ಪರಮೇಶ್ ಗುರುಸ್ವಾಮಿಯವರು “ಸಿನಿಮಾ ಸಂಸ್ಕಾರ” ಕುರಿತು ಬರೆದ ಲೇಖನವಿದು. ಸಾಕಷ್ಟು ವಿಶ್ಲೇಷಣಾತ್ಮಕವಾಗಿರುವುದರಿಂದ ಎರಡು ಕಂತುಗಳಲ್ಲಿ ಪ್ರಕಟಿಸಲಾಗುವುದು. ಓದಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಸದ್ಯದ ನಮ್ಮ ಕನ್ನಡ ಮುಖ್ಯವಾಹಿನಿಯ ಬಹುಪಾಲು ಚಿತ್ರಗಳು ಕಥೆ ಹೇಳುವ ರೀತಿಯಲ್ಲಾಗಲಿ ಕಟ್ಟಿಕೊಡುವ ಪಾತ್ರವಾಗಲಿ, ಸನ್ನಿವೇಶಗಳಾಗಲಿ ಬಹಳಸರಳೀಕೃತ. ಎಷ್ಟರಮಟ್ಟಿಗೆಂದರೆ ಯಾವುದೇ ಒಂದು ಬಗೆಯ, ಅದು ಪ್ರೇಮ ಕಥೆಯಿರಬಹುದು, ಕೌಟುಂಬಿಕ ಕಥೆಯಿರಬಹುದು, ರೌಡಿ ಕಥೆಯಿರಬಹುದು, ಅಳುಮುಂಜಿ ಕಥೆಯಿರಬಹುದು ಅಥವಾ ವಿಕ್ಷಿಪ್ತ ನಾಯಕನ ಕಥೆಯೇ ಇರಬಹುದು, ಪ್ರೇಕ್ಷಕರಿಗೆ ಆ ಪಾತ್ರಗಳು-ಸನ್ನಿವೇಶಗಳು ಮೊದಲೇ ವೇದ್ಯವಾಗುತ್ತವೆ. ಅದಕ್ಕಾಗಿಯೆ ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರಗಳು ತಯಾರಾದರೂ ಮೂರರಿಂದ ಆರು ಮಾತ್ರ ಯಶಸ್ವಿಯಾಗುತ್ತಿವೆ.

ಹಿಂದೆ ಯಶಸ್ವಿ ಎನಿಸಿಕೊಂಡಿದ್ದ ನಿರ್ದೇಶಕರಿಗೆ ಇಂದು ಹೇಗೆ ಕಥೆಹೇಳಬೇಕೆಂಬುದು ತಿಳಿಯುತ್ತಿಲ್ಲ. ಹೊಸನಿರ್ದೇಶಕರಿಗೆ ಹೊಡಿಬಡಿಕಡಿ ಮಂತ್ರವೊಂದನ್ನು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ನೆಲದ ಕಾಸು ಹುಡಿ ಹಾರುತ್ತಿದೆ. ಇಂದಿನ ಪ್ರೇಕ್ಷಕರ ಸಿನಿಮಾ ಸಾಕ್ಷರತೆಯ ಮಟ್ಟ ಇಬ್ಬರಿಗೂ ಅರ್ಥವಾಗುತ್ತಿಲ್ಲ. ಸೋತು ರೀಮೇಕ್ ಮೊರೆ ಹೋಗುತ್ತಿದ್ದಾರೆ. ವಸಂತಸೇನೆ (ಕನ್ನಡ ನೆಲದಲ್ಲಿ ತಯಾರಾದ ಮೊದಲ ಚಿತ್ರ) ಅಥವಾ ಸತಿ ಸುಲೋಚನ (ಮೊದಲ ಕನ್ನಡ ಚಿತ್ರ.) ಚಿತ್ರಗಳು ನಿರ್ಮಾಣವಾದ ಕಾಲದ ಪ್ರೇಕ್ಷಕ ವರ್ಗಕ್ಕೂ ಇಂದಿನ ಪ್ರೇಕ್ಷಕ ವರ್ಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಚಿತ್ರ ನೋಡುವುದರ ವಿರುದ್ಧವೇ ಮಡಿವಂತಿಕೆ ಇತ್ತು. ಅಂದು ಬಹಿಷ್ಕರಿಸಬಹುದಿದ್ದಂಥ ದೃಶ್ಯಗಳನ್ನು ಇಂದು ತಾಯಿ-ಮಗ, ಅಣ್ಣ-ತಂಗಿ, ಅಪ್ಪ-ಮಗಳು, ಅಕ್ಕ-ತಮ್ಮ ಜತೆಯಾಗಿ ಮುಜುಗರವಿಲ್ಲದೆ ಟಿ.ವಿ.ಮುಂದೆ ಕುಳಿತು ನೋಡುತ್ತಾರೆ. ಆರೋಗ್ಯದಿಂದ ಲೈಂಗಿಕತೆಯವರೆಗೆ ಇಂದಿನವರು ಹೆಚ್ಚು ಪ್ರಜ್ಞಾವಂತರು.

ಸಿನಿಮಾ ನಿರ್ದೇಶನದ ಬಗ್ಗೆ ಒಂದು ಮಾತಿದೆ: ಯಾವುದೇ ಭಾಷೆಯಿರಬಹುದು, ಯಾರೇ ನಿರ್ದೇಶಕ(ಕಿ) ಇರಬಹುದು. ತನ್ನ ಸಿನಿಮಾ ತಯಾರಿಕೆಯ ಯಾವುದೇ ಹಂತದಲ್ಲಿ ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಆಗದಿದ್ದಾಗ ಚಲನಚಿತ್ರ ಪಿತಾಮಹನೆನಿಸಿದ ಗ್ರಿಫಿತ್ತನ ಪ್ಯಾರಲಲ್ ಕಟ್ಟಿಂಗ್ ಎಂಬ ನಿರೂಪಣಾ ತಂತ್ರ ಅಂತಿಮ ಆಸರೆಯಾಗಿ ಒದಗುತ್ತದೆ ಎಂಬುದು ಆ ಮಾತು. ಚಲನಚಿತ್ರವನ್ನು ಒಂದು ಕಲಾತ್ಮಕ ನಿರೂಪಣಾ ಮಾಧ್ಯಮವಾಗಿ, ಅದರ ವ್ಯಾಕರಣವನ್ನು ರೂಪಿಸಿದ ಗ್ರಿಫಿತ್ತನ ಹೆಗ್ಗಳಿಕೆಯನ್ನು ಸೂಚಿಸಲು ಈ ಮಾತನ್ನು ಬಳಸುತ್ತಾರೆ. ಈಗ, ನಮ್ಮ ಕನ್ನಡದ ಮುಖ್ಯವಾಹಿನಿಯ ನಿರ್ದೇಶಕರು ಪ್ರೇಕ್ಷಕರನ್ನು ಹಿಡಿದಿಡುವ ಕೊನೆಯ ಆಸರೆಯೆಂದರೆ ರೀಮೇಕ್ ಎಂದಾಗಿ ಬಿಟ್ಟಿದೆ.

ಸಮೂಹಮಾಧ್ಯಮಗಳಲ್ಲೆಲ್ಲ ಈ ಸಿನಿಮಾ ಅತ್ಯಂತಸಮ್ಮೋಹಕಮಾಧ್ಯಮ. ಜತೆಗೆ ಅತ್ಯಂತ ತಾಂತ್ರಿಕವಾದಮಾಧ್ಯಮವೂ ಸಹ. ಇದರ ಸಮ್ಮೋಹನ ಸಾಮರ್ಥ್ಯದ ಅರಿವಿದ್ದರೂ ಅದರ ಸಮ್ಮೋಹಕತೆಗೆ ಪ್ರೇಕ್ಷಕರು ಒಳಗಾಗುತ್ತಾರೆ. ಇದು ವಾಸ್ತವ ಎಂಬ ಭ್ರಮೆಯನ್ನು ಪ್ರೇಕ್ಷಕರಲ್ಲಿ ಚಿತ್ರ ನೋಡುವಾಗ ಹುಟ್ಟಿಸುತ್ತದೆ. ಇದರ ಸಮ್ಮೋಹನ ಶಕ್ತಿಯ ಎದುರು ಪ್ರತಿರೋಧ ಅಸಾಧ್ಯ. ಅದಕ್ಕಾಗಿಯೇ ಗಾಂಧೀಜಿ ಸಿನಿಮಾವನ್ನು ಅಪಾಯಕಾರಿ ಎಂದಿದ್ದು, ಲೆನಿನ್ ಬಳಸಿದ್ದು (ಹೊಸ ರಾಜಕೀಯ ವ್ಯವಸ್ಥೆಯನ್ನು ಜನರಿಗೆ ಅರ್ಥ ಮಾಡಿಸಲು ಮತ್ತು ಅವರನ್ನು ಒಳಗೊಳ್ಳಲು).

ಸಿನಿಮಾದಲ್ಲಿಪಾತ್ರಗಳು ಆಡುವ ಭಾಷೆ ಅನೇಕವಿದ್ದರೂ ಎಲ್ಲ ಭಾಷೆಯ ಚಿತ್ರಗಳಿಗೆನಿರೂಪಣೆಯಲ್ಲಿ, ಮೂಲಭೂತವಾಗಿ ಅದು ತಾಂತ್ರಿಕತೆಯನ್ನೇ ಆಧರಿಸಿದ ಅಭಿವ್ಯಕ್ತಿ ಮಾಧ್ಯಮವಾದ್ದರಿಂದ, ಒಂದೇ ಭಾಷೆ, ಒಂದೇ ವ್ಯಾಕರಣ. ಬಳಕೆಯಲ್ಲಿ, ಶೈಲಿಯಲ್ಲಿ ನೃಪತುಂಗನಿಂದ ಇತ್ತೀಚಿನ ಲೇಖಕರವರೆಗಿನ ವೈವಿಧ್ಯ ಇಲ್ಲೂ ಇದೆ. ವಿವಿಧ ಪ್ರಾದೇಶಿಕತೆ, ಆಯಾ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂವೇದನೆಗಳು ಆಯಾ ಪ್ರಾದೇಶಿಕತೆಯ ಮತ್ತು ಭಾಷೆಯ ಸಿನಿಮಾವನ್ನು ರೂಪಿಸುತ್ತವೆ. ಯಾವುದೇ ಸೃಜನಶೀಲ ಕಲೆಗೆ ಇದು ಅನ್ವಯಿಸಬಲ್ಲದು. ಕನ್ನಡ ಸಾಹಿತ್ಯದಲ್ಲಿ ಕ್ಷಾತ್ರಯುಗದ ಚಂಪೂ, ಸಾಮಾಜಿಕ ಆಂದೋಲನ ಪರ್ವದ ವಚನ, ಭಕ್ತಿ ಯುಗದ ಷಟ್ಪದಿ ಮತ್ತು ಸಾಂಗತ್ಯ ಹಾಗು ಸಿನಿಮಾದಲ್ಲೇ ತೆಗೆದುಕೊಳ್ಳುವುದಾದರೆ, ಆರಂಭಿಕ ಹಂತದ ಜರ್ಮನಿಯ ಸುವರ್ಣ ಯುಗ ಎಂದೇ ಗುರುತಿಸಲ್ಪಡುವ ಎಕ್ಸ್ಪ್ರೆಶನಿಸಂ ಮತ್ತು ರಿಯಲಿಸಂ, ಸೋವಿಯತ್ ರಷ್ಯಾದ ಮಾಂಟಾಜ್, ಫ್ರಾನ್ಸಿನ ಸರ್ರಿಯಲಿಸಂ, ಇಟಲಿಯ ನಿಯೋರಿಯಲಿಸಂ ಮುಂತಾದ ಪ್ರಕಾರಗಳನ್ನು ಗುರುತಿಸಬಹುದು.

ಸಿನಿಮಾದಲ್ಲಿ ಈ ಪ್ರಕಾರಗಳು ಹುಟ್ಟಿಕೊಂಡಿದ್ದು ಆಯಾ ದೇಶ ಮತ್ತು ಕಾಲಗಳ ಸಂವೇದನೆಗಳಸಹಜ ಆಭಿವ್ಯಕ್ತಿಯಾಗಿ. ಅದು ಚೆನ್ನಾಗಿದೆ, ಆದ್ದರಿಂದ ಅದನ್ನು ನಕಲು ಮಾಡಬೇಕೆಂಬ ಕಾರಣಕ್ಕಾಗಿ ಅಲ್ಲ. ಖಂಡಿತಾಹಿಂದಿನವರ ಪ್ರಯತ್ನ ಪ್ರಯೋಗಗಳಪ್ರಭಾವಮುಂದಿನವರಮೇಲೆ ಇದೆ. ಅದರ ಜತೆಗೆ ತಮ್ಮ ಸಮಕಾಲೀನ ಸಂವೇದನೆಗಳಿಗೆ ತೆರೆದುಕೊಳ್ಳುವ ಮೂಲಕ ಹೊಸ ದಾರಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ೧೯ ನೇ ಶತಮಾನದ ಕೊನೆಯ ದಶಕಾರ್ಧದಲ್ಲಿ ಹುಟ್ಟಿದ ಸಿನಿಮಾ ೨೦ ನೇ ಶತಮಾನದ ಎರಡನೆಯ ದಶಕಾರ್ಧದ ವೇಳೆಗೆ ಅಪಾರ ವಹಿವಾಟಿನ ದೊಡ್ಡ ಉದ್ಯಮವಾಗಿ ಬೆಳೆದಿದ್ದಲ್ಲದೆ ಅಭಿವ್ಯಕ್ತಿ ಮಾಧ್ಯಮವಾಗಿ ಕಲಾತ್ಮಕ ಮಾಧ್ಯಮವಾಗಿ, ಜಗತ್ತಿನಾದ್ಯಾಂತ ಮನ್ನಣೆಯನ್ನೂ ಪಡೆಯಿತು. ಸಾಹಿತ್ಯ, ನಾಟಕ, ಛಾಯಾಗ್ರಹಣ ಮತ್ತಿತರ ಕಲೆಗಳ ಕಲಸು ಮೇಲೋಗರ, ಜನರಿಗೆ ತೆವಲು ಹತ್ತಿಸಿ ಜನರ ದುಡ್ಡನ್ನು ಲೂಟಿ ಹೊಡೆಯುವ ವಾಣಿಜ್ಯ ಚಟುವಟಿಕೆ ಮಾತ್ರ ಎಂದು ಹೀನಾಯಿಸಲ್ಪಡುತ್ತಿದ್ದ ಸಿನಿಮಾಗೆ ಇಂಥ ಮನ್ನಣೆಯನ್ನು ದೊರಕಿಸಿಕೊಟ್ಟವನು ಅಮೆರಿಕದ ಡೇವಿಡ್ ವಾರ್ಕ್ ಗ್ರಿಫಿತ್. ತನ್ನ ಹಿಂದಿನವರ ಪ್ರಯೋಗಗಳು ಮತ್ತು ಪ್ರಯತ್ನಗಳನ್ನು ಕ್ರೋಡೀಕರಿಸಿಕೊಂಡು, ತನ್ನ ಅಹರ್ನಿಶಿ ಪ್ರಯೋಗ ಮತ್ತು ಪ್ರಯತ್ನಗಳಿಂದ ಸಿನಿಮಾ ಮಾಧ್ಯಮದ ಭಾಷೆ ಮತ್ತು ವ್ಯಾಕರಣವನ್ನು ಆವಿಷ್ಕರಿಸಿದ. ಯಾವುದೇ ದೇಶ, ಕಾಲದ, ಭಾಷೆಯ, ಚಿತ್ರ ನಿರ್ದೇಶಕ ಅಥವಾ ನಿರ್ದೇಶಕಿಯ ಹೆಗಲ ಮೇಲೆ ಗ್ರಿಫಿತ್ ಕುಳಿತು ನಿರ್ದೇಶಿಸುತ್ತಿರುತ್ತಾನೆ -ಇದು ಅವನ ಬಗ್ಗೆ ಸಾಮಾನ್ಯವಾಗಿ ಹೇಳುವ ಮಾತು. ಈ ಮಾತುಗಳೇ ಅವನ ಕೊಡುಗೆಯನ್ನೂ ಸೂಚಿಸುತ್ತವೆ. ಇತರ ನಿರೂಪಣಾ ಕಲೆಗಳಿಗೆ ಹೋಲಿಸಿದರೆ ತಯಾರಿಕೆಯಿಂದ ಹಿಡಿದು ಪ್ರದರ್ಶನದವರೆಗೆ ಯಂತ್ರಗಳನ್ನೇ ಅವಲಂಬಿಸಿದ ಸಿನಿಮಾ ಯಂತ್ರ ಯುಗದ ಕೇಂದ್ರವಾಗಿದ್ದ ಅಮೆರಿಕದಲ್ಲಿ ಅರಳಿದ್ದು ಸಹಜ.

ಗ್ರಿಫಿತ್ತನ್ನ ಕಥಾನಕಕ್ಕೆ ರೂಢಿಸಿದಚಿತ್ರೀಕರಣ ಆವಿಷ್ಕಾರಗಳನ್ನು ತೆಗೆದುಕೊಂಡು ಜರ್ಮನರು ಸಿನಿಮಾ ಇತಿಹಾಸದಲ್ಲಿ ಜರ್ಮನಿಯ ಸುವರ್ಣ ಯುಗ ಎಂದೇ ಕರೆಯಲಾಗುವ ಪ್ರಯೋಗಗಳನ್ನು ಮಾಡಿದರು. ಕ್ಯಾಮರಾವನ್ನು ಲೇಖನಿಯನ್ನಾಗಿ ಪರಿವರ್ತಿಸಿದರು ಎಂದೇ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತದೆ. ಇವರು ರೂಪಿಸಿದ ಫ್ಯಾಂಟಸಿ ಚಿತ್ರಗಳು ಚಿತ್ರೀಕರಣ ಸೆಟ್ಟಿನ ಅಕರಾಳ ವಿಕರಾಳ ನಿರ್ಮಾಣ ಮತ್ತು ಅತಿಮಾನುಷ ಹಾಗು ಬೀಭತ್ಸ ಕಥಾ ವಸ್ತುಗಳು ಇಂದಿಗೂ ಭಯಾನಕಗಳ, ಥ್ರ್ರಿಲ್ಲರ್‌ಗಳ ಮೇಲೆ ಪ್ರಭಾವ ಬೀರುತ್ತಿವೆ. ಇವರ ರಿಯಲಿಸಂ ಚಿತ್ರಗಳು (ಬೀದಿ ಚಿತ್ರಗಳು ಎಂದೂ ಕರೆಯಲಾಗುವ) ಅಂದಿನ ಅವರ ಸಾಮಾಜಿಕ ವಾಸ್ತವತೆಯನ್ನು ತೋರಿಸುವ ಯಶಸ್ವೀ ಪ್ರಯತ್ನ. ಫ್ಯಾಂಟಸಿ ಚಿತ್ರಗಳು ರೂಪುಗೊಳ್ಳುವಲ್ಲಿ ಜರ್ಮನಿಯಲ್ಲೇ ಹುಟ್ಟಿಕೊಂಡಿದ್ದ ಎಕ್ಸ್‌ಪ್ರೆಶನಿಸಂ ಎಂಬ ಸಿದ್ಧಾಂತ ಮುಖ್ಯವಾಗಿ ಕಾರಣವಾದರೆ ರಿಯಲಿಸಂ ಚಿತ್ರಗಳು ಮೊದಲ ಮಹಾ ಯುದ್ಧ ಅಂದಿನ ಜರ್ಮನ್ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಉಂಟು ಮಾಡಿದ ಪರಿಣಾಮಗಳ ವಾಸ್ತವ ಚಿತ್ರಣ.

ಗ್ರಿಫಿತ್ತನ ಸಂಕಲನ ತಂತ್ರಗಳನ್ನು ತೆಗೆದುಕೊಂಡುಸೋವಿಯತ್ ನಿರ್ದೇಶಕರು ಅನೇಕಪ್ರಯೋಗಗಳನ್ನು ಮಾಡಿದರು. ಮಾಂಟಾಜ್ ಸಂಕಲನ ತಂತ್ರ ಸಿನಿಮಾ ಜಗತ್ತಿಗೆ ಅವರ ಕೊಡುಗೆ. ಚಿತ್ರ ಸಂಕಲನ ತಂತ್ರವನ್ನು ಅತ್ಯಂತ ಪರಿಣಾಮಕಾರಿ ಯಾಗಿ ಪ್ರೇಕ್ಷಕರೊಂದಿಗೆ ಸಂವಹಿಸಲು ಬಳಸಬಹುದೆಂದು ಲೆವ್ ಕುಲಶೋವನ ನೇತೃತ್ವದಲ್ಲಿ ಸತತ ಪ್ರಯೋಗಗಳನ್ನು ಮಾಡಿ ತಮ್ಮ ಕಾಣ್ಕೆಗಳನ್ನು ಬರೆದು ಜಗತ್ತಿಗೆ ಅರುಹಿದರು. ಆಗ ತಾನೆ ಕಮ್ಯುನಿಸ್ಟ್ ಕ್ರಾಂತಿ ಆಗಿತ್ತು. ಹೊಸ ಸಿದ್ಧಾಂತವನ್ನು ಅವಲಂಬಿಸಿದ, ಜಗತ್ತಿನಲ್ಲೇ ಹೊಸದಾದ ವ್ಯವಸ್ಥೆ. ಆರ್ಥಿಕ ಮುಗ್ಗಟ್ಟು. ಕ್ರಾಂತಿಯ ಹರಿಕಾರರಿಗೆ, ಜನರು ಹೊಸ ಸಿದ್ಧಾಂತವನ್ನು ಒಪ್ಪಿಕೊಂಡು ಹೊಸ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ ಮತ್ತು ಅಗತ್ಯವೂ ಆಗಿತ್ತು. ಆದ್ದರಿಂದ ಜನರಿಗೆ ಉಪದೇಶಿಸಿ ಅವರ ಮನವೊಲಿಸಬೇಕಿತ್ತು. ಹೊಸ ರಾಜಕೀಯ ಸಿದ್ಧಾಂತವನ್ನು ತಿಳಿಸಿ ಹೇಳಲು ಲೆನಿನ್‌ಗೆ ಸಿನಿಮಾ ಪರಿಣಾಮಕಾರಿಯಾದ ಸಾಧನವಾಗಿ ಕಂಡಿತು.

ಹಾಗಾಗಿ ಮಾಸ್ಕೊ ಫಿಲ್ಮ್ ಸ್ಕೂಲ್ ಸ್ಥಾಪಿತವಾಯಿತು. ಇವರಿಗೆ ಚಿತ್ರ ತಯಾರಿಕೆಯ ಅದಮ್ಯ ಉತ್ಸಾಹವಿತ್ತು. ಕ್ರಾಂತಿಗೆ ಹೆದರಿ ದೇಶಾಂತರ ಓಡಿ ಹೋದವರು ಬಿಟ್ಟು ಹೋಗಿದ್ದ ಎಲ್ಲ ಚಿತ್ರ ತಯಾರಿಕಾ ಸಲಕರಣೆಗಳಿದ್ದರೂ ಆರ್ಥಿಕ ಕಾರಣದಿಂದಾಗಿ ಕಚ್ಚಾ ಫಿಲ್ಮ್ ಲಭ್ಯವಿರಲಿಲ್ಲ. ಚಿತ್ರಕಥೆ ಬರೆದೂ ಬರೆದೂ ಸುಸ್ತಾದರೆ ಹೊರತು ಚಿತ್ರೀಕರಣ ಮಾಡಲು ಕಚ್ಚಾ ಫಿಲ್ಮ್ ದೊರೆಯು ತ್ತಿರಲಿಲ್ಲ. ಫಿಲ್ಮ್ ಇಲ್ಲದೇ ನಟಿಸಿದರು, ಚಿತ್ರೀಕರಿಸಿದರು. ತೃಪ್ತಿ ಪಟ್ಟುಕೊಂಡರು. ಸಂಕಲನ ಮಾಡುವ ತೀವ್ರ ತುಡಿತವನ್ನು ಹತ್ತಿಕ್ಕುವುದು ಹೇಗೆ? ಓಡಿ ಹೋದವರು ಬಿಟ್ಟು ಹೋಗಿದ್ದ ಚಿತ್ರಗಳ ಫಿಲ್ಮ್ ತುಣಕುಗಳನ್ನು ತೆಗೆದುಕೊಂಡು ಬೇರೆ ಬೇರೆ ರೀತಿ ಸಂಕಲಿಸಿ ನವನವೀನ ಸಂಕಲನ ತಂತ್ರಗಳನ್ನು ಸೂತ್ರಗಳನ್ನು ಕಂಡು ಕೊಂಡರು. ಹೊಸ ವ್ಯವಸ್ಥೆಯನ್ನು ಕಟ್ಟುವ ತವಕದ ಉತ್ಸಾಹ, ಚಿತ್ರ ತಯಾರಿಸ ಬೇಕೆಂಬ ಅದಮ್ಯ ತುಡಿತ, ಆರ್ಥಿಕ ಮುಗ್ಗಟ್ಟು, ಬದ್ಧತೆ ಎಲ್ಲ ಸೇರಿ ತಾಲೀಮು ಬಹಳ ಚೆನ್ನಾಗಿಯೇ ನಡೆಯಿತು. ಕಚ್ಚಾ ಫಿಲ್ಮ್ ದೊರೆತು ಇವರು ಚಿತ್ರಗಳನ್ನು ತಯಾರಿಸಿದಾಗ ಇಡೀ ಜಗತ್ತು ನಿಬ್ಬೆರಗಾಗಿ ನೋಡಿತು. ಇವರ ಚಿತ್ರಗಳಲ್ಲಿ ವ್ಯಕ್ತಿಗಳು ಪ್ರಧಾನ ಪಾತ್ರವಲ್ಲ. ಸಮುದಾಯವೇ ಪ್ರಧಾನ ಪಾತ್ರ. ಹೊಸ ಸಿದ್ಧಾಂತಕ್ಕೆ ಮತ್ತು ವ್ಯವಸ್ಥೆಗೆ ತಕ್ಕಂತೆ ದೃಶ್ಯ ಸಂಯೋಜನೆ, ಸೆಟ್, ಚಿತ್ರೀಕರಣ ಎಲ್ಲವೂ ಹೊಸ ರೀತಿಯಾಗಿದ್ದುವು.

೧೯೨೦-೩೦ ಸಂದರ್ಭದಲ್ಲಿ ಫ್ರಾನ್ಸ್‌ನಲ್ಲಿದಾದ,ಲೂಯಿಸ್ಬ್ಯುನಿಯಲ್, ಪ್ರಖ್ಯಾತಪೇಂಟಿಂಗ್ಕಲಾವಿದಸಾಲ್ವಡಾರ್ ಡಾಲಿ, ಕವಿ ಆಂದ್ರೆ ಬ್ರೆಟನ್ ಮೊದಲಾದವರು, ಬದುಕು ಮತ್ತು ಕಲೆಯಲ್ಲಿ ಅಸಂಬದ್ಧತೆ ಅಥವಾ ಅತಾರ್ಕಿಕತೆ ಎಂಬುದು ಬಿಡುಗಡೆಯ ಶಕ್ತಿಯಾಗಿರುತ್ತದೆ, ವಾಸ್ತವತೆ ನಿಕೃಷ್ಟವಾದುದು, ಮಾನಸಿಕ ಸ್ವಯಂ ಚಾಲನೆ (ಸೈಕಿಕ್ ಆಟೊಮ್ಯಾಟಿಸಂ) ಉತ್ಕೃಷ್ಟವಾದುದು ಎಂದು ವಾದಿಸುತ್ತಿದ್ದರು. ಸಾಂಸ್ಥಿಕ ಆಷಾಢ ಭೂತಿತನ, ವ್ಯಕ್ತಿಯ ಮನಸ್ಸನ್ನು ನಿರ್ಬಂಧ ಗಳಿಂದ ಬಿಡುಗಡೆಗೊಳಿಸುವಲ್ಲಿ ಲೈಂಗಿಕತೆಯ ಪ್ರಾಮುಖ್ಯತೆ, ಕನಸಿನ ಮಹತ್ವ, ಸುಪ್ತ ಪ್ರಜ್ಞೆಯ ಮುಕ್ತ ಹೊನಲು. ಇವು, ಸರ್ರಿಯಲಿಸಂ ಶೈಲಿಯಲ್ಲಿ ಪ್ರಮುಖವಾಗಿ ಅಭಿವ್ಯಕ್ತವಾಗುವ ಅಂಶಗಳು. ಸಮಾಜದ ಆಷಾಢಭೂತಿತನಕ್ಕೆ ಷಾಕ್ ಕೊಟ್ಟು ಬೆಚ್ಚಿ ಬೀಳಿಸುವುದರಲ್ಲಿ ಇವರಿಗೆ ಮಹದಾನಂದ. ಮುಂದೆ ಹಿಚ್‌ಕಾಕ್ ತನ್ನ ಸ್ಪೆಲ್‌ಬೌಂಡ್, ಸೈಕೊ ಮತ್ತು ಬರ್ಡ್ಸ್ ಚಿತ್ರಗಳಲ್ಲಿ ಸರ್ರಿಯಲಿಸಂ ಶೈಲಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ.

ಮೊದಲನೆಯ ಮಹಾಯುದ್ಧದ ಸಾಮಾಜಿಕಪರಿಣಾಮಗಳನ್ನು ಜರ್ಮನರು ರಿಯಲಿಸಂ ಶೈಲಿಯಲ್ಲಿ ಅಭಿವ್ಯಕ್ತಿಸಿದರೆ, ಇಟಲಿಯವರು ೧೯೪೦-೫೦ರ ದಶಕದಲ್ಲಿ ನಿಯೋರಿಯಲಿಸಂ ಶೈಲಿಯಲ್ಲಿ ರೂಪಿಸಿದರು. ನಿಯೊರಿಯಲಿಸಂ ಚಿತ್ರಗಳು ಎರಡನೆಯ ಮಹಾಯುದ್ಧ ಪೂರ್ವದಲ್ಲಿ ಮೊದಲು ಫ್ರಾನ್ಸಿನಲ್ಲಿ ಶುರು ವಾದರೂ ಅದರ ಸ್ಪಷ್ಟ ರೂಪುರೇಷೆಗಳನ್ನು ರೂಢಿಸಿ ಸಮರ್ಥವಾಗಿ ಬಳಸಿದವರು ಇಟಾಲಿಯನ್ ನಿರ್ದೇಶಕರು. ರಾಬರ್ಟೊ ರೊಸೆಲಿನಿ, ವಿಟ್ಟೋರಿಯಾ ಡಿ ಸಿಕ, ವಿಸ್‌ಕಾಂಟಿ, ಲಾಟ್ಟಡಾ ಮೊದಲಾದವರು ಈ ಮಾರ್ಗದ ಪ್ರವರ್ತಕರು. ಅದರಲ್ಲೂ ವಿಟ್ಟೋರಿಯ ಡಿ ಸಿಕ ನ ಬೈಸಿಕಲ್ ಥೀವ್ಸ್ ಸಾರ್ವಕಾಲಿಕ ಹತ್ತು ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿ ಸಮೀಕ್ಷೆ ನಡೆದಾಗಲೆಲ್ಲ ಆಯ್ಕೆಯಾಗುತ್ತ ಬಂದಿದೆ. ನಿಯೊರಿಯಲಿಸಂ ಚಿತ್ರಗಳು ಫ್ಯಾಸಿಸಂ ಮತ್ತು ಮಹಾಯುದ್ಧದ ಪರಿಣಾಮವಾಗಿ ಉದ್ಭವವಾದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಸೃಷ್ಟಿಯಾದ ಸಿನಿಮಾಂದೋಲನ. ಈ ಆಂದೋಲನವು ಮುಖ್ಯವಾಗಿ ಅಂದಿನ ಇಟಲಿಯಲ್ಲಿ ಹರಡಿಕೊಂಡಿದ್ದ ಅನ್ಯಾಯ ಮತ್ತು ಬಡತನದ ವಿರುದ್ಧದ ಕೂಗಾಗಿತ್ತು. ಇವರು ವೃತ್ತಿಪರ ಕಲಾವಿದರನ್ನು ಬಳಸಲಿಲ್ಲ. ಸೆಟ್ ಹಾಕಲಿಲ್ಲ. ಹುಟ್ಟಿದ ಐದೇ ವರ್ಷಕ್ಕೆ ಈ ಆಂದೋಲನವು ಚರ್ಚ್ ಮತ್ತು ಸರ್ಕಾರದಿಂದ ಕೊನೆಗಾಣಿಸಲ್ಪಟ್ಟಿದ್ದು ಆರ್ಥಿಕ ನಿಯಂತ್ರಣದ ಮೂಲಕ. ಈ ನಿರ್ದೇಶಕರು ಐದೇ ವರ್ಷ ಈ ಮಾದರಿಯಲ್ಲಿ ಕೆಲವೇ ಚಿತ್ರಗಳನ್ನು ಮಾಡಿದರೂ ಇಟಲಿಯಲ್ಲಿ ಅತ್ಯಂತ ಜನಪ್ರಿಯರಾಗಿ, ತಾರಾ ಮೌಲ್ಯವನ್ನು ಹೊಂದಿದ್ದರು. ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಲ್ಲದೆ ಜಾಗತಿಕ ಸಿನಿಮಾದ ಮೇಲೆ ಅಚ್ಚಳಿಯದ ಪ್ರಭಾವವನ್ನೂ ಬೀರಿದರು. ರಾಬರ್ಟೊ ರೊಸೆಲಿನಿಯ ಚಿತ್ರವೊಂದನ್ನು ನೋಡಿ ಅಂದಿನ ಟಾಕಿ ಚಿತ್ರಗಳ ಆಲ್ ಟೈಮ್ ಗ್ರೇಟ್ ಆಗಿ ಆಯ್ಕೆಯಾಗಿದ್ದ ಹಾಲಿವುಡ್ ತಾರೆ ಇನ್‌ಗ್ರಿಡ್ ಬರ್ಗ್‌ಮನ್ ಇಟಲಿಗೆ ಬಂದು ಅವನಿಗೆ ಹಾಲಿವುಡ್‌ನಿಂದ ಫೈನಾನ್ಸ್ ಮಾಡಿಸಿ ಆ ಚಿತ್ರದಲ್ಲಿ ನಟಿಸುತ್ತಾಳೆ.