ಮುರಳೀಧರ ಖಜಾನೆಯವರು “ಗಾಂಧಿ” ಯ ಕುರಿತು ಒಂದು ಹಳೆಯ ಚಿತ್ರವೊಂದರ ಬಗ್ಗೆ ಬರೆದದ್ದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

ಕೆಲವು ವರ್ಷಗಳ ಹಿಂದೆ ಮಾರ್ಟಿನ್ ಲೂಥರ್ ಕಿಂಗ್ ಕುರಿತಾದ ಚಿತ್ರವೊಂದನ್ನು ನೋಡುತ್ತಿದ್ದಾಗ ತೀರಾ ಪರಿಚಿತವಾದ ದೃಶ್ಯವೊಂದು ಕಣ್ಣ ಮುಂದೆ ಹಾದು ಹೋಯಿತು. ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆದ ಸಾಮೂಹಿಕ ನೂಲುವಿಕೆಯ ದೃಶ್ಯ ಅದು. 1940 ರಲ್ಲಿ ಬಿಡುಗಡೆಯಾದ ಮಹಾತ್ಮಾಗಾಂಧಿ ಚಿತ್ರದ ಕ್ಲಿಪ್ಪಿಂಗ್ ಅದೆಂದು ನನ್ನ ನುರಿತ ಕಣ್ಣುಗಳು ಗುರುತಿಸಿದವು.

ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದವರು, ಎ . ಕೆ. ಚೆಟ್ಟಿಯಾರ್ ಎಂಬ ಪತ್ರಕರ್ತ. ಈತನಿಗೆ ಛಾಯಾಗ್ರಹಣದಲ್ಲೂ ಸಾಕಷ್ಟು ಪರಿಶ್ರಮವಿತ್ತು. ಟೋಕಿಯೋ ಹಾಗೂ ನ್ಯೂಯಾರ್ಕ್‌ನಲ್ಲಿ ಈತ ಛಾಯಾಗ್ರಹಣವನ್ನು ಕಲಿತಿದ್ದ. ರಿಚರ್ಡ್ ಅಟೆನ್‌ಬರೋ ಗಾಂಧಿ ಎಂಬ ಕ್ಲಾಸಿಕ್ ನಿರ್ಮಿಸುವ ನಲವತ್ತು ವರ್ಷಕ್ಕೆ ಮೊದಲೇ ತಮ್ಮ ಮಹಾತ್ಮಾಗಾಂಧಿ ಚಿತ್ರ ನಿರ್ಮಿಸಿ ನಿರ್ದೇಶಿಸಿದ್ದ ಈ ಚೆಟ್ಟಿಯಾರ್, ಈ ಚಿತ್ರ ತಯಾರಿಸಿದ ಕಥೆ ರೋಚಕವಾದದ್ದು.
ಭಾರತೀಯ ಚಿತ್ರರಂಗದ ದಿಗ್ಗಜಗಳೆನ್ನಿಸಿಕೊಂಡವರು, ಚಲನಚಿತ್ರ ಮಾಧ್ಯಮದೊಂದಿಗೆ ಸೆಣಸುತ್ತಿರುವಾಗ ಚೆಟ್ಟಿಯಾರ್ ಚರಿತ್ರೆಯ ಮಹತ್ವದ ಘಟ್ಟ ಮತ್ತು ಜೀವಂತ ದಂತ ಕಥೆಯೊಂದನ್ನು ಸೆಲ್ಯೂಲಾಯಿಡ್ ಮೆಲೆ ಚಿತ್ರಿಸಲು ತನ್ನೆಲ್ಲ ಶಕ್ತಿಯನ್ನು ವ್ಯಯಿಸಿದರು. ಮಾಧ್ಯಮಕ್ಕೊಂದು ಗೌರವವನ್ನೂ ತಂದುಕೊಟ್ಟ ಕೀರ್ತಿ ಈತನದು.

ಏಕಾಂಗಿಯಾಗಿ, ಅಜ್ಞಾತದಲ್ಲಿ ಈ ಚಿತ್ರಕ್ಕಾಗಿ ದುಡಿದ ಚೆಟ್ಟಿಯಾರ್ ಎದುರಿಸಿದ ಕಷ್ಟ, ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ಚೆಟ್ಟಿಯಾರ್ ಮಾಡಿದ ಪ್ರವಾಸವನ್ನು ಕುರಿತು ಬರೆದರೆ, ಅದೇ ಒಂದು ಹೊಸ ರೀತಿಯ ಪ್ರವಾಸ ಕಥನವಾದೀತು. ಚೆಟ್ಟಿಯಾರ್ ರ ಚಿತ್ರ ಮಹಾತ್ಮಾಗಾಂಧಿ ಬಿಡುಗಡೆಯಾದದ್ದು ಆಗಸ್ಟ್ 23, 1940 ರಂದು. ಸ್ವಾತಂತ್ರ್ಯಕ್ಕೆ ಏಳುವರ್ಷಗಳ ಮುನ್ನ.

ಚೆಟ್ಟಿಯಾರ್‌ಗೆ ಮಹಾತ್ಮಾಗಾಂಧಿ ಕುರಿತು ಚಿತ್ರ ನಿರ್ಮಿಸುವ ಆಲೋಚನೆ ಬಂದದ್ದು ಗಾಂಧಿ ಹುಟ್ಟು ಹಬ್ಬದಂದು. ಆಗ ಅವರು ಹಡಗೊಂದರಲ್ಲಿ ನ್ಯೂಯಾರ್ಕಿನಿಂದ ಡಬ್ಬಿನ್‌ನತ್ತ ಹೊರಟಿದ್ದರು. ಆ ಸುಂದರ ಹಗಲಲ್ಲೇ ಚೆಟ್ಟಿಯಾರ್ ಗಾಂಧೀಜಿಯನ್ನು ಸೆಲ್ಯೂಲಾಯಿಡ್‌ನಲ್ಲಿ ಬಂಧಿಸಿಡುವ ಕನಸು ಕಂಡರು. ಆದರೆ ಇದು ಹಗಲುಗನಸಾಗಲಿಲ್ಲ. ಪ್ರವಾಸ ಮುಗಿದು ಚೆನ್ನೈಗೆ ಹಿಂದಿರುಗಿದ ಕೂಡಲೇ ಅವರು ಡಾಕ್ಯೂಮಂಟರಿ ಫಿಲಮ್ಸ್ ಲಿಮಿಟೆಡ್ ಎಂಬ ಕಂಪನಿ ಸ್ಥಾಪಿಸಿದಾಗ ಗಾಂಧಿ ನಿರ್ಮಾಣದ ಕನಸು ಚಿಗುರೊಡೆಯಿತು.

ಮುಂದಿನ ಹಂತ : ಗಾಂಧಿ ಕುರಿತು ಲಭ್ಯವಿರುವ ಎಲ್ಲ ಚಿತ್ರಿಕೆ, ಮಾಹಿತಿ, ಸಂದರ್ಶನಗಳ ಸಂಗ್ರಹ. ಚೆಟ್ಟಿಯಾರ್ ಪತ್ರಾಗಾರ, ಸುದ್ದಿ ಸಂಸ್ಥೆ, ಸ್ಟುಡಿಯೋಗಳು, ಗಾಂಧಿ ಕುರಿತು ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ವ್ಯಕ್ತಿಗಳು?ಹೀಗೆ ಯಾರನ್ನೂ ಬಿಡದೇ ಎಡತಾಕಿದರು. ಮೊದಲ ಭಾರತೀಯ ಸ್ಟುಡಿಯೋಗಳಲ್ಲಿ ಹುಡುಕಾಟ ನಡೆಸಿದ ನಂತರ, ಗಾಂಧಿ ನಡೆದಾಡಿದ, ಬದುಕಿದ ವಿದೇಶದ ಭಾಗಗಳಿಗೆ ಪಯಣ ಬೆಳೆಸಿದರು.

1927 ರ ಕಾಂಗ್ರೆಸ್ ಅಧಿವೇಶನದ ಚಿತ್ರಿಕೆಗಳು ಅವರಿಗೆ ಚೆನ್ನೈನಲ್ಲೇ ದೊರಕಿತು. ಶ್ರೀನಿವಾಸ ಅಯ್ಯಂಗಾರ್ ಗಾಂಧೀಜಿಯನ್ನು ವೇದಿಕೆಗೆ ಕರೆತಂದಾಗ, ಜೊತೆಯಲ್ಲಿ ಜವಾಹರಲಾಲ್ ನೆಹರೂ, ಸರೋಜಿನಿ ನಾಯ್ಡು ಕೂಡ ಇದ್ದ ಈ ಚಿತ್ರಿಕೆ ಚೆಟ್ಟಿಯಾರ್‌ಗೆ ಬಹುದೊಡ್ಡ ಆಸ್ತಿಯಂತಾಯಿತು. ಕಲ್ಕತ್ತದ ಅರೋರಾ ಸಂಸ್ಥೆಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ, ತಮಿಳು ಚಿತ್ರಗಳ ಮೂಲಕ ಹೆಸರು ಮಾಡಿದ ಜಿತೇನ್ ಬ್ಯಾನರ್ಜಿ ಈ ಚಿತ್ರಿಕೆಯನ್ನು ಸೆರೆ ಹಿಡಿದಿದ್ದರು. ಮುಂಬೈನಲ್ಲಿ ದಾದಾಸಾಹೇಬ್ ಫಾಲ್ಕೆ, ತಿಲಕರ ಅಂತಿಮ ಯಾತ್ರೆಯನ್ನು ಸೆರೆ ಹಿಡಿದ ಅಮೂಲ್ಯ ದೃಶ್ಯಗಳು ಇವರ ಜೋಳಿಗೆ ಸೇರಿದವು.

ಚೆಟ್ಟಿಯಾರ್ ರ ಮುಂದಿನಹೆಜ್ಜೆ ಲಂಡನ್‌ನಲ್ಲಿ. ಏ.ಕೆ. ಕೃಷ್ಣ ಮೆನನ್ ನೆರವಿನಿಂದ ಲಂಡನ್‌ನ ಹಲವಾರು ಪತ್ರಾಗಾರ ಛಾಯಾಗಾರ (ಫೋಟೋ ಆರ್ಖೀವ್ಸ್) ಗಳಲ್ಲಿ ರಾತ್ರಿ ಹಗಲನ್ನು ಕಳೆದರು. ಆಗ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯೊಂದಿಗಿದ್ದ ಹೆನ್ರಿ ಪೊಲ್ಲಾಕ್ ನ ಅಪೂರ್ವ ಚಿತ್ರಗಳು ಲಭ್ಯ. ಇದರಲ್ಲಿ 1913 ರಲ್ಲಿ ಗೋಪಾಲಕೃಷ್ಣ ಗೋಖಲೆ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದು, ಗಾಂಧೀಜಿಯನ್ನು ಭೇಟಿಯಾದ ಅಪೂರ್ವ ಕ್ಲಿಪ್ಪಿಂಗ್ ಕೂಡ ಒಂದು. ನಂತರ ಚೆಟ್ಟಿಯಾರ್ ಪ್ಯಾರಿಸ್ ನಲ್ಲಿ ರೋಮನ್ ರೋಲಾರನ್ನು ಭೇಟಿ ಮಾಡಿದರು. ರೋಮನ್ ರೋಲಾ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಲಿಲ್ಲ. ಕಾರಣ ಅವರೇ ಅಂದುಕೊಂಡಂತೆ ಅವರು ಫೋಟೋಜೆನಿಕ್ ಅಲ್ಲದಿರುವುದು. ಆದರೆ ಚೆಟ್ಟಿಯಾರ್ ಹಿಡಿದ ಪಟ್ಟು ಬಿಡಲಿಲ್ಲ. ಗಾಂಧಿಯನ್ನು ಕುರಿತು ರೋಲಾ ನೆನಪಿಸಿಕೊಂಡದ್ದನ್ನು ಫ್ರೆಂಚ್ ಛಾಯಾಗ್ರಾಹಕ ಚಾರ್ಲ್ಸ್ ಮೆಟಿನ್ ಚಿತ್ರಿಸಿಕೊಟ್ಟರು.

ಮುಂದಿನ ನಿಲುಗಡೆ ದಕ್ಷಿಣ ಆಫ್ರಿಕಾ. ಅಲ್ಲಿ ಚೆಟ್ಟಿಯಾರ್ ಮೂರು ವಾರಗಳ ಕಾಲ ಬಿಡಾರ ಹಾಕಿದರು. ಕೊಲಂಬಾ ಎಂಬ ಶಿಲ್ಪಿ ಚೆಟ್ಟಿಯಾರ್, ಫೀನಿಕ್ಸ್ ಹಾಗೂ ಟಾಲ್ಸ್ ಟಾಯ್ ಫಾರಂಗಳನ್ನು ಚಿತ್ರಿಸಿಕೊಟ್ಟರು. ೧೯೩೮ ರ ಆ ಕಾಲದಲ್ಲಿ ಅವು ಕಾರ್ಯ ನಿರತವಾಗಿದ್ದವು.

ಜೋಹಾನ್ಸ್ ಬರ್ಗ್‌ನಲ್ಲಿ ಎರಡನೇ ಮಹಾಯುದ್ಧ ಆರಂಭವಾಗಿ ಬಿಟ್ಟಿತು. ಚೆಟ್ಟಿಯಾರ್ ಮತ್ತೆ ಭಾರತಕ್ಕೆ ಹಿಂದಿರುಗಲು ಹರಸಾಹಸ ಮಾಡಿದರು. ಮುನ್ನೆಚ್ಚರಿಕೆಯಿಂದ ಚಿತ್ರದ ನೆಗೆಟಿವ್ ಗಳನ್ನು ಸರಕು ಹಡಗಿನಲ್ಲಿ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು. ಪ್ರಯಾಣಿಕರ ಹಡಗು ಶತ್ರುದಾಳಿಗೆ ತುತ್ತಾದರೆ ಅಪೂರ್ವ ಚಿತ್ರ ಸಂಗ್ರಹ ನಾಶವಾಗಬಾರದೆಂಬ ಕಾಳಜಿ ಅವರದು. ಏಕೆಂದರೆ ಆ ಕಾಲದಲ್ಲಿ ಜಪಾನ್ ಸಬ್ ಮೆರಿನ್ ಗಳಿಗೆ ಪ್ರವಾಸಿ ಹಡಗುಗಳೇ ಗುರಿಯಾಗಿದ್ದುವಂತೆ.

ಭಾರತಕ್ಕೆ ಹಿಂದಿರುಗಿದ ನಂತರ ಚೆಟ್ಟಿಯಾರ್ ವಾರ್ಧಾರ ಸೇವಾಗ್ರಾಮಕ್ಕೆ ತೆರಳಿದರು. ಅಲ್ಲಿ ಗಾಂಧಿ ಶಿಕ್ಷಣ ಕ್ರಮವನ್ನು ಪ್ರತಿಪಾದಿಸುತ್ತಿದ್ದ ಅರಿಯನಾಯಗಮ್ ಹಾಗೂ ಗಾಂಧಿ ಅರ್ಥಶಾಸ್ತ್ರದ ಪರಿಣಿತರಾದ ಜೆ.ಸಿ. ಕುಮಾರಪ್ಪ ಅವರನ್ನು ಭೇಟಿ ಮಾಡಿದರು. ಲಾಹೋರ್‌ನಲ್ಲಿ 1927 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಚಿತ್ರಿಕೆಗಳನ್ನು ಸಂಗ್ರಹಿಸಿದರೆ, ಮುಂಬೈನ ಖಾಸಗಿ ಛಾಯಾಗ್ರಾಹಕರೊಬ್ಬರಿಂದ ದಂಡಿ ಯಾತ್ರೆಯ ತುಣುಕುಗಳನ್ನು ಆ ಕಾಲಕ್ಕೆ ಒಂದು ಸಾವಿರ ರೂಪಾಯಿ ತೆತ್ತು ಸಂಗ್ರಹಿಸಿದರು. ಚೆಟ್ಟಿಯಾರ್ ಮಾತುಗಳಲ್ಲೇ ಹೇಳುವುದಾದರೆ ಗಾಂಧೀಜಿಯ ಒಟ್ಟು ಜೀವಿತಾವಧಿಯಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹ ಚಿತ್ರಣವಾದಷ್ಟು ಬೇರಾವುದೇ ಘಟನೆ ಚಿತ್ರೀಕರಣವಾಗಿಲ್ಲ.

-ಮೂರು ವರ್ಷಗಳ ಪ್ರಯಾಸ, ಪ್ರಯಾಣ ಮುಗಿಯುವ ವೇಳೆಗೆ ಚೆಟ್ಟಿಯಾರ್ ಬಳಿ 50, 000 ಅಡಿಗಳಷ್ಟು ವಸ್ತು ಸಂಗ್ರಹವಾಗಿತ್ತು. ಆಗ ಎದುರಾದ ಕಷ್ಟ ಅದನ್ನು ೧೨, ೦೦೦ ಅಡಿಗಳಿಗೆ ಕತ್ತರಿಸುವುದು. ಸಂಕಲನ 1940 ರಲ್ಲಿ ಮುಂಬೈನಲ್ಲಿ ಆರಂಭವಾಯಿತು. ಈ ಕೆಲಸ ನಡೆದಿರುವಾಗಲೇ ಅಹ್ಮದ್ ಅಬ್ಬಾಸ್ ರ ಬಾಂಬೆ ಕ್ರಾನಿಕಲ್ ಪತ್ರಿಕೆಯೂ ಸೇರಿದಂತೆ ಹಲವು ಪತ್ರಿಕೆಗಳು ಈ ಚಿತ್ರವನ್ನು ಕುರಿತಾದ ಲೇಖನಗಳನ್ನು ಪ್ರಕಟಿಸಿದವು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಚೆಟ್ಟಿಯಾರ್ ರ ಸಾಹಸವನ್ನು ಕುರಿತು ಬರೆಯಿತು.

-ಚಿತ್ರ ನಿರ್ಮಾಣಕ್ಕೆ ಚೆಟ್ಟಿಯಾರ್ ಪ್ರತಿಭಾವಂತರ ತಂಡವನ್ನೇ ನಿಯೋಜಿಸಿದ್ದರು. ಪ್ರಖ್ಯಾತ ಛಾಯಾಗ್ರಾಹಕ ಡಾ. ಪಿ. ವಿ. ಪತಿ ಈ ಚಿತ್ರದ ತಾಂತ್ರಿಕ ನಿರ್ದೇಶಕ. ಬಂಗಾಳಿಯಿಂದ ತಮಿಳಿಗೆ ಸಾಹಿತ್ಯದ ಕ್ಲಾಸಿಕ್‌ಗಳನ್ನು ಅನುವಾದಿಸಿದ ತ.ನ.ಕುಮಾರಸ್ವಾಮಿ ಅವರದು ಚಿತ್ರ ನಾಟಕ ರಚಿಸುವ ಹೊಣೆ. ಧ್ವನಿಗ್ರಹಣದ ಜವಾಬ್ದಾರಿ, ಎಸ್. ಸತ್ಯಮೂರ್ತಿ ಅವರದ್ದು. ಚಿತ್ರನಟ ಸೆರು ಕಳತ್ತೂರ ಸಮ, ವೈ.ಯು.ಕೋತೈನಾಯಕಿ ಅಮ್ಮಾಳ್ ಹಾಗೂ ತಮಿಳು ಪಂಡಿತ ಸ. ಗಣೇಸನ್ ತಮ್ಮಧ್ವನಿ ಕೊಡುಗೆ ಮೂಲಕ ಚಿತ್ರದ ಧ್ವನಿ ಮೌಲ್ಯವನ್ನು ಹೆಚ್ಚಿಸಿದರು. ಡಿ.ಕೆ. ಪಟ್ಟಮ್ಮಾಳ್, ಸಾಮೂಹಿಕ ನೂಲುವಿಕೆ ಗಾಗಿ ಹಾಡಿದ ಹಾಡು ಇಂದಿಗೂ ಜನಪ್ರಿಯ (ಇದನ್ನು ಆರಂಭದ ಹಿನ್ನೆಲೆ ಗಾಯನದ ಪ್ರಯೋಗಗಳಲ್ಲೊಂದು ಎಂದು ಗುರುತಿಸಲಾಗುತ್ತದೆ). ಗಾಂಧೀಜಿಗೆ ಪ್ರಿಯವಾದ ವೈಷ್ಣವ ಜನತೋ ಹಾಡಲು ಉಚ್ಛಾರದ ಖಾಚಿತ್ಯತೆಗಾಗಿ ಚೆಟ್ಟಿಯಾರ್ ಗುಜರಾತಿ ಸಂಗೀತಗಾರ್ತಿ ಸುಂದರಿ ಬಾಯಿ ಅವರನ್ನೇ ಕೋರಿಕೊಂಡಿದ್ದರು.

-ಮಹಾತ್ಮಾಗಾಂಧಿ ಸಿದ್ಧವಾಗುವ ವೇಳೆಗೆ, ಅಂದರೆ1939 ರಲ್ಲಿ ಮದ್ರಾಸ್ ನಲ್ಲಿ ರಾಜಾಜಿ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿತ್ತು. ಬ್ರಿಟಿಷ್ ಸರಕಾರ ಸೆನ್ಸಾರ್ ನಿಯಮಗಳನ್ನೂ ಬಿಗಿ ಮಾಡಿತ್ತು. ಈ ಎಲ್ಲ ಅಡೆತಡೆಗಳನ್ನು ದಾಟಿ ಚಿತ್ರ 1940 ರಲ್ಲಿ ತೆರೆ ಕಂಡಿತು.

– ಚಿತ್ರ ನೋಡಲು ಇಂದು ಅಲಭ್ಯ. ಆದರೆ ದೊರೆತದ್ದು ಚಿತ್ರದ ಎರಡು ವಿಮರ್ಶೆಗಳು. ಒಂದು ; ಸಿ.ವಿ. ಅಯ್ಯಪ್ಪನ್ ತಮ್ಮ ಕುಡಿನೂಲ್ ನಲ್ಲಿ ಬರೆದದ್ದು ಹಾಗೂ ಕಲ್ಕಿ ಆನಂದ ವಿಕಟನ್ ನಲ್ಲಿ ಬರೆದದ್ದು.
ಆ ವಿಮರ್ಶೆಗಳಲ್ಲಿರುವ ವಿವರಗಳಿವು :

ಚಿತ್ರ ಆರಂಭವಾಗುವುದು ಗಾಂಧೀಜಿ ನಂಬಿದ ಅಹಿಂಸೆಯನ್ನು ಸೂಚಿಸುವ ಬುದ್ಧನ ಸ್ಮಾರಕಗಳ ಮೇಲಿನ ಚಿತ್ರಿಕೆಗಳ ಮೂಲಕ. ಅನಂತರ ಆಂಗ್ಲದ ಕಾಲಕ್ಕೆ ಕಾಲಿಡುವುದರೊಂದಿಗೆ ಚಿತ್ರ ಚಾಲನೆ ಪಡೆದುಕೊಳ್ಳುತ್ತದೆ.
ಚಿತ್ರ ನೋಡಲು ಅಲಭ್ಯ ಎನ್ನುವುದಾದರೆ ಅಅದು ಈಗೆಲ್ಲಿದೆ ? ಅದನ್ನು ಚೆಟ್ಟಿಯಾರ್ ಫಿಲಂಸ್ ಡಿವಿಜನ್ ಗೆ ಕೊಟ್ಟರಂತೆ. ಆದರೆ ಈಗ ಆ ಚಿತ್ರ ಅಲ್ಲಿಲ್ಲ. ಪುಣೆ ಚಿತ್ರಾಗಾರದಲ್ಲಿದೆಯಾ ಎಂದು ತನಿಖೆ ನಡೆಸಿದರೆ, ಚಿತ್ರ ಅಲ್ಲಿಯೂ ಇಲ್ಲ. ಚಿತ್ರ ಪಡೆದ ವಿಠಲಬಾಯಿ ಝವೇರಿ ಈ ಚಿತ್ರದ ತುಣಕನ್ನು ತಮ್ಮ ಮಹಾತ್ಮಾ ಲೈಫ್ ಆಫ್ ಗಾಂಧಿ ೧೮೬೯-೧೯೪೮ ಚಿತ್ರದಲ್ಲಿ ಬಳಸಿಕೊಂಡರಂತೆ. ಆದರೆ ಈಗ ಅವರ ಬಳಿಯೂ ಈ ಚಿತ್ರ ಇಲ್ಲ.
ಹಾಗಾದರೆ ಈ ಚಿತ್ರ ಎಲ್ಲಿದೆ ? ಉತ್ತರ ಗೊತ್ತಿಲ್ಲ. ನಮ್ಮ ವಿಸ್ಮೃತಿಗೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ. ಇಂದು ನಮ್ಮೊಂದಿರುವುದು ರಿಚರ್ಡ್ ಅಟೆನ್ ಬರೋ ನಿರ್ದೇಶಿಸಿದ ಗಾಂಧಿ, ಶ್ಯಾಮ್ ಬೆನಗಲ್ ನಿರ್ದೇಶಿಸಿದ ಮೇಕಿಂಗ್ ಆಫ್ ಮಹಾತ್ಮಾ.

_1943 ರಲ್ಲಿ ಚೆಟ್ಟಿಯಾರ್ ತಾವು ಚಿತ್ರ ನಿರ್ಮಿಸಿದ ಪ್ರಕ್ರಿಯೆಯನ್ನು ಕುಮಾರಿ ಮಲರ್ ಪತ್ರಿಕೆಯಲ್ಲಿ ಕೆಲವು ಕಾಲ ಧಾರಾವಾಹಿಯಾಗಿ ದಾಖಲಿಸಿದರು. ನಂತರ ಅದು ನಿಂತು ಹೋಯಿತು. ಗಾಂಧಿ ಬದಲಿಗೆ ತಾವೇ ಹೆಚ್ಚಾಗಿ ದಾಖಲಾಗುತ್ತಿದ್ದುದನ್ನು ಇಷ್ಟಪಡದೇ ಅವರು ಅದರ ಕುರಿತ ಬರವಣಿಗೆ ನಿಲ್ಲಿಸಿದರಂತೆ. ಹಣಕ್ಕಾಗಿಯಾಗಲಿ, ಖ್ಯಾತಿಗಾಗಿ ಆಗಲೀ ಆಸೆ ಪಡದ ಚೆಟ್ಟಿಯಾರ್, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಹೆಸರು ದಾಖಲಾಗಲಿಲ್ಲ ಎಂದು ಬೇಸರಿಸಲಿಲ್ಲ. ಆದರೆ ಅವರು ದಾಖಲಿಸಿದ್ದು ಆ ಕಾಲಘಟ್ಟದ ದೃಶ್ಯರೂಪ. ಬೆಲೆ ಕಟ್ಟಲಾಗದ ಪರಂಪರೆಯ ದಾಖಲೆ. ಹಾಗಾಗಿ ಆ ಚಿತ್ರವನ್ನು ಪತ್ತೆ ಹಚ್ಚುವುದು ಇಂದಿನ ಅಗತ್ಯಗಳಲ್ಲಿ ಒಂದು.
ಆದರೆ ಇತಿಹಾಸವನ್ನೇ ತಿರುಚ ಹೊರಟ ಇಂದಿನ ಸಂದರ್ಭದಲ್ಲಿ ಕರಾರುವಕ್ಕಾಗಿ ಇತಿಹಾಸವನ್ನು ದಾಖಲಿಸಿದ ಈ ಚಿತ್ರ ಪತ್ತೆ ಹಚ್ಚುವ ಪ್ರಯತ್ನ ಸಫಲವಾದೀತೆಂದು ಹೇಳಲಾಗದು.
ಏನೇ ಆದರೂ, ಇಂಥದೊಂದು ಪ್ರಯತ್ನ ನಡೆಸಿ, ಸಫಲರಾಗಿ, ಅಜ್ಞಾತರಾಗಿಯೇ ಉಳಿದ ಚೆಟ್ಟಿಯಾರ್ ಪ್ರಾತಃಸ್ಮರಣೀಯರು.