ಪ್ರೊ. ಎನ್. ಎಸ್. ಅಶೋಕ್ ಕುಮಾರ್ ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾದ ಮುಖ್ಯಸ್ಥರು. ಅವರು ಸಿನಿಮಾದ ಬಗ್ಗೆ ನೀಡಿದ ಒಂದು ನೋಟವಿದು. ಓದಿ ಅಭಿಪ್ರಾಯಿಸಿ.

ಸಿನಿಮಾ ಪ್ರಾರಂಭದ ದಿನಗಳನ್ನು ನೆನೆದರೆ ಎಂತಹವರಿಗೂ ಅದ್ಭುತ ಎನ್ನಿಸದೆ ಇರದು. ಸಿನಿಮಾ ಎಂಬ ಒಂದು ಮಾಯೆಯನ್ನು ಹುಟ್ಟು ಹಾಕಿದ್ದುಲೂಮಿಯೇರ್ ಸೋದರರು. ಇವರು ಫ್ರಾನ್ಸ್ ನವರು. ಇದರ ಹುಟ್ಟು ಆಕಸ್ಮಿಕವಲ್ಲ. ಇದರ ಬಗ್ಗೆ ಸತತ ಪ್ರಯತ್ನಗಳನ್ನು ನಡೆಸಿ ಡಿಸೆಂಬರ್ 28, 1895 ರಲ್ಲಿ ಯಶಸ್ವಿಯಾದರು.

ಈ ಮೂಲಕಸಿನಿಮಾ ಎಂಬಮಾಯೆಗೆಒಂದು ಮೂರ್ತಸ್ವರೂಪ ನೀಡುವಲ್ಲಿ ಜಯ ದೊರಕಿಸಿಕೊಂಡರು. ಈ ಅದ್ಭುತವನ್ನು ತಮ್ಮಮನೆಯವರಿಗೆ ಸ್ನೇಹಿತರಿಗೆ ತೋರಿಸಿದಾಗ ಅವರಿಂದ ಸಿಕ್ಕ ಅಭೂತಪೂರ್ವ ಸ್ವಾಗತದಿಂದ ಪುಳಕಿತರಾಗಿ ಈ ಮಾಯೆಯನ್ನು ಜನರಿಗೆ ಏಕೆ ತೋರಿಸಬಾರದೆಂಬ ಹುಚ್ಚು ಅವರಲ್ಲಿ ಹೊಕ್ಕಿತು. ಕೊನೆಗೂ ಈ ಧೈರ್ಯ ಮಾಡಿ ಜನವರಿ 1895 ರಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದು‘Arival of the Train’, ‘watering the Garden’, ‘Baby and the Mother’ಇತ್ಯಾದಿಗಳನ್ನು .

ತಾವು ತಯಾರಿಸಿದ೨ ನಿಮಿಷ, 5 ನಿಮಿಷದ ಸಿನಿಮಾ ಗಳಾದ ಕೆಲವು ಪ್ರೇಕ್ಷಕರಿಗೆ ಮಾತ್ರ ತೋರಿಸುವ ಸಾಹಸ ಮಾಡಿದರು. ಅಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹೀಗೆ ಮುಂದುವರಿಸಿದ ಅವರ ಪ್ರಯತ್ನಗಳಿಂದಾಗಿ ಸಿನಿಮಾ ಭಾರತಕ್ಕೂ ಬಂದು ತಲುಪಿತು. ವಿಚಿತ್ರವೆಂದರೆ ಈ ಪ್ರಪಂಚಕ್ಕೆ ಸಿನಿಮಾ ಪಾದಾರ್ಪಣೆ ಮಾಡಿದ್ದು. ಡಿಸೆಂಬರ್ 28, 1895 ರಲ್ಲಿ ಆದರೆ, ಭಾರತಕ್ಕೆ ಇದು ಬಂದದ್ದು, ಸುಮಾರು ಜುಲೈ 7,1896 ರಲ್ಲಿ ಅಂದರೆ ಏಳು ತಿಂಗಳೊಳಗೆ ಈ ಮಾಯೆಭಾರತಕ್ಕೆ ಆಗಮಿಸಿತು.

ಭಾರತದಲ್ಲಿ ಈ ಸಹೋದರ ಸಿನಿಮಾ ಪ್ರದರ್ಶನವಾದಾಗ ಅಂದಿನ ಟೈಮ್ಸ್ ಆಫ್ ಇಂಡಿಯಾದ ಪತ್ರಿಕೆ ಇದನ್ನು ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಕರೆಯಿತು. ಅಷ್ಟೆ ಅಲ್ಲ, ಅಂದಿನ ಜಾಹೀರಾತುಗಳಲ್ಲಿ ಪೂರ್ತಿ ಪ್ರಮಾಣದ ವ್ಯಕ್ತಿಗಳ (ಹೀರೋ) ಚಿತ್ರ ನೋಡಲು ಇದು ಸುಸಮಯ ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿಸಿತ್ತು.ಪ್ರೇಕ್ಷಕರು ಈ ಒಂದು ಮಾಯೆ ಯನ್ನು ನೋಡಲು ಮುಗಿಬಿದ್ದಿದ್ದರೂ ಎಂಬುದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಅಂದು ಜನ್ಮ ತಾಳಿದ ಈ ಪ್ರೇಕ್ಷಕ ವರ್ಗ ಇಂದು ಅಗಾಧವಾಗಿ ಬೆಳೆದಿದೆ. ಯಾರಾದರೂ ಇಂದು ನಾನು ಸಿನಿಮಾ ನೋಡಿಯೇ ಇಲ್ಲ ಎಂದು ಹೇಳಿದರೆ ಬಹುಶಃ ಅವರೇ celebrity ಗಳಾಗಿ ಬಿಡುತ್ತಾರೆ ಎನ್ನಿಸುತ್ತದೆ !

ಹೀಗೆ ಹುಟ್ಟಿಕೊಂಡಪ್ರೇಕ್ಷಕ ವರ್ಗ ಇಂದು ಯಾವ ಸ್ಥಿತಿಯಲ್ಲಿದೆ ?ಪ್ರೇಕ್ಷಕ ವರ್ಗ ಬೆಳೆಯುತ್ತಿರುವ ರೀತಿ ಸರಿಯಿದೆಯೇ? ಅಥವಾ ಇವರನ್ನು ಯಾರಾದರೂ ಬೆಳೆಸುತ್ತಿ ದ್ದಾರೆಯೇ ? ಇವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆಯೇ ? ಇವರನ್ನು ಪೋಷಿಸಿ, ಪಾಲಿಸಿ, ತಮ್ಮ ಸ್ವತ್ತನ್ನಾಗಿರಿಸಿಕೊಂಡಿದ್ದಾರೆಯೇ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಅಷ್ಟು ಸುಲಭವಲ್ಲ. ನಿಜಕ್ಕೂ ಹೇಳಬೇಕೆಂದರೆ ಪ್ರೇಕ್ಷಕ ಎನ್ನುವುದು ಒಂದು ಮರೀಚಿಕೆ ಇದ್ದಂತೆ. ಈಗ ಇದ್ದಾರೆ -ಈಗ ಇಲ್ಲ, ಈಗ ತಾನೆ ಅಭೂತ ಪೂರ್ವ ಬೆಂಬಲ ಸೂಚಿಸಿದ್ದಾರೆ, ಈಗ ಕೇರೇ ಮಾಡುತ್ತಿಲ್ಲ. ಅಂದರೆ ಪ್ರೇಕ್ಷಕ ವರ್ಗಕ್ಕೆ ಒಂದು ವ್ಯಕ್ತಿತ್ವ ಇಲ್ಲವಾ ? ಇವರು ಹೀಗೆ ಎಂದು ಡಿಫೈನ್ ಮಾಡುವುದಕ್ಕೆ ಆಗುವುದಿಲ್ಲವಾ? ಮತ್ತು ನಮ್ಮ ಸಿನಿಮಾ ಹೀರೋಗಳು ಬೆಳೆಸಿ ಪೋಷಿಸುತ್ತಿರುವ ಅಭಿಮಾನಿಗಳು ಪ್ರೇಕ್ಷಕರಲ್ಲವಾ ? ಏಕೆಂದರೆ ಇಂತಹ ಅಭಿಮಾನಿಗಳು ಸಾಮಾನ್ಯ ಪ್ರೇಕ್ಷಕ ವರ್ಗಕ್ಕೆ ಸೇರುವುದಿಲ್ಲ. ಅವರು ಕಟ್ಟಾ ಅಭಿಮಾನಿಗಳು. ಎಷ್ಟರ ಮಟ್ಟಿಗೆ ಎಂದರೆ ಅವರು ತಮ್ಮ ಹೀರೋ ಸಿನಿಮಾ ಬಿಟ್ಟರೆ ಬೇರೆ ಹೀರೋಗಳ ಸಿನಿಮಾ ನೋಡದೆಯೂ ಇರಬಹುದು. ಅಂದರೆ ಇಂಥ ಒಂದು ವರ್ಗವನ್ನು ನಿರ್ದೇಶಕನಾದ ವನು ತನ್ನ ಸಿನಿಮಾದ ಹೀರೋಗೆ ತಕ್ಕದಾದ, ಪ್ರೇಕ್ಷಕ ವರ್ಗ ಮೆಚ್ಚಿಕೊಳ್ಳುವಂತಹ ಪಾತ್ರ ಸೃಷ್ಟಿಸಿ ಅಲ್ಲೊಂದು ಗಟ್ಟಿ ಪ್ರೇಕ್ಷಕ ವರ್ಗ ಬೆಳೆಸುತ್ತಾನೆ.‘Angry Young Man’ಅಂತಲೋ, ಪ್ರಣಯರಾಜ ಅಂತಲೋ ಸಾಹಸ ಸಿಂಹ ಅಂತಲೋ ಒಂದು ಸ್ವರೂಪ ಕೊಟ್ಟು ಅಲ್ಲೊಂದು ಪ್ರೇಕ್ಷಕರ ದಂಡನ್ನೇ ಹುಟ್ಟು ಹಾಕುತ್ತಾರೆ.

ಹಾಗಾಗಿ ನಮ್ಮ ನಿರ್ದೇಶಕ / ನಿರ್ಮಾಪಕರು ನಮ್ಮ ದೇಶದ ರಾಜಕಾರಣಿಗಳ ರೀತಿ ಪ್ರೇಕ್ಷಕರನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎಂಬ ಕುತೂಹಲ ಪ್ರಶ್ನೆ. ಅಂದರೆ ರಾಜಕೀಯ ಭಾಷೆಯಲ್ಲಿ ನಾವು ಯಥಾ ರಾಜಾ ತಥಾ ಪ್ರಜಾ ಎನ್ನುವ ಹಾಗೆ ಈ ನಿರ್ದೇಶಕ / ನಿರ್ಮಾಪಕರು ಪ್ರೇಕ್ಷಕನ ರುಚಿಗೆ ತಕ್ಕಂತೆ ಸಿನಿಮಾ ಮಾಡುತ್ತೇವೆ ಎನ್ನುವ ಮೂಲಕ ಪ್ರೇಕ್ಷಕನನ್ನು ಬಕರಾ ಮಾಡುತ್ತಿದ್ದಾರೆಯೇ ? ಪ್ರತಿ ಬಾರಿ ಕೆಟ್ಟ ಸಿನಿಮಾ ಮಾಡಿದಾಗ ಪ್ರೇಕ್ಷಕರ ರುಚಿಗೆ ತಕ್ಕಂತೆ ಮಾಡಿದ್ದೇವೆ ಎನ್ನುವವರು, ಒಳ್ಳೆಯ ಸಿನಿಮಾ ಏಕೆ ಮಾಡಬಾರದು. ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಕೊಟ್ಟರೆ ಅವರೇನು ಬೇಡ ಎನ್ನುತ್ತಾರೆಯೇ? ಒಬ್ಬ ನಿರ್ದೇಶಕ / ನಿರ್ಮಾಪಕನಾದವನು ಒಂದು ರೀತಿಯ ಜನನಾಯಕನೇ. ಏಕೆಂದರೆ ಅವನಿಗೆ ಅಸಂಖ್ಯಾತ ಸಂಖ್ಯೆಯ ಪ್ರೇಕ್ಷಕರನ್ನು ತನ್ನ ಬೆರಳಿನ ಮೇಲೆ ಕುಣಿಸುವ ತಾಕತ್ತಿದೆ. ತಾನು ಸಿನಿಮಾ ನಿರ್ದೇಶಿಸಿ ಒಂದು ಒಳ್ಳೆಯ ದಾರಿಗೆ (ಒಳ್ಳೆಯ ಸಿನಿಮಾ ನೋಡುವತ್ತಾ) ನಡೆಸಿಕೊಂಡು ಹೋಗುವ ಪ್ರಜಾವಂತಿಕೆ ಇದೆ. ನಾಯಕತ್ವ ಇಲ್ಲದ ನಿರ್ದೇಶಕ ಜವಾಬ್ದಾರಿಯನ್ನು ಕಳೆದುಕೊಂಡು ಬಿಡುತ್ತಾನೆ. ಪ್ರೇಕ್ಷಕರ ರುಚಿ ಬೆಳೆಸಬೇಕಾದುದು ನಿರ್ದೇಶಕನ ಆದ್ಯ ಕರ್ತವ್ಯ. ಅದರಲ್ಲಿ ಅವನು ಸೋತರೆ ಅದು ಅವನ ಸೋಲೇ ಹೊರತು ಪ್ರೇಕ್ಷಕನದಲ್ಲ. ಅವನನ್ನು ನಿಂದಿಸುವ ಹಾಗಿಲ್ಲ. ನಿರ್ದೇಶಕ ಒಮ್ಮೆ ತಾನು ನಿರ್ದೇಶಿಸಿದ ಸಿನಿಮಾವನ್ನು ಕೂಲಂಕಷವಾಗಿ ತಿರುವಿ ಹಾಕಿದಾಗ ಬಹುಶಃ ಮಾಡಿದ ತಪ್ಪಿನ ಅರಿವಾಗಬಹುದು. ನಿರ್ದೇಶಕರು ಹಾಗೆ ಮಾಡುತ್ತಿದ್ದಾರೆಯೇ ? ಓದುಗರಿಗೆ ತಿಳಿದಿರಬಹುದು. ಡಾ. ರಾಜ್‌ಕುಮಾರ್ ಅವರ ಬಿಡುಗಡೆ ಎಂಬ ಸಿನಿಮಾ ಬಿಡುಗಡೆಯಾದಾಗ ಅದರಲ್ಲಿ ಡಾ. ರಾಜ್ ಪಾತ್ರ ಸಾಯುತ್ತದೆ. ಡಾ. ರಾಜ್ ನನ್ನ ಪಾತ್ರ ಸಾಯಿಸಬೇಡಿ, ನಿಮ್ಮ ಸಿನಿಮಾ ಓಡುವುದಿಲ್ಲ ಎಂದು ಸೂಕ್ಷ್ಮವಾಗಿ ಹೇಳುತ್ತಾರೆ. ಆದರೆ ನಿರ್ದೇಶಕ ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಡಾ. ರಾಜ್ ಹೇಳಿದ ಮಾತೆಂದರೆ ನಾನು ಸಾಯುವುದಕ್ಕೆ ರೆಡಿ ಇದ್ದೇನೆ. ನಿಮ್ಮ ಶವಯಾತ್ರೆಗೆ ತಯಾರಿ ನಡೆಸಿಕೊಳ್ಳಿ ಎಂದು. ಕೊನೆಗೆ ಅದು ಹಾಗೆ ಆಯಿತು ಸಿನಿಮಾ ಓಡಲಿಲ್ಲ. ಸಿನಿಮಾವನ್ನು ಥಿಯೇಟರ್‌ನಿಂದ ವಾಪಸ್ಸು ತರಿಸಿಕೊಂಡು ರೀ ಶೂಟ್ ಮಾಡಿ ರಾಜ್ ಪಾತ್ರವನ್ನು ಬಳಸಬೇಕಾಯಿತು. ಇದು ಯಾರ ಮೂರ್ಖತನ? ಇದರಲ್ಲಿ ಪ್ರೇಕ್ಷಕನ ಪಾತ್ರ ಏನಿದೆ ? ಪ್ರತಿ ಬಾರಿ ಸಿನಿಮಾ ಸೋತಾಗ ಪ್ರೇಕ್ಷಕರನ್ನು ಜರಿದರೆ ಹೇಗೆ ?

ನಮಗೆಲ್ಲ ನೆನಪಿರುವ ಹಾಗೆ 70 ರ ದಶಕದಲ್ಲಿ ಕರ್ನಾಟಕದಲ್ಲಿ ಒಳ್ಳೆಯ ಸಿನಿಮಾ (ನೀವು, ಆರ್ಟ್ ಸಿನಿಮಾ ಎನ್ನಿ, ಪ್ಯಾರಲಲ್ ಸಿನಿಮಾ ಅನ್ನಿ ಅವಂತ್ ಗ್ರೇಡ್ ಸಿನಿಮಾ ಅನ್ನಿ) ಮಾಡಬೇಕೆನ್ನುವ ಒಂದು ಚಳುವಳಿಯೇ ನಡೆದು ಹೋಯಿತು. ಈಗ ಬರುತ್ತಿರುವ ಸಿನಿಮಾಗಿಂತ ವಿಭಿನ್ನ ರೀತಿಯ ಸಿನಿಮಾಗಳನ್ನು ತಯಾರಿಸಿ ಪ್ರೇಕ್ಷಕರಿಗೆ ಉಣಬಡಿಸ ಬೇಕೆಂಬ ಒಂದು ವಿಚಿತ್ರ ಹೆಚ್ಚು ಕರ್ನಾಟಕದಲ್ಲಿ ಹುಟ್ಟಿಕೊಂಡಿತು. ಇದೇ ಸಂದರ್ಭದಲ್ಲಿ ಇದೇ ಕಿಚ್ಚು ಕೇರಳ ರಾಜ್ಯದಲ್ಲೂ ಹುಟ್ಟಿಕೊಂಡಿತು ಎಂಬುದನ್ನು ಗಮನಿಸಿದಾಗ, ಕರ್ನಾಟಕದ ಅಂದಿನ ಕ್ರಿಯಾಶೀಲ ನಿರ್ದೇಶಕರು ಒಳ್ಳೆಯ ಸಿನಿಮಾ ಕೂಡ ಬೇಕೆನ್ನುವ ಇಟ್ಟಿಕೊಂಡ ಆಸೆ ಎಷ್ಟರಮಟ್ಟಿನದು ಎಂಬುದರ ಅರಿವಾಗುತ್ತದೆ. ಆ ಸಮಯದಲ್ಲಿ ಮೊದಲು ಬಂದ ಸಿನಿಮಾ ಸಂಸ್ಕಾರ. ಇದು ಮೂರು ದಿನ ಓಡಲಿಲ್ಲ. ಥಿಯೇಟರ್ ಖಾಲಿ ಖಾಲಿ. ಪ್ರೇಕ್ಷಕ ಈ ಸಿನಿಮಾವನ್ನು ಗೇಲಿ ಮಾಡಿದ, ಮೂದಲಿಸಿದ, ನಗೆ ಪಾಟೀಲಿಗೀಡುಮಾಡಿದ. ಆದರೆ ನಿರ್ದೇಶಕ ಹಠ ಬಿಡದ ತ್ರಿವಿಕ್ರಮನಂತೆ ಒಂದರ ನಂತರ ಒಂದು ಇಂತಹದೇ ಸಿನಿಮಾಗಳನ್ನು ನಿರ್ದೇಶಿಸಿದ. ವಂಶವೃಕ್ಷ,ಎಲ್ಲಿಂದಲೋ ಬಂದವರು,ಖಂಡವಿದೆಕೋ ಮಾಂಸವಿದೆಕೋ,ಪರಸಂಗದ ಗೆಂಡೆತಿಮ್ಮ,ಕಾಕನ ಕೋಟೆ,ಚಿತೆಗೂ ಚಿಂತೆ ಇತ್ಯಾದಿ. ಪ್ರೇಕ್ಷಕನಿಗೆ ಒಂದು ರೀತಿಯ ಶಾಕ್. ಇದೆಂತಹ ಸಿನಿಮಾ, ಒಂದು ಡಾನ್ಸ್ ಇಲ್ಲ. ಹಾಡಿಲ್ಲ, ಕ್ಯಾಬರೆ ಇಲ್ಲ ಎಂದು ಮೂದಲಿಸುತ್ತಲೆ ಬಂದ. ಆದರೂ ನಿರ್ದೇಶಕ ಕಿಂಚಿತ್ತು ಕಂಗೆಡಲಿಲ್ಲ. ಇದೇ ರೀತಿಯ ಸಿನಿಮಾ ಮಾಡುತ್ತಲೇ ಸಾಗಿದೆ. ಈ ಸಾಲಿನಲ್ಲಿ ಬಂದ ಕೊನೆ ಚಿತ್ರ ಬಹುಶಃ ಚೋಮನದುಡಿ. ತಮಗೆಲ್ಲ ಗೊತ್ತಿರುವ ಹಾಗೆ ಈ ಸಿನಿಮಾ 50 ಕ್ಕೂ ಹೆಚ್ಚು ದಿನ ಓಡಿತು. ಪ್ರೇಕ್ಷಕ ಮೂಗಿನ ಮೇಲೆ ಬೆರಳಿಟ್ಟ, ಭಲೇ ಎಂದ. ಏಕೆಂದರೆ ಅಷ್ಟರೊಳಗಾಗಲೇ ಒಂದು ದೊಡ್ಡ ಪ್ರೇಕ್ಷಕ ವೃಂದ ಕನ್ನಡ ಸಿನಿಮಾ ಜಗತ್ತಿನಲ್ಲಿ ಬೆಳೆಯುವುದಕ್ಕೆ ಪ್ರಾರಂಭಿಸಿತ್ತು. ಈ ಪ್ರೇಕ್ಷಕ ವೃಂದ ಒಳ್ಳೆಯ ಸಿನಿಮಾ, ತಾತ್ವಿಕ ನೆಲೆಗಟ್ಟಿನಲ್ಲಿರುವ ಸಿನಿಮಾ, ಯಾವುದಾದರೂ ಒಂದು ಸಂದೇಶ ಸಾರುವಂತಹ ಸಿನಿಮಾವನ್ನು ಬಯಸಲು ನಿರ್ಧರಿಸಿತ್ತು. ಅಂದಿನ ನಿರ್ದೇಶಕ ಇದನ್ನು ಸವಾಲಾಗಿ ಸ್ವೀಕರಿಸಿದ್ದರು. ಏಕೆಂದರೆ ಇದು ಅವರೇ ಹುಟ್ಟು ಹಾಕಿದ ಕೂಸು. ಅಂದಿನ ದಿನಗಳಲ್ಲಿ ಸಿನಿಮಾ ಪರಂಪರೆಗೆ ಇದು ಮಹತ್ತರ ಕೊಡುಗೆ.

ಇದರಿಂದ ಒಂದು ಅಂಶ ಸ್ಪಷ್ಟವಾಗುವುದೇನೆಂದರೆ, ಪ್ರೇಕ್ಷಕರನ್ನು ಬೆಳೆಸುವ, ಪ್ರೇಕ್ಷಕರಿಗೆ ಗುರಿ ತೋರಿಸಿ ನಡೆಸುವ ಹೊಣೆ ನಿರ್ದೇಶಕನ ಮೇಲಿದೆ ಎನ್ನುವುದು. ಇದೇನೂ ಸಾಮಾನ್ಯ ಸಾಧನೆಯಲ್ಲ. ಪೂರ್ತಾ 70 ದಶಕದ ಈ ಒಂದು ಮಹತ್ತರ ಘಟನೆಗೆ ಸಾಕ್ಷಿಯಾಗಿತ್ತು.ನಿರ್ದೇಶಕ ಪ್ರೇಕ್ಷಕನ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡುತ್ತ್ತಾನೆ ಎನ್ನುವುದರ ಬದಲು ನನ್ನ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡುತ್ತೇನೆ. ಪ್ರೇಕ್ಷಕ ಹುಡುಕಿಕೊಂಡು ಬರುತ್ತಾನೆ ಎನ್ನುವಂತಹ ಧೈರ್ಯದ ನಿಲುವನ್ನು ಬೆಳೆಸಿಕೊಳ್ಳಬೇಕಾಗಿದೆ.

ಪ್ರತಿ ಸಿನಿಮಾಸೋತಾಗ ಪ್ರೇಕ್ಷಕನನ್ನು ದೂರುವುದರ ಬದಲು ನಿರ್ದೇಶಕನಾಗಿ ನಾಯಕತ್ವದ ಛಾತಿ ತೋರಿಸಲಿಲ್ಲ ಎಂಬ ಅಳುಕನ್ನು ಇಟ್ಟುಕೊಳ್ಳಬೇಕು. ಓದುಗರಿಗೆ ನೆನಪಿರಬಹುದು. ಗಾಂಧೀಜಿಯವರು ದೇಶ ಬಿಟ್ಟು ತೊಲಗಿ ಎಂದು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಾಗ, ಚೌರಾ ಚೌರಿ ಘಟನೆ ನಡೆಯುತ್ತದೆ. ಈ ಘಟನೆ ಪೂರ್ತಿ ಹಿಂಸೆಗೆ ತಿರುಗಿದಾಗ ಮಹಾತ್ಮಗಾಂಧಿಯವರು ಹೇಳಿದ ಮಾತೆಂದರೆ, ನಾನು ಅಹಿಂಸೆ ಎಂಬ ಮಂತ್ರ ಹಿಡಿದು ಹೊರಟೆ. ಆದರೆ ನೀವು ಹಿಂಸೆಗೆ ತಿರುಗಿದಿರಿ. ನಾನೇ ಎಲ್ಲೋ ತಪ್ಪು ಮಾಡಿದ್ದೇನೆ ಅನ್ನಿಸುತ್ತಿದೆ. ಬಹುಶಃ ನನ್ನಲ್ಲಿ ನಾಯಕತ್ವದ ಕೊರತೆ ಇರಬೇಕು. ಆದ್ದರಿಂದ ಇನ್ನು ಮುಂದೆ ಈ ಒಂದು ಆಂದೋಲನದ ಸಾರಥ್ಯ ನಾನು ವಹಿಸುವುದಿಲ್ಲ. ಈ ಮಾತು ಎಲ್ಲಾ ಸಂದರ್ಭಕ್ಕೂ ಅನ್ವಯಿಸಬೇಕಿದೆ.