ಮುಖ್ಯ ವಾಹಿನಿ ಚಿತ್ರಗಳ ಬಗ್ಗೆ ಪ್ರೊ. ಎನ್. ಮನುಚಕ್ರವರ್ತಿಯವರು ತಮ್ಮದೇ ಆದ ಹೊಸ ಹೊಳಹುಗಳೊಂದಿಗೆ ವಿಶ್ಲೇಷಿಸಿರುವ ಲೇಖನವಿದು. ಓದಿ ಅಭಿಪ್ರಾಯಿಸಿ.

ಈ ಪ್ರಸ್ತುತ ಪ್ರಬಂಧ ಭಾರತೀಯ ಮುಖ್ಯವಾಹಿನಿ/ಕಮರ್ಷಿಯಲ್/ಜನಪ್ರಿಯ ಸಿನಿಮಾದ ಪ್ರಮುಖ ಒಲವುಗಳನ್ನು(trends)ಗುರುತಿಸುವ ಒಂದು ಪ್ರಯತ್ನ. ಪ್ರಾಥಮಿಕವಾಗಿ ಚಲನಚಿತ್ರದ ಬಗೆಗಿನ ಪ್ರಬಂಧವಾದರೂ ಭಾರತದ ಮಧ್ಯಮ ವರ್ಗದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ದೃಷ್ಟಿಕೋನಗಳು ಮತ್ತು ಮೌಲ್ಯಗಳು ಈ ರೀತಿಯ ಸಿನಿಮಾದ ನೈತಿಕ, ರಾಜಕೀಯ ಮತ್ತು ಸೌಂದರ್ಯ ಪ್ರಜ್ಞೆಯ ಆಯಾಮಗಳನ್ನು ರೂಪಿಸಿರುವುದು ಮಾತ್ರವಲ್ಲ ಇವೆರಡರ ನಡುವೆ ಅಗೋಚರವಾದ ಬಂಧವನ್ನೂ ರೂಪಿಸಿದೆ ಎಂಬ ಬಲವಾದ ನಂಬಿಕೆಯೂ ಇದರಲ್ಲಿದೆ.

ಪ್ರಮುಖವಾಗಿ ಕಳೆದೆರಡ್ಮುರು ದಶಕದ ಮುಖ್ಯವಾಹಿನಿ ಸಿನಿಮಾಗಳ ಬಗೆಗಿನ ಈ ಪ್ರಬಂಧದ ಪ್ರಮುಖವಾದ ವಾದ ಇಲ್ಲಿ ಹೆಸರಿಸಲ್ಪಟ್ಟ ಒಂದೆರಡು ಪ್ರಾತಿನಿಧಿಕ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲದೆ ಹಲವಾರು ಭಾಗಗಳನ್ನೊಳಗೊಂಡಿದೆ. ಅಂದರೆ ಈ ಉದಾಹರಣೆಗಳು ನೀಡುವ ಒಳನೋಟ, ಪ್ರಬಂಧದಲ್ಲಿ ಹೆಸರಿಸದ ದೊಡ್ಡ ವ್ಯಾಪ್ತಿಯ ಚಿತ್ರಗಳನ್ನು ಸೇರಿಸಿಕೊಂಡಿದೆ.

ಮುಖ್ಯವಾಹಿನಿ/ಕಮರ್ಷಿಯಲ್/ಜನಪ್ರಿಯ ಸಿನಿಮಾಗಳ ಬಗೆಗೆ ತಿರಸ್ಕಾರದ ಮಾತುಗಳ ಅರ್ಥ ಹೊಂದಿರದವನು ಎಂದಲ್ಲ ಎಂಬ ವಿಷಯವನ್ನು ಆರಂಭದಲ್ಲೇ ಹೇಳಿ ಬಿಡಬೇಕಾದ ಅಗತ್ಯವಿದೆ. ಇದಕ್ಕೆ ವಿರುದ್ಧವಾಗಿ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಒಂದಿಷ್ಟು ಮೌಲ್ಯಯುತ ವಾದದ್ದು ಇದೆ ಎಂದು ನಾನು ನಂಬುತ್ತೇನೆ ಮತ್ತು ಅದನ್ನು ಬೆಳಕಿಗೆ ತರಲು ಮೌಲ್ಯಯುತವಾದದ್ದನ್ನು ಮೌಲ್ಯರಹಿತವಾದುದರಿಂದ ಬೇರ್ಪಡಿಸುವ ಅವಶ್ಯವಿದೆ ಎಂಬ ನಂಬಿಕೆಯೇ ಈ ಪ್ರಬಂಧದ ಮುಖ್ಯಭಾಗವನ್ನು ರೂಪಿಸಿದೆ.

ಹಳಸಲು ಧೋರಣೆಗಳು ಮತ್ತು ರಚನೆ ಹೆಚ್ಚುತ್ತಿರುವ ಈ ಸಮಯದಲ್ಲಿ ಮುಖ್ಯವಾಹಿನಿಯ ಚಿತ್ರಗಳಲ್ಲಿನ ಉತ್ತಮ ಅಂಶಗಳನ್ನು ಜೀವಂತವಾಗಿಡ ಬೇಕೆಂದರೆ ರಾಜಕೀಯದಿಂದ ದೂರವಿರ ಬೇಕಾದ ಸ್ಥಾನ ಹೊಂದಿರುವ ವೃತ್ತಿಪರ/ಅಕಾಡೆಮಿಕ್ ಚಿತ್ರ ವಿಮರ್ಶಕರು ಸ್ವಂತದ ಲಾಭಕ್ಕಾಗಿ ಮಾಡುವ ಕೈಚಳಕವನ್ನು ಬಯಲಿಗೆಳೆಯುವ ಅಗತ್ಯವಿದೆ.

ಭಾರತೀಯ ಸಮಾಜದ ಸಂಕೀರ್ಣ ವಾದ ಸತ್ಯಗಳನ್ನು ಅರ್ಥೈಸಿಕೊಳ್ಳಲು ಪಾಶ್ಚಿಮಾತ್ಯರ ತಾತ್ವಿಕ ಮಾದರಿಗಳು ಸಹಾಯ ಮಾಡುವುದಿಲ್ಲ. ಅದೂ ಅಲ್ಲದೆ ಇಂತಹ ಮಾದರಿಗಳನ್ನು ಠ್ಯವನ್ನು ವಿವರಿಸುವುದು ಸ್ವಾಗತಾರ್ಹವಾದರೂ, Derrida, Foucault ಅಥವಾ Lacan ನಂಥವರ ಧಾರೆಯನ್ನು ಭಾರತೀಯ ನೆಲೆಗೆ ಒಗ್ಗಿಸದೇ ಹಾಗೆಯೇ ಹೊಂದಿಸ ಲೆತ್ನಿಸುವುದು ತಾತ್ವಿಕವಾಗಿ ಅನುಪಯುಕ್ತ ಅಷ್ಟೆ ಅಲ್ಲ, ರಾಜಕೀಯವಾಗಿ ಪ್ರತಿಗಾಮಿ ಮತ್ತು ಅರ್ಥಹೀನವಾದುದು.ಇದಕ್ಕಿಂತ ಕೆಟ್ಟದ್ದೆಂದರೆ ಮುಖ್ಯ ವಾಹಿನಿಯ ಸಿನಿಮಾದ ರಾಜಕೀಯ ಮತ್ತು ಸೌಂದರ‍್ಯ ಮೀಮಾಂಸೆಯನ್ನು ನಿರ್ಣಯಿ ಸುವ ಆರ್ಥಿಕ ಅಂಶಗಳನ್ನು ಅರ್ಥೈಸುವ ಸಾಮರ್ಥ್ಯ ವಿರುವ ವಾದಗಳನ್ನು ಇದು ಹುಟ್ಟು ಹಾಕುತ್ತದೆ. ಮುಖ್ಯವಾಹಿನಿಯ ಸಿನಿಮಾದ ಆರ್ಥಿಕತೆಯನ್ನು ನಿರ್ಲಕ್ಷಿಸುವುದೆಂದರೆ ಅದರ ಸಾಂಸ್ಕೃತಿಕ ರಾಜಕೀಯದ ದೃಷ್ಟಿಯನ್ನು ಕಳೆದುಕೊಂಡಂತೆ.

ಎಪ್ಪತ್ತರ ಕೊನೆಯ ಹಾಗೂ ಎಂಬತ್ತರ ಆರಂಭಿಕ ದಶಕಗಳಲ್ಲಿನ ಮುಖ್ಯವಾಹಿನಿಯ ಸಿನಿಮಾಗಳು ಮತ್ತು ಎಂಬತ್ತರ ದಶಕದ ನಂತರದ ಚಿತ್ರಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಅರಿತುಕೊಳ್ಳುವ ಒಂದು ಮುಖ್ಯವಾದ ವ್ಯತ್ಯಾಸವನ್ನು ಈ ಹಂತದಲ್ಲಿ ಪರಿಚಯಿಸುವುದು ಅವಶ್ಯ. ೮೦ರ ದಶಕದ ನಂತರ ಸಿನಿಮಾಗಳಲ್ಲಿ, ಎಪ್ಪತ್ತರ ದಶಕದ ಕೊನೆಯ ಚಿತ್ರಗಳ ಥೀಮ್‌ಗಳು ಕಾಣುತ್ತಿಲ್ಲವೆನ್ನುವ ಪ್ರಾಮಾಣಿಕ ಕಾಳಜಿಯನ್ನು ವ್ಯಕ್ತಪಡಿಸುವುದು ಚಿಕ್ಕಂದಿನಿಂದಲೂ ಎಲ್ಲ ರೀತಿಯ ಚಿತ್ರಗಳನ್ನು ನೋಡುತ್ತ ಬಂದಿರುವ ನನ್ನಂತಹ ಚಿತ್ರ ವ್ಯಸನಿಗೆ ಸಾಧ್ಯವೆಂಬುದನ್ನು ನಾನಿಲ್ಲಿ ಉಲ್ಲೇಖಿಸಲೇಬೇಕು. ಇದರರ್ಥ ಎಂಬತ್ತರ ದಶಕಕ್ಕಿಂತ ಮುಂಚೆ ನಿರ್ಮಿಸಲಾದ ಚಿತ್ರಗಳೆಲ್ಲ ಒಂದೇ ಮಟ್ಟದವುಗಳು ಎಂದಲ್ಲ. ಆ ಚಿತ್ರಗಳ ರಾಶಿಯಲ್ಲಿ ಅಪಾರ ವ್ಯತ್ಯಾಸವಿದೆ. ಆದರೆ ಮುಂಚಿನ ಬಹುಪಾಲು ಸಿನಿಮಾಗಳು ಗಂಭೀರ ದೃಷ್ಟಿಕೋನವನ್ನು ಹೊಂದಿದ್ದವು. ಹಾಗಾಗಿ ನಾನು ಮುಖ್ಯವಾಹಿನಿಯ ಸಿನಿಮಾಗಳ ಬಗ್ಗೆ ಮಾತಾಡುವಾಗ ಎಲ್ಲವನ್ನೂ ಒಟ್ಟಿಗೆ ಸೇರಿಸಲಾಗದೆಂಬ ಪ್ರಜ್ಞೆಯುಳ್ಳವನೇ ಆಗಿರುತ್ತೇನೆ. ವಿಶೇಷವಾಗಿ ಕಳೆದೆರಡು ದಶಕಗಳಲ್ಲಿ ಮುಖ್ಯವಾಹಿನಿ ಸಿನಿಮಾಗಳ ವಿಷಯ ವಸ್ತು ಮತ್ತು ಸೌಂದರ‍್ಯ ಮೀಮಾಂಸೆಯ ವಿಭಾಗಗಳಲ್ಲಿ ಒಂದು ರೀತಿಯ ಖಾಲಿತನವನ್ನು ನಾವೆಲ್ಲ ಕಾಣುತ್ತಿದ್ದೇವೆ.

ಎಂಬತ್ತರ ದಶಕದ ನಂತರದ ಭಾರತದ ಮುಖ್ಯವಾಹಿನಿ ಸಿನಿಮಾ, ಮಧ್ಯಮ ವರ್ಗ ನಂಬುವ ಕೆಲವೇ ರೂಢಿಗತವಾದ ಅಭಿಪ್ರಾಯಗಳನ್ನು ಮಾತ್ರ ಬಲಗೊಳಿಸುತ್ತದೆ ಮತ್ತು ಪ್ರಬಲವಾಗಿ ಅದನ್ನು ಪ್ರಚಾರಪಡಿಸುತ್ತಿದೆ. ಹಾಗಾಗಿಯೇ ಸಿನಿಮಾದ ಈ ಪ್ರಕಾರವನ್ನು ಭಾರತದ ಮಧ್ಯಮವರ್ಗ ಅಷ್ಟು ಬಲವಾಗಿ ಬೆಂಬಲಿಸುತ್ತಿರುವುದು.

ಭಾರತದ ಮುಖ್ಯವಾಹಿನಿ ಸಿನಿಮಾದ ಎಲ್ಲ ವಸ್ತುಗಳೂ ಸಾಂಸಾರಿಕ ಕಚ್ಚಾಟಗಳಿಂದ ಸಾಮಾಜಿಕ ಸಮಸ್ಯೆಗಳು ಮತ್ತು ರಾಜಕೀಯ ಒತ್ತಡಗಳವರೆಗೆ ಮಧ್ಯಮ ವರ್ಗದ ಆಕರ್ಷಕವಾಗಿರುವ ಸುಲಭವಾದ ಪರಿಹಾರಗಳನ್ನು ಉಪಯೋಗಿಸುತ್ತದೆ. ಈ ಸರಳ ಪರಿಹಾರಗಳು ಐತಿಹಾಸಿಕ ಬಿಕ್ಕಟ್ಟನ್ನು ಬಗೆಹರಿಸುತ್ತವೆಂದೇ ಮಧ್ಯಮವರ್ಗ ನಂಬಿದೆ. ಸುಲಭ, ಭಾವನಾತ್ಮಕ ಪರಿಹಾರ ಗಳಿಂದ ಪರಿಹರಿಸಲು ಸಾಧ್ಯವಾಗದ ಘನ ಐತಿಹಾಸಿಕ ಹೋರಾಟಗಳಿಗೆ ಪರ್ಯಾಯವನ್ನು ಹುಡುಕಲಾಗದ ಭಾರತೀಯ ಮಧ್ಯಮವರ್ಗದ ಅಸಮರ್ಥತೆ ಯನ್ನು ಮುಖ್ಯವಾಹಿನಿಯ ಭಾರತೀಯ ಸಿನಿಮಾಗಳ ನೈತಿಕ ಪೊಳ್ಳುತನ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.

ಮಧ್ಯಮವರ್ಗದ ಬಲವಾದ ನಿರೀಕ್ಷೆಗಳನ್ನು ಪ್ರತಿರೋಧಿಸುವ ಸಾಮರ್ಥ್ಯವಿರುವುದು ಮುಖ್ಯವಾಹಿನಿಯ ಹೊರಗಿರುವ ಚಿತ್ರಗಳು ಮತ್ತು ಮುಖ್ಯ ವಾಹಿನಿಯಿಂದ ಹೊರಗಿರುವ ಚಿತ್ರಗಳು. ಹಾಗಾಗಿಯೇ ಇವು ಬಾಕ್ಸ್ ಆಫೀಸಿನಲ್ಲಿ ಯಶ ಕಾಣುವುದಿಲ್ಲ. ತನ್ನ ನಂಬಿಕೆ ಮತ್ತು ಬಯಕೆಗಳನ್ನು ವಿರೋಧಿಸುವ ಚಿತ್ರಗಳನ್ನು ನಮ್ಮ ಮಧ್ಯಮವರ್ಗ ಬೆಂಬಲಿಸುವುದಿಲ್ಲ ಎಂಬುದು ಬೇಸರದ ಸಂಗತಿ.
ಕೌಟುಂಬಿಕ ಜಗಳಗಳು, ಸಾಮಾಜಿಕ ಸಮಸ್ಯೆಗಳು ಮತ್ತು ‘ಶುಭಂ’

ಜಾತಿ ಧರ್ಮಗಳ ವ್ಯತ್ಯಾಸವನ್ನು ಮೀರಿ ಕುಟುಂಬ ಪ್ರತಿ ಭಾರತೀಯನ ಪ್ರಜ್ಞೆಯನ್ನು ಪ್ರಭಾವಕ್ಕೊಳಪಡಿಸಿದೆ. ಮಧ್ಯಮವರ್ಗ ಆ ಕೌಟುಂಬಿಕ ಮೌಲ್ಯ ಮತ್ತು ಆದರ್ಶಗಳನ್ನು ಕಾಪಿಡಲು ವಿಶೇಷ ಪ್ರಯತ್ನ ಮಾಡುತ್ತದೆ. ಮಧ್ಯಮ ವರ್ಗದ ಒಬ್ಬ ವ್ಯಕ್ತಿ ತನ್ನ ಆಸ್ಮಿತೆಯನ್ನು ಕೌಟುಂಬಿಕ ಆಸ್ಮಿತೆಗೆ ಥಳಕು ಹಾಕಿಕೊಂಡೇ ಇರುತ್ತಾನೆ. ಈ ಕೌಟುಂಬಿಕ ಚೌಕಟ್ಟೇ ಸಾಮಾಜಿಕ ವಲಯಕ್ಕೆ ಬರಲು ಒಂದು ಪ್ರಮುಖ ಖಾಸಗಿ ದಾರಿ. ಕೌಟುಂಬಿಕ ಬೆಂಬಲದ ಹೊರತು ಒಬ್ಬನ ಸಾಮಾಜಿಕ ವ್ಯಕ್ತಿತ್ವಕ್ಕೆ ಅರ್ಥವೇ ಇಲ್ಲ. ಕುಟುಂಬವನ್ನು ಶಿಥಿಲಗೊಳಿಸುವ ಭಯ ಹುಟ್ಟಿಸುವ ಯಾವುದರ ಬಗ್ಗೆಯಾದರೂ ಮಧ್ಯಮವರ್ಗ ಭಯಭೀತವಾಗುವುದಕ್ಕೆ ಇದೂ ಒಂದು ಕಾರಣ. ಮಗಳಾಗಿ, ಹೆಂಡತಿಯಾಗಿ,
ಸೊಸೆಯಾಗಿ ಮಹಿಳೆಯ ಹಕ್ಕುಗಳಿಗೆ ಸಂಬಂಧಿಸಿದ ಅಥವಾ ಇನ್ಯಾವುದೇ ಮೂಲಭೂತ ಪ್ರಶ್ನೆಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಕೌಟುಂಬಿಕ ಚೌಕಟ್ಟಿನೊಳಗೇ ಉತ್ತರಿಸಲ್ಪಡದೇ ಉಳಿದುಹೋಗುತ್ತದೆ.

ಕುಟುಂಬದ ಪಾತ್ರ ಮತ್ತು ಮೌಲ್ಯಗಳಿಗೆ ಸಂಬಂಧಿಸಿದ ಮಧ್ಯಮವರ್ಗದ ಭಾವನೆಗಳ ಮೇಲೆಯೇ 80 ರಿಂದ 90 ಶೇಕಡಾದಷ್ಟು ಸಿನಿಮಾಗಳು ಅವಲಂಬಿತ ವಾಗಿವೆ. ಹಣಕಾಸಿನ ಅಥವಾ ಭಾವನಾತ್ಮಕ ಸಮಸ್ಯೆಗಳಿಂದ ವ್ಯಕ್ತಿ ಅಥವಾ ಕುಟುಂಬಗಳು ಅನುಭವಿಸುವ ತಳಮಳವನ್ನು ಬಿಂಬಿಸುವ ಇವುಗಳನ್ನು ‘ಸಾಮಾಜಿಕ ಚಿತ್ರಗಳೆಂದು’ ಕರೆಯುತ್ತಾರೆ. ಉದಾ: ತಪ್ಪುದಾರಿ ಹಿಡಿದ ಮಗ, ಕುಡುಕ ಗಂಡ, ಸಂಸಾರದಲ್ಲಿ ಹುಳಿ ಹಿಂಡುವ ಆಧುನಿಕ ಸೊಸೆ, ಮಲ ಮಕ್ಕಳನ್ನು ಹಿಂಸಿಸುವ ಮಲತಾಯಿ ಇತ್ಯಾದಿ. ತನ್ನ ಸೂಕ್ಷ್ಮ ನಿರೂಪಣೆಯ ನಂತರವೂ ‘ಸ್ವಾಮಿ’ ಚಿತ್ರ ಕೊನೆಗೆ ಮಾಮೂಲಿಯ ಮಧ್ಯಮ ವರ್ಗದ ತತ್ವಕ್ಕೆ ಬಲಿ ಯಾಯಿತು. ದೊಡ್ಡ ಯಶಸ್ಸಿನ ‘ಹಮ್ ಆಪಕೇ ಹೈ ಕೌನ್’ ಆಗಲಿ ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೆಂಗೇ’ ಆಗಲಿ ಇನ್ನೆರಡು ಉದಾಹರಣೆಗಳು. ‘ಸ್ವಾಮಿ’ ಮತ್ತು ಇವೆರಡು ಚಿತ್ರಗಳ ನಡುವಿನ ಎರಡು ದಶಕಗಳು ಮಧ್ಯಮ ವರ್ಗದ ನಂಬಿಕೆಗಳನ್ನು ಬಲಪಡಿಸಿವೆಯೇ ಹೊರತು ಒಬ್ಬ ಮಹಿಳೆಯ ‘ಹೆಣ್ತನದ ಪ್ರಜ್ಞೆ’ ಎತ್ತುವ ಪ್ರಶ್ನೆಗಳನ್ನು ಸಂಪೂರ್ಣವಾಗಿ ಬದಿಗೊತ್ತುವಲ್ಲಿ ಯಶಸ್ವಿಯಾಗಿವೆ. ನನ್ನ ವಾದವೆಂದರೆ ಭಾರತೀಯ ಮುಖ್ಯವಾಹಿನಿಯ ಸಿನಿಮಾ ಮಹಿಳೆಯ ಸಬಲೀಕರಣದ ಬಗ್ಗೆ ಹುಟ್ಟುತ್ತಿರುವ ಜಾಗೃತಿಯನ್ನು ಬದಿಗೊತ್ತಿದೆ.

ವ್ಯಕ್ತಿಗಳಿಂದ ಎತ್ತಲ್ಪಡುವ ಪ್ರಶ್ನೆಗಳನ್ನು ಕೊನೆಯಲ್ಲಿ ಸ್ತಬ್ಧವಾಗಿಸುವ ಮೌನದ ರಾಜಕೀಯವನ್ನು ಜನಪ್ರಿಯ ಸಿನಿಮಾ ಸತತವಾಗಿ ಒಪ್ಪಿಕೊಳ್ಳುತ್ತ ಬಂದಿದೆ. ಒಳ್ಳೆಯ ಕುಟುಂಬದ ತತ್ವವೆಂದರೆ ದಾರಿ ತಪ್ಪಿದವರನ್ನು ಹೊರಗಿಡುವುದು ಮತ್ತು ವೈಯಕ್ತಿಕ ವಿರೋಧವೆನ್ನುವುದು ಮುಲಾಜಿಲ್ಲದೇ ತ್ಯಜಿಸಲ್ಪಡುವ ವಿಷಯ ಎಂಬ ಸುಳಿಗೆ ಸಿಲುಕಿಸಿ ‘ರೆಬೆಲ್’ಗಳನ್ನು ಸುಮ್ಮನಾಗಿಸುವುದು ! ಭಾವನೆಗಳ ಹರಿಯ ಬಿಡುವಿಕೆಯಾಗಲೀ ವಿಭಿನ್ನ ಸಂಘರ್ಷಾತ್ಮಕ ಮೌಲ್ಯಗಳ ಒಗ್ಗೂಡುವಿಕೆಯಲ್ಲಾಗಲೀ ಅಥವಾ ಇನ್ಯಾವುದೇ ಸಮಸ್ಯೆಯಿರಲಿ ಕೊನೆಗೆ ಅವೆಲ್ಲ ಒಂದುಗೂಡಿ ಕೌಟುಂಬಿಕ ಚೌಕಟ್ಟಿಗೆ ಧಕ್ಕೆಯಾಗದಂತೆ ಮುಕ್ತಾಯಕ್ಕೆ ಬರುತ್ತದೆ. ನಿರ್ಧಾರಿತ ನಿಯಮಗಳಿಂದ ದೂರವಾದ ವ್ಯಕ್ತಿಗಳು ಮತ್ತೆ ಬಲವಾದ ಕೌಟುಂಬಿಕ ಮೌಲ್ಯಗಳೊಂದಿಗೆ ಮರಳುತ್ತಾರೆ. ಈ ಸಿನಿಮಾಗಳು ಸೂಕ್ಷ್ಮ ಜಗತ್ತಿನಂತೆ ಕೌಟುಂಬಿಕ ವಿಶ್ವವನ್ನು ಮತ್ತು ಸಮಾಜವನ್ನು ದೊಡ್ಡ ಜಗತ್ತಿನಂತೆ ರೂಪಿಸಿ ಅವೆರಡರ ನಡುವೆ ನಿರಂತರವಾದ ತಾರ್ಕಿಕತೆಯನ್ನು ಸೃಷ್ಟಿಸುತ್ತವೆ. ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಲು ಕೌಟುಂಬಿಕ ಜಗತ್ತನ್ನು ಆಧರಿಸುತ್ತವೆಂದರೆ ತಪ್ಪಾಗಲಾರದು. ಈ ದೃಷ್ಟಿಯಲ್ಲಿ ನಮ್ಮ ಎಲ್ಲ ಮುಖ್ಯವಾಹಿನಿಯ ಸಿನಿಮಾಗಳು ಸಾಮಾಜಿಕ ಘರ್ಷಣೆ ಮತ್ತು ಕೌಟುಂಬಿಕ ತಿಕ್ಕಾಟಗಳ ನಡುವೆ ಬೇರ್ಪಡಿಸಲಾಗದ ಏಕತೆಯನ್ನು ರೂಪಿಸುತ್ತವೆ. ಎಲ್ಲ ವೈಯಕ್ತಿಕ ಪ್ರಯತ್ನಗಳ ಹೊರತಾಗಿಯೂ ಕೌಟುಂಬಿಕ ಆದರ್ಶಗಳನ್ನು ಎತ್ತಿ ಹಿಡಿಯಲು ಸಾಮಾಜಿಕ ಘರ್ಷಣೆಗಳನ್ನು ಚಿತ್ರಿಸುವುದು ಒಂದು ನೆಪಮಾತ್ರ.

ಈ ಥರದ ಚಿತ್ರಿಸುವಿಕೆಯಲ್ಲಿ ನೈತಿಕ ಜಡತ್ವ ಕೆಲಸ ಮಾಡುತ್ತಿರುತ್ತದೆ. ನೈತಿಕ ಜಡತ್ವವೆಂದರೆ ಕೊನೆಯಲ್ಲಿ ಸರಳೀಕೃತ ಪರಿಹಾರಗಳನ್ನು ನಿರಾಯಾಸವಾಗಿ ಒಪ್ಪಿಕೊಳ್ಳುವಿಕೆ ಮತ್ತು ಹೊಸ ಬದಲಿ ಪರಿಹಾರಗಳನ್ನು ಹುಡುಕುವುದರಲ್ಲಿನ ಸೋಲು. ಹಾಗಾಗಿಯೇ ಕೊನೆಯಲ್ಲಿ ‘ಶುಭಂ’ ಕಾಣಿಸಿಕೊಳ್ಳುವುದು. ಚಿತ್ರದುದ್ದಕ್ಕೂ ಕಷ್ಟ-ನೋವುಗಳನ್ನು ನೋಡಿದ ಪ್ರೇಕ್ಷಕ ವರ್ಗ ಕೊನೆಯಲ್ಲಿ ಭಾವ ಶುದ್ಧೀಕರಣದ (ZಠಿeZಠಿಜ್ಚಿ) ಪರಿಣಾಮ ಅನುಭವಿಸುವುದೇ ಇದಕ್ಕೆ ಕಾರಣ. ಭಾರತದ ಎಲ್ಲ ಭಾಷೆಯ ಕಮರ್ಷಿಯಲ್ ಚಿತ್ರಗಳೂ ಇದೇ ಥರ.

ರಾಜಕೀಯ ಬಿಕ್ಕಟ್ಟುಗಳು ಮತ್ತು ರಾಷ್ಟ್ರೀಯ ಐಕ್ಯತೆಯ ದೃಷ್ಟಿ

ರಾಷ್ಟ್ರೀಯತೆ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದೆ. ಈ ಮೊದಲಿನ ದಶಕದ ಚಿತ್ರಗಳು ಈ ವಸ್ತುವನ್ನು ಬಹಳಷ್ಟು ವ್ಯಾಪಕವಾಗಿ ಬಳಸಿದ್ದರೂ (ದೇಶ ವಿಭಜನೆ ಮತ್ತು ಚೀನಾ, ಪಾಕಿಸ್ತಾನ ಜತೆಗಿನ ಯುದ್ಧಕ್ಕೆ ಸಂಬಂಧಿಸಿದಂತೆ) ಇತ್ತೀಚಿನ ಚಿತ್ರಗಳು chauvinism ಧೋರಣೆಯನ್ನು ಪ್ರದರ್ಶಿಸುತ್ತಲೇ ಇಂದು ಪ್ರಸ್ತುತವಾದ ರಾಜಕೀಯ ನೈತಿಕ ನೆಲೆಯ ಹಲವು ಪ್ರಶ್ನೆಗಳನ್ನು ಕಡೆಗಣಿಸಿ ಬಿಡುತ್ತವೆ. ಗಂಭೀರವಾದ ಯಾವುದೇ ರಾಜಕೀಯ ನೆಲೆಯ ಚಿತ್ರ ವಿವಿಧ ಪ್ರದೇಶದಲ್ಲಿರುವ ಹಲವು ಸಮುದಾಯಗಳು ಎತ್ತುವ ಇಂಥ ಪ್ರಶ್ನೆಗಳನ್ನು ಕಡೆಗಣಿಸಬಾರದು. ಈ ಬಲಿಷ್ಠ ದೇಶದ ಕಲ್ಪನೆಯ ಹಿಂದೆ ಕೊಳ್ಳುಬಾಕ ಪ್ರಜ್ಞೆ ಖಂಡಿತ ಇದೆ. ಈ ಬಲಿಷ್ಟ ರಾಷ್ಟ್ರದೆಡೆಗಿನ ದೃಷ್ಟಿಕೋನದಲ್ಲಿ ಕೇಂದ್ರೀಕರಣದೆಡೆಗಿನ ಒಲವನ್ನು ಕಾಣಬಹುದು ಮತ್ತಿದು ಸಮಾಜದ ಬೇರೆ ಬೇರೆ ಸ್ತರಗಳಿಂದ (ಅಲ್ಪಸಂಖ್ಯಾತರು, ದಲಿತರು, ಬುಡಕಟ್ಟು ಪಂಗಡಗಳು, ಪರಿಸರವಾದಿಗಳು) ಹುಟ್ಟುವ ಪ್ರಶ್ನೆಗಳನ್ನೂ ಅದು ಸಹಿಸುವುದಿಲ್ಲ.

ಈ ರೀತಿಯ ಚಿತ್ರಗಳು ವ್ಯಕ್ತಿಗಳ ಮತ್ತು ವರ್ಗಗಳ ಎಲ್ಲ ಕನಸು ಮತ್ತು ನಿರೀಕ್ಷೆ ಗಳನ್ನು ನನಸಾಗಿಸುವ ದೇಶದ ಚಿತ್ರಣ ನೀಡುತ್ತದೆ. ಆದಾಗ್ಯೂ ಸತ್ಯವೆಂದರೆ ಈ ವರ್ಗ ವ್ಯಕ್ತಿಗಳು ತುಳಿತಕ್ಕೊಳಗಾದವರನ್ನು ಪ್ರತಿನಿಧಿಸುವುದಿಲ್ಲ ಎನ್ನುವುದು ಸತ್ಯ.

ಯಾವ ಸೂಕ್ಷ್ಮ ಮನಸ್ಸಿನ ವ್ಯಕ್ತಿಯೂ ಈ ಚಿತ್ರಗಳು ಹುಟ್ಟು ಹಾಕುವ ನೈತಿಕ, ರಾಜಕೀಯ ಹಾಗೂ ಸೌಂದರ್ಯ ಮೀಮಾಂಸೆಗಳ ದಣಿವಿನಿಂದ ತಪ್ಪಿಕೊಳ್ಳಲಾರ ವಿರುದ್ಧವಾಗಿರುವ ರಾಜಕೀಯವನ್ನು ಬದಿಗೊತ್ತಿ ರಾಷ್ಟ್ರೀಯತೆ, ದೇಶಭಕ್ತಿಗಳನ್ನು ಪ್ರತಿಪಾದಿಸುವ ಈ ಪಟ್ಟು, ಈ ಪೊಳ್ಳುತನವನ್ನು ಬಯಲಿಗೆಳೆಯಲೆತ್ನಿಸುವವರ ಸೂಕ್ಷ್ಮ ದೃಷ್ಟಿಯಿಂದ ತಪ್ಪಿಸಿಕೊಳ್ಳಲಾಗದು.

ನಮ್ಮ ಜೀವನದ ಪ್ರತಿ ವಿಷಯವನ್ನು ನಿರ್ಣಯಿಸುವ ಸಮಾಜದ ಪ್ರಜ್ಞೆಯ ವಿರುದ್ಧ ಹೋಗುವುದೆ ದೊಡ್ಡ ಕಮರ್ಷಿಯಲ್ ಉದ್ದಿಮೆಯಾಗಿ ಬೆಳೆಯುವ ಚಿತ್ರೋದ್ಯಮಕ್ಕೆ ಸಾಧ್ಯವಿಲ್ಲ. ಅದನ್ನು ಮೀರಲೆತ್ನಿಸುವ ಯಾವುದೇ ಸೂಕ್ಷ್ಮ ಮನಸ್ಸಿನವರ ಪ್ರಯತ್ನಗಳಿಗೆ ಆರ್ಥಿಕ ಬೆಂಬಲ ಸಿಗುವುದಿಲ್ಲ, ಅಂದರೆ ಬಾಕ್ಸ್ ಆಫೀಸ್ ಸೋಲು ಚಿತ್ರೋದ್ಯಮದ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಯ ಅಗತ್ಯವಿದೆ. ಸಣ್ಣ ಬಜೆಟ್ಟಿನ ಸಾಹಸವನ್ನು ಮೂಲೆಗೊತ್ತಿರುವ ದೊಡ್ಡ ಬಜೆಟ್ಟಿನ ಸಿನಿಮಾಗಳು ಸರ್ವೇ ಸಾಮಾನ್ಯ. ಜಾಗತಿಕವಾದ ಒತ್ತಡಗಳನ್ನು ನಮ್ಮ ಉದ್ಯಮ ನಿಭಾಯಿಸದ ಹೊರತು ನಮ್ಮ ರಾಜಕೀಯ, ನೈತಿಕ ಮತ್ತು aesthetic fatigue ನೆಲೆಯಿಂದ ಹೊರಬರುವುದು ಕಷ್ಟ. ಹಾಲಿವುಡ್‌ನ ದೊಡ್ಡ ಬಜೆಟ್‌ಗಳ ಸಿನಿಮಾ ನಿರ್ಮಾಣ ಸಂಸ್ಕೃತಿ ನಮ್ಮ ಹಿಂದಿ ಸಿನಿಮಾಗಳ ಮೇಲೆ ಬೀರಿರುವ ಪ್ರಭಾವ ಮರೆಯುವಂತಿಲ್ಲ. ಅದರ ಒಟ್ಟೂ ಸಂಯುಕ್ತ ಪ್ರಭಾವ ಪ್ರಾದೇಶಿಕ ಚಿತ್ರಗಳ ಮೇಲೆ ಬೀರಿರುವುದನ್ನ್ನು ಅಷ್ಟು ಸರಳವಾಗಿ ವಿವರಿಸಲಾಗದು.

ನಮ್ಮ ಹಳೆಯ ಚಿತ್ರಗಳ ಗುಣಮಟ್ಟ ಮತ್ತು ಚೈತನ್ಯವನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿ ನನ್ನ ಪ್ರಬಂಧವನ್ನು ಮುಗಿಸುತ್ತೇನೆ. (ಉದಾಹರಣೆಗೆ ದುನಿಯಾ ನಾ ಮಾನೆ, ಮದರ್ ಇಂಡಿಯಾ, ದೋ ಭೀಗಾ ಜಮೀನ್, ಅನಾರ್ಕಲಿ, ನಂದನಾರ್, ಹೀರ್ ರಾಂಡಾ, ಪರಾಶಕ್ತಿ, ಸ್ಕೂಲ್ ಮಾಸ್ಟರ್, ಸಂತ ತುಕಾರಾಮ್, ಭಕ್ತ ಕನಕದಾಸ, ಮಿಸ್ ಲೀಲಾವತಿ, ಬೆಳ್ಳಿಮೋಡ, ದೇವದಾಸ, ಕನ್ಯಾ ಶುಲ್ಕಂ ಮತ್ತು ಈ ರೀತಿಯ ಹಲವಾರು ಚಿತ್ರಗಳು). ನಾನು ಉದ್ದೇಶಪೂರ್ವಕವಾಗಿಯೇ ಪಟ್ಟಿ ಮಾಡಿದ ಚಿತ್ರಗಳ ಕಾಲಾನುಕ್ರಮ ಮತ್ತು ಭಾಷೆಯ ವಿವರಗಳನ್ನು ಕೈ ಬಿಟ್ಟಿದ್ದೇನೆ. ನನು ಹೇಳಿದ ಈ ಚಿತ್ರಗಳು ಆ ಕಾಲದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬೇಡಿಕೆಗಳಿಂದ ನಿರ್ಧರಿತವಾದದ್ದು ಮತ್ತು ಈ ಚಿತ್ರಗಳ ವ್ಯಕ್ತಿಗಳು ಒಂದು ವರ್ಗಕ್ಕೆ ಸೇರಿದವರಲ್ಲ. ಸಮಾಜದ ಬೇರೆ ಬೇರೆ ಸ್ತರಗಳಿಂದ ಆರಿಸಲ್ಪಟ್ಟವರು. ಈ ಚಿತ್ರಗಳ ಸೂಚಿಸುವ ವೈಚಾರಿಕ ನೆಲೆಗಳು ಏನೇ ಇದ್ದರೂ ಒಂದು ಬಲವಾದ ಐತಿಹಾಸಿಕ ಪ್ರಜ್ಞೆ ಈ ಚಿತ್ರಗಳಲ್ಲಿರುವುದು ಸ್ಪಷ್ಟ. ಅಧಿಕಾರ ನೆಲೆಯ ಬಣ್ಣದ ಕನ್ನಡಕವಿಲ್ಲದೆಯೂ ಅವು ಆ ಕಾಲದ ರಾಜಕೀಯ, ಸಾಮಾಜಿಕ ಪ್ರಶ್ನೆಗಳನ್ನು ಪ್ರಸ್ತಾಪಿಸಿದ್ದನ್ನು ಗುರುತಿಸಬಹುದು.

ಏಳು ದಶಕಗಳ ಹಿಂದಿನ ‘ದುನಿಯಾ ಕಾ ಮಾನೆ’ಯಲ್ಲಿ ಬಂದ ವಿಮುಕ್ತ ಸ್ತ್ರೀ, ‘ಕನ್ಯಾಶುಲ್ಕ’ ಚಿತ್ರದಲ್ಲಿ ಕಟು ಸಾಮಾಜಿಕ ಹೀಗೆ ‘ನಂದನಾರ್’ನ ಜಾತಿ ಪದ್ಧತಿಯ ಮೇಲಿನ ಹೀಗೆ ಇವೆಲ್ಲವೂ ಭಾರತೀಯ ಮುಖ್ಯವಾಹಿನಿಯ ಸಿನಿಮಾದ ಸಮಾಜದೆಡೆಗಿನ ಗಂಭೀರ ಹಾಗೂ ಆಳವಾದ ಬದ್ಧತೆಯನ್ನು ಸೂಚಿಸುತ್ತದೆ. ಹೆಚ್ಚು ಬಜೆಟ್, ಸೂಪರ್ ಸ್ಟಾರ್‌ಗಳು ಯಾವುದರ ಹಂಗಿಲ್ಲದ ‘ಅಧರ್ಮಮ್’ ನಂತಹ ಚಿತ್ರ ಮುಖ್ಯವಾಹಿನಿಯ ಸಿನಿಮಾಗಳು ಈಗಲೂ ಭಾರತೀಯ ಸಮಾಜಕ್ಕೆ ಅಮೂಲ್ಯವಾದುದನ್ನು ಕೊಡಬಹುದೆಂಬುದಕ್ಕೆ ಸಾಕ್ಷಿಯಾಗಿವೆ.