚಿತ್ರಗಳೂ ಅವುಗಳ ಜನಪ್ರಿಯತೆಯೂ ಅವರಿಗೆ ಅರ್ಥವಾಗಲಿಲ್ಲ.

ಜಗತ್ತಿನಾದ್ಯಂತ ಚರಿತ್ರೆಯನ್ನು ಗಮನಿಸಿದರೆ ಒಂದು ಪ್ರದೇಶ, ಜೀವನ ರೀತಿ, ಸಂಸ್ಕೃತಿ, ಭಾಷೆ, ಧರ್ಮ, ಇತ್ಯಾದಿಗಳ ಮೇಲೆ ಹೊರಗಿನಿಂದ ದಾಳಿ ಮಾಡಿ ಲೂಟಿ ಮಾಡಿ ಹೋದವರು, ಆಕ್ರಮಣ ಮಾಡಿ ಅಲ್ಲೇ ನೆಲೆಸಿ ಅಥವಾ ತಮ್ಮ ಪರವಾಗಿ ಯಾರನ್ನಾದರೂ ಉಸ್ತುವಾರಿಗೆ ನೇಮಿಸಿ ಆಡಳಿತ ನಡೆಸಿದವರಿದ್ದಾರೆ. ಇಂಥ ಸಂದರ್ಭಗಳಲ್ಲೆಲ್ಲ ಆಳುವವರ ಮತ್ತು ಆಳಿಸಿಕೊಳ್ಳುವವರ ಮಧ್ಯೆ ಎಲ್ಲ ರೀತಿಯ ಕೊಡುಕೊಳ್ಳುವಿಕೆ ಮತ್ತು ಆಳುವವರನ್ನು ಅನುಕರಿಸುವುದು ಸಹಜವಾಗಿತ್ತು. ಭಾರತ ಉಪಖಂಡದಲ್ಲಿ ಈ ರೀತಿಯ ಪ್ರಕ್ರಿಯೆಯನ್ನು ಮುಖ್ಯವಾಗಿ ಮೂರು ಸಂದರ್ಭಗಳಲ್ಲಿ ಗಮನಿಸಬಹುದು. ಆರ್ಯರ ಆಗಮನ, ಮುಸಲ್ಮಾನರ ಆಗಮನ ಮತ್ತು ಆಂಗ್ಲರ ಆಗಮನ.

ಆರ್ಯರುಭಾರತ ಉಪಖಂಡಕ್ಕೆಬಂದುಬೆರೆತುಕೊಂಡರು. ಆರ್ಯಾವ್ರತ ನಿರ್ಮಾಣವಾಯಿತು. ವೈದಿಕಧರ್ಮ,ವರ್ಣಾಶ್ರಮಗಳು ಉಪಖಂಡಕ್ಕೆ ಸೇರ್ಪಡೆಯಾಯಿತು. ಮುಸಲ್ಮಾನರ ಆಳ್ವಿಕೆಯಿಂದಉರ್ದು, ಹಿಂದೂಸ್ಥಾನಿಸಂಗೀತ ಹುಟ್ಟಿದರೆ, ಆಂಗ್ಲರಆಳ್ವಿಕೆಯಲ್ಲಿ ಇಡೀ ಭರತವರ್ಷದಲ್ಲಿ ಹೊಂದಾಣಿಕೆ ಮತ್ತು ಏಕೀಕರಣಕ್ಕಿಂತ ವಿಭಜನೆಯ ಪ್ರಕ್ರಿಯೆ ಆರಂಭವಾಯಿತು. ಭೌಗೋಳಿಕ ವಿಭಜನೆ, ಜನಾಂಗೀಯ ವಿಭಜನೆ ಅಲ್ಲದೆ ಸಾಂಸ್ಕೃತಿಕ ವಿಭಜನೆಗೂ ಆಂಗ್ಲರು ಬೀಜ ಬಿತ್ತಿ ಹುಲುಸಾದ ಬೆಳೆ ಅನುಭವಿಸಿದರು. ಆಧುನಿಕತೆ, ವಿಜ್ಞಾನ, ವಿದ್ಯಾಭ್ಯಾಸ ಮುಂತಾದವುಗಳ ಕ್ಷಿಪ್ರವಾದ ಅಳವಡಿಕೆಯಾಯಿತು. ಅದರಲ್ಲೂ ವಿದ್ಯಾಭ್ಯಾಸದ ಮೂಲಕ ಮೆಕಾಲೆಯ ತಂತ್ರ ನೀತಿಯಾದ ಚiದಲ್ಲಿ ಕಂದು ತಿರುಳಲ್ಲಿ ಬಿಳಿಯ ಮನುಷ್ಯರು ಯಶಸ್ವಿಯಾಗಿ ಸೃಷ್ಟಿಯಾಗಿದ್ದರಿಂದ ಉಂಟಾದ ವಿದ್ಯಾವಂತ ಮತ್ತು ಅವಿದ್ಯಾವಂತ ಎಂಬ ಸಾಂಸ್ಕೃತಿಕ ವಿಭಜನೆ ದುರಂತಮಯವಾದ ವಿಭಜನೆ. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ಈ ವಿದ್ಯಾವಂತ ವರ್ಗ ಬಹುಪಾಲು ತಮಗೆ ಉತ್ತಮವಾದುದು ಎಂದು ಕಲಿಸಿಕೊಡಲಾಗಿದ್ದ ಪಾಶ್ಚಾತ್ಯ ಅಂಶಗಳನ್ನು ಅನುಕರಿಸುತ್ತ ದೇಸಿಯನ್ನು ಕಂತ್ರಿ ಎಂದು ಜರೆಯುತ್ತ ಬ್ರಿಟಿಷ್ ವ್ಯವಸ್ಥೆಯಲ್ಲಿ ಅವಕಾಶ ಅನುಕೂಲಗಳನ್ನು ಪಡೆಯುತ್ತ ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಯಿತು. ಅವಿದ್ಯಾವಂತರೆನಿಸಿದ ಬಹುಸಂಖ್ಯಾತರು ಅನಾಗರಿಕ. ಮೂಢ, ಕಂತ್ರಿ ಎನಿಸಿಕೊಂಡು ಆಳದಲ್ಲಿ ಪೌರಾತ್ಯ ಸಂವೇದನೆಗಳನ್ನು ಕಾಪಾಡಿಕೊಳ್ಳುತ್ತಾ ಬಂದರು. ಇದು ಜನಪ್ರಿಯ ಸಿನಿಮಾದ ಬೆಳವಣಿಗೆಯಲ್ಲಿ ಕಂಡು ಬರುತ್ತದೆ.

ಆದ್ದರಿಂದಲೇ ಇಂದುಸಿನಿಮಾನಮ್ಮ ದೇಶದಲ್ಲಿ ಜನಪದ ಮಾಧ್ಯಮವೂ ಆಗಿದೆ. ದೈಹಿಕ ಶ್ರಮ ಕಡಿಮೆಯಾಗಿ ಯಂತ್ರಗಳ ಅವಲಂಬನೆ ಅನಿವಾರ್ಯ ವಾಗಿರುವ ಇಂದಿನ ಬದುಕಿನಲ್ಲಿ ಯಂತ್ರಾವಲಂಬನೆಯ ಕಲೆಯಾದ ಸಿನಿಮಾ, ಜನಪದ ಅಭಿವ್ಯಕ್ತಿಯಾಗಿ ರೂಪುಗೊಂಡಿರುವುದು ಸಹಜವೇ. ಜನಪ್ರಿಯ ಸಿನಿಮಾಗಳು ಸಾಮಾನ್ಯ ಜನರ ಕನಸಿನ ಭಾಗಗಳಾಗಿವೆ. ಅವರ ವೈಯಕ್ತಿಕ ನಂಬಿಕೆಗಳು ಆಶಯಗಳು ಮತ್ತು ಕಲ್ಪನೆಗಳನ್ನು ಸಾಕಾರ ಮಾಡಿಕೊಳ್ಳುವ ಅನುಭವ ನೀಡುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಆರ್ಟ್ ಸಿನಿಮಾಗಳು ಗಂಭೀರವಾಗಿ ರುಚಿಯಿಲ್ಲದ ಸ್ವಪ್ರಜ್ಞಾಪೂರ್ಣ ಶೈಲಿಯಲ್ಲಿರುತ್ತವೆ. ಈ ಶೈಲಿ ಪಾಶ್ಚಾತ್ಯ ರಸಾಸ್ವಾದನೆಗೆ, ಆ ರೀತಿಗೆ ತಮ್ಮನ್ನು ಒಗ್ಗಿಸಿಕೊಂಡವರಿಗೆ ಮಾತ್ರ ಇಷ್ಟವಾಗುತ್ತದೆ. ಮತ್ತೊಂದು ಮುಖ್ಯವಾದ ಆಂಶವೆಂದರೆ ಸಿನಿಮಾದಲ್ಲಿ ವಿಷಯಗಳು ಮಾಹಿತಿಗಳು ಸಾಂಕೇತಿಕವಾಗಿರುತ್ತವೆ. ಜನಪ್ರಿಯ ಸಿನಿಮಾ ಜನಮಾನಸದಲ್ಲಿರುವ ಸಂಕೇತಗಳನ್ನು ತುಡಿಸಿದರೆ ಆರ್ಟ್ ಸಿನಿಮಾಗಳು ಜನ ಮಾನಸದಲ್ಲಿರದಮೆಕಾಲೆಯ ಮಕ್ಕಳು ಮೆಚ್ಚಿದ ಪಾಶ್ಚಾತ್ಯ ಎರಕದ ಸಾಂಕೇತಿಕತೆಗಳನ್ನು ತುಡಿಸಲು ಯತ್ನಿಸುತ್ತವೆ. ಇಲ್ಲಿ ಕರ್ನಾಟಕದ ಮುಖ್ಯ ನ್ಯಾಯಾಧೀಶರೊಬ್ಬರು ನ್ಯಾಯವಾದಿಗಳ ಸಭೆಯೊಂದರಲ್ಲಿ ಹೇಳಿದ ಕಥೆಯೊಂದನ್ನು ಉಲ್ಲೇಖಿಸುತ್ತೇನೆ.

ನ್ಯಾಯವಾದಿಗಳ ದೃಷ್ಟಿಕೋನ ಹೇಗಿರಬೇಕೆಂಬುದಕ್ಕೆ ಇದನ್ನು ಅವರು ಹೇಳಿದ್ದರು. ಅವರು ಹೇಳುತ್ತಿರುವಾಗ ದೂರದರ್ಶನಕ್ಕಾಗಿ ವರದಿ ಮಾಡುತ್ತಿದ್ದ ನನಗೆ ‘ಏನಪ್ಪ ಮುಖ್ಯ ನ್ಯಾಯಾಧೀಶರು ಹೀಗೆಲ್ಲ ವರ್ಣನೆ ಮಾಡುತ್ತಿದ್ದಾರೆ ಎನಿಸಿತ್ತು. ಅವರ ಕೊನೆಯ ಮಾತುಗಳನ್ನು ಕೇಳಿದಾಗ ಇವರು ಎಷ್ಟೊಂದು ಅರ್ಥಪೂರ್ಣವಾಗಿ ಯೋಚಿಸುತ್ತಾರೆ ಎನಿಸಿತು. ಆ ಕಥೆ ಹೀಗಿದೆ : ಕೇರಳದಲ್ಲೊಮ್ಮೆ ಜನರಿಗೆ ದಾಂಪತ್ಯವನ್ನು ಅತ್ಯಂತ ಚೆನ್ನಾಗಿ ಅನುಭವಿಸುವುದು ಹೇಗೆ ಎಂದು ತಿಳಿಸಿ ಕೊಡಲು ವಿದೇಶದಿಂದ ತಜ್ಞರು ಬಂದಿದ್ದರಂತೆ. ಆ ಪ್ಯಾರಿಶ್‌ನ (ಕ್ರೈಸ್ತವಲಯ) ಹಿರಿಯ ಕಿರಿಯ ದಂಪತಿಗಳನ್ನೆಲ್ಲ ಕುಳ್ಳಿರಿಸಿಕೊಂಡು ವಿವರಿಸಿದರಂತೆ. ಕೋಣೆಯೊಳಗೆ ಇಬ್ಬರೇ ಏಕಾಂತದಲ್ಲಿರಬೇಕಾದರೆ ದೀಪದ ಬೆಳಕು ಹೇಗಿರಬೇಕು, ಹೇಗೆ ಮುನ್ನಲಿವಿನಲ್ಲಿ ತೊಡಗಬೇಕು, ಹೇಗೆ ಸಂಬೋಧಿಸಬೇಕು ಇತ್ಯಾದಿ. ಎಲ್ಲ ಮುಗಿದ ಮೇಲೆ ಜನ ಕೇಳಿದರಂತೆ. ಸ್ವಾಮಿ, ನಾವಿರುವುದೇ ಚಿಕ್ಕ ಚಿಕ್ಕ ಮನೆಗಳಲ್ಲಿ, ಅಡುಗೆ ಮನೆಯೂ ಅದೇ, ಡ್ರಾಯಿಂಗ್ ರೂಮೂ ಅದೇ, ಮಲಗುವ ಕೋಣೆಯೂ ಅದೇ. ಮಕ್ಕಳು ನಾವೆಲ್ಲ ಒಟ್ಟಿಗೇ ಮಲಗುತ್ತೇವೆ. ದೊಡ್ಡ ಮಕ್ಕಳು ಓದಿಕೊಳ್ಳುತ್ತಿರುತ್ತಾರೆ. ನೀವು ಹೇಳಿದ್ದನ್ನೆಲ್ಲ ನಾವು ಎಲ್ಲಿ ಮಾಡಲಿಕ್ಕಾಗುತ್ತದೆ? ಅಂತ.