ಜೋಗಿಯವರು ನಮ್ಮ ಎರಡನೇ ಸಂಚಿಕೆಗಾಗಿ ಬರೆದ ಪುಟ್ಟಣ್ಣರ ಬಗೆಗಿನ ಒಂದು ಪುಟ್ಟ ಟಿಪ್ಪಣಿಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಓದಿ ಅಭಿಪ್ರಾಯಿಸಿ.

ಸಣ್ಣದೊಂದು ಭ್ರಮೆ ಮತ್ತು ದೊಡ್ಡದೊಂದು ವಾಸ್ತವದ ಜೊತೆ ಮುಖಾಮುಖಿಯಾಗುತ್ತಿದ್ದೇನಾ ಎಂದು ಅನುಮಾನಿಸುವ ಹಾಗೆ ಮಾಡುವ ಸಿನಿಮಾ ಎಂಬ ಮೋಹಕ ಮಾಧ್ಯಮದ ಕುರಿತು ಬರೆಯುವುದು ಕಷ್ಟ. ನಾವು ಕಂಡು, ಕೇಳಿ, ಅನುಭವಿಸಿ, ತತ್ತರಿಸಿಹೋಗುವಂತೆ ಮಾಡುವ ಸಿನಿಮಾದ ಒಳನೋಟ ನಿಜಕ್ಕೂ ಆ ಸಿನಿಮಾ ನೋಡಿದ ನಂತರ ಸಿಗುತ್ತದಾ ಎಂಬ ಬಗ್ಗೆ ನನಗೇ ಅನುಮಾನಗಳಿವೆ. ಒಂದು ಸಾರಿ ನೋಡಿ ಮುಗಿಸಿಬಿಡಬಹುದಾದ ಮಾಧ್ಯಮ ಅದು ಎಮಬ ಭ್ರಮೆಯನ್ನೂ ಎಷ್ಟೋ ಸಿನಿಮಾಗಳು ಅಳಿಸಿ ಹಾಕಿವೆ. ಇವೆಲ್ಲದರಾಚೆಗೂ, ನಾನು ಆರಂಭದಲ್ಲೇ ಹೇಳಿದ ಹಾಗೆ, ಕಣ್ಣೆದುರು ನಡೆಯುತ್ತಿರುವುದು ಕೇವಲ ನೆರಳು ಬೆಳಕಿನ ಆಟ ಎನ್ನುವ ಭ್ರಮೆ ಮತ್ತು ಆ ನೆರಳು ಬೆಳಕು ತೋರುತ್ತಿರುವುದು ಎಂದೋ ಎಲ್ಲೋ ಘಟಿಸಿದ ವಾಸ್ತವವನ್ನು ಎಂಬ ಸತ್ಯ-ಇವೆರಡನ್ನೂ ಏಕಕಾಲಕ್ಕೆ ಒಪ್ಪಿಕೊಳ್ಳುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಅಂಥದ್ದು ಸಾಧ್ಯ ನಿಜ, ಆದರೆ ಅದು ನಮ್ಮ ಸಂವೇದನೆ, ಗ್ರಹಿಕೆ ಮತ್ತು ಅರಿಯುವ ಸಾಮರ್ಥ್ಯಕ್ಕೆ ಸೀಮಿತ. ನಾಟಕದಲ್ಲಿ ಅಂಥದ್ದು ಪುನಃ ಸೃಷ್ಟಿಯಾಗುತ್ತಿರುತ್ತೆ ಎಂದು ಹೇಳುವುದಕ್ಕೆ ನಟರಿರುತ್ತಾರೆ. ಸಿನಿಮಾ ನಮ್ಮ ಸಂವೇದನೆಗಳನ್ನೆಲ್ಲಾ ತಾನೇ ಉದ್ದೀಪಿಸುತ್ತಾ ಹೋಗುತ್ತದೆ. ಸಂಗೀತದ ಹಂಗಿಲ್ಲದೇ ಒಂದು ಭಾವುಕ ದೃಶ್ಯವನ್ನು ನೋಡಿದರೆ, ನಮ್ಮಲ್ಲಿ ಯಾವ ಭಾವವೂ ಸ್ಫುರಿಸಲಾರದು. ಆ ದೃಶ್ಯಕ್ಕೆ ಪೂರಕವಾದ ಸಂಗೀತ ಬೆರೆತಾಗಷ್ಟೇ ಅದು ಭಾವಪೂರ್ಣವಾಗುತ್ತದೆ. ಒಂದು ಸಿನಿಮಾದಲ್ಲಿ ನಾವು ಎಷ್ಟೊಂದು ತಲ್ಲೀನರಾಗುತ್ತೇವೆ ಎಂದರೆ ಆ ದೃಶ್ಯವನ್ನು ಹದಗೊಳಿಸಿದ್ದು ನಿರ್ದೇಶಕನ ಗ್ರಹಿಕೆ, ನಟನ ಭಾವಭಂಗಿ, ಛಾಯಾಗ್ರಾಹಕನ ಸಂಯೋಜನೆ, ಸಂಕಲನಕಾರನ ಸೂಕ್ಷ್ಮಜ್ಞತೆ ಮತ್ತು ಹಿನ್ನೆಲೆ ಸಂಗೀತ ನೀಡಿದವನ ರಸಾನುಭವ-ಎಂಬುದನ್ನೆಲ್ಲಾ ಮರೆತೇ ಬಿಡುತ್ತೇವೆ.
*
* * *

ಮೊನ್ನೆ ಗೆಳೆಯರೊಬ್ಬರು ಫೋನಿಸಿ, ಪುಟ್ಟಣ್ಣ ಕಣಗಾಲ್ ತೀರಿಕೊಂಡು ಇಪ್ಪತ್ತೈದು ವರ್ಷವಾಯಿತು ಎಂದು ನೆನಪಿಸಿದರು. ಪುಟ್ಟಣ್ಣ ಕಣಗಾಲರ ಬಗ್ಗೆ ನನಗೆ ಅಂಥ ವಿಶೇಷ ಪ್ರೀತಿಯಾಗಲೀ, ಅವರ ಸಿನಿಮಾಗಳ ಕುರಿತು ಅಂಥ ಆಕರ್ಷಣೆಯಾಗಲೀ ಇಲ್ಲದೇ ಇದ್ದದ್ದರಿಂದ ಗೆಳೆಯರು ಹೇಳಿದ ಮಾತನ್ನು ನಾನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆ ಸುದ್ದಿಯನ್ನು ನನಗೇಕೆ ಹೇಳುತ್ತಿದ್ದಾರೆ ಎಂದು ಕೂಡ ಯೋಚಿಸಲು ಹೋಗಲಿಲ್ಲ.

ಪುಟ್ಟಣ್ಣ ಕಣಗಾಲ್ ಎಲ್ಲವನ್ನೂ ಅತಿ ಭಾವುಕವಾಗಿ ಹೇಳುತ್ತಾರೆ. ಒಂದು ಸಣ್ಣ ಸಮಸ್ಯೆಯನ್ನು ಅಗತ್ಯಕ್ಕಿಂತ ಹೆಚ್ಚು ಹಿಂಜುತ್ತಾರೆ. ಆ ಸಮಸ್ಯೆಯ ಒಂದು ಮುಖವನ್ನಷ್ಟೇ ಸ್ಪರ್ಶಿಸುತ್ತಾರೆ ಹಾಗೂ ಅದು ಆ ಸಮಸ್ಯೆಯ ಸಮಗ್ರ ಚಿತ್ರ ಎಂಬಂತೆ ಬಿಂಬಿಸುತ್ತಾರೆ ಎಂದು ನಾವೆಲ್ಲಾ ತುಂಬ ಹಿಂದೆ ಮಾತಾಡಿಕೊಳ್ಳುತ್ತಿದ್ದೆವು. ನಮ್ಮ ಈ ಮಾತಿಗೆ ಆಧಾರವಾಗಿದದ್ದದ್ದು ಪುಟ್ಟಣ್ಣನವರ ಕೊನೆ ಕೊನೆಯ ಸಿನಿಮಾಗಳಾದ ಮಾನಸ ಸರೋವರ, ರಂಗನಾಯಕಿ ಮುಂತಾದವು. ಅವಲ್ಲದೇ, “ನಾಗರಹಾವು’ ಚಿತ್ರದ ಕತೆ ಹೇಳುವೆ ನನ್ನ ಕತೆ ಹೇಳುವೆ ಹಾಡಿನಲ್ಲಿ ಕೂಡ ಅವರು ನಾಯಕಿಯ ಪರಿಸ್ಥಿತಿಯನ್ನು ಕೊಂಚ ಅತಿ ಎನ್ನುವಂತೆ ತೋರಿಸಿ, ಅದರಿಂದ ನಾಯಕನ ಸಿಟ್ಟು ಕೆರಳುವಂತೆ ಮಾಡಿದ್ದರು ಎಂದು ನಮಗೆಲ್ಲ ಸಿಟ್ಟಿತ್ತು. ಹೀಗಾಗಿ ಪುಟ್ಟಣ್ಣನವರ ಕುರಿತು ಗೆಳೆಯರು ಹೇಳಿದ್ದನ್ನು ನಾನು ಸಂಪೂರ್ಣ ನಿರ್ಲಕ್ಷ್ಯಿಸಿದ್ದೆ.

ಅದೇ ದಿನ ಮಧ್ಯಾಹ್ನ, ಆಕಸ್ಮಿಕವಾಗಿ ನಾನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಸಿನಿಮಾವೊಂದನ್ನು ನೋಡಿದೆ. ಆ ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಯಿತಷ್ಟೇ ಅಲ್ಲ, ಇತರ ಸಿನಿಮಾಗಳ ಹಾಘೆ ಒಂದಿಷ್ಟೂ ಕಿರಿಕಿರಿ ಮಾಡಲಿಲ್ಲ. ಎಲ್ಲೂ ಕೂಡ ಇದ್ಯಾವಾಗ ಮುಗಿಯುತ್ತದೋ ಅನ್ನಿಸುವಂತೆ ಕಾಡಲಿಲ್ಲ. ಯಾವ ದೃಶ್ಯವೂ ಆ ಚಿತ್ರದ ಚೌಕಟ್ಟಿನಾಚೆಗಿದೆ ಅನ್ನಿಸಲೂ ಇಲ್ಲ.

ಆ ಚಿತ್ರದ ಹೆಸರು “ಧರ್ಮಸೆರೆ’. ೧೯೭೯ ರಲ್ಲಿ ಬಿಡುಗಡೆಯಾದ ಚಿತ್ರವನ್ನು ಪುಟ್ಟಣ್ಣ ಕಣಗಾಲರೇ ಆರತಿ ಹೆಸರಲ್ಲಿ ನಿರ್ಮಿಸಿದ್ದರು ಎಂಬಿತ್ಯಾದಿ ವಿವರಗಳು ಆಮೇಲೆ ಸಿಕ್ಕವು. ಸಿನಿಮಾ ನೋಡಿದ ನಂತರ ಆ ಕತೆ ಯಾರದ್ದು ಎಂದು ಕುತೂಹಲದಿಂದ ನೋಡಿದರೆ ಅಚ್ಚರಿಯಾಯಿತು. ಧರ್ಮಸೆರೆ ಕತೆ ಬರೆದವರು ತರಾಸು, ಅನಕೃ ಇರಬಹುದು ಎಂದು ನಾನು ಊಹಿಸಿದ್ದೆ. ಅದು ಜಡಭರತರ ಕತೆ.

ಅದನ್ನು ಪೂರ್ತಿ ನೋಡಿ ಮುಗಿಸಿದ ನಂತರ, ಪುಟ್ಟಣ್ಣ ಅದನ್ನು ಎಷ್ಟು ಕಲಾತ್ಮಕವಾಗಿ ಮತ್ತು ಸೂಕ್ಷ್ಮಜ್ಞರಾಗಿ ನಿರ್ದೇಶಿಸಿದ್ದಾರೆ ಎಂದು ಯೋಚಿಸಿದೆ. ಧರ್ಮಸೆರೆಯ ಕತೆಯನ್ನು ನಾಲ್ಕೇ ಸಾಲುಗಳಲ್ಲಿ ಹೇಳುವುದಾದರೆ, ಗುರುಹಿರಿಯರು ಒಪ್ಪಿದ ಹೆಣ್ಣೊಂದನ್ನು ಮದುವೆಯಾಗಲು ಹೋಗುವ ಗಂಡು, ಅನಿವಾರ್ಯವಾಗಿ, ಶಾಸ್ತ್ರಸಿದ್ಧ ಕಾರಣಕ್ಕೆ ಅವಳ ಅಕ್ಕನಿಗೆ ತಾಳಿ ಕಟ್ಟಬೇಕಾಗುತ್ತದೆ. ಅದು ಕೇವಲ ಶಾಸ್ತ್ರ ಮಾತ್ರ. ಅಲ್ಲಿಂದಾಚೆಗೆ ನಡೆಯುವ ಘಟನೆಗಳೇ ಕಥಾವಸ್ತು.

ಮೊದಲ ಮಗಳನ್ನು ಧಾರೆಯೆರೆದು ಕೊಟ್ಟು ಕನ್ಯಾಸೆರೆ ಬಿಡಿಸಿಕೊಳ್ಳದ ಹೊರತು, ಎರಡನೆಯ ಮಗಳ ಲಗ್ನ ಮಾಡುವಂತಿಲ್ಲ ಎಂದು ಪುರೋಹಿತರು ಅಪ್ಪಣೆ ಕೊಡಿಸುತ್ತಾರೆ. ಅನಿವಾರ್ಯವಾಗಿ, ಕನ್ಯಾಸೆರೆ ಬಿಡಿಸುವ ಶಾಸ್ತ್ರಕ್ಕೋಸ್ಕರ, ನಾಯಕ ನಾಯಕಿಯ ಅಕ್ಕನ ಕೊರಳಿಗೆ ತಾಳಿ ಕಟ್ಟುತ್ತಾನೆ. ಆಕೆ ಮೂಕಿ. ಅವಳಿಗೆ ತಾಳಿ ಕಟ್ಟಿದ್ದು ಲೋಕದ ಪಾಲಿಗೆ ಕೇವಲ ಶಾಸ್ತ್ರಕ್ಕೇ ಆದರೂ, ಅವಳ ಪಾಲಿಗೆ ಅದು ಮದುವೆಯೇ. ಆಕೆ ನಾಯಕನಲ್ಲಿ ತನ್ನ ಗಂಡನನ್ನು ಕಾಣುತ್ತಾಳೆ. ಅವನೊಂದಿಗೆ ಅವನ ಮನೆಗೆ ಹೋಗುತ್ತಾಳೆ.

ಕತೆಯನ್ನು ಮರೆತು, ಪುಟ್ಟಣ್ಣ ಈ ಇಡೀ ಪ್ರಸಂಗವನ್ನು ಕಟ್ಟಿಕೊಡುವ ರೀತಿಯನ್ನು ನೋಡಿ, ಮೂಕಿ ತನ್ನ ಪಾಡಿಗೆ ತನ್ನ “ಮೂಕ ಹಕ್ಕಿಯು ಹಾಡುತಿದೆ, ಭಾಷೆಗೂ ನಿಲುಕದ ಭಾವಗೀತೆಯ ಬಾರಿ ಬಾರಿ ಹಾಡುತಿದೆ’ ಎಂದು ಮನಸ್ಸಿನಲ್ಲೇ ಗುನುಗುತ್ತಾಳೆ. ಅದಕ್ಕೆ ಪ್ರತಿಯಾಗಿ ಅವಳ ತಂಗಿಯೂ ಭಾವನೂ ಜೊತೆಯಾಗಿ ಹಾಡುವ ಹಾಡು-“ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ, ಅತಿ ನವ್ಯ, ರಸಕಾವ್ಯ, ಮಧುರ…ಮಧುರ…ಮಧುರ…’ ಮೂಕಿಯನ್ನು ಮುಂದಿಟ್ಟುಕೊಂಡು ನೋಡಿದಾಗ ಈ ಪ್ರೇಮ ಸಂಭಾಷಣೆಯ ರಸಕಾವ್ಯ ಎಷ್ಟು ಕ್ರೂರ ಎನ್ನುವುದು ಹೊಳೆಯುತ್ತದೆ. ಪುಟ್ಟಣ್ಣ ಇಂಥ ಸಣ್ಣ ಸಣ್ಣ ವಿವರಗಳನ್ನು ಗಮನಿಸುತ್ತಿದ್ದರು ಮತ್ತು ಎರಡು ದೃಶ್ಯ ಸಂಯೋಜನೆಗಿರುವ ವ್ಯತ್ಯಾಸ ಮೂಲಕವೇ ಅನೇಕ ಸಂಗತಿಗಳನ್ನು ಹೇಳಲು ಯತ್ನಿಸುತ್ತಿದ್ದಂತೆ ಕಾಣುತ್ತದೆ.

ಮೂಕಿ ಮಾಡಿದ ಅಡುಗೆಯನ್ನು ತಾನೇ ಮಾಡಿದ್ದೆಂದು ನಾಯಕಿ, ನಾಯಕನಿಗೆ ಬಡಿಸುತ್ತಿರುತ್ತಾಳೆ. ನಾಯಕಿ ಮನೆಯಿಂದಾಚೆ ಹೋದ ಸಂದರ್ಭದಲ್ಲಿ ಅದು ಮೂಕಿಯ ಕೈ ಚಳಕ ಎನ್ನುವುದು ನಾಯಕನಿಗೆ ಗೊತ್ತಾಗುತ್ತದೆ. ಅವಳನ್ನು ತಾನು ಮದುವೆ ಆಗಿದ್ದೇನೆ ಅನ್ನುವುದನ್ನೂ ನಾಯಕ ಮರೆತೇ ಬಿಟ್ಟಿರುತ್ತಾನೆ. ಅವಳು ಅದನ್ನು ನೆನಪು ಮಾಡಿಕೊಡುವ ಸನ್ನಿವೇಶವೂ ಅಲ್ಲಿದೆ. ಅವೆಲ್ಲಕ್ಕಿಂಥ ಹೆಚ್ಚಾಗಿ ಶಾಸ್ತ್ರಕ್ಕೆಂದು ಮದುವೆ ಆಗುವುದು ಎಂಬ ಕಲ್ಪನೆಯಲ್ಲೇ ಹುದುಗಿದ ಕ್ರೌರ್ಯವೊಂದಿದೆ. ಬಾಳಿಸಲಾಗದ ಮೇಲೆ ಶಾಸ್ತ್ರಕ್ಕೋಸ್ಕರ ಮದುವೆ ಆದನೇ, ಮದುವೆ ಆದ ಶಾಸ್ತ್ರ ಮಾಡಿದರೆ ಸಾಕು ಎಂಬ ಮಾತು ಹಿಂದಿನಿಂದಲೂ ಹೆಣ್ಣಿನ ಸ್ಥಿತಿಗತಿಯನ್ನು ತೋರಿಸುತ್ತಾ ಬಂದಿವೆ. ಅವನ್ನಿಟ್ಟುಕೊಂಡೇ ಜಡಭರತರು, ಈ ರೂಪಕದಂಥ ಕಾದಂಬರಿ ಬರೆದಿರಲಿಕ್ಕೂ ಸಾಕು.

ಪುಟ್ಟಣ್ಣ ಅದನ್ನು ಅಂದಗೊಳಿಸುವ ರೀತಿ ಅನನ್ಯ. ಮೂಕಿಯನ್ನು ಹೆದರಿಸುವ ಸಲುವಾಗಿ ಅವಳ ಸೋದರಮಾವ, ಆಕೆ ಸಾಕಿದ ಗಿಳಿಗಳನ್ನು ಸುಟ್ಟು ಹಾಕುವುದಕ್ಕೆ ಮುಂದಾಗುತ್ತಾನೆ. ಮದುವೆಯ ದಿನ ವಧೂವರರು ಜೊತೆಯಾಗಿ ಊಟಕ್ಕೆ ಕೂತು, ಪರಸ್ಪರರು ಒಬ್ಬರ ಬಾಯಿಗೊಬ್ಬರು ಸಿಹಿ ತಿನ್ನಿಸುವ ಸಂದರ್ಭದಲ್ಲಿ ಮೂಕಿ ಹಕ್ಕಿಯಂತೆ ಎರಗಿ, “ತನಗೂ ತಾಳಿ ಕಟ್ಟಿದ ಗಂಡ’ನ ಕೈಯಿಂದ ಸಿಹಿ ತಿಂಡಿಯನ್ನು ಕಿತ್ತುಕೊಂಡು ಹೋಗುತ್ತಾಳೆ. ಮೊದಲ ರಾತ್ರಿಯ ಸಂದರ್ಭದಲ್ಲಿ ಅವಳ ಹಾತೊರೆಯುವಿಕೆ, ತಾನೂ ಅವನ ಜೊತೆಗಿರಬೇಕು ಎಂಬ ಹಂಬಲ, ಸೋದರಮಾವನ ಲಾಲಸೆ-ಇವೆಲ್ಲವೂ ಕಣಗಾಲರ ಕಲ್ಪನೆಯಲ್ಲಿ ಎರಕ ಹೊಯ್ದಂತೆ ಮೂಡಿ ಬಂದಿವೆ.
* * * *

ನಮಗೆ, ಭಾರತೀಯ ಚಿತ್ರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಈ ಮಾಧ್ಯಮ ಗೊತ್ತಿಲ್ಲ ಎಂಬ ನಂಬಿಕೆ ನಮ್ಮಲ್ಲಿರುವ ಸಿನಿಮಾ ವಿಮರ್ಶಕರಲ್ಲಿದೆ. ಅದು ಪೂರ್ತಿ ಸುಳ್ಳಲ್ಲ. ನಮಗೆ, ಅದರಲ್ಲೂ ಕನ್ನಡದ ಬಹುತೇಕ ನಿರ್ದೇಶಕರಿಗೆ, ಸಿನಿಮಾ ಎಂಬುದು ಕತೆ ಹೇಳುವ ಮತ್ತೊಂದು ಮಾಧ್ಯಮ. ಚೆನ್ನಾಗಿ ಬರೆಯುವ ಹಾಗೆ, ಚೆನ್ನಾಗಿ ಸಿನಿಮಾ ಮಾಡುತ್ತಾರೆ. ಜಡಭರತ ಕಾದಂಬರಿ ಸಿನಿಮಾ ಆದಾಗಲೂ ಜಡಭರತರ ಕಾದಂಬರಿಯೇ ಆಗಿರುತ್ತದೆ. ಅವರು ಅಕ್ಷರಗಳಲ್ಲಿ ಹೇಳಿದ್ದನ್ನು ನಿರ್ದೇಶಕ ತನ್ನ ಮಾಧ್ಯಮದ ಮೂಲಕ ಹೇಳುತ್ತಾನೆ.

ಆರಂಭದ ದಿನಗಳಲ್ಲಿ ಆಗಿದ್ದು ಅದೇ ತಾನೇ ? ಕಾದಂಬರಿ ಆಧಾರಿತ ಚಿತ್ರಗಳು ಒಂದರ ಹಿಂದೊಂದರಂತೆ ಬಂದವು. ಕಾದಂಬರಿ ಓದಿದವರು ಇಡೀ ಚಿತ್ರ ಹೀಗೇ ಇರುತ್ತದೆ ಎಂದು ಊಹಿಸಿಕೊಳ್ಳಬಹುದಾಗಿತ್ತು. ಆದರೆ ಕಾದಂಬರಿಯನ್ನಿಟ್ಟುಕೊಂಡು ಸಿನಿಮಾ ನಿರ್ಮಾಣವಾದರೂ ಅದು ಆ ಕಾದಂಬರಿಯ ಕುರಿತು ನಿರ್ದೇಶಕನ ಪ್ರತಿಕ್ರಿಯೆ ಕೂಡ ಆಗಿರುತ್ತೆ ಎಂದು ಹಂಬಲಿಸುವಂಥ ನಿರ್ದೇಶಕರಿಗಾಗಿ ಮನಸ್ಸು ಹಂಬಲಿಸುತ್ತದೆ. ನನ್ನ ಕಾದಂಬರಿಯಲ್ಲಿ ಯಾವ ಬದಲಾವಣೆಯನ್ನೂ ಮಾಡಕೂಡದು, ಅದು ಯಥಾವತ್ತಾಗಿ ಸಿನಿಮಾ ಆಗಬೇಕು ಎಂದು ಹೇಳುವ ಭೈರಪ್ಪ, ಕಾದಂಬರೀನ ಇದ್ದ ಹಾಗೇ ಸಿನಿಮಾ ಮಾಡೋದಾದರೆ ಯಾಕ್ರೀ ಮಾಡ್ತೀರಿ ? ಜನ ಓದ್ಕೋತಾರೆ ಬಿಡಿ. ಸಿನಿಮಾ ಮಾಡೋದೋದಾದರೆ ಬೇರೆಯೇ ಅನ್ನಿಸೋ ಹಾಗೆ ಮಾಡಿ ಎನ್ನುತ್ತಿದ್ದ ತೇಜಸ್ವಿ- ಇವರಿಬ್ಬರ ಹೇಳಿಕೆ ನಡುವೆ ನಮ್ಮ ಸಿನಿಮಾಗಳು ಎಲ್ಲೋ ಕಳೆದುಹೋಗಿವೆ ಅನ್ನಿಸುತ್ತದೆ.

ಅದಕ್ಕೇ “ಸಂಸ್ಕಾರ’ಕ್ಕಿಂತಲೂ “ಒಂದಾನೊಂದು ಕಾಲದಲ್ಲಿ’ ಹೆಚ್ಚು ಆಪ್ತವಾಗುತ್ತದೆ. ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳ ಪೈಕಿ “ಕ್ರೌರ್ಯ’ ವೇ ಮನಸ್ಸಿನಲ್ಲಿ ಉಳಿಯುತ್ತದೆ.