ವಿಮರ್ಶಕ ವಿ.ಎನ್. ಲಕ್ಷ್ಮೀನಾರಾಯಣರು ಬಹಳ ದಿನಗಳ ಹಿಂದೆಯೇ ಕಳಿಸಿದ್ದ ಲೇಖನವಿದು. ಎರಡು ಚಿತ್ರಗಳನ್ನು ಇಟ್ಟುಕೊಂಡು ವಿಶ್ಲೇಷಿಸಿರುವ ಈ ಲೇಖನವನ್ನು ಓದಿ, ಅಭಿಪ್ರಾಯಿಸಿ.

ಕನ್ನಡದಲ್ಲಿ ಗಿರೀಶ್ ಕಾಸರವಳ್ಳಿಯವರ ಕನಸೆಂಬ ಕುದುರೆಯನೇರಿ ಮತ್ತು ತೆಲುಗಿನಲ್ಲಿ ಸುನೀಲ್ ಕುಮಾರ್ ರೆಡ್ಡಿಯವರ ಸೊಂತ ಊರು ಎರಡನ್ನೂ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಸಿಕ್ಕಿತ್ತು.ಈ ಎರಡೂ ಚಿತ್ರಗಳನ್ನು ತೌಲನಿಕ ಪರಿಶೀಲನೆಗಾಗಿ ಮತ್ತೆರಡುಸಲ ನೋಡಿದೆ. ಇದ್ದುದರಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರಮಟ್ಟದಲ್ಲಿ ಪುರಸ್ಕೃತವಾದ ಗಿರೀಶರ ಕನ್ನಡಚಿತ್ರ ಮತ್ತು ಬಹಳಮಟ್ಟಗೆ ಅಂಥದೇ ವಸ್ತುವನ್ನು ಹೊಂದಿರುವ, ಆದರೆ ಉಳಿದೆಲ್ಲಾ ರೀತಿಗಳಲ್ಲೂ ವಿಭಿನ್ನವಾದ, (ಆ ವರ್ಷ ಸ್ಪರ್ಧೆಗೆ ಬಂದ ತೆಲುಗು ಚಿತ್ರಗಳ ಪೈಕಿ ಇದ್ದುದರಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ಆಯ್ಕೆಯಾಗಲು ವಿಫಲವಾದ) ಸುನಿಲ್ ಕುಮಾರ್ ರೆಡ್ಡಿ ಅವರ ತೆಲುಗುಚಿತ್ರ ಗಳನ್ನು ಕುರಿತು ಚರ್ಚಿಸುವುದು ಈ ಲೇಖನದ ಉದ್ದೇಶ.

ಅಮರೇಶ ನುಗುಡೋಣಿಯವರ ಕತೆಯೊಂದನ್ನು ಆಧರಿಸಿ ಗಿರೀಶ್ ತಮ್ಮ ಸಿನಿಮಾದ ಚಿತ್ರಕತೆಯನ್ನು ತಯಾರಿಸಿಕೊಂಡಿದ್ದಾರೆ. ಸುನಿಲ್ ಅವರ ಸಿನಿಮಾದ ಚಿತ್ರಕತೆ, ಸಾಹಿತಿಯೂ, ತೆಲುಗು ಸಿನಿಮಾದ ಜನಪ್ರಿಯ ನಟರೂ, ಚಿತ್ರದ ಮುಖ್ಯಪಾತ್ರಧಾರಿಯೂ ಆದ ಎಲ್. ಬಿ. ಶ್ರೀರಾಮ್ ಅವರೇ ರಚಿಸಿದ್ದು.

ವಸ್ತುಸಾಮ್ಯತೆ ಎರಡೂ ಚಿತ್ರಗಳ ಕಥಾಕಾಂಡದಲ್ಲಿ ಇದೆ. ಸ್ಮಶಾನದ ಹಿನ್ನೆಲೆ . ಹೆಣ ಸುಡುವ-ಹೂಳುವ ಕಾಯಕದ ಕಥಾನಾಯಕ. ಗ್ರಾಮೀಣ ಪರಿಸರ. ಜಾಗತಿಕೀಕರಣದ ಆರ್ಥಿಕತೆಗೆ ಒಪ್ಪಿಸಿಕೊಂಡು ವಿಘಟನೆಗೊಳ್ಳುತ್ತಿರುವ ಹಳ್ಳಿ ಮತ್ತು ಗ್ರಾಮ-ಪಟ್ಟಣಗಳ ವೈಷಮ್ಯಗಳು ಈ ಎರಡೂ ಚಿತ್ರಗಳ ಕಥಾವಸ್ತು. ಈ ಸಾಮ್ಯತೆ ಇಲ್ಲಿಂದ ಮುಂದಕ್ಕೆ ಕವಲೊಡೆಯುತ್ತಾ ಬಿಂಬಭಾಷೆಯ ವಿವರಗಳಲ್ಲಿ, ಧೋರಣೆಗಳಲ್ಲಿ, ದೃಷ್ಟಿಕೋನದಲ್ಲಿ, ತಾತ್ವಿಕತೆಯಲ್ಲಿ ಭಿನ್ನವಾಗುತ್ತಾ ಒಟ್ಟು ದರ್ಶನದನೆಲೆಯಲ್ಲಿ ಚಿತ್ರದ ಮೂಲಕ ಸೂಚಿತ ವಾಗುವ ರಾಜಕೀಯ ಆಯ್ಕೆಯಲ್ಲಿ ಗಿರೀಶರ ಚಿತ್ರ ವ್ಯವಸ್ಥೆಯ ಪರವಾಗಿಯೂ, ಸುನೀಲರ ಚಿತ್ರ ವ್ಯವಸ್ಥೆಯ ವಿರುದ್ಧವಾಗಿಯೂ ನಗ್ನವಾಗುತ್ತವೆ. ಗಿರೀಶರು ಚಿತ್ರದ ಮೂಲಕ ಪ್ರತಿಪಾದಿಸುವ ಕನಸು, ಜಾಗತೀಕರಣದ ಆರ್ಥಿಕತೆಯನ್ನು ಅವರು ನಂಬುವ ಪರ್ಯಾಯ ತಾತ್ವಿಕತೆಯೊಂದಿಗೆ ಮುಖಾಮುಖಿಯಾಗಿಸುವ ಬದಲು ಅದರೊಂದಿಗೆ ಅನುಸಂಧಾನ ನಡೆಸಿ ರಾಜಿಮಾಡಿಕೊಳ್ಳುವ ಸಾಧ್ಯತೆಗಳನ್ನು ಬಿಂಬಿಸುತ್ತದೆ. ಅಂತಿಮ ಆಯ್ಕೆ ಕೃಷಿಭೂಮಿಯನ್ನು ಕೈಗಾರಿಕೆಗಾಗಿ ಮಾರಿ ಹಣವಂತರಾಗುವುದೋ ಅಥವಾ ಜಾಗತೀಕರಣದ ಮಾರುಕಟ್ಟೆಯ ಆಕರ್ಷಕ ಅಂಗವಾದ ಪುಷ್ಪೋದ್ಯಮದಲ್ಲಿ ತೊಡಗಿಸಿಕೊಂಡು ಭೂಮಿಯನ್ನು ಉಳಿಸಿಕೊಳ್ಳುವುದೋ ಎಂಬ ವ್ಯಾವಹಾರಿಕ ಜಾಣ್ಮೆಯ ಆಯ್ಕೆಯಾಗುತ್ತದೆ. ತಂದೆಯ ನಾರುವ ಶವವನ್ನು ಮನೆಲ್ಲಿಟ್ಟುಕೊಂಡು ಮನೆಯಲ್ಲಿ ಸಾವಿಲ್ಲವೆಂದು ಜನರನ್ನು ನಂಬಿಸುತ್ತಾ ಹಣದ ವ್ಯವಹಾರವನ್ನು ತಂದೆಯ ಸಾವಿಗಿಂತ ಮುಖ್ಯವಾದ ತುರ್ತನ್ನಾಗಿ ಪರಿಗಣಿಸುವ ನಗರಕೇಂದ್ರಿತ ಮಗ, ಸಂಸ್ಕಾರಗೊಳ್ಳುವವರಗೆ ಶವವನ್ನು ಜತನಮಾಡುವ ಸಂಪ್ರದಾಯನಿಷ್ಠ ಹಿರಿಯ, ಮತ್ತು ಗಂಡನಿಗಾಗಿ (ಆಸ್ತಿಗಾಗಿ) ಹಳ್ಳಿಯ ಮನೆಯಲ್ಲಿ ಅನಿವಾರ್ಯ ಬಂದಿಯಾಗಿ ಚಡಪಡಿಸುವ ಹೆಂಡತಿ, ಮುಗ್ಧತೆಯನ್ನು ಪ್ರತಿನಿಧಿಸುವ (ಬರ್ಗ್‌ಮನ್ ನ ದ ಸೈಲೆನ್ಸ್ ಚಿತ್ರದ ಹುಡುಗನನ್ನು ನೆನಪಿಸುವ) ಪುಟ್ಟ ಮಗಳು ಆಧುನಿಕ ಜೀವನದ ಶ್ರದ್ಧೆ-ನಂಬಿಕೆ-ಕನಸುಗಳನ್ನು ಚಿತ್ರವಾಗಿಸುತ್ತಾರೆ. ಮತ್ತೊಂದು ಕಡೆ, ಹೆಂಡ-ಮಾಂಸಗಳ ಸೇವೆ ಬೇಡುವ ಸುಡುಗಾಡು ಸಿದ್ಧರ ಹಿಂಬಾಲಕರಾದ, ಸಮಾಧಿತೋಡುವ ಕಾಯಕದ ದಲಿತ ದಂಪತಿಯ ಶ್ರದ್ಧೆ-ನಂಬಿಕೆ-ಕನಸುಗಳ ಚಿತ್ರಣವಿದೆ. ಸಾಮಾನ್ಯಜನರ ನಂಬಿಕೆ-ಕನಸುಗಳನ್ನು ನಾಶಮಾಡದೆಯೂ ನೈಜ ಅಭಿವೃದ್ಧಿ/ಪ್ರಗತಿಪರಬದಲಾವಣೆ ಸಾಧ್ಯವೆ ಎಂಬ ಅನ್ವೇಷಣೆ ತಮ್ಮ ಚಿತ್ರದ ಆಶಯ ಎಂದು ಗಿರೀಶರು ವಿವಿಧ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ.

ಸೊಂತ ಊರು ಚಿತ್ರ ಸ್ಮಶಾನದ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಸಸ್ಯಗಳ ಹಚ್ಚಹಸಿರು ಮತ್ತು ಕಲ್ಲುಗೋಡೆಯ ವಿನ್ಯಾಸದ ಹಿನ್ನೆಲೆಯಲ್ಲಿ ಶಿಷ್ಟಲಯ-ಗೇಯತೆಯನ್ನು ಅಶಿಷ್ಟ ಲಯ-ಗೇಯತೆ ಯೊಂದಿಗೆ ಬೆರೆಸಿ ಹೊಮ್ಮುವ ತಮಟೆ ಸಂಗೀತಕ್ಕೆ ಕುಣಿಯುವ ದಲಿತ ಮಕ್ಕಳು, ಹಗ್ಗದ ಮಂಚದಮೇಲೆ ಕೈಕಾಲು ಚೆಲ್ಲಿ ಮಲಗಿದ ರುದ್ರ, ಮಕ್ಕಳನ್ನು ಹೆಂಡತಿಯ ಮಡಲಿಗೆ ಹಾಕಿ ಸಾಕುವ ಹೊಣೆಯನ್ನು ಹೊರದೆ ಓಡಿಹೋಗಿರುವ ಬೇಜವಾಬ್ದಾರಿಯ ಗಂಡನನ್ನು ರುದ್ರನೊಟ್ಟಿಗೆ ಸೇರಿಸಿ ಬಯ್ಯುವ ತರುಣಿತಾಯಿ ಚಿತ್ರದ ಸಾಮಾಜಿಕ ಕಥನದ ನಾಂದಿಯಂತಿದ್ದಾರೆ. ಊರಿನಲ್ಲಿ ಯಾರಾದರೂ ಸತ್ತರೆ ಮಾತ್ರ ಜೀವತುಂಬಿಕೊಳ್ಳುವ ದಲಿತ ಕುಟುಂಬದ ಮುಖ್ಯಸ್ಥ ರುದ್ರ ಹರಿಶ್ಚಂದ್ರನ ಸ್ಮಶಾನಕಾಯಕ, ಬೂದಿಬಡುಕ ಬಡ ಶಿವನ ಪ್ರತೀಕದಂತಿದ್ದಾನೆ. ನಾರುವ ಹೆಣವನ್ನು ತೆಗೆಸಲು ಕರೆಬಂದಾಗ ಸಂತೋಷಗೊಂಡು ಮೇಲೇಳುವ ರುದ್ರ ವಾಸ್ತವವಾಗಿ ಸತ್ತಹಂದಿಯನ್ನು ಸಾಗಿಸಲು ಕರೆಸಿದ್ದಾರೆಂದು ಗೊತ್ತಾದಾಗ ಸುತ್ತಲಿನ ಮೇಲ್ಜಾತಿಯವರ ಧೋರಣೆಗಳನ್ನು ತನ್ನದೇ ಆದ ರೀತಿಯಲ್ಲಿ ಟೀಕಿಸುತ್ತಾನೆ. ಒಂದು ಸತ್ತ ಹಂದಿಗಾಗಿ ನನ್ನನ್ನು ಯೋಗನಿದ್ರೆಯಿಂದ ಎಬ್ಬಿಸಿದಿರಾ ಎಂಬ ಅವನ ಮಾತುಗಳು ಈ ಪಾತ್ರದ ಪೌರಾಣಿಕ ತಿಳುವಳಿಕೆ, ಲೋಕಾನುಭವ ಮತ್ತು ಜ್ಞಾನವಂತಿಕೆಯನ್ನು ಪರಿಚಯಿಸುತ್ತವೆ. ದೇವರ ಕುರಿತಾದ ಮೇಲ್ಜಾತಿ/ವರ್ಗದ ಜನರ ಶ್ರದ್ಧೆ, ಪಾವಿತ್ರ್ಯತೆ ಮತ್ತು ಆಧ್ಯಾತ್ಮಿಕತೆಗಳನ್ನು ಧ್ವಂಸಮಾಡುವಂಥ ಈ ಪಾತ್ರದ ತಾತ್ವಿಕದಂಗೆ ಚಿತ್ರದುದ್ದಕೂ ಹರಿಯಲು ಇವು ಸಹಾಯಕವಾಗಿವೆ. ನಮ್ಮ ರಾಜ್ಯದಲ್ಲಿ ಎಲ್ಲರೂ ಸಮಾನರು ಎಂಬ ಅವನ ಮಾತಿನಲ್ಲಿ ಸಾವಿನ ಲೋಕ ಮಾತ್ರವಲ್ಲ ಸರ್ವಸಮಾನತೆಯ ಎಡಪಂಥೀಯ ಸಮಾಜದ ಕನಸಿನ ಧ್ವನಿ ಸಹ ಇದೆ.

ಊರಿನಲ್ಲಿ ಯಾರಾದರೂ ಸತ್ತರೆ ತನ್ನ ಬದುಕಿಗೆ ಪೂರಕವಾದ ಆದಾಯವಿದೆಯೆಂಬ ಜೀವಸಂಭ್ರಮ ಎರಡೂ ಚಿತ್ರಗಳ ಕಥಾನಾಯಕರ ಸಮಾನ ಗುಣ. ರೋಗಿಗಳ ಸಂಖ್ಯೆ ಹೆಚ್ಚಿದಷ್ಟೂ ವೈದ್ಯರ ಗಳಿಕೆ ಹೆಚ್ಚುವಂತೆ ಅಪರಕರ್ಮಗಳಿಗೆ ಸಂಬಂಧಿಸಿದ ಎಲ್ಲಾ ವೃತ್ತಿಪರರಿಗೆ ಜನರು ಸತ್ತರೆ ಸಂತೋಷ. ಇದೊಂದು ತಲೆಕೆಳಗಾದ ನಿರೀಕ್ಷೆ. ಗಿರೀಶರ ಚಿತ್ರದ ಈರ‍್ಯ ಮತ್ತು ಅವನ ಹೆಂಡತಿ, ಸುನೀಲರ ಚಿತ್ರದ ರುದ್ರ ಮತ್ತು ಅಪರಕರ್ಮ ಮಂತ್ರಗಳನ್ನು ಹೇಳುವ ಬಡ ಪುರೋಹಿತ ಇಂಥ ತಲೆಕೆಳಗು ನಿರೀಕ್ಷೆಯ ಜನ. ಹರಕು ಬಟ್ಟೆಯ ಈರ‍್ಯ ತಾನು ಹೆಂಡ-ಮಾಂಸಪ್ರಿಯನಾದ ಸುಡುಗಾಡುಸಿದ್ಧನ ಭಕ್ತನೆಂದು ತೋರಿಸಿಕೊಂಡರೆ ಬೂದಿಬಣ್ಣದ ಅರೆಬೆತ್ತಲೆ ರುದ್ರ ತನ್ನನ್ನು ಭಸ್ಮಭೂಷಿತ ಶಿವನೊಂದಿಗೆ ಸಮೀಕರಿಸಿಕೊಳ್ಳುತ್ತಾನೆ. ಊರಿಗೆ ಸಿದ್ಧನ ಆಗಮನದ ಸೂಚನೆ ಏಕಕಾಲಕ್ಕೆ ಯಾರದೋ ಸಾವಿನ ಸೂಚನೆಯೂ ಹೌದು, ಈರ‍್ಯನ ಜೀವನೋಪಾಯದ, ಅಂದರೆ ಬದುಕಿನ ಸಾಧ್ಯತೆಯೂ ಹೌದು. ಇವುಗಳ ತಳದಲ್ಲಿ ಆಹಾರದ ಮೂಲವಾದ ಕೃಷಿಭೂಮಿಯ ಒಡೆತನದ ಪ್ರಶ್ನೆ ಇದೆ. ಆದರೆ ಅದು ವ್ಯಕ್ತಿಗತವಾದದ್ದು. ರುದ್ರನ ಕ್ಷೇತ್ರವಾದ ಸ್ಮಶಾನ ಯಾರಿಗೂ ಸೇರಿದ್ದಲ್ಲ. ಆದರೆ ಎಲ್ಲರಿಗೆ ಹೇಗೋ ಹಾಗೆ ಅವನಿಗೂ ಸೇರಿದ್ದು. ಆದ್ದರಿಂದ ಸಾಮಾಜಿಕವಾದದ್ದು.
ಗಿರೀಶರ ಚಿತ್ರದ ಈರ‍್ಯ ಊರಿಂದ ದೂರ ಬದುಕುವ, ಕೃಷಿಭೂಮಿಸಂಬಂಧದ ಯಾವುದೇ ತಾತ್ವಿಕ ಪೂರ್ವಾಗತ್ಯ ಮತ್ತು ರಾಜಕೀಯ ಅರಿವಿಲ್ಲದ ಅತಿ ಸಾಮಾನ್ಯಪಾತ್ರ. ತನ್ನ ಕನಸಿನ ಬಗ್ಗೆ ಇಟ್ಟುಕೊಂಡ ನಂಬಿಕೆ, ಮುಗ್ಧತೆ ಮತ್ತು ಅದು ಸುಳ್ಳಾಗಲಾರದೆಂಬ ಅಚಲ ಶ್ರದ್ಧೆ, ಅವನನ್ನು ವಿಲಕ್ಷಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಹೊಟ್ಟೆಪಾಡಿಗಾಗಿ ಶವಹುಗಿಯುವ ಗುಂಡಿಯನ್ನು ತೋಡುವ ಕಾಯಕ ಅವನದು. ಬೀಜ ಬಿತ್ತುವುದು, ಶವವನ್ನು ಹುಗಿಯುವುದು ವಿರುದ್ಧ ಉದ್ದೇಶದ ಒಂದೇಬಗೆಯ ಕ್ರಿಯೆಗಳು. ಇವುಗಳನ್ನು ಬೆಸೆಯುವ ನವಿರು ಎಳೆಯನ್ನು ಹಿಡಿದು ಒಂದರಿಂದ ಮತ್ತೊಂದಕ್ಕೆ ಈರ‍್ಯ ಜಿಗಿಯುತ್ತಾನೆ. ಅವನು ಸಮಾಧಿಗುಂಡಿಯ ಬದಲು ಗಿಡನೆಡುವ ಗುಂಡಿಯನ್ನು ತೋಡಲು ತೊಡಗುವುದರೊಂದಿಗೆ ಚಿತ್ರ ಮುಗಿಯುತ್ತದೆ. ಇದಕ್ಕೆ ಪೂರಕವಾದ ತಿಳಿವು ಸುಡುಗಾಡುಸಿದ್ಧನಿಂದ ಸಾಂಕೇತಿಕವಾಗಿ ಅವನಿಗೆ ದೊರೆಯುತ್ತದೆ. ಈ ಜಿಗಿತ ಮೂಲತಃ ಬೌದ್ಧಿಕವಾಗಿದೆ. ಆನುಭಾವಿಕ, ಸಾಂಸ್ಕೃತಿಕ ಆಯಾಮಗಳ ಹೊಳಹು ಪಡೆದು ಆಕರ್ಷಕವಾಗಿದೆ. ಜನರ ಅವಹೇಳನ, ಅಸಮ್ಮತಿಗಳ ಹೊರತಾಗಿಯೂ ದಲಿತನೊಬ್ಬ ಸಾಂಕೇತಿಕವಾಗಿ, ಆದರೆ ವ್ಯಕ್ತಿಮಟ್ಟದಲ್ಲಿ ಕೃಷಿಸಂಬಂಧಿ ಕಾಯಕದಲ್ಲಿ ತೊಡಗುವ ರಾಜಕೀಯ ಕನಸಾಗಿದೆ. ಇದು ಗಿರೀಶರ ತಾತ್ವಿಕತೆ ಮತ್ತು ರಾಜಕೀಯದ ಚಿತ್ರ.

ಸುನೀಲರ ಚಿತ್ರದ ರುದ್ರ ಚಿತ್ರದ ಪ್ರಾರಂಭದಲ್ಲೇ ಜೀವಪರವಾದ ನಿಲುವು, ಸಾವಿನ ಅನಿವಾರ್ಯತೆಯ ತಾತ್ವಿಕತೆ, ವರ್ಗವೈಷಮ್ಯದ ರಾಜಕೀಯ ಅರಿವು ಮತ್ತು ಸಾಮಾಜಿಕ ಸಮಾನತೆಯ ಕನಸನ್ನು ಪಡೆದುಕೊಂಡು ಸಿದ್ಧವಾಗಿರುವ ಪಾತ್ರ. ಅವನ ಪ್ರತಿ ಮಾತಿನಲ್ಲೂ ಸಮಾನತೆ, ಮಾನವೀಯತೆ, ನ್ಯಾಯ-ಅನ್ಯಾಯ ಕುರಿತಾದ ವಿವೇಚನೆ, ಮೇಲ್ಜಾತಿಯ ಜನರ ಅಮಾನವೀಯತೆ ಕುರಿತ ತಿರಸ್ಕಾರ, ಜಾಗತೀಕರಣಪರವಾದ ಬದಲಾವಣೆ ಜೀವಪರವಲ್ಲವೆಂಬ ದೃಢ ತೀರ್ಮಾನ ವ್ಯಕ್ತವಾಗುತ್ತವೆ. ಸಾವು ವ್ಯಕ್ತಿಗೆ ಬರಬೇಕೇ ಹೊರತು ಊರಿಗಲ್ಲ, ರಸ್ತೆಯ ಮೇಲೆ ಜನರು ಸಾಗಬೇಕೇ ಹೊರತು, ಜನರಮೇಲೇ ರಸ್ತೆ ಹೋಗುವುದಲ್ಲ, ದೋಣಿ ನೀರಿನ ಮೇಲಿರಬೇಕೇ ಹೊರತು, ನೀರು ದೋಣಿಯೊಳಗಲ್ಲ, ಎಲ್ಲರೂ ಆಹಾರ ತಿಂದೇ ಜೀವಿಸಬೇಕಾಗಿರುವುದರಿಂದ ಆಹಾರ ಬೆಳೆಯಲು ಅಗತ್ಯವಾದ ಹಳ್ಳಿಗಳ ನಾಶ ಸಲ್ಲ, ಆಹಾರ ಸಮೃದ್ಧಿಯ ಹಸಿರು, ಸರ್ವಸಮಾನತೆಯ ದ್ಯೋತಕವಾದ ಕೆಂಪು ಸಮಬಾಳಿನ ಆದರ್ಶಬಣ್ಣಗಳೆಂದು ರುದ್ರ ಬಾಯಿಬಿಟ್ಟು ಹೇಳುತ್ತಾನೆ. ಅವನ ಪಾತ್ರದ ಬೌದ್ಧಿಕ ಹಿನ್ನೆಲೆಗೆ ಭಾರವೆನಿಸ ಬಹುದಾದ ಮಾತು-ಗ್ರಹಿಕೆ-ನಡವಳಿಕೆಗಳು ಸುನೀಲರ ಚಿತ್ರವನ್ನು ವಾಚಾಳಿತನಕ್ಕೆ ದೂಡುತ್ತವೆ. ಚಿತ್ರದ ತಾತ್ವಿಕ ಸ್ಪಷ್ಟತೆ, ಆಯ್ಕೆಯ ಅಸಂಧಿಗ್ಧತೆಗಳು ಅದರ ಕಲಾತ್ಮಕತೆಯನ್ನು ಮುಕ್ಕುಮಾಡಿದಂತೆ ತೋರುತ್ತದೆ. ಆದರೆ ರುದ್ರನ ಕನಸು ಆನುಭಾವಿಕವಲ್ಲ. ಸಾಂಸ್ಕೃತಿಕವೂ ಅಲ್ಲ. ಸಾವಿನ ಅನಿವಾರ್ಯತೆಯ ಹಿನ್ನೆಲೆಯಲ್ಲಿ ರೂಪಿತವಾಗುವ ಶುದ್ಧ ಲೌಕಿಕ ಕನಸು. ಇದು ವ್ಯಕ್ತಿಗತವಲ್ಲ. ಇಡೀ ಊರನ್ನು ಒಳಗೊಂಡರೆ ಮಾತ್ರ ಸಂಗತವಾಗುವ ಸಾಮಾಜಿಕತೆಯದ್ದು. ಕೊನೆಯಲ್ಲಿ ರುದ್ರ ಧರಿಸುವ ಚೆಗೆವಾರನ ಚಿತ್ರದ ಅಂಗಿಯ ಮೂಲಕ ಸೂಚಿತವಾಗುವ ಕನಸು ಈರ‍್ಯನ ಕನಸಿನಂತೆ ಸುಕೋಮಲವಲ್ಲ. ಸುತ್ತಲಿನ ಜನರ ಅಪನಂಬಿಕೆ ತಪ್ಪುಗ್ರಹಿಕೆಗಳಿಗೆ ಈಡಾಗಬಹುದಾದ ತ್ಯಾಗ ಬಲಿದಾನಗಳನ್ನು ಬೇಡುವ ಕನಸು. ಇಲ್ಲಿಯೂ ದುರ್ಬಲ ಎಳೆ ಹಿಡಿದು ಗಮ್ಯ ತಾತ್ವಿಕತೆಗೆ ಚಿಮ್ಮುವ ಬೌದ್ಧಿಕ ಜಿಗಿತವಿದೆ. ಇದು ಸುನೀಲರ ತಾತ್ವಿಕತೆ ಮತ್ತು ರಾಜಕೀಯದ ಚಿತ್ರ.

ಗಿರೀಶರ ಚಿತ್ರ ಅವರ ಉಳಿದ ಚಿತ್ರಗಳಂತೆ, ಸಿನಿಮಾ ಶೈಲಿಗಿಂತ ಸಾಹಿತ್ಯಕಶೈಲಿಯ ಸಂಕೇತ ಮತ್ತು ಪ್ರತಿಮೆಗಳನ್ನು ಹೆಚ್ಚಾಗಿ ಬಳಸುತ್ತದೆ. ಪಟ್ಟಣ-ಗ್ರಾಮೀಣ, ಕನಸು-ವಾಸ್ತವ, ಸಾವು-ಬದುಕು, ನಾಶ-ಸೃಷ್ಟಿ, ಶಿಷ್ಟ-ಅಶಿಷ್ಟ, ನಂಬಿಕೆ-ವಿಚಾರ, ಕತ್ತಲೆ-ಬೆಳಕು, ಹಿಂದೂ-ಮುಸಲ್ಮಾನ, ಕೃಷಿ-ಉದ್ಯಮ ಹೀಗೆ ದ್ವಂದ್ವಾತ್ಮಕ ಸಂಕೇತಗಳನ್ನು ಮುಂದಿಟ್ಟು ಕೊನೆಗೆ ಎರಡೂ ಅಲ್ಲದ ಅಥವಾ ಆಗಿರುವ ಸಂಧಿಗ್ಧತೆಯ, ಇಲ್ಲವೆ ಸಂಧಾನಾತ್ಮಕ ನಿಲುವನ್ನು ವರ್ತಮಾನ ಬದುಕಿನ ಆದರ್ಶ ಆಯ್ಕೆಯನ್ನಾಗಿ ಬಿಂಬಿಸುತ್ತದೆ. ಈ ಸಂಧಿಗ್ಧತೆ-ಸಂಧಾನಾತ್ಮಕತೆಯೇ ಚಿತ್ರದ ಕಲಾತ್ಮಕತೆಯನ್ನು ಹೆಚ್ಚಿಸಿರುವಂತೆ ಭಾಸವವಾಗುತ್ತದೆ. ತಾತ್ವಿಕವಾಗಿ ಗಾಂಧಿಮಾರ್ಗದೊಂದಿಗೆ ಕಸಿಮಾಡಿದ ವ್ಯಕ್ತಿಗತವಾದ ಪ್ರಗತಿಪರತೆ ಬಹುಸುಲಭವಾಗಿ ಮಧ್ಯಮವರ್ಗೀಯ ಚಿತ್ರಸಹೃದಯರ ಸಮ್ಮತಿಯನ್ನು ಪಡೆಯುತ್ತದೆ. ಸುನೀಲರ ಚಿತ್ರಕ್ಕೆ ಈ ಸೌಲಭ್ಯವಿಲ್ಲ.

ಸಮಾಧಿಯ ಜಗಲಿಮೇಲೆ ಕುಳಿತು ನಿರ್ಭಿಡೆಯಿಂದ ತನ್ನ ಚಿಂತನೆ, ತೀರ್ಮಾನಗಳನ್ನು ಹರಿಬಿಡುವ ರುದ್ರ ನಿರ್ದೇಶಕರ ಮುಖವಾಣಿ. ಬಹುಮಟ್ಟಿಗೆ ಊಳಿಗಮಾನ್ಯ ಮೌಲ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡ ಊರಿನ ಜನರ ಜಾತಿ-ವರ್ಗಮೂಲದ ಅಹಂಕಾರಕ್ಕೆ ಚಾಟಿಯೇಟುಕೊಡಬಲ್ಲ ಚಿಕಿತ್ಸಕ. ಪ್ರಸ್ತುತ ಸಮಾಜದ ಆರ್ಥಿಕ ಮತ್ತು ಅಮಾನವೀಯ ಸಂಬಂಧಗಳನ್ನು ಎಡಪಂಥೀಯ ನೆಲೆಯಿಂದ ಅರ್ಥೈಸುವ ಚಿಂತಕ. ಶ್ರೀಮಂತಿಕೆ-ಜಾತಿಭೇದ-ವರ್ಗಭೇದಗಳ ಸಾವಿನಲ್ಲಿ ಬಡವರ ಕಲ್ಯಾಣವಿದೆಯೆಂದು ಸಾರಿ ಸಾರಿ ಹೇಳುವ ತತ್ವಪ್ರಚಾರಕ. ಮೇಲ್ವರ್ಗದ ಜೊತೆಗೆ ಸುಪ್ತವಾಗಿ ಗುರುತಿಸಿಕೊಳ್ಳುವ ಚಿತ್ರಸಹೃದಯರಿಗೆ ಕಿರಿಕಿರಿಯುಂಟುಮಾಡಬಲ್ಲ ಒರಟು ಪಾತ್ರ.
ಸೊಂತ ಊರು ಚಿತ್ರದ ಇನ್ನೊಂದು ಮುಖ್ಯ ಎಳೆ ಗಂಡು ಹೆಣ್ಣಿನ ಸಂಬಂಧ ಕುರಿತಾದದ್ದು. ಇದರಲ್ಲಿ ಮಹಿಳೆಯ ಆಯ್ಕೆಯ ಪ್ರಶ್ನೆ, ಕಾಮ, ಪ್ರೇಮಗಳ ಸಾಮಾಜಿಕ ಸ್ವರೂಪ ಮತ್ತು ನೈತಿಕತೆಗಳು ಚರ್ಚೆಗೊಳಗಾಗುತ್ತವೆ. ಗಿರೀಶರ ಚಿತ್ರದಲ್ಲಿ ಈರ‍್ಯನ ಹೆಂಡತಿಯ ಆಳುತನ, ಗ್ರಾಮೀಣ-ದಲಿತತನ, ಕನಸಿನ ಸಹಯೋಗ, ಒರಟು ಸೌಂದರ್ಯ-ವಾಚಾಳಿತನಗಳು, ಮಾವನ ಶವವಿರುವ ಮನೆಯಿಂದ ಆದಷ್ಟುಬೇಗ ನಿರ್ಗಮಿಸಬಯಸುವ ಒಡತಿ ಹೆಣ್ಣಿನ ಸುರೂಪ, ನಡವಳಿಕೆಗಳಿಗೆ ನೇರವಾಗಿ ವಿರುದ್ಧವಾಗಿವೆ. ಅವು ಈರ‍್ಯನ ಪಾತ್ರ ಪ್ರತಿನಿಧಿಸುವ ಜೀವನಕ್ರಮದೊಳಗೆ ಗಮನಿಸಬಹುದಾದ ವ್ಯತ್ಯಾಸಗಳಾಗಿ ಹಿನ್ನೆಲೆಯಲ್ಲಿ ಉಳಿಯುತ್ತವೆ.

ಸುನೀಲರ ಚಿತ್ರದಲ್ಲಾಗುವಂತೆ ಭೂಮಿಯ ಪ್ರಶ್ನೆಯಷ್ಟೆ ಮುಖ್ಯವಾದ ವೈರುಧ್ಯ-ವೈಷಮ್ಯಗಳಾಗಿ ಮುನ್ನಲೆಗೆ ಬರುವುದಿಲ್ಲ. ಸಂಬಂಧಗಳ ವಾಣಿಜ್ಯೀಕರಣ, ನೈತಿಕತೆ, ಶೀಲ, ಮುಂತಾದ ಜಟಿಲ ಪ್ರಶ್ನೆಗಳನ್ನು ಮಾನವೀಯತೆ, ನೈಜಪ್ರೇಮಗಳ ನೆಲೆಯಿಂದ ಅರ್ಥೈಸುವ ಪ್ರಾತಿನಿಧಿಕ ಪಾತ್ರಗಳಾಗಿ ಸೈಕಲ್ಲಿನ ಮೇಲೆ ಸಂಡಿಗೆ ಮಾರುವ ಕುಂಟ ಬುಜ್ಜಿ ಮತ್ತು ಮಲ್ಲಿಯ ಜೋಡಿಯಿದೆ. ತಾನು ವೇಶ್ಯೆಯಾಗಿರುವುದರಿಂದ ಊರಿನಲ್ಲಿನ ಎಷ್ಟೋ ಹೆಣ್ಣುಮಕ್ಕಳು ಲೈಂಗಿಕದೌರ್ಜನ್ಯದಿಂದ ಪಾರಾಗಿದ್ದಾರೆಂದು ಹೇಳುವ ಮಲ್ಲಿಗೆ, ಸಂಡಿಗೆ ಮಾರುವ ಕುಂಟ ಬುಜ್ಜಿಯ ನಿರ್ಮಲಪ್ರೀತಿಗೆ ಸ್ಪಂದಿಸಬಲ್ಲ ಅಂತಃಕರಣವಿದೆ. ವೇಶ್ಯಾಜೀವನದ ಒರಟುಸುಖಗಳನ್ನು, ಸ್ವಚ್ಛಂದತೆಯನ್ನು ಮದುವೆಗಾಗಿ ಬಿಡಲೊಲ್ಲದೆ, ಮತ್ತು ಅವನ ನವಿರು ಪ್ರೀತಿಯ ಗಟ್ಟಿತನವನ್ನು ಪರೀಕ್ಷಿಸಲು, ಅಂಥವರಿಗೆ ಉತ್ತಮಸಂಬಂಧ ಸಿಗಲೆಂಬ ಸದುದ್ದೇಶದಿಂದಲೂ, ಮದುವೆಯಾದಮೇಲೂ ವೇಶ್ಯೆಯಾಗಿರುವ ಸ್ವಾತಂತ್ರ್ಯದ ಷರತ್ತು, ಕಾರಿನ ಬೇಡಿಕೆಗಳನ್ನು ಬುಜ್ಜಿಯ ಮುಂದಿಡುತ್ತಾಳೆ. ಅವನ್ನೂ ಒಪ್ಪಿ ಮದುವೆಯಾಲು ಅವನು ಸಿದ್ಧನಾದಾಗ ಎಲ್ಲರಂತೆ ಗರತಿಯಾಗಿ ಬದುಕಿ ಬಾಳುವ ಕನಸು ಕಾಣುತ್ತಾಳೆ. ಕಾರುಕೊಳ್ಳಲು ಪರದಾಡುವ ಬುಜ್ಜಿಗೆ ಗೊತ್ತಿಲ್ಲದಂತೆ ರುದ್ರನ ಮೂಲಕ ತಾನೇ ಹಣವೊದಗಿಸುತ್ತಾಳೆ. ಬುಜ್ಜಿ ಶವವಾಗಿ ಬರುವ ಆಕಸ್ಮಿಕದ ದಾರುಣತೆಗೆ ನಲುಗಿ ಸಾಯುತ್ತಾಳೆ. ಸಾಯುವ ಮೊದಲು ತನ್ನ ಶವಸಂಸ್ಕಾರದ ಕಟ್ಟಿಗೆಯ ಖರ್ಚಿಗೆ ಬೇಕಾದ ಹಣವನ್ನು ಕುಪ್ಪಸದಲ್ಲಿ ಅಡಗಿಸಿಡುವುದು ಮಾತ್ರವಲ್ಲ ಅದು ಒಂದುವೇಳೆ ಗಿರಾಕಿಗಳ ಅಪ್ರಾಮಾಣಿಕತೆಯಿಂದಾಗಿ ರುದ್ರನಿಗೆ ಸಿಗದೆ ಹೋದರೆ ಹಾಗೇ ಮಣ್ಣುಮಾಡಬೇಕೆಂಬ ಸೂಚನೆಯನ್ನೂ ಕೊಡುತ್ತಾಳೆ. ರುದ್ರ ಆ ಹಣಕ್ಕಾಗಿ ಹೆಣದ ಕುಪ್ಪಸವನ್ನು ತಡಕಿದಾಗ ಅದನ್ನು ಅವನ ವಿಕೃತ ಕಾಮದ ಅಭೀಪ್ಸೆಯೆಂದು ಬಗೆದು ಅತೀವ ಜಿಗುಪ್ಸೆ ತೋರಿಸುವ ರುದ್ರನ ಮಗಳು/ಸೊಸೆಯ ನೈತಿಕತೆಯೊಂದಿಗೆ ನಿಷ್ಕರ್ಷಿಸುವ ಪ್ರಸಂಗಕ್ಕೆ ಈ ಸೂಚನೆ ದಾರಿಮಾಡಿಕೊಡುತ್ತದೆ. ಅಂಥವಳು ಪಟ್ಟಣದಲ್ಲಿ ವೇಶ್ಯೆಯಾಗಿರಲು ಮಕ್ಕಳನ್ನೂ ತೊರೆದು ಹೋಗುವ ಸನ್ನಿವೇಶ ನಂತರದ ದೃಶ್ಯದಲ್ಲಿದೆ.

ಕುಂಟ ಬುಜ್ಜಿ ಹಳ್ಳಿ ಹಳ್ಳಿಗೆ ಸೈಕಲ್ಲಿನ ಮೇಲೆ ಹೋಗಿ ಸಂಡಿಗೆ ಮಾರುವ ಬಡ ವ್ಯಾಪಾರಿ. ಅವನ ಪ್ರೇಮ, ಮದುವೆಯ, ಕನಸು, ಕಾರಿನ ಆಸೆ ಇತ್ಯಾದಿಯೆಲ್ಲಾ ಕೆಳವರ್ಗದ ದ್ವಂದ್ವಗಳೊಂದಿಗೆ ತಳುಕುಹಾಕಿಕೊಂಡಿವೆ. ರುದ್ರನನ್ನು ಸೈಕಲ್ಲಿನ ಮೇಲೆ ಕೂಡಿಸಿಕೊಂಡು ಊರಿನತ್ತ ಧಾವಿಸುವ ಅವನ ಕ್ರಿಯೆಗಳಲ್ಲಿ ನೈಜ ನೈತಿಕತೆಯನ್ನು ನೈಜಮಾನವೀಯತೆಯೊಂದಿಗೆ ಬೆಸೆಯುವ ಸಾಂಕೇತಿಕತೆಯಿದೆ. ಕಡಿಮೆ ಬೆಲೆಯಲ್ಲಿ ಕಾರುಕೊಳ್ಳುವ ಅವನ ಯತ್ನದಲ್ಲಿ ಬಿಂಬಿತವಾಗುವ ಹಾಸ್ಯ, ಕೆಳಮಧ್ಯಮವರ್ಗೀಯರ ಕಾರಿನ ಕನಸನ್ನು, ಉದ್ಯಮಿಗಳ ಅಪ್ರಾಮಾಣಿಕತೆಯನ್ನು ಒಟ್ಟಿಗೆ ವಿಡಂಬಿಸುತ್ತದೆ.
ಮೇಲ್ಜಾತಿ, ಕೆಳಜಾತಿಗಳಲ್ಲಿನ ದೀನರ ದಲಿತತನವನ್ನೂ ಸುನೀಲರ ಚಿತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಜಾಗತೀಕರಣದ ಔದ್ಯಮಿಕ ಸುಳಿಗಳಲ್ಲಿ ಸಿಕ್ಕ ಊರು ವಿಘಟನೆಗೊಳ್ಳುತ್ತದೆ. ಭೂಮಿಯುಳ್ಳ ಜನ ಆಸೆಪಟ್ಟು ಅಥವಾ ಗತ್ಯಂತರವಿಲ್ಲದೆ ಮಾರಿಕೊಂಡು ಪಟ್ಟಣಕ್ಕೆ ಗುಳೇಹೋಗುವಾಗ ಭೂಮಿಯಿಲ್ಲದ ಅಪರಕರ್ಮ ಪುರೋಹಿತನೂ ಊರುಬಿಡಲು ನಿರ್ಧರಿಸುತ್ತಾನೆ. ಊರುಬಿಡಲೊಲ್ಲದ ರುದ್ರನೊಂದಿಗೆ ಸ್ಮಶಾನದಲ್ಲಿ ಕುಳಿತು ಕಷ್ಟ-ಸುಖದ ಮಾತನಾಡುತ್ತಾನೆ. ಯಾರಾದರೂ ಶ್ರೀಮಂತರು ಸತ್ತರೆ ತನಗೆ ಹೇಳಿಕಳಿಸಬೇಕೆಂದು ರುದ್ರನನ್ನು ವಿನಂತಿಸುತ್ತಾನೆ. ಅವರಿಬ್ಬರ ನಡುವಿನ ಜಾತಿಭೇಧ ಆದಾಯದ ಪ್ರಶ್ನೆ ಬಂದಾಗ ಕರಗಿಹೋಗುತ್ತದೆ. ಇಂಥದೇ ಸನ್ನಿವೇಶ ಪಟ್ಟಣದಲ್ಲಿ (ಪುಣ್ಯಕ್ಷೇತ್ರಗಳಲ್ಲಿನ ಪಂಡ-ಪುರೋಹಿತರಂತೆ) ಗಿರಾಕಿಗಾಗಿ ಸ್ಪರ್ಧಿಗಳೊಂದಿಗೆ ಕಾಯುವ ಅದೇ ಪುರೋಹಿತನನ್ನು ರುದ್ರ ಭೇಟಿ ಯಾದಾಗ ಮರುಕಳಿಸುತ್ತದೆ.
ನವ ಆರ್ಥಿಕನೀತಿಯಿಂದಾಗಿ ಭಾರತದಲ್ಲಿ ಈಗ ಸಂಭವಿಸುತ್ತಿರುವ ಕೃಷಿಭೂಮಿಯ ನಾಶ, ಹಳ್ಳಿಗಳ ವಿಘಟನೆ ಮತ್ತು ನಗರೀಕರಣದ ವಿಪತ್ತುಗಳು ಸೊಂತ ಊರು ಚಿತ್ರದ ಭಿತ್ತಿ. ಭೂಮಿಯನ್ನು ಅಭಿವೃದ್ಧಿಗಾಗಿ ಮಾರಿ ಎಂದು ಉಪದೇಶಿಸುವ ಅಧಿಕಾರಿಗಳು, ಮಾರುವುದು ಒಳ್ಳೆಯದೋ ಕೆಟ್ಟದ್ದೋ ಎಂಬ ಗೊಂದಲಕ್ಕೊಳಗಾದ ಊರಿನ ಜನ, ಮಾರಿ ಸಿಗುವ ಲಕ್ಷಗಟ್ಟಲೆ ಹಣದಿಂದ ಸಾಲತೀರಿಸಿ ಪಟ್ಟಣದಲ್ಲಿ ಸುಖವಾಗಿಬದುಕಬಹುದೆಂದು ನಂಬುವ ಯುವಕ, ಹಳೆಯ-ಹೊಸ ಮೌಲ್ಯಗಳ ಸಂಘರ್ಷದಲ್ಲಿ ಸಿಕ್ಕಿ ಪ್ರಾಣಬಿಡುವ ಹಿರಿಯ, ಯಾರೇ ಭೂಮಿ ಮಾರಿದರೂ ತಾನು ಮಾತ್ರ ಮಾರುವುದಿಲ್ಲವೆಂದು ಸಭೆಯಲ್ಲಿ ಘೋಷಿಸಿ ನಗೆಯುಕ್ಕಿಸುವ ಸ್ಮಶಾನದೊಡೆಯ ರುದ್ರ, ಹಳ್ಳಿಯಲ್ಲಿನ ಅಂಗಡಿಮಾರಿ ಪಟ್ಟಣದಲ್ಲಿನ ಅಂಗಡಿಯಲ್ಲಿ ನೌಕರನಾಗುವ ವ್ಯಾಪಾರಿ, ಹಳ್ಳಿಯ ಗರತಿಯ ನೈತಿಕತೆಯಿಂದ ಪಟ್ಟಣದ ವೇಶ್ಯೆಯ ಅನೈತಿಕತೆಗೆ ಜಾರುವ ರುದ್ರನ ಮಗಳು, ಊರಿನ ಅನಿವಾರ‍್ಯ ವೇಶ್ಯೆಯಾಗಿ ಗರತಿಯ ನೈತಿಕತೆಯನ್ನು ಅಪೇಕ್ಷಿಸುವ ಮಲ್ಲಿ ಎಲ್ಲದಕ್ಕೂ ಒಂದಲ್ಲ ಒಂದುರೀತಿಯಲ್ಲಿ ಸಾಕ್ಷಿಯಾಗಿ ತಾಯಿ-ತಂದೆ ಇದ್ದೂ ಅವರ ಪೋಷಣೆ ದೊರೆಯದೆ ರುದ್ರನ ನೆರಳಿನಲ್ಲಿ ಉಳಿಯುವ (ಅಣ್ಣ-ತಂಗಿ) ಮಕ್ಕಳು ಇಡೀ ಭಾರತದ ಪ್ರಸ್ತುತ ಸ್ಥಿತಿಯನ್ನು ಪ್ರತಿನಿಧಿಸುವಂತೆ ಈ ಬಿಂಬನಾಟಕದ ಹೆಣಿಗೆಯಲ್ಲಿ ಸೇರಿಕೊಂಡಿದ್ದಾರೆ.
ಸೊಂತ ಊರು ಚಿತ್ರದಲ್ಲಿ ಬಣ್ಣಗಳ ಬಳಕೆ ಕಲಾವಾಸ್ತವತೆಯ ಚೌಕಟ್ಟಿನೊಳಗೇ ಸಾಂಕೇತಿಕವಾಗಿದೆ. ಹಸುರಿನ ಹಿನ್ನೆಲೆಯಲ್ಲಿ ಕೆಂಪಿನ ವಿವಿಧ ಛಾಯೆಗಳು ವಿವಿಧ ಸನ್ನಿವೇಶಗಳಲ್ಲಿ ವಿವಿಧ ಜೀವನಕ್ರಮದ ಸೂಚಕಗಳಾಗಿ ಜೋಡಣೆಗೊಂಡಿವೆ. ಸದಾ ತಮಟೆ ಹಿಡಿದು ಕಾಣಿಸಿಕೊಳ್ಳುವ, ಕುಣಿಯುವ ಹುಡುಗನ ಮಾಸಲು ಕೆಂಪು ಅಂಗಿ, ಹುಡುಗಿಯ ಮಾಸಲು ಹಸಿರು ಅಂಗಿ, ಮಲ್ಲಿಯ ಹಸಿರು-ಕೆಂಪು ಬಳೆಗಳು, ಕೆಂಪು, ಹಳದಿ ವಸ್ತ್ರಗಳು, ಬುಜ್ಜಿ ಮಲ್ಲಿಯ ವಸ್ತ್ರಾಲಂಕಾರದಲ್ಲಿ ಬಯಸುವ ಕಡುಕೆಂಪು, ಊರಿನ ಅನುಕೂಲಸ್ಥ ಜನರ ಬಿಳಿ, ಈ ಚಿತ್ರದಲ್ಲಿ ಬಳಕೆಯಾಗಿರುವ ಪ್ರಧಾನ ಬಣ್ಣಗಳು.
ಸುನೀಲರ ಚಿತ್ರದಲ್ಲಿ ಘಟನೆಗಳ ಶ್ರೀಮಂತಿಕೆಯಿದೆ. ಮೊದಲಿನಿಂದ ಕೊನೆಯವರೆಗೂ ವೈವಿಧ್ಯಮಯವಾದ ಸಿನಿಮಾತ್ಮಕ ವಿವರಗಳಲ್ಲಿ ದೃಶ್ಯಗಳನ್ನು ಕಟ್ಟಿಕೊಡುತ್ತದೆ. ವರ್ಗಭೇದ, ವರ್ಗವೈಷಮ್ಯಗಳನ್ನು ಪಾತ್ರಗಳ ವೇಷಭೂಷಣ-ಮಾತು-ನಡವಳಿಕೆ ಮತ್ತು ದೃಷ್ಟಿಕೋನಗಳ ವೈದೃಶ್ಯದಲ್ಲಿ ಬಿಂಬಿಸುತ್ತದೆ. ರಮಣೀಯ ಗ್ರಾಮ್ಯ ಹಸುರಿನ ದೃಶ್ಯದೊಂದಿಗೆ, ಶಿಷ್ಟ-ಅಶಿಷ್ಟ ಶೈಲಿ, ಧಾಟಿಯ ವಾದ್ಯ-ಸ್ವರ ಮಿಶ್ರಣವಾದ ಆಕರ್ಷಕ ಸಂಗೀತದೊಂದಿಗೆ ಪ್ರಾರಂಭವಾಗಿ, ದಾರುಣ, ಭೀಭತ್ಸ, ದೃಶ್ಯದೊಂದಿಗೆ ಮುಗಿಯುತ್ತದೆ. ಚಿತ್ರದ ಎಡಪಂಥೀಯ ರಾಜಕೀಯ ನಿಲುವು ಎಲ್ಲಿಯೂ ಮರೆಮಾಚದಂತೆ, ಮುಖವಾಡಗಳಿಲ್ಲದೆ ನಿಸ್ಸಂಕೋಚವಾಗಿ ಸಿನಿಮಾತ್ಮಕವಿವರಗಳಲ್ಲಿ ಪ್ರಕಟಗೊಳ್ಳುತ್ತದೆ. ಈ ಅರ್ಥದಲ್ಲಿ ಸುನೀಲರ ಸಿನಿಮಾ ಪ್ರಜ್ಞಾಪೂರ್ವಕ, ಪ್ರಾಮಾಣಿಕ ಚಿತ್ರ. ತನ್ನ ಸೊಸೆ/ಮಗಳು ಸ್ವಂತಊರನ್ನು ತೊರೆದು ಮಾಲ್ ಬಳಿಯಲ್ಲಿ ವೇಶ್ಯಾವೃತ್ತಿಗಿಳಿದು ಮಕ್ಕಳನ್ನೇ ದೂರಮಾಡಿದಾಗ, ದೂರದ ಛತ್ತೀಸ್ ಗಡದ ಹಳ್ಳಿಗಳಿಂದ ಕೂಲಿಗಾಗಿ ಬಂದು ಅಸಹಾಯಕವಾಗಿ ಪ್ರಾಣಬಿಟ್ಟ ಅನಾಥಬಡವರನ್ನು ಯಂತ್ರಗಳು ತೋಡಿದ ಗುಂಡಿಗಳಲ್ಲಿ ಕಂಡಾಗ, ದೇವರಸಮಾನನೆಂದು ತಾನು ನಂಬಿದ್ದ ಊರಿನ ಸಜ್ಜನ ಮುಖ್ಯಸ್ಥ ದೇವುಡುಬಾಬು ಸ್ವತಃ ಮುಂದೆನಿಂತು ಊರನ್ನು ಉದ್ಯಮಪತಿಗಳಿಗೆ ಮಾರಿ ಅದೇ ಅಭಿವೃದ್ಧಿಯೆಂದು ನಂಬಿಸಿ ಜನರಿಗೆ ದ್ರೋಹಬಗೆದನೆಂದು, ಸ್ವತಃ ಲಾಭಮಾಡಿಕೊಂಡನೆಂದು ಅನ್ನಿಸಿದಾಗ ದುಃಖ, ವಿಷಾದ, ಸಿಟ್ಟು, ಅಸಹಾಯಕತೆಗಳನ್ನು ತುಂಬಿಕೊಂಡ ರುದ್ರ ರೋಷಾವೇಷದಿಂದ ತನ್ನ ಊರುಗೋಲಾದ ಧಡಿಯಿಂದ ದೇವುಡುಬಾಬುವಿನ ತಲೆಗೆ ಬಡಿದು ಸಾಯಿಸುತ್ತಾನೆ. ಹುಚ್ಚನೆಂಬ ಬಿರುದು ಪಡೆದು ಊರಿನ ಜನರ ಕಲ್ಲೇಟಿನಿಂದ ಸಾವನ್ನಪ್ಪುತ್ತಾನೆ. ಅವನು ಛತ್ತೀಸ್‌ಗಢದ ಅನಾಥಕೂಲಿಯ ಶವದಿಂದ ಪಡೆದ ಅಂಗಿಯ ಮೇಲೆ ಚೆಗೆವಾರನ ಚಿತ್ರವಿದೆ. ಅದೇ ಅಂಗಿಯನ್ನು ತೊಟ್ಟ ರುದ್ರನ ಮೊಮ್ಮಗ ವೀರಬಾಬು ಅಜ್ಜನ ಕೋಲು ಹಿಡಿದು ದೇವುಡುಬಾಬು ಮತ್ತು ರುದ್ರನ ಧಗಧಗಿಸುವ ಚಿತೆಗಳಮುಂದೆ ನಿಲ್ಲುವ ದೃಶ್ಯದೊಂದಿಗೆ ಚಿತ್ರ ಕೊನೆಯಾಗುತ್ತದೆ.
ಗಿರೀಶರ ಚಿತ್ರದಲ್ಲಿ, ಐಡಿಯಾ ಮುನ್ನೆಲೆಯಲ್ಲಿದ್ದು ಘಟನೆಗಳು ಅದಕ್ಕೆ ಪೂರಕವಾದ ಹಿನ್ನೆಲೆಯಾಗಿವೆ. ಶೀರ್ಷಿಕೆಯನ್ನೂ ಒಳಗೊಂಡಂತೆ, ದೃಶ್ಯವಿನ್ಯಾಸ, ಬೆಳಕಿನವಿನ್ಯಾಸ ಮತ್ತು ಪಾತ್ರಗಳ ಸೃಷ್ಟಿಯಲ್ಲಿ ಪ್ರಜ್ಞಾಪೂರ್ವಕವಾಗಿ ಅನುಸರಿಸುವ ಪ್ರತಿಮಾವಿಧಾನದಿಂದಾಗಿ ಕಾವ್ಯಾತ್ಮಕತೆಯನ್ನು ಆವಾಹಿಸಿಕೊಳ್ಳತ್ತದೆ.. ಚಿತ್ರವನ್ನು ಕಲಾವಾಸ್ತವದ ಚೌಕಟ್ಟಗೆ ಮಿತಿಗೊಳಿಸದಿರುವುದು ಗಿರೀಶರ ಉದ್ದೇಶವಿರಬಹುದು. ನೇರ ಕಥಾನಕ ಈ ಚಿತ್ರದ ಶೈಲಿ ಅಲ್ಲ. ಎಂಬುದನ್ನು (ಕೋನಪಲ್ಲಟವಿಲ್ಲದೆ) ಒಂದೇದೃಶ್ಯವನ್ನು ಪಾತ್ರದೃಷ್ಟಿಗನುಸಾರವಾಗಿ ಪನರಾವರ್ತಿಸುವ ಅದರ ಪ್ರಸ್ತುತಿವಿಧಾನ ಹೇಳುತ್ತದೆ. ಹೆಂಡ ಕುಡಿಯುವ ದಲಿತ (ಈರ‍್ಯ)ನ, ನಂಬಿಕೆ/ ಕನಸುಗಾರಿಕೆಯ ವಿಲಕ್ಷಣತೆ, (ಷರೀಫರನ್ನು ನೆನಪಿಸುವ) ಮುಸಲ್ಮಾನ ರೈತನ ವಿಚಾರವಂತಿಕೆ ಮತ್ತು ಮಾನವೀಯ ಕಳಕಳಿ, ವಿದೇಶೀ ಪ್ರೇಕ್ಷಕ/ತೀರ್ಪು ಗಾರರಿಗೆ ಪ್ರಿಯವಾಗಬಹುದಾದ ಸುಡುಗಾಡುಸಿದ್ಧನ ಮಾಂತ್ರಿಕತೆ/ ನಿಗೂಢತೆ/ಅನಿರೀಕ್ಷಿತ ಪ್ರಗತಿಪರದೃಷ್ಟಿಗಳಿಂದಾಗಿ ಕನಸೆಂಬ ಕುದುರೆಯನೇರಿ, ಘಟನೆಗಳ ನೇರನಿರೂಪಣೆಗೆ ಒಗ್ಗದ ಬಹುಪದರಗಳ ಸಂಕೀರ್ಣಚಿತ್ರವೆನಿಸುವಂತೆ ಸಂಕಲಿತವಾಗಿದೆ. ಇಷ್ಟಾದರೂ ಭಾವವಿನ್ಯಾಸವಿಲ್ಲದ ತೆಳುಘಟನೆಗಳ ಬೌದ್ಧಿಕ ಸಾಂಕೇತಿತೆಯನ್ನೇ ನೆಚ್ಚಿಕೊಂಡಿರುವುದರಿಂದ ಇಡೀ ಚಿತ್ರ ಯಾವುದೇ ಕಲಾಸೃಷ್ಟಿಯ ಕನಿಷ್ಠಪೂರ್ವಾಗತ್ಯವಾದ ರಂಜಕತೆಗೆ ಹೊರತಾಗಿ ನೀರಸವೆನಿಸುತ್ತದೆ. ಒಂದು ಸಿನಿಮಾನುಭವವಾಗಿ ಅರೆಬರೆಯಾಗಿದೆ. ಶುಷ್ಕವಾಗಿದೆ.
ಸುನೀಲರ ಚಿತ್ರದ ಶಿರ್ಷಿಕೆ, ಪಾತ್ರಸೃಷ್ಟಿ, ಸಂಗೀತ, ವೇಷ-ಭೂಷಣಗಳಲ್ಲಿನ ವರ್ಣವಿನ್ಯಾಸ ಕಲಾವಾಸ್ತವಕ್ಕೆ ನಿಷ್ಠವಾಗಿರುವಂತೆ ರಚಿತವಾಗಿವೆ. ಅತಿರಂಜಿತ ನಾಟಕೀಯತೆಯನ್ನು ಒಳಗೊಂಡಿದೆ. ಕ್ರಾಂತಿಕಾರಿ ಕೆಂಪಿನ ವಿವಿಧ ಛಾಯೆಗಳು ಎಲೆಹಸುರಿನೊಂದಿಗೆ ಕಲೆತು ಇಡೀ ಗ್ರಾಮೀಣ/ಊಳಿಗಮಾನ್ಯ/ಔದ್ಯಮಿಕ ಭಾರತದ ರಾಜಕಾರಣವನ್ನು ಅದರ ಎಡಬಲಗಳಲ್ಲಿ ಬಿಂಬಿಸುವಂತೆ ವಿನ್ಯಾಸಗೊಂಡಿವೆ. ರಾಜಕೀಯ ಅಲಿಗರಿಯ ದ್ವಿಪದರಗಳ ಅರ್ಥವ್ಯಾಪ್ತಿಗೆ ಹೊಂದುವಂತೆ ಸರಳಗೊಳಿಸಲಾಗಿದೆ. ಗೇಯತೆ-ನಾಟಕೀಯತೆಗಳ ಮೂಲಕ ಭಾವನಾತ್ಮಕ ಸಂವಹನವನ್ನು ಸಾಧಿಸಬಯಸುತ್ತದೆ. ಚಿತ್ರವೀಕ್ಷಣೆಯಿಂದ ಹೊಮ್ಮುವ ತಾತ್ವಿಕ ವಿಶ್ಲೇಷಣೆಗೆ, ರಾಜಕೀಯದ ಆಯ್ಕೆಗೆ ಪ್ರೇಕ್ಷಕರ ಸಮ್ಮತಿಯನ್ನು ಪಡೆಯಬಯಸುವ ಹವಣಿಕೆ ಇದೆ. ಸತ್ತು ನಾರುವ ಹಂದಿಯನ್ನು ತೆಗೆಸಲು ರುದ್ರನಿಂದ ಮೂದಲಿಕೆಯ ಮಾತುಗಳನ್ನು ಸಹಿಸಿಕೊಳ್ಳುವ ಮೇಲ್ಜಾತಿಯ ಜನ, ಹಳ್ಳಿಯ ಅಂಗಡಿ, ಹಳೆಯತಲೆಮಾರಿನ ದುಃಖಿರೈತ, ಹೊಸತಲೆಮಾರಿನ ರೈತಮಗ, ಸೈಕಲ್ಲಿನ ಮೇಲೆ ಹಳ್ಳಿಗೆ ಬರುವ ಕುಂಟ ವ್ಯಾಪಾರಿ, ಇರುವಂತೆಯೇ ಸುಖಿಯಾಗಿದ್ದೇನೆಂದು ಹೇಳುತ್ತಲೇ ತನ್ನನ್ನು ವೇಶ್ಯೆಯಾಗಿಸಿದ ತಾಯಿಯನ್ನು ಶಪಿಸುವ, ಪ್ರೀತಿಗಾಗಿ ಹಂಬಲಿಸುವ, ತನ್ನನ್ನು ಮದುವೆಯಾಗಬಯಸುವ ಕುಂಟ ವ್ಯಾಪಾರಿ ಕಾರಿನಲ್ಲಿ ಬರಬೇಕೆಂದು ಕನಸುಕಾಣುವ ವೇಶ್ಯೆ, ಒಂಟಿ ಗೃಹಿಣಿಯ ಕಷ್ಟ-ಕಾರ್ಪಣ್ಯಗಳಿಂದ ಬಳಲಿ ವೇಶ್ಯಾ ಜೀವನದ ಸುಖಕ್ಕಾಗಿ ಮಕ್ಕಳನ್ನೇ ತೊರೆಯುವ ಯುವತಿ, ಊರಿನ ತಂದೆಯ ಸ್ಥಾನದಲ್ಲಿದ್ದು ಜನರಿಗೆ ಸರಿಯಾದ ದಾರಿತೋರದೆ ಊರಿನ ವಿನಾಶಕ್ಕೆ ಕಾರಣವಾಗುವ ದೇವುಡುಬಾಬು, ಸ್ವಂತೂರಿನಲ್ಲೇ ಸಾಯಬೇಕೆಂದು ಊರಿಗೆಬಂದು ಸಾಯುವ ಮುನ್ನವೇ ಸಂಸ್ಕಾರಕ್ಕೆಂದು ರುದ್ರನಿಗೆ ಹಣ ಕೊಡುವ ವಿದೇಶವಾಸಿ ಭಾರತೀಯ, ಚಿತ್ರದ ಮೊದಲಿನಿಂದ ಕೊನೆಯವರೆಗೂ ಒಳಸಾಕ್ಷಿಗಳಾಗಿ, ಪಾತ್ರಗಳಾಗಿ ಮತ್ತು ಭವಿಷ್ಯದ ಆಶಾಪ್ರತೀಕಗಳಾಗಿ ಕಾಣಿಸಿಕೊಳ್ಳುವ ದಲಿತ ಮಕ್ಕಳು ಚಿತ್ರದ ಬೌದ್ಧಿಕತೆಗೆ ಭಾವವಲಯವನ್ನು ಕಟ್ಟಿಕೊಡುತ್ತಾರೆ. ಹೀಗೆ ಮೇಲುನೋಟಕ್ಕೆ ಅಸಂಧಿಗ್ಧ ತಾತ್ವಿಕ ಆಯ್ಕೆಯ ಸಂವಹನಕ್ಕಾಗಿ ಕಲಾತ್ಮಕತೆಯನ್ನು ಅಳ್ಳಕಗೊಳಿಸಿರುವ, ಸರಳ ಚಿತ್ರವೆಂಬಂತೆ ತೋರುವ ಸೊಂತ ಊರು ನ್ಯಾಯಪರವಲ್ಲದ ವ್ಯವಸ್ಥೆಯ ಅಸಮ್ಮತಿಗೆ ಸಂಕೋಚಪಡದ, ಅಥವಾ ಅದಕ್ಕೆ ಪ್ರಿಯವಾಗಲು ಹಂಬಲಿಸದ ಅನುಭವವ್ಯಾಪ್ತಿಯಲ್ಲಿ ಇಡೀ ಭಾರತದ ಕತೆಯಾಗಿ ವಿಸ್ತಾರಗೊಳ್ಳುವಷ್ಟು ಸಂಕೀರ್ಣವಾಗಿದೆ.

ಕನಸೆಂಬ ಕುದುರೆಯನೇರಿ.. ಮತ್ತು ಸೊಂತ ಊರು ಚಿತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ಸಿಕ್ಕ ಪುರಸ್ಕಾರಭೇದ ಕೇವಲ ಇವುಗಳ ಕಲಾತ್ಮಕತೆಯ ಮಟ್ಟವನ್ನು ಆಧರಿಸಿದ್ದಲ್ಲವೆಂಬ ಭಾವನೆ ನನಗೆ ಇದೆ. ಕಾಮ-ಪ್ರೇಮ ಮೂಲದ ಮನುಷ್ಯಸಂಬಂಧಜಟಿಲತೆ, ಸಾವಿನ ಮೂಲದ ಭಯ, ವಿಷಾದ, ದಾರಣತೆಗಳ ಅನಿವಾರ್ಯತೆ-ಅಸಹಾಯಕತೆಗಳು, ಬದುಕಿನಾಚೆಗಿನ ಸ್ಥಿತ್ಯಂತರಗಳು, ನಿಗೂಢತೆ, ಆಕರ್ಷಣೆ, ಆಸೆ-ಕನಸುಗಳು ಎಂದಿಗೂ ಬಗೆಹರಿಸಲಾಗದ್ದರಿಂದಲೇ ಕಲಾಸೃಷ್ಟಿಯ ನಿರಂತರ ವಸ್ತುಗಳಾಗಿವೆ. ಪ್ರಶಸ್ತಿ-ಪುರಸ್ಕಾರಗಳ ಮೇಲೆ ಕಣ್ಣಿಟ್ಟ ಕಲಾಕಸುಬಿನ ಜನರ ಸುಲಭ ಆಯ್ಕೆಗಳಾಗಿವೆ. (ಇದು ಸಿನಿಮಾಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವೇನಲ್ಲ). ಆದರೆ ಇಹದ, ಲೌಕಿಕ ಬದುಕಿನ ಸಂಕಷ್ಟ-ಜಟಿಲತೆಗಳನ್ನು ಅಮೂರ್ತಗೊಳಿಸದೆ, ಸದ್ಯದ ಸಾಮಾಜಿಕ, ತಾತ್ವಿಕ ಮತ್ತು ರಾಜಕೀಯ ಆಯ್ಕೆಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳುವ ಕಲಾತ್ಮಕತೆ ಸುಲಭವಲ್ಲ. ಹಾಗೆಯೇ, ತಾತ್ವಿಕ ಸಂಧಿಗ್ಧತೆ, ರಾಜಕೀಯ ಆಯ್ಕೆಯ ಕ್ಷೇಮತನ-ಸಾಂಕೇತಿಕತೆ, ಮತ್ತು ಆಳುವವರ್ಗಗಳ ಕೃಪಾಪೋಷಣೆಯ ಹೊರಗುಳಿಯದಂತೆ ಜಾಣ್ಮೆಯಿಂದ ನಿರ್ವಹಿಸಿದ ಅಸಮ್ಮತಿ-ವಿರೋಧಗಳೇ ಕಲಾತ್ಮಕತೆ ಆಗಿರಬೇಕೆಂದಿಲ್ಲ ಎಂಬುದನ್ನು ಈ ಎರಡೂ ಚಿತ್ರಗಳು ಹೇಳುತ್ತವೆ.
-ವಿ.ಎನ್.ಲಕ್ಷ್ಮೀನಾರಾಯಣ