ಟೆಲಿವಿಷನ್ ಕುರಿತು ಬರೆದ ಒಂದು ಒಳ್ಳೆಯ ಲೇಖನವಿದು. ಬಿ. ಸುರೇಶ ನಮ್ಮ ನಡುವಿರುವ ಸೃಜನಶೀಲ ನಿರ್ದೇಶಕ. ಅವರ ಈ ಚಿಂತನೆಯನ್ನು ಚರ್ಚೆಗೆ ಅನುಕೂಲವಾಗುವಂತೆ ಪ್ರಕಟಿಸಲಾಗಿದೆ.

ಟೆಲಿವಿಷನ್ ಇಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಧ್ಯಮವರ್ಗಿಗಳನ್ನು ಏಕಕಾಲಕ್ಕೆ ಕೊಳ್ಳುಬಾಕ ಸಂಸ್ಕೃತಿಗೆ ತಳ್ಳುತ್ತಾ, ಮತ್ತೊಂದೆಡೆ ಅವರನ್ನು ಇಡಿಯ ಜಗತ್ತಿನ ತುಂಬಾ ಅಪರಾಧಿಗಳು, ಕೊಲೆಪಾತಕಿಗಳೇ ಇದ್ದಾರೇನೋ ಎಂಬಂತಹ ಆತಂಕಕ್ಕೆ ದೂಡುತ್ತಾ ಬದುಕುವ ಈ ಮಾಧ್ಯಮ ಎಂಬುದು ಮೂಲತಃ ಆರಂಭವಾದ ಕಾರಣಗಳನ್ನು ಬಿಟ್ಟು ಇಂದು ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ಅದಕ್ಕೆ ಕಾರಣಗಳೇನು ಎಂದು ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಈ ಅಕ್ಷರಗಳು ಪ್ರಯತ್ನಿಸಿವೆ.

ಕನ್ನಡಕ್ಕೆ ಟೆಲಿವಿಷನ್ ಬಂದುದು 1983ರಲ್ಲಿ. ಅದೂ ಮದರಾಸು ದೂರದರ್ಶನವು ಪ್ರಸಾರ ಮಾಡುತ್ತಿದ್ದ ಅರ್ಧ ಗಂಟೆಯ ಕನ್ನಡದ ಕಾರ್ಯಕ್ರಮಗಳಿಗಾಗಿ ಇನ್ನೆರಡು ತಾಸು ತಮಿಳಿನ ಕಾರ್ಯಕ್ರಮವನ್ನೂ ಕನ್ನಡಿಗರು ನೋಡುತ್ತಾ ಇದ್ದರು. ಆ ಕಾಲದ ಬಾಲಕರಾದ ನನ್ನಂಥವರಿಗೆ `ಒಳಿಯುಂ ಒಳಿಯುಂ’ ಮೂಲಕವೇ ತಮಿಳು ಭಾಷೆಯ ಪರಿಚಯವಾಗಿತ್ತು. ನಂತರ 1985ರಲ್ಲಿ ಬೆಂಗಳೂರಿನಲ್ಲಿಯೇ ಒಂದು ಸ್ಟುಡಿಯೋ ಸ್ಥಾಪನೆಯಾಗಿ ದಿನಕ್ಕೆ ಎರಡು ಗಂಟೆಗಳ ಕನ್ನಡ ಕಾರ್ಯಕ್ರಮ ನೋಡುವಂತಾಯಿತು. ಆಗ ಕಪ್ಪುಬಿಳುಪು ಟಿವಿಗಳು ಮನೆಗಳ ಅಂಗಳದಲ್ಲಿ ಪ್ರತಿಷ್ಠಾಪಿತ ವಾಗತೊಡಗಿದವು. ಟಿವಿ ಇರುವ ಮನೆಗಳವರಿಗೆ ಮನೆಯ ನೆತ್ತಿಯ ಮೇಲೆ ಆಂಟೆನಾ ಕೂಡಿಸುವುದೇ ಒಂದು ಸಂಭ್ರಮ. ಆ ಸಂಭ್ರಮದ ಜೊತೆಗೆ ಟಿವಿ ಇಲ್ಲದವರಿಗೆ ನಮ್ಮ ಮನೆಗೂ ಅಂತಹದೊಂದು ಬರಬೇಕೆಂಬ ವಾಂಛೆ. ಇವೆಲ್ಲವುಗಳ ನಡುವೆ ಪ್ರಸಾರವಾಗುತ್ತಿದ್ದ ಅನೇಕ ಕಾರ್ಯಕ್ರಮಗಳನ್ನು ನೋಡುತ್ತಾ ಕನ್ನಡದ ಜೊತೆಗೆ ಹಿಂದಿಯನ್ನೂ ನಮ್ಮವರು ಕಲಿತದ್ದು ಸತ್ಯ. ಇದಾಗಿ ಎರಡು ವರ್ಷಗಳಲ್ಲಿ ಸ್ಯಾಟಿಲೈಟ್ ಪ್ರಸಾರವು ಕ್ರಾಂತಿಕಾರಕವಾಗಿ ಬೆಳೆದು, ದೂರದರ್ಶನ ಎಂಬ ಒಂದು ವಾಹಿನಿಯ ಜೊತೆಗೆ ಇನ್ನಷ್ಟು ವಾಹಿನಿಗಳು ಸೇರ್ಪಡೆಯಾದವು. 1990ರ ಹೊತ್ತಿಗೆ ಕನ್ನಡದ ಪ್ರಥಮ ಖಾಸಗಿ ವಾಹಿನಿಯಾಗಿ ಉದಯ ಕೂಡ ಆರಂಭವಾಗಿತ್ತು. ಅಲ್ಲಿಂದಾಚೆಗೆ ಟೆಲಿವಿಷನ್ ಎಂಬುದು ಸಂಭ್ರಮದ ಸಂಕೇತವಾಗಿ ಉಳಿಯದೆ ಪ್ರತೀ ಮನೆಯ ಸಿರಿವಂತಿಕೆಯ ಸಂಕೇತವಾಗಿ, ನಂತರ ಸ್ಟೈಲ್ನ ಸಂಕೇತವಾಗಿ, ನಿಧಾನವಾಗಿ ನಿತ್ಯ ಬಳಕೆಯ ಗೃಹೋಪಯೋಗಿ ವಸ್ತುವಾಗಿ ಹೋದದ್ದು ಈಗ ಇತಿಹಾಸ.

ಇದೇ ಕಾಲಘಟ್ಟದಲ್ಲಿ ಒಂದೇ ಟಿವಿಯಲ್ಲಿ ಹತ್ತೂ ಹದಿನೈದು ಚಾನೆಲ್ಗಳನ್ನು ನೋಡುವ ಅವಕಾಶ ಕಲ್ಪಿಸಲು ಬಂದದ್ದು ಕೇಬಲ್ ಜಾಲ. ಪ್ರತಿ ಬಡಾವಣೆಯಲ್ಲೂ ಯುವಕರು ಡಿಶ್ ಆಂಟೆನಾ ಕಟ್ಟಿ ನೂರಾರು ಮನೆಗಳಿಗೆ ವಾಹಿನಿಗಳನ್ನು ರವಾನಿಸತೊಡಗಿದರು. ಇದರಿಂದ ಅನೇಕರಿಗೆ ಉದ್ಯೋಗ ದೊರೆತದ್ದಲ್ಲದೆ ಕೇಬಲ್ ನಡೆಸುವವರ ಒಂದು ಬೃಹತ್ ಸಮೂಹವೇ ಸೃಷ್ಟಿಯಾಯಿತು. ಈ ಸಮೂಹಗಳೂ ನಿಧಾನವಾಗಿ ಸಂಘಟಿತವಾದವು. ಕೇಬಲ್ ಜಾಲಗಳಿಗೆ ಸ್ಪರ್ಧಿಯಾಗಿ ಈಚೆಗೆ ಡಿಶ್ ಟಿವಿಗಳು ಬಂದಿವೆ. ಅವುಗಳು ಯಾವ ಸ್ವರೂಪ ಪಡೆಯಬಹುದು ಎಂಬುದನ್ನು ನೋಡಬೇಕಿದೆ.

ಆದರೆ ಈ ಎಲ್ಲಾ ಸಾಮಾಜಿಕ ಬದಲುಗಳ ನಡುವೆಯೇ ಟೆಲಿವಿಷನ್ ನೋಡುಗನ ಮನಸ್ಥಿತಿ ಏನಾಗಿದೆ ಎಂದು ಗಮನಿಸಬೇಕಿದೆ. ಟೆಲಿವಿಷನ್ನಿನ ಆರಂಭ ಕಾಲದಲ್ಲಿ ಸುದ್ದಿಯನ್ನ, ಕ್ರೀಡೆಯನ್ನ, ಸಿನಿಮಾ ಹಾಡುಗಳನ್ನ, ವಾರಕ್ಕೊಮ್ಮೆ ಬರುತ್ತಿದ್ದ ಧಾರಾವಾಹಿಗಳನ್ನ ನೋಡುತ್ತಾ ಇದ್ದವರಲ್ಲಿ ನೆನಪಿನ ಭಂಡಾರ ಇರುತ್ತಿತ್ತು. ವಾರದ ಹಿಂದೆ ನೋಡಿದ ಕತೆಯ ಮುಂದಿನ ಭಾಗವನ್ನು ಇಂದು ನೋಡಿ ಅರಗಿಸಿಕೊಳ್ಳುವ ತಾಳ್ಮೆ ಇತ್ತು. ವಾರಕ್ಕೊಮ್ಮೆ (ಭಾನುವಾರ ಬೆಳಿಗ್ಗೆ) ಬರುತ್ತಿದ್ದ ರಾಮಾಯಣವನ್ನು ಧಾರ್ಮಿಕ ಕೆಲಸ ಎಂಬಂತೆ ನೊಡಿದವರ ಹಾಗೆಯೇ ಇದೊಂದು ಪುರಾಣ ಕಥನ ಎಂಬಂತೆ ವಿಮರ್ಶಾತ್ಮಕವಾಗಿ ನೋಡಿದವರೂ ಇದ್ದರು. ಆ ಧಾರಾವಾಹಿಯ ರಾಮ ಮತ್ತು ಸೀತೆಯ ಪಾತ್ರಧಾರಿಗಳನ್ನ ಪಕ್ಷವೊಂದು ಬಳಸಿಕೊಂಡು, ಅವರಿಬ್ಬರೂ ವಿಧಾನಸಭೆ ಮತ್ತು ಲೋಕಸಭೆಯವರೆಗೂ ಹೋಗುವುದು ಸಾಧ್ಯವಾಯಿತು ಎಂದರೆ ಆ ದಿನಗಳಲ್ಲಿ ಟೆಲಿವಿಷನ್ ನೋಡುಗರ ನೆನಪಿನ ಶಕ್ತಿಯನ್ನು ಗ್ರಹಿಸಬಹುದು. ಕಾಲಾಂತರದಲ್ಲಿ ಈ ಸ್ಥಿತಿ ಮಾರ್ಪಡುತ್ತಾ ಬಂದಿದೆ. ಇಂದು ಟೆಲಿವಿಷನ್ ಎಂದರೆ ವಾಹಿನಿಗಳ ಮಹಾಪೂರ. ಕನ್ನಡದ್ದೇ ೧೨ ವಾಹಿನಿಗಳಿವೆ. ಅವುಗಳಲ್ಲಿ ಏಳೆಂಟು ದಿನದ ೨೪ ಗಂಟೆಯೂ ಪ್ರಸಾರವಾಗುತ್ತವೆ. ಹೀಗಾಗಿ ಕನಿಷ್ಟ ಸಂಖ್ಯೆಯ ಕನೆಕ್ಷನ್ ತೆಗೆದುಕೊಂಡವರಿಗೂ 70 ವಾಹಿನಿಗಳು ನೋಡಲು ಸಿಗುತ್ತವೆ. ಇನ್ನು ಸಂಪೂರ್ಣ ಸೌಲಭ್ಯ ಪಡೆಯುವವರಿಗೆ ನೂರಾಮುವ್ವತ್ತಕ್ಕೂ ಹೆಚ್ಚು ವಾಹಿನಿಗಳು ಇವೆ. ಯಾವುದನ್ನು ನೊಡಬೇಕು ಎಂಬ ಆಯ್ಕೆ ಈಗ ನೋಡುಗನ ಅಂಗೈಯಲ್ಲಿ ರಿಮೋಟ್ ಆಗಿ ಕೆಲಸ ಮಾಡುತ್ತಾ ಇದೆ. ಅರೆಕ್ಷಣ ನೋಡುಗನ ಮನಸ್ಸು ವಿಚಲಿತವಾದರೂ ಆತ ನೋಡುತ್ತಿರುವ ವಾಹಿನಿಯೂ ಆತನಿಗೆ ಅರಿವಾಗದಂತೆ ಬದಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೋಡುಗನನ್ನು ಟೆಲಿವಿಷನ್ನಿನಲ್ಲಿ ತೊಡಗುವಂತೆ ಮಾಡುವ, ಅದೇ ವಾಹಿನಿಯನ್ನು ಹೆಚ್ಚು ಕಾಲ ನೋಡುವಂತೆ ಮಾಡುವುದು ಸುಲಭ ಸಾಧ್ಯವಲ್ಲ. ಹೀಗಾಗಿ ಕಾರ್ಯಕ್ರಮ ತಯಾರಕರು ಅನೇಕಾನೇಕ ಸರ್ಕಸ್ಸುಗಳನ್ನು ಮಾಡುತ್ತಾ ತಂತಿಯ ಮೇಲಿನ ನಡಿಗೆಯನ್ನು ಮುಂದುವರೆಸಿದ್ದಾರೆ ಎಂಬುದಂತೂ ಢಾಳಾಗಿ ಕಾಣುವ ಸತ್ಯ.

ಈ ಹಿನ್ನೆಲೆಯಲ್ಲಿ ನಾನು ಈ ಲೇಖನದ ಆರಂಭದಲ್ಲಿ ಹೇಳಿದ ಮಾತುಗಳನ್ನು ಪುನರ್ಮನನ ಮಾಡಿಕೊಂಡರೆ, ಕಾರ್ಯಕ್ರಮ ತಯಾರಕರ ಮನಸ್ಥಿತಿ, ಕಾರ್ಯಕ್ರಮಗಳ ತಯಾರಿಯ ಹಿಂದಿನ ಉದ್ದಿಶ್ಯ ಎಲ್ಲವೂ ಬದಲಾಗಿವೆ. ಕೇವಲ ದೂರದರ್ಶನವೊಂದೇ ಇದ್ದ ಕಾಲದಲ್ಲಿ ಕಾರ್ಯಕ್ರಮದ ತಯಾರಿಯ ಹಿಂದೆ ಪ್ರೇಕ್ಷಕನಿಗೆ ಶ್ರೇಷ್ಟವಾದುದನ್ನೇ ಕೊಡಬೇಕೆಂಬುದು ಹೆಬ್ಬಯಕೆಯಾಗಿದ್ದರೆ ಇಂದು ಶ್ರೇಷ್ಟ ಎನ್ನುವ ಸ್ಥಳದಲ್ಲಿ ಜನಪ್ರಿಯ ಸರಕು ಎಂಬುದು ಪ್ರಧಾನ ಆಶಯವಾಗಿದೆ. ಹೀಗೆ ಕಾರ್ಯಕ್ರಮವನ್ನು ನೋಡುವ ದೃಷ್ಟಿಕೋನವೇ ಬದಲಾದೊಡನೆ ಅದನ್ನು ತಯಾರಿಸುವ ಕ್ರಮಗಳಲ್ಲೂ ಬೃಹತ್ ಪಲ್ಲಟವಾಗಿದೆ. ಒಂದೊಮ್ಮೆ ವಾರ್ತೆಗಳು ಎಂಬುದು ಭಾವಪ್ರಚೋದಕವಾಗದೆ ಬರುತ್ತಾ ಇತ್ತು ಎಂಬುದನ್ನು ನೆನೆಸಿಕೊಂಡರೆ ಇಂದು ವಾರ್ತೆಗಳ ನಡುವೆಯೇ ಬ್ರೇಕಿಂಗ್ ನ್ಯೂಸ್‌ಗಳ ಭರಾಟೆ ಹೆಚ್ಚಾಗಿದೆ. ಯಾವುದೋ ಸ್ಟುಡಿಯೋದಲ್ಲಿ ಕೂತ ಸುದ್ದಿ ವಾಚಕ (ಇಂದು ಅವರನ್ನು ಸುದ್ದಿ ನಿರ್ವಾಹಕ ಎನ್ನುವುದು ಸೂಕ್ತ) ಇನ್ನೆಲ್ಲಿಯೋ ಇರುವ ತನ್ನ ವಾಹಿನಿಯ ಪ್ರತಿನಿಧಿಯೊಡನೆ ಮಾತಾಡುವಾಗಲೂ ರೋಚಕ ವಿವರವನ್ನು ಕೆದಕುತ್ತಾನೆ. ಮುಂಬೈನಲ್ಲಿ ಆತಂಕವಾದಿಗಳು ನಡೆಸಿದ ಮಾರಣಹೋಮವು ಲೈವ್ ನ್ಯೂಸ್ ಆಗಿ ಆತಂಕ ಸೃಷ್ಟಿಯನ್ನು ಹೆಚ್ಚಿಸುತ್ತದೆ.
ಅಂತೆಯೇ ಯಾವುದೋ ಊರಿನಲ್ಲಿ ಯಾವನೋ ಇನ್‌ಸ್ಪೆಕ್ಟರ್‌ನನ್ನು ಯಾರೋ ಕೊಂದದ್ದು, ಅಷ್ಟೇ ರೂಕ್ಷವಾಗಿ ಸುದ್ದಿ ಚಿತ್ರವಾಗುತ್ತದೆ. ಈ ಎಲ್ಲಾ ಸುದ್ದಿಗಳನ್ನು ತೋರಿಸುವಲ್ಲಿ ರೋಚಕತೆಯಷ್ಟೇ ಮುಖ್ಯವಾಗಿ, ವಾರ್ತೆಯ ಮೂಲ ಅಗತ್ಯವಾದ ಮಾಹಿತಿ ಹಂಚಿಕೆ ಎಂಬುದು ನಗಣ್ಯ ಎಂಬಂತಾಗಿರುತ್ತದೆ. ಇದೇ ವಿಷಯದ ವಿಸ್ತರಣೆ ಎಂಬಂತೆ, ಸುದ್ದಿ ನೀಡುವವರು ಯಾವುದೇ ವ್ಯಕ್ತಿಯನ್ನು ಸಂದರ್ಶನ ಮಾಡುವಾಗಲೂ ಆಡುವ ಮಾತುಗಳು ದೊಡ್ಡ ಹಗರಣವನ್ನು ಬಯಲಿಗೆಳೆಯುವ ಪ್ರಯತ್ನ ಎಂಬಂತೆ ಅಥವಾ ಮತ್ತೊಂದು ಸ್ಕೂಪ್ ಸೃಷ್ಟಿಸಲೆಂಬಂತೆ ಇರುವುದನ್ನು ಸಹ ನಾವು ಕಾಣುತ್ತಾ ಇದ್ದೇವೆ. ಇನ್ನು ಇದನ್ನು ನೋಡುವ ಪ್ರೇಕ್ಷಕರಾದರೋ ಯಾವುದೇ ವಿವರವನ್ನು ಪೂರ್ಣಾವಧಿಗೆ ನೋಡಿ ಅರ್ಥೈಸಿಕೊಳ್ಳುವಷ್ಟು ವ್ಯವಧಾನ ಇರುವವರಲ್ಲ. ಹೀಗಾಗಿ ರೋಚಕ ವಿವರವನ್ನು ಮಾತ್ರ ಸ್ವೀಕರಿಸಿ, ಅದನ್ನೇ ಅವರಿವರ ಜೊತೆಗೆ ಮಾತಾಡುತ್ತಾ ಆನಂದ ಪಡುತ್ತಾರೆ. ಹೀಗೆ ಸುದ್ದಿಯೊಂದು ಅರ್ಧ ವೀಕ್ಷಣೆಯ ಮೂಲಕವೇ ಅವರಿವರ ಬಾಯಲ್ಲಿ ವಿಶ್ವರೂಪ ಪಡೆಯುತ್ತಾ ಸಾಗುತ್ತದೆ.

ಇನ್ನು ಕಥನಗಳು ಮತ್ತು ಧಾರಾವಾಹಿಗಳ ಸ್ವರೂಪವನ್ನು ಗಮನಿಸಿದರೆ ಅಲ್ಲಿಯೂ ವಾಸ್ತವವನ್ನು ಮರೆಸಿ, ಅಲಂಕಾರವನ್ನು ವೈಭವೀಕರಿಸುವ ವಿವರಗಳೇ ಹೆಚ್ಚು. ಆ ಕಥನಗಳಲ್ಲೂ ಬಹುತೇಕವಾಗಿ ಶ್ರೀಮಂತ ಮನೆಗಳ ಅವ್ಯವಹಾರವೋ, ಅನೈತಿಕ ಸಂಬಂಧವೋ ಬೃಹತ್ ಗಾಥಾ ಎಂಬಂತೆ ಚಿತ್ರಿತವಾಗುವುದನ್ನು ನೋಡುತ್ತೇವೆ. ಇಲ್ಲಿ ಕಣ್ಣೆದುರಿಗೆ ಮೂಡುವ ಪಾತ್ರಗಳಿಗೆ ಅಗತ್ಯಕ್ಕಿಂತ ಹೆಚ್ಚು ಬಣ್ಣ ಬಳಿಯಲಾಗಿರುತ್ತದೆ. ಎಲ್ಲಾ ವಯಸ್ಸಿನ ಪಾತ್ರಗಳಿಗೂ ತುಟಿಗೆ ಮಾತ್ರವಲ್ಲ ಎಲ್ಲಾ ಭಾಗಗಳಿಗೂ ಬಣ್ಣವಿರುತ್ತದೆ. ಆ ಮೂಲಕ ಕಥನವನ್ನು ಅನುಭವಿಸುವುದಕ್ಕಿಂತ ನೋಡುಗರು ಅಲಂಕಾರ ಪ್ರೀತಿಗೆ ಒಳಗಾಗುವಂತೆ ಚಿತ್ರಿಸಲಾಗುತ್ತದೆ ಎಂಬುದು ಗಮನದಲ್ಲಿರಬೇಕಾದ ಅಂಶ. ಹೀಗೆ ಸಿದ್ಧವಾದುದನ್ನ ನೊಡುವವರೂ ಸಹ ಮಧ್ಯಮವರ್ಗದ ಗೃಹಿಣಿಯರೇ. ಇಂತಹ ವಿವರಗಳನ್ನು ಟಿವಿಯಲ್ಲಿ ನೋಡಿದ ಅಭ್ಯಾಸದಿಂದಲೋ ಏನೋ ನಾಡಿನಾದ್ಯಂತ ಆಧುನಿಕ ಮಹಿಳೆಯರು ಇದೇ ಮಾದರಿಯ ಬಣ್ಣಗಳನ್ನು ತಮ್ಮ ದೇಹಗಳಿಗೂ ಹಚ್ಚಿಕೊಳ್ಳುವುದನ್ನು ಕಾಣುತ್ತೇವೆ. ಆಧುನಿಕ ಕಾಲದಲ್ಲಿ `ಸೌಂದರ್ಯ ಪ್ರಜ್ಞೆ’ ಎಂದರೆ ಕೃತಕ ಅಲಂಕಾರ ಎಂಬಂತೆ ನಮ್ಮ ಜೀವನವನ್ನು `ಕಾಸ್ಮೆಟಿಕ್’ಗೊಳಿಸಿರುವುದು ಇದೇ ಟೆಲಿವಿಷನ್ ಎಂಬ ಅದ್ಭುತ.

ಧಾರಾವಾಹಿಗಳಿಗೆ ಮತ್ತು ಸುದ್ದಿ ಚಿತ್ರಗಳಿಗೆ ಹೇಳುವ ಮಾತನ್ನು ರಿಯಾಲಿಟಿ ಷೋ ಎಂಬ ಆಟಗಳಿಗೂ ಹಿಗ್ಗಿಸಬಹುದು. ಇಲ್ಲಿ ಹಾಡಲು ಬರುವ ಪುಟ್ಟ ಮಕ್ಕಳೂ ಅದೇ ರೀತಿಯಲ್ಲಿ `ಅಲಂಕೃತ’ರು. ಆ ಹಾಡಿನ ಕಾರ್ಯಕ್ರಮಕ್ಕೆ ಬರುವ ತೀರ್ಪುಗಾರರೂ ಸಾಲಂಕೃತರು. ಅಪರೂಪಕ್ಕೆ ಯಾರಾದರೂ ಸಹಜವಾಗಿಯೇ ಟಿವಿಯಲ್ಲಿ ಕಂಡರೆ ಅದು ಜನಪ್ರಿಯತೆ ಕಡಿಮೆ ಇರುವ ಕಾರ್ಯಕ್ರಮವೇ ಆಗಿರುತ್ತದೆ ಎನ್ನಬಹುದು. ಇನ್ನು ನೃತ್ಯದ ರಿಯಾಲಿಟಿ ಷೋಗಳ ಬಗ್ಗೆಯಂತೂ ಹೆಚ್ಚು ಹೇಳಲೇ ಬೇಕಿಲ್ಲ. ಅಲ್ಲಿ ಪ್ರೇಕ್ಷಕರು ಎಂದು ತೋರಿಸಲಾಗುವ ಪುಟ್ಟ ಗುಂಪು ಸಹ `ಅಲಂಕೃತ’ ಆಗಿರುತ್ತದೆ. ಇನ್ನು ಪೇಟೆ ಹುಡುಗಿಯರು ಹಳ್ಳಿಗೆ ಹೋಗುವ ಸಾಹಸ ಇತ್ಯಾದಿಗಳಲ್ಲೂ ಸಹ ಇದೇ ಕೃತಕ ವಾತಾವರಣ. ಬಹುತೇಕ ರಿಯಾಲಿಟಿ ಷೋಗಳಲ್ಲಿ ಇರುವುದು ಇದೇ ಗುಣ. ಇನ್ನು ಹಾಸ್ಯದ ಕಾರ್ಯಕ್ರಮ ನಡೆಸಿಕೊಡುವವರು ಕೂಡ ವಯಸ್ಸಿಗೆ ಮೀರಿದಂತೆ ಬಣ್ಣ ಹಚ್ಚಿಕೊಂಡವರೇ ಆಗಿರುವುದನ್ನು ಸಹ ಕಾಣಬಹುದು. ತೆರೆಯ ಮೇಲೆ ಕಾಣುವ ವ್ಯಕ್ತಿ ಆರೋಗ್ಯಪೂರ್ಣವಾಗಿ ಕಾಣಬೇಕು ಎನ್ನುವುದಕ್ಕಿಂತ ಅವರು ಯುವಕಂತೆ ಕಾಣಬೇಕು ಎನ್ನುವುದೇ ಟಿವಿ ಕಾರ್ಯಕ್ರಮಗಳ ಅೋಷಿತ ಮಾದರಿಯಾಗಿದೆ. ಅದನ್ನು ನಮ್ಮ ಸಮಾಜವೂ ಪಾಪ ಯಥಾವತ್ ಅನುಸರಿಸುತ್ತಿದೆ. (ಇಲ್ಲಿ ತಾವು ಇದ್ದಂತೆ ಬರುತ್ತಿದ್ದ ಸುವರ್ಣ ನ್ಯೂಸ್ನ ರಂಗನಾಥ್ ಅವರು ಸಹ ಕಾಲಾಂತರದಲ್ಲಿ ಬಣ್ಣ ಬಣ್ಣದ ಷರಟು ಮತ್ತು ಬಣ್ಣ ಹಚ್ಚಿದ ಮುಖದ ಜೊತೆಗೆ ಬರುವಂತಾದುದನ್ನು ನೊಡುಗರು ನೆನಪಿಸಿಕೊಳ್ಳಬಹುದು.)

ಈ ಎಲ್ಲಾ ವಿವರಗಳ ನಡುವೆ ನಮ್ಮ ಸಮಾಜ ಮತ್ತದರ ನೇಯ್ಗೆಯು ಸಂಕುಚಿತಗೊಳ್ಳುತ್ತಾ ಇರುವುದನ್ನೂ ಗಮನಿಸಬಹುದು. ಆತಂಕದಲ್ಲಿ ಬದುಕುವ ಮನಸ್ಸುಗಳಿಗೆ ಅಕ್ಕ ಪಕ್ಕದ ವಿವರಗಳನ್ನು ನೋಡುವ ಮಧ್ಯಮವರ್ಗಕ್ಕೆ ಈಗ ಕಾಣುವುದು ಮಾಲ್ಗಳು ಮತ್ತು ಬ್ಯೂಟಿಪಾರ್ಲರ್ ಮಾತ್ರ. ಹೀಗಾಗಿ ಸಾಮಾಜಿಕ ಹೋರಾಟಗಳು ಬಹುತೇಕ ನಿರ್ಜೀವವಾಗಿವೆ. ಹೋರಾಟಗಳನ್ನೂ ಸಹ ಮಾಧ್ಯಮಗಳೇ ನಿರ್ದೇಶಿಸುತ್ತಿವೆ. ಈಚೆಗೆ ನಡೆದ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಮಾಧ್ಯಮಗಳಿಂದಾಗಿಯೇ ಸ್ಟಾರ್ ಸ್ಟೇಟಸ್ ಸಿಕ್ಕದ್ದನ್ನು ನಾವು ಗಮನಿಸಬಹುದು. ಹಾಗೆಯೇ ಈಚೆಗೆ ಲೋಕಾಯುಕ್ತರು ನೀಡಿದ ವರದಿ ಮತ್ತು ತದನಂತರದ ಸರ್ಕಾರ ಬದಲಿ, ರಾಜೀನಾಮೆ ಪ್ರಕರಣಗಳಿಗೂ ಜೀವ ಬಂದದ್ದು ಮಾಧ್ಯಮಗಳಿಂದಲೇ. ಹೀಗಾಗಿ ಇಂದು ನಾವು ಸಮಾಜವೇ ಸೃಷ್ಟಿಸದ ಬದುಕಿನ ಕ್ರಮಕ್ಕೆ ಬದಲಾಗಿ ಮಾಧ್ಯಮಗಳಿಂದ ನಿರ್ದೇಶಿತವಾದ ಬದುಕಿನ ಕ್ರಮವನ್ನು ಕಟ್ಟಿಕೊಂಡಿದ್ದೇವೆ. ಒಟ್ಟಾರೆಯಾಗಿ ಆಧುನಿಕ ಬದುಕು ಎಂದರೆ ಟಿವಿ ಪ್ರಣೀತ ಅದ್ಭುತಗಳ ಸರಮಾಲೆ ಎನ್ನಬಹುದು.

ಈ ಬಗ್ಗೆ ಅದಾಗಲೇ ಹಲವು ಕಡೆಗಳಲ್ಲಿ ಮಾತಾಡಿದ್ದೇನೆ, ಬರೆದಿದ್ದೇನೆ. ಈಗ ಮತ್ತೊಮ್ಮೆ ಕೇಬಲ್ ದಿನದ ಅಂಗವಾಗಿ ನನಗೆ ಅನ್ನ ನೀಡುತ್ತಿರುವ ಮಾಧ್ಯಮವನ್ನು ಕುರಿತು, ಈ ಮಾಧ್ಯಮವೇ ತಂದಿತ್ತಿರುವ ಅವಡಗಳನ್ನು ಕುರಿತು ನೆನೆಯುವಂತಾಯಿತು. ಈ ಅವಕಾಶ ಕೊಟ್ಟ ಕೇಬಲ್ ಬಂಧುಗಳಿಗೆ ನಮಿಸುತ್ತಾ, ಶುಭಾಶಯ ಕೋರುತ್ತಾ ಟೆಲಿವಿಷನ್ ಎಂಬ ಅಧ್ಭುತವು ಮುಂಬರುವ ದಿನಗಳಲ್ಲಿ ಪಡೆದುಕೊಳ್ಳಬಹುದಾದ ಹೊಸ ರೂಪಗಳಿಗೆ ಕಾಯುತ್ತೇನೆ.